Latestಪುಸ್ತಕ ಸಮಯ

ಪುಸ್ತಕ ಸಮಯ / ಮುಟ್ಟು ಎಂದು ಹೀಗಳೆಯದಿರಿ – ಡಾ. ವಸುಂಧರಾ ಭೂಪತಿ

ಮುಟ್ಟು ಒಂದು ಸಹಜವಾಗಿ ನಡೆಯುವಂತಹ ಜೈವಿಕ ಕ್ರಿಯೆ. ಮುಟ್ಟು ಇಲ್ಲದೇ ಇದ್ದರೆ ಹುಟ್ಟೇ ಇಲ್ಲ. ಆದರೂ ಕೂಡ ಮುಟ್ಟಿನ ಬಗ್ಗೆ ಹಲವಾರು ಮೂಢನಂಬಿಕೆಗಳು ಅನೇಕ ತಪ್ಪು ಕಲ್ಪನೆಗಳು ಜನರಲ್ಲಿ ಬೇರೂರಿವೆ. ಅಂಥ ಅನೇಕ ವಿಚಾರಗಳನ್ನು ಕುರಿತು ಜ್ಯೋತಿ ಹಿಟ್ನಾಳ್ ಅವರು `ಮುಟ್ಟು ಮತ್ತು ಆರೋಗ್ಯ’ ಕೃತಿಯಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ. ಹಾಗೂ ಮುಟ್ಟಿನ ಬಗ್ಗೆ ಯಾವುದು ಸತ್ಯ, ಯಾವುದು ಮಿಥ್ಯ ಅನ್ನುವುದನ್ನು ಕೂಡ ಪ್ರಶ್ನೋತ್ತರಗಳ ಮೂಲಕ ಹೇಳಿರುವುದು ಒಂದು ವಿಶೇಷ ಎಂದು ಹೇಳಬಹುದು.

ಮುಟ್ಟನ್ನು ಕುರಿತ ವೈಜ್ಞಾನಿಕ ವಿವರಣೆಯನ್ನು ಕೇವಲ ಹದಿಹರೆಯದ ಹುಡುಗಿಯರು ಮಾತ್ರವಲ್ಲ, ಪೋಷಕರೂ ಗಂಡು ಮಕ್ಕಳೂ ತಿಳಿಯಬೇಕು. ಅದನ್ನು ಒದಗಿಸುವ ಪುಸ್ತಕಗಳನ್ನು ಓದಬೇಕು. ಏಕೆಂದರೆ ಗಂಡು ಮಕ್ಕಳಿಗೆ ಹೆಣ್ಣಿನ ದೇಹ ಮತ್ತು ಹೆಣ್ಣಿನಲ್ಲಾಗುವ ಬದಲಾವಣೆ ಇವೆಲ್ಲವೂ ಗೊತ್ತಿದ್ದರೆ, ಅವರು ಹೆಣ್ಣುಮಕ್ಕಳ ಜೊತೆ ಒಳ್ಳೆಯ ಸಂವೇದನೆಯಿಂದ ನಡೆದುಕೊಳ್ಳುವುದು ಸಾಧ್ಯವಾಗುತ್ತದೆ. `ಮುಟ್ಟು ಮತ್ತು ಆರೋಗ್ಯ’ ಪುಸ್ತಕ ಎಲ್ಲವನ್ನೂ ಸರಳ ಭಾಷೆಯಲ್ಲಿ ವಿವರಿಸುತ್ತದೆ. ಹದಿಹರೆಯದಲ್ಲಿ ದೈಹಿಕ ಬದಲಾವಣೆ, ಮಾನಸಿಕ ಬದಲಾವಣೆ ಮತ್ತು ಮುಟ್ಟಿನ ಮುಂಚೆ ಬರುವಂತ ಮೂಡ್ಸ್ ಸ್ವಿಂಗ್ಸ್ ಇರಬಹುದು ಇವೆಲ್ಲ ತಿಳಿದುಕೊಳ್ಳಲೇ ಬೇಕಾದ ವಿಷಯಗಳು.

ಇತ್ತೀಚಿನ ದಿನಗಳಲ್ಲಿ ಪಿಸಿಓಡಿ ಸಮಸ್ಯೆ ಕೂಡ ಅನೇಕ ಹುಡುಗಿಯರಲ್ಲಿ ಕಂಡು ಬರುತ್ತಿದೆ. 8-9 ವರ್ಷಕ್ಕೆಲ್ಲ ಋತುಮತಿ ಆಗುವುದು ಕೂಡ ಕಂಡು ಬರುತ್ತಿದೆ. ಮುಟ್ಟಿನ ಸಮಯದಲ್ಲಿ ಬಳಸುವಂತಹ ಪ್ಯಾಡ್‍ಗಳು ಇರಬಹುದು, ಮುಟ್ಟಿನ ಕಪ್‍ಗಳು ಇರಬಹುದು, ಪ್ಯಾಡ್‍ಗಳ ಬಳಕೆ ಮತ್ತು ಅವುಗಳ ವಿಲೇವಾರಿ ತುಂಬಾ ಮುಖ ಆಗುತ್ತದೆ. ಯಾಕೆಂದರೆ, ಸರಿಯಾಗಿ ನಾವು ವಿಲೇವಾರಿ ಮಾಡದಿದ್ದರೆ, ಪರಿಸರ ಮಾಲಿನ್ಯ ಕೂಡ ಆಗುತ್ತದೆ. ಆ ನಿಟ್ಟಿನಲ್ಲಿ ಕೂಡ ಮುಟ್ಟಿನ ಕಪ್ ಬಳಸುವುದು ಸೂಕ್ತ. ಕಾಟನ್ ಬಟ್ಟೆಯ ಪ್ಯಾಡ್‍ಗಳೂ ಸಿಗುತ್ತವೆ. ಮಾಮೂಲಾಗಿ ಅಂಗಡಿಯಲ್ಲಿ ಸಿಗುವಂತಹ ಪ್ಯಾಡ್‍ಗಳಲ್ಲಿ ಏನೆಲ್ಲ ರಾಸಾಯನಿಕ ಅಂಶಗಳು ಇರುತ್ತವೆ, ಅವುಗಳ ಬಳಕೆಯಿಂದ ಆರೋಗ್ಯದ ಮೇಲೆ ಏನು ಪರಿಣಾಮ ಆಗುತ್ತದೆ- ಇಂತಹ ವಿಷಯಗಳ ವಿವರಣೆ ಕೂಡ ಈ ಪುಸ್ತಕದಲ್ಲಿದೆ.

ಬಹಳ ಮುಖ್ಯವಾಗಿ ನಮಗೆ ಶಾಲೆ ಕಾಲೇಜುಗಳಲ್ಲಿ ಮತ್ತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಶೌಚಾಲಯದ್ದೇ ಬಹಳ ದೊಡ್ಡ ಸಮಸ್ಯೆ. ಕೆಲವು ಕಡೆ ಅವು ಇರುವುದೇ ಇಲ್ಲ, ಕೆಲವು ಕಡೆ ಇದ್ದರೂ ಕೂಡ ಸ್ವಚ್ಛವಾಗಿ ಇರುವುದಿಲ್ಲ. ನೀರಿನ ಅಭಾವ ಇರುತ್ತದೆ. ನಿಜಕ್ಕೂ ಶೌಚಾಲಯ ಎನ್ನುವುದು ಎಷ್ಟು ಮುಖ್ಯ, ಅದರ ಸ್ವಚ್ಛತೆಯೂ ಎಷ್ಟು ಮುಖ್ಯ, ನೀರಿರುವಂತಹ ಶೌಚಾಲಯ ಬಹಳ ಮುಖ್ಯ ಎನ್ನುವುದು ಇಲ್ಲಿ ತಿಳಿಯುತ್ತದೆ. ಶೌಚಾಲಯ ಇಲ್ಲ ಎಂಬ ಕಾರಣಕ್ಕೆ ಅನೇಕ ಹುಡುಗಿಯರು ನೀರೇ ಕುಡಿಯುವುದಿಲ್ಲ, ಅದರಿಂದ ಖಾಯಿಲೆಗಳು ಬರುತ್ತವೆ ಎಂಬುದನ್ನೂ ಗಮನಿಸಬೇಕು.

ಗಾರ್ಮೆಂಟ್ಸ್ ಕೆಲಸಗಾರ್ತಿಯರನ್ನು ನೋಡಿದಾಗಿ ಅವರು ಕೆಲಸಕ್ಕೆ ಹೋದಾಗ ಸರಿಯಾದ ಶೌಚಾಲಯ ಇಲ್ಲದ ಕಾರಣಕ್ಕೆ ಬೆಳಿಗ್ಗೆಯಿಂದ ಸಂಜೆಯವರೆಗೆ ನೀರೇ ಕುಡಿಯುವುದಿಲ್ಲ. ಊಟ ಮಾಡಿದರೂ ನೀರು ಕುಡಿಯುವುದಿಲ್ಲ. ಹೀಗೆ ತಡೆಹಿಡಿದರೆ, ಸರಿಯಾದ ಸಮಯದಲ್ಲಿ ಮೂತ್ರ ವಿಸರ್ಜನೆ ಮಾಡದಿದ್ದರೆ, ಅನೇಕರ ಮೂತ್ರಕೋಶದಲ್ಲಿ ಕಲ್ಲುಗಳು ಉತ್ಪತ್ತಿಯಾಗಬಹುದು, ಮೂತ್ರದ್ವಾರಕ್ಕೆ ಸೋಂಕು ಉಂಟಾಗಿ ಅದು ಯುಟಿಐ ತೊಂದರೆಗೆ ದಾರಿ ಮಾಡಬಹುದು. ಇವೆಲ್ಲದರ ಬಗ್ಗೆ ಕೂಡ ಈ ಪುಸ್ತಕದಲ್ಲಿ ಲೇಖಕಿ ವಿವರಿಸಿದ್ದಾರೆ. ಮತ್ತೆ ಅದರ ಜೊತೆಗೆ ಹಾಡುಗಳು ಕೂಡ ಇದರಲ್ಲಿ ಇವೆ.ಮುಟ್ಟು ಮುಟ್ಟೆಂದೇಕೆ ಕೀಳಾಗಿ ಕಾಣುವಿರಿ’ ಎನ್ನುವಂತಹ ಹಾಡು ಇದೆ. ಮತ್ತೆ ಕಾಮಾಕ್ಯ ದೇವರ ಪ್ರಸ್ತಾಪ ಬಂದಿರುವಂತದ್ದು ಇಲ್ಲಿನ ಒಂದು ವಿಶೇಷ.

ಬಿಳಿಮುಟ್ಟಿನ ಬಗ್ಗೆ ಕೂಡ ಅನೇಕರಿಗೆ ತಪ್ಪು ಕಲ್ಪನೆ ಇದೆ. ಸಹಜವಾಗಿ ಸ್ರಾವ ಸ್ವಲ್ಪ ಮಟ್ಟಿಗೆ ಎಲ್ಲರಲ್ಲೂ ಇದ್ದೇ ಇರುತ್ತೆ. ಇರಬೇಕು ಸಹ. ಅದು ನಮ್ಮ ದೇಹದಲ್ಲಿ ಆಗುತ್ತಿರುವಂತಹ ಹಾರ್ಮೋನುಗಳ ಏರುಪೇರುನಿಂದಾಗಿ ಅದು ಉಂಟಾಗುತ್ತದೆ. ಆದರೆ ಅತಿಯಾದ ಬಿಳಿ ಸ್ರಾವ ಅಥವಾ ಅದು ಹಳದಿ ಬಣ್ಣ ಇರುವುದು, ನವೆ ಉಂಟಾಗುವುದು, ಉರಿ ಉಂಟಾಗುವುದು ಇವೆಲ್ಲಾ ಸಮಸ್ಯೆ ಇದ್ದರೆ ಆಗ ಚಿಕಿತ್ಸೆ ಬಹಳ ಮುಖ್ಯ ಆಗುತ್ತದೆ. ಯಾಕೆಂದರೆ ಗರ್ಭಕೋಶದ ಕ್ಯಾನ್ಸರ್ ನಮ್ಮಲ್ಲಿ ನಂಬರ್ ಒನ್ ಸಮಸ್ಯೆಯಾಗಿದೆ. ಸರಿಯಾದ ರೀತಿಯಲ್ಲಿ ಗರ್ಭಕೋಶದ ಆರೋಗ್ಯವನ್ನು ಕಾಪಾಡಿಕೊಂಡರೆ ಬಹಳ ಒಳ್ಳೆಯದು. ನಮ್ಮ ವಂಶವಾಹಿನಿಯಲ್ಲಿ ಆ ತರದ್ದ ಕ್ಯಾನ್ಸ್ಸರ್ ಲಕ್ಷಣಗಳು ಏನಾದರೂ ಇದ್ದರೆ, ಅಮ್ಮನಿಗೆ, ಚಿಕ್ಕಮ್ಮನಿಗೆ, ದೊಡ್ಡಮ್ಮ, ಇದು ಹತ್ತಿರದ ಸಂಬಂಧಿಗಳಿಗೆ ಕ್ಯಾನ್ಸರ್ ಇದ್ದರೆ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ಅದಲ್ಲದೆ, ಮೂತ್ರದ್ವಾರ ಮತ್ತೆ ಜನನಾಂಗ ಜೊತೆಗೆ ಮಲದ್ವಾರ ಮೂರು ಕೂಡ ಒಟ್ಟಿಗೆ ಇರುವುದರಿಂದ, ಹೆಣ್ಣುಮಕ್ಕಳಲ್ಲಿ ಒಂದಕ್ಕೆ ಸೋಂಕು ಉಂಟಾದರೆ ಅದು ಮತ್ತೊಂದಕ್ಕೂ ಹರಡುವ ಸಾಧ್ಯತೆ ಬಹಳ ಹೆಚ್ಚು. ಆ ಕಾರಣದಿಂದಾಗಿ ಪ್ರತೀ ಬಾರಿ ಮೂತ್ರ ವಿಸರ್ಜನೆ ಮಾಡಿದಾಗ ಅಥವ ಮಲವಿಸರ್ಜನೆ ಮಾಡಿದಾಗ ಸ್ವಚ್ಛಗೊಳಿಸಿಕೊಳ್ಳುವುದು ಬಹಳ ಮುಖ್ಯ. ಮೊದಲು ನಾವು ಜನನಾಂಗ ಸ್ವಚ್ಛಗೊಳಿಸಿ ನಂತರ ಗುದದ್ವಾರವನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ವಿರುದ್ಧ ದಿಕ್ಕಿನಲ್ಲಿ ಮಾಡಬಾರದು.

ಋತುಬಂಧ

ಇನ್ನು ಋತುಬಂಧದ ಸಮಯದಲ್ಲೂ ದೇಹದಲ್ಲಾಗುವ ಬದಲಾವಣೆಗಳು ಮತ್ತು ಮುಟ್ಟಾಗುವ ಮುಂಚಿನ ಬದಲಾವಣೆಗಳ ಸಮಸ್ಯೆಗಳು, ಆಮೇಲೆ ನಿಲ್ಲುವ ಒಂದು ವರ್ಷ ಎರಡು ವರ್ಷ ದೇಹದಲ್ಲಿ ಒಂದು ರೀತಿಯ ಬಿಸಿ ಬಿಸಿ ಉಂಟಾಗುವುದು ಹೀಗೆ ಹಲವಾರು ವಿಚಾರಗಳ ಮಾಹಿತಿ ಇಲ್ಲಿದೆ. ಇದರಿಂದ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು, ನಮ್ಮ ಆಹಾರ ಹೇಗಿರಬೇಕು, ವ್ಯಾಯಾಮ ಹೇಗಿರಬೇಕು ಮುಂತಾದ ಹಲವಾರು ವಿಷಯಗಳನ್ನು ಜ್ಯೋತಿ ಹಿಟ್ನಾಳ್ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಇದು ಜನಸಾಮಾನ್ಯರಿಗೆ ಉಪಯುಕ್ತ.

ವೈದ್ಯರು ರಚಿಸಿದ ಆರೋಗ್ಯ ಸಾಹಿತ್ಯ ವಿಜ್ಞಾನ ಸಾಹಿತ್ಯ ಪ್ರಕಾರದಲ್ಲಿ ಮುಂಚೂಣಿಯಲ್ಲಿದೆ. ಹಲವಾರು ಕೃತಿಗಳನ್ನು ಅನೇಕ ವೈದ್ಯರು ಬರೆದಿದ್ದಾರೆ ಪ್ರಸೂತಿ ಸ್ತ್ರೀರೋಗ ತಜ್ಞರು ಬರೆದಿರುವಂತಹ ಕೃತಿಗಳು ನಮಗೆ ಲಭ್ಯವಿದೆ. ಆದರೆ ಜ್ಯೋತಿ ಅವರು ಒಬ್ಬ ಸಾಮಾನ್ಯ ಮಹಿಳೆಯಾಗಿ ಅವರ ಅಂಗಳ’ ಸಂಸ್ಥೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ, ಉತ್ತರ ಕರ್ನಾಟಕದ ಮುಖ್ಯವಾಗಿ ಕೊಪ್ಪಳ ಜೆಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗೆ ಅನೇಕ ಶಿಬಿರಗಳನ್ನು ನಡೆಸಿದಾಗ ಬಂದಂತಹ ಪ್ರಶ್ನೆಗಳು, ಉತ್ತರಗಳು ಅವರ ಜೊತೆ ಸಂವಾದ ನಡೆಸಿದಾಗ ಕಂಡುಬಂದಂತಹ ಸಂಶಯ ಇವೆಲ್ಲವನ್ನೂ ಇಟ್ಟುಕೊಂಡು ಈ ಪುಸ್ತಕವನ್ನು ರಚಿಸಿದ್ದಾರೆ.

ಹೆಣ್ಣುಮಕ್ಕಳಿಗೆ ವಿದ್ಯಾವಂತರಿಗಾಗಲಿ, ಅವಿದ್ಯಾವಂತರಾಗಿರಲಿ ಯಾರಿಗೇ ಆಗಲಿ ಹಲವಾರು ಅನುಮಾನಗಳು ಕಾಡುತ್ತವೆ. ಇವತ್ತು ಮುಟ್ಟಿನ ದಿನದಲ್ಲಿ ವಿದ್ಯಾವಂತರೇ ಹಬ್ಬ ಹರಿದಿನದಲ್ಲಿ ಮುಟ್ಟನ್ನು ಮುಂದಕ್ಕೆ ಹೋಗುವಂತೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ರೂಢಿಯಲ್ಲಿದೆ. ಇದರ ಅವಶ್ಯಕತೆ ಇಲ್ಲ. ಯಾಕಂದರೆ ಮುಟ್ಟು ಸಹಜವಾದದ್ದು. ಇಂದು ಔಷಧಿ ಅಂಗಡಿಯಲ್ಲಿ ಅತಿ ಹೆಚ್ಚು ಮಾರಾಟವಾಗುವುದು ಮುಟ್ಟನ್ನು ಮುಂದೂಡುವ ಮಾತ್ರೆ ಎಂದು ಹೇಳುತ್ತಾರೆ. ಇದು ನಮ್ಮ ದೇಹದಲ್ಲಿ ಬೇರೆ ರೀತಿಯಲ್ಲಿ ಮತ್ತು ನಮ್ಮ ಮುಟ್ಟಿನ ಮೇಲೆ ಪರಿಣಾಮ ಬೀರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ ಇಂಥದೇ ಹಲವಾರು ಸಂಗತಿಗಳನ್ನು ಇಟ್ಟುಕೊಂಡು ಜ್ಯೋತಿ ಹಿಟ್ನಾಳ್ ಅವರುಮುಟ್ಟು ಮತ್ತು ಆರೋಗ್ಯ’ ಕೃತಿಯನ್ನು ರಚಿಸಿದ್ದಾರೆ. ಇದು ಹೈಸ್ಕೂಲ್ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಎಲ್ಲರೂ ಓದಬೇಕಾದ ಪುಸ್ತಕ ಮತ್ತು ಪೋಷಕರು ಓದಬೇಕಾದ ಪುಸ್ತಕ. ಶಾಲಾ ಕಾಲೇಜಿನ ಗ್ರಂಥಾಲಯದಲ್ಲೂ ಇದು ಇರುವುದು ಸೂಕ್ತ.

ಮುಟ್ಟಿನ ಕುರಿತಾಗಿ ಕೆಲವು ಸಮುದಾಯಗಳಲ್ಲಿ ಮನೆಯ ಒಳ ಕೋಣೆಯಲ್ಲೇ ಕೂರಿಸುವಂತಹ ಪದ್ಧತಿ ಇದೆ. ಅಂದರೆ ಅವರು ಸ್ನಾನ ಮಾಡಬಾರದು ಮನೆಯಲ್ಲೇ ಕುಳಿತುಕೊಳ್ಳಬೇಕು ಎನ್ನುವಂತಹದ್ದು ಇದ್ದರೆ, ಇನ್ನು ಕೆಲವು ಸಮುದಾಯಗಳಲ್ಲಿ, ಊರಿನ ಹೊರಗಡೆ ಗುಡಿಸಲಿನಲ್ಲೇ ಅವರು ವಾಸಮಾಡಬೇಕು. ಅಲ್ಲಿ ಅವರ ಅಡುಗೆ ಅವರೇ ಮಾಡಿಕೊಳ್ಳಬೇಕು. ಯಾರೂ ಅವರ ಕೆಲಸಕ್ಕೆ ಸಹಾಯಕ್ಕೆ ಹೋಗುವುದಿಲ್ಲ. ಆ ರೀತಿಯಲ್ಲಿ ಊರಿನಿಂದ ದೂರ ಇರಿಸುವುದರಿಂದ, ಎಷ್ಟೋ ಹೆಣ್ಣುಮಕ್ಕಳನ್ನು ಶಾಲೆಯಲ್ಲಿ ಪರೀಕ್ಷೆ ಇದ್ದರೂ ಕೂಡ ಕಳಿಸುವುದಿಲ್ಲ. ಶಾಲೆಗೆ ಕಳಿಸದೆ ಎಷ್ಟೋ ಹೆಣ್ಣುಮಕ್ಕಳು ಎಸ್.ಎಸ್.ಎಲ್.ಸಿ ಪಿಯುಸಿ, ಡಿಗ್ರಿ ಪರೀಕ್ಷೆಗಳನ್ನು ಅವರು ಬರೆಯಲು ಆಗುತ್ತಿಲ್ಲ. ಈ ರೀತಿಯ ಮುಟ್ಟನ್ನು ಕುರಿತ ಹಲವಾರು ಸಾಮಾಜಿಕ ಸಂಗತಿಗಳು ಇಲ್ಲಿ ಚರ್ಚಿತವಾಗಿವೆ.

ಮುಟ್ಟಿನ ಹೊಟ್ಟೆ ನೋವಿನ ಬಗ್ಗೆಯೂ ಸಹ ತಿಳಿಯಬೇಕು. ಸಹಜವಾಗಿ ಗರ್ಭಕೋಶದ ಮಾಂಸಖಂಡಗಳಲ್ಲಿ ಈ ನೋವು ಕಂಡುಬರುತ್ತದೆ. ಕೆಲವರಲ್ಲಿ ಹೆಚ್ಚಾಗಿ ನೋವು ಕಂಡುಬರುತ್ತದೆ. ಆ ಸಮಯದಲ್ಲಿ ಬಿಸಿನೀರಿನ ಚೀಲವನ್ನು ನೋವಿರುವ ಜಾಗಕ್ಕೆ ಇರಿಸಿಕೊಳ್ಳುವುದು, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯ. ಬಿಸಿಯಾದ ಆಹಾರ ಸೇವನೆ ಮಾಡುವುದರಿಂದ ಕಡಿಮೆ ಆಗುತ್ತದೆ. ನೋವು ನಿವಾರಕ ಮಾತ್ರೆಯನ್ನು ಅತೀ ಹೆಚ್ಚು ನೋವು ಇದ್ದಾಗ ಮಾತ್ರ ಸೇವಿಸಬೇಕು. ಇಲ್ಲದಿದ್ದರೆ ಅವಶ್ಯಕತೆ ಇಲ್ಲ. ಇಂತಹ ಹಲವಾರು ವಿಷಯಗಳ ಬಗ್ಗೆ ಈ ಪುಸ್ತಕ ತಿಳಿಯಹೇಳುತ್ತದೆ. ಮನೆಯಲ್ಲಿ ತಾಯಿಯಾಗಲಿ, ಅಕ್ಕನಾಗಲಿ, ಸ್ನೇಹಿತೆಯಾಗಲಿ, ಹೇಳಿಕೊಳ್ಳದೇ ಇರುವ, ಹೇಳಿಕೊಡದ ವಿಷಯಗಳನ್ನು ಈ ಕೃತಿ ಹೇಳುತ್ತಾ ಹೋಗುತ್ತದೆ. ಒಂದು ರೀತಿಯಲ್ಲಿ ಆಪ್ತಸಲಹೆ ಮಾದರಿಯಲ್ಲಿ ಈ ಕೃತಿ ಮೂಡಿಬಂದಿದೆ. ಇದರಲ್ಲಿನ ಚಿತ್ರಗಳು ಸಹ ಅತ್ಯಂತ ಸೂಕ್ತ ಎಂದು ಹೇಳಬಹುದು.

(ಮುಟ್ಟು ಮತ್ತು ಆರೋಗ್ಯ ಲೇ: ಜ್ಯೋತಿ ಹಿಟ್ನಾಳ್ ಪ್ರ: ಅಂಗಳ ಪ್ರಕಾಶನ, ಕೊಪ್ಪಳ ಟ ಸಂಖ್ಯೆ: 100 ಬೆಲೆ: ರೂ. 150 ಸಂಪರ್ಕ: 96635 06731)

  • ಡಾ. ವಸುಂಧರಾ ಭೂಪತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *