ಪುಸ್ತಕ ಸಮಯ / ಪ್ರಾಂಜಲ ಮನಸ್ಸಿನ ಆತ್ಮನಿವೇದನೆ – ಡಾ. ವಸುಂಧರಾ ಭೂಪತಿ

ಇತ್ತೀಚೆಗೆ ಪ್ರಕಟವಾದ ಡಾ. ಎಚ್. ಗಿರಿಜಮ್ಮ ಅವರ ಆತ್ಮಚರಿತ್ರೆ “ಕಾಡುತಾವ ನೆನಪುಗಳು” ಒಬ್ಬ ಸುಶಿಕ್ಷಿತ ಮಹಿಳೆಯ ಬದುಕಿನ ಹಲವು ತವಕ ತಲ್ಲಣ ತಳಮಳಗಳ ಪ್ರಾಂಜಲ ನಿರೂಪಣೆ. ಹುಟ್ಟಿದ ಮನೆ, ಬೆಳೆದ ಪರಿಸರಬಎಲ್ಲೆಡೆಯೂ ಅನುಭವಿಸಿದ ನೋವು, ತಾರತಮ್ಯ, ದ್ರೋಹ ಇವೆಲ್ಲವನ್ನೂ ಈ ಸೂಕ್ಷ್ಮ ಸಂವೇದನೆಯ ಲೇಖಕಿ ನುಂಗಿಕೊಂಡ ಬಗೆ, ಯಾರನ್ನೂ ದೂಷಿಸದೆ ಎಲ್ಲವನ್ನೂ ಸ್ವಯಂ ನಿರ್ಧಾರದ ಚೌಕಟ್ಟಿಗೆ ತರುವ ಇಲ್ಲಿನ ತಣ್ಣನೆಯ ಸ್ವಭಾವ ಅಚ್ಚರಿಯನ್ನೂ ಹುಟ್ಟಿಸುತ್ತದೆ. ಮಹಿಳೆಯರ ಅನುಭವಗಳಂತೆ ಆತ್ಮಕಥೆಗಳಲ್ಲೂ ಎಂದೂ ಏಕರೂಪತೆ ಇರುವುದಿಲ್ಲ ಎನ್ನುವುದನ್ನು ಹೇಳುತ್ತದೆ.

ಕರೋನಾ ಸಾಮಾಜಿಕ, ಆರೋಗ್ಯದ, ಆರ್ಥಿಕ ಸಂಕಷ್ಟಗಳ ನಡುವೆಯೂ ನಮ್ಮದೇ ಆದ ಸಮಯ ದೊರಕಿಸಿಕೊಟ್ಟಿದ್ದೂ ಸುಳ್ಳಲ್ಲ. ನಾವು ಓದದೇ ಎತ್ತಿಟ್ಟಿದ್ದ ಮತ್ತು ಇತ್ತೀಚೆಗೆ ಪ್ರಕಟವಾದ ಹೊಸ ಪುಸ್ತಕಗಳನ್ನು ಓದಲು ಸಾಧ್ಯವಾಗಿದ್ದು ಮರೆಯುವಂತಿಲ್ಲ. ಹಾಗೆ ನಾನು ಓದಿದ ಪುಸ್ತಕಗಳಲ್ಲಿ ಮನಸ್ಸನ್ನು ತಟ್ಟಿದ್ದು, ಬೆಚ್ಚಿಸಿದ್ದು, ಸಂಕಟವನ್ನು ಹುಟ್ಟುಹಾಕಿದ್ದು, ಕಣ್ತುಂಬುವಂತೆ ಮಾಡಿದ ಪುಸ್ತಕ ಡಾ.ಎಚ್, ಗಿರಿಜಮ್ಮನವರ ಆತ್ಮಕಥಾನಕ ‘ಕಾಡುತಾವ ನೆನಪುಗಳು’. ಅವರೇ ಪ್ರೀತಿಯಿಂದ ಕಳಿಸಿದ ಪುಸ್ತಕ ರಾತ್ರಿ ಊಟದ ನಂತರ ಮಲಗುವ ಮೊದಲು ಕೈಗೆತ್ತಿಕೊಂಡೆ. ಆ ಪುಸ್ತಕ ಓದುತ್ತ ಹೋದಂತೆಲ್ಲ ನಿದ್ರೆಯನ್ನು ಬದಿಗೆ ಸರಿಸಿ ಬೆಳಗಿನ ಜಾವದವರೆಗೂ ಓದಿ ಮುಗಿಸುವವರೆಗೂ ಸಮಾಧಾನವಿರಲಿಲ್ಲ.

ಡಾ. ಎಚ್. ಗಿರಿಜಮ್ಮನವರು ನಾನು ತುಂಬ ಗೌರವಿಸುವ ಆತ್ಮೀಯರು. ಗಿರಿಜಮ್ಮನವರು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ವೈದ್ಯವೃತ್ತಿಯಿಂದ ಪದಾರ್ಪಣೆ ಮಾಡಿ ಸಾಹಿತ್ಯರಚನೆಗೆ ತೊಡಗಿರುವ ವೈದ್ಯರುಗಳಲ್ಲಿ ಜನಪ್ರಿಯತೆ ಪಡೆದ ಸೂಕ್ಷ್ಮಸಂವೇದನೆಯ ಸಾಹಿತಿ ವೈದ್ಯೆ. ವೃತ್ತಿ ಜೀವನದಲ್ಲಿ ಕರ್ತವ್ಯ ಪ್ರಜ್ಞೆಯಿಂದ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಗಿರಿಜಮ್ಮನವರು ಸಾಹಿತ್ಯಲೋಕದಲ್ಲಿ ಕಥೆ, ಕಾದಂಬರಿ, ಸಿನಿಮಾ ಸಾಹಿತ್ಯ, ವೈದ್ಯಸಾಹಿತ್ಯ ರಚಿಸಿ ಹೆಸರು ಮಾಡಿದವರು. ಒಬ್ಬ ವ್ಯಕ್ತಿಯ ಬದುಕು ಸಾಮಾಜಿಕ ಸಂದರ್ಭದಲ್ಲಿ ಕಾಣುವುದೇ ಬೇರೆ, ಆದರೆ ವೈಯಕ್ತಿಕ ನೆಲೆಯಲ್ಲಿ ಇತರರಿಗೆ ಕಾಣದ ವ್ಯಕ್ತಿ ಕೇಂದ್ರಿತ ಬದುಕಾಗಿ ಇರುತ್ತದೆ. ಸಾರ್ವಜನಿಕವಾಗಿ ಪ್ರಸಿದ್ಧ ವೈದ್ಯೆಯಾಗಿ ಸಾಹಿತಿಯಾಗಿ ಕಾಣುವ ಗಿರಿಜಮ್ಮ ವೈಯಕ್ತಿಕ ಬದುಕಿನಲ್ಲಿ ಅದೆಷ್ಟು ನೋವುಂಡವರು ಎಂಬುದು ಬೇರೆಯವರಿಗೆ ಗೊತ್ತಿರುವುದಿಲ್ಲ. ಗಿರಿಜಮ್ಮನವರ ಆತ್ಮಕಥೆ ‘ಕಾಡುತಾವ ನೆನಪುಗಳು’ ಓದಿದ ಎಲ್ಲರಿಗೂ ದಿಗ್ಭ್ರಮೆ ಹುಟ್ಟಿಸುವ ಒಳಸಂಕಟಗಳ ದಾರುಣತೆ ಮನಸ್ಸನ್ನು ತಟ್ಟುತ್ತದೆ. ಅವರ ಬಗೆಗಿನ ಗೌರವವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತದೆ ಈ ಕೃತಿ.

‘ಕಾಡುತಾವ ನೆನಪುಗಳು’ ಬರವಣಿಗೆಯ ರೀತಿಯೇ ಆತ್ಮನಿವೇದನೆಯ ಆಪ್ತತೆಯಿಂದ ಕೂಡಿದೆ. ತಮ್ಮ ಮಾನಸಪುತ್ರಿಗೆ ಬರೆದ ಪತ್ರ ಮಾದರಿಯ ರೀತಿಯಲ್ಲಿ ಇಲ್ಲಿಯ ನೆನಪುಗಳು ಬಿಚ್ಚಿಕೊಳ್ಳತೊಡಗುತ್ತವೆ. ಬಾಲ್ಯದಿಂದ ಹಿಡಿದು ಇಂದಿನವರೆಗಿನ ಪ್ರಮುಖ ಘಟನಾವಳಿಗಳು ಆತ್ಮಾವಲೋಕನದ ಮಾದರಿಯಲ್ಲಿ ನಿರೂಪಿತವಾಗಿವೆ. ಈ ಬರವಣಿಗೆಯ ಒಂದು ವಿಶೇಷತೆ, ಅನನ್ಯತೆಯೆಂದರೆ ತಮ್ಮ ಬದುಕಿನಲ್ಲಿ ಘಟಿಸುವ ಅವಘಡಗಳಿಗೆ ಬೇರೆ ಯಾರನ್ನೂ ದೂಷಿಸದೇ ತಮ್ಮನ್ನೇ ತಾವು ಪರೀಕ್ಷೆಗೆ ಒಡ್ಡಿಕೊಂಡಂತೆ ಬದುಕನ್ನು ಅವಲೋಕಿಸಿದ್ದಾರೆ. ಗಿರಿಜಮ್ಮನವರು ಮಾಗಿದ ಮನಸ್ಥಿತಿಯ ತಮ್ಮ ನಿವೃತ್ತಿ ಜೀವನದ ಸಂದರ್ಭದಲ್ಲಿ ಈ ಪುಸ್ತಕವನ್ನ ಬರೆದಿರುವುದು ಇಂತಹ ಪಕ್ವವಾದ ಬರವಣಿಗೆಯ ಫಲರೂಪಕ್ಕೆ ಕಾರಣವಾಗಿದೆ.

ದಲಿತ ಕುಟುಂಬದಲ್ಲಿ ಹುಟ್ಟಿ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲಿ ಪಾಲನೆ-ಪೋಷಣೆ ಪಡೆದ ಮಕ್ಕಳು ತಾಯಿಯ ಕನಸನ್ನು ನನಸು ಮಾಡುವಲ್ಲಿ ಕಟಿಬದ್ಧ ಪ್ರಜ್ಞೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಗಿರಿಜಮ್ಮನವರ ಓದು, ಓದಿನೊಳಗಿನ ಬೆಳವಣಿಗೆ ಇವೆಲ್ಲವೂ ತಾಯಿಯ ಆಸೆಯನ್ನು ಈಡೇರಿಸುವ ಶ್ರದ್ಥೆ, ಶ್ರಮ, ಉತ್ಸಾಹ, ಮಾತ್ರ ತನ್ನದೆಂಬ ರೀತಿಯಲ್ಲಿ ಬೆಳೆದದ್ದು, ಇದನ್ನು ಗಿರಿಜಮ್ಮನವರು ನಿರ್ವಂಚನೆಯಿಂದ ಹೇಳಿಕೊಳ್ಳುತ್ತಾರೆ. ಏಕೆಂದರೆ ತನ್ನನ್ನು, ತನ್ನ ತಂಗಿಯನ್ನು ಸಾಕಿ ಬೆಳೆಸುವುದಕ್ಕೆ ಅಸಹಾಯಕಳಾದ ತಾಯಿ ಪಡುವ ಕಷ್ಟ ಅವರ ಮನಸ್ಸನ್ನು ತುಂಬಿಕೊಂಡು ತಾಯಿಗೆ ಸಂತೋಷ ತರುವುದೇ ತನ್ನ ಬಾಳಿನ ಗುರಿ ಎಂಬಂತೆ ಶ್ರಮ ಪಡುತ್ತಾರೆ. ಅದನ್ನು ಛಲದಿಂದ ಸಾಧಿಸಿ ಎಂ.ಬಿ.ಬಿ.ಎಸ್. ಪದವಿ ಮುಗಿಸಿದಾಗ ಸಾಧಿಸಿದ ತೃಪ್ತಿ ಅವರದಾಗುತ್ತದೆ. ಆದರೆ ಗಿರಿಜಮ್ಮನವರಿಗೆ ಬಹಳ ಕಾಲದವರೆಗೆ ಕಾಡುವ ಒಂದು ಅರಿಮೆಯೆಂದರೆ ಅದು ತಮ್ಮ ಬಣ್ಣಕ್ಕೆ ಸಂಬಂಧಿಸಿದ್ದು. ‘ನಾನು ಕಪ್ಪು ಬಣ್ಣದವಳು’ ಎಂಬ ಕೀಳರಿಮೆ ಅವರನ್ನು ಬಹಳಷ್ಟು ವಿಚಾರಗಳಲ್ಲಿ ಸಂಕೋಚ, ಹಿಂಜರಿಕೆಗಳಿಗೆ ಒಳಗು ಮಾಡುತ್ತದೆ. ಅದೇ ತನ್ನ ತಂಗಿ ಸುಂದರಿ, ತಾಯಿಯ ಪ್ರೀತಿ ಅವಳ ಕಡೆಗೆ ಹೆಚ್ಚು ಎಂಬುದು ಆ ಕುಟುಂಬದೊಳಗೆ ಅಪ್ರಜ್ಞಾಪೂರ್ವಕವಾಗಿ ಅವರ ಮನೋಸ್ಥಿತಿಯ ಬೆಳವಣಿಗೆಗೆ ಕಾರಣ ಸನ್ನಿವೇಶವಾಗುತ್ತದೆ. ಈ ಎಲ್ಲ ವಿಚಾರಗಳನ್ನು ತಾವು ಅನುಭವಿಸಿದ ಘಟನೆಗಳನ್ನು ನಿರೂಪಿಸುವುದರ ಮುಖಾಂತರ ಲೇಖಕಿ ನಿರ್ಮಮತ್ವದೊಳಗೆ ಚಿತ್ರಿಸಿದ್ದಾರೆ.

ಇಷ್ಟೆಲ್ಲ ಇದ್ದೂ ತಮಗೆ ಪಾಠ ಮಾಡಿದ ತಾವು ಆರಾಧಿಸುತ್ತಿದ್ದ ಪ್ರಾಧ್ಯಾಪಕರೊಬ್ಬರ ಬಗ್ಗೆ ಇವರಲ್ಲಿ ಮೂಡುವ ಪ್ರೇಮಭಾವವನ್ನು ನಿವೇದಿಸಿದಾಗ ಆ ಪ್ರಾಧ್ಯಾಪಕರು ತಣ್ಣನೆಯ ಮಾತುಗಳಲ್ಲಿ ತಿರಸ್ಕರಿಸುತ್ತಾರೆ. ಇದೆಲ್ಲ ನಡೆದ ಮೇಲೆ ಗಿರಿಜಮ್ಮನವರ ಮನಸ್ಥಿತಿ ಬೇರೆಯೇ ಆಗುತ್ತದೆ. ಆಗ ಆತುರದ, ಆವೇಗದ, ಸಮಾಲೋಚಿಸದೇ ಸನ್ನಿವೇಶದ ಸಂದರ್ಭನುಸಾರಿಯಾಗಿ ವರ್ತಿಸುವಂತಹ ಮನೋಸ್ಥಿತಿ ಅವರದಾಗುತ್ತದೆ. ವೈದ್ಯೆಯಾಗಿ, ಮನಶ್ಯಾಸ್ತ್ರವನ್ನು ಓದಿದವರಾಗಿ, ಬೇರೆಯವರಿಗೆ ಮಾರ್ಗದರ್ಶನ ನೀಡಬಲ್ಲ, ವಿವೇಕಶಾಲಿಯಾಗಿ ತಮ್ಮ ವೃತ್ತಿಜೀವನದಲ್ಲಿ ಗೆಲುವು ಸಾಧಿಸಿದ, ಬಾಲ್ಯದಲ್ಲಿ ಹುಡುಗರೊಂದಿಗೆ ಧೈರ್ಯವಾಗಿ ಓಡಾಡಿ ಸಿಗರೇಟು ಸೇದಿದ ಗಿರಿಜಮ್ಮನವರು ವೈಯಕ್ತಿಕ ಬದುಕಿನ ಸವಾಲುಗಳ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುವಲ್ಲಿ ಭಾವನಾತ್ಮಕತೆಗೇ ಹೆಚ್ಚು ಬೆಲೆ ಕೊಟ್ಟರೆಂದು ಅನ್ನಿಸುತ್ತದೆ.

ಗಿರಿಜಮ್ಮನವರು ಪ್ರಾಂಜಲಭಾವದಲ್ಲಿ ನಿರೀಕ್ಷಿಸಿದಂತೆ ಈ ಆತ್ಮಕಥನವನ್ನು ನಿರೂಪಿಸಿದ್ದಾರೆ. ಅಣ್ಣ ನಂಬಿಸಿ ವಂಚನೆ ಮಾಡಿದ ಮೇಲೆ ಅವನ ತಮ್ಮನನ್ನು ತಮಗಿಂತ ವಯಸ್ಸಿನಲ್ಲಿ ಕಿರಿಯವನಾದರೂ ಕ್ಲಿನಿಕ್ ಕೆಲಸಕ್ಕೆ ಸೇರಿಸಿಕೊಂಡು ನಂತರದಲ್ಲಿ ಅವನನ್ನೇ ಮದುವೆಯಾಗುತ್ತಾರೆ. ಅವನ ಮನೋಸ್ಥಿತಿ ಗೊತ್ತಿದ್ದು ಅವನನ್ನು ಕ್ಷಮಿಸುತ್ತ ಹೋಗುವುದು ಇವೆಲ್ಲವೂ ಅವರಿಗೆ ಅವರೇ ತಂದುಕೊಂಡ ತೊಡಕುಗಳು. ಇದನ್ನು ಸ್ವಯಂ ಲೇಖಕಿಯೇ ಆತ್ಮವಿಮರ್ಶೆ ಮಾಡಿಕೊಂಡಂತೆ ವಿಶ್ಲೇಷಿಸಿದ್ದಾರೆ. ಇದರೊಟ್ಟಿಗೆ ಕುಟುಂಬದ ಬಗೆಗೆ ಇವರಿಗಿದ್ದ ಭಾವನಾತ್ಮಕ ಸೆಳೆತ ಕೆಲವೊಮ್ಮೆ ವಿವೇಚನಾರಹಿತವಾದ ಭಾವಾವೇಶವಾಗಿ ಇವರನ್ನ ವಂಚನೆಗೆ ಒಳಗು ಮಾಡುತ್ತದೆ. ಇವರ ದುಡಿಮೆಯ ಹಣ ಮಾತ್ರ ಬೇಕು, ಆದರೆ ಇವರ ಬದುಕಿನ ಬಗೆಗೆ ತಿರಸ್ಕಾರ, ಸಿಟ್ಟು, ಸೆಡವು ತೋರಿ ಇವರನ್ನು ದೂರವಿಡುವ ತಾಯಿ, ತಂಗಿ ಮತ್ತು ಅವಳ ಕುಟುಂಬ ಇವರೆಲ್ಲರೂ ನೇರವಾಗಿ ಗಿರಿಜಮ್ಮನವರ ಏಕಾಂಗಿತನಕ್ಕೆ ಕಾರಣರಾಗುತ್ತಾರೆ.

ಹೀಗೆ ಒಂಟಿಯಾಗುತ್ತ ಆ ಒಂಟಿತನವನ್ನು ಹೊಗಲಾಡಿಸಲು ಓದು, ಬರವಣಿಗೆ, ವೃತ್ತಿ ಬದುಕು ಹಾಗೂ ಹಲವು ಡಿಗ್ರಿಗಳ ಸಂಪಾದನೆ, ಡಿಲಿಟ್ ಪದವಿ ಮುಂತಾದವುಗಳಲ್ಲಿ ಗಿರಿಜಮ್ಮನವರು ಮುಳುಗಿಹೋಗುತ್ತಾರೆ. ವೈಯಕ್ತಿಕ ಬದುಕಿನ ಸಂಕಟಗಳನ್ನು ಸಾಮಾಜಿಕ ಬದುಕಿನ ಸಾಧನೆಗಳಲ್ಲಿ ಮರೆಯುವ ಪ್ರಯತ್ನ ಮಾಡುತ್ತಾರೆ. ಅದರಿಂದ ತೃಪ್ತಿ ಸಿಗದಿದ್ದಾಗ ಮರಳಿ ತಾಯಿಯ ಬಳಿಗೆ ಬರುವ ಮನಸ್ಸು ಮಾಡುತ್ತಾರೆ. ಕಾರಣ ಯಾವ ತಂಗಿಯನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದ ತಾಯಿ ಈಗ ಒಂಟಿಯಾಗಿದ್ದಾರೆ. ತಾಯಿಗೆ ಮೋಸ ಮಾಡಿ ತಂಗಿ ಕುಟುಂಬದೊಂದಿಗೆ ಬೇರೆಯೇ ಹೋಗಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿರುವ ತಾಯಿಗಾಗಿ ಗಿರಿಜಮ್ಮನವರು ವೃತ್ತಿಗೆ ರಾಜೀನಾಮೆ ಕೊಡುತ್ತಾರೆ. ತಮ್ಮ ಬರವಣಿಗೆಯ ಕಾರ್ಯಕ್ಷೇತ್ರ ಬೆಂಗಳೂರನ್ನು ಬಿಟ್ಟು ದಾವಣಗೆರೆಗೆ ಹೋಗುತ್ತಾರೆ. ಈ ಎಲ್ಲ ಅನುಭವಗಳನ್ನು ಬರೆಯುವಾಗ ಅವರ ಮುಗಿದ ಮನಸ್ಸು ದೋಷಾರೋಪಣೆಯನ್ನು ಮಾಡದ ಆತ್ಮನಿರೀಕ್ಷೆಯ ನಿಷ್ಠುರತೆಯಲ್ಲಿ ಹೆಜ್ಜೆಯಿಟ್ಟ ನಡೆಯಾಗುತ್ತದೆ.

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ಸರ್ಕಾರಿ ಸೇವೆಯಲ್ಲಿ ಹಗಲಿರುಳೆನ್ನದೇ ದುಡಿದು ಬಡ ಹೆಣ್ಣುಮಕ್ಕಳ ನೋವು ನೀಗಿಸುವಲ್ಲಿ ಸದಾ ಸನ್ನದ್ಧರಾಗಿ ಗ್ರಾಮೀಣ ಹೆಣ್ಣುಮಕ್ಕಳ ಪಾಲಿಗೆ ಸಂಜೀವಿನಿಯಾಗುತ್ತಾರೆ. ಅವರ ವೃತ್ತಿ ಜೀವನದ ಆರಂಭದಲ್ಲಿಯೇ ಭ್ರಷ್ಟಾಚಾರದಲ್ಲಿ ತೊಡಗಿದ ಹಿರಿಯ ವೈದ್ಯಾಧಿಕಾರಿಗಳು, ರಾಜಕಾರಣಿಗಳು, ಅವರು ಕೊಡುವ ಕಿರುಕುಳಗಳ ಬಗ್ಗೆ, ಅದನ್ನ ಎದುರಿಸಿದ ಕುರಿತು ವಸ್ತುನಿಷ್ಠವಾಗಿ ಬರೆದಿದ್ದಾರೆ.

‘ಕಾಡತಾವ ನೆನಪುಗಳು’ ಓದಿ ಮುಗಿಸಿದಾಗ ಒಂದು ದೀರ್ಘ ನಿಟ್ಟುಸಿರು ಹೊರಬಂದು ತಣ್ಣನೆಯ ವಿಷಾದ ಆವರಿಸಿಬಿಡುತ್ತದೆ. ‘ಕಾಡತಾವ ನೆನಪುಗಳು’ ಭಾವಗೀತಾತ್ಮಕ ರೀತಿಯಲ್ಲಿ ನಿರೂಪಣೆಗೊಂಡಿರುವ ಒಂದು ಅನನ್ಯ ಆತ್ಮಕಥನ. (ಕಾಡುತಾವ ನೆನಪುಗಳು (ಆತ್ಮಕಥನ), ಲೇ: ಡಾ. ಎಚ್ ಗಿರಿಜಮ್ಮ, ಪ್ರ: ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು. ಪುಟ: 160, ಬೆಲೆ: 150.)


ಡಾ. ವಸುಂಧರಾ ಭೂಪತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಪುಸ್ತಕ ಸಮಯ / ಪ್ರಾಂಜಲ ಮನಸ್ಸಿನ ಆತ್ಮನಿವೇದನೆ – ಡಾ. ವಸುಂಧರಾ ಭೂಪತಿ

 • September 23, 2020 at 7:42 am
  Permalink

  ವಸುಂಧರ ಮೇಡಂ ಗಿರಿಜಮ್ಮ ಅವರ ಆತ್ಮ ಕಥನ ಕಾಡತಾವ….. ಚೆನ್ನಾಗಿ ಬರೆದಿದ್ದೀರಿ. ಪುಸ್ತಕ ಓದಿದಂತಾಯಿತು.

  Reply
 • September 23, 2020 at 7:44 am
  Permalink

  ವಸುಂಧರ ಮೇಡಂ ಗಿರಿಜಮ್ಮ ಅವರ ಆತ್ಮ ಕಥನ ಕಾಡತಾವ….. ಚೆನ್ನಾಗಿ ಬರೆದಿದ್ದೀರಿ. ಪುಸ್ತಕ ಓದಿದಂತಾಯಿತು. ಯಾವುದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿದರೆ ಡೂಪ್ಲಿಕೇಟ್ ಅಂತ ಬರುತ್ತೇ. ಕಾಮೆಂಟ್ ಮಾಡೋದೇ ಬೇಡ ಅನಿಸುತ್ತದೆ.

  Reply

Leave a Reply

Your email address will not be published. Required fields are marked *