ಬೆಳ್ಳಿತೆರೆಯ ಬಂಗಾರದ ಗಣಿಗಳು
ಮಹಿಳೆಯರು ಅರ್ಧ ಆಕಾಶವನ್ನು ಎತ್ತಿ ಹಿಡಿದಿದ್ದಾರೆ ಎಂಬಂಥ ಅರ್ಥಪೂರ್ಣ ಮಾತುಗಳನ್ನು ಸದಾ ಕೇಳುತ್ತಿರುತ್ತೇವೆ. ಇತ್ತೀಚೆಗೆ ನಡೆದ ಅಧ್ಯಯನದಿಂದ ಇನ್ನೊಂದು ಸತ್ಯ ಹೊರಬಿದ್ದಿದೆ – ಜಗತ್ತಿನ ಚಿತ್ರರಂಗದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅರ್ಧದಷ್ಟನ್ನು ಮಹಿಳೆಯರೇ ತುಂಬುತ್ತಿದ್ದಾರೆ. ಮಹಿಳಾ ಪ್ರಧಾನವಾದ ಅಥವಾ ನಾಯಕಿಯರಿಗೇ ಪ್ರಾಧಾನ್ಯ ಇರುವ ಸಿನಿಮಾಗಳು ಕೂಡ ಎಲ್ಲೆಡೆ ಪ್ರೇಕ್ಷಕರ ಮನಗೆದ್ದು ಹಣ ಬಾಚುತ್ತಿವೆ. ಹಾಲಿವುಡ್‍ನಲ್ಲಂತೂ ನಟೀಮಣಿಯರು ಪರದೆಯನ್ನಷ್ಟೇ ಅಲ್ಲ, ಖಜಾನೆಯನ್ನೂ ಮಿನುಗಿಸುತ್ತಿದ್ದಾರೆ.
ಸಿನಿಮಾ ಅನ್ನುವುದು ಎಂದಿಗೂ ಪೌರುಷಮಯ ಪ್ರಪಂಚ. ನಾಯಕನ ಶೌರ್ಯ, ಕ್ರೌರ್ಯ, ಹ್ಯಾಂಡ್‍ಸಮ್ ಲುಕ್, ಸಿಕ್ಸ್ ಪ್ಯಾಕ್, ಹೋರಾಟ, ಹಾರಾಟ, ಪ್ರೀತಿ, ಪ್ರೇಮ, ಹಾಡು, ಕುಣಿತ ಇತ್ಯಾದಿಗಳೇ ಒಂದು ಚಿತ್ರವನ್ನು ಗೆಲ್ಲಿಸುತ್ತವೆ ಎನ್ನುವುದು ಸಿನಿಮಾ ಮಾಧ್ಯಮದ ಆವಿಷ್ಕಾರ ಆದ ಕಾಲದಿಂದಲೂ ಬಂದಿರುವ ನಂಬಿಕೆ. ನಾಯಕ ಪುರುಷೋತ್ತಮ ಇಲ್ಲವೇ ಪುರುಷಾಧಮ ಏನಾದರೂ ಆಗಿರಲಿ ಸಿನಿಮಾ ಅನ್ನುವುದು ಅವನಿಗಾಗಿ, ಅವನಿಗೋಸ್ಕರ ತಯಾರಾಗಿರುತ್ತದೆ. ಸಿನಿಮಾದ ಹೆಸರಿಗಿಂತ ಹೆಚ್ಚಾಗಿ `ಇಂಥ ನಟನ ಸಿನಿಮಾ’ ಎಂದು ಅವನ ಹೆಸರಿನಲ್ಲೇ ಪ್ರೇಕ್ಷಕರ ಮಾತಿನ ಬಳಕೆಯಲ್ಲಿ ಇರುತ್ತದೆ. ಹೀಗಾಗಿ ನಾಯಕನಿಗೆ ನೆರಳಾಗಿ ನಾಯಕಿ ಇರುತ್ತಾಳೆ; ನಾಯಕಿ ಅನ್ನುವುದಕ್ಕಿಂತ ಒಬ್ಬ ನಟಿ ಇರುತ್ತಾಳೆ. ಅಥವಾ ಎಷ್ಟೋ ಸಿನಿಮಾಗಳಲ್ಲಿ ಒಂದು ಹೆಣ್ಣುಗೊಂಬೆ ಇರುತ್ತದೆ.
ಅಕಸ್ಮಾತ್ ಹೆಣ್ಣಿಗೆ ಏನಾದರೂ ಅಹಂಕಾರ ಇದ್ದರೆ, ಅದನ್ನು ಬಡಿದು ಮಟ್ಟಹಾಕುವ ಬಹದ್ದೂರ್ ಗಂಡು ಇದ್ದೇ ಇರುತ್ತಾನೆ. ಮತ್ತು ಅದೇ ಸಿನಿಮಾದ ವಸ್ತು, ರಂಜನೆ, ಸಂದೇಶ ಎಲ್ಲವೂ ಆಗಿರುತ್ತದೆ. ಯಾವ ದೇಶವಾದರೂ ಆಗಿರಲಿ, ಅದರ ಸಿನಿಮಾ ಸಂಸ್ಕೃತಿಯ ಹಿಸ್ಟರಿಯಲ್ಲಿ ಕಂಡುಬರುವುದು ಬಹುಪಾಲು ಅಂಥ ಹಿಸ್‍ಸ್ಟೋರಿಗಳೇ! ಸಂಭಾವನೆಯ ವಿಚಾರದಲ್ಲೂ ತಾರತಮ್ಯ ವಿಪರೀತವಾಗಿದ್ದು, ಎಷ್ಟೋ ವೇಳೆ ನಟರ ಸಂಭಾವನೆಯ ಕಾಲುಭಾಗದಷ್ಟನ್ನೂ ನಟಿಯರು ಪಡೆಯುವುದಿಲ್ಲ. ಪೆÇೀಸ್ಟರ್‍ಗಳಲ್ಲೂ ಅವರಿಗೆ ಸಿಗುವ ಜಾಗ ಕಾಲುಭಾಗವಷ್ಟೆ! ಹೆಣ್ಣಿಗೆ ಪ್ರಾಶಸ್ತ್ಯ ಇರುವ ಸಿನಿಮಾಗಳೂ ಅಂದಿಗೂ ಇಂದಿಗೂ ಅಪರೂಪ.
ಆದರೆ “ಟೈಮ್ಸ್‍ಅಪ್” ಎಂಬ ಲಿಂಗ ಸಮಾನತೆಯಲ್ಲಿ ನಂಬಿಕೆಯಿಟ್ಟ ಸಮೂಹದ ಆಶಯದಂತೆ, “ಕ್ರಿಯೇಟಿವ್ ಆರ್ಟಿಸ್ಟ್ಸ್ ಏಜೆನ್ಸಿ” ಎಂಬ ಪ್ರತಿಭಾಶೋಧ ಸಂಸ್ಥೆ ಮತ್ತು “ಶಿಫ್ಟ್ 7” ಎಂಬ ತಾಂತ್ರಿಕ ಸಂಸ್ಥೆಗಳು ಒಟ್ಟುಗೂಡಿ, ಕಳೆದ ನಾಲ್ಕು ವರ್ಷಗಳ (2014 ಜನವರಿಯಿಂದ 2017 ಡಿಸೆಂಬರ್) ಅವಧಿಯಲ್ಲಿ ತೆರೆಕಂಡು ಹಣ ಬಾಚಿಕೊಂಡ ಪ್ರಪಂಚದ ಒಟ್ಟು 350 ಹಿಟ್ ಸಿನಿಮಾಗಳನ್ನು ಸತ್ಯಶೋಧನೆಯ ದುರ್ಬೀನಿಗೆ ಒಳಪಡಿಸಿದವು. ಅದರಲ್ಲಿ ಕಂಡುಬಂದ ಅಪ್ಪಟ ಸತ್ಯವೇನೆಂದರೆ, ನಟಿಯರಿಗೆ ಪ್ರಾಧಾನ್ಯ ಇರುವ ಸಿನಿಮಾಗಳೇ ನಟಶೇಖರರ ಸಿನಿಮಾಗಳಿಗಿಂತ ಹೆಚ್ಚು ಹಣ ಬಾಚಿ ಬಾಕ್ಸ್ ಆಫೀಸ್ ಯಶಸ್ಸು ಗಳಿಸಿದ್ದವು. ನಟೀಮಣಿಯರಿಗೆ ಪ್ರಧಾನ ಪಾತ್ರ ಇದ್ದರೆ ಚಿತ್ರ ಗೆಲ್ಲುವುದಿಲ್ಲ ಎಂಬ ರೂಢಿಗತ ನಂಬಿಕೆಯನ್ನು ಅವು ನುಚ್ಚುನೂರು ಮಾಡಿದ್ದವು. ಹೀರೋಗಳ ಸಿನಿಮಾಗಳು ಮಾತ್ರ ಓಡುತ್ತವೆ ಎಂಬ ನಂಬಿಕೆಯನ್ನು ಈ ವರದಿ ಓಡಿಸಿಬಿಟ್ಟಿದೆ!
ಸಿನಿಮಾ ವಿಮರ್ಶೆಯಲ್ಲಿ “ಬೆಕ್ಡೆಲ್ ಟೆಸ್ಟ್” ಅನ್ನುವ ಅಂಶವೊಂದಿದೆ. ವ್ಯಂಗ್ಯಚಿತ್ರಕಾರ ಆಲಿಸನ್ ಬೆಕ್ಡೆಲ್ ಈ ಪರೀಕ್ಷೆಯನ್ನು ರೂಪಿಸಿದ್ದಾನೆ. ಚಿತ್ರದ ಎರಡು ಸ್ತ್ರೀಪಾತ್ರಗಳು ಆಡುವ ಮಾತುಕತೆಯಲ್ಲಿ ಪುರುಷನನ್ನು ಕುರಿತ ಮಾತು ಬಿಟ್ಟು ಬೇರೇನಾದರೂ ಇರುತ್ತದೆಯೋ ಇಲ್ಲವೋ ಎಂಬುದನ್ನು ಇದು ಅಳೆಯುತ್ತದೆ. ಈ ಪರೀಕ್ಷೆಯಲ್ಲೂ ಪಾಸಾದ ಬಹುಪಾಲು ಸಿನಿಮಾಗಳು ಅಂದಾಜು 618 ಮಿಲಿಯನ್ ಡಾಲರ್‍ಗಳನ್ನು ಗಳಿಸಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದ್ದವು.
ಈ 350 ಸಿನಿಮಾಗಳಲ್ಲಿ ಸಣ್ಣ ಬಜೆಟ್‍ನವೂ ಇದ್ದವು, ದೊಡ್ಡ ಬಜೆಟ್‍ನವೂ ಇದ್ದವು ಎನ್ನುವುದು ವಿಶೇಷ. ಎಲ್ಲ ಬಜೆಟ್ ವಿಭಾಗಗಳಲ್ಲೂ ನಟಿಯರೇ ಪ್ರಧಾನ ಪಾತ್ರದಲ್ಲಿದ್ದ ಸಿನಿಮಾಗಳು ನಟರ ಸಿನಿಮಾಗಳಿಗಿಂತ ಹೆಚ್ಚು ಹಣ ಸಂಪಾದಿಸಿದ್ದವು. ಒಟ್ಟಿನಲ್ಲಿ ಸಿನಿಮಾ ಪ್ರಪಂಚದಲ್ಲಿ ನಟಿಯರೂ ಮುಖ್ಯ, ನಟಿ ಪ್ರಧಾನ ಸಿನಿಮಾಗಳೂ ಭಾರೀ ಯಶಸ್ಸು ಗಳಿಸುತ್ತವೆ ಎನ್ನುವುದು ಸಾಬೀತಾಯಿತು. ಎಲ್ಲ ದೇಶಗಳ ಸಿನಿಮಾಗಳ ಪಾಲಿಗೂ ಈ ಮಾತು ನಿಜ ಎನ್ನುವುದು ಇನ್ನೂ ಗಮನಾರ್ಹ.
ಒಂದು ಸಿನಿಮಾ ತಯಾರಾದಾಗ ಅದನ್ನು ಕುರಿತ ಜಾಹೀರಾತು ಸಾಮಗ್ರಿ, ಮಾಧ್ಯಮ ಪ್ರಚಾರ, ಪರಿಚಯ ಕಾರ್ಯಕ್ರಮ ಎಲ್ಲದರಲ್ಲೂ ನಟ ಅಥವಾ ನಟಿ ಇಬ್ಬರಲ್ಲಿ ಯಾರ ಹೆಸರನ್ನು ಮೊದಲು ಬಳಸಲಾಗುತ್ತದೆ, ಅದನ್ನೇ ಎತ್ತಿ ಹಿಡಿಯಲಾಗುತ್ತದೆ ಎಂಬ ಅಂಶವನ್ನೂ ಗಮನಿಸಲಾಯಿತು. ಪರೀಕ್ಷೆಗೆ ಒಳಪಟ್ಟ 350 ಸಿನಿಮಾಗಳಲ್ಲಿ 105 ಸಿನಿಮಾಗಳು ಹೀರೋಯಿನ್ ಪ್ರಧಾನವಾಗಿದ್ದರೆ, 245 ಹೀರೋ ಪ್ರಧಾನವಾಗಿದ್ದವು. ಹೆಚ್ಚು ಹಣ ಹೂಡಿದಷ್ಟೂ ಹೀರೋಗೇ ಪ್ರಾಧಾನ್ಯ ಇರುವುದಂತೂ ಸಹಜ. ಹಾಕಿದ ಹಣ ವಾಪಸ್ ಬರಬೇಕಾದರೆ ಹೀರೋ ಹಾರಾಟ, ಹೋರಾಟ ಹೆಚ್ಚಾಗಿರಬೇಕು ಅನ್ನುವುದು ಒಂದು ಬಗೆಯ ಮೂಢನಂಬಿಕೆಯೇ ಆಗಿಬಟ್ಟಿದೆ. ಹಾಗಾಗಿ ನೂರು ಮಿಲಿಯನ್ ಡಾಲರ್ ಹೂಡಿರುವ ಸಿನಿಮಾಗಳಲ್ಲಿ 75 ರಲ್ಲಿ ಹೀರೋಗೆ ಪ್ರಾಧಾನ್ಯ ಇದ್ದರೆ, 19 ರಲ್ಲಿ ಮಾತ್ರ ನಟಿಯರಿಗೆ ಪ್ರಾಶಸ್ತ್ಯವಿತ್ತು. ಆದರೂ ಹೀರೋಯಿನ್‍ಗಳ ಚಿತ್ರಗಳ ಗಳಿಕೆ ಬಹಳ ಮುಂದಿತ್ತು.
ಸಿನಿಮಾದಲ್ಲಿ ಹೆಣ್ಣಿಗೆ ಹೆಚ್ಚು ಪೆÇ್ರೀತ್ಸಾಹ, ಹೆಚ್ಚು ಅವಕಾಶ ನೀಡುವಂತೆ ಹಾಲಿವುಡ್ ಸಿನಿಮೋದ್ಯಮವನ್ನು ಒತ್ತಾಯಿಸುವ ಈ ಸಂಶೋಧನಾ ವರದಿ, ಕಪ್ಪು ಬಣ್ಣದ ಜನರಿಗೂ ಪ್ರಾಶಸ್ತ್ಯ ಕೊಡುವಂತೆ ಆಗ್ರಹಿಸುತ್ತದೆ.
ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.