ಪುಸ್ತಕ ಸಮಯ/ ಸಹನಾ ಹೇಳುವಂತೆ `ಇದು ಬರಿ ಮಣ್ಣಲ್ಲ’- ಎಲ್.ಸಿ. ಸುಮಿತ್ರಾ

ನಾಗರಿಕತೆಯ ಅಬ್ಬರಗಳು ಮತ್ತು ಸೌಲಭ್ಯಗಳಿಲ್ಲದ ಚಿಕ್ಕ ಹಳ್ಳಿಯಲ್ಲಿ ಮಣ್ಣು ಮರಗಿಡಗಳೊಂದಿಗೆ ಬದುಕನ್ನು ಸಮೀಕರಿಸಿಕೊಂಡ, ಅದರಲ್ಲೇ ಬದುಕಿನ ಅರ್ಥಗಳನ್ನು ಕಾಣುವ ಸಹನೆ ಸಾಧಿಸಿದ ಲೇಖಕಿ ಸಹನಾ ಕಾಂತಬೈಲು ಆನೆ ಸಾಕಲು ಹೊರಟ ದಿಟ್ಟೆ ಕೂಡ. ಅವರ ಪ್ರಬಂಧಗಳ ಸಂಕಲನ `ಇದು ಬರಿ ಮಣ್ಣಲ್ಲ’ ಎಷ್ಟೊಂದು ಸಂಗತಿಗಳತ್ತ ಕಣ್ಣು ಹಾಯಿಸುತ್ತದೆ ಎನ್ನುವುದೇ ಅಚ್ಚರಿ!

ಸಹನಾ ಕಾಂತಬೈಲು ಎಂಬ ಹೆಸರು ಪತ್ರಿಕೆಗಳಲ್ಲಿ ಕಂಡ ತಕ್ಷಣ ಅವರ ಬರಹಗಳನ್ನು ಮೊದಲು ಓದುವಂತೆ ಅನಿಸುತ್ತದೆ. ‘ಆನೆ ಸಾಕಲು ಹೊರಟವಳು’ ಎಂಬುದು ಸಹನಾ ಅವರ ಮೊದಲ ಪುಸ್ತಕ. ಕೊಡಗಿನ ದಕ್ಷಿಣ ಭಾಗದ ಚಂಬು ಗ್ರಾಮದ ಕಾಂತಬೈಲು ಎಂಬ ಚಿಕ್ಕಹಳ್ಳಿ ಲೇಖಕಿಯ ಮನೆ ಇರುವ ಜಾಗ. ಬಸ್ ಓಡಾಡುವ ರಸ್ತೆಯಿಂದ ಏಳೆಂಟು ಕಿಲೋಮೀಟರ್ ಒಳಗೆ ಇರುವ ಊರು. ಖಾಸಗಿ ವಾಹನಗಳು ಇಲ್ಲದಿದ್ದರೆ ನಡೆದೆ ಹೋಗಬೇಕಾದ ಸ್ಥಳ. ಅಡಿಕೆ, ಬಾಳೆ ತೆಂಗು ಇತ್ಯಾದಿಗಳನ್ನು ಬೆಳೆಯುವ ಕೃಷಿ ಕುಟುಂಬಕ್ಕೆ ಇಪ್ಪತ್ತೈದು ವರ್ಷದ ಹಿಂದೆ ಪಿಯುಸಿ ಓದುತ್ತಿರುವ ಹುಡುಗಿಯನ್ನು ಮದುವೆ ಮಾಡಿಕೊಟ್ಟಾಗ ಆ ಜೀವನಕ್ಕೆ ಹೊಂದಿಕೊಂಡು ತನ್ನನ್ನು `ಕೃಷಿ ಮಹಿಳೆ’ ಎಂದೇ ಗುರುತಿಸಿಕೊಳ್ಳುವ ಸಹನಾ ಆನೆ ಸಾಕಲು ಹೊರಟವಳು ಪುಸ್ತಕದಲ್ಲಿ ತಮ್ಮ ಅನುಭವಗಳನ್ನು ಆಧರಿಸಿದ ಲೇಖನಗಳನ್ನು ಬರೆದು ಲೇಖಕಿಯಾದವರು.

‘ಇದು ಬರಿ ಮಣ್ಣಲ್ಲ” ಅವರ ಎರಡನೆಯ ಪ್ರಬಂಧ ಸಂಕಲನ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಪ್ರಕಟಣೆ. “ನನ್ನ ಒಡನಾಡಿಗಳಾದ ಜೇನುಹುಳು, ದನ ಕರು, ಗಿಡಮರ ಬಳ್ಳಿಗಳಿಗೆ” ಎಂಬ ಅರ್ಪಣೆ ಲೇಖಕಿಯ ಆಶಯವನ್ನು ವ್ಯಕ್ತ ಪಡಿಸುತ್ತದೆ. ಒಳಗಿನ ಪ್ರಬಂಧಗಳು ಒಂದಕ್ಕಿಂತ ಒಂದು ಆಕರ್ಷಕವಾಗಿ ಸಹಜವಾಗಿ ಓದಿಸಿಕೊಳ್ಳುತ್ತವೆ. ಆನೆಗಳಿಗಾಗಿ ಕಲ್ಲುಬಾಳೆ, ನನ್ನ ಗೋವಾ ಪ್ರವಾಸ, ಹೆಂಡತಿಗೆ ಹೆದರುವ ಗಂಡಂದಿರು, ಗಂಜಿ ನಮ್ಮ ಮನೆ ದೇವರು, ಊರ ದನಗಳ ಕುರಿತ ನೂರೆಂಟು ನೆನಪುಗಳು, ಇದು ಬರಿ ಮಣ್ಣಲ್ಲ, ಅಜ್ಜಿ ಕಟ್ಟಿಕೊಟ್ಟ ಕೃಷಿ ಬುತ್ತಿ – ಒಂದಕ್ಕಿಂತ ಒಂದು ಮನಮುಟ್ಟುವಂತಿವೆ.

ಮೂಲೆ ಊರಿನ ಬದುಕು ಎಂದು ಗೊಣಗದೆ ಕೃಷಿ ಬದುಕಿನ ದೈನಿಕಗಳಲ್ಲಿ ಒಂದಾಗಿ “ದೇವರಿಗೆ ಹೂ ಕೊಯ್ಯುತ್ತಾ ಮೊಸರು ಕಡೆಯುತ್ತಾ ವರ್ಷಗಳು ಉರುಳಿದ್ದು ಗೊತ್ತೇ ಆಗಲಿಲ್ಲ” ಎಂದು ಸಹಜವಾಗಿ ಬರೆಯುತ್ತಾರೆ.

“ಅಜ್ಜಿಮನೆಯಲ್ಲಿ ಕಲಿತ ಕೃಷಿ-ಬದುಕು ನನ್ನನಿಂದು ಕೈಹಿಡಿದು ಸಲಹುತ್ತಿದೆ. ಅಜ್ಜಿ ಕಟ್ಟಿಕೊಟ್ಟ ಬುತ್ತಿ ನನ್ನ ಕೈಯಲ್ಲಿ ಇಂದು ಇದ್ದು, ನನ್ನನ್ನು ಯಶಸ್ವಿ ಕೃಷಿ ಮಹಿಳೆಯನ್ನಾಗಿಸಿದೆ. ಸದಾ ಕೈಗೆ ಹತ್ತುವ ಕೆಲಸಗಳ ನಡುವೆ ಆಗೊಮ್ಮೆಈಗೊಮ್ಮೆ ಸಿಗುವ ಅರೆಗಳಿಗೆ ಬಿಡುವಿನ ಏಕಾಂತದಲ್ಲಿ ನನ್ನನ್ನು ಪ್ರಶ್ನೆಯೊಂದು ಕಾಡುತ್ತಿದೆ- ನಾನೀಗ ನಾನೋ ಅಥವಾ ನನ್ನ ಅಜ್ಜಿಯೊ?”

ಕೃಷಿ ಕುಟುಂಬದ ಗೃಹಿಣಿಯ ಸಂದಿಗ್ಧಗಳನ್ನು ತುಂಬಾ ಚೆನ್ನಾಗಿ ಈ ಲಲಿತ ಪ್ರಬಂಧಗಳು ತೆರೆದಿಡುತ್ತವೆ. ಹಾಗೆಯೇ ಕೃಷಿ ಬದುಕಿನ ಸೌಂದರ್ಯವನ್ನು ತೆರೆದಿಡುತ್ತವೆ. ಮನಕ್ಕೆ ಮುದ ನೀಡುವ ಓದನ್ನು ನೀಡಿದ ಲೇಖಕಿ ಸಹನಾಗೂ ಪ್ರಕಾಶಕಿ ಅಕ್ಷತಾಗೂ ಅಭಿನಂದನೆಗಳು.

  • ಎಲ್.ಸಿ. ಸುಮಿತ್ರಾ
  • ( `ಇದು ಬರಿ ಮಣ್ಣಲ್ಲ’ (ಪ್ರಬಂಧಗಳ ಸಂಕಲನ), ಲೇ: ಸಹನಾ ಕಾಂತಬೈಲು, ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ಸಂಪರ್ಕ: ಅಕ್ಷತಾ ಹುಂಚದಕಟ್ಟೆ 94491 74662.)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *