Uncategorizedಪುಸ್ತಕ ಸಮಯ

ಪುಸ್ತಕ ಸಮಯ/ ಮಂಗಳಮುಖಿಯರ ಸಾಮಾಜಿಕ ಮುನ್ನಡೆಯ ಇತಿಹಾಸ – ಲಲಿತಾ ಕೆ. ಹೊಸಪ್ಯಾಟಿ


ಮಂಜಮ್ಮ ಜೋಗತಿಯವರ ಆತ್ಮಕಥನ “ನಡುವೆ ಸುಳಿವ ಹೆಣ್ಣು” ಇಡೀ ಮಂಗಳಮುಖಿ ಸಮುದಾಯದ ಪ್ರಾತಿನಿಧಿಕ ಧ್ವನಿ.. ಸಾಹಿತ್ಯ ಲೋಕಕ್ಕೆ ಸಮಾಜಕ್ಕೆ ಜನಪದ ಲೋಕಕ್ಕೆ ಇತಿಹಾಸಕ್ಕೆ ಇದೊಂದು ಕೊಡುಗೆ. ಇದು ಸಾಮಾಜಿಕ ಋಣವೊಂದರ ಸಂದಾಯವೂ ಹೌದು. ಮಂಜಮ್ಮ ಅವರ ಅಂತಃಕರಣದ ಭಾವನೆಗಳು ಅರುಣ ಜೋಳದಕೂಡ್ಲಗಿ ಅವರಿಂದ ಅಕ್ಷರಗಳಾಗಿ ಮೂಡಿಬಂದಿವೆ. ಇದರ ಮೂಲಕ ಮಂಗಳಮುಖಿಯರ ವೈಯಕ್ತಿಕ ಮತ್ತು ಸಾಮಾಜಿಕ ತಲ್ಲಣಗಳನ್ನು ಚಿಂತನೆಗೆ ಹಚ್ಚಲಾಗಿದೆ. ಸಮಾಜದ ಕಣ್ಣ ಪೊರೆ ಕಳಚಲು ಇದು ನೆರವಾಗುತ್ತದೆ.

ಗರಗಸದಂತೆ ಬದುಕನ್ನು ತೇಯ್ದ ಮಂಜಮ್ಮನವರ ಎದೆಯಲಿ ಮಡುಗಟ್ಟಿದ ನೋವು ನಿರ್ವಿಕಲ್ಪ ಸಮಾಧಿ ಸ್ಥಿತಿಯಲಿ ಸ್ನಿಗ್ಧವಾಗಿದೆ. ಸಮಾಜಕ್ಕೆ ವಿಮುಖರಾಗದೇ ಏಕಾಂಗಿಯಾಗಿ ಹೋರಾಡಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ. ನಿರಾಕರಣೆಯಿಲ್ಲದೇ ಬದುಕಿದ ಮಂಜಮ್ಮ ಜೋಗತಿಯವರ ನಡೆ ಓದುಗರ ಎದೆಯಲ್ಲಿ ಕಂಪನ ಮೂಡಿಸುತ್ತದೆ. ಈ ಕೃತಿ ಓದುಗರು, ಪಂಡಿತರು, ವಿಮರ್ಶಕರು ಯಾರ ಕೈಗೆ ಹೋದರೂ, ಭಾವ ಬುತ್ತಿಯನು ಉಣಬಡಿಸಿದ ಮಂಜಮ್ಮ ಜೋಗತಿಯವರ ಬಗೆಗೆ ಗೌರವವನ್ನುಇಮ್ಮಡಿಸುತ್ತದೆ. ಅರಿವಿಲ್ಲದೆಯೋ ಅರಿವಿದ್ದೋ ಪಡೆದ ಯಾತನೆಗೆ ಯಾರ ಪಾತ್ರವಿದೆ ಎಂಬುದಕ್ಕೆ ಉತ್ತರವೂ ಇಲ್ಲಿದೆ. ಹೀಗಾಗಿ ಸಾಹಿತ್ಯ ಲೋಕದಲ್ಲಿ ಮಂಗಳಮುಖಿಯರ ಸಾಮಾಜಿಕ ಮುನ್ನಡೆಯ ಇತಿಹಾಸ ಗಮನಿಸುವಾಗ ಇದೊಂದು ನಂಬುಗೆಯ ಆಕರವಾಗುತ್ತದೆ.

ಪ್ರಕಟಿಸಿದ ಪಲ್ಲವ ವೆಂಕಟೇಶ, ಕೃತಿಕಾರ ಅರುಣ ಜೋಳದಕೂಡ್ಲಿಗಿ. ಹಾಗೂ ಮಂಜಮ್ಮ ಜೋಗತಿ ಇವರೆಲ್ಲ ಈ ಸಂಕಲನದಲ್ಲಿ ಪ್ರತೀತ ಬಂಧದಲ್ಲಿ ಹೆಣೆಗೆಯಾಗಿದ್ದಾರೆ. ಇದು ಸಾಮಾಜಿಕ ಋಣವೊಂದರ ಸಂದಾಯ. ಹೆಣ್ತನದ ಅಗಾಧತೆ ಎಂತದು? ಹೆಣ್ತನದ ಮೇಲಿನ ದಬ್ಬಾಳಿಕೆ ದೌರ್ಜನ್ಯ ವರ್ತನೆಗಳೆಂತವು? ಕಷ್ಟವೆಂದರೇನು? ಅಪಮಾನವೆಂದರೆ ಯಾವುದು? ಈ ಎಲ್ಲಾ ಹೊಯ್ದಾಟಗಳಿಗೆ ಉತ್ತರ ದೊರೆಯುತ್ತದೆ. ಅಜ್ಞಾತ ವಲಯದ ಒಳಹೊಕ್ಕು ಗುಪ್ತಗಾಮಿನಿಯಂತಿದ್ದ ಮಂಜಮ್ಮನವರ ಜೀವಸೆಲೆಯನ್ನು ನಿರೂಪಕರು ಲೋಕಕ್ಕೆ ಪರಿಚಯಿಸಿದ ರೀತಿ ಎದುರು ಬದುರು ಕುಳಿತು ಕೇಳಿಸಿಕೊಳ್ಳುವಂತಿದೆ. ಮುನ್ನುಡಿ ಬರೆದ ಹೆಸರಾಂತ ಚಿಂತಕರಾದ ಡಾ. ಬರಗೂರು ರಾಮಚಂದ್ರಪ್ಪ ಅವರು ಹೇಳುವಂತೆ ಬರವಣಿಗೆಯನ್ನು ಬೀಳುಬಿಡದ ಭೂಮಿಯಂತೆ ಕಾಯ್ದುಕೊಂಡು ಬಂದಿದ್ದಾರೆ. ಬರೆಯುತ್ತಲೇ ವಿಶೇಷವಾಗಿ ಸಮಕಾಲಿನ ಸಂದರ್ಭದಲ್ಲಿ ಸಮಸ್ಯೆ ಮತ್ತು ಸವಾಲುಗಳನ್ನು ಕಾಳಜಿಯಿಂದ ಕೆದಕುತ್ತಾ ಕುಲುಮೆಯಲ್ಲಿ ಅದ್ದಿ ತೆಗೆದು ಅಕ್ಷರವಾಗಿಸಿ ಇವರ ತೀವ್ರತೆ ಜನಪದ ರೂಪಕವಾಗುತ್ತಿದೆ ಎನ್ನುವಲ್ಲಿ ಸತ್ಯಾಂಶವಿದೆ.

“ನಡುವೆ ಸುಳಿವ ಹೆಣ್ಣು” ಎಂಬ ಹೆಸರೇ ಅಸಾಮಾನ್ಯ ಪರಿಭಾಷೆಯದ್ದು. ಇದೊಂದು ಆತ್ಮಕಥನ ನಿರೂಪಣೆಯಾದರೂ ವೈಯಕ್ತಿಕ ಜೀವನ ವಿಧಾನ ಹಾಗೂ ಸಾರ್ವತ್ರಿಕ ಜೀವನ ವಿಧಾನ ಪರಸ್ಪರ ಬಿಟ್ಟಿಲ್ಲ ಎಂಬುದರ ರೂಪಕ. ಇದೊಂದು ಬಹು ಆಯಾಮದ ಸಂವೇದನೆ ತಲ್ಲಣಗಳ ಕಥನ. ಜೊತೆಗೆ ಮಂಜಮ್ಮನವರ ವೈಯಕ್ತಿಕ ಬದುಕನ್ನು ಕಟ್ಟಿಕೊಡುತ್ತದೆ..ಮಂಜಮ್ಮ ಜೋಗತಿಯವರ ಮೊದಲ ಹೆಸರು ಮಂಜುನಾಥ. ತಂದೆ ಬಿ ಹನುಮಂತ ಶೆಟ್ಟಿ.ತಾಯಿ ಜಯಲಕ್ಷ್ಮೀ. ಬಳ್ಳಾರಿ ಜಿಲ್ಲೆಯ ಕಲ್ಕಂಬ ಜನ್ಮಸ್ಥಳ. ಅವರ ತಂದೆ ಕಂಪ್ಲಿ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದವರು. ನಂತರ ಹರಿಹರದ ಬಿರ್ಲಾ ಫ್ಯಾಕ್ಟರಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇವರ ತಾಯಿ ಹೆತ್ತದ್ದು ಇವರನ್ನೊಡಗೂಡಿ ಇಪ್ಪತ್ತೊಂದು ಮಕ್ಕಳು. ಆದರೆ ಇವರಿಗೇ ಗೊತ್ತಿಲ್ಲ. ತಾನೆಷ್ಟನೇ ಮಗನೆಂದು.

ಆರು ಏಳನೇ ಕ್ಲಾಸಿನಲ್ಲಿರುವಾಗಲೇ ಹುಡಿಗೇರ ಒಡನಾಟ ಬೇಕೆನಿಸಲು ಶುರುವಾಯಿತು. ಒಂದು ಸಾರೆ ನಾಟಕದಲ್ಲಿ ಇವರ ಹೆಸರು ಮಂಜುನಾಥನಿಂದ ನೃತ್ಯ ಎನ್ನದೇ ಬೆಂಗಳೂರು ಲತಾ ಅನ್ನೋರಿಂದ ಡಾನ್ಸ್ ಅಂತ ಅನೌನ್ಸ್ ಮಾಡುತ್ತಾರೆ, ಅವರ ಹಾಗೆ ಥಳುಕಿ ಬಳಕಿ ಡಾನ್ಸ ಮಾಡಿ ಜನರಿಂದ ಮೆಚ್ಚಿಗೆ ಪಡೆದು ಖುಷಿ ಪಡುತ್ತಾರೆ. ಉದ್ದಕ್ಕೆ ಜಡೆ ಹೆಣ್ಕೊಂಡು, ಲಂಗ ಚೋಲಿ ಹಾಕ್ಕೊಂಡು, ಡಾನ್ಸ್ ಮಾಡಬೇಕೆಂಬ ಒಳಗಿನ ಆಸೆ ಬಲಿಯುತ್ತದೆ. ಯಾವ ಮನೆಯಲ್ಲಿಯೂ ಇದು ಒಪ್ಪದ ಮಾತು. . ಹೆಂಗ್ಸು ಮಾಡಿದಂಗೆ ಮಾಡಂಗಿಲ್ಲ ಎಂದು ಬೈದರೂ ಹೊಡೆದರೂ ಲೆಕ್ಕಿಸಲಿಲ್ಲ. ಹೆಣ್ಣು ಮಕ್ಕಳ ಡ್ರೆಸ್ ಹಾಕ್ಕೊಳ್ಳೋದು ನಿಲ್ಲಿಸೊಲ್ಲ.. ಚೌಡಮ್ಮ ದೇವಿ ಒಲುಮೆಯಾಗಿದೆ ಎನ್ನುತ್ತಾರೆ ಕೆಲವರು. ಎಸ್ ಎಸ್ ಎಲ್ ಸಿ ಮುಗಿದ ಮೇಲೆ ಅಣ್ಣನ ಹತ್ತಿರ ಕಲ್ಲುಕಂಬಕ್ಕೆ ಪಿಗ್ಮಿ ಎಜೆಂಟ್ ಕೆಲಸಕ್ಕೆ ಕಳಿಸಿದ್ದು ಹೆಣ್ಣು ಮಕ್ಕಳ ಹಾಗೆ ಆಡಬಾರದೆಂದು.. ಅಲ್ಲಿ ಆಗಿದ್ದೇ ಬೇರೆ ಹೆಣ್ಣು ಹಂಬಲ ಹೆಚ್ಚಾಗುತ್ತದೆ.

ಗಂಡು ಮಕ್ಕಳು ಧರಿಸುವ ಲುಂಗಿ ಸೀರೆಯಾಯಿತು. ಎದೆ ಮೇಲಿಂದ ಒಂದು ಟವೆಲ್ಲು ಇಳಿ ಬಿಟಿದ್ದೇ ಸೆರಗಾಯಿತು. ಕಂಡ ಗೆಳೆಯರು-“ ಯಾಕಲೇ ಮಂಜ ಹೆಣು ಮಕ್ಕಳು ಮಾತಾಡದಂಗೆ ಮಾತಾಡತಿ? ಹೆಣ್ಣುಗ” ಎಂದರೆ ಒಳಗೊಳಗೆ ಸಂತೋಷ. ಅಣ್ಣನಿಗೆ ಅಪಮಾನ ಎನಿಸಿದಂತಾಗಿ ತಾಯಿ ಹತ್ತಿರ ಮತ್ತೆ ಕುಕ್ಕುವಾಡಕ್ಕೆ ಮರು ಪಯಣ. ಊರಿಗೆ ಬಂದಿದ್ದ ಗಾಂಧೀ ಜೋಗತಿ ಎಂಬವರು ಮಂಜುನ ಮಾವ. ತಾನೂ ಗಂಡಾಗಿಯೇ ಜೋಗತಿಯಾದವರು. ಅಪೂರ್ವ ಸಂಗಮ ಸಿನಿಮ ನೋಡುವಾಗ ಮಾವ ಗಾಂಧೀಗೆ ಹೆದರಿ ಮನೆಗೆ ಓಡಿ ಬಂದು ಮುದುರಿಕೊಂಡು ಮಲಗಿದರೂ ಮಲಗಿದ್ದಲ್ಲಿಯೇ ಬಿದ್ದ ಏಟುಗಳ ಸಂಕಟಕ್ಕೆ ಚೀರಿದಾಗ ಓಣಿ ಜನ ಬಂದು ಮಮ್ಮಲ ಮರುಗಿ ಬಿಡಿಸುತ್ತಾರೆ. ಗಾಂಧೀ ಮಾವ ಕೊಟ್ಟ ಏಟು ಜ್ವರದಿಂದ ಬಳಲಿ ಮೇಲೇಳದಂತೆ ದೇಹ ಜರ್ಝರಿತ ಮಾಡುತ್ತದೆ. ಅಲ್ಪ ಸ್ವಲ್ಪ ಇದ್ದ ಈ ಹೆಣ್ತನದ ಸಂಗತಿಗಳು ಇನ್ನೂ ಹೆಚ್ಚಾಗುತ್ತವೆ. ನಾನು ಮಾಡಿದ ತಪ್ಪಾದ್ರೂ ಏನು ನನಗೆ ಹೆಣ್ಣಿನ ಚಾಳಿ ಯಾಕ ಬರುತ್ತೆ ಎಂದು ಇಡೀ ರಾತ್ರಿ ಅತ್ತಿದ್ದು ಹೊರ ಕಿವಿಗಳಿಗೆ ಕೇಳದಿದದ್ದರೂ ಒಳ ಹೃದಯ ಮಿಡಿಯುತ್ತದೆ. ನನ್ನೊಳಗ ಹೆಣ್ಮಗಳು ಅಡಗಿ ಕೂತಾಳೇನು ನನ್ನನ್ನು ಸೀಳಿಕೊಂಡು ಹೊರಗ ಬರತಾಳೇನೋ ಅನ್ನುವ ಭಾವ ಹೆಚ್ಚಾಯಿತೆನ್ನುವ ಅವರ ಮಾತು ಇಂದಿನ ಅವರ ಇರುವಿಕೆಗೆ ಪುಷ್ಟಿ.

ವಂಶೋದ್ಧಾರಕನಾಗಿ ಮನಿ ಬೆಳಗಬೇಕಾದವನು ಹೆಣ್ಣ ಆಗಿ ನಿಂತಾಗ, ಮುಗಿಲು ಕಡಿದು ಮೈಮೇಲೆ ಬಿದ್ದಂತೆ. ಅನುಬಂಧ ಶಾಶ್ವತವಾಗಿ ಕಡಿದಂತೆ ತಾಯಿ ಒದ್ದಾಡಿ ಮನಿ ಗತಿ ಮುಂದೇನು ಎಂದು ಅಳುತ್ತಾರೆ. ಆದರೆ ಮಂಜುಗೆ ಒಳಗೊಳಗೆ ಖುಶಿ. ಅವರಮ್ಮ ಗೋಳಾಡಿಕೊಂಡು ಮುಂದೆ ಹೋದರೆ ಅಪರಾಧಿಯಂತೆ ತಲೆ ತಗ್ಗಿಸಿ ಹಿಂದೆ ನಡೆಯುತ್ತಾನೆ. ಗಂಡು ಮಗನ್ನ ಹೆಣ್ಣು ಮಗಳಂತೆ ನೋಡಲಾಗದೆ ಸಿಡಿಮಿಡಿಗೊಳ್ಳುತ್ತಾ ಒಳಗೆ ಇದ್ದರೆ ಹೊರಗೆ ಹೊರಗೆ ಇದ್ದರೆ ಒಳಗೆ ಸರಿಯುವ ತಂದೆ. ಮುಖಕ್ಕೆ ಮುಖ ಕೊಡುವುದಿಲ್ಲ. ಮಾತಾಡಬೇಕು ಅನಿಸಿದರೂ ಯಾರೂ ತುಟಿ ತೆರೆಯುವುದಿಲ್ಲ. ಎಲ್ಲಾದರೂ ಹಾಳಾಗಿ ಹೋಗೆಂದು ತಂದೆಯೇ ಕರುಳ ಕತ್ತರಿಸುವ ಮಾತಾಡಿದಾಗ ಮುಂದೆ ದಾರಿ ಕಕ್ಕಾಬಿಕ್ಕಿ .

ಅಯ್ಯಗೆ ಅಮ್ಮಗೆ ನನ್ನಿಂದಲೇ ಅವಮಾನ ಎಂದು ತಗಣಿಗೆ ಹೊಡಿಯೋ ವಿಷ ಕುಡಿದು ಬಾಯಿಗೆ ದುಪ್ಪಡಿ ತುರಿಕಿಕೊಂಡು ಮಲಗಿದರೂ ಸಾವು ಸಾಧ್ಯವಾಗುವುದಿಲ್ಲ. ಅಂಗಳಕ್ಕೆ ಬಂದು ವಿಷ ಕಾರಿ ಬೀಳುತ್ತಾರೆ. ಚಿಗಟೇರಿ ಆಸತ್ರೆಗೆ ಅಡ್ಮಿಟ್ ಮಾಡಿ ಹೋದ ಮನೆಯವರು ಆಸತ್ರೆಯಿಂದ ಬಿಡಿಸಿಕೊಳ್ಳಲೂ ಬರುವುದಿಲ್ಲ. ಆಗ ಆಸ್ಪತ್ರೆಯಲ್ಲಿ ತಂಬಿಗೆ ಇಟಕೊಂಡು ಕುಣಿತ ಶುರು ಮಾಡಿಯೇ ಹತ್ತಿಪ್ಪತ್ತು ಪೈಸೆ ಕೂಡಿಸುತ್ತಾರೆ .ಅಲ್ಲಿದ್ದ ರಾಧಮ್ಮ ಅನ್ನೋರು ಪರಿಚಯವಾಗುತ್ತದೆ. ಹದಿನೈದು ದಿನದ ನಂತರ ನಿಮ್ಮನೆಯವರು ಬರಲ್ಲ ಹೋಗಿಬಿಡು ಎಂದು ಆಸತ್ರೆಯವರು ಕಳಿಸುತ್ತಾರೆ. ಚೊಂಬು ಹಿಡಿದು ಕುಣಿದು ಹತ್ತುಹನ್ನೆರಡು ರೂಪಾಯಿ ಮತ್ತು ಒಣ ಬ್ರೆಡ್ ಕೈಯಲ್ಲಿಡಿದು ಕುಕ್ಕುವಾಡದ ಮನೆಗೆ ಬಂದರೆ ಇವರ ಪಾಲಿಗೆ ಮನೆಯ ಕದದಂತೆ ಮನೆಯವರ ಮನಗಳೂ ಮುಚ್ಚಿರುತ್ತವೆ. ತಪ್ಪು ಮಾಡಿದ್ದೀನಿ ಅದಕ್ಕೆ ಮಾತಾಡಿಸಲ್ಲ ಅನಿಸಿ ಆಸತ್ರೆಯಲ್ಲಿ ತಂದ ಒಣ ಬ್ರೆಡ್ ತಂಗಳ ಸಾರು ಕಲಿಸಿ ತಿಂದು ಮಲಗಿದಾಗ ಮೊದಲ ಬಾರಿಗೆ ಹುಟ್ಟಿದ ಮನೆಯಲ್ಲಿ ಅನಾಥೆ ಅನಿಸುತ್ತದೆ.

ಭೂಮಿ ಬಾಯಿಬಿಟ್ಟ ಅನುಭವ

ಗಂಡು ಆಗಿದ್ರೆ ಹೆಣ್ಣು ತಂದು ಮದುವೆ ಮಾಡತಿದ್ದೆ. ಹೆಣ್ಣು ಆಗಿದ್ರೆ ಗಂಡು ನೋಡಿ ಮದುವೆ ಮಾಡಿ ಕೊಡತಿದ್ದೆ. ಈಗ ಎರಡೂ ಆಗಿಲ್ಲ. ಕಣ್ಣು ಮುಂದೆ ಇರೋದು ಬೇಡವೆಂದು ತಂದೆಯೇ ಹಾಲಸ್ವಾಮಿ ಮಠದಲ್ಲಿ ಭಜನಾ ಮಂಡಳಿಯಲ್ಲಿ ಹೇಳುತ್ತಾರೆ. ಒಂದು ಕಾಟನ್ ಸೀರೆಯಲಿ ಉಡಿತುಂಬಿಸಿ ಸಿಹಿ ಅಡುಗೆ ಊಟಕ್ಕೆ ಹಾಕಿದರೂ ಅಮ್ಮ ಹೊಟ್ಟಿ ತುಂಬಾ ಉಣ್ಣು ಅಂತ ಹೇಳೋಳು ಒಂದೂ ಮಾತೂ ಆಡುವುದಿಲ್ಲ.. ಉಟ್ಟ ಸೀರೆ ಜೊತೆ ಇನ್ನೊಂದು ಸೀರೆ ತೊಗೊಂಡು ಬಸ್ ಹತ್ತಿದಾಗ ತಂದೆನೂ ಎಲ್ಲಿಗೆ ಹೋಗತಿ ಮಂಜು ಅಂತ ಕೇಳಲ್ಲ. ಇವರಿಗೂ ಮುಂದಿನ ದಾರಿ ಗೊತ್ತಿಲ್ಲ. ಎಲ್ಲಿಗೋ ಪಯಣ ಯಾವುದೋ ದಾರಿ ಎಂದು ಹೊರಟವರಿಗೆ ಆಸ್ಪತ್ರೆಯಲ್ಲಿ ಪರಚಿತರಾದ ರಾಧಮ್ಮರ ಸಹಾಯದಿಂದ ಉಚ್ಚಂಗೆಲ್ಲಮ್ಮನ ಗುಡಿ ಸೇವೆಗೆ ನಿಲ್ಲುತ್ತಾರೆ. ನಿತ್ಯ ಗುಡಿ ತೊಳೆದು ಸಾರಸಿ ದೇವರ ಸಾಮಾನು ತಿಕ್ಕಿ ತೊಳೆದರೂ ಹೊಟ್ಟೆ ತುಂಬ ಹಿಟ್ಟಿಲ್ಲ. ಒಂದು ಹಿಡಿ ಊಟದಲ್ಲಿ ಇವರಿಗಿಷ್ಟು ಕೊಟ್ಟು ತಾನು ತಿನ್ನುವ ಅಜ್ಜಿ ಇವರನ್ನು ಹೊರಗೂ ಹೋಗಲು ಬಿಡುವುದಿಲ್ಲ. ಅವರೆಷ್ಟೇ ಬೈದರೂ ದಿಕ್ಕಿಲ್ಲವೆಂದು ಸಹಿಸಿಕೊಂಡೆ ದಿನದೂಡುತ್ತಾರೆ. ಇವರ ಕಷ್ಟ ಕಂಡ ರಾಧಮ್ಮ ಒಂದು ಬಾಡಿಗೆ ಮನೆ ಪಾತ್ರೆ ಪಗಡೆ ಕೊಟ್ಟು ಜೀವನ ಮಾಡೆಂದು ಧೈರ್ಯ ತುಂಬುತ್ತಾರೆ.
ಹೊಸ ಜೀವನ ಪ್ರಾರಂಭವಾಗುತ್ತದೆ, ಪಡಲಗಿ ಹಿಡಿದು ಡಾವಣಗೇರಿಯಲ್ಲಿ ಸಂತೆಯಲ್ಲಿ ಆಡಿದರೆ ಎಂಟತ್ತು ರೂಪಾಯಿ ಬರುತ್ತದೆ. ಹಾಗೇ ರಾತ್ರಿ ಬರುವಾಗ ನಾಲ್ಕು ಜನ ಕುಡಿದ ಮತ್ತಿನಲಿ ದಾಂಢಿಗರು ಗದರಿಸಿ ದುಡ್ಡು ಕೇಳಿ ದುಡ್ಡಿಲ್ಲ ಎಂದಾಗ ಸೀರೆ ಬಿಚ್ಚಿ ತಮಗೇ ಬಂದಂತೆ ದೇಹದ ಮೇಲೆ ಆಕ್ರಮಣ ಮಾಡಿ, ಉಂಡ ಎಲೆಯಂತೆ ಬೀಸಾಡಿ ಹೋಗುತ್ತಾರೆ. ನಂತರ ತಮಗೆ ತಾವೇ ಧೈರ್ಯ ತಂದುಕೊಂಡು ಅಪಮಾನ ಸಹಿಸಿಕೊಂಡು ಮನೆಗೆ ಬಂದು ಸಂಕಟ ಪಡುತ್ತಾರೆ. ಬಾಡಿಗೆಗೂ ದುಡ್ಡಿಲ್ಲದಿದ್ದಾಗ ಕರುಣಾಮಯಿ ಮನೆ ಮಾಲೀಕ ಬಾಡಿಗೆ ಕೊಡಬೇಡಾ ಅನ್ನುತ್ತಾರೆ.
ಏನಾದರೂ ಆಗಲಿ ಗಟ್ಟಿಯಾಗಬೇಕೆಂಬ ನಿರ್ಧಾರ ಮೊಳಕೆಯೊಡಿದಿದ್ದೇ ಇಲ್ಲಿಂದ.ಒಂದಿನ ದಾವಣಗೇರಿಯಲ್ಲಿ ಚೌಡಕಿ ಶಬ್ದ ಕಿವಿಗೆ ಬಿದ್ದು ತಡಬಡಿಸಿ ನೋಡುತ್ತಾರೆ.ಅಲ್ಲಿ ಮಟಕಲ್ಲು ಬಸಪ್ಪ ವಯಸ್ಸಾದರೂ ಚೌಡಕಿ ಬಾರಿಸುತ್ತಾ ಹಾಡು ಹೇಳುತ್ತಿದ್ದರೆ, ಆತನ ಮಗ ದೇವರ ಕೊಡ ಹೊತ್ತು ಕುಣಿಯುತ್ತಿರುತ್ತಾನೆ, ಅದನ್ನು ನೋಡಿ ತಾನು ಕುಣಿಯಬೇಕೆಂದಾಗ ಕುಣಿತ ಕಲಿಸಲು ಮನೆಗೆ ಕರೆದುಕೊಂಡು ಹೋಗುತ್ತಾನೆ. ಚೌಡಕಿ ಪದ ಹಾಡತಾ ಕೊಡ ಹೊತ್ತು ನೃತ್ಯ ಮಾಡಲೇಬೇಕು ಎಂದ ಮಂಜಮ್ಮ ಅವರ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಕುಣಿಯೋದನ್ನು ನೋಡಿ ಮೂರು ನಾಲ್ಕು ತಿಂಗಳಲ್ಲಿ ಕುಣಿತ ಬಂದುಬಿಡುತ್ತದೆ. ಭಾನುವಾರ ಶುಕ್ರವಾರ ಕುಣಿಯಲು ಹೋದಾಗ ಬರುವ ದುಡ್ಡಿನಲ್ಲಿ ಇವರಿಗೆ ನಯಾ ಪೈಸೆನೂ ಕೊಡೋದಿಲ್ಲ. ಇಡೀ ಹಗಲು ಕುಣಿತಕ್ಕೆ ಮೀಸಲಾದವು, ಇವರ ಮೈಯೆಲ್ಲ ಹಣ್ಣುಗಾಯಿ ನೀರು ಗಾಯಿಯಾದರೂ ನಿಲ್ಲಿಸುವಂತಿರಲಿಲ್ಲ. ಮೆಣಸಿನಕಾಯಿ ಸುಗ್ಗಿ ಸಂತೆ ರೈತರ ಸುಗ್ಗಿ ರಾಶಿ ಕಣ ಹೀಗೆ ಕುಣಿತಕ್ಕೆ ಹೋದ ಕಡೆಗೆಲ್ಲ ಯುವಕರು ಸಿಳ್ಳೆ ಹಾಕಿದಂತೆ ಇವರಿಗೆ ನೂರ್ಮಡಿ ಉತ್ಸಾಹ ತುಂಬುತ್ತಿತ್ತು. ಹುಮ್ಮಸ್ಸು ಹೆಚ್ಚಾಗುತ್ತಿತ್ತು.

ಅದೇ ವೇಳೆಗೆ ಗಿರಿಜಮ್ಮ ಮತ್ತು ತಿಮ್ಮಣ್ಣ ಭಾಗಮ್ಮ ಎನ್ನುವ ಜೋಗತಿಯರ ಪರಿಚಯವಾಗಿ ಗಿರಿಜಮ್ಮ ಹೇಳುವ ಯಲ್ಲಮ್ಮನ ಕಥೆಯ ಹಾಡಿಕಿ ಮಾಡಿ ಹೇಳೋದನ್ನು ಕಲಿತದ್ದು ವಿದ್ಯಾರ್ಥಿಯಾಗಿ, ಭಯ ಭಕ್ತಿಯಿಂದ ಅವರ ಕಾಲು ಒತ್ತಿ ಸೇವೆಯನ್ನು ಮಾಡಿ ಹಾಡುವ ಕಲೆ ಕಲಿತರು. ಗೌರವಯುತ ಬದುಕಿಗಾಗಿ ಪರದಾಟ ನಡೆಯುತ್ತದೆ. ಹೊಸಪೇಟಿ ತಾಲೂಕಿನ ಚಿಲಕನಟ್ಟಿಯಲ್ಲಿ ಮಾವನ ಮನೆಯಲ್ಲಿ ಒಂದು ಸೀರೆ ಉಡಿಸುವ ಆಸೆಗೆ ಮೂರು ತಿಂಗಳು ಇರುತ್ತಾರೆ. ಮಾವನ ಹೆಂಡತಿಗೂ ಇವರಿಗೂ ಮನಸ್ತಾಪ ಬಂದು ಮೂರು ದಿನ ಉಪವಾಸವಿದ್ದರೂ ಯಾರಿಗೂ ಹೇಳುವುದಿಲ್ಲ. ತಲೆಸುತ್ತಿ ಬಿದ್ದಾಗ ಸುಶೀಲಮ್ಮ ಅನ್ನುವವರು ಮಕ್ಕಳ ಜೊತೆ ಊಟ ಮಾಡಿಸಿ ಮಗಳಂತೆ ಸಂತೈಸುತ್ತಾರೆ. ಜೀವನ ನಿರ್ವಹಣೆಗಾಗಿ ಟ್ಯೂಶನ್ ಹೇಳುವುದಲ್ಲದೇ, ಇಡ್ಲಿ ಚಟ್ನಿ ಮಾರಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಾರೆ .

ಹೀಗೇ ಜೀವನ ಸಾಗಿಸುವಾಗಲೇ ಒಂದಿನ ಗಾಂಧಿ ಜೋಗತಿಯಿಂದಲೇ ಕಾಳಮ್ಮನ ಪರಿಚಯವಾಗುತ್ತದೆ. ಕಾಳಮ್ಮ ಗುರುವಾಗಿ ತಾಯಿಯಾಗಿ ದಾರಿ ತೋರಿದ್ದಲ್ಲದೇ ಹೊಸತೊಂದು ಜನಪದ ಎಲ್ಲಮ್ಮನ ರಂಗ ಗೀತ ಕಥಾನಕಕ್ಕೆ ತೆರೆದುಕೊಳ್ಳಲು ಅವಕಾಶ.ದೊರಕಿಸುತ್ತಾರೆ..ಇದೂ ಕೂಡಾ ಕಷ್ಟದ್ದೆ .ಅನಿಸಿದರೂ ಅನಿವಾರ್ಯತೆ ಮತ್ತು ಕಲೆಯನ್ನು ತಮ್ಮದಾಗಿಸಿಕೊಳ್ಳುವ ಒಲವು ಸುಮ್ಮನಿರಗೊಡುವುದಿಲ್ಲ.ಇಲ್ಲಿಂದಲೆ ಹೊಸ ಕಲೋಪಾಸಕಿಯಾಗುವ ಸಾಂದರ್ಭಿಕ ಅವಕಾಶ ಲಭ್ಯವಾಗುತ್ತದೆ.

ಆಧುನಿಕತೆಯ ಸ್ಪರ್ಶ

ಕಾಳಮ್ಮನವರ ಜಾನಪದ ಕಲೆ ಆಧುನಿಕತೆಯ ಸ್ಪರ್ಶ ಕೊಟ್ಟವರು ಮಂಜಮ್ಮನವರು. ಜೋಗತಿಯವರಿಗೆ ರಂಗ ವೇದಿಕೆ ಏರಲು ಅವಕಾಶ ಕೊಡದ ಜನರಿಂದಲೆ ಮತ್ತೆ ಇವರಿಗೆ ಎಲ್ಲಮ್ಮ ನಾಟಕವಾಡಲು ಔತಣ. ಗಂಡಾಗುವ ಮಹಿಷಾಸುರ ಭಸ್ಮಾಸುರ ಪಾತ್ರಕ್ಕೂ ಸೈ, ಹಾಗೇ ಎಲ್ಲಮ್ಮ ತಾಯಿ ಪಾತ್ರಕ್ಕೂ ಸೈ, ನಡೆದ ದಾರಿ ಕಷ್ಟದ್ದಾದರೂ ಸಮಾಜ ಒಪ್ಪುವಂತೆ ಬದುಕು ಮುಡುಪು. ತನ್ನಂತೆ ಮಂಗಳಮುಖಿಯಾದವರಿಗೆ ರಂಗಭೂಮಿ ಮೂಲಕ ಕಲೆಯ ಬದುಕಿನಲ್ಲಿ ಹೊಸದಾರಿಗೆ ಕೈ ಹಿಡಿದು ನಡೆಸಿದರು ಮಂಜಮ್ಮ. ಯಲ್ಲಮ್ಮನ ಹಾಡು ಹೇಳುವದರಲ್ಲಿ, ಜೋಗತಿನೃತ್ಯದಲ್ಲಿ ಇಡೀ ನಾಡಿಗೆ ಪ್ರಸಿದ್ಧಿ ಪಡೆದರು. ಈಗ ಯಲ್ಲಮ್ಮನ ನಾಟಕ ಮಾಡುವುದರಲ್ಲೂ ಖ್ಯಾತರು. ಜನಪದ ಕಲಾ ಸರಸ್ವತಿ ಕೈಬಿಡಲಿಲ್ಲ. ಜಾನಪದ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆಗಿ ದಾಖಲೆ ಬರೆದಾಯಿತು. ಪದ್ಮಶ್ರೀ ಪುರಸ್ಕಾರದ ಕೀರ್ತಿ ಮುಡಿಗೇರಿತು.

ಕೃತಿಯ ಪ್ರತಿ ಸಾಲಿನಲ್ಲೂ ಹೆಣ್ಣು ಜೀವದ ಭಾವ ತಳಮಳಗಳು ನದಿಯಾಗಿ ಹರಿದಿವೆ, ಟ್ರಾನ್ಸ್ ಜೆಂಡರ್ ಆಗಿ ಕಠಿಣವಾದ ಸವಾಲುಗಳನ್ನು ಎದುರೆಸಿದ ಸಂಗತಿಗಳು ಹರಳುಗಟ್ಟಿವೆ. ಸವಾಲುಗಳ ಗಳಿಗೆಗಳು ಕೆಂಡದಂತೆ ಸುಟ್ಟರೂ ಅವನ್ನು ಎದುರಿಸಿ ಮೆಟ್ಟಿನಿಂತ ಛಲ ಪ್ರೇರಣೆ ಎದ್ದು ಕಾಣುತ್ತವೆ. ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಸಂದೇಶ ಸಾರುವ ಜೀವನಗಾಥೆಯನು ಕಟ್ಟಿಕೊಟ್ಟಿದ್ದಾರೆ ಲೇಖಕ ಅರುಣ ಜೋಳದಕೂಡ್ಲಿಗಿ ಹಾಗೂ ಮಂಜಮ್ಮ ಜೋಗತಿಯವರು. ಇಲ್ಲಿರುವ 120 ಕ್ಕೂ ಹೆಚ್ಚು ಪಾತ್ರಗಳು, ಜನಪದ ಒಗಟುಗಳು, ಜೋಗತಿ ಪದ್ಧತಿ, ಪರಂಪರೆ ಸಂಪ್ರದಾಯಗಳು ಎಲ್ಲವೂ ಅಧ್ಯಯನದ ಆಕರಗಳು, ಒಂದು ಬದುಕಿನಿಂದ ಇನ್ನೊಂದು ಬದುಕಿಗೆ ವಲಸೆ ಬಂದಾಗ ಒಳಗಣ ಹೊರಗಣ ಸಂವಹನ ಲಿಂಗತ್ವವನ್ನು ಮೀರಿ ನಿಲ್ಲುತ್ತದೆ ಎಂಬ ಸಂದೇಶ ಸಾರುತ್ತವೆ. ಈಸಿ ಜೈಸಿದ ಬದುಕು ಹಲವಾರು ಕಾರಣಗಳಿಂದ ಸ್ವೀಕಾರಕ್ಕೆ ಯೋಗ್ಯವಾಗಿದೆ. ಮಂಗಳಮುಖಿಯರನ್ನು ಕಾಣುವ ಕಣ್ಣಿನ ಪೊರೆಯನ್ನು ಕಳಚಿಡುವ ಪರಿವರ್ತನೆಗೆ ನೆರವಾಗುವ ಈ ಕೃತಿ ಹಲವಾರು ಆಯಾಮಗಳಿಂದ ಗಮನಿಸುವಂತಹುದು.

ಲಲಿತಾ ಕೆ. ಹೊಸಪ್ಯಾಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *