ಪ್ರದ್ಮಪ್ರಭೆ/ ಮಡಿಲಿಗೊಂದು ಮಗು ನೀಡುವ ಡಾ. ಕಾಮಿನಿ ರಾವ್- ಡಾ. ಗೀತಾ ಕೃಷ್ಣಮೂರ್ತಿ
ಗರ್ಭದೊಡಲಿನ ತೊಡಕುಗಳನ್ನು ನಿವಾರಿಸಿ ಮಡಿಲಿಗೊಂದು ಮಗು ನೀಡುವ ವೈದ್ಯವಿಜ್ಞಾನದ ತಂತ್ರಜ್ಞಾನವನ್ನು ಭಾವನಾತ್ಮಕವಾಗಿ ಬೆಳೆಸಿ ಮತ್ತು ಬಳಸಿ ಹಲವರ ಬಾಳಿಗೆ ಸಂತಸ ತಂದ ಪ್ರಯೋಗಶೀಲ ವೈದ್ಯೆ ಡಾ. ಕಾಮಿನಿ ರಾವ್. ಸದಾಕಾಲ ಹೊಸ ಸಂಶೋಧನೆ, ಹೊಸ ಸಾಧ್ಯತೆ, ಹೊಸ ಸವಾಲುಗಳ ಬಗ್ಗೆ ಚಿಂತನೆ ಮಾಡುವ ಅವರಿಗೆ 2014 ರಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವ ಸಿಕ್ಕಿದೆ.
ಪ್ರತಿಯೊಂದು ಮಗು ಕೂಡ "ಬಾನಿನಿಂದಲೇ ನೆಲಕ್ಕಿಳಿದು ಮಣ್ಣಿಗೆ ಬಿದ್ದ ಬೆಳಕಿನ ಮರಿ" ಎಂಬುದು ಕವಿ ಗೋಪಾಲಕೃಷ್ಣ ಅಡಿಗರ ಕವನವೊಂದರ ಸಾಲು. ಹೀಗೆ ಧರೆಗಿಳಿದ ಬೆಳಕಿನ ಕುಡಿ, ಮನೆ, ಮನಗಳನ್ನು ಬೆಳಗಿ, ಬದುಕಿಗೆ ಹೊಸ ಚೇತನವನ್ನು ನೀಡುತ್ತದೆ. ಆದರೆ ದಾಂಪತ್ಯ ಜೀವನ ಪ್ರಾರಂಭಿಸಿ ಹಲವಾರು ವರ್ಷಗಳಾದರೂ ಇಂತಹ ಬೆಳಕಿನ ಮರಿಯೊಂದನ್ನು ಮನೆಗೆ ತರಲು ದೈಹಿಕವಾಗಿ ಅಸಮರ್ಥವಾಗಿ ಸಂತಾನೋತ್ಪಾದನಾ ಸಾಮಥ್ರ್ಯ ಹೀನತೆ ಅಥವಾ ಇನ್ಫರ್ಟಿಲಿಟಿಯಿಂದ ಕೊರಗುತ್ತಿರುವ ಸುಮಾರು 3 ಕೋಟಿ ದಂಪತಿಗಳು ನಮ್ಮ ದೇಶದಲ್ಲಿದ್ದಾರೆ. ಮಗುವಿಗಾಗಿ ಹಲುಬಿ, ಹಗಲಿರುಳೂ ಹಂಬಲಿಸಿ, ಕಂಡ ಕಂಡ ದೈವಗಳಿಗೆಲ್ಲ ಹರಕೆ ಹೊತ್ತು, ಯಾವುದೂ ಫಲಿಸದಿದ್ದಾಗ ಕಡೆಗೊಮ್ಮೆ ವೈದ್ಯಕೀಯ ನೆರವು ಕೋರಿ ಬರುವ ಜನರೇ ನಮ್ಮಲ್ಲಿ ಹೆಚ್ಚು. ಪುರುಷನ ವೀರ್ಯಾಣು ಮತ್ತು ಹೆಣ್ಣಿನ ಅಂಡಾಣು ಸಹಜವಾಗಿ ಹೆಣ್ಣಿನ ಗರ್ಭಕೋಶದಲ್ಲಿ ಸಂಧಿಸಿ ಫಲಿತವಾಗದಿರುವಂತಹ ದೈಹಿಕ ಪರಿಸ್ಥಿತಿಯಲ್ಲಿ, ಅದೇ ಕ್ರಿಯೆಯನ್ನು ಪ್ರಯೋಗಾಲಯದಲ್ಲಿ ವಿವಿಧ ತಂತ್ರಗಳ ಮೂಲಕ ಸಾಧಿಸಲು ಪ್ರಯತ್ನಿಸುವುದೇ
`ಬೆಂಬಲಿತ / ಸಂತಾನೋತ್ಪಾದನೆ’ ಅಥವಾ ಅಸಿಸ್ಟೆಡ್ ರಿಪ್ರೊಡಕ್ಷನ್. ಪ್ರಯೋಗಾಲಯದಲ್ಲಿ ಗರ್ಭ ಕಟ್ಟುವಂತೆ ಮಾಡುವ ವಿವಿಧ ತಂತ್ರಜ್ಞಾನಗಳೇ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜೀಸ್ (ಎಆರ್‍ಟಿ). ವೈದ್ಯ ವಿಜ್ಞಾನದ ಈ ಕ್ಷೇತ್ರದಲ್ಲಿ ಭಾರತದಲ್ಲಿ ಅಗ್ರ ಪಂಕ್ತಿಯಲ್ಲಿರುವ ಬಹು ದೊಡ್ಡ ಹೆಸರೆಂದರೆ ಡಾ. ಕಾಮಿನಿ ಎ. ರಾವ್. ವೈದ್ಯೆ, ವೈದ್ಯ ವಿಜ್ಞಾನಿ, ಅಗ್ರಮಾನ್ಯ ಸಂಶೋಧಕಿ, ಸಂಸ್ಥೆಗಳ ನಿರ್ಮಾತೃ, ಶಿಕ್ಞಣ ತಜ್ಞೆಯಾಗಿ ಅವರ ಕೊಡುಗೆ ಅಸಾಧಾರಣ.
1953 ರ ಜುಲೈ 2 ರಂದು ಜನಿಸಿದ ಡಾ. ಕಾಮಿನಿ ರಾವ್ ಅವರ ಪ್ರೌಢ ಶಾಲಾ ಶಿಕ್ಷಣ ನಡೆದದ್ದು ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ. 1977 ರಲ್ಲಿ ಸೈಂಟ್ ಜಾನ್ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದ ನಂತರ, 1979 ರಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಉನ್ನತ ವ್ಯಾಸಂಗಕ್ಕಾಗಿ ಲಂಡನ್‍ನ ಕಿಂಗ್ಸ್ ಕಾಲೇಜ್ ಆಫ್ ಮೆಡಿಸನ್‍ಗೆ ತೆರಳಿದ ಅವರು ಪ್ರೊ. ಕೈಪ್ರೋಸ್ ನಿಕೊಲೈಡಿಸ್ ಅವರ ಮಾರ್ಗದರ್ಶನದಲ್ಲಿ ಫೀಟಲ್ ಇನ್‍ವೇಸಿವ್ ಥೆರಪಿಯಲ್ಲಿ ವಿಶೇಷ ಪ್ರಾವೀಣ್ಯ ಪಡೆದರು. ಅನಂತರ ಇಂಗ್ಲೆಂಡ್‍ನ ಮಿಡಲ್ಸ್‍ಬ್ರೋನಲ್ಲಿರುವ ಸೌತ್ ಕ್ಲೀವ್‍ಲ್ಯಾಂಡ್ ಆಸ್ಪತ್ರೆಯಲ್ಲಿ ಪ್ರೊ. ರೇ ಗ್ಯಾರೀ ಅವರ ಶಿಷ್ಯರಾಗಿ ಲೇಸರ್ ಶಸ್ತ್ರಚಿಕಿತ್ಸಾ ತಜ್ಞರಾದರು.
ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ ನಂತರ, ಪತಿ ಮತ್ತು ಮಕ್ಕಳೊಂದಿಗೆ ಅಲ್ಲಿಯೇ ನೆಲೆಸಿ, ತಮ್ಮ ವಿಶೇಷ ಆಸಕ್ತಿ, ಪರಿಣತಿಯ ಕ್ಷೇತ್ರದಲ್ಲಿಯೇ ಮುಂದುವರೆಯಬಹುದಿತ್ತು. ಆದರೆ ಭಾರತದಲ್ಲಿ ಇನ್ಫರ್ಟಿಲಿಟಿ ಸಮಸ್ಯೆಗೊಳಗಾಗಿ ಜೀವನವೇ ದುರ್ಭರವಾಗಿರುವ ಲಕ್ಷಾಂತರ ದಂಪತಿಗಳ ಕೊರಗು ಅವರಿಗೆ ತಿಳಿದಿತ್ತು. ತಮ್ಮೆಲ್ಲ ವಿಶಿಷ್ಟ ಜ್ಞಾನ, ಅನುಭವ, ತರಬೇತಿಗಳನ್ನು ಈ ಜನರ ಸಮಸ್ಯೆಯ ಪರಿಹಾರಕ್ಕಾಗಿ ವಿನಿಯೋಗಿಸುವ ನಿರ್ಧಾರಮಾಡಿದ ಡಾ. ಕಾಮಿನಿ ರಾವ್ ಬೆಂಗಳೂರಿಗೆ ಹಿಂದಿರುಗಿದರು.
ಡಾ. ಕಾಮಿನಿ ರಾವ್ ಅವರು ಬೆಂಗಳೂರಿಗೆ ಬಂದಾಗ ಸಂತಾನೋತ್ಪಾದನಾ ಚಿಕಿತ್ಸಾ ಕ್ಷೇತ್ರ ಆಶಾದಾಯಕವಾಗಿರಲಿಲ್ಲ. ಚಿಕಿತ್ಸಾ ಸೌಲಭ್ಯಗಳಾಗಲೀ, ಅದಕ್ಕೆ ಅಗತ್ಯವಾದ ತಂತ್ರಜ್ಞಾನವಾಗಲೀ, ಮೂಲಭೂತ ಸೌಕರ್ಯಗಳಾಗಲೀ ಹೇಳಿಕೊಳ್ಳುವಂತಿರಲಿಲ್ಲ. ತರಬೇತಿ ಪಡೆದ ವೈದ್ಯರ, ತಂತ್ರಜ್ಞರ ಕೊರತೆ ತೀವ್ರವಾಗಿತ್ತು. ಈ ಎಲ್ಲ ಸವಾಲುಗಳನ್ನೂ ಹಂತ ಹಂತವಾಗಿ ಎದುರಿಸುವ ದೃಢ ನಿರ್ಧಾರದಿಂದ, 1989 ರಲ್ಲಿ `Bangalore Assisted Conception Centre’ (BACC- Now Milann – ಮಿಲನ್ ) ಸಂತಾನೋತ್ಪಾದನಾ ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಿದರು. ಡಾ. ಕಾಮಿನಿ ರಾವ್ ಅವರ ಅವಿರತ ಶ್ರಮದಿಂದ ಈ ಮೂರು ದಶಕಗಳ ಅವಧಿಯಲ್ಲಿ, ಸಂತಾನೋತ್ಪಾದನಾ ಸಾಮಥ್ರ್ಯ ಹೀನತೆಯ ಚಿಕಿತ್ಸೆ ಅತ್ಯಂತ ಭದ್ರವಾದ ವೈಜ್ಞಾನಿಕ ತಳಹದಿಯ ಮೇಲೆ ಬೆಳೆದು ನಿಂತಿದೆ.
ಮಹಿಳೆ ಮತ್ತು ಪುರುಷರ ಇನ್ಫರ್ಟಿಲಿಟಿ ಸಮಸ್ಯೆಯನ್ನು ಅರ್ಥಮಾಡಿಕೊಂಡು, ಔಷಧ, ಶಸ್ತ್ರಚಿಕಿತ್ಸೆ, ಹಾರ್ಮೋನ್ ಚಿಕಿತ್ಸೆ, ಇನ್‍ವಿಟ್ರೋ ಫರ್ಟಿಲೈಸೇಷನ್ ಅಂತಹ ಸಹಾಯಕ ಸಂತಾನೋತ್ಪಾದನಾ ತಂತ್ರಜ್ಞಾನಗಳನ್ನು ಬಳಸಲು ಅಗತ್ಯವಾದ ಸಮಸ್ತ ಜಾಗತಿಕ ಮಟ್ಟದ ಪರಿಣಿತ ಸೇವೆಯನ್ನೂ ಈ ಕೇಂದ್ರದಲ್ಲಿ ಡಾ. ಕಾಮಿನಿ ರಾವ್ ಅವರು ಒದಗಿಸಿದ್ದಾರೆ. ಇನ್ಫರ್ಟಿಲಿಟಿಯ ವೈಜ್ಞಾನಿಕ ಮೌಲ್ಯಮಾಪನ, ಓವುಲೇಷನ್ ಇಂಡಕ್ಷನ್, ಇಂಟ್ರ ಯೂಟೆರಿನ್ ಇನ್‍ಸೆಮಿನೇಶನ್, ಇನ್‍ವಿಟ್ರೋ ಫರ್ಟಿಲೈಸೇಶನ್, ಇಂಟ್ರ ಸೈಟೋಪ್ಲಾಸ್ಮಿಕ್ ಸ್ಪೆರ್ಮ ಇಂಜೆಕ್ಷನ್, ಎಗ್ ಫ್ರೀಜಿಂಗ್, ಫ್ರೆಶ್ ಎಂಬ್ರಾಯೋ ಟ್ರಾನ್ಸ್‍ಫರ್, ಫ್ರೋಜನ್ ಎಂಬ್ರಾಯೋ ಟ್ರಾನ್ಸ್‍ಫರ್, ಪ್ರೀ ಇಂಪ್ಲಾಂಟೇಶನ್ ಜಿನೆಟಿಕ್ ಟೆಸ್ಟಿಂಗ್ ಮುಂತಾದ ಎಲ್ಲ ಸೌಲಭ್ಯಗಳೂ ಒಂದೇ ಸೂರಿನಡಿಯಲ್ಲಿ ದೊರೆಯುತ್ತದೆ. ಭಾರತದ ವಿವಿಧ ಭಾಗಗಳಿಂದಲೇ ಅಲ್ಲದೇ ಇಂಗ್ಲೇಂಡ್, ಅಮೆರಿಕ, ಆಗ್ನೇಯ ಏಷ್ಯಾ ಮತ್ತು ಮಧ್ಯ ಪ್ರಾಚ್ಯದ ದೇಶಗಳಿಂದ ಚಿಕಿತ್ಸೆಯ ನೆರವು ಕೋರಿ ದಂಪತಿಗಳು ಇಲ್ಲಿಗೆ ಬರುತ್ತಾರೆ. ಈ ಕೇಂದ್ರವನ್ನು ಸ್ಥಾಪಿಸಿದ ಎರಡೇ ವರ್ಷದಲ್ಲಿ ಸೆಮೆನ್ ಇಂಟ್ರ ಫೆಲ್ಲೋಪಿಯನ್ ಟ್ರಾನ್ಸ್‍ಫರ್ (ಎಸ್‍ಐಎಫ್‍ಟಿ) ಎಂಬ ತಂತ್ರವನ್ನು ರೂಪಿಸಿದ ಡಾ. ಕಾಮಿನಿ ರಾವ್ ಅವರು, ಅದನ್ನು ಬಳಸಿ ಭಾರತದ ಮೊಟ್ಟ ಮೊದಲ ಸಿಫ್ಟ್ ಮಗುವನ್ನು ಈ ಪ್ರಪಂಚಕ್ಕೆ ತರುವುದರಲ್ಲಿ ಯಶಸ್ವಿಯಾದರು. ಅದೇ ರೀತಿ ಇಂಟ್ರ ಸೈಟೋಪ್ಲಾಸ್ಮಿಕ್ ಸ್ಪೆರ್ಮ್ ಇಂಜೆಕ್ಷನ್ ತಂತ್ರವನ್ನು ಅಭಿವೃದ್ಧಿಪಡಿಸಿ ಅದರ ಬಳಕೆಯಿಂದ ಮೊಟ್ಟಮೊದಲ ಬಾರಿಗೆ ಮಗುವಿಗೆ ಜನ್ಮ ನೀಡುವಂತೆ ಮಾಡಿದ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ. ಇದರೊಂದಿಗೆ ದಕ್ಷಿಣ ಭಾರತದ ಮೊಟ್ಟಮೊದಲ ವೀರ್ಯ ಬ್ಯಾಂಕನ್ನೂ ಅವರ ಸ್ಥಾಪಿಸಿದರು.
ಡಾ. ಕಾಮಿನಿ ರಾವ್, ನಮ್ಮ ದೇಶದ ಸಾವಿರಾರು ಸಂತಾನಹೀನ ದಂಪತಿಗಳಿಗೆ ಭರವಸೆಯ ಬೆಳಕಷ್ಟೇ ಅಲ್ಲ, ಅತ್ಯುಷ್ಕøಷ್ಟ ಸಂಸ್ಥೆಗಳ ಸೃಷ್ಟಿಕರ್ತರೂ ಹೌದು. ಅವರ ಕನಸು, ದೂರದೃಷ್ಟಿಗಳಿಗೆ ಜೀವಂತ ನಿದರ್ಶನವೆಂದರೆ 1999 ರಲ್ಲಿ ಅವರು ಸ್ಥಾಪಿಸಿದ
ಇಂಟರ್ನ್ಯಾಷನಲ್ ಇನ್ಸಿಟಿಟ್ಯೂಟ್ ಫಾರ್ ಟ್ರೈನಿಂಗ್ ಅಂಡ್ ರಿಸರ್ಚ್ ಇನ್ ರಿಪ್ರೊಡಕ್ಟಿವ್ ಹೆಲ್ತ್’ ಸಂಸ್ಥೆ. ಮನುಷ್ಯರಲ್ಲಿ ಸಂತಾನೋತ್ಪಾದನೆ, ಸಂತಾನೋತ್ಪಾದನಾ ಸಾಮಥ್ರ್ಯ ಹೀನತೆ, ಭ್ರೂಣ-ತಾಯಿ ವೈದ್ಯವಿಜ್ಞಾನ ಮುಂತಾದ ಪ್ರಕಾರಗಳಲ್ಲಿ ಅರಿವಿನ ಪರಿಧಿಯನ್ನು ಸಂಶೋಧನೆಯ ಮೂಲಕ ವಿಸ್ತರಿಸುವುದು, ವಿಜ್ಞಾನಿಗಳು, ವೈದ್ಯರು, ತಂತಜ್ಞರು ಮುಂತಾದವರಿಗೆ ತರಬೇತಿ ನೀಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿತ್ತು. ಇನ್ಫರ್ಟಿಲಿಟಿಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಜ್ಞಾನಶಾಖೆಗಳಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಪದವಿ ಮತ್ತು ಪಿಎಚ್‍ಡಿ ಪಡೆಯುವ ಶಿಕ್ಷಣಾವಕಾಶ, ಸೌಲಭ್ಯಗಳು ಇಲ್ಲಿವೆ. ಇದರೊಂದಿಗೆ ಈ ಕ್ಷೇತ್ರದಲ್ಲಿನ ವೈದ್ಯರು, ತಂತ್ರಜ್ಞರಿಗೆ ಅಲ್ಪಾವಧಿ ಮತ್ತು ಮಧ್ಯಮಾವಧಿಯ ತರಬೇತಿ ಕೋರ್ಸ್‍ಗಳನ್ನೂ ಇಲ್ಲಿ ವ್ಯವಸ್ಥೆಗೊಳಿಸಲಾಗುತ್ತದೆ. ಇನ್‍ವಿಟ್ರೋ ಫರ್ಟಿಲೈಸೇಶನ್ ತಂತ್ರದಲ್ಲಿ ತರಬೇತಿ ನೀಡಿ, ಅದಕ್ಕೆ ಅಗತ್ಯ ಸೌಲಭ್ಯಗಳುಳ್ಳ ಪ್ರಯೋಗಾಲಯವನ್ನು ನಿರ್ಮಿಸುವ ಮಾರ್ಗದರ್ಶನವನ್ನೂ ನೀಡುವ ದೇಶದ ಕೆಲವೇ ಸಂಸ್ಥೆಗಳಲ್ಲಿ ಇದು ಮುಂಚೂಣಿಯಲ್ಲಿದೆ. 2003-2018 ರ ಅವಧಿಯಲ್ಲಿ ಇಲ್ಲಿ ತರಬೇತಿ ಪಡೆದ 560 ವೈದ್ಯರು ಇಂದು ದೇಶದ ವಿವಿಧ ಭಾಗಗಳ ಫರ್ಟಿಲಿಟಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತಿದ್ದಾರೆ.
ಸದಾಕಾಲ ಹೊಸ ಸಂಶೋಧನೆ, ಹೊಸ ಸಾಧ್ಯತೆ, ಹೊಸ ಸೇವೆಗಳ ಬಗ್ಗೆ ಚಿಂತಿಸುವ ಡಾ. ಕಾಮಿನಿ ರಾವ್, ಇದೀಗ ಡೌನ್ಸ್ ಸಿಂಡ್ರೋಮ್, ತಲಸ್ಸೆಮಿಯಾ ಮುಂತಾದ ಜೀನೀಯ ಕಾಯಿಲೆಗಳನ್ನು ಗರ್ಭದ ಹಂತದಲ್ಲೇ ಪತ್ತೆ ಹಚ್ಚುವ ಸುಸಜ್ಜಿತ ಪ್ರಯೋಗಶಾಲೆಯ ಸೌಲಭ್ಯಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿದ್ದಾರೆ. ಇಂತಹ ಸೌಲಭ್ಯಗಳು ದೇಶದ ಎಲ್ಲ ಸಣ್ಣಪುಟ್ಟ ನಗರ, ಪಟ್ಟಣಗಳಲ್ಲೂ ದೊರೆಯಬೇಕೆಂಬುದು ಅವರ ದೂರದ ಕನಸು.
ಕಾಮಿನಿ ಕೇರ್ಸ್ ಫೌಂಡೇಶನ್, ಡಾ. ಕಾಮಿನಿ ರಾವ್ ಅವರು ಬಹಳ ಆಸ್ಥೆಯಿಂದ ಕಟ್ಟಿ ಬೆಳೆಸಿz ಉದಾತ್ತ ಧ್ಯೇಯ, ಗುರಿಗಳ ಮತ್ತೊಂದು ಸಂಸ್ಥೆ. ಹೆಣ್ಣು ಮಗು ಮತ್ತು ಮಹಿಳೆಯರ ಜೀವನವನ್ನು ಸುಧಾರಿಸಿ, ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣವನ್ನು ಸಾಧಿಸುವ ಪ್ರಾಮಾಣಿಕ ಪ್ರಯತ್ನ ಈ ಸಂಸ್ಥೆಯ ಉದ್ದೇಶ. ಮಹಿಳೆಯರಲ್ಲಿ ಸುಪ್ತವಾಗಿರುವ ವಿವಿಧ ಸಾಮಥ್ರ್ಯಗಳನ್ನು ಗುರುತಿಸಿ, ಪೋಷಿಸಿ, ಉನ್ನತೀಕರಿಸಿ, ಅವುಗಳ ನೆರವಿನಿಂದ ಭದ್ರವಾದ ಬದುಕನ್ನು ಕಟ್ಟಿಕೊಳ್ಳುವ ಸಾಮಥ್ರ್ಯವನ್ನು ಬೆಳೆಸುವ ಕೆಲಸದಲ್ಲಿ ಈ ಸಂಸ್ಥೆ ನಿರತವಾಗಿದೆ. ಮಹಿಳಾ ಸಬಲೀಕರಣದ ವಿವಿಧ ಪ್ರಯತ್ನಗಳಲ್ಲಿ ಆರ್ಥಿಕ ಸಾಮಥ್ರ್ಯ ಅಭಿವೃದ್ಧಿಗೆ ಕೊಟ್ಟಷ್ಟೇ ಆದ್ಯತೆಯನ್ನು ಮಹಿಳೆಯ ಆರೋಗ್ಯ ರಕ್ಷಣೆಗೆ ನೀಡಬೇಕೆಂಬ ಡಾ. ಕಾಮಿನಿ ರಾವ್ ಅವರ ಪ್ರಾಮಾಣಿಕ ಕಳಕಳಿ ಈ ಸಂಸ್ಥೆಯ ಎಲ್ಲ ಚಟುವಟಿಕೆಗಳಲ್ಲಿ ಅಂತರ್ಗತವಾಗಿದೆ.
ಡಾ. ಕಾಮಿನಿ ರಾವ್, ಸಹಾಯಕ ಸಂತಾನೋತ್ಪಾದನಾ ಕ್ಷೇತ್ರದಲ್ಲಿ ಹೊಸ ದಾರಿಗಳನ್ನು ಅನ್ವೇಶಿಸಿದ ಪ್ರಥಮಾನ್ವೇಷಕ ಪರಿಣಿತೆ. ರಿಪ್ರೊಡಕ್ಟಿವ್ ಎಂಡೋಕ್ರಿನಾಲಜಿ, ಒವೇರಿಯನ್ ಫಿಸಿಯಾಲೊಜಿ ಮತ್ತು ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ ಅವರ ಪ್ರಧಾನ ಆಸಕ್ತಿಯ ಕ್ಷೇತ್ರಗಳು. ಭಾರತ ಸರ್ಕಾರದ ವಿವಿಧ ಮಂತ್ರಾಲಯಗಳೂ ಸೇರಿದಂತೆ, ಈ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿರುವ ಎಲ್ಲ ಸಂಘ, ಸಂಸ್ಥೆ, ಸಂಶೋಧನಾಲಯ, ಒಕ್ಕೂಟ, ವೃತ್ತಿ ನಿರತ ಸಮುದಾಯಗಳಿಗೂ ಅವರು ಮಾರ್ಗದರ್ಶನ ನೀಡಿದ್ದಾರೆ. ಅನೇಕ ಪ್ರತಿಷ್ಠ್ಟಿತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಸಭೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇವುಗಳಲ್ಲಿ ಕೆಲವು ಮುಖ್ಯವಾದವುಗಳೆಂದರೆ ಪ್ರಸೂತಿ ಮತ್ತು ಸ್ತ್ರೀರೋಗ ವಿಜ್ಞಾನದ ಸಂಘಗಳ ಭಾರತೀಯ ಒಕ್ಕೂಟದ ಅಧ್ಯಕ್ಷತೆ (2000-2001), ಭಾರತೀಯ ಸಹಾಯಕ ಸಂತಾನೋತ್ಪಾದನಾ ಸಂಘದ ಅಧ್ಯಕ್ಷತೆ (2006-2008), ಸಹಾಯಕ ಸಂತಾನೋತ್ಪಾದನಾ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯತ್ವ, ನ್ಯಾಷನಲ್ ಅಪೆಕ್ಸ್ ಕಮಿಟಿ ಫಾರ್ ಸ್ಟೆಮ್ ಸೆಲ್ ರಿಸರ್ಚ್ ಅಂಡ್ ಥೆರಪಿಯ ಸದಸ್ಯತ್ವ, ಪ್ರಸೂತಿ ಮತ್ತು ಸ್ತ್ರೀರೋಗ ವಿಜ್ಞಾನದ ಅಂತಾರಾಷ್ಟ್ರೀಯ ಒಕ್ಕೂಟದಲ್ಲಿ ವಿಮೆನ್ಸ್ ಸೆಕ್ಷುಯಲ್ ಅಂಡ್ ರಿಪ್ರೊಡಕ್ಟಿವ್ ರೈಟ್ಸ್ ಸಮಿತಿಯ ಅಧ್ಯಕ್ಷತೆ (2006-2009) ಪ್ರಸೂತಿ ಮತ್ತು ಸ್ತ್ರೀರೋಗ ವಿಜ್ಞಾನದ ಅಂತಾರಾಷ್ಟ್ರೀಯ ಒಕ್ಕೂಟಕ್ಕೆ ಭಾರತದ ಪ್ರತಿನಿಧಿ (2003-2006) ಇತ್ಯಾದಿಗಳು.
ಇವುಗಳ ಜೊತೆಗೆ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಅತಿ ಹೆಚ್ಚಿನ ಆದ್ಯತೆ ನೀಡಿರುವ ಡಾ. ಕಾಮಿನಿ ರಾವ್ ಅವುಗಳಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಲ್ಲಿ ಸದಾಕಾಲ ಸಕ್ರಿಯವಾಗಿ ಭಾಗವಹಿಸಿ, ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಜರ್ನಲ್ ಆಫ್ ಹ್ಯೂಮನ್ ರಿಪ್ರೊಡಕ್ಷನ್ ಸೈನ್ಸ್ ನ ಮುಖ್ಯ ಸಂಪಾದಕರಾಗಿ, ಇಂಟರ್ ನ್ಯಾಷನಲ್ ಜರ್ನಲ್ ಆಫ್ ಇನ್ಫರ್ಟಿಲಿಟಿ ಅಂಡ್ ಫೀಟಲ್ ಮೆಡಿಸನ್ ನ ಸಂಸ್ಥಾಪಕ ಸಂಪಾದಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ (2009-2012), ಸಿಂಡಿಕೇಟ್ ಸದಸ್ಯರಾಗಿ (2015-2018) ಕೆಲಸ ಮಾಡಿದ್ದಾರೆ. ಕಳೆದ ಮೂರು ದಶಕಗಳ ಅವಧಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ 45 ಪಠ್ಯಪುಸ್ತಕಗಳು, ಪಠ್ಯ ಪುಸ್ತಕಗಳಲ್ಲಿನ ಅಧ್ಯಾಯಗಳನ್ನು ಬರೆದಿರುವುದರ ಜೊತೆಗೆ ತಮ್ಮ ಅನೇಕ ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜರ್ನಲ್‍ಗಳಲ್ಲಿ ಪ್ರಕಟಿಸಿದ್ದಾರೆ.
ಸಂತಾನೋತ್ಪಾದನಾ ಸಾಮಥ್ರ್ಯ ಹೀನತೆಯ ಸಮಸ್ಯೆಗೆ ಪರಿಹಾರವನ್ನರಸಿ ಬರುವ ದಂಪತಿಗಳಿಗೆ ಡಾ. ಕಾಮಿನಿ ರಾವ್ ಭರವಸೆಯ ಬೆಳ್ಳಿ ಕಿರಣವೇನೋ ಹೌದು. ಆದರೆ ಡಾ. ಕಾಮಿನಿ ರಾವ್ ಹಾಗೂ ಅವರ ತಂಡದಲ್ಲಿರುವ ವೈದ್ಯರಿಗೆ ತಮ್ಮ ಸಾಮಥ್ರ್ಯ ಮತ್ತು ಇತಿಮಿತಿಗಳ ಅರಿವಿದೆ. ಸಹಾಯಕ ಸಂತಾನೋತ್ಪಾದನೆಯ ಯಾವ ತಂತ್ರವೂ, ಎಲ್ಲ ಸಂದರ್ಭಗಳಲ್ಲೂ ನೂರಕ್ಕೆ ನೂರರಷ್ಟು ಯಶಸ್ವಿಯಾಗುವ ಸಾಧ್ಯತೆಯಿಲ್ಲ ಎಂಬ ವಸ್ತು ಸ್ಥಿತಿಯನ್ನು ದಂಪತಿಗಳಿಗೆ ತಿಳಿಸುತ್ತಾರೆ. ಆದರೆ ವಿಜ್ಞಾನ, ತಂತ್ರಜ್ಞಾನಗಳ ನೆರವಿನಿಂದ ಸರ್ವ ಸಮಸ್ತ ಪ್ರಯತ್ನಗಳನ್ನೂ ಪ್ರಾಮಾಣಿಕವಾಗಿ ಮಾಡುತ್ತಾರೆ. ಚಿಕಿತ್ಸೆ ಫಲಿಸಿ, ಬೆಳಕಿನ ಕುಡಿ ಧರೆಗೆ ಬಂದಾಗ, ‘ಮಿಲನ’ದ ಇಡೀ ಬಳಗವೇ ಸಂಭ್ರಮಿಸುತ್ತದೆ.
ಡಾ. ಕಾಮಿನಿ ರಾವ್ ಅವರ ಅಸಾಧಾರಣ ಸೃಜನಶೀಲ ಕೊಡುಗೆಗಳಿಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹೈದರಾಬಾದ್‍ನ ವಿವೇಕಾನಂದ ಇನ್ಸಿಟಿಟ್ಯೂಟ್ ಆಫ್ ಹ್ಯೂಮನ್ ಎಕ್ಸಲೆನ್ಸ್ ಸಂಸ್ಥೆಯ ಜೀವಮಾನ ಸಾಧನೆಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಬಿ ಸಿ. ರಾಯ್ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ. 68 ರ ಹರೆಯದ, ಈ ಅಸಾಧಾರಣ ಕ್ರಿಯಾಶೀಲ ಸಾಧಕಿ ಪಡೆದಿರುವ ಈ ಎಲ್ಲ ಪ್ರಶಸ್ತಿಗಳಿಗೆ ಮುಕುಟ ಪ್ರಾಯದಂತೆ, 2014 ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.
ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.