ಪುಸ್ತಕ ಸಮಯ/ ವೈಜ್ಞಾನಿಕ ಚಿಂತನೆ ನೆಲೆಯಲ್ಲಿ ದಿಟ್ಟ ವಿಶ್ಲೇಷಣೆ – ಶ್ರೀನಿವಾಸ ಕಾರ್ಕಳ
ಡಾ. ಸುಶಿ ಕಾಡನಕುಪ್ಪೆ ಅವರ `ಅಸತ್ಯದ ಕೇಡು’ ಸಮಾಜದ ಹಿತ ಮತ್ತು ಸಾಮಾಜಿಕ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವ ಲೇಖನಗಳ ಸಂಗ್ರಹ. ಮಾನವೀಯತೆಯನ್ನು ಸಮಾಜದಲ್ಲಿ ಬೆಸೆಯಲು ‘ಧರ್ಮ’ದ ಹೆಸರಿನ ಯಾವುದೇ ಕಲ್ಪನೆಗೆ ಸಾಧ್ಯವಾಗಿಲ್ಲವೆಂದು ಮಾನವನ ಇತಿಹಾಸ ಸ್ಷಷ್ಟವಾಗಿ ತಿಳಿಸುತ್ತದೆ ಎಂಬ ಮತ್ತು ದೇವರು-ಧರ್ಮಗಳು ಇರುವುದರಿಂದಲೇ ಸಮಾಜದಲ್ಲಿ ಇಷ್ಟಾದರೂ ಶಾಂತಿ ತುಂಬಿದೆ ಎಂದು ಸಮರ್ಥನೆ ಕೊಡುವವರು ಒಮ್ಮೆ ಧರ್ಮವೇ ಏಕಸ್ವಾಮ್ಯವನ್ನು ಹೊಂದಿರುವ ದೇಶಗಳನ್ನು ಅಭ್ಯಸಿಸಬೇಕು ಎಂಬ ವೈಚಾರಿಕ ಸತ್ಯಗಳನ್ನು ಅವರು ಹೇಳುತ್ತಾರೆ.
ಸ್ತ್ರೀವಾದಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಈ ಹಿಂದೆ ನೋಡಿದ್ದೆ. ಅವುಗಳಲ್ಲಿ ಕೆಲವು ಲೇಖನಗಳನ್ನು ಓದಲೂ ಪ್ರಯತ್ನಿಸಿದ್ದೆ. ಆದರೆ ಇಂಗ್ಲೀಷ್ ಆಲೋಚನೆಗಳನ್ನು ನೇರ ಕನ್ನಡಕ್ಕೆ ಭಟ್ಟಿ ಇಳಿಸಿದಂತಿದ್ದ ಮತ್ತು ಕ್ಲಿಷ್ಟ ವ್ಯಾಖ್ಯಾನಗಳ ಕಾರಣದಿಂದ ಅವುಗಳನ್ನು ಪೂರ್ತಿ ಓದುವುದು ಸಾಧ್ಯವಾಗಿರಲಿಲ್ಲ. ಈ ನಡುವೆ ಒಮ್ಮೆ ಡಾ. ಸುಶಿ ಕಾಡನಕುಪ್ಪೆಯವರ ‘ಸ್ತ್ರೀವಾದ: ಇತಿಹಾಸ ಮತ್ತು ಸ್ವರೂಪ’ ಎಂಬ ಪುಸ್ತಕ ಕೈಗೆ ಸಿಕ್ಕಿತು. ಅದು ಬಹಳ ಕ್ಲಿಷ್ಟ ಮತ್ತು ಶುಷ್ಕ ಎನ್ನಬಹುದಾದ ವಿಚಾರವನ್ನು ಎಷ್ಟು ಸರಳವಾಗಿ ಹೇಳಿತ್ತು ಮತ್ತು ಸ್ತ್ರೀವಾದದ ನೆಲೆಬೆಲೆಗಳನ್ನು ಮನಮುಟ್ಟುವಂತೆ ಎಷ್ಟು ಚೆನ್ನಾಗಿ ವಿವರಿಸಿತ್ತು ಎಂದರೆ ಆ ಪುಸ್ತಕ ಬಲು ಇಷ್ಟವಾಗಿ, ಅದನ್ನು ಓದುವಂತೆ ಅನೇಕರಿಗೆ ಶಿಫಾರಸು ಮಾಡಿದ್ದೆ ಕೂಡಾ. ಹೀಗೆ ಸುಶಿಯವರ ಬರೆಹಗಳ ಬಗ್ಗೆ ನನ್ನಲ್ಲಿ ಆಸಕ್ತಿ ಹುಟ್ಟಿತ್ತು.
ಈ ಬಾರಿ ಸುಶಿಯವರ ‘ಅಸತ್ಯದ ಕೇಡು’ ಎಂಬ ಪುಸ್ತಕ ಪ್ರಕಟವಾಗಿದೆ. ಪ್ರಜಾವಾಣಿ, ವಾರ್ತಾಭಾರತಿ, ಹೊಸ ಮನುಷ್ಯ, ಸಂಕ್ರಮಣ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಲೇಖನಗಳ ಸಂಗ್ರಹವಿದು. ಸುಶಿ ಅವರು ದಂತ ವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸಂಶೋಧನಾ ಪ್ರಬಂಧಕ್ಕೆ ಪಿಎಚ್. ಡಿ ಪದವಿಯನ್ನೂ ಪಡೆದು, ಬೆಂಗಳೂರಿನ ವಿ ಎಸ್ ಡೆಂಟಲ್ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವವರು. ತಂದೆ ಖ್ಯಾತ ಪ್ರಗತಿಪರ ಚಿಂತಕ ದಿವಂಗತ ಶಿವರಾಮು ಕಾಡನಕುಪ್ಪೆ, ತಾಯಿ ಸುವರ್ಣ ಕಾಡನಕುಪ್ಪೆ ಮತ್ತು ತಮ್ಮ ಪ್ರತಿಭಾವಂತ ಪತ್ರಕರ್ತ ನೇಸರ ಕಾಡನಕುಪ್ಪೆ ಇವರೆಲ್ಲ ಇರುವ ವೈಚಾರಿಕ, ವೈಜ್ಞಾನಿಕ ಕೌಟುಂಬಿಕ ವಾತಾವರಣದಲ್ಲಿ ಬೆಳೆದ ಸುಶಿ ಅವರೇ ಹೇಳುವಂತೆ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರಿಂದ ಪ್ರಭಾವಿತರಾದವರು. ಸಮ ಸಮಾಜದ ಆಶಯಕ್ಕಾಗಿ ಬರವಣಿಗೆ ರೂಢಿಸಿಕೊಂಡು ಗಾಂಧಿ, ಲೋಹಿಯಾ ಮತ್ತು ಅಂಬೇಡ್ಕರ್ ಅವರ ಅಧ್ಯಯನದಲ್ಲಿ ತೊಡಗಿಕೊಂಡಿರುವವರು.
ತೀರಾ ಭಿನ್ನವಾದ, ಅಂದರೆ ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವ ಸುಶಿ ಹೀಗೆ ಸಮಾಜಮುಖಿ ವೈಚಾರಿಕ ಚಿಂತನೆಗಳೊಂದಿಗೆ ಕನ್ನಡದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ಒಂದು ಸೋಜಿಗದ ಸಂಗತಿ. ಆದರೆ ಇಲ್ಲಿ ಅನೇಕರಿಗೆ ದಕ್ಕಿರದ ಒಂದು ವಿಶೇಷಾವಕಾಶ ಸುಶಿಯವರಿಗೆ ದಕ್ಕಿರುವುದನ್ನೂ ಗಮನಿಸಬಹುದು. ಅವರು ವಿಜ್ಞಾನಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿರುವುದರಿಂದ ನಮ್ಮಲ್ಲಿ ಅನೇಕರಿಗೆ ಅಪರಿಚಿತವಾದ ವಿಜ್ಞಾನ ಲೋಕದ ನಿತ್ಯದ ಬೆಳೆವಣಿಗೆಗಳ ಅರಿವೂ ಅವರಿಗೆ ಇದೆ. ಹಾಗೆಯೇ ಸಾರ್ವಜನಿಕರೊಂದಿಗೆ ಮುಖಾಮುಖಿಯಾಗುವ ವಿಭಾಗದಲ್ಲಿ ಕೆಲಸ ಮಾಡುವುದರಿಂದ ಜನರ ನೋವು ನಲಿವುಗಳನ್ನು ಹತ್ತಿರದಿಂದ ನೋಡಿ ತನ್ನ ಅನುಭವಲೋಕವನ್ನು ವಿಸ್ತರಿಸಿಕೊಳ್ಳುವ ಅವಕಾಶವೂ ಅವರಿಗೆ ದಕ್ಕಿದೆ.
ಸುಶಿ ಸಮಾಜದ ಕಡು ಬಡವರ ನಡುವೆಯೇ ಬೆಳೆದವರು. ಬಹುವಾಗಿ ಸಿಟಿ ಬಸ್ಸುಗಳಲ್ಲಿ ಸಂಚರಿಸುತ್ತಿದ್ದವರು. ರಸ್ತೆಯಲ್ಲಿ, ಮಾರ್ಕೆಟ್ ನಲ್ಲಿ ಬಡವರು, ಶ್ರಮಜೀವಿಗಳೊಂದಿಗೆ ಆಸಕ್ತಿ ಮತ್ತು ಪ್ರೀತಿಯಿಂದ ಮುಖಾಮುಖಿಯಾಗುತ್ತಾ ಅವರ ಕಷ್ಟ ಸುಖಗಳನ್ನು ತಿಳಿದುಕೊಂಡವರು. ಅವರಲ್ಲೊಂದು ಅಸಹಾಯಕರ ಬಡವರ ನೋವಿಗೆ ಮಿಡಿಯುವ ಆರ್ದ್ರ ಹೃದಯವಿದೆ. ಸುತ್ತಲ ಜಗತ್ತನ್ನು ಕುತೂಹಲದಿಂದ ನೋಡುವ ಕಣ್ಣುಗಳಿವೆ. ತನಗೇನೂ ಗೊತ್ತಿಲ್ಲ ತಾನು ಇನ್ನಷ್ಟು ಮತ್ತಷ್ಟು ಕಲಿಯಬೇಕು ಎಂಬ ವಿನಯವೂ ಅವರಿಗಿದೆ. ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವವೂ ಅವರಲ್ಲಿದೆ. ಹಾಗಾಗಿ ಅವರ ಬಹುತೇಕ ಎಲ್ಲ ಬರಹಗಳಲ್ಲಿ ಬಡವರ ಬಗ್ಗೆ ಅನುಕಂಪ, ವೈಚಾರಿಕ ಚಿಂತನೆ, ವೈಜ್ಞಾನಿಕ ಮನೋಭಾವ, ಮಾನವತಾವಾದ ಎದ್ದು ಕಾಣುತ್ತದೆ.
ವಿಜ್ಞಾನದಲ್ಲಿ ಮಾನವ ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಬಲ್ಲುದು ಎಂದು ನಂಬುವ ಸುಶಿ ‘ಮಾನವೀಯತೆಯನ್ನು ಸಮಾಜದಲ್ಲಿ ಬೆಸೆಯಲು ‘ಧರ್ಮ’ದ ಹೆಸರಿನ ಯಾವುದೇ ಕಲ್ಪನೆಗೆ ಸಾಧ್ಯವಾಗಿಲ್ಲವೆಂದು ಮಾನವನ ಇತಿಹಾಸ ಸ್ಷಷ್ಟವಾಗಿ ತಿಳಿಸುತ್ತದೆ. ಮಾನವೀಯತೆ ಉಳಿದಿರುವುದು ಮನುಷ್ಯನ ತಿಳಿವಿನ ಆಳ ಮತ್ತು ವಿಸ್ತಾರದ ವಿಕಾಸದಿಂದ. ವಿಜ್ಞಾನದ ಕೊಡುಗೆಯೂ ಮಾನವೀಯತೆ ಉಳಿಯಲು ಪುಷ್ಟಿ ನೀಡಿದೆ. ಜೀವ ಸಂಕುಲಗಳ ಸಮಸ್ಯೆಗಳಿಗೆ ಮಾನವನ ವೈಚಾರಿಕ ಮನಸಿನ ವಿಕಾಸವು ಪರಿಹಾರ ಒದಗಿಸಿದೆ. ಧರ್ಮಗಳು ಪ್ರತಿಪಾದಿಸುವಂತೆ ಶಾಂತಿಯೇ ಅವುಗಳ ಮೂಲ ಉದ್ದೇಶವಾಗಿದ್ದರೆ ಇಂದಿಗೂ ಮನುಕುಲದಲ್ಲಿ ಶಾಂತಿ ಎಂಬುದು ಮರಿಚಿಕೆಯಾಗಿರುತ್ತಿರಲಿಲ್ಲ. ದೇವರು-ಧರ್ಮಗಳು ಇರುವುದರಿಂದಲೇ ಸಮಾಜದಲ್ಲಿ ಇಷ್ಟಾದರೂ ಶಾಂತಿ ತುಂಬಿದೆ ಎಂದು ಸಮರ್ಥನೆ ಕೊಡುವವರು ಒಮ್ಮೆ ಧರ್ಮವೇ ಏಕಸ್ವಾಮ್ಯವನ್ನು ಹೊಂದಿರುವ ದೇಶಗಳನ್ನು ಅಭ್ಯಸಿಸಬೇಕು’ ಎನ್ನುತ್ತಾರೆ (ಡಿಂಕೋಯಿಸಂ ಎಂಬ ಹೊಸ ಧರ್ಮ: ಏನಿದು).
ಡೆವಲಪ್ಮೆಂಟು, ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಡೆಯುತ್ತಿರುವ ಅದ್ವಾನಗಳು ಮತ್ತು ಅಸಮತೋಲನದಿಂದ ಕೂಡಿದ ಬೆಳೆವಣಿಗೆಗಳ ಬಗ್ಗೆ ಕಳವಳ ಹೊಂದಿರುವ ಸುಶಿ ‘ನಗರಾಭಿವೃದ್ಧಿಯೊಂದೇ ಒಂದು ದೇಶದ ಪ್ರಗತಿಯ ದಿಕ್ಸೂಚಿಯಾಗಲಾರದು. ನಗರ-ಗ್ರಾಮೀಣ ಪ್ರದೇಶಗಳೆರಡನ್ನೂ ಒಳಗೊಂಡ ಸಮಾನವಾದ ಅಭಿವೃದ್ಧಿಯ ಯೋಜನೆಗಳು ಬೇಕಾಗಿವೆ’ ಎನ್ನುತ್ತಾರೆ ( `ಸ್ಮಾರ್ಟ್ ಪ್ರೇತ’ ನಗರ ಸೃಷ್ಟಿಯಾದೀತು).
ನಾಡಭಾಷೆಯ ಅರಿವಿನ ಅಗತ್ಯದ ಬಗ್ಗೆ ಹೇಳುತ್ತಾ, ‘ಈ ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಾಮಗಳ ಏರಿಳಿತಗಳ ಅರಿವು ಯಾವುದೇ ಕ್ಷೇತ್ರದ ವೃತ್ತಿಪರರಿಗೆ ನಾಡಭಾಷೆಯ ಅರಿವಿನ ಮೂಲಕವಷ್ಟೇ ಸಂಪೂರ್ಣವಾಗಿ ತಿಳಿಯಲು ಸಾಧ್ಯ. ಈ ತಿಳಿವಳಿಕೆಯಿಂದ ಬೆಳೆದು ಬಂದ ವಿದ್ಯಾರ್ಥಿ ಸಮೂಹ ಒಂದು ಆರೋಗ್ಯವಂತ ನಾಗರಿಕ ಸಮಾಜದ ಬೆಳೆವಣಿಗೆಗೆ ಪೂರಕವಾಗಿ ನಿಲ್ಲಲು ಸಾಧ್ಯವಾಗುತ್ತದೆ. ಕೇವಲ ಲೆಕ್ಕಾಚಾರದ ಶುಷ್ಕ ಮನಸ್ಸಿನ ಯುವ ಸಮೂಹವನ್ನಷ್ಟೇ ಸೃಷ್ಟಿ ಮಾಡುತ್ತಿರುವ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಕಾಳಜಿಯನ್ನು ಬೆಳೆಸುವ ಜವಾಬ್ದಾರಿಯನ್ನು ನಮ್ಮ ಸರ್ಕಾರ ಮತ್ತು ಸಾಂಸ್ಕೃತಿಕ ವಲಯ ತೆಗೆದುಕೊಳ್ಳಬೇಕಾಗಿದೆ. ಇದಕ್ಕೆ ನಾಡ ಭಾಷೆಯಾದ ಕನ್ನಡವನ್ನು ಕಲಿಸುವ ಕ್ರಮವೂ ಪೂರಕವಾಗಿ ಕೆಲಸ ಮಾಡುತ್ತದೆ’ ಎನ್ನುತ್ತಾರೆ (ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡ್ಡಾಯ: ಸಮಕಾಲೀನ ಕಲಿಕೆಯ ಮಾದರಿಗಳ ಅಗತ್ಯತೆ’)
ವಿಚಾರ ಮಂಡಿಸುವಾಗ ಯಾರಿಗೋ ನೋವಾದೀತೋ ಎಂಬ ಮುಲಾಜಿಗೊಳಗಾಗದ ಸುಶಿಯವರಿಗೆ ಸಮಾಜದ ಹಿತ ಮತ್ತು ಆರೋಗ್ಯವಷ್ಟೇ ಮೊದಲ ಆದ್ಯತೆ. ಬಹು ಚರ್ಚಿತ ಬುರ್ಖಾದ ವಿಷಯದಲ್ಲಿಯೂ ಇದೇ ನಿಲುವನ್ನು ವ್ಯಕ್ತಪಡಿಸುವ ಅವರು ಬುರ್ಖಾ ತೊಡುವುದು ಮಹಿಳೆಯ ಆಯ್ಕೆಯ ಪ್ರಶ್ನೆಯಾಗಬಾರದು ಎನ್ನುತ್ತಾ, ‘ಮಹಿಳೆಯ ವೈಚಾರಿಕ ಚಿಂತನೆಯಲ್ಲಿ ದ್ವಂದ್ವಗಳಿವೆ. ಆಕೆ ಶಿಕ್ಷಿತಳಾದರೂ ಧಾರ್ಮಿಕ ಹಿಡಿತದಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಿಲ್ಲ. ಬುರ್ಖಾ ಧರಿಸುವುದನ್ನು ಹೆಣ್ಣಿನ ಆಯ್ಕೆಗೆ ಬಿಡಬೇಕು ಎಂಬ ಮಹಿಳಾವಾದಿಗಳ ವಾದದಿಂದಾಗುವ ಅಪಾಯಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕು. ಸತಿ ಪದ್ಧತಿಯಲ್ಲಾಗಲೀ ಅಥವಾ ದೇವದಾಸಿ ಪದ್ಧತಿಯಲ್ಲಾಗಲೀ ಮಹಿಳೆಗೆ ಆಯ್ಕೆಯ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದು ಈ ಕಾಲಘಟ್ಟದಲ್ಲಿ ಹೇಗೆ ಅತಾರ್ಕಿಕವಾಗಿ ಕಾಣುವುದೋ ಹಾಗೆಯೇ ಬುರ್ಖಾ ತೊಡುವ ಆಯ್ಕೆಯು ಕೂಡ. ಈ ತಿಳಿವಳಿಕೆಯನ್ನು ಮಹಿಳೆಯು ಶಿಕ್ಷಣದಿಂದಲೇ ಪಡೆಯಬೇಕಾಗಿದೆ’ ಎನ್ನುತ್ತಾರೆ.
‘ಮಧ್ಯಮ ಮಾರ್ಗ ಮತ್ತು ಅವಕಾಶವಾದಿತನ’, ‘ಮೌಢ್ಯಗಳ ಹಿಡಿತ: ವಿಕಾಸಕ್ಕೆ ಅಡ್ಡಿ’, ‘ಮುಕ್ತ ಚಿಂತಕರ ಹತ್ಯೆ: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಚಾರಿಕತೆಯ ಹತ್ಯೆ?’, ‘ಲಿಂಗ ತಾರತಮ್ಯಕ್ಕೆ ಜೀವ ವಿಕಾಸ ಹಾದಿಯ ದೃಷ್ಟಿಕೋನ’, ‘ಮಹಿಳೆಯರಿಗೆ ದೇವಸ್ಥಾನಗಳ ಗೊಡವೆ ಏಕೆ/ಬೇಕೆ?’, ‘ವೈದ್ಯಕೀಯ ಶಿಕ್ಷಣ ಮತ್ತು ವೈಚಾರಿಕತೆ’ ಹೀಗೆ ಸಮಾಜಸ್ವಾಸ್ಥ್ಯವನ್ನು ಕೇಂದ್ರವಾಗಿರಿಸಿಕೊಂಡ ಸುಮಾರು 30 ಲೇಖನಗಳು ಇಲ್ಲಿವೆ.
ಮುನ್ನುಡಿ ಬರೆದಿರುವ ಎಚ್ ಎಸ್ ರಾಘವೇಂದ್ರ ರಾವ್ ಹೇಳಿರುವಂತೆ, ವೈಜ್ಞಾನಿಕ ಚಿಂತನೆ, ವೈಚಾರಿಕತೆ, ಮಾನವತಾವಾದಗಳು ಈ ಬರವಣಿಗೆಯ ಅಡಿಗಲ್ಲಿನಂತೆ ಕೆಲಸ ಮಾಡಿವೆ. ಲೋಕವನ್ನು ಕುರಿತು ಸ್ವತಂತ್ರವಾಗಿ ಆಲೋಚಿಸುವ ಹಾಗೂ ದಿಟ್ಟವಾದ ತೀರ್ಮಾನಕ್ಕೆ ಬರುವ ಗುಣವು ಇಲ್ಲಿನ ಲೇಖನಗಳಲ್ಲಿವೆ. (ಪ್ರಕಾಶಕರು: ಸಂವಹನ, 12/100, ಈವನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು – 570001, ದೂರವಾಣಿ: 2476019) (ಫೇಸ್‍ಬುಕ್‍ನಲ್ಲಿ ಪ್ರಕಟವಾದ ಬರಹ)
- ಶ್ರೀನಿವಾಸ ಕಾರ್ಕಳ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.