ಪುಸ್ತಕ ಸಮಯ/ ಸದ್ದಿಲ್ಲದ ಕಥೆಗಳ ಮನ ಕಲಕುವ ಕೂಗು – ಪ್ರಭಾವತಿ ಹೆಗಡೆ

ಭಾರತಿ ಹೆಗಡೆ ಅವರ `ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ – ಹೆಸರೇ ಹೇಳುವಂತೆ ಈ ಕಥೆಗಳು ಸದ್ದಿಲ್ಲದವು; ಆದರೆ ಆಲಿಸುವ ಮನಗಳಿಗೆ ಈ ಕಥೆಗಳ ಮೌನದಲ್ಲೂ ಸದ್ದು ಕೇಳಿಸುತ್ತದೆ. ಈ ಸಂಕಲನದಲ್ಲಿ ಎಲ್ಲ ಸ್ತ್ರೀ ಪಾತ್ರಗಳೂ ಅಸಹಾಯಕತೆ, ಅನ್ಯಾಯ, ಅವಹೇಳನಗಳಿಂದ ಹತಾಶೆಗೊಂಡು, ಅವುಗಳಿಂದ ಹೊರಬರಲು ತಮ್ಮದೇ ಆದ ದಾರಿಯನ್ನು ಹುಡುಕಿಕೊಂಡಿದ್ದಾರೆ. ಸ್ತ್ರೀ ಪಾತ್ರಗಳು ಬಹಳ ಸಂಕೀರ್ಣ ಸಮಸ್ಯೆಗಳಿಂದ ಹೊರಬರಲು ಕಂಡುಕೊಂಡ ಮಾರ್ಗಗಳಿಂದ ಸಮಾಜ ಅವರನ್ನು ಆಡಿಕೊಳ್ಳುವಂತೆ, ದೂಷಿಸುವಂತೆ ಇದ್ದರೂ ಅವುಗಳಿಗೆ ಮೂಲಕಾರಣರಾಗುವ ಪುರುಷರು ಹಾಗೂ ವ್ಯವಸ್ಥೆಯ ಅನಾವರಣ – ಯಾವುದೇ ಆಕ್ರೋಶವಿಲ್ಲದೆ ಬಹಳ ಸಹಜವಾಗಿ ಆಗಿದೆ.

ಕಾಡುಗಳಲ್ಲಿ ಸದ್ದಿಲ್ಲದೆ ಅರಳುವ ಹೂ ಸೀತಾಳೆದಂಡೆ ತನ್ನೆಡೆಗೆ ಬರುವವರನ್ನು ತನ್ನ ಸೊಬಗು, ಸುವಾಸನೆ ಹಾಗೂ ನೇಯ್ದಿಟ್ಟ ದಂಡೆಯಂತೆ ಕಾಣುವ ವಿಶಿಷ್ಟವಾದ ಮಾಟದಿಂದ ಆಕರ್ಷಿಸುವಂತೆಯೇ – ಈ ಕಥೆಗಳನ್ನು ಓದುತ್ತಾ ಹೋದಂತೆ ಅವುಗಳ ಆಂತರ್ಯದ ಸಂದೇಶ ಸದ್ದಿಲ್ಲದೇ ನಮ್ಮ ಗಮನ ಸೆಳೆಯುತ್ತದೆ. ಬಹಳ ಕಾಲ ಮನದಲ್ಲುಳಿಯುವಂತೆ ವಿಶಿಷ್ಟ ಅನುಭೂತಿ ನೀಡುತ್ತವೆ. ಈ ಕಥೆಗಳಲ್ಲಿನ ಪಾತ್ರಗಳು ತೀವ್ರ ಸಂವೇದನೆಯನ್ನುಂಟುಮಾಡಿ ಗಾಢವಾಗಿ ನಮ್ಮನ್ನು ತಟ್ಟುತ್ತವೆ . ನಮ್ಮ ನಡುವೆಯೆ ‌ಹಿಂದೆ ಇದ್ದಿರಬಹುದಾದ , ಈಗಲೂ ಇರಬಹುದಾದ ಕೆಲವೊಂದು ಪಾತ್ರಗಳ ನಡವಳಿಕೆ ವಿಚಿತ್ರ ಹಾಗೂ ಅಸಹ್ಯ, ಅಸಹಜ ಎನಿಸಿದರೂ ಆ ಪಾತ್ರಗಳ ಒಳಹೊಕ್ಕು ನೋಡುವಂತೆ, ಮನೋವಿಶ್ಲೇಷಣಾತ್ಮಕವಾಗಿ ಚಿಂತನೆಗೆ ತೊಡಗುವಂತೆ ಮಾಡುತ್ತವೆ.

ಈ ಸಂಕಲನದ ಹೆಚ್ಚಿನ ಕಥೆಗಳಲ್ಲಿ ಸ್ತ್ರೀ ಪಾತ್ರಗಳ ಸುತ್ತಲೇ ಕಥಾ ಹಂದರವಿದೆ. ಅಲ್ಲದೇ ಗಂಡು ಹೆಣ್ಣಿನ ಅನೈತಿಕ ಸಂಬಂಧ ಮತ್ತು ಅದರಿಂದ ಉದ್ಭವಿಸಿದ ಸಮಸ್ಯೆಗಳೇ ಬಹುಪಾಲು ಕಥೆಗಳಿಗೆ ವಸ್ತುವಾಗಿವೆಯಾದರೂ, ಕಳ್ಳಮಾರ್ಗದಲ್ಲಿ ಹಣ ಸಂಪಾದಿಸುವಂತಹ ದುರಾಚಾರಿ, ಮುಗ್ಧವಾಗಿ ನಂಬಿ ಮೋಸಹೋಗುವವ, ಸಿನಿಮಾ ನಟಿಯನ್ನು ಅತಿಯಾಗಿ ಹಚ್ಚಿಕೊಂಡು ಭ್ರಮಿತನಾಗುವವ – ಇಂಥ ಕಥೆಗಳೂ ಇವೆ.

ಶೇಷಣ್ಣನ ಮಡದಿ ಸರಸೋತಕ್ಕ ಬಾವಿಯಲ್ಲಿ ತೇಲಿದ್ದು, ಸೀರೆ ಕದಿಯೊ ಶಾಮಣ್ಣನಂತಹ ಕಥೆಗಳು ಅಸಹ್ಯ ಹುಟ್ಟಿಸಿದರೂ ಆ ಪಾತ್ರಗಳ ಮಾನಸಿಕ ಅನಾರೋಗ್ಯಕ್ಕೆ ವಿಷಾದ ಮೂಡುತ್ತದೆ. ಇಂತಹ ಪಾತ್ರಗಳನ್ನು ಕಥೆಯಲ್ಲಿ ಅನಾವರಣಗೊಳಿಸಿದ ಭಾರತಿಯವರ ಧೈರ್ಯವನ್ನು ಮೆಚ್ಚಲೇಬೇಕು. ಇಂತಹ ಪಾತ್ರಗಳ ಮನೋವಿಶ್ಲೇಷಣೆ ಮಾಡದೇ ಓದುಗರಿಂದ ಕೊಂಕು, ಅಸಹ್ಯ ಮಾತುಗಳು ಬರಬಹುದೆಂದು, ಇಷ್ಟ ಪಡದಿರಬಹುದೆಂದು ಈ ಥರದ ಕಥೆಗಳನ್ನು ಸಾಮಾನ್ಯವಾಗಿ ಮಹಿಳೆಯರು ಬರೆಯಲು ಹಿಂಜರಿಯುತ್ತಾರೆ ಎನ್ನುವುದು ಸತ್ಯ.

ಗೋಡೆಯೊಂದಿಗೆ ಮಾತಾಡುವ ಅಮ್ಮಮ್ಮ, ಗಡ್ಡಧಾರಿ ಸ್ವಾಮಿ, ಸಣ್ಣ ಸದ್ದಿಗೂ ಬೆಚ್ಚುವ ಮೀನಾಕ್ಷಿ, ಈಜಲು ಹೋದವನು ಮರಳಿ ಬಾರದವನು,‌ ಇವು ಗೂಢಾರ್ಥವನ್ನು ಸೂಚಿಸುವ ಪರಿ ಮಾತಿಗೆ ನಿಲುಕದ್ದಾದರೂ ಗ್ರಹಿಕೆಗೆ ದಕ್ಕುತ್ತವೆ . ವಿಶಿಷ್ಟ ಬಗೆಯ ಕಥೆಗಳಾದ ಪಾರ್ಲೆ ಜಿ ಬಿಸ್ಕೆಟ್ಟು, ಹಾವು ಗಣಪ ಕಥೆಗಳೂ ಒಂದು ರೀತಿಯ ಮುದಕೊಡುತ್ತಲೇ ನಮ್ಮೊಳಗೊಂದು ವಿಷಾದವನ್ನು ಮೂಡಿಸುತ್ತವೆ. ಪದ್ಮಾವತಿಯ ಘಟಶ್ರಾದ್ಧ ಕಥೆ ಹಿಂದಿನ ತಲೆಮಾರಿನ ಜನ ವಿಧವೆಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ, ಒಂದೊಮ್ಮೆ ಅವಳು ಅಚಾತುರ್ಯ ಮಾಡಿಕೊಂಡು ಬಸಿರಾದರೆ ಆ ತಪ್ಪಿಗೆ ಕಾರಣರಾದ ಪುರುಷನನ್ನು ಪ್ರಶ್ನಿಸದೆ ಹೆಣ್ಣನ್ನು ಮಾತ್ರ ಶಿಕ್ಷಿಸಿ ಬಹಿಷ್ಕರಿಸುವ ಕ್ರೂರವ್ಯವಸ್ಥೆ, ಬದುಕಿರುವಾಗಲೇ ಶ್ರಾದ್ಧ (ಅಪರಕರ್ಮ) ಮಾಡುವಂತಹ ಕ್ರೌರ್ಯ – ಎಲ್ಲವನ್ನೂ ತುಂಬಾ ಚೆನ್ನಾಗಿ ಬಿಂಬಿಸಿದೆ. ಹಾಗೂ ಈ ರೀತಿ ಬಹಿಷ್ಕೃತಗೊಂಡ ಹೆಣ್ಣೊಬ್ಬಳು ಜಪಸರ ಹಿಡಿದು ಅದೇ ಮಡಿಶಾಸ್ತ್ರವನ್ನೇ ತನ್ನ ಮುಂದಿನ ಜೀವನದ ಅವಲಂಬನ ಮಾಡಿಕೊಳ್ಳುವುದು ಮತ್ತು ಅದರಿಂದ ಇತರರಿಗೆ ತೊಂದರೆ ಕೊಡುತ್ತ ಅಸಹ್ಯವಾಗುವ ರೀತಿಯಲ್ಲಿ ನಡೆದುಕೊಳ್ಳುವುದು- ಒಂದು ವಿಡಂಬನೆಯಾಗಿ ಮನಸ್ಸನ್ನು ಕಾಡುತ್ತದೆ.

ಹದಿನೇಳು ಕಥೆಗಳಿರುವ ಈ ಸಂಕಲನದಲ್ಲಿ ಎಲ್ಲ ಸ್ತ್ರೀ ಪಾತ್ರಗಳೂ ಅಸಹಾಯಕತೆ, ಅನ್ಯಾಯ, ಅವಹೇಳನಗಳಿಂದ ಹತಾಶೆಗೊಂಡು , ಅವುಗಳಿಂದ ಹೊರಬರಲು ತಮ್ಮದೇ ಆದ ದಾರಿಯನ್ನು ಹುಡುಕಿಕೊಂಡಿದ್ದಾರೆ. ಆದರೆ ಈ ಸಂಕಲನದಲ್ಲಿ ಹೆಣ್ಣೊಬ್ಬಳು ಯಾವ ಶೋಷಣೆಗೂ ಒಳಗಾಗದೆ ಇರುವ ಮತ್ತು ತನಗೆ ಬಂದಿರುವ ಸಮಸ್ಯೆಯನ್ನು ಬಹಳ ಜಾಣ್ಮೆ ಹಾಗೂ ಧೈರ್ಯದಿಂದ ಪರಿಹರಿಸಿಕೊಳ್ಳುವ ಕಥೆಯೊಂದಿದೆ. ಅದು ಪಾರ್ಲರ್ ಲಲಿತಕ್ಕನೂ, ಪ್ಯಾಂಟು ಹಾಕಿದ ತಿಮ್ಮಣ್ಣನೂ ಈ ಕಥೆ ಸ್ವಲ್ಪ ಹಾಸ್ಯ ಮಿಶ್ರಿತವಾಗಿ ಲಘುವಾಗಿ ಓದಿಸಿಕೊಳ್ಳುತ್ತ ಮನಸ್ಸಿಗೆ ಮುದಕೊಡುತ್ತಲೇ, ಹುಡುಗಿಯರು ಮದುವೆಯಾಗುವ ವರನಲ್ಲಿರಬೇಕಾದ ಅರ್ಹತೆಗಳನ್ನು ಬಯಸುವಾಗ ತಮ್ಮ ಸ್ಥಾನಮಾನ, ರೂಪ ಗುಣಗಳಿಗೆ ತಕ್ಕಂತೆ ಆಸೆಗಳು ಇರಬೇಕೆಂಬ ಸಂದೇಶವನ್ನೂ ಮನಮುಟ್ಟಿಸುತ್ತದೆ.

ಕೊಂಕಣಿ ಚೌಡಿಯಲ್ಲಿ ಚಿಕ್ಕ ಹುಡುಗಿ ವಸುವಿಗೆ ಕಾಡುವ ಪ್ರಶ್ನೆಗಳು, ಅವುಗಳಿಗೆ ಉತ್ತರ ಹೇಳಬಹುದಾದ ‘ ಚೌಡಿ ‘ ಮೈಮೇಲೆ ಬರುತ್ತಿದ್ದ ದುಗ್ಗತ್ತೆ ಇನ್ನಿಲ್ಲವಾದಾಗ ಚೌಡಿಯೂ ಅವಳೊಡನೆ ಸುಟ್ಟು ಹೋಗುತ್ತಾಳೆ, ಹಾಗಾದರೆ ತನ್ನ ಪ್ರಶ್ನೆಗೆ ಉತ್ತರ ಸಿಗದೆಂದುಕೊಳ್ಳುವ ವಸುವಿನ ಮುಗ್ಧ ಯೋಚನೆ, ಗೋಡೆಯೊಂದಿಗೆ ಮಾತಾಡುವ ಅಮ್ಮಮ್ಮ ಸತ್ತಮೇಲೆ ಅವಳ ದೊಡ್ಠ ಸೊಸೆ ಗೋಡೆಯೊಂದಿಗೆ ಮಾತಾಡುತ್ತಾಳೆ ಎಂಬ ಸುದ್ದಿ ತಿಳಿದು ಹಾಗಾದರೆ ಆ ಮನೆಯಲ್ಲಿನ್ನೂ ಗೋಡೆ ಇದೆ ಎನ್ನುವ ರತ್ನಿ, ಗಂಡನಿಗೆ ಹೊಡೆಯುವ ಭಾಗತ್ತೆ, ಅಮ್ಮ ಸುಬ್ಬಮ್ಮನನ್ನು ಮಗ ಧಿಕ್ಕರಿಸಿದಂತೆ ಇವಳೂ ಮಕ್ಕಳಿಂದ ಅವಹೇಳನಕ್ಕೊಳಗಾಗಿ ಅಮ್ಮನ ಚಟ ಅಂಟಿಸಿಕೊಂಡಂತೆ ಅವಳ ಬಳಿ ಬೀಡಿಯ ತುಂಡುಗಳು, ಕಮಟುವಾಸನೆ ಬೀರುವುದು ಸಾಕ್ಷಿಯೇನೋ ಎನಿಸುವುದು, ಸದಾ ಎಲ್ಲದಕ್ಕೂ ‘ ಲಾ ಪಾಯಿಂಟು ‘ ಹಾಕುವ ದಿಗ್ಭ್ರಮೆ ವೆಂಕಟರಮಣ ತನಗೆ ಸಿಕ್ಕಿದ ನಿಧಿಯನ್ನು ತಾನು ಅತಿಯಾಗಿ ನಂಬಿರುವ ಗುರುಗಳ ಆಶೀರ್ವಾದಕ್ಕಾಗಿ ಒಯ್ದವ ಅಲ್ಲಿಂದ ಹಿಂತಿರುಗಿದಮೇಲೆ ‘ಲಾ ಪಾಯಿಂಟು’ ಹಾಕುವುದು ಬಿಟ್ಟು ಮಂಕಾಗುವುದು, ಪಾರ್ಲೆ ಜಿ ಬಿಸ್ಕೆಟ್ಟು ಕಥೆಯ ಮುಗ್ಧ ಹುಡುಗಿ ಸಿರಿ ತನ್ನ ಗೆಳತಿ ಶೆಲ್ಲಿ ಓಡಿಹೋದವಳು ಬಿಸ್ಕೆಟ್ಟು ಪ್ಯಾಕ್ಟರಿಯಲ್ಲಿ ಬಿಸ್ಕೆಟ್ ತಿನ್ನುತ್ತ ಆರಾಮಾಗಿದ್ದಾಳೆ, ಅವಳ ಅದೃಷ್ಟ ತನಗಿಲ್ಲ ಎಂದು ಭಾವಿಸುವುದು, ಓಡಿಹೋದ ಮಗನನ್ನು ಮತ್ತು ಪ್ರವಾಸಿಯಾಗಿ ಬಂದು ಆತ್ಮೀಯನೆನಿಸುವ ವಿದೇಶೀಯನೊಬ್ಬ ಈಜಲುಹೋಗಿ ಭರಳಿಬಾರದವನನ್ನು ನೆನೆಯುತ್ತ ಶರಾವತಕ್ಕ ಅವನೂ ಹೋದ, ಇವನೂ ಹೋದ ಎನ್ನುತ್ತ ಒಡವೆಗಳನ್ನೆಲ್ಲ ತೆಗೆದೊಗೆಯುವುದು – ಇಂತಹ ಭಾವಗಳಿಗೆಲ್ಲ ಓದುಗರೇ ಅರ್ಥ ಕಂಡುಕೊಳ್ಳುವಂತೆ ಈ ಕಥೆಗಳು ಸೂಚಿಸುತ್ತವೆ.

ಇಲ್ಲಿನ ಕೆಲವು ಕಥೆಗಳ ಸ್ತ್ರೀ ಪಾತ್ರಗಳು ಬಹಳ ಸಂಕೀರ್ಣ ಸಮಸ್ಯೆಗಳಿಂದ ಬಳಲುತ್ತ ಅವುಗಳಿಂದ ಹೊರಬರಲು ಕಂಡುಕೊಂಡ ಮಾರ್ಗಗಳಿಂದ ಸಮಾಜ ಅವರನ್ನು ಆಡಿಕೊಳ್ಳುವಂತೆ , ದೂಷಿಸುವಂತೆ ಇದ್ದರೂ ಅವುಗಳಿಗೆ ಮೂಲಕಾರಣರಾಗುವ ಪುರುಷರು ಹಾಗೂ ವ್ಯವಸ್ಥೆಯ ಅನಾವರಣ – ಯಾವುದೇ ಆಕ್ರೋಶ , ತಿರಸ್ಕಾರವಿಲ್ಲದೆ ಬಹಳ ಸಹಜವಾಗಿ ಆಗಿದೆ. ಸೂಳೆಯೆಂದು ಕರೆಸಿಕೊಳ್ಳುವ ಸುರಭಿಯ ಬಗ್ಗೆ ರಮೇಶನ ಗೆಳೆಯರು ಚುಡಾಯಿಸಿ, ನಡತೆಗೆಟ್ಟವಳೆಂದು ಆಡಿಕೊಳ್ಳುವಾಗ ರಮೇಶ ಹೇಳುವ ಮಾತು ” ಅವಳನ್ನೂ ಯಾರಾದರೂ ಮದುವೆಯಾಗಿದ್ದರೆ ಅವಳಿಗೇಕೆ ಈ ಗತಿ ಬರ್ತಿತ್ತು”- ಇದು ಇಂದಿನ ಎಷ್ಟೋ ವೇಶ್ಯೆಯರ ಅಸಹಾಯಕ ಪರಿಸ್ಥಿತಿಯನ್ನು ಬಿಂಬಿಸುತ್ತದೆ.

ಹೀಗೆ ಎಲ್ಲ ಕಥೆಗಳೂ ಮನಕ್ಕೆ ನಾಟುವ ಮಾತುಗಳು, ಗೂಡಾರ್ಥಗಳು, ಹಾಗೂ ಶೋಷಿತ ವ್ಯವಸ್ಥೆಯನ್ನು ಪ್ರತಿಭಟಿಸುವ ನಾನಾ ವಿಧಗಳಿಂದ ವೈಶಿಷ್ಟ್ಯಪೂರ್ಣವಾಗಿದ್ದು ಇಷ್ಟವಾಗುತ್ತವೆ. ಇಲ್ಲಿನ ಕಥೆಗಳ ಸಂಭಾಷಣೆ ಗ್ರಾಮ್ಯ ಸೊಗಡಿನ ಹವ್ಯಕ ಕನ್ನಡದಲ್ಲಿದ್ದರೂ, ನಿರೂಪಣೆ ಸರಳ ಕನ್ನಡದಲ್ಲಿದ್ದು ಸುಲಲಿತವಾಗಿ ಎಲ್ಲರೂ ಓದಬಹುದಾಗಿದೆ.

ಒಟ್ಟಿನಲ್ಲಿ ಭಾರತಿಯವರೇ ಹೇಳುವಂತೆ ‘ ಸೀತಾಳೆದಂಡೆ ಯ ಹಾಗೆ ಸದ್ದಿಲ್ಲದೆ ಅರಳಿ ಬಾಡುವ ‘ ಈ ಕಥೆಗಳ ಪಾತ್ರಗಳು ವಾಸ್ತವದಲ್ಲಿ ಯಾರ ಮೆಚ್ಚುಗೆ ಪಡೆಯದಿದ್ದರೂ, ಕಥೆಯಾಗಿ ಗಮನ ಸೆಳೆಯುತ್ತವೆ . ಜೀವನದಲ್ಲಿ ಸೋತರೂ ಕಥೆಯಲ್ಲಿ ಗೆದ್ದಿವೆ . ಈ ಕಥೆಗಳು ‘ ಕೇವಲ ಕಥೆಗಳು’ ಮಾತ್ರ ಎನಿಸದೆ ಐತಿಹಾಸಿಕ ಸತ್ಯವಾಗಿ ತೋರುವುದರಿಂದ ಬಹಳ ಪ್ರಾಮುಖ್ಯ ಪಡೆಯುತ್ತವೆ. ಹೆಣ್ಣಿನ ಕೌಟುಂಬಿಕ ಶೋಷಣೆಗೆ ಹೆಚ್ಚಿನ ಸಂದರ್ಭದಲ್ಲಿ ಅವಳ ಅಜ್ಞಾನ ಹಾಗೂ ಆರ್ಥಿಕ ಪರಾವಲಂಬನೆಯೇ ಕಾರಣವಾಗಿರುವುದು, ಮತ್ತು ಇಂದು ಹೆಚ್ಚಿನ ವಿದ್ಯಾಭ್ಯಾಸ ಹಾಗೂ ಆರ್ಥಿಕ ಸ್ವಾವಲಂಬನೆಯೇ ಹೆಣ್ಣಿಗೆ ಕೌಟುಂಬಿಕ ಶೋಷಣೆಯನ್ನು ಕಡಿಮೆ ಮಾಡಿರುವುದನ್ನು ಅಲ್ಲಗಳೆಯಲಾಗದು. ಆದರೆ ಈಗೀಗ ಕೆಲ ಸಮುದಾಯಗಳಲ್ಲಿ ಹೆಣ್ಣು ಹೆಚ್ಚು ವಿದ್ಯಾವಂತೆಯಾಗುವುದರಿಂದ ಮದುವೆಗೆ ಕಷ್ಟವಾಗುತ್ತಿದೆ, ಮತ್ತು ಹೆಣ್ಣು ಮಕ್ಕಳು ಅತಿಯಾದ ಸ್ವಾತಂತ್ರ್ಯ ದಿಂದ ದಾರಿತಪ್ಪುತ್ತಾರೆ, ತಮ್ಮ ವೇಷಭೂಷಣ ಗಳಿಂದ ಪುರುಷರನ್ನು ಕೆರಳಿಸುತ್ತಾರೆ… ಎಂದೆಲ್ಲ ವಾದಿಸುತ್ತ ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸುವ ಮೊದಲೇ ಮದುವೆ ಮಾಡುವ , ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಪ್ರಯತ್ನ ಗಳು ನಡೆಯುತ್ತಿವೆ. ಇದರಿಂದ ಹೆಣ್ಣಿನ ಕೌಟುಂಬಿಕ ಶೋಷಣೆಯ ಕ್ರೂರ ಇತಿಹಾಸ ಮರುಕಳಿಸುವ ಸಾಧ್ಯತೆಯೂ ಇದೆ, ಮತ್ತು ಅದರಿಂದ ಸೀತಾಳೆದಂಡೆಯಲ್ಲಿನ ಕಥಾ ಪಾತ್ರಗಳು ಮತ್ತೆ ಜನ್ಮತಾಳುವ ಅಪಾಯವೂ ಇದೆ. ಹಾಗಾಗಿ ಇಂತಹ ಕಥೆಗಳ ಓದು ನಮ್ಮೊಳಗೊಂದು ಚಿಂತನೆಯನ್ನು ಹುಟ್ಟಿಸುವುದರಿಂದ ಅಧ್ಯಯನ ಯೋಗ್ಯವೂ ಆಗಿವೆ.

ಪತ್ರಕರ್ತೆ ಭಾರತಿ ಹೆಗಡೆಯವರಿಂದ ರಚಿತವಾದ ಈ ಕಥಾಸಂಕಲನ ಸಾಹಿತ್ಯ ಪ್ರಿಯರ, ಕಥಾ ಪ್ರೇಮಿಗಳ ಸಂಗ್ರಹದಲ್ಲಿರಬೇಕಾದ ಪುಸ್ತಕ. ಅವರಿಂದ ಇನ್ನಷ್ಟು ಉತ್ತಮ ಸಾಹಿತ್ಯ ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇನೆ . (ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು – ಲೇ: ಭಾರತಿ ಹೆಗಡೆ * ಪ್ರ: ವಿಕಾಸ ಪ್ರಕಾಶನ * ಪುಟ: 246 * ಬೆಲೆ: ರೂ. 220 * ಪ್ರತಿಗಳಿಗೆ ಸಂಪರ್ಕಿಸಿ: 99000 95204, ಬುಕ್ಸ್ ಲೋಕ 98863 63531)

  • ಪ್ರಭಾವತಿ ಹೆಗಡೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *