ಬಡಪೆಟ್ಟಿಗೆಯ ಮೂಕ ಸಾಕ್ಷಿ- ವೈದೇಹಿ

ಆ ಪೆಟ್ಟಿಗೆ ಬಾಯಿ ತೆರೆಯುತಿಲ್ಲ
ಆಚೆ ತಟ್ಟಿದರು, ಈಚೆ ಕುಟ್ಟಿದರು
ಅದು ಬಾಯಿ ತೆರೆಯಲಿಲ್ಲ
ಗೋಡೆಗೊರಗಿ ಈ ಪ್ರತ್ಯಕ್ಷ ಪುರಾವೆ
ಎಲ್ಲ ತಿಳಿದೂ ತಿಳಿದು ನಿರ್ಜೀವ ಕುಳಿತಿತ್ತು
ಹೊಡೆದರು ಜಪ್ಪಿದರು ಪುಸಲಾಯಿಸಿದರು
ಸೋಗು ಸಾಕೆಂದು ಇಕ್ಕಳದಿ ಚಿವುಟಿದರು,
ಅವಳೆಲ್ಲಿ? ಏನಾಯ್ತು? ಯಾರಿಂದ? ಹೇಳೆಂದು
ದಬ್ಬಿದರು ಎಳೆದರು ದಬದಬಾ ಗುದ್ದಿದರು
ಬಡಪೆಟ್ಟಿಗೆ ಬಾಯಿ ಬಿಡಲೇ ಇಲ್ಲ
ಸರಳು ನುಗ್ಗಿಸಿ ಮೀಟಿ ಬಾಯಿ ಕಳೆಸಿದರು
ಅಂತು ಕಳೆಯಿತೆ ಬಾಯಿ, ತೆರೆಯಿತೇ
ಅಬ್ಬ! ಅಂತು ಕಳೆಯಿತು ಬಾಯಿ ತೆರೆಯಿತು
ತೆರೆದರೇನು ಶಿವಶಿವಾ ಕಳೆದರೇನು!
ಬಾಯಲ್ಲಿ ನಾಲಗೆಯೇ ಇಲ್ಲ!
ಕಿತ್ತವರು ಯಾರು? ಅದನಾದರು ಹೇಳೆಂದು
ಕೇಳಲೂ ಹಾಯ್, ಬಾಯಿ ಹೊರಡುತಿಲ್ಲ.
ಉತ್ತರಕೆ ಬಾಯಿಯಿಲ್ಲ!

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *