”ಭಕ್ತಿ” ಯ “ಶಕ್ತಿ” ಗೆ ನಲುಗಿದ ಲಿಂಗ ನ್ಯಾಯ

ಇದೇ ಸೆಪ್ಟೆಂಬರ್‌ ೨೮ ರಂದು ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪನ್ನು ನೀಡಿ ೧೦ ರಿಂದ ೫೦ ರ ಪ್ರಾಯದ ಮಹಿಳೆಯರಿಗೆ ಕೇರಳದ ಶಬರಿಮಲೈಗೆ ಇದುವರೆಗೂ ಇದ್ದ ಪ್ರವೇಶ ನಿಷೇದಕ್ಕೆ ಕೊನೆ ಹಾಡುವ ಮೂಲಕ ಮಹತ್ವದ ತೀರ್ಪು ನೀಡಿತು. ಹೆಣ್ಣಿನ ದೇವಸ್ಥಾನ ಪ್ರವೇಶದ ಹಕ್ಕನ್ನು ಎತ್ತಿ ಹಿಡಿದ ದೇಶದ ಅತ್ಯುನ್ನತ ನ್ಯಾಯಾಲಯದ ತೀರ್ಪನ್ನು ಕೆಲವೊಂದು ಅಪಸ್ವರಗಳಿಗೆ ಹೊರತಾಗಿ ಇಡೀ ಮಹಿಳಾ ಸಮುದಾಯ ಸಂತೋಷ ಸಂಭ್ರಮದಿಂದ ಸ್ವಾಗತಿಸಿತ್ತು. ಆದರೇನು? ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಸುಪ್ರೀಕೋರ್ಟ್‌ ತೀರ್ಪು ಪಾಲಿಸಬೇಕಾದ್ದು ಸಂವಿಧಾನಿಕ ಕರ್ತವ್ಯವೆಂದು ದೇಗುಲ ಪ್ರವೇಶಕ್ಕೆ ತೊಂದರೆವೊಡ್ಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಡಳಿತಾರೂಢ ಎಡಸರ್ಕಾರ ಘೋಷಿಸಿತು. ಆದರೂ ಕೇರಳದ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೊಂದಿಗೆ ನಾಯರ್‌ ಸರ್ವೀಸ್‌ ಸೊಸೈಟಿ ಹಾಗೂ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ನಂತಹ ಸಶಕ್ತ ಸಾಮಾಜಿಕ ರಾಜಕೀಯ ಸಂಘಟನೆಗಳು ವಾತಾವರಣವನ್ನು ಹದಗೆಡಿಸಿವೆ. ಜಾತಿ ಶ್ರೇಣೀಕರಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಪರಂಪರೆ ಹೊಂದಿರುವ ಈ ಸಂಘಟನೆಗಳು ಹೆಣ್ಣಿನ ವಿಷಯದಲ್ಲಿ ಮಾತ್ರ ನಡೆದುಕೊಂಡ ರೀತಿ ಖಂಡನೀಯ.

ಕಳೆದ ತಿಂಗಳುಗಳಲ್ಲಿ ಅತಿವೃಷ್ಟಿಯ ಪ್ರಕೃತಿ ವಿಕೋಪಕ್ಕೆ ಕೇರಳ ನಲುಗಿದಾಗಲೂ ಸುಪ್ರೀಂಕೋರ್ಟಿನ ತೀರ್ಪಿನ ನೆಪವಾಗಿಸಿ ಒಂದು ಅನಾರೋಗ್ಯಕರ ವಾತಾವರಣದ ಭೂಮಿಕೆಯನ್ನು ಈಗಾಗಲೇ ಸೃಷ್ಟಿಸಿದ್ದರು. ಅದಕ್ಕೆ ಸರಿಯಾಗಿ ಮತ ರಾಜಕೀಯವನ್ನೇ ದೃಷ್ಟಿಯಲ್ಲಿರಿಸಿಕೊಂಡ ಕೇರಳದ ವಿರೋಧ ಪಕ್ಷಗಳು ತಮ್ಮ ಎಂದಿನ ಪಿತೃ ಪ್ರಧಾನ ಮೌಲ್ಯಗಳನ್ನು ಮೆರೆಸಿದವು. ಶಬರಿಮಲೈ ಪ್ರವೇಶವನ್ನು ರಣರಂಗವಾಗಿಸಿರುವ ಎಲ್ಲ ಸಮಾನ ಮನಸ್ಕರೂ ಅಯ್ಯಪ್ಪನ ದರ್ಶನಕ್ಕಾಗಿ ಬಂದ ಮಹಿಳೆಯರನ್ನು ಹಿಂದಕ್ಕೆ ಕಳಿಸುವಲ್ಲಿ ಸಫಲರಾಗಿದ್ದಾರೆ. ಸುಪ್ರೀಂಕೋರ್ಟಿನ ತೀರ್ಪಿನಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರತ್ತ, ಪತ್ರಕರ್ತರತ್ತ ಮತ್ತು ದರ್ಶನಾಕಾಂಕ್ಷಿ ಮಹಿಳೆಯರತ್ತ ಕಲ್ಲು ತೂರಾಟ ಮಾಡಿ ದಾಂಧಲೆ ಎಬ್ಬಿಸಿದ್ದಾರೆ. ಈ ಪ್ರತಿಭಟನಾಕಾರರಲ್ಲಿ ಸಾಕಷ್ಟು ಸಂಖ್ಯೆಯ ಮಹಿಳೆಯರೂ ಇರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವೂ ಹೌದು. ಕೇರಳಕ್ಕೆ ಅತಿ ಹೆಚ್ಚು ಸಾಕ್ಷರತೆ ಇದೆಯೆಂಬ ಹೆಚ್ಚುಗಾರಿಕೆಯೂ ಲಿಂಗತಾರಮ್ಯದ ಸಮಸ್ಯೆಗೆ ಉತ್ತರ ನೀಡದೆ ಪ್ರಶ್ನೆಯಾಗಿಯೇ ಉಳಿದಿದೆ.

ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *