Uncategorizedದೇಶಕಾಲ

‘ಬದುಕು’ತೆರೆದಿಟ್ಟ ಬರಹಗಾರ್ತಿ ಗೀತಾ ಇನ್ನಿಲ್ಲ – ಎನ್. ಗಾಯತ್ರಿ

ಕೆಳಜಾತಿ ವರ್ಗದವರ ದುಃಖ ದುಮ್ಮಾನಗಳನ್ನು, ಆಚರಣೆ, ಕುರುಡು ನಂಬಿಕೆಗಳನ್ನು, ಒಟ್ಟಾರೆಯಾಗಿ ಸಮಾಜದ ಶೋಷಿತರ ವಿಸ್ತಾರವಾದ ಬದುಕಿನ ಚಿತ್ರವನ್ನು ತೆರೆದಿಟ್ಟ ‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಪುಸ್ತಕದ ಬಹುಮಾನ ಪಡೆದ ಶ್ರೀಮತಿ ಗೀತಾ ನಾಗಭೂಷಣ ಕನ್ನಡದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದ ಮೊದಲ ಲೇಖಕಿ. ಹೈದರಾಬಾದ್ ಕರ್ನಾಟಕದ ಪ್ರಾಂತ್ಯದಲ್ಲಿನ ಕೆಳಜಾತಿ ಸಮುದಾಯದಲ್ಲಿ ಮೊದಲಿಗೆ ವಿದ್ಯಾಭ್ಯಾಸ ಪಡೆದವರಾಗಿ ಕಛೇರಿಯಲ್ಲಿ ಕೆಲಸ ಮಾಡುವ ಮೊದಲ ಮಹಿಳೆಯಾಗಿ ವಿಶಿಷ್ಟ ಅನುಭವವನ್ನು ಪಡೆದಿದ್ದ ಗೀತಾ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷೆಯೂ ಆಗಿದ್ದವರು. ಕನ್ನಡ ಸಾಹಿತ್ಯ ಲೋಕದಲ್ಲಿ ಹೀಗೆ ಹಲವಾರು ಪ್ರಥಮಗಳನ್ನು ಸಾಧಿಸಿದ ಅಪರೂಪದ ಲೇಖಕಿ ಶ್ರೀಮತಿ ಗೀತಾ ನಾಗಭೂಷಣ ಜೂನ್ ೨೮ರಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಾ ಹಿತೈಷಿಣಿಯ ಅಕ್ಷರ ನಮನ ಇಲ್ಲಿದೆ.

ಕನ್ನಡ ಅಕ್ಷರ ಲೋಕದ ಎಲ್ಲ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಗೀತಾ ಅವರ ಬದುಕು ಹೂವಿನ ಹಾಸಿಗೆಯಲ್ಲ. ಅದೊಂದು ದೀರ್ಘ ಹೋರಾಟದ ಬದುಕು. ಹಳ್ಳಿಯಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲವೆಂದು ಕಲಬುರ್ಗಿಗೆ ಬಂದು ಎಂ.ಎಸ್.ಕೆ.ಮಿಲ್‍ನ ಗಿರಣಿಯಲ್ಲಿ ಕೂಲಿ ಕಾರ್ಮಿಕರಾಗಿ ಸೇರಿಕೊಂಡ ಗೀತಾ ಅವರ ತಂದೆ ಅಪ್ಪಟ ಅನಕ್ಷರಸ್ಥರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜೈಲು ಸೇರಿದ ಗೀತಾ ಅವರ ತಂದೆಗೆ ಜೈಲಿ ನಲ್ಲಿದ್ದ ವಿದ್ಯಾವಂತ ಖೈದಿಗಳ ಸಂಪರ್ಕದಿಂದ ರಾಮಾಯಣ, ಮಹಾಭಾರತ ಮತ್ತು ಹತ್ತು ಹಲವು ಗ್ರಂಥಗಳ ಪರಿಚಯ, ವಿದ್ಯೆಯ ಮಹತ್ವ ಅರಿವಾಯಿತು. ಜೈಲಿನಿಂದ ಹೊರಗೆ ಬಂದ ಮೇಲೆ ಮಕ್ಕಳಿಗಾದರೂ ಕಲಿಸಬೇಕೆಂಬ ಮನಸ್ಸಾಯಿತು. ಚೊಚ್ಚಲು ಮಗಳು ಗೀತಾ ತಂದೆಯ ಪ್ರೋತ್ಸಾಹದಿಂದ ಶಾಲೆಗೆ ಸೇರುವ ಅವಕಾಶ ಪಡೆದರು. ತಳವಾರ ಕುಟುಂಬಕ್ಕೆ ಸೇರಿದ ಗೀತಾರವರು ಬ್ರಾಹ್ಮಣರ ಬೀದಿಯಲ್ಲಿ ವಾಸಿಸುತ್ತಿದ್ದುದರಿಂದ ಮೇಲುಜಾತಿಯವರು ಕೀಳುಜಾತಿಯವರನ್ನು ಅಪಮಾನಗೊಳಿಸಬಹುದಾದ ಎಲ್ಲ ಪರಿಯನ್ನು ಸ್ವಂತ ಅನುಭವವಾಗಿ ಕಂಡರು. ಮನೆಯಲ್ಲಿದ್ದ ಕಡು ಬಡತನದಿಂದ ವಿದ್ಯಾಭ್ಯಾಸ ಯಾವ ಹಂತದಲ್ಲಾದರೂ ನಿಲ್ಲಬಹುದಿತ್ತು. ಆದರೂ ಬದುಕಿನಲ್ಲಿ ಸಿಕ್ಕ ಚಿಕ್ಕ-ಪುಟ್ಟ ಪ್ರೋತ್ಸಾಹದಿಂದ. ಧೈರ್ಯದಿಂದ. ಎದೆಗುಂದದೆ ಮೆಟ್ರಿಕ್ ಮುಗಿಸಿ ಕಲಬುರ್ಗಿಯ ಡಿವಿಜನಲ್ ಕಛೇರಿಯಲ್ಲಿ ಕೆಲಸಕ್ಕೆ ಸೇರಿದರು. ಇಡೀ ಕಛೇರಿಯಲ್ಲಿ. ಅಷ್ಟೇ ಏಕೆ ಇಡೀ ಜಿಲ್ಲೆಯಲ್ಲಿ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಏಕೈಕ ಮಹಿಳೆಯೆನಿಸಿಕೊಂಡರು. ಬೆಳಗಿನ ಹೊತ್ತು ಕಾಲೇಜಿನಲ್ಲಿ ವಿದ್ಯಾಭ್ಯಾಸ, ನಂತರ ಕಛೇರಿಯಲ್ಲಿ ಗುಮಾಸ್ತೆ ಕೆಲಸ ಜೊತೆಜೊತೆಗೆ ನಿಭಾಯಿಸಿಕೊಂಡು ಪದವಿ ಗಳಿಸಿಕೊಂಡು ಶರಣಬಸಪ್ಪ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾದರು. ಅಲ್ಲಿಂದ ಮುಂದೆ ಬಿ.ಎಡ್.ಎಂ.ಎ ಪದವಿ ಗಳಿಸಿಕೊಂಡು ಕಾಲೇಜು ಪ್ರಿನ್ಸಿಪಾಲ್ ಆಗಿ ಮೂವತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು.

ಬದುಕಿನೊಂದಿಗೆ ಬರವಣಿಗೆಯು ಜೊತೆಜೊತೆಗೆ ಹೆಜ್ಜೆಹಾಕಿತು. ಹದಿಹರೆಯದಲ್ಲಿ ಜನಪ್ರಿಯವಾದ ಮನೋರಂಜನೆ ಕಥೆಗಳನ್ನು ರಚಿಸಿದರೂ ನಂತರ ತಮ್ಮ ಹಾದಿಯನ್ನು ಗುರುತಿಸಿಕೊಳ್ಳುವುದು ಗೀತಾ ಅವರಿಗೆ ತಡವಾಗಲಿಲ್ಲ. ಜಾತಿ ನೆಲೆಯ ಸಾಮಾಜಿಕ ಅಪಮಾನದ ಸಂಕಟ. ದೌರ್ಜನ್ಯ. ದಬ್ಬಾಳಿಕೆಯ ನೋವು, ವರ್ಗ ಬೆಲೆಯ ಮಾನಸಿಕ ಕ್ರೌರ್ಯ, ದಲಿತ ಜಗತ್ತಿನ ಮುಗ್ಧ ಹೆಂಗಸರ ಲೈಂಗಿಕ ಶೋಷಣೆಯ ಚಿತ್ರಹಿಂಸೆ, ಅವರ ಸಮುದಾಯಕ್ಕೆ ಕೆಸರಿನಂತೆ ಅಂಟಿಕೊಂಡಿರುವ ಬೆತ್ತಲೆಸೇವೆ, ಜೋಗಿತಿಯಂಥ ಸಂಪ್ರದಾಯಗಳನ್ನು ಅತ್ಯಂತ ಪಾರದರ್ಶಕವಾಗಿ ಬರವಣಿಗೆಯಲ್ಲಿ ತೆರೆದಿಟ್ಟಿದ್ದಾರೆ. ಗೀತಾ ಅವರ ಬದುಕಿನ ಒಟ್ಟು ಅನುಭವ, ವೈಚಾರಿಕತೆಯ ಘನೀಕೃತರೂಪವಾಗಿ ‘ಬದುಕು’ ಮೂಡಿಬಂದಿದೆ.

ಗೀತಾ ಅವರು ಬರೆದ ಕಥೆಗಳನ್ನೊಳಗೊಂಡ ಸಮಗ್ರ ಸಂಕಲನದ ಹೆಸರು ‘ಕ್ಯಾದಿಗಿ ಬನದಾಗ ಕತೆಯಾಗಿ ನಿಂತವರು.’ ಗೀತಾ ಅವರು ಸೃಷ್ಟಿಸಿರುವ ಸಮಾಜವೇ ಕೇದಗೆಯ ಬನದಂತೆ ಮುಳ್ಳುಗಳಿಂದ ಕೂಡಿದೆ. ಮಳೆಯಿಲ್ಲದ, ಭೂಕಂಪದಂತಹ ಪ್ರಕೃತಿಯ ಅಟ್ಟಹಾಸ ಒಂದು ಕಡೆಯಾದರೆ, ಮಾನವ ನಿರ್ಮಿತ ಬಂದ್, ಲಾಕೌಟ್, ಮುಷ್ಕರದಂತಹ ಪ್ರಸಂಗಗಳು ಈ ಸಮಾಜದ ಜನರನ್ನು ಅತಂತ್ರಗೊಳಿಸಿವೆ. ಈ ಎಲ್ಲದಕ್ಕಿಂತ ಅಟ್ಟಹಾಸ ಬೀರುತ್ತಿರುವುದು ಉಳ್ಳವರ, ಮೇಲುಜಾತಿಯವರ ಫ್ಯೂಡಲ್ ಮೌಲ್ಯಗಳು. ಇಂತಹ ಕೇದಗೆಯ ಬನದಲ್ಲಿ ಕತೆಯಾಗಿ ನಿಂತ ಹಲವರು ಇದುವರೆವಿಗಿನ ಕನ್ನಡ ಸಾಹಿತ್ಯದಲ್ಲಿ ಚಿತ್ರಿತರಾಗದಿರುವವರು. ಈ ಸ್ತ್ರೀಪುರುಷರ ವೈವಿಧ್ಯ ಬೆರಗು ಹುಟ್ಟಿಸುವಂತಹುದು. ಕಳ್ಳತನದ ದಂಧೆಯನ್ನು ಆರಂಭಿಸಿದರೂ ತಕ್ಷಣವೇ ಅದು ತಪ್ಪೆಂದು ಅರಿವಾಗಿ ಮೈಮುರಿದು ದುಡಿಮೆಗೆ ಒಡ್ಡಿಕೊಳ್ಳುವ ‘ಕಜರಿ’, ಗೆಳತಿಯರ, ಹಳ್ಳಿಯರ ಹಿರಿಯರ ಒತ್ತಾಯಕ್ಕೆ ಮಣಿದು ಚುನಾವಣೆಗೆ ನಿಂತು ಎದುರಾಳಿಯಾದ ಮಾಜಿ ಗಂಡನಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗುವ ‘ಕಾಶಿ’, ತಾನು ಮೈನೆರೆಯದಿದ್ದರೂ ಸೋಬಾನದ ಹಾಡು ಹಾಡುತ್ತಾ ಹೊಟ್ಟೆ ಹೊರೆಯುವ ‘ಹಾಡಿನ ಹನುಮವ್ವ’, ತನ್ನನ್ನು ಇಟ್ಟುಕೊಂಡ ಸಾಹುಕಾರ ತನಗೆ ದ್ರೋಹ ಬಗೆಯುತ್ತಿದ್ದಾನೆಂದು ಅರಿವಾದೊಡನೆ ಅವನ ವಿರುದ್ಧ ಬಂಡೆದ್ದು ಅವನನ್ನು ಪೊಲೀಸರ ಕೈಗೆ ಒಪ್ಪಿಸುವ ‘ಲವಂಗಿ’, ಕಳ್ಳತನವೇ ವೃತ್ತಿಯಾಗಿದ್ದರೂ ತನ್ನ ಹೃದಯ ವೈಶಾಲ್ಯದಿಂದ ಸಾಯುತ್ತಿದ್ದ ಮಗುವಿನ ಪ್ರಾಣ ಉಳಿಸುವ ‘ಬೇಲೂ’, ತನ್ನನ್ನು ಇಟ್ಟುಕೊಂಡ ಜಮೀನುದಾರನ ಹಂಗನ್ನು ತೊರೆದು ಮಗಳಿಗೆ ವಿದ್ಯಾಭ್ಯಾಸ ಕೊಡಿಸಲು ಪಟ್ಟಣಕ್ಕೆ ಹೋಗುವ ‘ಭವಾನಿ’, ರಿಕ್ಷಾವಾಲಿ ‘ಚಿತ್ತಿ’- ಇವೆಲ್ಲಾ ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲುವ ಸ್ತೀಪಾತ್ರಗಳಾದರೆ, ಹೃದಯವಂತ ಪುರುಷರ ಹಲವಾರು ಪಾತ್ರಗಳನ್ನು ಗೀತಾ ಸೃಷ್ಟಿಸಿದ್ದಾರೆ.

ಗುಲಬರ್ಗಾ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ 1942ರ ಮಾರ್ಚ್ 25ರಂದು ಜನಿಸಿದ ಗೀತಾ ಅವರ ತಂದೆ ಶಾಂತಪ್ಪ ಮತ್ತು ತಾಯಿ ಶರಣಮ್ಮ. ಅವರು ಅತ್ಯಂತ ಜನಪ್ರಿಯ ಲೇಖಕಿ. ಅವರ ‘ಹಸಿಮಾಂಸ ಮತ್ತು ಹದ್ದುಗಳು’ ಕಾದಂಬರಿ ಚಲನಚಿತ್ರವಾಗಿದೆ. ಅವರ ಜೋಗಿಣಿ, ಅವ್ವ, ಸತ್ತ ಹೆಣ್ಣಿನ ಸುತ್ತ, ಜೀವನ ಚಕ್ರ ಮತ್ತು ನೀಲಗಂಗಾ ಕಿರುತೆರೆಯಲ್ಲಿ ಪ್ರದರ್ಶಿತವಾಗಿವೆ. ಅವರ ಸುಮಾರು 50 ಕಥೆಗಳು, 15 ನಾಟಕಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಒಟ್ಟು 26 ಕಾದಂಬರಿಗಳನ್ನು ಬರೆದಿರುವ ಗೀತಾ ಅವರ ಕತೆಗಳು ‘ಕ್ಯಾದಿಗಿ ಬನದಾಗ ಕತೆಯಾಗಿ ನಿಂತವರು’ ಎನ್ನುವ ಹೆಸರಿನಲ್ಲಿ ಸಮಗ್ರ ಕಥಾಸಂಕಲನದಲ್ಲಿ ಮೂಡಿಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವಲ್ಲದೆ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸರ್ಕಾರದ ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ ಪಡೆದಿದ್ದಾರೆ. ಹಂಪಿ ವಿಶ್ವವಿದ್ಯಾಲಯದಿಂದ ‘ನಾಡೋಜ ಪ್ರಶಸ್ತಿ’ಯನ್ನು ಪಡೆದಿರುವುದಲ್ಲದೆ, ಗದಗದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷೆಯಾಗಿದ್ದರು.

ಕನ್ನಡ ಕಥನ ಸಾಹಿತ್ಯಕ್ಕೆ ಗೀತಾ ನಾಗಭೂಷಣ ಅವರ ಕೊಡುಗೆ ಅನನ್ಯವಾದದ್ದು. ಅವರ ಬರವಣಿಗೆಗಳು ಕನ್ನಡ ಸಾಹಿತ್ಯದ ವಿಸ್ತಾರವನ್ನು ಹೆಚ್ಚಿಸಿವೆ. ಸಾಹಿತ್ಯದಲ್ಲಿ ಇದುವರೆವಿಗೆ ದಾಖಲಾಗದೇ ಹೋಗಿರುವ, ಸಮಾಜದ ಅಂಚಿನಲ್ಲಿರುವ, ದಮನಕ್ಕೆ ಒಳಗಾದವರ ಬದುಕನ್ನು ಅವರು ತಮ್ಮ ಕೃತಿಗಳಲ್ಲಿ ತೆರೆದಿಟ್ಟಿದ್ದಾರೆ. ಝೋಪಡಿಪಟ್ಟಿ ಜನರ ಬದುಕಿನ ಸಂಕೀರ್ಣ ಅನುಭವಗಳು ಗೀತಾ ಅವರ ಲೇಖನಿಯಲ್ಲಿ ಸೃಜನಶೀಲ ಅಭಿವ್ಯಕ್ತಿಯಾಗಿ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿವೆ.

ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “‘ಬದುಕು’ತೆರೆದಿಟ್ಟ ಬರಹಗಾರ್ತಿ ಗೀತಾ ಇನ್ನಿಲ್ಲ – ಎನ್. ಗಾಯತ್ರಿ

  • H S Raghavendra Rao

    ಅವರು ನಿಜವಾಗಿಯೂ ದೊಡ್ಡ ಬರಹಗಾರ್ತಿ. ಬದುಕು ಕನ್ನಡದ ಅತ್ಯುತ್ತಮ ಕಾದಂಬರಿ ಗಳಲ್ಲಿ ಒಂದು.
    ಎಚ್ಎಸ್ಅರ್

    Reply

Leave a Reply

Your email address will not be published. Required fields are marked *