FEATUREDಚಿಂತನೆ

ಬಡತನವಲ್ಲ ಭಾವದಾರಿದ್ರ್ಯ… ಗಿರಿಜಾ ಶಾಸ್ತ್ರಿ

ನಮ್ಮಲ್ಲಿ ದುಡಿಮೆಯ ಘನತೆಯೂ ಇಲ್ಲ. ಕೂಲಿಯೂ ಕಡಿಮೆ. ನಮ್ಮನ್ನು ನಾವೇ ಕೆಳಮಟ್ಟಕ್ಕೆ ಇಳಿಸಿಕೊಂಡಿದ್ದೇವೆ. ನಮ್ಮಲ್ಲಿ ಹೀಗೆ ಕೂಲಿ ಕಡಿಮೆ ಇರುವುದರಿಂದಲೇ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಮಕ್ಕಳ ಮೇಲೆ ಸವಾರಿ ಮಾಡುತ್ತಿವೆ.

ಎರಡು ದಿನಗಳ ಹಿಂದಷ್ಟೇ ತೆಗೆದು ಕೊಂಡುಬಂದ ಹೊಸ ಚೆಡ್ಡಿಯನ್ನು ಮಗ ಮೂಲೆಗೆ ಎಸೆದಿದ್ದ.
“ಅಯ್ಯೋ ಹೊಸಾ ಚೆಡ್ಡೀನ ಯಾಕೋ ಹೀಗೆ ಬಿಸಾಕಿದ್ದೀಯಾ?”ಎಂದೆ.

“ಸೈಕಲ್ ಹತ್ತೋವಾಗ ಹರಿದೋಯ್ತು ಬಿಸಾಕು” ಎಂದ. ಅಮೇರಿಕಾದಲ್ಲಿ ಸೈಕಲ್‌ ಶೋಕಿ ಜಾಸ್ತಿ. ಹೀಗಾಗಿ ನನ್ನ ಮಗನೂ ಪಿಜ್ಜಾ, ಬರ್ಗರ್‌ ಬೊಜ್ಜು ಕರಗಿಸಲು ಅದರ ಮೊರೆ ಹೊಕ್ಕಿದ್ದಾನೆ.
“ಎಲ್ಲಾದರೂ ಉಂಟಾ ಎರಡು ಸಾವಿರ ಕೊಟ್ಟಿದ್ದೀಯ. ಎರಡು ದಿನಾನೂ ಹಾಕ್ಕೊಳದೇ ಬಿಸಾಕೋದೆ? ಹರಿದಿಲ್ಲ, ಹೊಲಿಗೆ ಬಿಟ್ಟಿದೆ ಅಷ್ಟೇ. ಇಲ್ಲಿ ಟೈಲರುಗಳಿಲ್ಲವಾ? ಎಲ್ಲಿದ್ದಾರೆ ಹೇಳು ನಾನೇ ಹೊಲಿಸಿಕೊಂಡು ಬರ್ತೀನಿ”

“ಅಮ್ಮಾ, ಟೈಲರ್ರಾ!!?” ಎಂದು ಜೋರಾಗಿ ನಗತೊಡಗಿದ. ಟೈಲರಿಗೆ ರಿಪೇರಿಗೆ ಕೊಡೋ ದುಡ್ಡಲ್ಲಿ ಈ ತರಹದ ಎರಡು ಚೆಡ್ಡಿ ತೊಗೋಬಹುದು. ಇಲ್ಲಿ ಟೈಲರ್ ಹತ್ತಿರ ಮೈ ಅಳತೆ ಕೊಟ್ಟು ಬಟ್ಟೆ ಹೊಲಿಸಿ ಕೊಳ್ಳುವುದು ಎಂದರೆ ತುಂಬಾ ರಾಯಲ್. ಕೋಟ್ ಹೊಲಿಸಿಕೊಳ್ಳುವುದಂತೂ ತುಂಬಾ ದುಬಾರಿ. ರೆಡಿಮೇಡ್ ಬಟ್ಟೆಗಳೇ ಅಗ್ಗ” ಎಂದ.

“ಹೆಂಗಸರು ಏನ್ಮಾಡ್ತಾರೆ. ಅವರೂ ಹೊಲಿಸಿಕೊಳ್ಳೋದಿಲ್ವಾ?”
“ಅವರು ಏನ್ಮಾಡ್ತಾರೋ ಗೊತ್ತಿಲ್ಲ. ಇಲ್ಲಿ ತುಂಬಾ ದುಬಾರಿ”
ನಾನು ಮುಂಬಯಿಯಲ್ಲಿ ವರುಷಕ್ಕೆ ಒಂದು ಎಂಟು ಹತ್ತು ಬಾರಿಯಾದರೂ, ಬಿಗಿಯಾದ ಬಟ್ಟೆಗಳನ್ನು ಅಳ್ಳಕ ಮಾಡಿಸಲು, ಅಳ್ಳಕವಾದದ್ದನ್ನು ಬಿಗಿ ಮಾಡಿಸಲು, ಉದ್ದ, ತುಂಡ ಎಂದು ನಮ್ಮ ಪಾಂಡುವಿನ ಬಳಿಗೆ ಎಡತಾಕುತ್ತೇನೆ. ರಿಪೇರಿಗಳಿಗೆಂದೇ ಇರುವ ಟೈಲರ್ ಅವನು. ಯಾವುದೋ ಲಾಂಡ್ರಿಯ ಮುಂದೆ ಒಂದು ಡಕೋಟಾ ಮಷೀನ್ ಇಟ್ಟುಕೊಂಡು ಹಗಲೂ ರಾತ್ರಿ ಪೆಡಲ್ ತುಳಿಯುತ್ತಿರುತ್ತಾನೆ, ಇಷ್ಟೆಲ್ಲಾ ಆದರೂ ಅವನ ದಿನದ ಸಂಪಾದನೆ ೨೦೦ ರೂ ದಾಟುವುದಿಲ್ಲ. ಟೈಲರಿಂಗ್ ಗೂ ಬಡತನಕ್ಕೂ ಅಂಟಿದ ನಂಟು. ನಮ್ಮ ಸಿನಿಮಾಗಳಲ್ಲಂತೂ ದಿಕ್ಕೆಟ್ಟ ಮಹಿಳೆಯರು ತುಳಿಯುವುದೇ ಕೆಮ್ಮುತ್ತಾ, ಬೆವರೊರೆಸಿಕೊಳ್ಳುತ್ತಾ ಹೊಲಿಗೆ ಮಷೀನ್ನಿನ ಪೆಡಲುಗಳನ್ನು. ಈಗೀಗ ಫ್ಯಾಷನ್ ಡಿಸೈನರ್ ಎಂದು ಅವರ ಸ್ಥಾನಮಾನ ನಮ್ಮಲ್ಲೂ ಎತ್ತರಕ್ಕೆ ಏರಿರಬಹುದು. ಆದರೆ ಪಾಂಡುವಿನಂತಹ ‘ತುಕ್ಕೋಜಿ’ ಗಳ ಮಾನದಲ್ಲಿ ಅಂತಹ ಮಹತ್ತರ ಬದಲಾವಣೆಗಳೇನೂ ಆಗಿಲ್ಲ.

ನಮ್ಮ ಅಂತಃಪುರಗಳಲ್ಲಂತೂ ಈಗೀಗ ತರಹೇವಾರಿ ರವಿಕೆಯ ವಿನ್ಯಾಸಗಳು ಬಂದು ಸೀರೆಗಿಂತ ರವಿಕೆ ಹೊಲಿಸುವುದೇ ದುಬಾರಿಯಾಗಿರುವುದರ ಚರ್ಚೆ ಬರುತ್ತದೆ. ನಾನಂತೂ ಬಿಟ್ಟಿಯಾಗಿ ಸಿಗುವ ಸಾಧಾರಣ ಸೀರೆಗಳಿಗೆ ಹೊಸರವಿಕೆಯನ್ನು ಹೊಲಿಸಿದೇ ಇರುವುದರಲ್ಲೇ ಕಾಲತಳ್ಳುತ್ತೇನೆ. ನಾಲ್ಕುದಿನ ಉಟ್ಟು ಅಮೇಲೆ ಯಾರಿಗಾದರೂ ಕೊಟ್ಟುಬಿಡುತ್ತೇನೆ. ನಮ್ಮಲ್ಲಿ ಇಂತಹ ಹಳಸಲು, ಹರಕಲುಗಳನ್ನು ಪಡೆಯಲೆಂದೇ ಇದ್ದಾರಲ್ಲಾ ಕೂಲಿಯಾಳುಗಳು ಕಾಲಿಕಂಗಾಲಿಗಳು?

“ಇನ್ನೇನಾದರೂ ನಾವು ಅಮೇರಿಕಾದಲ್ಲಿ ಕುಪ್ಪಸ ಹೊಲಿಸಬೇಕೆಂದರೆ? ಅದರ ಬೆಲೆಗೆ ಒಂದು ಕಾಂಜೀವರಂ ಸೀರೆಯೇ ಬರಬಹುದು!

“ಇಲ್ಲಿ ಟೈಲರ್ ಕೆಲಸ ತುಂಬಾ ಲಾಭದಾಯಕ ಅಲ್ವಾ?” ಎಂದು ಮಗನನ್ನು ಕೇಳಿದೆ. ‘ಯಾರಾದರೂ ಹೋದರಲ್ವಾ ಅವನಿಗೆ ವ್ಯಾಪಾರ!? ಸಾಮಾನ್ಯ ಜನ ಯಾರೂ ಹೋಗೋದಿಲ್ಲ ಅಷ್ಟು ದುಬಾರಿ” ಎಂದ.

ಮುಂಬಯಿನಿಂದ ಅಮೇರಿಕಾಕ್ಕೆ ಬರುವಾಗ ಮಗನಿಗೆ ಬಹಳ ಪಾತ್ರೆ ಪಡಗ ಕಳುಹಿಸಿದ್ದೆ. ಇಲ್ಲಿ ಬಂದು ನೋಡಿದರೆ ಅವು ಯಾವೂ ಇಲ್ಲ. ಕೇಳಿದರೆ ಮೂರು ನಾಲ್ಕು ಸಲ ಮನೆ ಬದಲಾಯಿಸುವಾಗ ಇದ್ದಲ್ಲೇ ಬಿಟ್ಟು ಬಂದನಂತೆ!!! ಅವುಗಳನ್ನು ಸಾಗಿಸುವುದಕ್ಕೆ ಖರ್ಚು ಮಾಡುವ ಹಣದಲ್ಲಿ ಅವುಗಳ ಎರಡರಷ್ಟು ಸಾಮಾನುಗಳನ್ನು ತೆಗೆದುಕೊಳ್ಳಬಹುದಂತೆ. ಹೀಗಾಗಿ ಅಲ್ಲಲ್ಲೇ ಬಿಸಾಡುವುದೇ. ಕಾರುಗಳನ್ನೇ ಬಿಸಾಡುತ್ತಾರೆ! ಇನ್ನು ಪಾತ್ರೆ ಪಡಗ ಏನು ಮಹಾ? ಇಲ್ಲಿ ಅಡುಗೆ ಮನೆಯೊಂದನ್ನು ಒಮ್ಮೆ ಸ್ವಚ್ಛಗೊಳಿಸಲು ನೂರು ಡಾಲರುಗಳಂತೆ! ಮಗ ಬಫೆಲೋದಲ್ಲಿ ಬಾಡಿಗೆ ಮನೆಯೊಂದರಲ್ಲಿದ್ದಾಗ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದ ಸಣ್ಣಸಮಸ್ಯೆಯನ್ನು ಸರಿಪಡಿಸಲು ಪ್ಲಂಬರ್ ಬೇಡಿದ ಹಣ ೧೫೦೦ ಡಾಲರುಗಳೆಂದು ಹೇಳಿದ.

ಸಂಜೆ ಪಾರ್ಕಿನಿಂದ ಬರುತ್ತಿರುವಾಗ ಸಣ್ಣ ಮಗುವಿನೊಂದಿಗೆ ಒಬ್ಬ ಮಹಿಳೆ ಬರುತ್ತಿದ್ದಳು. ಅವಳು ಇಂಡಿಯಾ ನೋಡಿದ್ದೇನೆ ಹಿಮಾಲಯ, ಗ್ಯಾಂಜಸ್ ಎಂದೆಲ್ಲಾ ಹುರುಪಿನಿಂದ ಮಾತನಾಡಿದಳು. ಹೀಗೆ ಮಾತನಾಡುತ್ತಾ “ ಅಮೆರಿಕದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ ” ಎಂದು ಮುಖ ಸಪ್ಪಗೆ ಮಾಡಿದಳು. ಜನಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಅವಳು ಕೊಟ್ಟ ಕಾರಣವೆಂದರೆ ಮಕ್ಕಳನ್ನು ನೋಡಿಕೊಳ್ಳುವ ಶಿಶುಪಾಲನಾ ಕೇಂದ್ರಗಳು ಬಹಳ ದುಬಾರಿ, ತಿಂಗಳಿಗೆ ಸಾವಿರಾರು ಡಾಲರುಗಳನ್ನು ಕಟ್ಟಬೇಕು. ಹೀಗಾಗಿ ಉದ್ಯೋಗಸ್ಥ ಮಹಿಳೆಯರು ಮಕ್ಕಳನ್ನು ಹೊಂದುವ ಯೋಜನೆಯನ್ನು ಮುಂದೂಡುತ್ತಾರೆ ಎಂದಳು. ಈ ಗಾಳಿ ನಮ್ಮ ದೇಶದ ಮೇಲೆ ಬೀಸಬಾರದೇ ಎಂದು ಕೊಂಡೆ.

ನಮ್ಮದೇಶದಲ್ಲಿ ಡ್ರೈವರ್, ಟೈಲರ್, ಗಾರೆಕೆಲಸದವರು, ಮನೆ ಕೆಲಸದವರು, ಪ್ಲಂಬರ್ ಮುಂತಾದವರು ನಮ್ಮ ಕೃಪೆಯಲ್ಲಿರುವ ದೈನೇಸಿಗಳು. ಹೊಟ್ಟೆ ಪಾಡಿಗೆ ದುಡಿಯುವವರು. ಆರ್ಥಿಕವಾಗಿ ಅನುಕೂಲವಿಲ್ಲದವರು. ಅವರು ಕೇಳಿದಷ್ಟು ಹಣವನ್ನು ಚೌಕಾಸಿ ಮಾಡಿ ಜುಗ್ಗಾಡಿ ನಮ್ಮಿಂದಲೇ ಅವರ ಜೀವನ ಎನಿಸುವಂತೆ ಮಾಡಿ ಅವರ ಘನತೆ ಕುಗ್ಗಿಸಿಬಿಡುತ್ತೇವೆ. ಈಗೀಗ ಕೂಲಿಗಳು ಸ್ವಾಭಿಮಾನದಿಂದ ತಮ್ಮ ಹಕ್ಕುಗಳ ಬಗ್ಗೆ ಮಾತನಾಡಿದರೆ ಅದು ನಮಗೆ ಧಿಮಾಕಾಗಿ ಕಾಣಿಸುತ್ತದೆ.

ಗ್ರಾಮೀಣ ಕೃಷಿ ಪರಿಸರಗಳಲ್ಲಂತೂ ಇವರ ಬೇಡಿಕೆ ಹೆಚ್ಚಾಗಿರುವುದು ಇವರ ದುಬಾರಿ ಕೂಲಿಗಳು ಎಲ್ಲರಿಗೂ ಕಣ್ಣುರಿಯಾಗಿದೆ.

ಹೊಟ್ಟೆ ತುಂಬಿದವರು ಸಾಮಾನ್ಯವಾಗಿ ಕಳ್ಳತನಕ್ಕೆ ಇಳಿಯಲಾರರು. ದೊಡ್ಡ ಗುಡಾಣದ ಹೊಟ್ಟೆಯ ಕಳ್ಳರ ಬಗ್ಗೆ ನಾನು ಮಾತನಾಡುತ್ತಿಲ್ಲ. ಅವರ ಲಾಬಿಯೇ ಬೇರೆ. ಅದು ನನಗೆ ಗೊತ್ತಿಲ್ಲ. ಪಾಪದ ಕೂಲಿಯವರ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಕಡಿಮೆ ಕೂಲಿಗೂ ,ಮೈಗಳ್ಳತನಕ್ಕೂ, ದುಶ್ಚಟಗಳಿಗೂ ಹತಿರದ ಸಂಬಂಧವಿದೆ. ಸಂತೃಪ್ತ ಜೀವ ಮೈಗಳ್ಳನಾಗಲಾರದು. ಆದುದರಿಂದಲೇ ಅಮೇರಿಕಾದಲ್ಲಿ ಮೈಗಳ್ಳರು ಕಡಿಮೆ. ಇಲ್ಲಿ ಕಳ್ಳರಿಲ್ಲವೆಂದಲ್ಲ. ಕೆಲಸಗಳ್ಳರಿಲ್ಲ. ಏಕೆಂದರೆ ಅವರಿಗೆ ಘನತೆಯಿಂದ ಬದಕುವಷ್ಟು ಕೂಲಿ ಸಿಗುತ್ತದೆ. ಕೂಲಿಯ ಜೊತೆಗೆ ಹೊಂದಾಣಿಕೆ, ಚೌಕಾಸಿ ಇಲ್ಲ, ಕೊಟ್ಟ ಕೂಲಿಗೆ ವಂಚನೆಯೂ ಇಲ್ಲ. ನಮ್ಮಲ್ಲಾದರೆ ಕಾಸಿಗೆ ತಕ್ಕ ಕಜ್ಜಾಯ.

ಅಮೇರಿಕೆಯಲ್ಲಿ ಡ್ರೈವರ್ ಮತ್ತು ಮನೆಕೆಲಸದವರನ್ನು ಇಟ್ಟುಕೊಳ್ಳುವುದೆಂದರೆ ಅವರು ಆಗರ್ಭ ಶ್ರೀಮಂತರೇ ಆಗಿರಬೇಕು. ಸಾಮಾನ್ಯರಿಗೆ ಇದು ಕೈಗೆಟುಕದ ಸಂಗತಿ. ರಿಪೇರಿ ಕೆಲಸಗಳಂತೂ ದುಬಾರಿ ಆದುದರಿಂದಲೇ ರಿಪೇರಿ ಮಾಡಿಸುವ ಗೋಜಿಗೆ ಹೋಗದೇ ಸಾಮಾನುಗಳನ್ನು ಬಿಸಾಡುತ್ತಾರೆ. ನಮ್ಮಲ್ಲಿ ಮೊಬೈಲ್ ಗಳನ್ನು ಬಿಸಾಡುವುದೂ ಇಲ್ಲಿಂದಲೇ ಬಂದ ಚಾಳಿ. ಯಾಕೆಂದರೆ ಅದರ “ರಿಪೇರಿಗೆಂದು ಮಾಡುವ ವೆಚ್ಚದಲ್ಲಿ ಹೊಸ ಸೆಟ್ ಅನ್ನೇ ಕೊಳ್ಳಬಹುದು”ಎನ್ನುತ್ತಾನೆ ಮಗ.
ಹೀಗೆ ಬಳಸಿ ಬಿಸಾಡುವ ಸಂಸ್ಕೃತಿ ನಮಗೆ ಅಮೇರಿಕಾದವರಿಂದಲೇ ಬಂದಿರಬೇಕು. ಅವರು ಬಿಸಾಡುವುದರ ಹಿಂದೆ ದುಡಿಮೆಯ ಮಹತ್ವವಿದೆ. ಗೌರವವಿದೆ.

ಅಮೇರಿಕಾದವರಂತೆ ನಾವೂ ಬಳಸಿ ಬಿಸಾಡುವುದನ್ನೇನೋ ಕಲಿತಿದ್ದೇವೆ. ಆದರೆ ಅವರಂತೆ ಮನುಷ್ಯನ ದುಡಿಮೆಗೆ ಗೌರವ, ಕೌಶಲಕ್ಕೆ ಮಹತ್ವವನ್ನು ಕೊಟ್ಟಿಲ್ಲ. ಪೊಳ್ಳು ಸಾಮಾಜಿಕ ಘನತೆಗಳಲ್ಲಿ ನಾವು ಇನ್ನೂ ಬಡವರಾಗುತ್ತಿದ್ದೇವೆ.

ಪ್ಲಂಬರೋ ಗಾರೆಯವರೋ ವಿದ್ಯತ್‌ ರಿಪೇರಿಮಾಡುವವರೋ ಯಾರಾದರೂಮನೆಯೊಳಗೆ ಬಂದರೆ ನಮ್ಮ ಮೈಯೆಲ್ಲಾ ಕಣ್ಣು ಅವರ ಮೇಲೆ. ನಮ್ಮ ಭಂಡಾರವನ್ನೇನೋ ಸೂರೆಹೊಡೆಯಲು ಬಂದಿದ್ದಾರೆಂಬ ಭಾವನೆ. ಅವರು ಬರುವುದು ನಮ್ಮಕೆಲಸಕ್ಕೆ ಆದರೆ ಅವರಿಗೇನೋ ಉಪಕಾರ ಮಾಡಿದ ಭಾವನೆ ನಮಗೆ.

ಇಲ್ಲಿ ದುಡಿಮೆಗೆ ಮಹತ್ವ ಹೆಚ್ಚು ಆದುದರಿಂದಲೇ ಕೂಲಿಯೂ ಹೆಚ್ಚು. ನಮ್ಮಲ್ಲಿ ದುಡಿಮೆಯ ಘನತೆಯೂ ಇಲ್ಲ. ಕೂಲಿಯೂ ಕಡಿಮೆ. ನಮ್ಮನ್ನು ನಾವೇ ಕೆಳಮಟ್ಟಕ್ಕೆ ಇಳಿಸಿಕೊಂಡಿದ್ದೇವೆ. ನಮ್ಮಲ್ಲಿ ಹೀಗೆ ಕೂಲಿ ಕಡಿಮೆ ಇರುವುದರಿಂದಲೇ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಮಕ್ಕಳ ಮೇಲೆ ಸವಾರಿ ಮಾಡುತ್ತಿವೆ.
ಸಾಮಾಜಿಕ ಶ್ರೇಣೀಕರಣದಲ್ಲಿ ನರಳುತ್ತಿರುವ ಮಧ್ಯಮವರ್ಗದವರಿಗೆ ಆರ್ಥಿಕ ಬಡತನಕ್ಕಿಂತ ಭಾವದಾರಿದ್ರ್ಯವೇ ಹೆಚ್ಚು.

– ಗಿರಿಜಾ ಶಾಸ್ತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *