ಪ್ರಾಚೀನ ಸಮಯಾಚಾರಿಯರು – ಡಾ. ಶಿವಗಂಗಾ ರುಮ್ಮಾ
ಬ್ರಹ್ಮಶಿವನ ಸಮಯ ಪರೀಕ್ಷೆಯು ಸ್ಥಾಪಿತ ಧರ್ಮಗಳ ಕುರಿತು ಮಾತನಾಡುತ್ತದೆ. ಆದರೆ ಪ್ರಾಚೀನ ಭಾರತ, ಅದರಲ್ಲೂ ದಕ್ಷಿಣ ಭಾರತದಲ್ಲಿ ಮಹಿಳೆಯರೆ ಜನರ ತಾತ್ವಿಕತೆಯನ್ನು ನಿರ್ಧರಿಸುವ ಜ್ಞಾನಿಗಳಾಗಿದ್ದರು ಎನ್ನುವುದನ್ನು ಇತಿಹಾಸ ನಮಗೆ ಹೇಳುತ್ತದೆ. ಪುರುಷರು ಸ್ಥಾಪಿಸಿದ ಧರ್ಮಗಳಿಗಿಂತ ಪೂರ್ವದಲ್ಲಿ ಮಹಿಳೆಯರು ಎಲ್ಲ ಸಂಪತ್ತಿನ ಉತ್ಪಾದನೆಯ ಕೇಂದ್ರವಾಗಿದ್ದರು. ಹಾಗಾಗಿಯೇ ಹಣೆಬರಹವನ್ನು ಬರೆಯುವ, ಶಕ್ತಿಯನ್ನು ತುಂಬುವ, ದಾರಿಯನ್ನು ತೋರುವ, ಜ್ಞಾನವನ್ನು ಕೊಡುವ, ಅನ್ನವನ್ನು ನೀಡುವ, ತೇಜಸ್ಸನ್ನು ಕರುಣಿಸುವ ಶಕ್ತಿಯಾಗಿದ್ದರು.ಅದ್ದರಿಂದಲೆ ಅವರೇ ನಿಜವಾದ ಸಮಯಾಚಾರಿಯರಾಗಿದ್ದಾರೆ.
ಪುರುಷರ ಧರ್ಮಗಳಲ್ಲಿ ಪುರುಷರು ಬೇಡವೆಂದಾಗಲೂ ಈ ಮಹಿಳೆಯರು ಪೂಜಿತಗೊಂಡರಲ್ಲ! ಬೈಯುತ್ತಲೂ ಇವರನ್ನು ಪೂಜಿಸಿದರಲ್ಲ! ಸಾಯಿಸುತ್ತಲೂ ಪೂಜಿಸಿದರಲ್ಲ! ಇಂತಹ ವಿಪರ್ಯಾಸಗಳು ಚರಿತ್ರೆಯ ಒಡಲಲ್ಲಿ ತುಂಬಿ ತುಳುಕುತ್ತಿವೆ. ಅಂತಹ ಕೆಲವು ದುರ್ಬಲ ಎಳೆಗಳನ್ನು ಇಲ್ಲಿ ತರುವುದರ ಮುಖಾಂತರ ಜಾಳುಜಾಳಾದ ಪ್ರಾಚೀನ ಮಹಿಳಾ ಚರಿತ್ರೆಯ ತಾತ್ವಿಕತೆಗಳನ್ನು ಇಲ್ಲಿ ಗುರುತಿಸಲು ಪ್ರಯತ್ನಿಸಿದ್ದೇನೆ.
ತಾತ್ವಿಕತೆಯೆಂದರೆ ಕಣ್ಣಿಂದ ನೋಡದ, ಅನುಭವವಿಲ್ಲದೆ ಈ ಜಗತ್ತು, ಜೀವ, ದೇವರು ಇತ್ಯಾದಿಗಳ ಬಗ್ಗೆ ಊಹೆಗಳ ಮುಖಾಂತರ ಥಿಯರಿಗಳನ್ನು ಹೆಣೆಯುವುದೆಂದು ಭಾವಿಸಲಾಗಿದೆ. ಅದರೆ ಯಾವುದೇ ತಾತ್ವಿಕತೆಯು ಆಯಾಕಾಲದ ಚಾರಿತ್ರಿಕ ಸಂಗತಿಗಳ ಉತ್ಪನ್ನವಾಗಿರುತ್ತದೆ. ಜನರ ಮಧ್ಯೆ ಅವರ ಅನುಭವದ ಆಧಾರದ ಮೇಲೆ ಜನರೇ ಕಟ್ಟಿದ ತತ್ವಜ್ನಾನವವನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಇಲ್ಲಿ ಬಂದಿರುವ ಮಹಿಳಾ ತಾತ್ವಿಕರು ಕೂಡ ತಮ್ಮ ಕಾಲಘಟ್ಟದ ಪ್ರತಿನಿಧಿಗಳಾಗಿ ನನಗೆ ಕಂಡುಬರುತ್ತಾರೆ. ಅವರ ಸಂಕ್ಷಿಪ್ತ ರೂಪದ ವ್ಯಾಖ್ಯಾನದ ಮುಖಾಂತರ ಅವರ ಮಹಿಳಾ ತಾತ್ವಿಕತೆಯನ್ನು ಅರ್ಥಮಾಡಿಕೊಳ್ಳಬಹುದಾಗಿದೆ.
ಸೆಟವಿ
ಬೀದರ ಮತ್ತು ಅದರ ಸುತ್ತಮುತ್ತಲಿನ ಪರಿಸರದಲ್ಲಿ ಶೆಟವಿ, ಸೆಟವಿ ಎಂಬ ಪದವು ಬೈಗುಳವಾಗಿ, ಹಣೆಬರಹವನ್ನು ಬರೆಯುವ ದೇವತೆಯಾಗಿ ಸೊಟ್ಟ ಮುಖದ ಮಹಿಳೆಯ ಪ್ರತಿರೂಪವಾಗಿ ಬಳಕೆಯಲ್ಲಿದೆ. ತಮಗಾಗದ ಹೆಣ್ಣು ಮಕ್ಕಳನ್ನುದ್ದೇಶಿಸಿ ಸೆಟವಿ ಮಾರಿಯವಳು, ಸೆಟವಿ ಕುಲದವಳು ಎಂದು ಹೀಗಳೆಯುತ್ತಾರೆ. ಅತ್ಯಂತ ಕೆಟ್ಟ ಬದುಕನ್ನು ಎದುರಗೊಳ್ಳುವವರು ನನ್ನ ಹಣೆಬರವನ್ನು ಶೆಟವಿರಂಡಿ ಡಬ್ಬಣದಿಂದ ಅಥವಾ ಒಣಕೆಯಿಂದ ಬರೆದಿದೆ ಎಂದು ದೂರುತ್ತಾರೆ. ಸ್ತ್ರೀವಾಚಕ ಏಕವಚನ ಪ್ರತ್ಯಯವನ್ನೂ ಬಿಟ್ಟು ಅನೇಕ ಸಲ ಅದು, ಇದು ಎಂದು ನಪುಂಸಕಲಿಂಗ ಪ್ರತ್ಯಯದೊಂದಿಗೆ ಬೈಯುತ್ತಾರೆ. ಸಾಮಾನ್ಯ ಜನರಿಗೂ ಕೂಡ ಗೊತ್ತಿದೆ ಶೆಟವಿ ದೇವಿಯೆಂಬುದು. ಹಣೆಬರಹವನ್ನು ಬರೆಯುವವಳೆಂಬುದು ಆದರೂ ಅವಳನ್ನು ಸಾಮಾನ್ಯ ಜನರಿಗೆ ಬೈಯ್ಯುವಂತೆಯೇ ಬೈಯ್ಯುತ್ತಾರೆ.
ಅವಳಿಗೆ ಇನ್ನೊಂದು ಹೆಸರಿದೆ. ಇದಿಮಾಯಿ ಎಂದು ವಿಧಿ ಮತ್ತು ಆಯಿ ಸೇರಿ ಇದಿಮಾಯಿ ಎಂದಾಗಿದೆ. ಇಂದಿಗೂ ಇದಿಮಾಯಿ ಎಂಬ ಪದಕೂಡ ಬೈಗುಳ ರೂಪದಲ್ಲಿಯೇ ಈ ಭಾಗದಲ್ಲಿ ಬಳಕೆಯಲ್ಲಿದೆ. ಪ್ರಾಚೀನ ಕಾಲದಲ್ಲಿ ಎಲ್ಲರ ಹಣೆಬರವನ್ನು ನಿರ್ಧರಿಸುವ ದೇವತೆಯಾದ ಇವಳು ನಂತರ ಹೇಗೆ ಎಲ್ಲರ ತಿರಸ್ಕಾರಕ್ಕೆ ಪಾತ್ರಳಾದಳು ಎಂಬುದನ್ನು ತಿಳಿಯಬೇಕಾದರೆ ನಾಗರಿಕತೆಯ ಇತಿಹಾಸದಲ್ಲಿ ತಾಯಿ ಮೂಲ ಸಂಸ್ಕøತಿಯ ಚಾರಿತ್ರಿಕ ವಿಶ್ಲೇಷಣೆಯಿಂದ ಮಾತ್ರ ಸಾಧ್ಯವಾಗುತ್ತದೆ. ತಾಯಾಳಿಕೆಯ ಕಾಲಘಟ್ಟದಲ್ಲಿ ಪ್ರಭಾವಿ ದೇವತೆಯಾಗಿದ್ದ ಸೆಟವಿಯು ಪುರುಷಾಧಿಕಾರ ಬಲಗೊಂಡ ನಂತರ ಹೀಗೆ ನಿರ್ಲಕ್ಷ್ಯಕ್ಕೆ ಒಳಗಾಗಿ ಬೈಸಿಕೊಳ್ಳುವ ಸ್ಥಿತಿಗೆ ಇಳಿದ ಕತೆಯು ಕುತೂಹಲಕರವಾಗಿದೆ.
ಕ್ರಿಸ್ತನ ತಾಯಿ ಕನ್ನೆ ಮೇರಿ, ಕರ್ಣನ ತಾಯಿ ಕನ್ನೆ ಕುಂತಿಯರು ಗೌರವ ಸ್ಥಾನದಲ್ಲಿದ್ದು ಆರಾಧ್ಯರಾಗಿ ಉಳಿದುಕೊಂಡಂತೆ ಶೆಟವಿ ಏಕೆ ಆರಾಧ್ಯ ದೈವವಾಗಿ ಉಳಿದುಕೊಳ್ಳಲಿಲ್ಲ ಎಂಬುದು ಕೂಡ ಗಮನಿಸಬೇಕಾದ ಸಂಗತಿಯಾಗಿದೆ. ಕೇವಲ ತಳವರ್ಗದವರು ಮಾತ್ರ ಭಯ ಮತ್ತು ಭಕ್ತಿಯಿಂದ ಆರಾಧಿಸುವ ಈ ದೈವದ ಪ್ರಾಚೀನ ಸ್ವರೂಪವನ್ನು ತಿಳಿದಾಗ ಮಾತ್ರ ಶೆಟವಿಯ ಬಗೆಗಿನ ದೈವ ಪಲ್ಲಟ ಹಾಗೂ ಅರ್ಥಪಲ್ಲಟದ ಕಾರಣಗಳು ಗೋಚರಿಸುತ್ತವೆ. ಆದಿಮ ದಿನಗಳಲ್ಲಿ ಶೆಟವಿಗೆ ಹಣೆಬರಹವನ್ನು ನಿರ್ಧರಿಸುವ ಶಕ್ತಿಯಿತ್ತೆಂಬುದು ತಿಳಿಯುತ್ತದೆ. ಈ ಶಕ್ತಿ ಬರುವುದು ನಾವೀಗ ತಿಳಿದಿರುವಂತೆ ಯಾವುದೇ ಲೋಕದಿಂದ ಅತೀತವಾದ ದೈವೀಶಕ್ತಿಯೊಂದು ಬಂದು ಹೀಗೆ ಹೀಗೆ ಇವರ ಬದುಕು ಇರುತ್ತದೆ ಎಂದು ಬರೆಯುವುರಿಂದಲ್ಲ. ಬೇಟೆ, ಅರೆಬೇಟೆ, ಪಶುಪಾಲನಾ ಮತ್ತು ಕೃಷಿ ಹಂತಗಳಲ್ಲಿ ಮಹಿಳೆಯೇ ಎಲ್ಲ ಭೌತಿಕ ಅವಶ್ಯಕತೆಗಳನ್ನು ಪೂರೈಸುತ್ತಿದ್ದ ಕಾರಣಕ್ಕಾಗಿ ಅವಳನ್ನು ಎಲ್ಲ ಸಂಪತ್ತಿನ ಮೂಲವೆಂದು ತಿಳಿಯಲಾಗಿತ್ತು. ಹೆಚ್ಚಿನ ಸಂತಾನ ಮತ್ತು ಹೆಚ್ಚಿನ ಬೆಳೆ, ಬೇಟೆಗಳು ಅವರ ಬದುಕನ್ನು ಸುಖಮಯವಾಗಿಡುತ್ತಿದ್ದವು. ಆ ಕಾರಣಕ್ಕಾಗಿ ಅವುಗಳನ್ನೆಲ್ಲ ದೊರಕಿಸಿಕೊಡುವವಳು ಅವರ ಹಣೆಬರಹದ ನಿರ್ಧಾರಕಳಾಗಿದ್ದಳು. ಅದಕ್ಕೆಂದೇ ಶೆಟವಿಯು ಬದುಕನ್ನು ನಿರ್ದೇಶಿಸುವ ದೇವತೆಯಾಗಿ ಚಿತ್ರಿತಳಾಗಿದ್ದಾಳೆ. ಅವಳು ಎಲ್ಲ ಸಂಪತ್ತಿನ ದಾತೆಯಾಗಿ ಹೇಗೆ ಕಾಣಿಸಿಕೊಂಡಳು ಎಂಬುದನ್ನು ಅರಿಯುವ ಮೊದಲು ಶೆಟವಿ ಪದದ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ.
ಶೆಟವಿ ಆದರೆ ಇದು ಸಂಸ್ಕøತ ಭಾಷೆ ಮತ್ತು ಪರಿಸರಕ್ಕೆ ಹೊರತಾದ ಪದವೆಂದು ಹೇಳಬಹುದಾಗಿದೆ. ಮೊದಲನೆಯದಾಗಿ ಸಂಸ್ಕøತವು ಪುರುಷ ಪ್ರಧಾನ ಸಮಾಜದ (ಹಾಗೆ ನೋಡಿದರೆ ಎಲ್ಲ ಭಾಷೆಗಳೂ ಪುರುಷ ಪ್ರಧಾನವೇ) ಪಳೆಯುಳಿಕೆಗಳನ್ನು ಹೆಚ್ಚು ಪ್ರತಿನಿಧಿಸುವುದರಿಂದ ಶೆಟವಿ ಅಥವಾ ಷಷ್ಠಿ ಎಂಬ ಹೆಣ್ಣು ದೇವತೆಯು ಆ ಪರಿಸರದ ಹೊರಗಿನವಳೆಂದು ಧೈರ್ಯವಾಗಿ ಹೇಳಬಹುದು. ಏಕೆಂದರೆ ವೈದಿಕ ಪರಿಸರದಲ್ಲಿ ಆರಂಭ ಕಾಲದಲ್ಲಿ ಅಗ್ನಿ, ವರುಣ, ವಾಯು ಮುಂತಾದ ನಿಸರ್ಗದ ಪ್ರತೀಕಗಳಾದ ಪುರುಷರು ದೇವತೆಗಳಾಗಿದ್ದರು. ನಂತರವೂ ಗೋತ್ರ ಪುರುಷರೇ ದೇವತೆಗಳಾದರು. ಸಂಸ್ಕøತವು ಅಳವಡಿಸಿಕೊಂಡಿರುವ ಷಷ್ಠಿಯು ದ್ರಾವಿಡ ಭಾಷೆಯಿಂದಲೇ ತೆಗೆದುಕೊಂಡಿರುವುದನ್ನು ಇದು ಸೂಚಿಸುತ್ತದೆ. ತಮಿಳು ಮತ್ತು ಕನ್ನಡಗಳಲ್ಲಿ ಪಷ್ಠಿಯನ್ನು ಚಟ್ಟಿ ಎಂದು ಕರೆಯುತ್ತೇವೆ. ಚಟ್ಟಿ ಎಂಬ ಪದವು ಕ್ರಿಯಾಪದವಾಗಿಯೂ ನಾಮಪದವಾಗಿಯೂ ತಮಿಳಿನಲ್ಲಿ ಬಳಕೆಯಲ್ಲಿದೆ. ಅಲ್ಲಿ ಈ ಪದಕ್ಕೆ ಕೊಲ್ಲು, ನಾಶಮಾಡು ಎಂಬ ಅರ್ಥಗಳಿರುವಂತೆ ಮಡಕೆ, ಮಣ್ಣಿನ ಪಾತ್ರೆ ಎಂಬ ಅರ್ಥಗಳೂ ಇವೆ. ಘಟ ಮತ್ತು ನೀರು ತುಂಬಿದ ಮಣ್ಣಿನ ಮಡಿಕೆಯು ತಾಯಾಳಿಕೆ ನೆಲದ ಎಲ್ಲ ಆಚರಣೆಗಳಲ್ಲಿ ಪ್ರಧಾನವಾಗಿ ಬಳಕೆಗೊಳ್ಳುವ ವಸ್ತುವಾಗಿದೆ. ಆ ಕಾರಣಕ್ಕಾಗಿಯೇ ತಮಿಳಿನಲ್ಲಿ ಎಲ್ಲ ಜನಪದ ವಿಧಿ ನಿಯಮಗಳ ಆಚರಣೆಗಳಿಗೆ ಸಡಂಗು ಅಥವಾ ಚಟಂಗು/ಚಟಙ್ಕು ಎಂದೇ ಕರೆಯುತ್ತಾರೆ (ತಮಿಳಿನಲ್ಲಿ ಚ>ಜ>ಸ>ಶ>ಷ ಗಳಾಗಿರುವುದರಿಂದ). ಸರ್ಕಾರದ ನಿಯಮ, ಕ್ರಮ ಇತ್ಯಾದಿಗಳಿಗೂ ಚಟ್ಟ ತಿಟ್ಟಮ್ ಎಂಬ ಪದವನ್ನೇ ಇಂದಿಗೂ ಅಲ್ಲಿ ಬಳಸುತ್ತಾರೆ. ಚಟ್ಟಿಯಿಂದಲೇ ನಿಯಮಗಳು ಆರಂಭಗೊಂಡವು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇಂದಿಗೂ ಅಲ್ಲಿನ ವಿಧಾನಸಭೆಗೆ ಸಟ್ಟಸಬೈ ಎಂದು ಕರೆಯುತ್ತಾರೆ.2 ಕನ್ನೆಯು ಋತುಮತಿಯಾದಾಗ, ಋತುಮತಿಯಾಗಿದ್ದೇನೆ ಎಂದು ಸಾರುವ ಸಮಾರಂಭದಲ್ಲಿ ಅರಿಶಿಣದ ಕೈಯಿಂದ ಗೋಡೆಗೆ ಬಡಿಯುವ ಹಸ್ತದ ಗುರುತಿಗೆ ಚಟ್ಟು ಬಡಿಯುವುದು ಎಂದೇ ಕರೆಯುತ್ತಾರೆ. ಇಂದಿಗೂ ತುಳಜಾಭವಾನಿಯ ದರ್ಶನಕ್ಕೆ ಹೋದ ಭಕ್ತಾದಿಗಳಿಗೆ ಎರಡೂ ಹಸ್ತಗಳ ಗುರುತನ್ನು ಕುಂಕುಮ ಅರಿಶಿಣದಲ್ಲಿ ಅದ್ದಿ ಎದೆಯ ಮೇಲೆ ಬಡಿದು ಗುರುತು ಮಾಡಿ ಕಳುಹಿಸುತ್ತಾರೆ. ಹೀಗಾಗಿ ಚಟ್ಟಿ ಎಂಬ ದ್ರಾವಿಡ ಪದವೇ ಸಂಸ್ಕøತಕ್ಕೆ ಹೋಗಿ ಷಷ್ಠಿಯಾಗಿದೆಯೆಂದು ಹೇಳಲು ಸಾಧ್ಯವಿದೆ. ಷಷ್ಠಿ ಎಂದರೆ ಆರು ಎಂಬ ಅರ್ಥ ಸಂಸ್ಕೃತದಲ್ಲಿದೆ . ಷಡೈಶ್ವರ್ಯವನ್ನು (ಜ್ಞಾನ, ಶಕ್ತಿ, ಬಲ, ಐಶ್ವರ್ಯ, ವೀರ್ಯ, ತೇಜಸ್ಸು) ತರುವವಳೇ ಷಷ್ಠಿಯಾಗಿದ್ದಾಳೆ. ಆದ್ದರಿಂದಲೇ ಅವಳನ್ನು ಜೇಷ್ಠಾದೇವಿಯೆಂದೂ, ಲಕ್ಷ್ಮಿಯೆಂದೂ ಕರೆಯುತ್ತಾರೆ. ದ್ರಾವಿಡರ ಈ ಷಡೈಶ್ವರ್ಯಗಳ ಬೇರುಗಳು ಪ್ರಾಚೀನ ತಂತ್ರಶಾಖೆಗಳಲ್ಲಿ ನಾವು ಕಾಣುತ್ತೇವೆ. ‘ತಂತ್ರದಲ್ಲಿ, ಭಗ, ಯಾಗ ಮತ್ತು ಲತಾ ಸಾಧನಗಳಲ್ಲಿ ಪ್ರಾಕೃತಿಕ ಫಲವತ್ತತೆಯ ಮೂಲವೆಂಬಂತೆ ಅಥವಾ ಭೌತಿಕ ಏಳಿಗೆಗೆ ಸಾಧನವೆಂಬಂತೆ ಸ್ತ್ರೀಯೋನಿಯ ಪ್ರಾಮುಖ್ಯತೆಯನ್ನು ಗುರುತಿಸಲಾಗುತ್ತದೆ. ತಂತ್ರದ ಪರಂಪರೆಯಲ್ಲಿ ಭಗ ಎಂಬುದು ಆರು ವಿಧಧ ಭೌತಿಕ ಏಳಿಗೆಯ ಸಾರವೆಂಬಂತೆ ಚಿತ್ರಿತವಾಗಿದೆ. ಅದನ್ನು ಷಡೈಶ್ವರ್ಯ ಎನ್ನುತ್ತಾರೆ.
ಸ್ತ್ರೀಯೋನಿಗೆ ಇಂತಹ ಸ್ಥಾನ ದೊರಕಿದ್ದು ಹೇಗೆ? ಆದಿಮ ನಂಬಿಕೆಯಂತೆ ಎಂಬುದೊಂದೇ ಉತ್ತರ. ‘ಸಂಪತ್ತಿನ ಮೂಲ’ ಎಂಬ ಕಲ್ಪನೆ ಯಾವ ಕಾಲದ್ದಿರಬಹುದು? ಮೂಲತ: ಭೌತಿಕ ಸಂಪತ್ತನ್ನು ಸೂಚಿಸುವ ಪದವು ನಂತರ ಸ್ತ್ರೀಯೋನಿಯನ್ನು ನಿರ್ದೇಶಿಸುವಂತಹ ಪದವಾದದ್ದು ಹೇಗೆ? ತಂತ್ರದಲ್ಲಿ ಭೌತಿಕ ಸಂಪತ್ತನ್ನು ಕೃಷಿಯ ಹಿನ್ನೆಲೆಯಲ್ಲಿ ಕಲ್ಪಿಸಿಕೊಳ್ಳಲಾಗಿದೆ. ಅದು ಲತಾ ಎಂಬ ಪದದ ಪ್ರಯೋಗದಿಂದ ತಿಳಿಯುತ್ತದೆ. ಲತಾ ಎಂದರೆ ಬಳ್ಳಿ. ತಂತ್ರದಲ್ಲಿ ಅದಕ್ಕೆ ಯೋನಿಯೆಂಬರ್ಥವಿದೆ. ತಂತ್ರದ ದೃಷ್ಟಿಯಲ್ಲಿ ಎರಡಕ್ಕೂ ಏನೋ ಸಂಬಂಧವಿದೆ. ಇದು ತಂತ್ರದ ಸಹಜಭಾಗವಾದ ಯಂತ್ರದಿಂದ ಗೊತ್ತಾಗುತ್ತದೆ. ಯಂತ್ರಗಳ ಸುತ್ತಲೂ ಇಷ್ಟಾರ್ಥವನ್ನು ಪೂರೈಸುವ ಬಳ್ಳಿಯನ್ನು ಬಿಡಿಸಲಾಗಿರುತ್ತದೆ. ಇವೆಲ್ಲವೂ ಸೇರಿ ಶ್ರೀಚಕ್ರ ಎಂದು ಕರೆಯುತ್ತಾರೆ.
ಡಾ. ಷ. ಶೆಟ್ಟರ್ ಅವರು ದಾಖಲಿಸಿದ ಐಹೊಳೆಯ ದುರ್ಗಾದೇವಾಲಯದ ಮೇಲ್ಛತ್ತಿನಲ್ಲಿರುವ ಮತ್ಸ್ಯಚಕ್ರದ ಸುತ್ತ ಇರುವ ಲತೆಗಳೂ, ಬಾದಾಮಿ ಎರಡನೆಯ ಗುಹಾಲಯದ ಮೇಲ್ಛತ್ತಿನ ಮತ್ಸ್ಯಚಕ್ರದ ಸುತ್ತು ಇರುವ ಬಳ್ಳಿಗಳೂ ಇದನ್ನೇ ಸಂಕೇತಿಸುತ್ತಿವೆ. ಈ ಚಕ್ರದ ಮಧ್ಯದಲ್ಲಿ ಮತ್ಸ್ಯಗಳಿರುವುದನ್ನು ನೋಡಬಹುದು. ಎರಡೂ ಚಕ್ರಗಳಲ್ಲಿ 16 ಮತ್ಸ್ಯಗಳಿವೆ ಮತ್ತು ಸುತ್ತಲೂ ಲತೆಗಳಿವೆ. ತಾಂತ್ರಿಕ ಪಂಥವು ದೇಹದಲ್ಲಿ ಚಕ್ರಗಳನ್ನು ಗುರುತಿಸುತ್ತದೆ. ಆಧಾರಸ್ಥಲದಲ್ಲಿ 4 ದಳಗಳು ಸ್ವಾದಿಸ್ಟಾನ ಸ್ಥಲದಲ್ಲಿ 6 ದಳಗಳು, ಮಣಿಪುರದಲ್ಲೂ 10 ದಳ, ಅನಾಹತದಲ್ಲೂ 12 ದಳ, ವಿಶುದ್ದಿಯಲ್ಲಿ 16 ದಳಗೂ ಈ ಹಂತಗಳು ದಾಟಿ ನಂತರ ಆಜ್ಞಾನದಲ್ಲಿ ಎರಡು ದಳಗಳು ಹೀಗೆ ಒಟ್ಟು ಎಳು ಪದ್ಮಗಳು ಮತ್ತು ಅದಕ್ಕೆ ಅದರದೇ ಆದ ಬಣ್ಣ, ಗುಣ ಇತ್ಯಾದಿಗಳನ್ನು ಹೇಳುತ್ತಾರೆ. ಇವುಗಳನ್ನು ಷಟ್‍ಚಕ್ರಗಳೆಂದೇ ಗುರುತಿಸುತ್ತಾರೆ. ಆ ಆರು ಸ್ಥಲಗಳಿಂದ ಮೇಲೇರಿದ ಕುಂಡಲಿನೀ ಶಕ್ತಿಯು ಸುಷಮ್ನಾದ ಅಗ್ರಭಾಗವಾದ ಸಹಸ್ರದಳ ಕಮಲದ ಪುರುಷನೊಡನೆ ಐಕ್ಯವಾದಾಗ ಅದು ಮೋಕ್ಷ ಸಾಧನೆಯಾದ ಹಾಗೆ ಎಂಬ ಕಲ್ಪನೆ ಇಲ್ಲಿದೆ. ಹೀಗಾಗಿ ಷಷ್ಠಿಯೆಂದರೆ ಫಲವಂತಿಕೆ, ಲಾಭ, ಐಶ್ವರ್ಯ, ಶಕ್ತಿ ಇತ್ಯಾದಿಗಳ ಸಂಕೇತವಾಗಿ ತಾಂತ್ರಿಕ ಪಂಥಗಳಲ್ಲಿ ಗುರುತಿಸಲಾಗುತ್ತದೆ. ಷಷ್ಠೀತಂತ್ರವೆಂಬ ಪ್ರತ್ಯೇಕ ಶಾಖೆಯೊಂದು ಸಾಂಖ್ಯದ ಉಪಶಾಖೆಯಿರಬಹುದೆಂದು ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರು ಹೇಳುತ್ತಾರೆ. ಹೀಗಾಗಿ ಷಡೈಶ್ವರ್ಯವನ್ನು ತರುವ ಷಷ್ಠಿಯು ಶೆಟವಿಯಾಗಿ ಎಲ್ಲರ ಬದುಕನ್ನು ನೇರ್ಪಡಿಸುವ, ಹಾಳುಗೆಡಹುವ ಸಾಮರ್ಥವನ್ನು ಪಡೆದಿರುವಳೆಂಬ ನಂಬಿಕೆ ಕಾಲಾನಂತರದಲ್ಲಿ ಬೆಳೆದು ಬಂದಿದೆ.
ಷಷ್ಠಿ ಎಂಬ ಪದಕ್ಕೆ ಕಿಟೆಲ್ ಕೋಶವು ಸ್ತ್ರೀಲಿಂಗ ಎಂದು ಹೇಳಿ ದುರ್ಗೆ ಮತ್ತು ಕಾತ್ಯಾಯನಿಯ ಹೆಸರೆಂದು ದಾಖಲಿಸುತ್ತದೆ. ಸಂಸ್ಕøತ-ಕನ್ನಡ ಶಬ್ದಕೋಶವು. ಷಷ್ಠಿ ಎಂದರೆ ಸ್ತ್ರೀ, ಪಕ್ಷದ ಆರನೆಯ ದಿನ ಎಂದು ಉಲ್ಲೇಖಿಸುತ್ತದೆ. ಮೂಲದಲ್ಲಿ ಷಷ್ಠಿ ಎಂದರೆ ಚಟ್ಟಿಯು ಸ್ತ್ರೀಗೆ ಪರ್ಯಾಯವಾಗಿ ಬಳಸುವ ಶಬ್ದವಾಗಿತ್ತೆನ್ನುವುದನ್ನು ಇವು ದೃಢೀಕರಿಸುತ್ತವೆ. ಪ್ರಾಚೀನ ಕಾಲದಲ್ಲಿ ಚಟ್ಟಿ ಅಥವಾ ಶೆಟವಿಯು ಪೂಜೆಗೆ ಅರ್ಹಳಾಗಿದ್ದಾಳೆಂಬುದನ್ನು ಕರ್ನಾಟಕದ ಅನೇಕ ಶಾಸನಗಳು ಕೂಡ ದೃಢಪಡಿಸುತ್ತವೆ. ಲಕ್ಕುಂಡಿಯ ಶಾಸನವೊಂದು ‘ಸ್ವಸ್ತಿ ಶ್ರೀ ಮಚ್ಚಾಳುಕ್ಯ ವಿಕ್ರಮ ವರ್ಷದ 45ನೆಯ ಸಾವ್ರ್ವರಿ ಸಂವತ್ಸರದ ಭಾದ್ರಪದ ಸುದ್ದ ಪಂಚಮಿ ಆದಿವಾರದಂದು ಶ್ರೀ ತೆಲ್ಲಿಗೇಶ್ವರ ದೇವರ ಚಷ್ಟಿಯ ಪರ್ವದ ಪೂಜೆಗೆ ವೃದ್ಧಿಯಲು ನಡೆವನ್ತಾಗಿ ಮಲ್ಲಿಸೆಟ್ಟಿ, ಬಿಟ್ಟ ಗದ್ಯಾಣ, ಎಂದು ಷಷ್ಠಿ ಹಬ್ಬದ ಮಹತ್ವವನ್ನು ತಿಳಿಸುತ್ತದೆ.
ಇದಲ್ಲದೆ 1119ರ ಶಾಸನವೊಂದು ‘ಸ್ವಸ್ತಿ ಶ್ರೀ ಮಚ್ಚಾಳುಕ್ಯ ವಿಕ್ರಮವರ್ಷದ 44ನೆಯ ವಿಕಾರಿ ಸಂವತ್ಸರದ ಅಶ್ವಯುಜ ಶುದ್ಧ ದಶಮಿ ಸೋಮವಾರರಂದು ಶ್ರೀ ಚಟ್ಟೇಶ್ವರ ದೇವರ್ಗೆ ಚೆಬಟ್ಟಿ ಅರಿದೇವನಾಯಕರು ಷಷ್ಠಿಯಲು ನಿತ್ಯ ಪೂಜೆಗೆ ಪುಷ್ಪಂ ನಡೆಯಿಸುವಂತಾಗಿ ಕೊಟ್ಟ ಗದ್ಯಾಣ ಹತ್ತು,ಎಂದಿದೆ. ಇಷ್ಟೇ ಅಲ್ಲ ಪ್ರಾಚೀನ ಕಾಲದಲ್ಲಿ ‘ಚಟ್ಟ’, ‘ಚಟ್ಟಬ್ಬೆ’, ‘ಚಟ್ಟಯ್ಯ’ ‘ಚಟ್ಟಯ್ಯದೇವ’ ‘ಚಟ್ಟಲದೇವಿ’, ಇತ್ಯಾದಿ ಹೆಸರುಗಳನ್ನು ಮೇಲ್ವರ್ಗದವರೂ, ತಳವರ್ಗದವರೂ ಇಟ್ಟುಕೊಳ್ಳುವುದನ್ನು ನೋಡುತ್ತೇವೆ. ಅಂದರೆ ಚಟ್ಟಿ ಅಥವಾ ಶೆಟವಿಯು 10-12ನೆಯ ಶತಮಾನದವರೆಗೂ ಶಿಷ್ಟರಲ್ಲಿಯೂ ಜನಾನುರಾಗವನ್ನು ಪಡೆದಿದ್ದಳೆಂಬುದನ್ನು ಇವು ತೋರಿಸಿಕೊಡುತ್ತವೆ.
ಪ್ರಾಚೀನ ಬುಡಕಟ್ಟುಗಳಲ್ಲಿ ವಿವಾಹ ಸಂಸ್ಥೆಯು ಹುಟ್ಟದ ಮುನ್ನ ಶೆಟವಿಯು ಅಸ್ತಿತ್ವದಲ್ಲಿದ್ದಳೆಂದು ಊಹಿಸಬಹುದಾಗಿದೆ. ಅಂದರೆ ಸೆಟವಿಯ ಅಸ್ತಿತ್ವವು ಅತ್ಯಂತ ಪ್ರಾಚೀನವೆಂದು ಅವಳ ಐತಿಹಾಸಿಕತೆಯನ್ನು ಗುರುತಿಸಬಹುದಾಗಿದೆ. ‘ಮಶೋಬನಿಗೆ ಹೆಂಡಿರಿಲ್ಲ ಶೆಟವಿಗೆ ಗಂಡನಿಲ್ಲ’ ಎಂಬ ಗಾದೆಯು ಈ ಮಾತನ್ನು ಪುಷ್ಟೀಕರಿಸುತ್ತದೆ. ಶೆಟವಿಯು ಮಗನನ್ನೇ ಕೂಡಬೇಕಾಗಿ ಬಂದ ಜನಪದ ಕತೆಯು ಕೂಡ ಪ್ರಾಚೀನ ಬುಡಕಟ್ಟುಗಳ ಕಮ್ಯೂನ್ ಪರಿಕಲ್ಪನೆಯನ್ನೇ ಪುಷ್ಟೀಕರಿಸುತ್ತದೆ. ಈ ಸೆಟವಿಯೇ ಜನಪದ ಕಥೆ ಮತ್ತು ಅಚರಣೆಗಳಲ್ಲಿ ಬರುವ ಜೋಕುಮಾರನ ತಾಯಿ ಜೇಷ್ಠಾದೇವಿಯಾಗಿದ್ದಾಳೆ.‘ಜನಪದ ಗೀತೆಗಳಲ್ಲಿ ಅವನು (ದೃಷ್ಟಿದೇವಿ, ದಿಣ್ಣಾದೇವಿ, ದಿರ್ನೇದೇವಿ) ಮಗ ಎಂದಿದೆ. ಚನ್ನವೀರ ಕವಿಯ ಕಾಶಕೃತ್ಸ್ನ ಶಬ್ದ ಕಲಾಪ ಧಾತು ಪಾಠದಲ್ಲಿಯೂ ಕೂಡ ಜೋಕುಮಾರನು ಜ್ಯೇಷ್ಠಾದೇವಿಯೆಂಬ ಹೆಸರಿನ ಅಲಕ್ಷ್ಮಿ ಅಥವಾ ದರಿದ್ರಲಕ್ಷ್ಮಿಯ ಮಗ ಎಂದಿದೆ. ಜ್ಯೇಷ್ಠೆಯೇ ಉತ್ತರ ಕರ್ನಾಟಕದ ಶೆಟವಿ ಎಂಬ ಗ್ರಾಮದೇವತೆ ಎಂದು ಚಿದಾನಂದಮೂರ್ತಿಯವರು ಹೇಳುತ್ತಾರೆ. ಮುಂದುವರೆದು ಇದೇ ಜ್ಯೇಷ್ಠಾದೇವಿಯೇ ದಕ್ಷಿಣ ಕರ್ನಾಟಕದ ಮಾರೆಮ್ಮ ಎನ್ನುತ್ತಾರೆ. ‘ಮಾರಿಗೆ ಜೋಕುಮಾರ ಒಂದು ಕಡೆ ಗಂಡ ಒಂದು ಕಡೆ ಮಗ’ ಎಂದೂ ಕೂಡ ಹೇಳುತ್ತಾರೆ. ಇದು ಶೆಟವಿಯು ವಿವಾಹ ಸಂಸ್ಥೆಯ ಪೂರ್ವ ದೇವತೆಯೆನ್ನುವುದನ್ನು ಮತ್ತೆ ಇನ್ನೊಮ್ಮೆ ದೃಢಪಡಿಸುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯು ಗಟ್ಟಿಗೊಂಡ ನಂತರ ಶೆಟವಿಯು ಷಡೈಶ್ವೈರ್ಯ ನೀಡುವ ದೇವತೆಯ ಬದಲಿಗೆ ದರಿದ್ರಲಕ್ಷ್ಮಿಯಾಗಿರುವುದು, ಮಹಿಳೆಯು ಅಧಿಕಾರ ಮತ್ತು ಸಂಪತ್ತಿನ ಒಡೆತನದಿಂದ ದೂರವಾದಳೆಂಬುದನ್ನು ಸಾಬೀತುಪಡಿಸುತ್ತದೆ.
‘ಹಡೆದ ನಂತರ ಮೂರು ತಿಂಗಳುಗಳವರೆಗೆ ಅವಳೇ (ಶೆಟವಿ) ಕೂಸು ಬಾಣಂತಿಯರ ರಕ್ಷಣೆ ಮಾಡುತ್ತಾಳೆ. ಅಲ್ಲಿಯ ತನಕ ಬಾಣಂತಿಯರು ಕುಂಕುಮ, ತಾಳಿಗಳನ್ನು ಧರಿಸುವುದಿಲ್ಲ. ಅವರು ಆಗ ಹೆಂಗಸರೆಂದು ಪರಿಗಣಿತರಾಗುವುದಿಲ್ಲ. ಆ ಅವಧಿಯಲ್ಲಿ ಕೂಸು ನಕ್ಕರೂ ಅತ್ತರೂ ಶೆಟವಿ ತಾಯಿಯೇ ಕಾರಣಳು. ಮೂರು ತಿಂಗಳಾದ ನಂತರ ಮೊರದಲ್ಲಿ ಅವಳ ಸಂಕೇತವಾದ ಒಂದು ಗುಂಡುಕಲ್ಲನ್ನು ಪೂಜಿಸಿ ಐದಾರು ವರ್ಷದ ಎಳೆಯರಿಂದ ಕೂಸನ್ನು, ಆ ಮೊರವನ್ನು ದಾಟಿಸಿ ಶೆಟವಿ ತಾಯನ್ನು ಬೀಳ್ಕೊಡುತ್ತಾರೆ. ಬೆಳಗಾಂ ಜಿಲ್ಲೆಯಲ್ಲಿ ಅಥಣಿ ತಾಲೂಕಿನ ಅಥಣಿ ಸ್ಥಳದಲ್ಲಿರುವ ಹೊಲೆಯರ ಮದುವೆಯಲ್ಲಿ ಮಾದಿಗರು ಬರುತ್ತಾರೆ. ಶೆಟ್ಟವ್ವ ತಾಯಿಯ ಹೆಸರಲ್ಲಿ ಕತ್ತಿಯಿಂದ ಕುತ್ತಿಗೆಯನ್ನು ತಿವಿದುಕೊಳ್ಳುತ್ತಾರೆ. ರಕ್ತ ಬರಲೇಬೇಕು. ‘ಚಾಂಗಬಲೋ’ ಎಂದು ಕೂಗುತ್ತಿರುತ್ತಾರೆ. ಮದುವೆಯಲ್ಲಿ ಹಬ್ಬದ ಕುರಿಯನ್ನು ಕುಯ್ಯುತ್ತಾರೆ. ಕುತ್ತಿಗೆಗೆ ಚುಚ್ಚಿಕೊಂಡ ಮಾದಿಗರಿಗೆ ಮೊದಲು ಊಟ ನಂತರ ಹೊಲೆಯರ ಊಟ. ಇಂತಹ ಆಚರಣೆಗಳು ಸೆಟವಿಯು ವಿವಾಹ ಸಂಸ್ಥೆಯ ಪೂರ್ವದ ದೇವತೆಯಾಗಿದ್ದಳೆಂಬುದನ್ನು ದೃಢಪಡಿಸುತ್ತವೆ.
ಬೀದರ, ಉದಗೀರ, ಅಕ್ಕಲಕೋಟೆ, ನಳದುರ್ಗ ಭಾಗದಲ್ಲಿ ಶೆಟವಿ ಬಂದು ಹಣೆಬರಹ ಬರೆಯುವಳೆಂಬ ನಂಬಿಕೆಯ ಜೊತೆಗೆ ಇನ್ನೂ ಒಂದು ಆಚರಣೆ ಚಾಲ್ತಿಯಲ್ಲಿದೆ. ಅದೆಂದರೆ ತೊಟ್ಟಿಲಿನ ಕೆಳಗೆ ನೆಲದ ಮೇಲೆ ಅಕ್ಕಿ, ಗೋಧಿ, ಜೋಳ ಯಾವುದೇ ಧಾನ್ಯವನ್ನು ಹಾಕಿ ಅದರ ಮೇಲೆ ನೀರು ತುಂಬಿದ ತಂಬಿಗೆ ಅದರ ಮೇಲೆ ಕಪ್ಪೆರೊಟ್ಟಿ (ದಪ್ಪನೆಯ ಹೋಳಿಗೆ) ಇಡುತ್ತಾರೆ. ಈ ಕಪ್ಪೆರೊಟ್ಟಿ ಮೇಲೆ ದೀಪ ಇಡುತ್ತಾರೆ. ಮರುದಿನ ಮುಂಜಾನೆ ಮಕ್ಕಳಾಗದವರು ಮಾತ್ರ ಈ ಕಪ್ಪೆ ರೊಟ್ಟಿಯನ್ನು ಉಣ್ಣುತ್ತಾರೆ. ಅಥವಾ ಮಕ್ಕಳಾಗದವರನ್ನು ಹುಡುಕಿ ಅವರಿಗೆ ಮಾತ್ರ ಈ ರೊಟ್ಟಿಯನ್ನು ನೀಡಲಾಗುತ್ತದೆ. ಅದನ್ನು ಉಣ್ಣುವುದರಿಂದ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಆ ರೊಟ್ಟಿಗಾಗಿ ಎಂತೆಂತಹ ಶ್ರೀಮಂತ ಮಹಿಳೆಯರು ತಮಗೆ ಬೇಕೆಂದು ವಿನಂತಿಸಿ ಕೊಳುತ್ತಾರೆ. ಉಣ್ಣುವಾಗ ಅವರು ಯಾರ ಜೊತೆಯೂ ಮಾತನಾಡುವಂತಿಲ್ಲ. ಇದರರ್ಥ ಶೆಟವಿ ಮತ್ತು ಕಪ್ಪೆಯರು(ಕಾಪಾಲಿಕರು) ಈ ಫಲವಂತಿಕೆಗೆ ಸಂಬಂಧಪಟ್ಟ ಕ್ರಿಯೆಗಳಲ್ಲಿ ಭಾಗವಹಿಸುತ್ತಿದ್ದರೆಂದಾಗುತ್ತದೆಯಲ್ಲವೆ?
ಇದಲ್ಲದೆ ರಾಜಸ್ಥಾನ, ಬಿಹಾರ, ಗುಜರಾತಗಳಲ್ಲಿ ಮಗುಹುಟ್ಟಿದ ಆರನೆಯ ದಿನವನ್ನು ಇಂದಿಗೂ ಅತ್ಯಂತ ವೈಭವಪೂರಿತವಾಗಿ ಛಟ್ಟಿಯೆಂದು ಆಚರಿಸುತ್ತಾರೆ. ಇಂದಿಗೂ ನಮ್ಮಲ್ಲಿ ಮಗುವಿಗೆ ಒಂದು ವರ್ಷ ಅಥವಾ ಎರಡು ವರ್ಷಗಳ ತನಕ ಅದಕ್ಕೆ ಯಾವುದೇ ರೀತಿಯ ಸೋಂಕು ತಗಲಬಾರದೆಂದು, ದೆವ್ವ ಗಿವ್ವ ಹಿಡಿಯಬಾರದೆಂದು ಮಗುವಿನ ಕೊರಳಲ್ಲಿ ಸೆಟವಿಯ ರೂಪದ ತಾಯಿತ ಹಾಕುತ್ತಾರೆ. ಶ್ರೀಮಂತರಾದರೆ ಬಂಗಾರದಿಂದ ಮಾಡಿಸುತ್ತಾರೆ, ಬಡವರಾದರೆ ಬೆಳ್ಳಿಯದಾದರೂ ಸೆಟವಿಯ ರೂಪದ ತಾಯಿತವನ್ನು ಕಟ್ಟುತ್ತಾರೆ. ಬಾಣ ಕಾದಂಬರಿಯಲ್ಲಿಯೂ ಕೂಡ ಮಗು ಚಂದ್ರಾಪೀಡನನ್ನು ನೋಡಲು ಅವನ ತಂದೆ ಬಂದಾಗ ಹೆರಿಗೆ ಮನೆಯಲ್ಲಿ ಷಷ್ಠಿದೇವಿಯ ಪೂಜೆ ನಡೆಯುತ್ತಿತ್ತೆಂದು ಬಾಣ ಬರೆದಿದ್ದಾನೆ. ಇಷ್ಟೇ ಅಲ್ಲ ಚಾರುದತ್ತ ನಾಟಕದಲ್ಲಿ ‘ಚಾರುದತ್ತನು ಚಾಂದ್ರಮಾನ ಮಾಸದ ಕೃಷ್ಣ ಪಕ್ಷದ ಆರನೇ ದಿವಸ ಆಚರಿಸುತ್ತಿದ್ದ ಪೂಜಾವಿಧಿಯ ಬಗೆಗೆ (ಸಟ್ಟಿ –ಕಿದ-ದೇವಕಾರ್ಯಸ್ಸ) ಅವಶ್ಯಕವಾದ ವಿವರಗಳು ದೊರಕುತ್ತವೆ ಮತ್ತು ಮೃಚ್ಛಕಟಿಕದ ಮುದ್ರಿತ ಆವೃತ್ತಿಯಲ್ಲಿ ಸಿದ್ದಿಕಿದಾ ಎಂಬುದಾಗಿ ಮುದ್ರಿತವಾಗಿದೆ, ಪೃಥ್ವೀಧರನು ‘ಸಿದ್ದಿಕಿದಾ’ ಎಂಬ ಶಬ್ದಕ್ಕೆ ‘ಷಷ್ಠಿ ವ್ರತಕರ್ತ’ ಎಂಬ ಅರ್ಥ ಬರುವ ಪಾಠಾಂತರವಿದೆ. ಎಂದು ಹೇಳಿ, ಈ ವಿವರಗಳು ಷಷ್ಠೀ ಪೂಜಾ ವಿವರಗಳನ್ನೇ ಹೋಲುತ್ತವೆಂದು ಕೊಸಾಂಬಿ ಹೇಳುತ್ತಾರೆ.
ಎಳ್ಳಮವಾಸ್ಯೆಯ ಹಿಂದಿನ ಅಮಾವಾಸ್ಯೆಯನ್ನು ನಮ್ಮವರು ಛಟ್ಟಿ ಅಮಾವಾಸ್ಯೆಯೆಂದು ಆಚರಿಸುತ್ತಾರೆ. ‘ಚಟ್ಟೀ ದಿನ ಬಿಟ್ಟಿಗೂ ಹೋಗಬೇಡ’ಎಂಬ ಗಾದೆಯನ್ನು ಕಿಟೆಲ್ ಅವರು ದಾಖಲಿಸುತ್ತಾರೆ. ಅದರರ್ಥ ಫಲವಂತಿಕೆಗಾಗಿ ನಡೆಯುವ ಮುಕ್ತ ಲೈಂಗಿಕತೆಯ ಆಚರಣೆಯಿರಬಹುದು. ಬಿಜಾಪುರದ ಸುತ್ತ ಮುತ್ತ ಇದೇ ಸಮಯದಲ್ಲಿ ಕುಬಸ ಬದಲಾಯಿಸುವ ಜಾತ್ರೆ ಕೂಡ ನಡೆಯುತ್ತದೆ. ಇಂತಹದೇ ಇನ್ನೊಂದು ಜಾತ್ರೆಯನ್ನು ಕಪ್ಪೆ ಜಾತ್ರೆ ಎಂದು ಪ್ರೊ. ಎಂ. ಎಂ. ಕಲಬುರ್ಗಿಯವರು ಹೇಳುತ್ತಾರೆ.
ಸಿಟ್ಟಿಗೇಳುವ ಹೆಣ್ಣುಮಗಳನ್ನು ಕುರಿತು ಸೆಟವಿ ಹಂಗ ಸೆಟಿಬೇಡ ಎನ್ನುತ್ತಾರೆ. ಸೆಟೆಯುವುದೆಂದರೆ ಸಿಟ್ಟಾಗುವುದು ಎಂಬರ್ಥವೂ ಉತ್ತರ ಕರ್ನಾಟಕದಲ್ಲಿದೆ. ಹೀಗಾಗಿ ಅವಳು ಸಿಟ್ಟು ಮಾಡುವಂತಹ ಹಕ್ಕಿರುವ ತಾಯಿಯಾಗಿಯೂ ಪ್ರಾಚೀನ ಜನಪದರ ಜೊತೆಗಿರುವುದನ್ನು ನೋಡುತ್ತೇವೆ.
ಡಾ. ಶಿವಗಂಗಾ ರುಮ್ಮಾ,
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.