ಪುಸ್ತಕ ಸಮಯ/ ಮುಟ್ಟು: ವಾಸ್ತವ, ಅನುಭವಗಳ ವಿಶಿಷ್ಟ ಕಥನ – ದಾಕ್ಷಾಯಿಣಿ ಹುಡೇದ
ಡಾ. ಎಚ್.ಎಸ್. ಅನುಪಮಾ ಅವರ ಕೃತಿ `ಮುಟ್ಟು: ವಿಜ್ಞಾನ, ಸಂಸ್ಕøತಿ ಮತ್ತು ಅನುಭವ’ ಆ ಮುಟ್ಟಬಾರದ ವಿಷಯವನ್ನು ಕುರಿತ ಮನಮುಟ್ಟುವ ವಿಶ್ಲೇಷಣೆ. ಪುಸ್ತಕದ ಬೆನ್ನುಡಿ, ಒಳನುಡಿ, ಪರಿವಿಡಿಗಳಲ್ಲಿ ಮುಟ್ಟಿನ ಹಲವು ಸಂಗತಿಗಳು ಹನಿಹನಿಯಾಗಿ ಹರಡಿಕೊಳ್ಳುತ್ತವೆ. ಇಲ್ಲಿರುವ ಮುಟ್ಟಿನ ಅನುಭವ, ಮುಟ್ಟಿನ ವಾಸ್ತವ, ಮುಟ್ಟಿನ ವಿಜ್ಞಾನ ಎಲ್ಲವೂ ಗಂಡುಹೆಣ್ಣುಗಳಿಬ್ಬರಿಗೂ ಹೊಸಚಿಂತನೆಗೆ ಪ್ರೇರಣೆ ಒದಗಿಸುತ್ತದೆ.
“ಮುಟ್ಟು” ಎಂದಾಕ್ಷಣ ಇದು ಹೆಣ್ಣುಮಕ್ಕಳು ಮಾತ್ರ ಓದುವಂಥ ಪುಸ್ತಕ ಎಂದೇ ಈ ತನಕ ನಾವು ಮಡಿವಂತಿಕೆಯನ್ನು ಪ್ರದರ್ಶಿಸಿದ್ದೇವೆ. ಮುಟ್ಟು ಈ ಹೊತ್ತು ಹೆಣ್ಣನ್ನು ತಟ್ಟದಿದ್ದರೆ ಮನುಕುಲ ಸಂತಾನ ಹೀಗೆ ಮುಂದುವರಿಯುತ್ತಿರಲಿಲ್ಲ. ಕೂಸು ಹೆಣ್ಣಾಗುವುದೆಂದರೆ ಜಗತ್ತನ್ನು ಮುಂದೊಯ್ದಂತೆ. ಪೂರ್ಣತೆ ಸಾಕಾರಗೊಳ್ಳುವುದೇ ಹೆಣ್ತನದಿಂದ ಹಾಗೆಂದ ಮೇಲೆ ಮುಟ್ಟು ಏಕೆ ಕೀಳು? ಮುಟ್ಟು ಈ ಪದವು ಈ ಹೊತ್ತು ಮುಟ್ಟಿಸಿಕೊ ಎಂಬ ಅರ್ಥದಲ್ಲಿ ಬದಲಾಗಬೇಕಲ್ಲವೇ?
1)”ಒಂದು ಹೆಣ್ಣಿನ ಮುಟ್ಟಿನ ಕತೆ”ಯಾಗಿ 2)”ಮುಟ್ಟು ಎಂದರೆ” ಏನೆಂದು 3)”ಆ ಮೂರು ದಿನದ ಚಿಂತಿ”ಗೆ ನೂಕಿ 4)”ಮುಟ್ಟು, ಸಾಂಸ್ಕೃತಿಕ ರಾಜಕಾರಣ” ಅರಹುತ್ತ 5)”ಹೀಗೊಬ್ಬ ಮುಟ್ಟಿನ ಮನುಷ್ಯ”ನನ್ನು ಪರಿಚಯಿಸಿ 6)”ಮುಟ್ಟು”ನಿಲ್ಲುವ ಕಾಲಕ್ಕೊಯ್ಯುವವರೆಗೂ ಸಾಗುತ್ತದೆ. ಮುಂದಿನ ಭಾಗವಾಗಿ ತಾಯಿ ಮನಸಿನ ಶ್ರೀನಿವಾಸ್ ಕಾರ್ಕಳ ಅವರ ಮುಟ್ಟಿನ ಕುರಿತಾದ “ಮುಟ್ಟು ಮುಟ್ಟೆಂದೇಕೆ “ಕವಿತೆ ಇದೆ. ನಂತರದಲ್ಲಿ 12 ಜನ ಮಹಿಳೆಯರ ಮುಟ್ಟಿನ ಕುರಿತಾದ ಅನುಭವ ಹಂಚಿಕೆಯ ಬರಹಗಳಿವೆ.
ಹೀಗೆ ಈ ಮುಟ್ಟು ನಮಗೆಲ್ಲ ಮುಟ್ಟಿನ ಆಗಾಧತೆ, ಅನನ್ಯತೆಯನ್ನು ಒದಗಿಸುವ ಸ್ತ್ರೀತ್ವದ ಮೂಲಸೆಲೆಯಾದರೂ ಮುಟ್ಟಿಸಿಕೊಳ್ಳಲಾರದ ಹಾಗೂ ಮುಟ್ಟಬಾರದವಳಾಗಿಯೇ ಈ ತನಕವೂ ಹೊರಗೇ ಇರು ಎನ್ನುವುದು ದುರಂತ. ಒಂದು ಸಹಜ ಜೈವಿಕ ಪ್ರಕ್ರಿಯೆಗೆ ಜಾತಿ ಧರ್ಮಗಳ ಚೌಕಟ್ಟು ತೊಡಿಸಿ ಮುಟ್ಟು ಒಂದು ಶಾಪ ಎಂಬಂತೆ ಆಚರಿಸುವಲ್ಲಿ ಯಾರೂ ಹಿಂದೆ ಬಿದ್ದಿಲ್ಲ. ಎಷ್ಟೇ ಆಧುನಿಕತೆಗೆ ತೆರೆದುಕೊಂಡಾಗಲೂ ಮುಟ್ಟಿನ ವಿಷಯದಲ್ಲಿ ಮಾತ್ರ ಮಡಿವಂತಿಕೆಯಿಂದ ನಡೆಯುಕೊಳ್ಳುವ ಎಷ್ಟೋ ಜನರು ನಮಗೆ ಇದಿರಾಗುತ್ತಾರೆ. ಡಾ.ಎಚ್ ಎಸ್ ಅನುಪಮ ಅವರು ತಮ್ಮ ಸ್ವಾನುಭವದೊಡನೆ ವಿಜ್ಞಾನ ಸಂಸ್ಕೃತಿ ಮತ್ತು ಅನುಭವ ಎಂಬ ವಿಷಯಗಳ ಹಿನ್ನೆಲೆಯಲ್ಲಿ ಈ ಕೃತಿಯನ್ನು ಸರಳವಾಗಿ, ಆಪ್ತವಾಗಿ ಮತ್ತು ಜೀವವಿಜ್ಞಾನದ ದೃಷ್ಟಿಕೋನದಿಂದ ಮಾತ್ರವಲ್ಲ ಲಿಂಗಾತೀತವಾಗಿ ಓದುವ ಕೃತಿಯಾಗಿಸಿದ್ದಾರೆ. ಮುಟ್ಟಾದವಳ ದೈಹಿಕ ಮಾನಸಿಕ ತುಮಲತೆಗಳಿಗೆ ಅವಳೊಡನೆ ವ್ಯವಹರಿಸುವ ಪ್ರತಿ ಗಂಡು ಜೀವವೂ ಅವಳನ್ನು ಆ ನಿಗದಿತ ಸಮಯದಲ್ಲಿ ಸಾಥ್ ಕೊಡಬೇಕಾದ ಬಗ್ಗೆ ವಿವರಿಸಿದ್ದಾರೆ. ಮುಟ್ಟಿನ ಇತಿಹಾಸ, ಮುಟ್ಟಿನ ವಾಸ್ತವ, ಮುಟ್ಟಿನ ವಿಜ್ಞಾನವಿಶೇಷ ಹೀಗೆ ಹಲವು ಚಿಂತನೆಗಳೊಡನೆ ಕೃತಿ ಸಾಗುತ್ತದೆ.
ಮುಟ್ಟನ್ನು ಧಾರ್ಮಿಕ ಕಟ್ಟುಪಾಡುಗಳಿಗೆ ಒಳಪಡಿಸಿರುವ ಕ್ರಮ, ಮಹಿಳಾ ಅನನ್ಯತೆಯನ್ನು ಕಿರಿದುಗೊಳಿಸುವ ಅಥವಾ ತುಳಿದು ಬಿಡುವ ಹುನ್ನಾರ, ಸ್ತ್ರೀಶಕ್ತಿಯನ್ನು ನೆಲಕಚ್ಚಿಸುವ ತಂತ್ರ ಹೀಗೆ ಹಲವು ಸಂಚುಗಳಿಗೆ ಮುಟ್ಟು ಸಿಲುಕುತ್ತಿರುವುದೆಂದರೆ ಅದು ಎಷ್ಟು ಸ್ಟ್ರಾಂಗ್ ಎಂದು ಒಳಗಣ್ಣು ತೆರೆದು ನೋಡಿದರೆ ತಿಳಿಯುತ್ತದೆ. ಪ್ಯಾಡ್ ಗಳ ಬಳಕೆ, ನಿಭಾವಣೆ ಕುರಿತು ಪರಿಸರಸ್ನೇಹಿ ಕಾಳಜಿ ಇದೆ. ಮುಟ್ಟಿನ ಮನುಷ್ಯನೆಂದು ಅಪಹಾಸ್ಯಕ್ಕಿಡಾದರೂ ಛಲ ಬಿಡದ ಕೊಯಿಮತ್ತೂರಿನ ಅರುಣಾಚಲಂ ಮುರುಘಾನಂದಮ್ ಅವರ ಯಶೋಗಾಥೆ ಇದೆ.
ಹೀಗೆ ಮುಟ್ಟಿನ ಸವಾರಿ ಮುಟ್ಟು ನಿಲ್ಲುವವರೆಗೂ ಸಾಗಿ ಋತುಬಂಧ ಪ್ರತಿ ಹೆಣ್ಣಿನಲ್ಲೂ ಉಂಟು ಮಾಡುವ ತೀವ್ರತರದ ತೊಳಲಾಟಗಳಿಂದ ಹೊರಬರುವ ಸಲಹೆಗಳಿವೆ. ಹೀಗೆ ಮುಟ್ಟು ಓದಿದವರೆಲ್ಲರ ಮನಸನ್ನು ಮುಟ್ಟುತ್ತ ತಟ್ಟುತ್ತ ಸಾಗುವ ಅನುಪಮ ಬರಹವಿದೆ. ಒಟ್ಟು ಮುಟ್ಟು ಈ ಪದ ನಿಷೇಧಾರ್ಥ ಅರ್ಥ ಪಡೆದು ಅನುಷ್ಠಾನಗೊಂಡು ಮುಟ್ಟದಿರು ಎಂಬುದಕ್ಕೆ ಸಂವಾದಿಯಾಗಿ, ಸಮವಾಗಿ, ಪರ್ಯಾಯವಾಗಿ ಬಳಸಲ್ಪಟ್ಟು ಹೀಗೆ ಭಾಷಿಕವಾಗಿಯೂ ತುಳಿದು ಹತ್ತಿಕ್ಕಲ್ಪಟ್ಟಿದೆ ಎಂಬುದನ್ನು ಈ ಕೃತಿ ತಿಳಿಸುತ್ತದೆ.

- ದಾಕ್ಷಾಯಿಣಿ ಹುಡೇದ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.