ಫ್ಲೇವಿಯಾ ಆಗ್ನೇಸ್: ನೊಂದವರ ಗೆಳತಿ – ಎನ್. ಗಾಯತ್ರಿ, ಎಚ್.ಜಿ. ಜಯಲಕ್ಷ್ಮಿ

ಮಹಿಳೆಯರ ಹಕ್ಕುಗಳಿಗಾಗಿ ಹೋರಾಟದಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಖ್ಯಾತ ವಕೀಲೆ ಫ್ಲೇವಿಯಾ ಆಗ್ನೇಸ್ ಮೂಲತಃ ಕರ್ನಾಟಕದವರು. ೧೯೪೭ರಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿಗೇ ಮದುವೆಯಾಗಿ ಸ್ವತಃ ಹದಿನಾಲ್ಕು ವರ್ಷಗಳ ಕಾಲ ಸತತ ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸಿ ಸಿಡಿದೆದ್ದು ಬಂದವರು. ಮುಂಬೈ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ನಂತರ ವಕೀಲೆಯಾಗಿ ವೃತ್ತಿ ಆರಂಭಿಸಿದವರು. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲಿನಿಂದ ಎಂಫಿಲ್ ಪದವಿ ಪದವಿ ಪಡೆದಿರುವ ಫ್ಲೇವಿಯಾ ಸ್ವಂತ ಸಾಮರ್ಥ್ಯ ಮತ್ತು ಪರಿಶ್ರಮದಿಂದ ಮೇಲೆ ಬಂದವರು. ಅವರು ತಮ್ಮ “ಮಜ್ಲಿಸ್” ಸಂಸ್ಥೆಯ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ಹಿಂದೂ ಮೂಲಭೂತವಾದ ಹಾಗೂ ಹಿಂದುತ್ವದ ಆಕ್ರಮಣಕಾರಿ ಚಟುವಟಿಕೆಗಳ ವಿರುದ್ಧವೂ ಹೋರಾಡುತ್ತಿದ್ದಾರೆ. ೨೦೦೨ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ಪರಿಣಾಮವಾಗಿ ಪರಿಹಾರ ಶಿಬಿರಗಳಲ್ಲಿದ್ದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಕಾನೂನು ಸಲಹೆ ಮತ್ತು ನೆರವು ನೀಡಿದ್ದರು. 

 

ಪ್ರಶ್ನೆ: ಕೌಟುಂಬಿಕ ಹಿಂಸೆಯಿಂದ ಹೊರಬರಲು ನಿಮ್ಮ ಬದುಕು ಮತ್ತು ಬರಹ ನಮಗೇನೋ ಸದಾ ಸ್ಫೂರ್ತಿದಾಯಕವಾಗಿದೆ. ಆದರೆ ನೀವು ನಡೆದುಬಂದ ದಾರಿಯ ಬಗ್ಗೆ ಹಿಂತಿರುಗಿ ನೋಡಿದಾಗ ನಿಮಗೇನನ್ನಿಸುತ್ತದೆ?

ಫ್ಲೇವಿಯಾ ಆಗ್ನೇಸ್: ಮನೆಯಿಂದ ಹೊರಗೆ ಬರೋದು ನನಗೆ ಎಷ್ಟೊಂದು ಕಷ್ಟ ಆಯ್ತಲ್ಲ ಅನಿಸುತ್ತೆ. ಈಗ ನನ್ನ ಹತ್ತಿರ ನೆರವಿಗಾಗಿ ಬರುವ ಹೆಂಗಸರನ್ನು ನೋಡಿದಾಗ ನನಗೆ ನನ್ನ ಹಿಂದಿನ ಜೀವನದ ನೆನಪೇ ಬರುತ್ತದೆ. ನಾನೂ ಸಹ ಇವರ ಹಾಗೆ ಇದ್ನಲ್ಲಾ ಅಂತ. ಇಪ್ಪತ್ತು, ಮೂವತ್ತು, ನಲವತ್ತು ವರ್ಷ ವಯಸ್ಸಿನ ಹಲವಾರು ಹೆಂಗಸರು ಕೌಟುಂಬಿಕ ದೌರ್ಜನ್ಯಗಳನ್ನು ವರ್ಷಗಟ್ಟಲೆ ಅನುಭವಿಸಿ ದಿಕ್ಕು ತೋಚದೆ ನನ್ನ ಬಳಿ ಬರುತ್ತಾರೆ. ಮಕ್ಕಳಿದ್ದಾರೆ ಏನು ಮಾಡುವುದು ಅಂತ ಸಂಕಟ ಪಡ್ತಾರೆ. ದೈಹಿಕವಾಗಿಯೂ ಮಾನಸಿಕವಾಗಿಯೂ ನೊಂದು-ನೊಂದು ಕುಗ್ಗಿ ಹೋಗಿರುತ್ತಾರೆ. ಮಾನಸಿಕ ಸ್ತಿಮಿತವನ್ನು ಕಳೆದುಕೊಳ್ಳುವ ಅಂಚಿಗೆ ಬಂದು ತಲುಪಿರುತ್ತಾರೆ. ನಾನು ಹೊರಗೆ ಬರದೆ ಇದ್ದಿದ್ದರೆ ನಾನು ಸಹ ಹಾಗೆ ಆಗ್ತಿದ್ದೆನಲ್ಲ ಅನ್ನಿಸುತ್ತೆ. ನಾನು ಮಹಿಳಾ ಸಂಘಟನೆಗಳ ಜೊತೆ ಸೇರಿಕೊಂಡಿದ್ದರಿಂದ ಹೊರಗೆ ಬಂದೆ.

ಪ್ರಶ್ನೆ: ನಿಮ್ಮ ಜೀವನದ ಅನುಭವವೇ ಅನೇಕ ಕಾರ್ಯಕ್ರಮಗಳಿಗೆ ಅಡಿಪಾಯ ಆಯಿತಲ್ಲವೇ?

ಫ್ಲೇ: ನಾನು ನನ್ನ ಜೀವನದ ಅನುಭವದಿಂದ ಎಷ್ಟೊಂದು  ಪಾಠಗಳನ್ನು ಕಲಿತಿದ್ದೇನೆ. ಕಾನೂನು ವ್ಯವಸ್ಥೆ ಹೇಗಿದೆ ಎಂತೆಲ್ಲಾ- ಈಗ ನಮ್ಮ ಸಂಘಟನೆ-‘ಮಜ್ಲಿಸ್’ ಇದೆಯಲ್ಲಾ, ಅದರಿಂದ ನಾವು ಬಹಳಷ್ಟು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಅದನ್ನು ಕಷ್ಟದಲ್ಲಿರುವ ಹೆಣ್ಣು ಮಕ್ಕಳ ಜೊತೆ ಹಂಚಿಕೊಳ್ಳುತ್ತೇವೆ. ನಾನು ಎಷ್ಟೊಂದು ದುರ್ಬಲಳಾಗಿದ್ದೆ. ಹಾಗಿರುವುದರ ಬದಲು ಇತರರು ಈಗ ಸ್ವಲ್ಪ ಬಲ ಪಡೆದುಕೊಳ್ಳಬಹುದು. ಅವರ ಪ್ರಕರಣಗಳಲ್ಲಿ ಹೇಗೆ ಕಾರ್ಯತಂತ್ರ ರೂಪಿಸಬೇಕು, ಕಾನೂನು, ಕಾಯ್ದೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಯೋಚಿಸಿದಾಗ, ನಮ್ಮ ಅನುಭವಗಳಿಂದಲೂ ಇತರರಿಗೆ ತುಂಬಾ ಧೈರ್ಯ ಬರುತ್ತದೆ.

ಅತ್ಯಾಚಾರ ಸಂತ್ರಸ್ತೆಯರು ಧೈರ್ಯವಾಗಿ ಹೋರಾಡಲು, ನಾವು ಅವರಜೊತೆ ನಿಲ್ಲುತ್ತಿದ್ದೇವೆ. ೨೦೧೧ರಲ್ಲಿ ನಾವು “ಅತ್ಯಾಚಾರ ಸಂತ್ರಸ್ತೆಯರಿಗೆ ಬೆಂಬಲ ಕಾರ್ಯಕ್ರಮ” ಎಂಬ ಒಂದು ಕಾರ್ಯಕ್ರಮ ಪ್ರಾರಂಭ ಮಾಡಿದ್ವಿ. ಈಗ ಅದು ಒಂದು ಸಾವಿರ ಪ್ರಕರಣಗಳ ಗಡಿದಾಟಿದೆ. ಚಿಕ್ಕಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತವೆ. ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತವೆ. ಅವರಿಗೆ ನ್ಯಾಯ ಸಿಗುತ್ತಾ? ಸಾಮಾನ್ಯವಾಗಿ ಅಂತಹ ಸಂತ್ರಸ್ತೆಯರು ಕೆಳವರ್ಗಕ್ಕೆ ಸೇರಿದವರಾಗುತ್ತಾರೆ.ಅವರ ಜೊತೆಗೆ ಯಾರೂ ನಿಲ್ಲುವುದಿಲ್ಲ. ಕೆಲವರು ಎಫ್ಐಆರ್(ಪ್ರಥಮ ಮಾಹಿತಿ ವರದಿ) ಮಾಡಿಸಿ ಬಿಡಿ- ಅಂತ ಹೇಳ್ತಾರೆ. ಆದರೆ ಅಷ್ಟಾದರೆ ಸಾಕಾ? ವೈದ್ಯಕೀಯ ಪರೀಕ್ಷೆ ಆಗ್ಬೇಕಾಗತ್ತೆ, ಆರೋಪಿಗಳ ಗುರುತನ್ನು ಪತ್ತೆ ಹಚ್ಚುವ ಪರೀಕ್ಷೆ ಆಗಬೇಕಾಗುತ್ತೆ, ಇವರ ಹೇಳಿಕೆಯನ್ನು ದಾಖಲು ಮಾಡ್ಬೇಕಾಗತ್ತೆ. ಎಷ್ಟೊಂದು ಸಂದರ್ಭಗಳಲ್ಲಿ ಅವರು ೧೦-೧೨ ವರ್ಷದ ಹುಡುಗಿಯರಾಗಿರುತ್ತಾರೆ, ಶಾಲೆಗಳನ್ನು ಅರ್ಧಕ್ಕೆ ಬಿಟ್ಟ ಮಕ್ಕಳಾಗಿರುತ್ತಾರೆ. ಕೆಲವು ಸಲ ಅವರು ಕಿವುಡು-ಮೂಕ ಮಕ್ಕಳಾಗಿರುತ್ತಾರೆ.ಅವರಿಗೆ ಏನೂ ತಿಳಿದಿರುವುದಿಲ್ಲ. ಒಂದು ವರ್ಷ ಆದ ಮೇಲೆ ಆರೋಪ ಪಟ್ಟಿ ತಯಾರಾಗತ್ತೆ, ಜಾಮೀನಿಗೆಅರ್ಜಿ ಹಾಕಲಾಗುತ್ತೆ, ಒಟ್ಟಿನಲ್ಲಿ ಇದೊಂದು ಸುದೀರ್ಘವಾದ ಪ್ರಕ್ರಿಯೆ.ಈ ಇಡೀ ಪ್ರಕ್ರಿಯೆಯುದ್ದಕ್ಕೂ ಅವರ ಜೊತೆ ಯಾರೂ ಇರೋಲ್ಲ ಎನ್ನುವ ಅಂಶವನ್ನು ಗಮನಿಸಿ. ಮುಂದೆ ಆ ಹುಡುಗಿ ಕೋರ್ಟಿಗೆ ಬರಬೇಕು. ಅಲ್ಲಿ ಅವಳು ಎಫ್ಐಆರ್ನಲ್ಲಿ ಏನಿದೆ. ಹೇಳಿಕೆಯಲ್ಲಿ ಏನಿದೆಅಂತ ತಿಳಿದುಕೊಂಡು ತನ್ನ ಪ್ರತಿಕ್ರಿಯೆ ನೀಡಬೇಕು. ಅವಳು ಎದುರಿಸಬೇಕಾಗಿರೋದು ಪಳಗಿರುವ ಕ್ರಿಮಿನಲ್ ಲಾಯರ್ರನ್ನು. ಅವಳು ಹೇಗೆ ಉತ್ತರಕೊಡಬಹುದು ಯೋಚಿಸಿ. ಅವಳು ಸರ್ಕಾರಿ ವಕೀಲರನ್ನು ಯಾವತ್ತೂ ನೋಡಿಯೇ ಇರುವುದಿಲ್ಲ. ಅವಳಿಗೆ ತನ್ನ ಪರವಾಗಿ ವಾದಮಾಡುವವರು ಯಾರು, ತನ್ನ ವಿರುದ್ಧ ವಾದ ಮಾಡುವವರು ಯಾರು ಒಂದೂ ತಿಳಿದಿರುವುದಿಲ್ಲ. ಜೊತೆಗೆ ಆರೋಪಿಗಳು ದೋಷಮುಕ್ತರಾಗುವ ಸಂಖ್ಯೆ ತುಂಬಾ ಜಾಸ್ತಿ. ನಾನು ಇವುಗಳ ಬಗ್ಗೆ ಸಾಕಷ್ಟು ಲೇಖನಗಳನ್ನು ಪತ್ರಿಕೆಗಳಿಗೆ ಬರೆದಿದ್ದೇನೆ. ಕೋರ್ಟಿನ ಒಳಗೆ ಏನಾಗುತ್ತದೆ, ಹೊರಗೆಏನಾಗುತ್ತದೆ ಇದೆಲ್ಲದರ ಬಗ್ಗೆ ವಿವರವಾಗಿ ಬರೆದಿದ್ದೇನೆ. ಮಕ್ಕಳು, ಮಹಿಳೆಯರ ಮೇಲಿನ ಅತ್ಯಾಚಾರಗಳಿಗೆ ಸಂಬಂಧಿಸಿದಂತೆ ಕಾನೂನುಗಳು ಇವೆ. ಕೇವಲ ಕಾನೂನುಗಳಿದ್ದರೆ ಸಾಕೇ? ನ್ಯಾಯದಾನ ಪ್ರಕ್ರಿಯೆ ಇಷ್ಟೊಂದು ತೊಡಕಿನದಾಗಿರುವಾಗ, ಕೇವಲ ಕಾನೂನು ಇದ್ದ ಮಾತ್ರಕ್ಕೆ ನ್ಯಾಯ ಸಿಗುತ್ತದೆಯೇ?

ಪ್ರಶ್ನೆ: ನಿಮ್ಮ ಸಂಘಟನೆಗೆ  ‘ಮಜ್ಲಿಸ್’ ಎಂದು ಹೆಸರಿಟ್ಟ ಉದ್ದೇಶ ಏನು?

ಫ್ಲೇ: ‘ಮಜ್ಲಿಸ್’ ಎಂದರೆ ‘ಸಭೆ’, ‘ಕೂಟ’ ಎಂದು ಅರ್ಥ. ಮಧ್ಯ ಪ್ರಾಚ್ಯದಲ್ಲಿ ಸಭೆಗೆ ‘ಮಜ್ಲಿಸ್’ ಎಂತಲೇ ಹೇಳುವುದು. ಬಾಬ್ರಿ ಮಸೀದಿಯನ್ನು ಉರುಳಿಸಿದ ಮುಂಚಿನ ಕಾಲ ಅದು. ನನಗೆ ವೈವಿಧ್ಯತೆಯನ್ನು ಎತ್ತಿಹಿಡಿಯುವ ಒಂದು ಮಹಿಳಾ ಸಂಘಟನೆಯನ್ನು ಕಟ್ಟುವ ಉದ್ದೇಶವಿತ್ತು. ಬಹುತೇಕ ಸಂಘಟನೆಗಳು ಅವು ದಲಿತರದಿರಲಿ, ಕ್ರಿಶ್ಚಿಯನ್ನರದಿರಲಿ, ಸಂಸ್ಕೃತಮಯವಾದ ಹೆಸರುಗಳನ್ನು ಇಡುತ್ತಾರೆ. ಉದಾ: ನಿರ್ಮಲ್ ನಿಕೇತನ್, ಋಷಿ ನಿಲಯ್ ಎಂತೆಲ್ಲಾ. ನಮಗೆ ಬೇರೆಯದೇ ಆದ ಹೆಸರು ಬೇಕಿತ್ತು. ಹಾಗಾಗಿ ಈ ಹೆಸರನ್ನು ಆರಿಸಿಕೊಂಡೆವು.

ಪ್ರಶ್ನೆ: ನಿಮ್ಮ ಸಂಘಟನೆಯ ಮುಖ್ಯ ಚಟುವಟಿಕೆಗಳೇನು?

ಫ್ಲೇ: ಕಾನೂನಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವುದು, ನೆರವು ಕೊಡುವುದು ಒಂದು ಮುಖ್ಯ ಕೆಲಸವಾದರೆ, ಇನ್ನೊಂದು ಸಾಂಸ್ಕೃತಿಕ ಚಟುವಟಿಕೆಗಳು. ನಾವು ಅಕ್ಕಮಹಾದೇವಿಯ ಬಗ್ಗೆ ಒಂದು ಫಿಲ್ಮ್ ಮಾಡಿದ್ದೇವೆ. “ಸ್ಕ್ರಿಬಲ್ಸ್ ಆನ್ ಅಕ್ಕ” ಅಂತ. ಇದಕ್ಕೆ ಸಂಬಂಧಪಟ್ಟ ಸಂಶೋಧನೆಗಳನ್ನೆಲ್ಲಾ ನಾನೇ ಮಾಡಿದ್ದು. ಹುಬ್ಬಳ್ಳಿ, ಧಾರವಾಡ, ಗದಗದಲ್ಲೆಲ್ಲಾ ಓಡಾಡಿ, ಅನೇಕರನ್ನು ಭೇಟಿಯಾಗಿದ್ದೆ. ಅಕ್ಕನ ಜನ್ಮದಿನದ ಸಂದರ್ಭದಲ್ಲಿ ಉಡುತಡಿಗೆ ಹೋಗಿ, ಅಲ್ಲಿ ಬರುವ ಜನಗಳನ್ನೆಲ್ಲಾ ಭೇಟಿ ಮಾಡಿ ಮಾತನಾಡಿದ್ದೇನೆ.

ಪ್ರಶ್ನೆ: ಮಹಿಳಾ ಹೋರಾಟಗಳಿಂದಾಗಿ ಹೊಸ ಹೊಸ ಕಾನೂನುಗಳು ಬರುತ್ತಿವೆ. ಆದರೆ ಅವುಗಳ ಫಲ ಮಹಿಳೆಯರನ್ನು ತಲುಪÅವುದೇ?

ಫ್ಲೇ: ಮಹಿಳೆಯರಿಗೆ ಎಷ್ಟೊಂದು ಸಮಸ್ಯೆಗಳಿವೆ, ಕೌಟುಂಬಿಕ ದೌರ್ಜನ್ಯವಂತೂ ತುಂಬಾ ಸಾಮಾನ್ಯವಾದದ್ದು. ಆದರೆ ಅವರು ಕೋರ್ಟಿಗೆ ಹೋಗುವುದಿಲ್ಲ. ಹಾಗೇ ಹೊಂದಿಕೊಂಡು ಬದುಕುತ್ತಾರೆಯೇ ಹೊರತು ಪೊಲೀಸ್ ಸ್ಟೇಷನ್, ಕೋರ್ಟ್ಗಳಿಗೆ ಹೋಗುವುದಿಲ್ಲ. ಅವರೊಳಗೆ ಅಪರಾಧಿ ಭಾವ ಕಾಡುತ್ತಿರುತ್ತದೆ. ಕೋರ್ಟ್, ಕಛೇರಿ ವ್ಯವಸ್ಥೆ ಸರಿ ಇಲ್ಲ, ಲಾಯರ್ ವ್ಯವಸ್ಥೆ ಸರಿ ಇಲ್ಲ, ಕಾನೂನು ನೆರವು ವ್ಯವಸ್ಥೆ ಸರಿ ಇಲ್ಲ, ಹಾಗಿದ್ದ ಮೇಲೆ ಸಮಾನಕಾಯ್ದೆ ತಂದು ಮಹಿಳೆಯರಿಗೆ ನ್ಯಾಯ ಹೇಗೆ ಕೊಡುತ್ತಾರೆ? ಈಗ ಫೋಕ್ಸೋ ಕಾಯ್ದೆ ಬಂತು, ನಿರ್ಭಯಾ ಕಾಯ್ದೆ ಬಂತು, ಆದರೆ ಪ್ರತಿ ವರ್ಷ ಅತ್ಯಾಚಾರ ಪ್ರಕರಣಗಳು ಜಾಸ್ತಿ ಆಗ್ತಾ ಇದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಮಹಿಳಾ ಸಂಘಟನೆಗಳೂ ಒಟ್ಟ್ಟಿಗೆ ಸೇರಿ ನ್ಯಾಯದಾನ ವ್ಯವಸ್ಥೆ ಸರಿಯಾಗಿ ಕೆಲಸಮಾಡುವಂತೆ, ಮಹಿಳಾ ಸ್ನೇಹಿಯಾಗುವಂತೆ ಮಾಡಬೇಕು.

ಪ್ರಶ್ನೆ: ಟ್ರಿಪಲ್ ತಲಾಕ್ ಬಗ್ಗೆ ತರುತ್ತಿರುವ ಕಾನೂನಿನ ಬಗ್ಗೆ ಏನು ಹೇಳುತ್ತೀರಿ?

ಫ್ಲೇ: ಕಾನೂನು ಇದ್ದ ಮಾತ್ರಕ್ಕೆ ಟ್ರಿಪಲ್ ತಲಾಕ್ ನಿಲ್ಲುತ್ತಾ, ಇಲ್ಲವಲ್ಲ.

ಪ್ರಶ್ನೆ: ಪರಿಸ್ಥಿತಿ ಇನ್ನೂ ಕೆಡಬಹುದು ಅನ್ನುವ ಅನುಮಾನವೇ?

ಫ್ಲೇ: ಜನ ಅಂದುಕೊಳ್ಳೋದು ಹಾಗೆ. ಟ್ರಿಪಲ್ ತಲಾಕ್ ವಿಷಯದಲ್ಲಿ ಮುಸ್ಲಿಂ ಗಂಡಸರನ್ನು ಅಪರಾಧಿಗಳನ್ನಾಗಿ ಮಾಡಿ, ಅವರಿಗೆ ಶಿಕ್ಷೆ ಆಗಿ, ಅವರು ಮೂರು ವರ್ಷಗಳು ಜೈಲಿನಲ್ಲಿ ಕೂತರೆ, ಮುಸ್ಲಿಂ ಮಹಿಳೆಯರಿಗೆ ಏನು ಒಳ್ಳೆಯದಾಗುತ್ತದೆ? ಅವರಿಗೆ ತಿನ್ನುವುದಕ್ಕೆ ಅನ್ನ ಇಲ್ಲ. ಅವರ ಗಂಡಂದಿರೂ ಕೂಡ ಸಣ್ಣ ಅಂಗಡಿಗಳಲ್ಲಿ ಕೆಲಸಮಾಡುವುದು, ರಿಕ್ಷಾ ಓಡಿಸುವುದು, ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವುದು. ಸಂಘಟಿತ ಕ್ಷೇತ್ರದಲ್ಲಿ ಅವರಿಗೆ ಕೆಲಸ ಸಿಗುವುದಿಲ್ಲ. ದಿನಕ್ಕೆ ಹತ್ತಿಪ್ಪತ್ತು ರೂಪಾಯಿಗಳಿಂದ ನೂರರವರೆಗೆ ಸಂಪಾದನೆಮಾಡುತ್ತಾರೆ. ಆ ಸಂಪಾದನೆಯಿಂದಲೇ ಹೆಂಡತಿಗೆ ಜೀವನಾಂಶ ಬರಬೇಕು. ಅವರನ್ನು ಜೈಲಿಗೆ ಹಾಕಿದರೆ ಏನು ಸಿಗುತ್ತದೆ?

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *