ಪ್ರೀತಿಗಿರಲಿ ರೀತಿ ನೀತಿ – ಗೌರಿ ಚಂದ್ರಕೇಸರಿ   

ಏಕಮುಖ ಪ್ರೀತಿ, ದೈಹಿಕ ಆಕರ್ಷಣೆಯಿಂದಾಗಿ ಯುವಕರು ಯುವತಿಯರ ಹಿಂದೆ ಬೀಳುವುದು (stalking) ಹೊಸದೇನಲ್ಲ. ಪುರಾಣ, ಇತಿಹಾಸಗಳಲ್ಲೂ ಇದಕ್ಕೆ ಉದಾಹರಣೆಗಳು ದೊರೆಯುತ್ತವೆ. ವೃಂದಾ (ತುಳಸಿ) ಳನ್ನು ತನ್ನವಳಾಗಿಸಿಕೊಳ್ಳಲು ಬೆನ್ನು ಬಿದ್ದಿದ್ದ ಮಹಾವಿಷ್ಣು, ಅಹಲ್ಯೆಯ ಕಾಡಿಸಿದ್ದ ಇಂದ್ರರು ಸಹ ಪ್ರೀತಿಪೀಡಕರೇ. ಸ್ಟಾಕಿಂಗ್‌ಗೆ ಬಲಿಯಾದ ಹೆಣ್ಣು ಮಕ್ಕಳಿಗೆ ಅದೊಂದು ನರಕ. ಆದರೆ, ಪುರುಷ ಸಮಾಜ ಅದನ್ನೊಂದು ಹೆಮ್ಮೆ ಎನ್ನುವಂತೆ ಬಿಂಬಿಸಿಕೊಳ್ಳುತ್ತದೆ.  ಈ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ

ಪ್ರೀತಿಸಲು ನಿರಾಕರಿಸಿದಳೆಂಬ ಕಾರಣಕ್ಕೆ ಹತಾಶರಾಗಿ ಅಮಾಯಕ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗುವ ಕೃತ್ಯಗಳು ವರದಿಯಾಗುತ್ತಲೇ ಇರುತ್ತವೆ. ಆಸಿಡ್ ಎರಚುವುದು, ಚೂರಿಯಿಂದ ಇರಿಯುವುದು, ಬಲವಂತದಿಂದ ವಿಷ ಕುಡಿಸುವುದು, ಜೀವಂತ ದಹಿಸುವುದು, ಶೀಲಹರಣ ಮಾಡುವುದು ಇವು ಪ್ರೀತಿಯ ನಿರಾಕರಣೆಗೆ ಪ್ರತಿಫಲವಾಗಿ ಹೆಣ್ಣುಮಕ್ಕಳಿಗೆ ಸಿಗುತ್ತಿರುವ ಬಳುವಳಿ. ಇಂತಹ ಹೀನ ಕೃತ್ಯಗಳಿಗೆ ಬಲಿಪಶು ಆಗುತ್ತಿರುವ ಹೆಣ್ಣು ಮಕ್ಕಳು ದೈಹಿಕ, ಮಾನಸಿಕ ಆಘಾತದ ಜೊತೆಗೆ ಶಿಕ್ಷಣ, ಸ್ವಾವಲಂಬಿ ಜೀವನದಿಂದ ವಂಚಿತರಾಗುತ್ತಾರೆ. ಇಂಥವರ ಭವಿಷ್ಯ ಅಂಧಕಾರದಲ್ಲಿ ಮುಳುಗುತ್ತದೆ. ಸಮಾಜ ಇವರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ.

     ಪ್ರೀತಿ ಎಂಬುದು ಹೃದಯದಲ್ಲಿ ಅರಳಿ ಹೊರಸೂಸುವಂತದ್ದು. ಬಲವಂತವಾಗಿಯಾಗಲಿ, ಅಧಿಕಾರಯುತವಾಗಿಯಾಗಲಿ ಪಡೆಯುವಂತದ್ದಲ್ಲ. ಮನಸು ಮನಸುಗಳು ಸೇರಿದಾಗ ಪ್ರೇಮ ಅಂಕುರಿಸುತ್ತದೆ. ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ಹಿಂದೆ ಬೀಳುವ ಪ್ರೀತಿ ಪೀಡಕರು ಹೆಣ್ಣು ಮಕ್ಕಳಿಗೆ ದುಃಸ್ವಪ್ನವಾಗಿ ಕಾಡುತ್ತಾರೆ. ಹಲವಾರು ಹದಿ ಹರೆಯದ ಹೆಣ್ಣು ಮಕ್ಕಳು ಇಂತಹ ಪ್ರೀತಿಪೀಡಕರಿಂದ ನಿತ್ಯ ಹಿಂಸೆಯನ್ನು ಅನುಭವಿಸುತ್ತಿದ್ದಾರೆ.

ಇಂದಿನ ಯುವಕರನ್ನು ಬಹುವಾಗಿ ಪ್ರಭಾವಿಸುವ  ಮನರಂಜನಾ ಮಾಧ್ಯಮಗಳಾದ ಸಿನಿಮಾ, ಕಿರುತೆರೆಗಳಲ್ಲೂ ಸ್ಟಾಕಿಂಗ್ ನ್ನು ಅಪರಾಧವಾಗಿ ಬಿಂಬಿಸುವುದಿಲ್ಲ. ನಾಯಕ ಪ್ರೀತಿಗಾಗಿ ನಾಯಕಿಯನ್ನು ಹಿಂಬಾಲಿಸುವುದು, ಬ್ಲ್ಯಾಕ್ ಮಾಡುವುದು ಮಾಡಿದಲ್ಲಿ ಅದನ್ನು ಎಲ್ಲರೂ ಆನಂದಿಸುತ್ತಾರೆ. ಚಿತ್ರಕಥೆ ಬರೆಯುವ ಹಂತದಲ್ಲೇ ಇವೆಲ್ಲ ಬದಲಾಗಬೇಕು. ಆದರೆ, ಅಂತಹ ಸೂಕ್ಷ್ಮ ಸಂವೇದನೆ ಇರುವ ನಿರ್ದೇಶಕರು ಸದ್ಯಕ್ಕಂತೂ ಕಾಣುತ್ತಿಲ್ಲ.

ಟ್ಯೂಷನ್, ಶಾಲೆ-ಕಾಲೇಜುಗಳಿಗೆ ಹೋಗಿ ಬರುವ ಹಾದಿಯಲ್ಲಿ ಹೆಣ್ಣು ಮಕ್ಕಳು ಇಂತಹ ಹಿಂಸೆಗೆ ಒಳಗಾಗುವುದು ಜಾಸ್ತಿ. ಈ ವಿಷಯಗಳನ್ನು ಮನೆಯಲ್ಲಿ, ಪಾಲಕರ ಹತ್ತಿರ ಹೇಳಿಕೊಳ್ಳಲು ಮುಜುಗರಪಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಭಯದಿಂದಲೋ, ಜಿಗುಪ್ಸೆಯಿಂದಲೋ ಆತ್ಮಹತ್ಯೆಗೆ ಶರಣಾಗುತ್ತಾರೆ. ಎಷ್ಟೋ ಅಮಾಯಕ ಹೆಣ್ಣು ಮಕ್ಕಳು ಯಾರೋ ಮಾಡಿದ ತಪ್ಪಿಗೆ ವ್ಯರ್ಥವಾಗಿ ಜೀವನ ಕಳೆದುಕೊಳ್ಳುತ್ತಾರೆ. ಆಗ ಹೊತ್ತು, ಹೆತ್ತು, ಸಾಕಿ ಸಲುಹಿದ ಹೆತ್ತವರ ವೇದನೆ ಅರಣ್ಯ ರೋದನವಾಗುತ್ತದೆ.

ಇಷ್ಟವಿಲ್ಲದ, ಬಲವಂತದ ಪ್ರೀತಿಯನ್ನು ಪೀಡಿಸಿ ಪಡೆಯುವುದರಲ್ಲಿ ಅರ್ಥವೇನಿದೆ? ನಮ್ಮನ್ನು ಪ್ರೀತಿಸುವವರನ್ನು ಪ್ರೀತಿಸಬೇಕೇ ಹೊರತು ನಮ್ಮನ್ನು ದ್ವೇಷಿಸುವ, ತಿರಸ್ಕರಿಸುವ ವ್ಯಕ್ತಿಯಿಂದ ಪ್ರೀತಿಯನ್ನು ಅಪೇಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ?

ಪ್ರೀತಿ ಕುರುಡು ನಿಜ. ಆದರೆ ಅದನ್ನು ಇನ್ನೊಬ್ಬರಲ್ಲಿ ಬಲವಂತವಾಗಿ ಹೊಮ್ಮಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸಂಗಾತಿಯ ಬಗೆಗೆ ತನ್ನದೇ ಆದ ಕಲ್ಪನೆಗಳಿರುತ್ತವೆ. ತನ್ನ ಕಲ್ಪನೆಯ ಸಂಗಾತಿಯ ಆಯ್ಕೆ ಅವರ ಹಕ್ಕಾಗಿರುತ್ತದೆ. ಇನ್ನೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಪ್ರತಿಷ್ಠಾಪಿತವಾದ ಕಲ್ಪನೆಯನ್ನು ಕಿತ್ತೆಸೆದು ಬಲವಂತದಿಂದ ತಮ್ಮನ್ನು ಪ್ರತಿಷ್ಠಾಪಿಸಲು ಹೋದರೆ ಪ್ರೀತಿಗೆ ಪ್ರತಿಯಾಗಿ ದ್ವೇಷ, ತಿರಸ್ಕಾರಗಳು ಮೊಳೆಯುತ್ತವೆ. ಪ್ರೀತಿಯ ಉತ್ತುಂಗ ಸ್ಥಿತಿ ದ್ವೇಷ, ಸೇಡುಗಳಾಗದೇ ತ್ಯಾಗವಾಗಬೇಕು. ಹೃದಯ ಹೃದಯಗಳ ವಿಷಯವಾದ ಪ್ರೀತಿಯನ್ನು ವ್ಯಕ್ತಪಡಿಸಲು, ಪಡೆಯಲು ಕೆಲ ರೀತಿನೀತಿಗಳು ಮುಖ್ಯವಾಗುತ್ತವೆ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *