ಪುಸ್ತಕ ಸಮಯ/ ಶ್ರವಣ ಕುಮಾರಿ ಅವರ ಹೃದ್ಯ ಕಥಾಲೋಕ – ಗಿರಿಜಾ ಶಾಸ್ತ್ರಿ

ಬಿ.ಎಸ್. ಶ್ರವಣ ಕುಮಾರಿ ಅವರ “ಅಸ್ಪಷ್ಟ ತಲ್ಲಣಗಳು” ಸಂಕಲನದ ಕತೆಗಳಲ್ಲಿ ಜನಪ್ರಿಯ ರಂಜನೀಯ ಶೈಲಿಯೂ ಇದೆ, ವೈಜ್ಞಾನಿಕ ಜಿಜ್ಞಾಸೆಯೂ ಇದೆ. ಜನಪ್ರಿಯ ಕತೆಗಳ ರಮ್ಯ ಮಾದರಿ ಮತ್ತು ವೈಚಾರಿಕ ಕತೆಗಳ ವಾಸ್ತವ ದರ್ಶನ ಎರಡರ ಹಿತಮಿತ ಮಿಶ್ರಣವಿದೆ. ಲೇಖಕಿಯ ನಾಜೂಕು ದೃಷ್ಟಿಗೆ ಸಿಕ್ಕ ಹೆಣ್ಣುಮಕ್ಕಳ ತಲ್ಲಣಗಳು ಕತೆಗಳಾಗಿ ಮಾರ್ಪಡುವ ರೀತಿಯೇ ಗಮನ ಸೆಳೆಯುತ್ತದೆ. ಇಲ್ಲಿ ಸಿನಿಮೀಯ ತಿರುವುಗಳಿಲ್ಲ, ವೈಚಾರಿಕತೆಯ ಭಾರವಿಲ್ಲ. ಶ್ರವಣ ಕುಮಾರಿ ಅವರ ಕತೆಗಳೆಂದರೆ ವಾಸ್ತವತೆಯ ಮೇಲೆ ಹರಿಯುವ ಭಾವ ನದಿ. ಅದು ಎರಡೂ ದಡಗಳನ್ನು ಹಸುರಾಗಿಟ್ಟಿದೆ.


ಶ್ರವಣ ಕುಮಾರಿಯವರ “ಅಸ್ಪಷ್ಟ ತಲ್ಲಣಗಳು” ಕಥಾಸಂಕಲನದ ಕತೆಗಳನ್ನು ಓದಿದ ತಕ್ಷಣ ಸೆಳೆದದ್ದು, ಅವರ ಕತೆ ಹೇಳುವ ಕಲೆಗಾರಿಕೆ. ಬೆನ್ನುಡಿಯಲ್ಲಿ ಜಿ.ಎನ್ ಮೋಹನ್ ಅವರು “ಥೇಟ್ ಶ್ರವಣಕುಮಾರನ ರೀತಿಯೇ ಸಾಹಿತ್ಯವನ್ನು ತುಂಬು ಶ್ರದ್ಧೆಯಿಂದ ಹೊತ್ತು ನಡೆದಿದ್ದಾರೆ” ಎಂದು ಶ್ರವಣ ಕುಮಾರಿಯವರನ್ನು ಪ್ರಶಂಸಿಸಿದ್ದಾರೆ. ನಿಜ ಶ್ರವಣ ಕುಮಾರಿಯವರು ಈ ಪ್ರಶಂಸೆಗೆ ನಿಜವಾಗಿ ಅರ್ಹರು.

ಇವರ ಕತೆಗಳನ್ನು ಓದಿದಾಕ್ಷಣ ಕಣ್ಣ ಮುಂದೆ ಬಂದದ್ದು ತ್ರಿವೇಣಿಯವರ ಕತೆ ಕಾದಂಬರಿಗಳು. ಪ್ರಗತಿಶೀಲ ಕಾಲ ಕಂಡ ‌ಅತ್ಯುತ್ತಮ ಸಂವೇದನಾ ಶೀಲ ಬರಹಗಾರ್ತಿ ಅವರು. ನವ್ಯರ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವರಿಗೆ ಈ ಅನನ್ಯತೆ ಕಣ್ಣಿಗೆ ಬೀಳಲಿಲ್ಲ ಅಷ್ಟೇ. ಅವರ ತಲೆಗೆ ಜನಪ್ರಿಯ ಬರಹಗಾರ್ತಿಯ ಪಟ್ಟಿ ಕಟ್ಟಲಾಯಿತು. ನಿಜವಾಗಿ ನೋಡಿದರೆ ಜನಪ್ರಿಯತೆ ಹಾಗೂ ವೈಚಾರಿಕತೆಯನ್ನು ಸಮನಾಗಿ ತೂಗಿಸಿಕೊಂಡು ಹೋದವರು ತ್ರಿವೇಣಿ.

ಜಿ.ಎಸ್.ಎಸ್ ಅವರಿಗೆ ಒಮ್ಮೆ ಜನಪ್ರಿಯ ಲೇಖಕಿಯರನ್ನು ಕನ್ನಡ ಸಾಹಿತ್ಯ ಲೋಕ ಅಷ್ಟಾಗಿ ಪರಿಗಣಿಸುವುದಿಲ್ಲ ಏಕೆ. ನಿಮ್ಮ ಅಭಿಪ್ರಾಯ ಏನು? ಎಂದು ಕೇಳಿದ್ದೆ. ಅದಕ್ಕೆ ಅವರು ಅವೆಲ್ಲಾ ನಾನ್ಸೆನ್ಸ್ . writer is a writer ಅಷ್ಟೇ ಎಂದಿದ್ದರು.

ನನಗೆ ಶ್ರವಣ ಕುಮಾರಿಯವರ ಕತೆಗಳನ್ನು ಓದಿದಾಗ ಮೇಲಿನವರ ಮಾತುಗಳು ನೆನಪಾಗಲು ಕಾರಣವಿದೆ. ಅವರನ್ನು ಶ್ರವಣ ಕುಮಾರ ಎಂದರು ಜಿ.ಎನ್. ಮೋಹನ್. ಹೌದು ಶ್ರವಣ ಕುಮಾರ ಎರಡು ಅಡ್ಡೆಯಲ್ಲಿ ತನ್ನ ತಾಯಿತಂದೆಯರನ್ನು ಕುಳ್ಳಿರಿಸಿ ತಿರುಗಿದವನು. ಶ್ರವಣ ಕುಮಾರಿಯವರು ಹೊತ್ತು ತಿರುಗುತ್ತಿರುವ ಕಥಾಸಾಹಿತ್ಯದ ಈ ಎರಡು ಅಡ್ಡೆಗಳಲ್ಲಿ (ಕಾವಡಿ) ಒಂದರಲ್ಲಿ ಜನಪ್ರಿಯ ರಂಜನೀಯ ಶೈಲಿಯಿದ್ದರೆ, ಇನ್ನೊಂದರಲ್ಲಿ ವೈಚಾರಿಕತೆಯ ಜಿಜ್ಞಾಸೆ ಇದೆ. ಜನಪ್ರಿಯ ಕತೆಗಳ ರಮ್ಯ ಮಾದರಿ ಹಾಗೂ ವೈಚಾರಿಕ ಕತೆಗಳ ವಾಸ್ತವ ದರ್ಶನ ಎರಡರ ಹಿತ ಮಿತ ಮಿಶ್ರಣವಿದೆ (blend). ಹೀಗಿರುವ ಕತೆಗಳಿಗೆ ಓದಿಸಿಕೊಂಡು ಹೋಗುವ ಗುಣ ಸಹಜವಾಗಿಯೇ ಸಿದ್ಧಿಸಿರುತ್ತದೆ.

ಮನುಷ್ಯ ಸಂಬಂಧಗಳ ಶೋಧನೆ ಈ ಕತೆಗಳ ಆಶಯ. ಮನುಷ್ಯ ಸಂಬಂಧಗಳೆಂದರೆ ಅನೇಕ ಸಂಕೀರ್ಣ ಭೂಮಿಕೆಗಳ ಒಂದು ಜಾಲ. ಅನೇಕ ಸಮಸ್ಯೆಗಳ ವ್ಯೂಹ. ಇವುಗಳ ನಿಭಾವಣೆಗೆ ಒಂದು ಸೂತ್ರವಿಲ್ಲ. ಒಂದು ಸಮಸ್ಯೆ ಪರಿಹಾರವಾಯಿತೆಂದರೆ They lived happily ever after ಎಂದು ಬದುಕು ಸುಖಮಯವಾಗಿ ಕೊನೆಗೊಂಡುಬಿಡುವುದಿಲ್ಲ. ಹಾಗೆ ನೋಡಿದರೆ ನಿಜವಾದ ಬದುಕು ಪ್ರಾರಂಭವಾಗುವುದೇ ಕತೆ ಮುಗಿದ ಮೇಲೆ.

ಇಲ್ಲಿನ ಹೆಚ್ಚಿನ ನಾಯಕಿಯರು ಮಧ್ಯ ವಯಸ್ಸು ದಾಟಿದ ಮಹಿಳೆಯರು. ಈ ವಯಸ್ಸಿನ ಮಹಿಳೆಯರಿಗೆ ಋತುಬಂಧದ ಸಮಸ್ಯೆಗಳೂ ಸೇರಿದಂತೆ ಅನೇಕ ದೈಹಿಕ ಮಾನಸಿಕ ಸಮಸ್ಯೆಗಳು ಕಾಡುತ್ತವೆ. ಲೇಖಕಿ ಕತೆಗಳನ್ನು ಬರೆಯಲು ಪ್ರಾರಂಭಿಸಿದ್ದೂ ಸರಿ ಸುಮಾರು ಅವರ ಈ ವಯಸ್ಸಿನಲ್ಲಿಯೇ ಎಂದು ತಿಳಿದು ಬರುತ್ತದೆ. ಹೀಗೆ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ಮುತ್ತಿಗೆ ಹಾಕುವ ವಯಸ್ಸಿನಲ್ಲಿರುವ ಮಹಿಳೆಗೆ ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುವ, ಗ್ರಹಿಸುವ ಒಂದು ನಾಜೂಕು ಮನಸ್ಥಿತಿ ಪ್ರಾಪ್ತವಾಗಿರುತ್ತದೆ. ಈ ಕತೆಯಲ್ಲಿ ಬರುವ ಮಹಿಳೆಯರೆಲ್ಲಾ ಅಂತಹ ನಾಜೂಕು ಮನಸ್ಸಿನ ಮಹಿಳೆಯರು. ಅವರ ಸಂಪರ್ಕಕ್ಕೆ ಬಂದ ಎಲ್ಲಾ ಸಂಬಂಧಗಳನ್ನೂ ಅವರು ಈ ನಾಜೂಕು ದೃಷ್ಟಿಯಿಂದಲೇ ಗ್ರಹಿಸುತ್ತಾರೆ. ಆ ನಾಜೂಕು ದೃಷ್ಟಿಗೆ ಸಿಕ್ಕಿದ ತಲ್ಲಣಗಳು ಇವು.

ಪೀಳಿಗೆಯ ಅಂತರ

ಗಂಡನಿಂದ ದೂರವಾಗಿರುವ ಒಂಟಿ ಹೆಂಗಸರೇ ಈ ಕತೆಗಳಲ್ಲಿ ಹೆಚ್ಚಾಗಿದ್ದಾರೆ. ಅವರಿಗೆ ಮನೆಯೊಳಗೆ ಬೆಳೆದ ಹೆಣ್ಣುಮಕ್ಕಳ ಜೊತೆಗೆ ಏಗುವ, ಪೀಳಿಗೆಯ ಅಂತರವನ್ನು ಎದುರಿಸಬೇಕಾದ ಅನೇಕ ಸಂಕಷ್ಟಗಳಿವೆ. ಮನೆಯ ಹೊರಗೆ ಉದ್ಯೋಗ ಕ್ಷೇತ್ರದಲ್ಲಿ ಪುರುಷ ಮೇಲಧಿಕಾರಿಯ ಕಂಗಳಿಗೆ ಬೀಳುವ ಭಯ, ಅವುಗಳಿಂದ ತಪ್ಪಿಸಿಕೊಳ್ಳುವ ಮಾನಸಿಕ ಹೋರಾಟವಿದೆ, (ಅವಳು ಮತ್ತು ಮಗಳು, ಅಸ್ಪಷ್ಟ ತಲ್ಲಣಗಳು) ಒಂಟಿತನದ ತಲ್ಲಣಗಳಿವೆ, ಅಸುರಕ್ಷಿತ ಭಾವವಿದೆ (ಕಿತ್ತ ಕೊಂಡಿ), ವಯಸ್ಸಾದ ಗಂಡನನ್ನು ಕಟ್ಟಿಕೊಂಡ ಹೆಂಗಸಿನ ಅಸಹನೆಯ ಅಸಹಾಯಕ ಬದುಕಿದೆ (ಮುಖಾಮುಖಿ), ವಿಟನಿಂದ ಮೋಸಕ್ಕೆ ಒಳಗಾದ ಬಡ ವೇಶ್ಯೆಯೊಬ್ಬಳ ಅಳಲಿದೆ (ಕಾಮಿನಿಯೂ ಚಿಕನ್ ಬಿರ್ಯಾನಿಯೂ), ಹುಡುಗನೊಬ್ಬನ ಬ್ಲ್ಯಾಕ್ ಮೇಲ್ ಗೆ ತುತ್ತಾದ ಹುಡುಗಿಯೊಬ್ಬಳ ತಳಮಳವಿದೆ. ಜನಪ್ರಿಯಕತೆಗಳಲ್ಲಿ ಯಾರೋ ನಾಯಕ ಬಂದು ನಾಯಕಿಯನ್ನು ಬಚಾವ್ ಮಾಡುತ್ತಾನೆ. ಆದರೆ ಇಲ್ಲಿ ಬಲಿಪಶುವಾಗಿದ್ದ ನಾಯಕಿಯೇ ತಿರುಗಿ ಬಿದ್ದು ಮಿಕವೇ ಬಕವನ್ನು ಶಿಕಾರಿ ಮಾಡುವಂತಹ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾಳೆ. ಅವನಿಗೆ ಚಳ್ಳೆ ಹಣ್ಣು ತಿನ್ನಿಸುವ, ಯಾರೋ ಬಂದು ಕಾಪಾಡುವುದಲ್ಲ ನಮ್ಮನ್ನು ನಾವೇ ಕಾಪಾಡಿಕೊಳ್ಳ ಬೇಕು ಎಂಬ ಸಂದೇಶವನ್ನು ಗ್ರಾಮೀಣ ನುಡಿಗಟ್ಟಿನಲ್ಲಿ ಸಾರುವ ಧೀರ ಹುಡುಗಿಯಿದ್ದಾಳೆ. (ಜೇಡನ ಬಲೆ), ತವರಿನ ಸಂಬಂಧಗಳೊಡನೆ ಸೆಣಸಾಡುವ, ಅದರ ಬಾಂಧವ್ಯಕ್ಕೆ ತುಡಿಯುವ, ನರಳುವ ಅಸಹಾಯಕ, ಗೃಹಿಣಿಯರಿದ್ದಾರೆ (ಕಟ್ಟೆಯ ಮೂಲೆಯಲ್ಲಿ ಕುಳಿತವ, ಪಾಲು), ಹೆಂಡತಿ ಬಿಟ್ಟುಹೋದಾಗ ಗಂಡ ಏಕೈಕ (Single Parent) ಪೋಷಕ ಹತಾಶನಾದಾಗ, ಅವನ ಗೆಳೆಯನಾಗಿ ಬಂದವನು ಬದುಕಿನ ಉತ್ಸಾಹ, ಲವಲವಿಕೆಯನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬುದನ್ನು, ಮಗುವಿನ ಮೂಲಕ ಜೀವನ ಪ್ರೀತಿಯನ್ನು ಕಲಿಸುವ ಒಬ್ಬ ಮಾದರಿ ಗಂಡಸು ಕೂಡಾ ಇದ್ದಾನೆ. (ಜೀವನ್ಮುಖಿ). ಗಂಡೊಬ್ಬ ತನ್ನೊಳಗಿನ ಹೆಣ್ಣುತನವನ್ನು ಗುರುತಿಸಿಕೊಂಡು ಕೊನೆಗೆ ಹೆಣ್ಣೇ ಆಗಿಬಿಡುವ, ಅತ್ಯಂತ ಆಧುನಿಕ ಎನ್ನಬಹುದಾದ “ಮೋಹನಸ್ವಾಮಿ”ಯ ಅಪಮಾನ ದುಃಖ ದ್ವಂದ್ವಗಳೂ, ಮನದ ಓವರಿಗಳೂ ಇಲ್ಲಿವೆ. ವಿವಾಹ ಬಾಹಿರ ಸಂಬಂಧಗಳನ್ನು ಸಹನೀಯವಾಗಿ ನೋಡುವ ಕಣ್ಣುಗಳಿವೆ. (ರಾಧಾರಮಣ)

ಈ ಕತೆಗಳ ಬಹಳ ಮುಖ್ಯ ಅಂಶಗಳೆಂದರೆ, ಇಲ್ಲಿ ವಿಘಟಿತ ಸಂಸಾರಗಳನ್ನು ಒಂದು ಮಾಡುವ ಸಿನಿಮೀಯ ತಿರುವುಗಳಿಲ್ಲ. ಸಂಬಂಧಗಳಿಗೆ ತೇಪೆ ಹಾಕಿ ಸರಿಪಡಿಸುವುದಿಲ್ಲ, ಸುಳ್ಳು ಸಮಜಾಯಿಷಿಗಳಿಲ್ಲ, ಹುಸಿಯ ವೈಭವೀಕರಣವಿಲ್ಲ, ಇವು ವೈಚಾರಿಕತೆಯ ಭಾರದಿಂದ ಕುಗ್ಗುವುದಿಲ್ಲ. ಈ ಕತೆಗಳ ಇತ್ಯಾತ್ಮಕ ಧೋರಣೆ ಬೆರಗು ಹುಟ್ಟಿಸುತ್ತದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬಂಧಗಳಲ್ಲಿ ತೊಳಲಾಡುವುದೇ, ಅದರ ನಿಭಾವಣೆಯೇ ಬದುಕು. ಪ್ರೀತಿ, ಕಾಳಜಿಗಳೇ ಅದರ ತಳಹದಿ. ಬದುಕು ಅನಂತ ಸಾಧ್ಯತೆಗಳ ವಾಸ್ತವ. ಅದರ ಸ್ವರೂಪವನ್ನು ಲೇಖಕಿ ಇಲ್ಲಿ ಬಹಳ ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ.

ಇವರ ಕಥಾ ಸಾಹಿತ್ಯವೆಂದರೆ ವಾಸ್ತವತೆಯ ನೆಲದ ಮೇಲೆ ಹರಿವ ಭಾವ ನದಿ. ಹೀಗಾಗಿ ಅದು ಎರಡೂ ದಡಗಳನ್ನು ಹಸುರಾಗಿಟ್ಟಿದೆ. ಗಂಭೀರ ಓದುಗರಿಗೂ, ಲಲಿತ ಓದುಗರಿಗೂ ಸಮಾನವಾಗಿ ಉಣಬಡಿಸುವ ಈ ಬಗೆಯ ಕತೆಗಳು ಈ ಕಾಲದ ಅಗತ್ಯವೆಂದೇ ನನಗೆ ಎನಿಸುತ್ತದೆ. ಇಂತಹ ಕತೆಗಳನ್ನು ಕನ್ನಡಕ್ಕೆ ಕೊಟ್ಟ, ಅವುಗಳನ್ನು ಪ್ರೀತಿಯಿಂದ ಕಳುಹಿಸಿದ ಶ್ರವಣ ಕುಮಾರಿಯವರಿಗೆ ಅಭಿನಂದನೆಗಳು. ಧನ್ಯವಾದಗಳು.

– ಗಿರಿಜಾ ಶಾಸ್ತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಪುಸ್ತಕ ಸಮಯ/ ಶ್ರವಣ ಕುಮಾರಿ ಅವರ ಹೃದ್ಯ ಕಥಾಲೋಕ – ಗಿರಿಜಾ ಶಾಸ್ತ್ರಿ

 • May 30, 2021 at 2:12 am
  Permalink

  ಹೃತ್ಪೂರ್ವಕ ಧನ್ಯವಾದಗಳು ಗಿರಿಜಾ ಶಾಸ್ತ್ರಿ ಮತ್ತು ಪೂರ್ಣಿಮಾ ಇಬ್ಬರಿಗೂ🙏🙏

  Reply
 • May 30, 2021 at 5:32 pm
  Permalink

  ಸಹಜ ಸುಂದರ ವಿಮರ್ಶೆ….

  Reply

Leave a Reply

Your email address will not be published. Required fields are marked *