ಪುಸ್ತಕ ಸಮಯ/ ವಿಶಾಲ ಅನುಭವಗಳ ಸ್ಮೋಕಿಂಗ್  ಝೋನ್

“ಹೇಳುವಷ್ಟು ಹೇಳಿದ್ದೇನೆ. ಹೇಳಲಾಗದ್ದು ಬೇಕಾದಷ್ಟಿದೆ. ಹಾಗಾಗಿ, ಹೇಳಲು ಇನ್ನೂ ಎಷ್ಟೋ ಉಳಿಸಿಕೊಂಡಿದ್ದೇನೆ” ಎಂದು ವಿನಯದಿಂದ ಹೇಳುವ ಎಚ್.ಎನ್. ಆರತಿ ಅವರ ಆರನೆಯ ಕೃತಿ ಇದು. ಕವಿಯಿತ್ರಿ ಆರತಿ ವೃತ್ತಿಸಂಬಂಧವಾಗಿ ದೂರದರ್ಶನದಲ್ಲಿ ನಡೆಸುವ ಸಂದರ್ಶನ ಮತ್ತು ಕ್ವಿಜ್ ಕಾರ್ಯಕ್ರಮಗಳ ಪ್ರಶ್ನೋತ್ತರ ಧಾಟಿಯ ಧಾವಂತ ಈ ಕವನಸಂಕಲನದಲ್ಲೆಲ್ಲೂ ಕಾಣಿಸದೆ ಪ್ರತಿಯೊಂದು ಕವನವೂ ನಿಧಾನವಾಗಿ ತಾಳ್ಮೆಯಿಂದ ಹೆಣ್ಣಿನ ಮನಸ್ಸನ್ನು, ಅದರ ವಿವಿಧ ಪದರಗಳನ್ನು ಬಿಚ್ಚಿಡುತ್ತದೆ.

“ಈ ಕವಿತೆಗಳ ಕೇಂದ್ರಪ್ರಜ್ಞೆಯಲ್ಲಿ ವರ್ತಮಾನದ ಹೆಣ್ಣು ಬದುಕಿದೆ. ಪುಟ್ಟಪೂರಾ ಬದಲಿದಂತೆ ಕಾಣುವ ವಿದ್ಯಮಾನಗಳ ಅಸಲಿಯತ್ತನ್ನ ನಾಜೂಕಾಗಿ ಹರಿಗಡಿಯದಂತೆ ಎಬ್ಬಿ ತಂದು ಎದುರಿಡುವ ತಾಕತ್ತಿದೆ. ಅತಿನಾಗರಿಕ ಜಗತ್ತಿನಲ್ಲಿ ವ್ಯಕ್ತಿಗಳ ಸೌಖ್ಯವನ್ನಳೆವ ಪ್ಯಾರಾಮೀಟರಿನ ಕಂಪನಾಂಕವನ್ನು ಆ ಪರಿಭಾಷೆಯಲ್ಲೇ ದಾಖಲಿಸಲಾಗಿದೆ” ಎನ್ನುವ ಡಾ| ವಿನಯಾ ಅವರ ಮಾತುಗಳು ಈ ಸಂಕಲನದ ಕವಿತೆಗಳ ಒಟ್ಟಂದವನ್ನು ಸಾರರೂಪದಲ್ಲಿ ಹೇಳುತ್ತದೆ.

“……. ನಿಯಮ ಇರುವುದು
ಕೇವಲ ಮುರಿಯುವುದಕ್ಕಲ್ಲ
ಪಾಲಿಸಲು ಪರಮಾತ್ಮನಾಗಬೇಕಿಲ್ಲ,
ಪತಿವ್ರತೆಯಾದರೆ ಸಾಕು!”

ಸಂಪ್ರದಾಯದ ಹೊರೆಯ ಗಡಿರೇಖೆಗಳನ್ನು ದಾಟಿ ಹಿಂದೆ ನೋಡದೆ ಮುಂದೆ ಸಾಗುವುದು ಮುತ್ತೈದೆ ಪತಿವ್ರತೆಗೆ ಎಷ್ಟೊಂದು ಕಷ್ಟ ಎಂಬುದನ್ನು ಹೇಳುವ “ಹೊರಡಬೇಕಿದೆ ಎಲ್ಲ ಬಿಟ್ಟು” ಕವನ ವರ್ತಮಾನದ ಹೆಣ್ಣಿಗಿರುವ ಸಂಕಟವನ್ನು ಸಮರ್ಥವಾಗಿ ಹೇಳುತ್ತದೆ.

‘ಮುರಿಯಲೇಬೇಕು’ ಕವನ ಹೆಣ್ಣಿನ ಅಸಂದಿಗ್ಧ ಮನಸ್ಸಿನ ಹಲವು ಎಳೆಗಳನ್ನು ಬಿಚ್ಚಿಡುತ್ತದೆ. ಒಳಗೆ ಹರಿಯುವ ಗುಪ್ತಗಾಮಿನಿ ಪ್ರೀತಿಗೆ ಅಂಗಸಂಗಕ್ಕೆ ಲಿಂಗ ಬೇಕಿದೆ. ಆದರೆ, ಲಿಂಗ ರಾಜಕೀಯದಲ್ಲಿ ಮುರಿದು ಕಟ್ಟುವ, ಕಟ್ಟಿ ಮುರಿಯುವ ಹೆಣ್ಣು-ಗಂಡುಗಳ ಆಸೆ-ಭಾಷೆ, ಕನಸು-ಮನಸುಗಳ ಪರಿಗೆ ಎಚ್ಚರಿಕೆಯೂ ಇರಬೇಕೆಂದು ಹೇಳುತ್ತಿದೆ.

ಕವಯಿತ್ರಿಯರಾದ ಪ್ರತಿಭಾ ನಂದಕುಮಾರ್ ಮತ್ತು ವಿನಯಾ ಒಕ್ಕುಂದ ಅವರ ಮೆಚ್ಚುಗೆಯ ಕವಚವನ್ನು ಹೊದ್ದ ಮೂವತ್ತೊಂಭತ್ತು ಕವನಗಳ ಕಂತೆಯಾದ ‘ಸ್ಮೋಕಿಂಗ್ ಝೋನ್’ ಹೆಣ್ಣಿನ ವಿಶಾಲ ಅನುಭವಗಳ ಝೋನ್‍ಅನ್ನು ಪರಿಚಯ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ.

ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *