ಬಣ್ಣ – ಅಕ್ಷತಾ ಕೃಷ್ಣಮೂರ್ತಿ

ಗಳಿಗೆಗಳು ಖಂಡಿತ
ಬದಲಾಗುತ್ತದೆ ಎಂದು
ನೀ ಬಂದ ಮೇಲೆಯೆ
ಗೊತ್ತಾದದ್ದು
ಕ್ಷಣದ ಹಿಂದೆ ನೀನಿದ್ದೆ
ವಿದಾಯವಿರಲಿಲ್ಲ
ಈಗ ವಿದಾಯದ ಮಾತಿದೆ
ನೀನಿಲ್ಲ
ಎಷ್ಟೊಂದು ಭಿನ್ನ
ಗಳಿಗೆಗಳು ಕರಗುವ ಮುನ್ನ

ಆ ಗಳಿಗೆ ಕಣ್ಣಲ್ಲಿ ಬರಿಯ ನೀನಿದ್ದೆ
ಮಾತು ಕಥೆ ನಗು
ಚೂರು ಮುತ್ತು ಈಗಲೂ ಇದೆ
ಇದ್ದೂ ಇಲ್ಲದಂತಿರುವ
ನೆನಪಿನ ದಂಡೆ

ಆ ಗಳಿಗೆ ಎಷ್ಟೊಂದು ಖುಷಿಯಿತ್ತು
ಬೊಗಸೆಯಲ್ಲಿ ಕನಸು ಹೊಳೆದಿತ್ತು
ಈಗಲೂ ಅಂತಹದ್ದೆ ಗಳಿಗೆ ಇದೆ
ವ್ಯತ್ಯಾಸವಿಷ್ಟೇ
ಈಗಿದ್ದ ಗಳಿಗೆಯ ಬೊಗಸೆಯಲ್ಲಿ
ಸವೆದ ರೇಖೆಗಳು
ಕಣ್ಣೀರು ಕುದಿಸುತ್ತಿವೆ

ಆ ಗಳಿಗೆ ಮೋಹಕವಾಗಿದ್ದು
ನೋಡಿ ನಕ್ಷತ್ರಕೂ ಹೊಟ್ಟೆಕಿಚ್ಚು
ನೀ ನನ್ನ ಬಳಿ ಇರುವುದು ಕಂಡು.
ಗತಿ ಬದಲಾಯಿಸಿ ನಗುತ್ತಿರುವ
ಈ ಗಳಿಗೆಯಲಿ ನಿಂತಿರುವೆ
ನಾನು ಬರಿದೆ ಕೈ ಚಾಚಿ

ಎಷ್ಟೊಂದು ಮುತ್ತುಗಳಿದ್ದವು
ಆ ಘಳಿಗೆಯಲ್ಲಿ
ಲೆಕ್ಕ ಮಾಡಿದಷ್ಟು ಮುಗಿಯದು
ಹುಟ್ಟುತ್ತಿದ್ದವು ಹುಲ್ಲಿನ ತೆರದಿ
ಈ ಗಳಿಗೆಗಳಿಗೆ ಅದೇನೋ ಶಾಪ
ಬ್ರಹ್ಮಕಮಲದ ರೀತಿ
ರಾತ್ರಿಯೆ ಅರಳಿ ಬಾಡಿದ ಪ್ರೀತಿ

ಅಂವ ಹೇಳಿದ್ದು
ಹಚ್ಚಿಕೊಳ್ಳದಿರು ಮನಸೆ
ದೂರವಾಗಬಹುದು ಕನಸು
ಈ ಗಳಿಗೆ ಪ್ರತಿಫಲಿಸುತಿದೆ
ಕನಸೆಲ್ಲವೂ ಸುಳ್ಳು
ಬರಿಯ ಜೊಳ್ಳು
ಒಲವ ಬಯಲಿನ ಸಾವ ಬೆಳೆಯಲಿ.

ಆ ಗಳಿಗೆಯಲಿ ಹುಟ್ಟಿದ
ನೂರು ಕನಸಿಗೆ ರೆಕ್ಕೆ ಇತ್ತು
ಹಾರಿದ್ದೇ ಹಾರಿದ್ದು
ಮರೆತು ತನ್ನ ತಾ ಮರೆತು
ಈ ಗಳಿಗೆಗೆ ಕತ್ತಿಯ ಹರಿತವಿದೆ
ಕತ್ತರಿಸಿದಷ್ಟು ಹರಿತ ಹೆಚ್ಚು

ಆ ಗಳಿಗೆಯಲ್ಲಿ
ಎಲ್ಲಕ್ಕಿಂತ ಹೆಚ್ಚಾಗಿ ನೀನಿದ್ದೆ
ಪ್ರೀತಿಸುವೆ ಎಂದು
ಈ ಗಳಿಗೆಯಲಿ ಮಾತಾಡಿ
ಬಿಟ್ಟ ಮೌನವೊಂದಿದೆ
ಕನಸು ಕೊಂದು

ಆ ಗಳಿಗೆಯಲ್ಲಿ ಜೀವ ರಸವಿತ್ತು
ಬದುಕಿದ್ದೆ ಈ ಗಳಿಗೆಯಲಿ
ಉಸಿರು ನಿಂತ ಒಲವಿದೆ
ಅದಕೆ ಸತ್ತಿರುವೆ

ಆ ಗಳಿಗೆಯಲಿ ಫೋನಿಗೆ ಮುತ್ತಿಟ್ಟರೂ
ಪಡೆದ ಕನಸೊಂದು ಪಿಸುಗುಡುತ್ತಿತ್ತು
ಈ ಗಳಿಗೆಯಲಿ ಪಿಸುಗುಟ್ಟ ಕನಸು
ದಾರಿ ಬದಲಾಯಿಸಿ
ಏಕಾಂತದೊಳು ತನ್ನನರಸುತಿದೆ
ಉಳಿದದ್ದು ಬರಿಯ ಸದ್ದು

ಅವನೊಲವಿನ ಗಳಿಗೆಗಳಿಗೆ
ನೂರು ಬಣ್ಣ
ಸಾಬೀತಾಗಿದೆ…

– ಅಕ್ಷತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *