ಪ್ರೀತಿಸುತ್ತೇನೆ ಮಾತ್ರ – ಭುವನೇಶ್ವರಿ ಹಿರೇಮಠ

ಗಾಳಿಯ ತುಂಡುಮಾಡುವ
ಮೌನವೊಂದು
ಎಡೆಬಿಡದ ಮಾತಿನ ಮಧ್ಯೆ
ನನ್ನ ಅರಿವಿಗೆ ಮಾತ್ರ,
ಒಂದು ನಕ್ಷತ್ರದ ಹೊಳಪ ಕಂಡ
ಮತ್ತೊಂದು ನಕ್ಷತ್ರವೆಂದೂ
ನಕ್ಕಂತಿಲ್ಲ,
ಅದಕ್ಕೇ ರಾತ್ರಿಗಳಾಗುತ್ತವೆ
ಅವರವರ ಲೋಕಗಳು
ಮಲಗಲೆಂದೇ
ಜೋಗುಳ ಹಾಡುತ್ತದೆ
ಇಡೀ ಆಗಸ
ಗಡಿರೇಖೆಗಳಿಲ್ಲದ ಅಂಗಳ,

ನಿನ್ನ ಪೂರ್ವಜನ್ಮದ ಪ್ರೇಮವ
ಸ್ಪರ್ಶಿಸಲಾಗದೆ
ಒದ್ದಾಡುತ್ತಿರುವ ಚಂದಿರರು,

ನೆರಳ ಪರದೆಯ ಮೇಲೆ
ನೆರಳ ಮೂಡಿಸುವ ಬೆಳಕು
ಗಹಗಹಿಸಿ ನಕ್ಕಾಗಲೆ
ಸತ್ಯಾನಾಶವಾಗುವ ಕತ್ತಲೆಯ
ಅಸ್ತಿತ್ವ,
“ನಾನು ಪ್ರೀತಿಸುತ್ತೇನೆ,
ಪ್ರೀತಿಸುತ್ತೇನೆ ಮಾತ್ರ”

ನೆರಳಿಗೋ
ಬೆಳಕಿಗೋ
ಇರುಳಿಗೋ
ನಕ್ಷತ್ರ, ಗ್ರಹ, ಚಂದ್ರ
ಎಲ್ಲರೂ ಅಂಗಳದ ಹಂಗಿನಲ್ಲೇ,
ಪ್ರೀತಿಯೊಂದೇ
ಜನ್ಮಜನ್ಮಾಂತರಗಳಿಗೂ
ಯಾರ ಸಾಲ?
ನಾನು ನೀನು
ಭೂಮಿಯ ಪಾಲು

ಭುವನೇಶ್ವರಿ ಹಿರೇಮಠ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *