ಬಾಲಿವುಡ್ ಅಂದರೆ ಬರೀ ಪುರುಷ ಸಾಮ್ರಾಜ್ಯವೇ?
ಬಾಲಿವುಡ್ ಅಥವಾ ಜಗತ್ತಿನ ಯಾವುದೇ ಚಿತ್ರರಂಗದಲ್ಲಿ ಎದ್ದು ಕಾಣುವ ಪುರುಷಾಧಿಪತ್ಯಕ್ಕೆ ಪ್ರತೀಕವೆಂಬಂತೆ, ಇತ್ತೀಚೆಗೆ ಪ್ರಧಾನಮಂತ್ರಿಗಳನ್ನು ಭೇಟಿಯಾದ ನಿಯೋಗದಲ್ಲಿ ಒಬ್ಬ ಮಹಿಳೆಯೂ ಇರಲಿಲ್ಲ. ಹೆಣ್ಣು ಕಣ್ಣು ಹೊಡೆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬಿಡುತ್ತದೆ ಎಂದು ಭಾವಿಸುವ ನಿರ್ಮಾಪಕ – ನಿರ್ದೇಶಕರು, ಚಿತ್ರದಲ್ಲಿ ಎಲ್ಲಕ್ಕೂ ಬೇಕಾಗುವ ಮಹಿಳೆಯರು ಇದಕ್ಕೂ ಬೇಕಲ್ಲವೇ ಎಂದು ಯೋಚಿಸಲೇ ಇಲ್ಲ.
ಹಿಂದಿ ಸಿನಿಮಾಗಳು ಎಂಬ ಬಾಲಿವುಡ್ ಉದ್ಯಮದ ಅಭಿವೃದ್ಧಿ ಮತ್ತು ಜಿಎಸ್ಟಿ ಮುಂತಾದ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಹದಿನೆಂಟು ಮಂದಿಯ ನಿಯೋಗ ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿತು. ಆದರೆ ಆ ನಿಯೋಗದಲ್ಲಿ ಹೆಸರಿಗಾಗಲೀ ಕೊಸರಿಗಾಗಲೀ ಒಬ್ಬ ಮಹಿಳೆಯೂ ಇರಲಿಲ್ಲ!
ಹಾಗಾದರೆ ನಟಿಯರು, ನಾಯಕಿಯರು, ಅಭಿನೇತ್ರಿಯರು, ಕಲಾವಿದೆಯರು, ನರ್ತಕಿಯರು, ನಿರ್ದೇಶಕಿಯರು, ನಿರ್ಮಾಪಕಿಯರು, ಕಥೆಗಾರ್ತಿಯರು, ಛಾಯಾಗ್ರಾಹಕಿಯರು, ತಂತ್ರಜ್ಞೆಯರು ಯಾರೂ ಇಲ್ಲದೆ ಬರೀ ಗಂಡಸರಿಂದಲೇ ಬಾಲಿವುಡ್ ಬೆಳೆದುಬಿಟ್ಟಿದೆಯೇ? ಹಿಂದಿ ಅಥವಾ ಭಾರತೀಯ ಚಿತ್ರೋದ್ಯಮಕ್ಕೆ ಮಹಿಳೆಯರು ಏನೂ ಕೊಡುಗೆ ಕೊಟ್ಟಿಲ್ಲವೇ? ಉದ್ಯಮದ ಪ್ರಗತಿ ಕುರಿತು ಚರ್ಚಿಸಲು ಮಹಿಳೆಯರಿಗೆ ಸಾಧ್ಯವಿಲ್ಲವೇ? ಸಿನಿಮಾ ಕುರಿತು ನೀತಿನಿರ್ಧಾರಗಳನ್ನು ಕೈಗೊಳ್ಳುವ ಬುದ್ಧಿಶಕ್ತಿ ಹೆಣ್ಣಿಗಿಲ್ಲವೇ? ಅವರ ವೈವಿಧ್ಯಮಯ ಪ್ರತಿಭೆ, ಅನೇಕಾನೇಕ ಪ್ರಶಸ್ತಿಗಳನ್ನು ಗೆದ್ದಿಲ್ಲವೇ? ಚಿತ್ರರಂಗದ ಸಮಸ್ಯೆಗಳು ಅವರಿಗೆ ಅರ್ಥವಾಗುವುದಿಲ್ಲವೇ? ಆಹಾ! ಚಿತ್ರರಂಗದಲ್ಲಿರುವ ಅಸಮಾನತೆಗೆ ಈ ನಿಯೋಗವೇ ಒಂದು ರೂಪಕ; ಅಸಮಾನತೆ ಸಾರುವ ಈ ದರಿದ್ರ ಸಂಗತಿಯೇ ಒಂದು ಸಿನಿಮಾಗೆ ವಸ್ತುವಾಗಬಹುದಲ್ಲವೇ!?
ಹಿಂದಿ ಚಿತ್ರರಂಗದ ಅಕ್ಷಯ್ ಕುಮಾರ್, ಅಜಯ್ ದೇವಗಣ್, ಕರಣ್ ಜೋಹರ್, ರಾಕೇಶ್ ರೋಶನ್, ರಾನಿ ಸ್ಕ್ರೂವಾಲ, ರಿತೇಶ್ ಸಿದ್ಧ್ವಾನಿ, ನಿರ್ಮಾಪಕರ ಗಿಲ್ಡ್ನ ಅಧ್ಯಕ್ಷ ಸಿದ್ಧಾರ್ಥ್ ರಾಯ್ಕಪೂರ್ ಮುಂತಾದ ಮಹಾಶಯರೆಲ್ಲ್ಲ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಲಿಯ (ಸೆನ್ಸಾರ್ ಮಂಡಲಿ) ಅಧ್ಯಕ್ಷ ಪ್ರಸೂನ್ ಜೋಶಿ ಸಂಗಡ ಪ್ರಧಾನ ಮಂತ್ರಿಗಳ ಜೊತೆ ಮಾತುಕತೆಗೆ ಹೋಗಿದ್ದರು. ಇವರಲ್ಲಿ ಯಾರಿಗೂ ಚಲನಚಿತ್ರರಂಗದ `ಅರ್ಧಾಂಗ’ ವಾದ ಮಹಿಳೆಯರು ಕೂಡ ಇದರಲ್ಲಿ ಪಾಲ್ಗೊಳ್ಳಲು ಯೋಗ್ಯರು ಮತ್ತು ಅದು ಅವರು ಹಕ್ಕು ಎಂದು ಅನ್ನಿಸಲೇ ಇಲ್ಲ. ಅಷ್ಟರ ಮಟ್ಟಿಗೆ ತಮ್ಮ ನಿಯೋಗ ಅಪೂರ್ಣ ಎಂದು ಅವರ್ಯಾರೂ ಭಾವಿಸಲಿಲ್ಲ. ಚಿತ್ರರಂಗದ ತಂಡದಲ್ಲಿ ಮಹಿಳೆಯರೂ ಇರಲೇಬೇಕು, ಇರದಿದ್ದರೆ ಅದು ಒಂದು ರೀತಿಯಲ್ಲಿ ಕಾನೂನುವಿರೋಧಿ ಎಂದು ಮಂಡಲಿಯ ಅಧ್ಯಕ್ಷರಿಗೂ ಅನ್ನಿಸಲಿಲ್ಲ. ಇನ್ನು `ಸಬ್ ಕಾ ಸಾಥ್’ ಮಂತ್ರ ಹೇಳುವ ಪ್ರಧಾನಮಂತ್ರಿಗಳು ನಿಮ್ಮ ತಂಡದಲ್ಲಿ ಮಹಿಳೆಯರು ಏಕೆ ಬಂದಿಲ್ಲ ಎಂದು ಪ್ರಶ್ನಿಸಲಿಲ್ಲ. ಈ ಭೇಟಿಗೆ ಕೆಲವು ವಾರಗಳ ಹಿಂದೆ ಪ್ರಧಾನಿಯನ್ನು ಭೇಟಿಯಾಗಿದ್ದ ಚಿತ್ರರಂಗದ ಇನ್ನೊಂದು ತಂಡದಲ್ಲೂ ಎಂದಿನಂತೆ ಮಹಿಳೆಯರು ಇರಲಿಲ್ಲ.
ರಾಜನು ತನ್ನ ಆಸ್ಥಾನದಲ್ಲಿ ಮಾಂಡಲಿಕರ ಜೊತೆ ಕೂತ ಹಾಗಿರುವ ಒಂದು ಚಿತ್ರವನ್ನೂ ಹಾಕಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ನಲ್ಲಿ ಚಿತ್ರರಂಗದ ನಿಯೋಗದೊಂದಿಗೆ ಮಾತುಕತೆ ನಡೆಸಿದ್ದನ್ನು ಹಂಚಿಕೊಂಡರು. ನಿರೀಕ್ಷೆಯಂತೆ ನೆಟ್ಟಿಗರು ಈ ಮಾತುಕತೆಯಲ್ಲಿ ಮಹಿಳೆಯರು ಯಾಕೆ ಪಾಲ್ಗೊಂಡಿಲ್ಲ ಎಂದು ಗಟ್ಟಿಯಾಗಿ ಪ್ರಶ್ನಿಸಿದರು. `ಏನೋಪ್ಪ, ಪ್ರಧಾನಿಯನ್ನು ಭೇಟಿ ಮಾಡುವ ಹೊತ್ತಿಗೆ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಕ್ಯಾಸ್ಟಿಂಗ್ ಕೌಚ್, ಲೈಂಗಿಕ ಕಿರುಕುಳ, ಅಸಮಾನ ಸಂಭಾವನೆ ಇತ್ಯಾದಿ ಸಮಸ್ಯೆಗಳೆಲ್ಲ ನಿವಾರಣೆ ಆಗಿಬಿಟ್ಟಿದ್ದವೋ ಏನು ಕಥೆಯೋ” ಎಂದು ಚುಚ್ಚಿದರು.
ಹೆಣ್ಣು ಕಣ್ಣು ಹೊಡೆದರೆ ಸಿನಿಮಾ ಗೆದ್ದುಬಿಡುತ್ತದೆ ಎಂದು 21 ನೇ ಶತಮಾನದಲ್ಲೂ ಯೋಚಿಸುವ ಚಿತ್ರರಂಗ, ಗಂಭೀರವಾದ ಸಂಗತಿಗಳಿಗೆ ಅವಳನ್ನು ಪರಿಗಣಿಸುವುದಿಲ್ಲ. ಪುರುಷರೇ ತುಂಬಿ ತುಳುಕುತ್ತಿದ್ದ ಸಿನಿಮಾ ರಂಗದ ಈ “Panel” ಅನ್ನು ಅನೇಕರು “Manel” (Man- ಗಂಡಸರಿಂದ ತುಂಬಿರುವ) ಎಂದು ಕಟುವಾಗಿ ಜರಿದರು. ಸಾಮಾಜಿಕ- ಸಾಂಸ್ಕೃತಿಕ ರಂಗದಲ್ಲಿ ತುಂಬಿರುವ ಪುರುಷಾಧಿಪತ್ಯಕ್ಕೆ ಈ ನಿಯೋಗವೊಂದು ಸಂಕೇತವಾಗಿ ಕಾಣಿಸಿತು. `ಅಯ್ಯೋ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಆಹ್ವಾನದ ಮೇರೆಗೆ ನಾವು ಅವರನ್ನು ಭೇಟಿಯಾಗಲು ಹೋಗಿದ್ದೆವಷ್ಟೆ, ನಾವಾಗಿ ಕೇಳಿಕೊಂಡು ಹೋದದ್ದಲ್ಲ’ ಎಂಬ ಸಬೂಬು, ಸಮಜಾಯಿಷಿ ಯಥಾಪ್ರಕಾರ ಬಂದವು. ಅವರು ಕರೆದರೋ ಇವರು ಕರೆಸಿಕೊಂಡರೋ – ಒಟ್ಟಿನಲ್ಲಿ ನೀವೂ ಬನ್ನಿ ಎಂದು ಮಹಿಳೆಯರನ್ನೂ ಏಕೆ ಕರೆಯಲಿಲ್ಲ?
ಆದರೆ, ಇವೆಲ್ಲದರ ಜೊತೆ ಗಮನಾರ್ಹವಾಗಿ ಮುಖಕ್ಕೆ ರಾಚಿದ್ದು ಈ ವಿಚಾರಕ್ಕೆ ಕೆಲವು ನಿರ್ದೇಶಕಿಯರು ನೀಡಿದ ನಾಜೂಕು ಪ್ರತಿಕ್ರಿಯೆ. ಅವರಲ್ಲಿ ಕೆಲವರಿಗಂತೂ ಚಿತ್ರರಂಗದ ಸಮಸ್ಯೆಯ ಚರ್ಚೆ ಆದರೆ ಸಾಕಂತೆ, ಹೆಂಗಸರು ಅದರಲ್ಲಿ ಪಾಲ್ಗೊಳ್ಳಲೇಬೇಕು ಎಂದೇನೂ ಅನ್ನಿಸುವುದಿಲ್ಲವಂತೆ… ಪ್ರಾತಿನಿಧ್ಯ ಅನ್ನುವುದು ಒಂದು ಕಾನೂನಾತ್ಮಕ ಹಕ್ಕು ಮತ್ತು ಸಾಮಾಜಿಕ ಮೌಲ್ಯ ಎಂದು ಮಹಿಳೆಯರಿಗೇ ಅನ್ನಿಸದಿದ್ದರೆ ಪುರುಷರು ಅದನ್ನು ತಟ್ಟೆಯಲ್ಲಿಟ್ಟು ಕೊಡುವುದಿಲ್ಲ.
– ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.