ಪ್ರಜಾವಾಣಿಗೆ ಎಪ್ಪತ್ತು: ನೆನಪುಗಳ ಸಂಪತ್ತು – ಕುಶಲಾ ಡಿಮೆಲೊ

ಕನ್ನಡನಾಡಿನ ಸಾಕ್ಷಿಪ್ರಜ್ಞೆಯಾದ `ಪ್ರಜಾವಾಣಿ’ ದಿನಪತ್ರಿಕೆ ಆರಂಭವಾಗಿ ಈ ಅಕ್ಟೋಬರ್   15  ಕ್ಕೆ ಎಪ್ಪತ್ತು ವರ್ಷ. ಈ ಸುದ್ದಿಮನೆಗೆ ಕಾಲಿಟ್ಟ ಪ್ರಥಮ ಮಹಿಳೆ ಕುಶಲಾ ಡಿಮೆಲೊ ಅವರಿಗೆ ಈಗ ಎಂಬತ್ತೇಳು ವರ್ಷ. ನೆನಪಿನ ಓಣಿಯಲ್ಲಿ ಅವರು ಹಾಕಿದ ಹತ್ತು ಹೆಜ್ಜೆಗಳ ಮುದ ಇಲ್ಲಿದೆ.

ಬೆಂಗಳೂರಿನ ದಂಡುಪ್ರದೇಶದಲ್ಲಿದ್ದ ಮಹಾತ್ಮ ಗಾಂಧಿ ರಸ್ತೆಗೆ ಆಗ `ಸೌತ್ ಪರೇಡ್’ ರಸ್ತೆ ಎಂದು ಹೆಸರಿತ್ತು. ಬ್ರಿಟಿಷ್ ಅಧಿಕಾರಿಗಳು ಮತ್ತು ಅವರ ಸಂಬಂಧಿಕರಿಗೆ ಸುತ್ತಾಡಲು ಅದು ಮೆಚ್ಚಿನ ರಸ್ತೆಯಾಗಿತ್ತು. ಆ ರಸ್ತೆಯಲ್ಲಿ ಹೋಟೆಲ್‍ಗಳು, ಸಿನಿಮಾ ಮಂದಿರಗಳು, ಕಚೇರಿ ಕಟ್ಟಡಗಳು ರಾರಾಜಿಸುತ್ತಿದ್ದವು. ಅದೇ ರಸ್ತೆಯಲ್ಲಿ `ಫನಲ್ಸ್’ ಎಂಬ ಒಂದು ಹೋಟೆಲ್ ಆಗ ಜನಪ್ರಿಯವಾಗಿತ್ತು. ಅದು ಇದ್ದ ದೊಡ್ಡ ಕಟ್ಟಡವನ್ನು ಗುರುಸ್ವಾಮಿಯವರು ಆ ಕಾಲಕ್ಕೆ `ಅಬ್ಬಬ್ಬಾ’ ಅನ್ನುವಷ್ಟು ಹಣ ಕೊಟ್ಟು ಹರಾಜಿನಲ್ಲಿ ಖರೀದಿಸಿದರು. ಮುಂದೆ ಅದೇ `ಪ್ರಜಾವಾಣಿ’ ಪತ್ರಿಕೆಯ ಮುಖ್ಯ ಕಚೇರಿಯಾಯಿತು.

ಇಂಗ್ಲಿಷ್ ಪತ್ರಿಕೆ ಪ್ರಾರಂಭಿಸಿ ಗಳಿಸಿಕೊಂಡ ಆತ್ಮವಿಶ್ವಾಸದಿಂದ, ವಿಶ್ವಾಸಾರ್ಹತೆಯಿಂದ ಪ್ರೇರಣೆ ಪಡೆದು `ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ ಕನ್ನಡದಲ್ಲಿ ಹೊಸ ಪತ್ರಿಕೆ ಶುರುಮಾಡಲು ತೀರ್ಮಾನಿಸಿತು. ಇಂಗ್ಲಿಷ್ ಪತ್ರಿಕೆ ನಗರದ ಓದುಗರಿಗಾದರೆ, ಗ್ರಾಮೀಣ ಪ್ರದೇಶದಲ್ಲಿರುವ ಅಪಾರ ಓದುಗರಿಗೆ ಕನ್ನಡ ಭಾಷೆಯಲ್ಲಿ ಒಂದು ಪತ್ರಿಕೆ ಆರಂಭಿಸುವುದು ಸೂಕ್ತ ಎಂದು ಭಾವಿಸಲಾಯಿತು. ಅದರಂತೆ 1948ರ ಅಕ್ಟೋಬರ್ 15 ರಂದು `ಪ್ರಜಾವಾಣಿ’ ಕನ್ನಡ ದಿನಪತ್ರಿಕೆ ಜನ್ಮ ತಾಳಿತು. ಅದಾದ ಎರಡು ವರ್ಷಗಳಲ್ಲಿ ಈ ಪತ್ರಿಕೆಯಲ್ಲಿ ನಾನೂ ಕೆಲಸಕ್ಕೆ ಸೇರುವಂತಾದದ್ದು ನನ್ನ ಪಾಲಿನ ಸುಕೃತ.

ನನ್ನ ತಂದೆ ಡೇವಿಡ್ ಆನಂದ ಪರ್ಲ್ ಅವರು ಮೈಸೂರು ಮಹಾರಾಜರ ಆಡಳಿತದ ಸೇವೆಯಲ್ಲಿದ್ದರು. ನಾನು ಎರಡು ವರ್ಷದ ಮಗುವಾಗಿದ್ದಾಗಲೇ ನಮ್ಮ ದುರದೃಷ್ಟದಿಂದ ಅವರು ತೀರಿಕೊಂಡರು. ನನ್ನ ತಾಯಿ ಲೀಲಾವತಿ ಆಗ ವಿಮೆನ್ಸ್ ಆಕ್ಸಿಲರಿ ಕೋರ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ನನ್ನ ಅಕ್ಕ ಲಲಿತಾ (ಲಲ್ಲು) ಮತ್ತು ನಾನು-ಇಬ್ಬರು ಹೆಣ್ಣುಮಕ್ಕಳು. ನಾನು ಹುಟ್ಟಿದ್ದು 1931ರ ನವೆಂಬರ್ 15 ರಂದು. ನಮ್ಮ ತಂದೆ ತೀರಿಕೊಂಡ ಮೇಲೆ ನನ್ನ ಮತ್ತು ಅಕ್ಕನ ಜವಾಬ್ದಾರಿಯನ್ನು ನಮ್ಮ ಸೋದರಮಾವ ಸ್ಯಾಮುಯಲ್ ದೇವರತ್ನ ಅವರು ವಹಿಸಿಕೊಂಡಿದ್ದರು. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ಮಿಡ್ಲ್ ಸ್ಕೂಲ್ ಓದುತ್ತಿದ್ದೆವು. ನಂತರ ಬೆಂಗಳೂರಿನ ಲಂಡನ್ ಮಿಷನ್ (ಈಗ ಮಿತ್ರಾಲಯ ಗರ್ಲ್ಸ್‌ ಹೈಸ್ಕೂಲ್) ಬೋರ್ಡಿಂಗ್ ಶಾಲೆಗೆ ಸೇರಿದೆವು. ನಾನು ಈ ಶಾಲೆಯಲ್ಲಿ ವಿದ್ಯಾರ್ಥಿನಿಯಾಗಿದ್ದಾಗಲೇ ದೇಶಕ್ಕೆ ಸ್ವಾತಂತ್ರ್ಯ ಬಂತು. ಅಂದು ಮಧ್ಯರಾತ್ರಿ ಹನ್ನೆರಡು ಗಂಟೆಗೆ ನಮ್ಮೆಲ್ಲರನ್ನೂ ಎಬ್ಬಿಸಿ, ಶಾಲೆಯ ಅಂಗಳದಲ್ಲಿ ಸೇರಿಸಿದರು. ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯ ಸಂಭ್ರಮ ಆಚರಿಸಿದ್ದು ನನಗೆ ಈಗಲೂ ನೆನಪಿನಲ್ಲಿ ಉಳಿದಿದೆ.

ನಾನು ಎಸ್ಸೆಸ್ಸೆಲ್ಸಿ ಮುಗಿಸಿ ಇಂಟರ್ ಮೀಡಿಯೆಟ್ ತರಗತಿಗೆ ಮಹಾರಾಣಿಯವರ ಕಾಲೇಜು ಸೇರಿಕೊಂಡೆ. ಆ ಹೊತ್ತಿಗೆ ನಮ್ಮ ನೆಂಟರು, ಸ್ನೇಹಿತರು ಎಲ್ಲರಿಗೆ `ಡೆಕ್ಕನ್ ಹೆರಾಲ್ಡ್’ ಮತ್ತು `ಪ್ರಜಾವಾಣಿ’ ಪತ್ರಿಕೆಗಳ ಪರಿಚಯವಿತ್ತು. ವಿದ್ಯಾರ್ಥಿನಿಯರಾದ ನಾವೂ ಅವುಗಳನ್ನು ಓದುತ್ತಿದ್ದೆವು. `ಪ್ರಜಾವಾಣಿ’ ಅಕೌಂಟ್ಸ್ ವಿಭಾಗದಲ್ಲಿ ನಮ್ಮ ಕುಟುಂಬಕ್ಕೆ ಪರಿಚಿತರಾದ ಮ್ಯಾಥ್ಯೂ ಅವರೂ ಇದ್ದರು. ಅವರನ್ನು ನೋಡಲು ನಾನು ಮತ್ತು ಅಕ್ಕ ಲಲ್ಲು ಆಗಾಗ `ಪ್ರಜಾವಾಣಿ’ ಕಚೇರಿಗೆ ಹೋಗುತ್ತಿದ್ದೆವು. ಆ ಭೇಟಿಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಖಾದ್ರಿ ಶಾಮಣ್ಣ, ಇ.ಆರ್. ಸೇತೂರಾಂ ಮುಂತಾದವರ ಪರಿಚಯವೂ ಆಗಿತ್ತು.

ಮಹಾತ್ಮ ಗಾಂಧಿ ರಸ್ತೆಯಲ್ಲಿದ್ದ `ಫನಲ್ಸ್’ ಹೋಟೆಲ್ ಆಗ ದಂಡು ಪ್ರದೇಶದ ಸುತ್ತಮುತ್ತಲಿನ ಸುಶಿಕ್ಷಿತ ಜನರ ನೆಚ್ಚಿನ ತಾಣವಾಗಿತ್ತು. ಸಿಟಿಯಿಂದಲೂ ಯುವಜನರು ಅಲ್ಲಿಗೆ ಬರುತ್ತಿದ್ದರು. ಅದರಲ್ಲಿ ಇದ್ದ `ಡ್ಯಾನ್ಸ್ ಫ್ಲೋರ್’ಗೆ ಹೋಗಿ ಪಾಶ್ಚಾತ್ಯ ನೃತ್ಯ ಮಾಡುವುದು ಅಂದಿನ ಯುವಜನರಿಗೆ, ಅದರಲ್ಲೂ ಆಂಗ್ಲೋ ಇಂಡಿಯನ್ನರು, ಕ್ರೈಸ್ತ ಜನಾಂಗದ ಯುವಕ ಯುವತಿಯರಿಗೆ ಹಾಗೂ ಇತರರಿಗೆ ಬಹಳ ಉತ್ಸಾಹ ಮತ್ತು ಹೆಮ್ಮೆಯ ವಿಷಯವಾಗಿತ್ತು. ಎತ್ತರದ ಛಾವಣಿಯಿದ್ದ ಆ ಹೋಟೆಲ್‍ನ ವಾತಾವರಣವೇ ಉಲ್ಲಾಸಮಯವಾಗಿತ್ತು. ಕ್ರಿಸ್‍ಮಸ್ ಮತ್ತು ಹೊಸ ವರ್ಷದ ದಿನಗಳಲ್ಲಿ ಅಲ್ಲಿಗೆ ಹೋಗುವುದು ಖುಷಿ ಕೊಡುತ್ತಿತ್ತು. ಒಂದು ಹೊಸ ವರ್ಷದ ಡ್ಯಾನ್ಸ್ ಪಾರ್ಟಿಗೆ ನಾನೂ ಕೂಡ `ಫನಲ್ಸ್’ಗೆ ಹೋಗಿದ್ದೆ- ಮುಂದೆ ನನ್ನ ಬಾಳ ಸಂಗಾತಿ ಆಗಲಿದ್ದ `ಬಾಬ್’ ಜೊತೆಗೆ! ಆದರೆ ನಂತರ ಗುರುಸ್ವಾಮಿಯವರು ಆ ಕಟ್ಟಡವನ್ನು ಖರೀದಿಸುತ್ತಾರೆ, ಅದರಲ್ಲಿ ಪತ್ರಿಕೆಗಳನ್ನು ಆರಂಭಿಸುತ್ತಾರೆ, ಅದರಲ್ಲಿ ನಾನೂ ಕೆಲಸ ಮಾಡುತ್ತೇನೆ ಎಂಬುದನ್ನೆಲ್ಲಾ ಆಗ ಊಹಿಸಲು ನನಗೆ ಹೇಗೆ ತಾನೇ ಸಾಧ್ಯ?!

`ಡೆಕ್ಕನ್ ಹೆರಾಲ್ಡ್’ ಆರಂಭವಾದ ಕೇವಲ ನಾಲ್ಕು ತಿಂಗಳ ನಂತರ ಅಕ್ಟೋಬರ್‌ ನಲ್ಲಿ `ಪ್ರಜಾವಾಣಿ’ ಕನ್ನಡ ದಿನಪತ್ರಿಕೆ ಆರಂಭವಾಯಿತು. `ಪ್ರಜಾವಾಣಿ’ ಆರಂಭವಾದಾಗ ಅದರ ಸಂಪಾದಕ ಹುದ್ದೆಗೆ ಆಯ್ಕೆಗೊಂಡ ಪುಟ್ಟಸ್ವಾಮಯ್ಯ ಅವರು ಪತ್ರಿಕೆಯಲ್ಲಿ ಅನೇಕ ವಿಭಾಗಗಳನ್ನು, ಸ್ಥಿರಶೀರ್ಷಿಕೆಗಳನ್ನು ಶುರುಮಾಡಿದರು. ಒಂದು ದಿನಪತ್ರಿಕೆಗೆ ಇರಬೇಕಾದ ಸುಂದರ ಚೌಕಟ್ಟನ್ನು ಅದಕ್ಕೆ ಕೊಟ್ಟರು. ಅವರೇ `ಪಾನ್ ಸುಪಾರಿ’ ಎಂಬ ಅಂಕಣವನ್ನು ಬರೆದು ದೈನಂದಿನ ಬೆಳವಣಿಗೆಗಳ ಮೇಲೆ ಟೀಕೆ, ಟಿಪ್ಪಣಿ ಮಾಡುತ್ತಿದ್ದರು ಎಂಬುದೂ ಅನೇಕ ಹಳಬರ ನೆನಪಿನಲ್ಲಿ ಉಳಿದಿದೆ.

ಸಮಾಜವಾದಿ ಚಳವಳಿಯಲ್ಲಿ ನಿರತರಾಗಿದ್ದ ಸಿ.ಜಿ.ಕೆ. ರೆಡ್ಡಿ ಅವರು `ದಿ ಪ್ರಿಂಟರ್ಸ್ (ಮೈಸೂರು) ಪ್ರೈವೆಟ್ ಲಿಮಿಟೆಡ್’ ಸಂಸ್ಥೆಯ ಜನರಲ್ ಮ್ಯಾನೇಜರ್ ಆಗಿ ಬಂದಿದ್ದರು. ಖಾದ್ರಿ ಶಾಮಣ್ಣ `ಪ್ರಜಾವಾಣಿ’ ಸೇರಿದ್ದರು. ಬಿ.ಎಸ್. ರಾಮರಾವ್, ಟಿ.ಎಸ್. ರಾಮಚಂದ್ರರಾವ್ ಮೊದಲಾದವರು `ಡೆಕ್ಕನ್ ಹೆರಾಲ್ಡ್’ನಿಂದ ಕನ್ನಡ ಪತ್ರಿಕೆಗೆ ಬಂದಿದ್ದರು. ಈ ನಡುವೆ ನಮಗೆ ಪರಿಚಿತರಾಗಿದ್ದ ಖಾದ್ರಿ ಶಾಮಣ್ಣ ಒಂದು ದಿನ ನಮ್ಮ ಮನೆಗೆ ಬಂದರು. ಖಾಲಿಯಾಗಿರುವ ಈ ಕೆಲಸಕ್ಕೆ ನಾನು ಅಥವಾ ನನ್ನ ಅಕ್ಕ ಇಬ್ಬರಲ್ಲಿ ಯಾರಾದರೂ ಅರ್ಜಿ ಹಾಕಿಕೊಳ್ಳಬಹುದಲ್ಲ ಎಂದು ಸಲಹೆ ಮಾಡಿದರು. ನನ್ನ ಅಕ್ಕ ಲಲ್ಲು ಅದಾಗಲೇ ಶಾಲೆಯೊಂದರಲ್ಲಿ ಶಿಕ್ಷಕಿಯ ಕೆಲಸಕ್ಕೆ ಸೇರಿದ್ದಳು. ನಾವು ಆ ಸಂದರ್ಭದಲ್ಲಿ ಸ್ವಲ್ಪ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೆವು. ಆಗ ನಾನು ಮಹಾರಾಣಿ ಕಾಲೇಜಿನಲ್ಲಿ ಪದವಿ ತರಗತಿಗೆ ಸೇರಿದ್ದೆ. ಓದು ಮುಂದುವರೆಸಲು ನನಗೆ ಎಷ್ಟೇ ಇಷ್ಟವಿದ್ದರೂ ಕುಟುಂಬಕ್ಕೆ ನೆರವಾಗುವ ಅನಿವಾರ್ಯತೆ ಇತ್ತು. ಆದ್ದರಿಂದ ಕಾಲೇಜು ಓದುವುದನ್ನು ಬಿಟ್ಟು, ನಾನೇ ಈ ಕೆಲಸಕ್ಕೆ ಏಕೆ ಪ್ರಯತ್ನಿಸಬಾರದು ಎಂದು ಯೋಚಿಸಿದೆ.

1951ರ ಏಪ್ರಿಲ್ 19ರಂದು ಬೆಳಿಗ್ಗೆ ನನ್ನ ತಾಯಿಯೊಂದಿಗೆ `ಪ್ರಜಾವಾಣಿ’ ಕಚೇರಿಗೆ ಹೋದೆ. ಕೆಲಸಕ್ಕೆ ಸೇರುವ ಪ್ರಥಮ ಯತ್ನ ಇದಾಗಿತ್ತು. ಆದ್ದರಿಂದ ನನ್ನ ಮನಸ್ಸಿನಲ್ಲಿ ವಿಪರೀತ ಅಳುಕು ತುಂಬಿತ್ತು. ಮೆಟ್ಟಿಲುಗಳನ್ನೇರಿ ಮರದ ಬಾಗಿಲು ತಳ್ಳಿ ಒಳಗೆ ಹೋದೆವು. ಒಂದು ಹಾಲ್‍ನಲ್ಲಿ ಮಧ್ಯೆ ಇಟ್ಟಿದ್ದ ಮೇಜಿನ ಸುತ್ತ ನಾಲ್ಕೈದು ಮಂದಿ ಕುಳಿತಿದ್ದರು. `ಸಂಪಾದಕರನ್ನು ಕಾಣಲು ಬಂದಿದ್ದೇವೆ’ ಎಂದು ಹೇಳಿದೆ. ಪಕ್ಕದ ಚೇಂಬರ್ ತೋರಿಸಿ, `ಒಳಗಿದ್ದಾರೆ ಹೋಗಿ’ ಎಂದರು.

`ಸಂಪಾದಕರು’ ಎಂದರೆ ಹೇಗಿರುತ್ತಾರೆ? ನನಗೆ ಬೇರೆ ಏನೋ ಕಲ್ಪನೆಯಿತ್ತು. ಸಾಕಷ್ಟು ಅನುಭವಸ್ಥರಾದ, ತಲೆನರೆತ ಹಿರಿಯರೊಬ್ಬರು ಅಲ್ಲಿ ಕುಳಿತಿರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಚೇಂಬರ್‌ ನೊಳಗೆ ನನಗೆ ಕಂಡಿದ್ದು ಸೂಟುಧಾರಿಯಾದ ಒಬ್ಬ ಸ್ಫುರದ್ರೂಪಿ ಯುವಕ. ನನಗೆ ಮುಜುಗರವಾಗಿ ಥಟ್ಟನೆ ಪಕ್ಕಕ್ಕೆ ತಿರುಗಿದೆ. ಅಲ್ಲಿದ್ದ ಕೊಂಚ ಹಿರಿಯರಂತೆ ಕಂಡ ವ್ಯಕ್ತಿಗೆ `ನಮಸ್ಕಾರ, ನಾನು ಇಂಟರ್‍ವ್ಯೂಗೆ ಬಂದಿದ್ದೇನೆ. ಖಾದ್ರಿ ಶಾಮಣ್ಣ ಅವರು ಈ ವಿಷಯ ಮಾತನಾಡಿದ್ದೇನೆ ಎಂದು ನನಗೆ ಹೇಳಿದ್ದಾರೆ’ ಎಂದೆ. ಆ ವೇಳೆಗೆ ಖಾದ್ರಿ ಅವರು `ಪ್ರಜಾವಾಣಿ’ ಬಿಟ್ಟಿದ್ದರೂ ನನ್ನ ಪರವಾಗಿ ಅಲ್ಲಿ ಶಿಫಾರಸ್ಸಿನ ಬಗ್ಗೆ ಮಾತನಾಡಿದ್ದರು.

`ನೋಡಿ, ಅವರೇ ಸಂಪಾದಕರು. ಅವರೊಂದಿಗೆ ಮಾತನಾಡಿ’ ಎಂದರು ಆತ. ಮತ್ತೆ ಸೂಟುಧಾರಿಯ ಬಳಿ ಹೋಗಿ, `ನಮಸ್ಕಾರ, ಇಂಟರ್‍ವ್ಯೂಗೆ ಬಂದಿದ್ದೇನೆ’ ಎಂದೆ. `ಕುಳಿತುಕೊಳ್ಳಿ’ ಎಂದರು. ತಕ್ಷಣ `ಕನ್ನಡ ಬರುತ್ತಾ’ ಎಂದು ಕೇಳಿದರು. `ಮನೆಯ ಭಾಷೆ ಕನ್ನಡ, ಕಾಲೇಜಿನಲ್ಲಿಯೂ ಸೆಕೆಂಡ್ ಲ್ಯಾಂಗ್ವೇಜ್ ಕನ್ನಡ’ ಎಂದೆ. ಹೆಸರು ಕೇಳಿದೊಡನೆ `ಕ್ರಿಶ್ಚಿಯನ್ನಾ’ ಎಂದರು, ಹೌದು ಎಂದೆ. `ಹೇಗೆ ಬಂದಿದ್ದೀರಿ’ ಎಂದು ಕೇಳಿದರು. `ನನ್ನ ತಾಯಿ ಜೊತೆಗೆ ಬಂದಿದ್ದಾರೆ, ಬಸ್ಸಿನಲ್ಲಿ ಬಂದೆವು’ ಎಂದೆ. `ಓ.. ಒಂದು ವೇಳೆ ನಿಮಗೆ ಕೆಲಸ ಸಿಕ್ಕರೆ ದಿನವೂ ನಿಮ್ಮ ತಾಯಿಯ ಜೊತೆಯೇ ಬರುವಿರಾ!’ ಎಂದು ಚಟಾಕಿ ಹಾರಿಸಿದರು. ನಾನು ನಕ್ಕೆ- ಅವರೂ ನಕ್ಕರು. ನನ್ನ ಭಯ ಕಡಿಮೆಯಾಗಿ ವಾತಾವರಣ ತಿಳಿಯಾಯಿತು.

`ಒಂದು ಅಪ್ಲಿಕೇಷನ್ ಬರೆದು ಕೊಡಿ’ ಎಂದರು. ನನ್ನ ಕನ್ನಡ ಭಾಷೆಯ ಬಗ್ಗೆ ಅವರಿಗೆ ಏಕೋ ಸಂದೇಹವಿದ್ದಂತೆ ತೋರಿತು. ಆದರೆ ಒಂದು ವಾರದ ನಂತರ `ಕಮ್ ಅಂಡ್ ರಿಪೋರ್ಟ್ ಫಾರ್ ಡ್ಯೂಟಿ’ ಎಂಬ ಚುಟುಕು ಒಕ್ಕಣೆಯ ನೇಮಕಾತಿ ಪತ್ರ ಅಂಚೆಯಲ್ಲಿ ಮನೆಗೆ ಬಂತು. ಆ ನೇಮಕಾತಿ ಪತ್ರವನ್ನು ನಾನು ಈಗಲೂ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಮದುವೆಗೆ ಮುನ್ನ ಕ್ಯಾಥರೀನ್ ಕುಶಲಾ ಪರ್ಲ್ ಎಂಬುದು ನನ್ನ ಹೆಸರು. ಸಹೋದ್ಯೋಗಿಗಳು `ಕುಶಲಾಬಾಯಿ’ ಎಂದು ಸ್ನೇಹದಿಂದ ಬಾಯಿ ತುಂಬಾ ಕರೆಯಲಾರಂಭಿಸಿದರು! ಬರಬರುತ್ತ ನನಗೂ ಅದು ಇಷ್ಟವಾಯಿತು. ಹೀಗಾಗಿ ನಾನು `ಪ್ರಜಾವಾಣಿ’ಯಲ್ಲಿ ಕೇವಲ ಸಂಪಾದಕರ ಆಪ್ತ ಕಾರ್ಯದರ್ಶಿಯಾಗಿ ಟೈಪಿಂಗ್ ಕೆಲಸ ಮಾತ್ರ ಮಾಡುತ್ತ ಉಳಿಯಲಿಲ್ಲ. ಸಂಪಾದಕೀಯ ವಿಭಾಗದ ಇತರ ಕೆಲಸಗಳನ್ನೂ ಕಲಿಯತೊಡಗಿದೆ.

`ಪ್ರಜಾವಾಣಿ’ ಬಹಳ ಹೆಮ್ಮೆಯಿಂದ ಸಾಪ್ತಾಹಿಕ ಪುರವಣಿ ಆರಂಭಿಸಿತು. ಆ ವೇಳೆಗೆ ಪತ್ರಿಕೆ ಸೇರಿದ್ದ ಬಿ.ವಿ. ವೈಕುಂಠರಾಜು ಅವರು ನಂತರ ಸಾಪ್ತಾಹಿಕ ಪುರವಣಿ ವಿಭಾಗವನ್ನು ವಹಿಸಿಕೊಂಡರು. ಆಗ ಅದರ ಮಕ್ಕಳ ವಿಭಾಗಕ್ಕೆ `ಕರ್ನಾಟಕದ ವೀರ ಮಹಿಳೆಯರು’ ಎಂಬ ಲೇಖನ ಸರಣಿಯನ್ನು ಅವರು ನನ್ನಿಂದ ಬರೆಸಿದರು, ನಾನು ಬರೆಯುತ್ತಿದ್ದುದನ್ನು ತಿದ್ದಿದರು, ಕಲಿಸಿದರು. ನಂತರ ಅವರ ಮಾರ್ಗದರ್ಶನದಲ್ಲಿ ಅನೇಕ ವರ್ಷಗಳ ಕಾಲ, ‘ಸಾಪ್ತಾಹಿಕ ಪುರವಣಿ’ಯ `ಬಾಲಭಾರತಿ’ ವಿಭಾಗದಲ್ಲಿ ಪ್ರಕಟವಾಗುವ ಬರಹಗಳನ್ನು ಮುದ್ರಣಕ್ಕೆ ಸಿದ್ಧಪಡಿಸುವ ಕೆಲಸವನ್ನು ನಾನು ಮಾಡಿದೆ.

ನಾನು `ಪ್ರಜಾವಾಣಿ’ ಸೇರಿದಾಗ ಆ ಕಾರ್ಯಾಲಯದಲ್ಲಿದ್ದ ಮಹಿಳೆ ನಾನೊಬ್ಬಳೇ. ಆದರೆ `ಡೆಕ್ಕನ್ ಹೆರಾಲ್ಡ್’ ನಲ್ಲಿ ಆಂಗ್ಲೋಇಂಡಿಯನ್ನರೂ ಸೇರಿ ಅನೇಕ ಹೆಣ್ಣುಮಕ್ಕಳು ಕೆಲಸ ಮಾಡುತ್ತಿದ್ದರು. ಅವರೆಲ್ಲರೊಂದಿಗೆ ನಾನು ತುಂಬಾ ಸ್ನೇಹದಿಂದ ಇರುತ್ತಿದ್ದೆ. ನಂತರ `ಸುಧಾ’ ಕಾರ್ಯಾಲಯಕ್ಕೆ ಲಲಿತಾ ಕುಪ್ಪು ಸ್ವಾಮಿ, ಎಂ.ಸಿ. ಪದ್ಮಾ ಸೇರಿದರು. ಮಮ್ತಾಜ್ ಎನ್ನುವವರೂ ಸ್ವಲ್ಪ ಕಾಲ ಕೆಲಸ ಮಾಡಿದರು. 1975ರಲ್ಲಿ ಕೆ. ವಿಜಯಶ್ರೀ `ಸುಧಾ’ ಪತ್ರಿಕೆಗೆ ಸೇರಿದರು. ಕೆ.ಎನ್. ಹರಿಕುಮಾರ್ ಅವರು ಪತ್ರಿಕೆಗಳ ಸಂಪಾದಕರಾದ ನಂತರ ಹೆಚ್ಚು ಮಂದಿ ಹೆಣ್ಣುಮಕ್ಕಳು `ಪ್ರಜಾವಾಣಿ’ ಪತ್ರಿಕಾಲಯವನ್ನು ಪ್ರವೇಶಿಸಿದರು.

ಬದುಕಿನಲ್ಲಿ ಎಲ್ಲರ ಕೆಲಸವೂ ಮುಖ್ಯ. ಎಲ್ಲರೂ ದುಡಿದರೆ ಏನನ್ನಾದರೂ ಸಾಧಿಸಬಹುದು ಎಂಬ ಸತ್ಯವನ್ನು ನನ್ನಂಥ ನೂರಾರು ಜನರಿಗೆ ಮನದಟ್ಟು ಮಾಡಿದ್ದು `ಪ್ರಜಾವಾಣಿ’ ಪತ್ರಿಕೆ. ಈಗ ಅದಕ್ಕೆ ಎಪ್ಪತ್ತು ವರ್ಷದ ಸಂಭ್ರಮ ಎನ್ನುವುದು ನನಗೆ ಅತೀವ ಸಂತಸ ತರುತ್ತಿದೆ.

ಕುಶಲಾ ಡಿಮೆಲೊ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *