ಪುಸ್ತಕ ಸಮಯ/ ‘ಮುಟ್ಟು ಏನಿದರ ಒಳಗುಟ್ಟು ….? – ಮಂಜುಳಾ ಪ್ರೇಮಕುಮಾರ್


  ‘ಮುಟ್ಟು’ ಕುರಿತಂತೆ ವೈಚಾರಿಕ ಹಿನ್ನೆಲೆಯಲ್ಲಿ ಐವತ್ತೇಳು ಬೇರೆ ಬೇರೆ ಲೇಖಕರು, ಲೇಖಕಿಯರು ತಮ್ಮ ಅನುಭವಗಳನ್ನು ದಾಖಲಿಸಿರುವ ಕೃತಿ ಇದು. ಇದರ ಸಂಪಾದಕರು ಜ್ಯೋತಿ ಹಿಟ್ನಾಳ್. ‘ ಮುಟ್ಟು’ ಎನ್ನುವುದು ಸಹಜ, ಸ್ವಾಭಾವಿಕ  ದೈಹಿಕ ಕ್ರಿಯೆ. ಇದು ವಿಜ್ಞಾನನಕ್ಕೆ ಸಂಬಂಧಿಸಿದ್ದು’ ಎನ್ನುವವರಿಗೆ ‘ಮುಟ್ಟು’ ಎನ್ನುವುದು ಬರೀ ವಿಜ್ಞಾನವಲ್ಲ ಅದೊಂದು ಸಂಪ್ರದಾಯ, ಆಚರಣೆ, ಹೆಣ್ಣಿನ ಭಾವನಾತ್ಮಕ ಸಂಬಂಧ. ಪುರುಷರು, ಮಹಿಳೆಯರು ಪುರ್ವಾಗ್ರಹವಿಲ್ಲದೆ ಚರ್ಚಿಸಬೇಕಾದ ವಿಷಯ’ ಎಂದು ಇಲ್ಲಿನ ಲೇಖನಗಳು ಉತ್ತರಿಸುತ್ತವೆ.

ಪುಸ್ತಕದ ಹೆಸರು ನೋಡಿದಕೂಡಲೇ ‘ಇದುಹೆಣ್ಣುಮಕ್ಕಳಿಗೆ ಸಂಬಂಧಪಟ್ಟ, ಮತ್ತು  ಅವರು ಮಾತ್ರ ಓದಬಹುದಾದ ಪುಸ್ತಕ ‘ ಅನಿಸುತ್ತದೆ. ಪುಟಗಳನ್ನು ತಿರುಗಿಸುತ್ತಾ ಹೋದಂತೆ ಮೊದಲ ಓದಿಗೆ ಸಿಗುವುದು ಹದಿನೇಳು ಜನ ಪುರುಷ ಲೇಖಕರ ಬರಹಗಳು. ಡಾ. ಪುರುಷೋತ್ತಮ ಬಿಳಿಮಲೆ , ನವೀನ್ ಸೂರಂಜೆ, ಶ್ರೀನಿವಾಸ ಕಾರ್ಕಳ, ಶ್ರೀಪಾದ್ ಭಟ್, ಚಾಂದ್ ಬಾಷಾ, ನಾದ ಮಣಿನಾಲ್ಕೂರು ಕಾ.ತಾ.ಚಿಕ್ಕಣ್ಣ ಮುಂತಾದವರು ಬಾಲ್ಯದಲ್ಲಿ  ತಾವು ಕಂಡ ತಮ್ಮ ಕುಟುಂಬದ ಹೆಣ್ಣುಮಕ್ಕಳ ಮುಟ್ಟಿನ ಬಗ್ಗೆ ತಮಗಿದ್ದ ಕುತೂಹಲ, ಆಲೋಚನೆಗಳು, ಅವು ತಮ್ಮ ಮೇಲೆ ಬೀರಿದ ಪರಿಣಾಮ ಮುಂತಾದವುಗಳನ್ನು ಇಲ್ಲಿನ ಬರಹಗಳಲ್ಲಿ ದಾಖಲಿಸಿದ್ದಾರೆ. ನಂತರದ ಬರಹಗಳಲ್ಲಿ ಡಾ. ವಸುಂದರಾ ಭೂಪತಿ, ಬಾನು ಮುಶ್ತಾಕ್, ಪ್ರೀತಿ ನಾಗರಾಜ್, ವಿನಯ ಒಕ್ಕುಂದ, ಚೇತನ ತೀರ್ಥಹಳ್ಳಿ, ಸುನಂದಾ ಕಡಮೆ ಮುಂತಾದ ನಲವತ್ತು ಜನ  ಲೇಖಕಿಯರು ತಮ್ಮ ಮೊದಲ ಮುಟ್ಟಿನ ಅನುಭವ, ಮುಟ್ಟು ಎಂಬ ಸಹಜ ಜೈವಿಕ ಕ್ರಿಯೆಯಿಂದ ಹೆಣ್ಣುಮಕ್ಕಳು ಅನುಭವಿಸುವ ಮುಜುಗುರ, ಮಾನಸಿಕ ತುಮುಲ, ದೈಹಿಕ ಬದಲಾವಣೆ, ಧಾರ್ಮಿಕ, ಸಾಮಾಜಿಕ ಕಟ್ಟುಪಾಡು ಇತ್ಯಾದಿಗಳನ್ನು ಇಲ್ಲಿನ ಬರಹಗಳಲ್ಲಿ ಹಂಚಿಕೊಂಡಿದ್ದಾರೆ.
‘ ಮುಟ್ಟು’ ಎನ್ನುವುದು ಸಹಜ, ಸ್ವಾಭಾವಿಕ  ದೈಹಿಕ ಕ್ರಿಯೆ. ಇದು ವಿಜ್ಞಾನನಕ್ಕೆ ಸಂಬಂಧಿಸಿದ್ದು’ ಎನ್ನುವವರಿಗೆ ‘ಮುಟ್ಟು’ ಎನ್ನುವುದು ಬರೀ ವಿಜ್ಞಾನವಲ್ಲ ಅದೊಂದು ಸಂಪ್ರದಾಯ, ಆಚರಣೆ, ಹೆಣ್ಣಿನ ಭಾವನಾತ್ಮಕ ಸಂಬಂಧ. ಪುರುಷರು, ಮಹಿಳೆಯರು ಪುರ್ವಾಗ್ರಹವಿಲ್ಲದೆ ಚರ್ಚಿಸಬೇಕಾದ ವಿಷಯ’ ಎಂದು ಇಲ್ಲಿನ ಲೇಖನಗಳು ಉತ್ತರಿಸುತ್ತವೆ.
ಮೊದಲ ‘ಮುಟ್ಟು’ ಬಹುಶಃ ಎಲ್ಲ ಹೆಣ್ಣುಮಕ್ಕಳಿಗು ಅಚ್ಚರಿ ಮತ್ತು ಗಾಬರಿಯ ಸಂಗತಿ. ಎಷ್ಟೇ ಆಧುನಿಕವಾಗಿದ್ದರೂ ಮುಟ್ಟಿನ ಬಗ್ಗೆ ತಾಯಿ, ಅಕ್ಕತಂಗಿಯರಲ್ಲಿ ಹೇಳಿಕೊಳ್ಳಲು ಸಹ ಹಿಂಜರಿಕೆ. ಸಾಕ್ಷರರಾದವರು, ಅಲ್ಲದವರು ಎಲ್ಲರೂ ಈ ಹಿಂಜರಿಕೆಯನ್ನು ಅನುಭವಿಸಿಯೇ ಇರುತ್ತಾರೆ. ಎಲ್ಲ ಕಾಲಘಟ್ಟದಲ್ಲೂ ಧಾರ್ಮಿಕ ಕಟ್ಟುಪಾಡುಗಳನ್ನು ಹೇರಿ ಮುಟ್ಟಾದ ಹೆಣ್ಣನ್ನುದೂರದಲ್ಲಿರಿಸುವ ಅಸ್ತ್ರವಾಗಿ ಬಳಕೆಯಾಗುತ್ತಲೇ ಬಂದಿದೆ.’ಗೊಲ್ಲ’ ಹಾಗೂ ಇತರ ಕೆಲವು ತಳವರ್ಗದ ಸಮುದಾಯಗಳಲ್ಲಿಮೊದಲು ಮತ್ತು ತಿಂಗಳ ಮುಟ್ಟಾದವರನ್ನುಊರಿನಿಂದ ಹೊರಗೆ ಸಣ್ಣದೊಂದು ಗುಡಿಸಲಿನಲ್ಲಿ ಐದು ದಿನಗಳ ಕಾಲ ಹೊರಗಿರಿಸುತ್ತಾರೆ. ಅವರ ಸಂಪ್ರದಾಯ ಅವರಿಗೆ ಸರಿಯೆನಿಸಿದರೂ ನಮಗದು ಅಮಾನವೀಯ ಪದ್ಧತಿ ಎನಿಸಿಬಿಡುತ್ತದೆ. ಈಗಲೂ ಇದು ಅಲ್ಲಲ್ಲಿ ರೂಢಿಯಲ್ಲಿದೆ.
ಇಲ್ಲಿನ ಲೇಖಗಳಲ್ಲಿ ನನಗೆ ಬಹಳ ಇಷ್ಟವಾದ ಲೇಖನ ನವೀನ್ ಸೂರಂಜೆ ಅವರ ‘ಜೈಲಿನೊಳಗೆ ಉಪವಾಸ ‘ ತಿಂಗಳುಗಟ್ಟಲೆ ಕೆಲವೊಮ್ಮೆ ವರ್ಷಗಟ್ಟಲೇ ಜೈಲಿನಲ್ಲಿರಬೇಕಾಗಿ ಬರುವ ಮಹಿಳಾ ಖೈದಿಗಳು ‘ಆ ದಿನ’ ಗಳಲ್ಲಿ ಪಡುವ ಬವಣೆ, ಅನುಭವಿಸುವ ನೋವು ಸಂಕಟಗಳು, ಮುಟ್ಟಿನ ಸಮಯದ ಸ್ವಚ್ಛತೆ, ಶೌಚಾಲಯಗಳ ಸ್ವಚ್ಛತೆ, ನಾಪಕಿನ್ ಅಥವಾ ಮುಟ್ಟಿನ ಕಪ್ ಒದಗಿಸುವಲ್ಲಿ ಜೈಲಿನ ಅಧಿಕಾರಿಗಳ ನಿರ್ಲಕ್ಷತೆ, ಊಟ ಕೊಡುವುದರಿಂದ ಹಿಡಿದು ನಾಪಕಿನ್ ಕೊಡುವವರೆಗೆ ಮಹಿಳಾ ಕೈದಿಗಳನ್ನು ಹೇಗೆ ಶೋಷಿಸಲಾಗುತ್ತಿದೆ ಎನ್ನುವುದನ್ನು ತಮ್ಮ ಈ ಲೇಖನದಲ್ಲಿ ಅನಾವರಣ ಗೊಳಿಸದ್ದಾರೆ ಮತ್ತು ಜೈಲಿಗೆ ಪ್ರವೇಶಿಸುವಾಗ ಕೊಡುವ ಇತರ ಸಾಮಗ್ರಿಗಳ ಜೊತೆಗೆ ಮುಟ್ಟಿನ ಕಪ್ ಒಂದನ್ನು ಕಡ್ಡಾಯವಾಗಿ ಕೊಡಲೇಬೇಕು ಎನ್ನುವ ಪರಿಹಾರವನ್ನು ಸೂಚಿಸುತ್ತಾರೆ.
ಕಾಲ ಬದಲಾಗಿದೆ, ಮುಟ್ಟಿನ ಬಗ್ಗೆ ಅರಿವು ಮೂಡಿಸಲು ಹಲವಾರು ಸಂಘ ಸಂಸ್ಥೆಗಳುಮಹಿಳಾ ಸಂಘಟನೆಗಳು ಕಾರ್ಯಾಗಾರ, ಆಪ್ತ ಸಂವಾದ, ಚರ್ಚೆಗಳನ್ನು ಏರ್ಪಡಿಸುವ ಮೂಲಕ, ‘ಮುಟ್ಟು ಮುಟ್ಟೇನ್ದೇಕೆ’ಎಂದು ಹಾಡುವ ಮೂಲಕ ಬರಹಗಳ ಮೂಲಕ ಜನರಲ್ಲಿ ಮುಟ್ಟಿನ ಬಗ್ಗೆ ಅರಿವು ಮೂಡಿಸಲು  ಪ್ರಯತ್ನಿಸುತ್ತಿದ್ದಾರೆ. ಈ ವಿಷಯದಲ್ಲಿ ದೃಶ್ಯ ಮಾಧ್ಯಮಗಳು ಹಿಂದೆ ಬಿದ್ದಿಲ್ಲ, ‘ಪ್ಯಾಡ್ ಮ್ಯಾನ್’ ನಂತಹ ಸಿನಿಮಾಗಳು,ಕಿರುಚಿತ್ರಗಳು, ಮುಟ್ಟಿನ ಬಗ್ಗೆ, ಸ್ವಚ್ಛತೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿವೆ. ಉದಾಹರಣೆ / ಇತ್ತೀಚಿಗೆ ನಾನು ನೋಡಿದ ಅಂತಹ ಒಂದು ಕಿರುಚಿತ್ರ, ತಾಯಿ ಇಲ್ಲದ ಹುಡುಗಿ, ತನ್ನ ಮೊದಲ ಮುಟ್ಟನ್ನು ಅಪ್ಪನಿಗೆ ಹೇಳಲಾರದಸಂಕೋಚ, ಮುಜುಗರ. ನಂತರ ಪರೋಕ್ಷವಾಗಿ ಅದನ್ನು ಅಪ್ಪನಿಗೆ ತಿಳಿಸುವ ರೀತಿ,  ಅರ್ಥ ಮಾಡಿಕೊಂಡ ಅಪ್ಪ ಅದನ್ನು ಸಮರ್ಥವಾಗಿ ನಿರ್ವಹಿಸಿ ಮಗಳಿಗೆ ಮುಜುಗುರವಾಗದಂತೆ ತಿಳಿಸಿಕೊಡುವ ಬಗೆ ನೋಡುಗರ ಕಣ್ಣುಗಳನ್ನು ಒದ್ದೆಯಾಗಿಸುತ್ತದೆ.Fb ನಲ್ಲಿಗಮನ ಸೆಳೆದ ತಂದೆಯೊಬ್ಬರ ಬರಹ, ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಮೊದಲ ಪಿರಿಯಡ್ಸ್ ನ ಕಲೆ ಪ್ಯಾಂಟ್ ಮೇಲೆ ಕಾಣಿಸುತ್ತಿದೆ, ಅದನ್ನು ಗಮನಿಸಿದ ಪಕ್ಕದಲ್ಲಿ ನಿಂತಿದ್ದ ಹುಡುಗನೊಬ್ಬ ಅವಳಿಗಷ್ಟೇ ಕೇಳಿಸುವಂತೆ, ‘ ನಿನ್ನ ಪ್ಯಾಂಟಿನಲ್ಲಿ ರಕ್ತದ ಕಲೆಯಾಗಿದೆ ನನ್ನ ಸ್ವೇಟರನ್ನು ಸೊಂಟಕ್ಕೆ ಕಟ್ಟಿ ಕೊಂಡು ಮನೆಗೆ ಹೋಗು ‘ ಎಂದು ಸ್ವೇಟರ್ ತೆಗೆದು ಕೊಡುತ್ತಾನೆ.  ಹುಡುಗಿಯ ಅಪ್ಪ ತಾನು ಕಾಣದ ಹುಡುಗ ಹಾಗೂ ಆ ಹುಡುಗನನ್ನು ಹೆತ್ತ ಅಮ್ಮನಿಗೆ ಧನ್ಯವಾದಗಳನ್ನು ಹೇಳುತ್ತಾನೆ. ಹೆಣ್ಣುಮಕ್ಕಳು ಮುಟ್ಟನ್ನು ಕುರಿತು ಮುಕ್ತವಾಗಿ ಚರ್ಚಿಸಲು ಆ ತಂದೆಯಂತಹ , ಆ ಹುಡುಗನಂತಹ ಮನಸ್ಥಿತಿ ಇರುವ ಸ್ನೇಹಿತರಅಗತ್ಯವಿದೆ. ಮಡಿ, ಮೈಲಿಗೆ ಎಂಬ ಪೂರ್ವಾಗ್ರಹ , ಇದರ ನಡುವೆಯೇ ಅದೊಂದು ಸಹಜ ಪ್ರಕ್ರಿಯೆ, ಅದನ್ನು ನೋಡುವ ರೀತಿ ಬದಲಾಗಬೇಕುಎಂಬ ಮನಸ್ಥಿತಿ ಅನೇಕರದು. ಯಾವುದೋಕಾಲದಲ್ಲಿ ವ್ಯವಸ್ಥೆಯೊಂದು ರೂಪಿಸಿದ ನಿಷೇಧಗಳನ್ನೆಲ್ಲಾ ಬದಿಗಿಟ್ಟು ಮುನ್ನಡೆಯುವಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು,  ಎಂಬುದು ಇಲ್ಲಿನ ಲೇಖಗಳ ಆಶಯ.
ಮುಟ್ಟಿನ ಬಗ್ಗೆ ಕೀಳಾಗಿ ಮಾತಾಡುವವರ ಬಗ್ಗೆ ಜ್ಯೋತಿಗೆ ಸಾತ್ವಿಕ ಸಿಟ್ಟಿದೆ. ಈ ಪುಸ್ತಕ  ಮಾಡುವಾಗ ಉಂಟಾದ ಅಡಚಣೆಗಳನ್ನೆಲ್ಲ ಧೈರ್ಯವಾಗಿ ಎದುರಿಸಿ ಎಲ್ಲ ವಯೋಮಾನದವರು ಓದುವಂತಹ ‘ಮುಟ್ಟು  ಏನಿದರ ಒಳಗುಟ್ಟು…?’ ಎಂಬ ಉತ್ತಮ ಸಂಗ್ರಹಯೋಗ್ಯ ಪುಸ್ತಕವನ್ನು ಸಂಪಾದಿಸಿರುವ ಜ್ಯೋತಿ ಹಿಟ್ನಾಳ್  ಅಭಿನಂದನಾರ್ಹರು.
 ಮುಟ್ಟು ಮುಟ್ಟೆಂದೇಕೆ ಕೀಳಾಗಿ ಕಾಣುವಿರಿಮುಟ್ಟಿನಿಂದಲ್ಲವೇ ನಮ್ಮೆಲ್ಲರ ಹುಟ್ಟು?ಮುಟ್ಟು ಮುಟ್ಟೆಂದೇಕೆ ಕೀಳರಿಮೆ ಹೊಂದುವಿರಿಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು??(ಶ್ರೀನಿವಾಸ ಕಾರ್ಕಳ ಅವರ ಸಾಲುಗಳು ).

ಮಂಜುಳಾ ಪ್ರೇಂಕುಮಾರ್ 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *