ಕಾನೂನು ಕನ್ನಡಿ/ಭರವಸೆಯ ತೀರ್ಪು: ನಗು ಬೀರಿದ ಹಿರಿಯ ನಾಗರಿಕರು – ಡಾ. ಗೀತಾ ಕೃಷ್ಣಮೂರ್ತಿ

ಹಿರಿಯರನ್ನು ಗೌರವಿಸಬೇಕು ಎಂಬುದು, ಅವರನ್ನು ಅವರ ಇಳಿ ವಯಸ್ಸಿನಲ್ಲಿ ಮಕ್ಕಳು ನೋಡಿಕೊಳ್ಳಬೇಕು ಎಂಬುದು ಇಲ್ಲಿಯವರೆಗೆ ನಮ್ಮ ಸಮಾಜದ ಅಲಿಖಿತ ಕಾನೂನಾಗಿತ್ತು. ಆದರೆ ಈಗ ಕುಟುಂಬದ ಒಟ್ಟಂದ ಬದಲಾಗಿದೆ, ಸಾಮಾಜಿಕ ಮೌಲ್ಯಗಳು ಬದಲಾಗಿವೆ. ಹಿಂದೆ ಜಾರಿಯಲ್ಲಿದ್ದ ಅಲಿಖಿತ ಕಾನೂನುಗಳೂ ಬದಲಾಗಿವೆ ಆದರೆ ಅಲಿಖಿತ ಕಾನೂನಿನ ಜಾಗದಲ್ಲಿ ಈಗ ಲಿಖಿತ ಕಾನೂನು ಜಾರಿಗೆ ಬಂದಿದೆ. ಕಾನೂನಿನ ಮೂಲಕ ಮಕ್ಕಳ ಜವಾಬ್ದಾರಿಯನ್ನು ತಿಳಿಸಬೇಕಾಗಿದೆ! ತಂದೆ ತಾಯಿಯರನ್ನು ಕಡೆಗಣಿಸುವುದು, ಅವರನ್ನು ಮನೆಯಿಂದ ಹೊರ ಹಾಕುವುದು, ಅವರ ಆಸ್ತಿಯನ್ನು ಮೋಸದಿಂದ ತನ್ನ ಹೆಸರಿಗೆ ಮಾಡಿಕೊಂಡು ಅವರ ವೃದ್ಧಾಪ್ಯದ ಜೀವನವನ್ನು ನರಕವಾಗಿಸುವುದು ಅಥವಾ ಚೆನ್ನಾಗಿ ನೀಡಿಕೊಳ್ಳುವುದಾಗಿ ಭರವಸೆ ನೀಡಿ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡು ಮಾತಿಗೆ ತಪ್ಪುವುದು ಇವೆಲ್ಲದರಿಂದಲೂ ಹಿರಿಯ ನಾಗರಿಕರಿಗೆ ಈಗ ರಕ್ಷಣೆ ದೊರಕಿದೆ.

74 ವರ್ಷದ ಹಿರಿಯ ನಾಗರಿಕರಾದ ಜಗದೀಶನ್ ಎಂಬುವರ ಕಣ್ಣಲ್ಲಿ ಆನಂದ ಭಾಷ್ಪ ಹರಿದಿತ್ತು. ಅದಕ್ಕೆ ಕಾರಣ ತನ್ನ ಮಗನಿಂದಲೇ ತನಗೆ ಆದ ಅನ್ಯಾಯಕ್ಕೆ ನ್ಯಾಯ ದೊರೆತಿತ್ತು. ತಮಗೆ ಸೇರಿದ್ದ ಮನೆಯಲ್ಲಿ ತಮ್ಮ ಮಗ ಬಂದು ನೆಲೆಸಿದ್ದೇ ಅಲ್ಲದೆ ತಮ್ಮನ್ನು ಎಂದರೆ ತಂದೆ ತಾಯಿಯರನ್ನು ಹೊರಹಾಕಿದ್ದ. ಇದರ ವಿರುದ್ಧ ಜಗದೀಶನ್ ಅವರು ದೂರು ನೀಡಿದ್ದರು. ತಂದೆ ಮಗನ ನಡುವಿನ ಸಂಧಾನದ ಎಲ್ಲ ಪ್ರಯತ್ನಗಳೂ ವಿಫಲವಾದವು. ಪ್ರಕರಣವನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದ ನಂತರ, ಮಗ ಮನೆಯನ್ನು ಕೂಡಲೇ ಖಾಲಿ ಮಾಡಿ, ಮನೆ ಮತ್ತು ಜಮೀನನ್ನು ಜಗದೀಶನ್ ಅವರಿಗೆ ಬಿಟ್ಟು ಕೊಡಬೇಕು ಎಂಬ ನಿರ್ಧಾರನ್ನು ಪ್ರಕಟಿಸಲಾಯಿತು ಮತ್ತು ಅದಕ್ಕೆ ಅಗತ್ಯವಾದರೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಯಿತು. ಆ ವೃದ್ಧರ ಮುಖದಲ್ಲಿ ನಗು ಉಂಟಾಗಲು ಕಾರಣವಾದದ್ದು 2008 ರಲ್ಲಿ ಜಾರಿಗೆ ಬಂದ ಹಿರಿಯ ನಾಗರಿಕರ ಮತ್ತು ತಂದೆ ತಾಯಿಯರ ಯೋಗಕ್ಷೇಮ ಮತ್ತು ಜೀವನಾಂಶ ಅಧಿನಿಯಮ ಎಂಬ ಕಾನೂನು.

ಮತ್ತೊಂದು ಪ್ರಕರಣದಲ್ಲಿ, ನ್ಯಾಯಾಲಯದ ಕಟಕಟೆಯಲ್ಲಿ, ತಂದೆ-ಮಕ್ಕಳ ಮುಖಾಮುಖಿ. ಇದರಲ್ಲಿ ಆಶ್ಚರ್ಯವೇನಿಲ್ಲ. ಆಸ್ತಿಗೆ ಸಂಬಂಧಪಟ್ಟಂತೆ ತಂದೆ ಮಕ್ಕಳು, ಅಣ್ಣ ತಮ್ಮಂದಿರು ಕಾನೂನು ಹೋರಾಟ ನಡೆಸುವುದು ಅಪರೂಪವೇನಲ್ಲ. ಈ ಪ್ರಕರಣದಲ್ಲಿ ದಾವೆ ಹೂಡಿದ್ದು 70 ವರ್ಷದ ತಂದೆ ತನ್ನ ಮಗನ ವಿರುದ್ಧ, ಆಸ್ತಿ ಸಂಬಂಧವಾಗಿಯೇ! ಆದರೆ ದಾವೆ ಹೂಡಿದ್ದುದು ಆಸ್ತಿ ಪಾಲುಗಾರಿಕೆಗೆ ಸಂಬಂಧಿಸಿದಂತೆ ಅಲ್ಲ. ತಾನು ಅವನಿಗೆ ದಾನವಾಗಿ ನೀಡಿದ್ದ ತನ್ನ ಮನೆಯನ್ನು ವಾಪಸ್ಸು ಪಡೆಯುವ ಸಂಬಂಧವಾಗಿ. ಇದ್ದೊಂದು ಮನೆಯನ್ನು ತನ್ನನ್ನು ನೋಡಿಕೊಳ್ಳಬೇಕು ಎಂಬ ಷರತ್ತಿನ ಮೇಲೆ ಮಗನಿಗೆ ದಾನ ಪತ್ರದ ಮೂಲಕ ವರ್ಗಾಯಿಸಿದರು. ಮನೆ ಪಡೆದ ನಂತರ, ಮಗ ತಂದೆಯನ್ನು ನೋಡಿಕೊಳ್ಳಲು ನಿರಾಕರಿಸಿದ. ಕ್ಯಾನ್ಸರ್‌ನಿಂದ ನರಳುತ್ತಿದ್ದ ತಂದೆಯನ್ನು ಮತ್ತು ವೃದ್ಧ ತಾಯಿಯನ್ನು ಹೊಡೆದು ಹೊರಗಟ್ಟಿದ. ಮೋಹದ ಪೊರೆ ಕಳಚಿ ವಾಸ್ತವದ ಅರಿವಾಗುವುದರಲ್ಲಿ ಆದದ್ದನ್ನು ಕಳೆದುಕೊಂಡು ಅತಂತ್ರರಾಗಿದ್ದರು. ತಾನು ವಿಧಿಸಿದ್ದ ಷರತ್ತನ್ನು ಉಲ್ಲಂಘಿಸಿದ್ದಾನೆ, ಆದ್ದರಿಂದ ದಾನ ಪತ್ರವನ್ನು ರದ್ದುಗೊಳಿಸಿ ತನ್ನ ಮನೆಯನ್ನು ತನಗೆ ವಾಪಸು ಕೊಡಿಸಬೇಕೆಂದು ನ್ಯಾಯಾಧಿಕರಣದ ಮುಂದೆ ಅರ್ಜಿ ಸಲ್ಲಿಸಿದರು. ತಿಂಗಳಿಗೆ 10,000 ರೂಗಳ ಜೀವನಾಂಶ ನೀಡಬೇಕೆಂದು ಕೋರ್ಟ್‌ ಆದೇಶಿಸಿತು ಮತ್ತು ತಮಗೆ ಬೇಕೆಂದಾಗ ತಮ್ಮ ಮನೆಗೆ ಹೋಗುವ ಅಧಿಕಾರವನ್ನೂ ಅವರಿಗೆ ನೀಡಲಾಯಿತು. ಆ ವೃದ್ಧರ ಮುಖದಲ್ಲಿ ನಗು ಉಂಟಾಗಲು ಕಾರಣವಾದದ್ದು 2008 ರಲ್ಲಿ ಜಾರಿಗೆ ಬಂದ ಹಿರಿಯ ನಾಗರಿಕರ ಮತ್ತು ತಂದೆ ತಾಯಿಯರ ಯೋಗಕ್ಷೇಮ ಮತ್ತು ಜೀವನಾಂಶ ಅಧಿನಿಯಮ ಎಂಬ ಕಾನೂನು.

ತಂದೆ ತಾಯಿಯರನ್ನು ನೋಡಿಕೊಳ್ಳುವ ಷರತ್ತಿನ ಮೇಲೆ ಆಸ್ತಿಯನ್ನು ಬರೆಸಿಕೊಂಡು ಆ ನಂತರ ಮಾತಿಗೆ ತಪ್ಪಿದರೆ, ಆಸ್ತಿಯ ವರ್ಗಾವಣೆಯನ್ನು ರದ್ದುಗೊಳಿಸಲು ಈ ಕಾನೂನು ಅವಕಾಶ ಕಲ್ಪಿಸುತ್ತದೆ. ಷರತ್ತು ಹಾಕದಿದ್ದರೂ, ತಂದೆ ತಾಯಿಯನ್ನು ನೋಡಿಕೊಳ್ಳಲು ತಪ್ಪಿದರೆ, ಆಸ್ತಿಯ ವರ್ಗಾವಣೆಯನ್ನು ರದ್ದುಪಡಿಸಿ ಕೆಲವು ನ್ಯಾಯಾಲಯಗಳು ತೀರ್ಪು ನೀಡಿವೆ.

ಮತ್ತೊಂದು ಪ್ರಕರಣದಲ್ಲಿ, ತಂದೆ ಕಟ್ಟಿಸಿದ ಮೂರು ಮಹಡಿಯ ಮನೆಯಲ್ಲಿ, ಮೇಲಿನ ಎರಡು ಮನೆಗಳಲ್ಲಿ ವಾಸವಾಗಿರುವ ಮಕ್ಕಳು ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರಕರಣ. ಕೆಳಗಿನ ಮನೆಯಲ್ಲಿ ತಂದೆಯ ವಾಸ. ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದ ಕಾಲದಲ್ಲಿ ಕಟ್ಟಿಸಿದ್ದು ಎರಡು ಮಹಡಿಯ ಮನೆ. ಕೆಳಗೆ ತಮಗೆ ವಾಸಕ್ಕಾಯಿತು, ಮೇಲಿನ ಎರಡು ಮನೆಯಲ್ಲಿ ಇಬ್ಬರು ಮಕ್ಕಳಿರಬಹುದು. ಮಕ್ಕಳು ಜೊತೆಗಿದ್ದಂತೆಯೂ ಆಯಿತು ಬೇರೆ ಇದ್ದಂತೆಯೂ ಆಯಿತು ಎಂಬ ಯೋಚನೆಯಲ್ಲಿ ಕಟ್ಟಿಸಿದ ಮನೆ. ನಡೆಸುತ್ತಿದ್ದ ಚಿಲ್ಲರೆ ವ್ಯಾಪಾರ ಈಗ ಕಡಿಮೆಯಾಗಿದೆ, ಬರುತ್ತಿದ್ದ ಆದಾಯ ಅಷ್ಟಕ್ಕಷ್ಟೆ, ಜೊತೆಗೆ ಹಾಸಿಗೆ ಹಿಡಿದಿರುವ ಹೆಂಡತಿ, ಮೂರು ಮಹಡಿಯ ಮನೆಯ ಮಾಲಿಕನಾದರೂ ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ. ತಾವಿರುವ ಮನೆಗಳಿಗೆ ಬಾಡಿಗೆ ಕೊಡುವುದಾಗಿ ಹೇಳಿದ್ದ ಮೇಲಿನೆರಡು ಮನೆಗಳಲ್ಲಿ ವಾಸವಿರುವ ಮಕ್ಕಳು, ಈಗ ತಮ್ಮ ಮನೆಗೇ ತಾವು ಬಾಡಿಗೆ ಏಕೆ ಕೊಡಬೇಕು ಎನ್ನುವ ಧೋರಣೆ ತಳೆದಿದ್ದಾರೆ. ಅದಕ್ಕೆ ಕುಮ್ಮಕ್ಕು ನೀಡಿ ಬಿಡಿಗಾಸು ಕೊಡದಂತೆ ನೋಡಿಕೊಂಡಿರುವವರು ಮಕ್ಕಳ ಹೆಂಡತಿಯರು, ಮನೆಯ ಸೊಸೆಯಂದಿರು ಎನಿಸಿಕೊಂಡವರು! ತಂದೆ ಈಗ ವಿಧಿಯಿಲ್ಲದೆ ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಮಕ್ಕಳಿಬ್ಬರನ್ನು ಹೊರಗೆ ಹಾಕಿ ಮನೆ ಅವರ ಕೈ ಸೇರುವ ಆದೇಶ ಅವರ ಕೈ ತಲುಪಿತು. ಖರ್ಚುಗಳಿಗೆ ವೈದ್ಯಕೀಯ ವೆಚ್ಚಗಳಿಗೆ ಹಣವಿಲ್ಲದೆ ಪರದಾಡುತ್ತಿದ್ದವರ ಮುಖದಲ್ಲಿ ನಗೆ ಮೂಡಿತು. ಆ ವೃದ್ಧರ ಮುಖದಲ್ಲಿ ನಗು ಉಂಟಾಗಲು ಕಾರಣವಾದದ್ದೂ 2008 ರಲ್ಲಿ ಜಾರಿಗೆ ಬಂದ ಹಿರಿಯ ನಾಗರಿಕರ ಮತ್ತು ತಂದೆ ತಾಯಿಯರ ಯೋಗಕ್ಷೇಮ ಮತ್ತು ಜೀವನಾಂಶ ಅಧಿನಿಯಮ ಎಂಬ ಕಾನೂನು.

ಮಕ್ಕಳು ತಂದೆ ತಾಯಿಯರನ್ನು ಅವರ ವೃದ್ಧಾಪ್ಯದಲ್ಲಿ ಕಡೆಗಣಿಸುವ ಇಂಥ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇತ್ತೀಚೆಗೆ ಇಂಥದ್ದೇ ಒಂದು ಪ್ರಕರಣದಲ್ಲಿ ಚತ್ತೀಸ್‍ಗಢ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಮಹತ್ವವಾದುದು. 89 ವರ್ಷ ಮತ್ತು 77 ವರ್ಷದ ವೃದ್ಧ ದಂಪತಿ, ತಮಗೆ ತಮ್ಮ ಮಗ ಮತ್ತು ಸೊಸೆ ದೈಹಿಕವಾಗಿ ಹಲ್ಲೆ ಮಾಡಿ ಹಿಂಸೆ ನೀಡುತ್ತಿದ್ದಾರೆಂದು ಮತ್ತು ತಮ್ಮನ್ನು ಮನೆಯ ಒಂದು ಮೂಲೆಯೊಳಗಿರುವಂತೆ ನಿರ್ಬಂಧಿಸಿದ್ದಾರೆಂದು ಮತ್ತು ಆಹಾರ ಮತ್ತು ಔಷಧಗಳನ್ನು ನೀಡುತ್ತಿಲ್ಲವೆಂದು ದೂರಿ ಕೂಡಲೇ ಅವರನ್ನು ಮನೆಯಿಂದ ಹೊರಹಾಕುವ ಅದೇಶ ನೀಡುವ ಮೂಲಕ ಮಧ್ಯಂತರ ಪರಿಹಾರ ನೀಡಬೇಕೆಂದು ಕೋರಿ ಮ್ಯಾಜಿಸ್ಟ್ರೇಟರ ನ್ಯಾಯಾಲಯಕ್ಕೆ ಮೊರೆ ಹೋದರು. ಮಗ ಸೊಸೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನೂ ದಂಪತಿ ಹೂಡಿದ್ದರು. ಆದರೆ ಕ್ರಿಮಿನಲ್ ಮೊಕದ್ದಮೆ ಇತ್ಯರ್ಥವಾಗಿ ಪರಿಹಾರ ದೊರೆಯುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಅವರು ಈ ಕಾನೂನಿನ ಮೊರೆ ಹೋಗಿದ್ದರು. ಆದರೆ ಅವರ ಕೋರಿಕೆಗೆ ಮ್ಯಾಜಿಸ್ಟ್ರೇಟ್ ಕೋರ್ಟಾಗಲೀ ಜಿಲ್ಲಾ ನ್ಯಾಯಾಲಯವಾಗಲೀ ಸ್ಪಂದಿಸಲಿಲ್ಲ. ಇದಕ್ಕೆ ನೀಡಿದ ಕಾರಣ, ಕಾನೂನಿನ ಪ್ರಕಾರ, ಅವರು ಕೋರಿರುವ ಹಾಗೆ ಅವರ ಮಗ ಸೊಸೆಯನ್ನು ಮನೆಯಿಂದ ಹೊರದೂಡುವ ಆದೇಶವನ್ನು ನೀಡಲು ಅವಕಾಶವಿಲ್ಲ ಎಂಬುದು. ಕೊನೆಗೆ ವೃದ್ಧ ದಂಪತಿ ಮೊರೆ ಹೋದದ್ದು ಉಚ್ಚ ನ್ಯಾಯಾಲಯಕ್ಕೆ.

ತಂದೆ ತಾಯಿಯರು ಸದಾ ಕಾಲ ಬಯಸುವುದು ಮಕ್ಕಳ ಶ್ರೇಯಸ್ಸನ್ನು. ಅವರಿಗಾಗಿ ದುಡಿಯುತ್ತಾರೆ, ಅವರಿಗೆ ಸುಂದರ ಭವಿಷ್ಯವನ್ನು ಕಟ್ಟಿಕೊಡಬೇಕೆಂಬ ಆಸೆಯಲ್ಲಿ ತಮ್ಮೆಲ್ಲ ಆಸೆಗಳನ್ನು ಕಡೆಗಣಿಸುತ್ತಾರೆ, ಅವರಿಗಾಗಿ ಆಸ್ತಿ ಮಾಡುತ್ತಾರೆ. ಆದರೆ ಈ ಆಸ್ತಿಗಾಗಿಯೇ ಮಕ್ಕಳು ಅವರನ್ನು ದೂರ ಮಾಡುತ್ತಾರೆ. ಎಂಥ ವಿಪರ್ಯಾಸ!

ಕಾನೂನು ಪರಿಹಾರದ ಮಾರ್ಗ ದೀರ್ಘವಾದುದು. ಅಲ್ಲದೆ ನ್ಯಾಯಾಲಯಗಳ ಮುಂದೆ ಇತ್ಯರ್ಥಕ್ಕೆ ಬಾಕಿ ಇರುವ ಮೊಕದ್ದಮೆಗಳ ಪಟ್ಟಿಯೇ ಬಲು ದೊಡ್ಡದು. ಅವುಗಳ ಜೊತೆಗೆ ಈ ಮೊಕದ್ದಮೆಗಳೂ ಸೇರಿದರೆ ಹಿರಿಯ ನಾಗರಿಕರಿಗೆ ಕೂಡಲೇ ಪರಿಹಾರ ಸಿಗುವುದು ಸಾಧ್ಯವಾಗುವುದಿಲ್ಲ. ಅಲ್ಲದೆ ಆ ವಯಸ್ಸಿನಲ್ಲಿ ಕೋರ್ಟು ಕಚೇರಿ ಎಂದು ಅಲೆದಾಡುವ ಕಸುವೂ ಅವರಲ್ಲಿ ಇರುವುದಿಲ್ಲ. ಹಾಗಾಗಿ ಇಂಥ ಮೊಕದ್ದಮೆ ಅಥವಾ ಅರ್ಜಿಗಳನ್ನು ಈ ಕಾನೂನಿನ ಅಡಿಯಲ್ಲಿ ರಚಿಸಲಾಗಿರುವ ನ್ಯಾಯಾಧಿಕರಣಗಳಿಗೇ ಇತ್ಯರ್ಥಗೊಳಿಸಲು ಅಧಿಕಾರ ನೀಡಲಾಗಿದೆ. ಅಲ್ಲದೆ ಹಿರಿಯ ನಾಗರಿಕರ ಕುಂದು ಕೊರತೆಗಳನ್ನು ಮತ್ತು ತೊಂದರೆಗಳನ್ನು ಆಲಿಸಿ ಪರಿಹಾನೀಡಲು ಅಥವಾ ಪರಿಹಾರ ಸೂಚಿಸಲು ಹಿರಿಯ ನಾಗರಿಕರ ಕೇಂದ್ರಗಳನ್ನು ಮತ್ತು ಸಹಾಯವಾಣಿಯನ್ನು ನಮ್ಮ ರಾಜ್ಯ ಸರ್ಕಾರ ಸ್ಥಾಪಿಸಿದೆ.-ಸಹಾಯವಾಣಿಯ ಸಂಖ್ಯೆ 1090.

ತಂದೆ ತಾಯಿಯರನ್ನು ಮಕ್ಕಳು ನೋಡಿಕೊಳ್ಳುವುದು ಭಾರತೀಯ ಸಮಾಜದ ಸಂಸ್ಕೃತಿ. ಆದರೆ ಅದೇ ಸಮಾಜದಲ್ಲಿ ಮಕ್ಕಳು ತಂದೆ ತಾಯಿಯರನ್ನು ಹೊರೆ ಎಂದು ಭಾವಿಸುತ್ತಿದ್ದಾರೆ, ಅವರ ಜೀವನವನ್ನು ದುರ್ಭರವನ್ನಾಗಿಸುತ್ತಿದ್ದಾರೆ. ಹೀಗಾಗಿ ವೃದ್ಧರು ತಮ್ಮ ಇಳಿ ವಯಸ್ಸಿನಲ್ಲಿ ಒಬ್ಬಂಟಿಯಾಗಿ ಅಥವಾ ಮಕ್ಕಳಿಂದಲೇ ಶಾರೀರಿಕ ಹಾಗೂ ಆರ್ಥಿಕ ಹಿಂಸೆಗೆ ಒಳಗಾಗುತ್ತಿದ್ದಾರೆ. ಈ ಕಾರಣಕ್ಕಾಗಿ ಅವರ ಸಂರಕ್ಷಣೆಗಾಗಿ ಪ್ರತ್ಯೇಕವಾದ ಕಾನೂನಿನ ರಚನೆಯಾಗಿದೆ. ಇದು, ಆಧುನಿಕ ಸಮಾಜದ ಮತ್ತು ವಿಭಕ್ತ ಕುಟುಂಬ ವ್ಯವಸ್ಥೆಯ ಒಂದು ಅನಿವಾರ್ಯ ಬೆಳವಣಿಗೆ. ಈ ಕಾನೂನಿನ ಪ್ರಯೋಜನ ಅವರಿಗೆ ದೊರೆಯುವುದು ನ್ಯಾಯದಾನ ಮಾಡುವಾಗ ಕಾನೂನಿನ ಆಶಯಕ್ಕೆ ಬೆಲೆ ಕೊಟ್ಟಾಗ ಮಾತ್ರ. ಈ ಹಿನ್ನೆಲೆಯಲ್ಲಿ, ಹಿರಿಯ ನಾಗರಿಕರ ಅಹವಾಲನ್ನು ಆಲಿಸಿ, ಆದಷ್ಟು ಬೇಗ ಅವರಿಗೆ ಪರಿಹಾರ ನೀಡಬೇಕು ಮತ್ತು ಅದಕ್ಕಿಂತ ಹೆಚ್ಚಾಗಿ ಮೊದಲು ಅವರಿಗೆ ಆಗುತ್ತಿರುವ ಹಿಂಸೆಯನ್ನು ತಡೆಯಬೇಕು, ವಿಚಾರಣೆಯ ಎಲ್ಲ ಹಂತಗಳಲ್ಲೂ ಆಗುತ್ತಿರುವ ತೊಂದರೆಯನ್ನು ತಡೆಗಟ್ಟುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದನ್ನು ಚತ್ತೀಸ್‍ಗಡ್ ಉಚ್ಚ ನ್ಯಾಯಾಲಯ ಒತ್ತಿ ಹೇಳಿದೆ. ವೃದ್ಧ ದಂಪತಿಗೆ ಕಿರುಕುಳ ನೀಡುತ್ತಿರುವ ಮಗ ಸೊಸೆಯನ್ನು 30 ದಿಗಳೊಳಗೆ ಹೊರ ಹಾಕುವ ಕ್ರಮವನ್ನು ಕೈಗೊಳ್ಳಬೇಕೆಂದು ಮತ್ತು ಆ ಬಗ್ಗೆ ವರದಿ ನೀಡಬೇಕೆಂದು ಉಚ್ಚ ನ್ಯಾಯಾಲಯ ಕಟ್ಟುನಿಟ್ಟಿನ ಅದೇಶವನ್ನು ನೀಡಿದೆ.

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *