ಪುಸ್ತಕ ಸಮಯ/ ಲೋಕದ ಹಂಗಿಲ್ಲದೆ ಬದುಕಿದ ರಾಬಿಯಾಳ ಸಂಗ – ಲಲಿತಾ ಹೊಸಪ್ಯಾಟಿ
ಜಗತ್ತಿನ ಸೂಫಿ ಸಾಹಿತ್ಯ ಮತ್ತು ಸೂಫಿ ಪರಂಪರೆಯಲ್ಲಿ ಅಧ್ಯಾತ್ಮದ ಚಿಂತನೆಯ ಪ್ರಪ್ರಥಮ ಮಹಿಳಾ ಸೂಫಿ ಸಂತಳೆಂದೇ ಖ್ಯಾತಿ ಪಡೆದಿರುವ ರಾಬಿಯಾ ಪುರುಷರ ಮಧ್ಯೆ ಇದ್ದು ಪುರುಷ ಸಮಾಜದಲ್ಲಿಯ ವ್ಯವಸ್ಥೆಯನ್ನು ನಿರ್ಭಿಡೆಯಿಂದ ನಿರಾಕರಿಸಿದವಳು. ಕನ್ನಡದಲ್ಲಿ ಪ್ರಥಮವಾಗಿ ರಾಬಿಯಾಳ ಸಾಂಗತ್ಯವನ್ನು ಲೇಖಕಿ ಮುರ್ತುಜಾ ಬೇಗಂ ಕೊಡಗಲಿ ‘ರಾಬಿಯಾ ಬಿರುಗಾಳಿಯ ಹಾಡು’ ಕೃತಿಯಲ್ಲಿ ಒದಗಿಸಿದ್ದಾರೆ. ರಾಬಿಯಾಳನ್ನು ಓದುತ್ತಾ ಹೋದಂತೆ ಅಕ್ಕಮಹಾದೇವಿ ಮತ್ತು ಮೀರಾ ಅಕ್ಕಪಕ್ಕದಲ್ಲಿಯೇ ಬಂದು ನಿಂತಂತೆ ಭಾಸವಾಗುತ್ತದೆ.
ನರಕದ ಹಿಂಸೆಗಳನ್ನೆಲ್ಲ
ಸೂಜಿಯೊಂದರಲ್ಲಿ ಇಟ್ಟು
ಅಂತ ಸೂಜಿಗಳ ಸಾಲು ನನ್ನ ಬಲಗಣ್ಣಲಿ ನೆಟ್ಟರೂ
ಎಡಗಣ್ಣು ಒಂದು ಬಾರಿ ಹೊಡೆದು ನನ್ನ ಪ್ರಾರ್ಥನೆಗೆ ಅಡ್ಡಿಯಾದರೂ
ನಾನದನು ಹರಿದು ಬಿಡುವೆ ಅದರ ಕುಳಿಯಿಂದ
ಹೀಗೆ ಮನುಷ್ಯ ಮುಕ್ತಿಗಾಗಿ ಕಾಲುದಾರಿ ಪರಂಪರೆಯಲ್ಲಿ ನಡಿಗೆಯನರಿತು ನಿಭಾಯಿಸಿದ ನಿರ್ಬಂಧಕಗಳು ಜಗತ್ತಿನ ಇತಿಹಾಸದಲ್ಲಿ ದಾಖಲಾಗಿವೆ. ಸುಡು ಸಂದರ್ಭಗಳನ್ನೇ ಎದುರಿಸಿದ ನಿದರ್ಶನಗಳಿವೆ. ಅದರಲ್ಲೂ ಮಹಿಳೆಯ ತಾತ್ವಿಕತೆಯ ಅನುಭವಗಳಿಗೆ ಅನ್ವಯಿಸುವ ಅನುಭಾವ ಕಥನಗಳಂತೂ ಜ್ವಾಲೆಗಳಂತಿದ್ದು, ಅವುಗಳು ಜೀವ ಪೋಷಕ ಜೀವನ ದರ್ಶನಗಳಾಗಿದ್ದು ಸುಳ್ಳಲ್ಲ. ರಾಬಿಯಾ ಬಾಸ್ರಾ ಎಂಬ ಎಂಟನೆಯ ಶತಮಾನದ ಸಂತಳದು ಇಂತಹ ಕ್ರಿಯಾಶುದ್ಧ ವ್ಯಕ್ತಿತ್ವ. ಅವಳ ನಡೆ ನುಡಿ ಸಿದ್ಧಾಂತದ ಸ್ವೀಕೃತ ನಿಷ್ಠುರ ಧಾರೆಯ ಚರಿತ್ರೆಯನ್ನು ಕಟ್ಟಿಕೊಡುವುದು ಸುಲಭದ ಮಾತಲ್ಲ. ಆದರೆ ಮುರ್ತುಜಾ ಬೇಗಂ ಕೊಡಗಲಿ ಅವರು ಅನುಭಾವಿ ರಾಬಿಯಾಳ ಮಾಸದ ಚಹರೆಯೊಂದನ್ನು ಅಧ್ಯಯನಕ್ಕೆ ಅಳವಡಿಸಿ ಕನ್ನಡಕ್ಕೆ ತಂದು ಗಮನಾರ್ಹ ಚಿಂತನೆಗೆ ಹಚ್ಚಿದ್ದಾರೆ, ಅದೇ ‘ರಾಬಿಯಾ ಬಿರುಗಾಳಿಯ ಹಾಡು.’
ನೀನು ನನಗೆ ಜೀವನ ನೀಡಿರುವೆ
ಎಲ್ಲವೂ ನಿನ್ನದೇ ಹಿರಿಮೆ
ಅದೆಷ್ಟು ಒಳಿತುಗಳ ಧಾರೆಯೆರೆದೆ
ಕಾಣಿಕೆಗಳ ಅನುಗ್ರಹ ಮತ್ತು ಸಹಾಯ.
ಎಂಬ ಸೂಫಿ ಪರಂಪರೆಯ ಮೂಲದಲ್ಲಿ ಬೇರು ಬಿಟ್ಟ ನಿಷ್ಕಲ್ಮಶ ಪ್ರೇಮಭಾವದ ದರ್ಶನ ಮಾಡಿಸಿರುವ ಮುರ್ತುಜಾ ಬೇಗಂ, ರಾಬಿಯಾಳ ಜೀವಿತ ಕಾಲದ ಸಂಗತಿಗಳ ಪದರಗಳನ್ನೂ ತೆರೆದಿಟ್ಟಿದ್ದಾರೆ. ಹಗಲು ಇರುಳು ಜಾವಗಳ ಅರಿವಿಲ್ಲದೇ ರಾಬಿಯಾ ದೇವರ ಧ್ಯಾನದಲ್ಲಿ ಮೈಮರೆತರೆ, ಇಲ್ಲಿ ತಾನೊಲಿದ ರಾಬಿಯಾಳಿಗಾಗಿ ಲೇಖಕಿ ಹೃದಯದ ಬಾಗಿಲು ತೆರೆದು ಆಹ್ವಾನಿಸಿದ್ದಾರೆ. ಹೀಗಾಗಿ ಕಾಲಾಂತರದ ಪರಿಭಾಷೆಯಲ್ಲಿ ರಾಬಿಯಾಳಿಗೆ ಸಂಬಂಧಿಸಿದ ದಂತಕತೆಗಳನ್ನೂ ಜೀವನ ಚರಿತ್ರೆಯ ಆಧಾರಗಳನ್ನೂ ದಾಖಲಿಸಿ, ಅವಳ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಒಟ್ಟಾರೆಯಾಗಿ ಎಲ್ಲೂ ಇಲ್ಲಿಯವರೆಗೂ ಒಟ್ಟೊಟ್ಟಾಗಿ ರಾಬಿಯಾ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಅವಳನ್ನು ಕುರಿತು ಒಂದೂ ಕೃತಿ ಇಲ್ಲವೆಂಬ ಕೊರತೆ ನೀಗಿಸಿದ ಶ್ಲಾಘನೆ ಲೇಖಕಿಗೆ ಸಲ್ಲಬೇಕು.. ಪ್ರಥಮವಾಗಿ ಕನ್ನಡದಲ್ಲಿ ರಾಬಿಯಾಳ ಸಾಂಗತ್ಯ ನಮಗೆ ದೊರಕಿದೆ. ರಾಬಿಯಾಳನ್ನು ಓದುತ್ತಾ ಹೋದಂತೆ ಅಕ್ಕಮಹಾದೇವಿ ಮತ್ತು ಮೀರಾ ಅಕ್ಕಪಕ್ಕದಲ್ಲಿಯೇ ಬಂದು ನಿಂತಂತೆ ಭಾಸವಾಗುತ್ತದೆ. ಗುರುವಾಗಿ ತಾಯಿಯಾಗಿ ಸೋದರಿಯಾಗಿ ಅತಿಥಿ ಅನುಭೂತಿಯಾಗಿ ದಕ್ಕಿದ್ದಾಳೆ ಎಂಬುದನ್ನು ಕೃತಿಯಲ್ಲಿ ಹೇಳಿಕೊಳ್ಳುವ ಸೂಕ್ಷ್ಮ ಸಂವೇದನೆಯ ಲೇಖಕಿ, ಆತ್ಮಜ್ಞಾನಕ್ಕೆ ಸ್ವೀಕೃತಿಯ ಸಾಕ್ಷ್ಯ ಒದಗಿಸಿದ್ದಾರೆ.
ಸಂವೇದನಾಶೀಲ ಗಜಲ್ ಕವಿ ಅಲ್ಲಾ ಗಿರಿರಾಜ್ ಮುನ್ನುಡಿಯಲ್ಲಿ ಸ್ತ್ರೀ ಸ್ವಾತಂತ್ರ್ಯ ಪರಂಪರೆಗೆ ನಾಂದಿ ಹಾಡಿದ ರಾಬಿಯಾ ಆತ್ಮ ಸಂವೇದನೆಯಿಂದ ಸೂಫಿ ಪಂಥದ ಅನುಯಾಯಿಗಳಿಗೂ ಗುರುವಾದಳು. ಧಾರ್ಮಿಕ ಕಟ್ಟುಪಾಡುಗಳನ್ನು, ಪುರುಷ ಸಂತರೊಂದಿಗೆ ಸೇರಿ ಹತ್ತು ಹಲವು ತತ್ವಗಳನ್ನು ಪ್ರತಿಪಾದಿಸಿದಳು. ಸ್ಥಾಪಿತ ನಿಯಮಗಳೊಂದಿಗೆ ಹೋರಾಡಿ ಗೆದ್ದಳು. ಅಂದಿಗೂ ಇಂದಿಗೂ ಮಾದರಿಯಾದವಳ ಪ್ರಾಮುಖ್ಯವನ್ನು ಮುರ್ತುಜಾ ಬೇಗಂ ಹೊಸ ಆಲೋಚನೆಯ ಪುಸ್ತಕದ ಮೂಲಕ ಒದಗಿಸಿಕೊಟ್ಟರು ಎಂದು ಹೇಳಿದ್ದಾರೆ.
ಜಗತ್ತಿನ ಸೂಫಿ ಸಾಹಿತ್ಯ ಮತ್ತು ಸೂಫಿ ಪರಂಪರೆಯಲ್ಲಿ ಅಧ್ಯಾತ್ಮದ ಚಿಂತನೆಯ ಪ್ರಪ್ರಥಮ ಮಹಿಳಾ ಸೂಫಿ ಸಂತಳೆಂದೇ ಖ್ಯಾತಿ ಪಡೆದಿರುವ ರಾಬಿಯಾ ತಾನೂ ಪುರುಷರ ಮಧ್ಯೆ ಇದ್ದು ಪುರುಷ ಸಮಾಜದಲ್ಲಿಯ ವ್ಯವಸ್ಥೆಯನ್ನು ಯಾವುದೇ ಕೃಪಾ ಕಟಾಕ್ಷವಿಲ್ಲದೆ ನಿರಾಕರಿಸಿ ತಾನು ಆ ದೇವನಿಗೆ ಒಲಿದವಳು ಮತ್ತು ದೇವರ ಕಾಣುವುದಕ್ಕಾಗಿಯೇ ಜನಿಸಿದವಳು, ಜೀವನದಲ್ಲಿ ಬರುವ ಎಲ್ಲಾ ಸಂಕಟಗಳನ್ನು ಏಕಾಂಗಿಯಾಗಿ ಎದುರಿಸಿದವಳು ಎಂಬುದನ್ನು ಸಾಬೀತುಗೊಳಿಸಿದವಳು. ಮನಸ್ಸು ದೇಹ ಎರಡೂ ದೇವರಿಗೆ ಮೀಸಲು ಎಂದು ಸದಾ ದೇವರ ಧ್ಯಾನದಲ್ಲಿ ಲೀನಳಾಗಿದ್ದವಳು. ತಾನು ಪರಮಾತ್ಮನ ಪ್ರಿಯಸಖಿ ಎಂಬ ಭಾವನೆಯಿಂದ ಕಾಮವನ್ನು ಮೀರಿದ ನಿರ್ಮಲ ಪ್ರೇಮ ನಿವೇದನೆಯಿಂದ ಆತ್ಮ ಸುಖವೇ ಪರಮ ಸುಖವೆಂದು ಭಾವಿಸಿದವಳು. ಇಂಥವಳನ್ನು ಲೇಖಕಿ ಬಿಟ್ಟೆನೆಂದರೂ ಬಿಡದ ಮಾಯೆಯಂತೆ ಧ್ಯಾನಿಸಿದ್ದಾರೆ .
ಸೂಫಿ ಸಂತರ ಅಧ್ಯಯನದಲ್ಲಿ ರಾಬಿಯಾಳ ಉಲ್ಲೇಖ ಕಾಣಸಿಗದ ಸಂದರ್ಭಗಳಲ್ಲಿಯೂ ಆಧಾರ ಸಹಿತ ರಾಬಿಯಾಳ ಕುರಿತ ಮಾಹಿತಿಯನ್ನು ಮತ್ತು ವಿವರವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಅತಿ ವಿರಳವಾಗಿ ಒಂದಿಷ್ಟು ಪುಟಗಳ ಮಾಹಿತಿ ಲಭ್ಯವಿರಬಹುದು. ಇಡೀ ಜೀವನವನ್ನು ಅವಳ ಕುರಿತಾಗಿ ಅವಳ ಕಾಲ ಘಟ್ಟದ ಅತ್ತಾರರವರು ದಾಖಲಿಸಿದ್ದನ್ನು, ನಂತರದ ಸೂಫಿ ಸಂತರು ತಜ್ಞರು, ಮತ್ತು ಚರಿತ್ರೆಕಾರರು, ಇಂಗ್ಲೀಷ್‍ನಲ್ಲಿ ಉರ್ದುವಿನಲ್ಲಿ ಮತ್ತು ಅರಬ್ ಪರ್ಷಿಯನ್ ಭಾಷೆಯಲ್ಲಿ ಅವಲೋಕಿಸಿದ್ದಾರೆ. ಇದನ್ನೆಲ್ಲ ಸಂಗ್ರಹಿಸಿ ಚರಿತ್ರೆಯಂತೆಯೂ ಸಂಶೋಧನೆಯಂತೆಯೂ ಕಟ್ಟಿಕೊಟ್ಟಿರುವುದರಿಂದ ರಾಬಿಯಾಳ ಸ್ವರೂಪ ಮುಖಾಮುಖಿಯಾಗಿ ನಿಂತಂತೆ ಭಾಸವಾಗುತ್ತದೆ.
ಎಂಟನೆಯ ಶತಮಾನದಲ್ಲಿ ಬದುಕಿದ್ದ ಹೆಣ್ಣು ಮಗಳು ಇರಾಕ್‍ನ ಬಾಸ್ರಾ ಎಂಬ ಪಟ್ಟಣದಲ್ಲಿ ಸೂಫಿ ಸಂತಳಾಗಿ ತನ್ನ ಪರಿಕಲ್ಪನೆಯಂತೆ ಅನುಭಾವದ ಮೇಲುಗ್ರಹಿಕೆಯಲ್ಲಿ ಅಲೆದಾಡಿ `ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಗಂಡನಿಗೆ ಆನು ಒಲಿದೆನವ್ವ’ ಎಂಬ ನಿರ್ಭಿಡೆಯ ಅಕ್ಕಮಹಾದೇವಿಯ ನಡೆಯಂತೆಯೇ ಇದ್ದವಳು. ಬಾಸ್ರಾ ನಗರದಲ್ಲಿ ಬಡ ಕುಟುಂಬದ ನಾಲ್ಕನೇ ಮಗಳಾಗಿ ಜನಿಸಿದವಳು. ತಲೆದಿಂಬಿಗೆ ಇಟ್ಟಿಗೆಯನ್ನು ಇಟ್ಟುಕೊಂಡೆ ಆತ್ಮಜ್ಞ್ಯಾನದಲ್ಲಿಯೇ ಮೌನವನ್ನು ಮಾತಾಗಿಸಿ, ಕವಿತೆಯಾಗಿಸಿದವಳು. ದೇವರ ಕಾಣುವ ಹಂಬಲದ ರಾಬಿಯಾಳ ತುಡಿತವನ್ನು ಜೀವಪ್ರೀತಿ ಕಾವ್ಯದ ಕಣ್ಣಾಗಿಸಿ ಕಣ್ಣೆದುರು ತಂದು ನಿಲ್ಲಿಸಿದ ಭಾವ ಪೂರಿತ ಸಾಲುಗಳು ಈ ಪುಸ್ತಕದ ಹೆಗ್ಗಳಿಕೆ.
ನಾನು ನರಕದ ಭಯದಿಂದ ಪೂಜಿಸಿದೆನಾದರೆ
ನರಕದಲ್ಲಿಯೇ ಸುಡು ನನ್ನ
ಸ್ವರ್ಗದ ಆಸೆಗೆ ಪೂಜಿಸಿದೆನಾದರೆ
ಅಲ್ಲಿಂದಲೂ ಇನ್ನೆಂದೂ ಏಳದಂತೆ ತಳ್ಳಿ ಬಿಡು ನನ್ನ
ನಿನಗಾಗಿ ಬರೀ ನಿನಗಾಗಿ ಪೂಜಿಸಿದವಳಾದರೆ
ಪ್ರೇಮದ ಸುಂದರ ಲೋಕದಿಂದ ತಳ್ಳದಿರು ಎಂದೂ ನನ್ನ
ಎನ್ನುವ ರಾಬಿಯಾಳ ಕವಿತೆಯ ಸಾಲು ದೇವರ ಕಾರುಣ್ಯ ಪಡೆಯುವುದೆಂದರೆ ವೈಯಕ್ತಿಕ ಪ್ರಲೋಭನೆಗಳ ಮೀರುವುದೇ ಆಗಿದೆ ಎಂಬುದನ್ನು ನಿರೂಪಿಸುತ್ತದೆ.
ಲೋಕಕ್ಕೆ ಅಲೌಕಿಕ ದಾಖಲೆ
ರಾಬಿಯಾ ತಂದೆ ತಾಯಿಯನ್ನು ಕಳೆದುಕೊಂಡು ಅನಾಥಳಾಗುತ್ತಾಳೆ. ಬರಗಾಲಕ್ಕೆ ನಾಲ್ಕು ಸೋದರಿಯರೂ ಚದುರಿ ಹೋಗುತ್ತಾರೆ.. ಬಾಸ್ರಾ ನಗರದಲ್ಲಿ ಮಾರಾಟದ ವಸ್ತುವಾಗಿ, ಸೋದರಿಯಿಂದ ಬೇರ್ಪಟ್ಟು ನಿರಾಶ್ರಿತರೊಂದಿಗೆ ಅಲೆಮಾರಿಯಾಗುತ್ತಾಳೆ. ಅವಳ ಯಜಮಾನ ಒಂದು ದಿನ ಅವಳ ಪ್ರಾರ್ಥನೆಯ ವೇಳೆಯಲ್ಲಿ ಸರಪಳಿಯಿಲ್ಲದೇ ಅವಳ ತಲೆಯ ಮೇಲೆ ದೀಪವೊಂದು ಬೆಳಗುವುದ ಕಂಡು ವಿನೀತನಾಗಿ ಅವಳನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುತ್ತಾನೆ. ಮುಂದಿನ ಅವಳ ಪಯಣವೆಲ್ಲ ದೇವರ ಮೇಲಿನ ನಂಬಿಕೆಯದ್ದು. ಜಗದ ಕ್ಷಣಿಕ ಮೋಹವನ್ನು ತೊರೆದು ಶಾಶ್ವತ ವೇದಾಂತದ ಹಾದಿಯದ್ದು. ಹೀಗಾಗಿ ಭೂಮಿಯ ಮೇಲಿನ ಒಡೆಯನಿಗಿಂತ ಭೂಮಿ ನಿಭಾಯಿಸುವ ಒಡೆಯನಿಗಾಗಿ ಧೃತಿಗೆಡದೇ ಮತಿಗೆಡದೆ ಕಲ್ಲಿನಿಂದ ಹೊಡೆದರೂ ಹುಚ್ಚಿಯೆಂದು ಜರಿದರೂ ದೇವರ ಕಾಣಲು ಹಂಬಲಿಸುತ್ತಾಳೆ. ಇಂಥ ರಾಬಿಯಾಳನ್ನು ಓದುವಾಗ ಆಧ್ಯಾತ್ಮಿಕ ಕಾವ್ಯದಂತೆ ಲೋಕಕ್ಕೆ ಅಲೌಕಿಕ ದಾಖಲೆ ಒದಗಿಸುತ್ತದೆ. – “ನನ್ನ ದಿಲ್ ಒಳಗೆ ಮೊಹಬ್ಬತ್ ಎಷ್ಟೊಂದು ತುಂಬಿ ತುಳುಕುತ್ತಿದೆ ಎಂದರೆ ದೇವರ ಧ್ಯಾನ ಬಿಟ್ಟು ಅದರಲ್ಲಿ ಯಾರನ್ನೂ ದ್ವೇಷಿಸಲು ಕೊಂಚವೂ ಜಾಗವಿಲ್ಲ” ಎಂಬ ಸಾಲುಗಳು ಬಹು ಹೊತ್ತಿನವರೆಗೆ ಕಾಡುತ್ತವೆ.
ಈ ಕೃತಿಯಲ್ಲಿ ದೇಶ ಕಾಲ ಭಾಷೆಯನ್ನೂ ಮೀರಿದ ರಾಬಿಯಾಳ ಮಾನಸಿಕ ಪ್ರಕ್ರಿಯೆಯ ಆವರಣವಿದೆ. ವಿಚಲನೆಯಿಲ್ಲದ ಸಾಂಗತ್ಯವನ್ನು ಕಟ್ಟಿಕೊಟ್ಟ ರಾಬಿಯಾಳ ಕಾವ್ಯದ ಚಿಂತನೆಯಿದೆ. ವಿಚಾರಕ್ರಾಂತಿಗೆ ಪಕ್ಕಾದ ಮನುಷ್ಯ ಸಂಬಂಧದ ಬೆಸುಗೆಯಿದೆ.. ಅವಳು ಎತ್ತುವ ಗಂಭೀರ ಪ್ರಶ್ನೆಗಳು ಲೋಕವನ್ನೇ ಅಡಕತ್ತರಿಯಲ್ಲಿ ಇರಿಸಿದಂತಿವೆ. ಗಂಭೀರವಾಗಿಯೇ ಯಾರ ಯಾವ ನಿಂದನೆಗೂ ಪಕ್ಕಾಗದೇ ದೇವರ ಧ್ಯಾನದಲ್ಲಿ ಭವದ ಕತ್ತಲೆಯನ್ನೂ ದೂರ ಮಾಡಿದ ಆಂತರ್ಯದ ಬೆಳಕಿದೆ ಎಂದರೆ ಅದು ಕೃತಿಯ ಹೆಚ್ಚುಗಾರಿಕೆ.
ಸಾಹಿತ್ಯಿಕ ಸಾಂಸ್ಕøತಿಕ ಚಿಂತಕ ಡಾ .ರಾಜಶೇಖರ ಮಠಪತಿ ಅವರು ತಮ್ಮ ‘ಜಾಡಮಾಲಿಯ ಜೀವ ಕೇಳುವುದಿಲ್ಲ’ ಕೃತಿಯಲ್ಲಿ ರಾಬಿಯಾಳೊಂದಿಗೆ ಒಂದಿಷ್ಟು ಹೊತ್ತು ಕುಳಿತೆದ್ದು ಬಂದುದ್ದಕ್ಕಾಗಿ, ಮುರ್ತುಜಾ ಬೇಗಂ ಕೊಡಗಲಿ ಅವರು ರಾಬಿಯಾಳನ್ನು ಸಾಹಿತ್ಯಿಕ ಚಾರಿತ್ರಿಕ ಪರಂಪರೆಯಲ್ಲಿ ಕೂಡಿಸಿಕೊಡಲು ಬೆಂಗಾವಲಿಗೆ ನಿಂತಿದ್ದಾರೆ. ಬೆನ್ನುಡಿಯಲ್ಲಿ ಅವರು ಹೇಳುವ ಮಾತು “ಇಲ್ಲಿ ಅಭಿಪ್ರಾಯಗಳಿಗಿಂತ ಸಮ್ಮತಿ ಸಹಮತಿಗಿಂತ, ಬೇಕೆನಿಸಿದವರು ರಾಬಿಯಾಳ ಬಿರುಗಾಳಿ ಹಾಡನ್ನು ಓದುವ ಪುಸ್ತಕದ ಸಾಲಾಗಿ ಕಾಣದೇ ಓದಿ ದಕ್ಕಿಸಿಕೊಳ್ಳಬೇಕಾದ ಸಂಸ್ಕøತಿಯ ಬೆಳಕು” ಎಂಬ ಮಾತು ಅರಿವಿನ ಬೆಳಕನು ಹುಡುಕಲೂ ಆಂತರ್ಯದ ಬೆಳಕು ಬೇಕು ಎಂಬುದನ್ನು ಸಾಬೀತು ಪಡಿಸುತ್ತದೆ.
ದೇವರ ಸಾಂಗತ್ಯಕ್ಕಾಗಿಯೇ ಪ್ರೇಮ ನಿವೇದನೆಯಲ್ಲಿ ತೋಯ್ದು ಹೋದವಳ ಕುರಿತಾದ ಈ ವಿನೀತ ಕೃತಿ ಓದುಗ ಸಮೂಹಕ್ಕೂ ಮೌನ ಸಂದೇಶವೊಂದನ್ನು ರವಾನಿಸುತ್ತದೆ. ಹಜರತ್ ಫರೀದುದ್ದೀನ್ ಅತ್ತಾರ ಹೇಳುವಂತೆ ರಾಬಿಯಾ
ಇಲ್ಲ ಅವಳೊಬ್ಬ ಒಂಟಿ ಮಹಿಳೆಯಲ್ಲ
ಪಾದದಿಂದ ಮುಖದವರೆಗೂ ಸತ್ಯದಲ್ಲಿಯೇ ಲೀನವಾದವಳು.
ಇಷ್ಟು ಸಾಕಲ್ಲವೆ ‘ರಾಬಿಯಾ ಬಿರುಗಾಳಿ ಹಾಡು’ ನಮ್ಮನ್ನು ಕಾಪಿಡಲು?
–ಲಲಿತಾ ಹೊಸಪ್ಯಾಟಿ
(ರಾಬಿಯಾ ಬಿರುಗಾಳಿಯ ಹಾಡು- ಲೇಖಕಿ : ಮುರ್ತುಜಾ ಬೇಗಂ ಕೊಡಗಲಿ ಪ್ರಕಟಣೆ : ಬೆರಗು ಪ್ರಕಾಶನ, ಕಡಣಿ – 586202 ತಾ : ಆಲಮೇಲ ಜಿ : ವಿಜಯಪುರ)
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.