ಪುಸ್ತಕ ಸಮಯ/ ಪ್ರಥಮ ಸ್ತ್ರೀವಾದಿ ಪಠ್ಯ– ಸು. ವಿಜಯಲಕ್ಷ್ಮಿ

ವಿಧವೆಯರು ಮಂಗಳ ಸಂಕೇತಗಳನ್ನು ತೆಗೆಯುವುದನ್ನು ತಾರಾಬಾಯಿ ಕಟುವಾಗಿ ವಿರೋಧಿಸುತ್ತಾರೆ. ವಿಧವಾ ವಿವಾಹಕ್ಕೆ ಅಡ್ಡ ಬಂದವರ ಬಗ್ಗೆ ಕುದಿಯುತ್ತಾರೆ. ಸಾವಿತ್ರಿ ಸತ್ಯವಾನನನ್ನು ಯಮನಿಂದ ಬಿಡಿಸಿ ತಂದ ಹಾಗೆ ಒಬ್ಬ ಪುರುಷನು ಇದುವರೆಗೂ ಸತ್ತ ಹೆಂಡತಿಯನ್ನು ಬದುಕಿಸಿ ತಂದ ಇತಿಹಾಸವಿಲ್ಲ ಎಂದು ೧೮೮೨ರಲ್ಲಿ ಬರೆದ “ಸ್ತ್ರೀ-ಪುರುಷ ತುಲನೆ” ಕೃತಿಯಲ್ಲಿ ತಾರಾಬಾಯಿ ದಿಟ್ಟತನದಿಂದ ಹೇಳುತ್ತಾರೆ.

“ಭಾರತದ ಪ್ರಥಮ ಸ್ತ್ರೀವಾದಿ ಪಠ್ಯ” ಎಂದು ಪರಿಗಣಿತವಾದ ತಾರಾಬಾಯಿ ಶಿಂಧೆ ಅವರ ಪುಸ್ತಕವನ್ನು “ಸ್ತ್ರೀ-ಪುರುಷ ತುಲನೆ” ಎಂದು ಎನ್. ಗಾಯತ್ರಿ ಅವರು ಇತ್ತೀಚೆಗೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಹಲವು ದೃಷ್ಟಿಗಳಿಂದ ಗಮನಾರ್ಹವಾದ ಐತಿಹಾಸಿಕ ಪಠ್ಯ.

ತಾರಾಬಾಯಿ ಶಿಂಧೆಯವರು ಮರಾಠಿಯಲ್ಲಿ ೧೮೮೨ರಲ್ಲಿ ಬರೆದ `ಸ್ತ್ರೀ ಪುರುಷ ತುಲನೆ’ ಒಂದು ಉತ್ತಮ ವೈಚಾರಿಕ ಕೃತಿ. ತಾರಾಬಾಯಿ ಮರಾಠಿ, ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಯನ್ನು ಕಲಿಯಲು ಅವರ ತಂದೆ ಪ್ರೋತ್ಸಾಹಿಸಿದ್ದು ಹಾಗೂ ಅವರು ಸಂಘ, ಸಂಸ್ಥೆಗಳಲ್ಲಿ ಪಾಲ್ಗೊಂಡಿದ್ದು, ಸೇವಾ ಕಾರ್ಯಗಳನ್ನು ಪ್ರಾರಂಭಿಸಿದ್ದು ಶತಮಾನದಷ್ಟು ಹಿಂದೆಯೇ ಎನ್ನುವುದು ವಿಶೇಷ. ತಾರಾಬಾಯಿ ಹೊರ ಜಗತ್ತಿಗೆ ತಮ್ಮನ್ನು ತೆರೆದುಕೊಂಡಂತೆ ಸ್ತ್ರೀಪುರುಷರ ನಡುವಿನ ತಾರತಮ್ಯವನ್ನು ಗಮನಿಸುತ್ತಾ ಹೋಗುತ್ತಾರೆ. ಅವರು ಪುರುಷರ ದಬ್ಬಾಳಿಕೆ, ಕುತಂತ್ರ ಹಾಗೂ ಹೆಂಗಸರ ಮೇಲೆ ದೋಷಾರೋಪಣೆ ಮಾಡುವ ಕುಬುದ್ಧಿಯನ್ನು ಕಟುವಾಗಿ ಖಂಡಿಸುತ್ತಾರೆ. ಹೀಗೆ ಅವರು ಸ್ತ್ರೀ-ಪುರುಷರನ್ನು ತುಲನೆ ಮಾಡಿದಾಗ ಪುರುಷರ ಬಗ್ಗೆ ಅವರಿಗಿರುವ ಆಕ್ರೋಶವೆಷ್ಟು ಎಂದು ತಿಳಿಯುತ್ತದೆ. ಅಲ್ಲದೆ, ಅದನ್ನು ಬರೆದು ಪ್ರಕಟಿಸಿದ ದಾಷ್ಟೀಕತನವನ್ನು ಮೆಚ್ಚಲೇಬೇಕಾದ್ದು.

       ವಿಜಯಲಕ್ಷ್ಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಖಕಿ ತಾರಾಬಾಯಿಯ ಪ್ರತಿಕ್ರಿಯೆ ಅತ್ಯಂತ ತೀಕ್ಷ್ಣವಾದದ್ದು. ನ್ಯಾಯದೇವತೆ ಸ್ತ್ರೀ ಆದರೂ, ಅವಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವುದರಿಂದ ವಿಜಯಲಕ್ಷ್ಮಿಗೆ ನ್ಯಾಯ ಸಿಗುವುದೇ ಇಲ್ಲ. ಅವರ ಕೃತಿ ಕುರಿತು ಅವಹೇಳನ ವಿಮರ್ಶೆಗಳು ಪತ್ರಿಕೆಯಲ್ಲಿ ಬಂದಿದ್ದರಿಂದ, ಅವರು ವ್ಯಸನಗೊಂಡು ಹಿಂದೆ ಸರಿದಿರಬಹುದು. ಆದರೆ ಸತ್ಯಾಂಶಗಳು ಹಿಂದೆ ಸರಿಯಲು ಎಂದಿಗೂ ಸಾಧ್ಯವಿಲ್ಲ ಅಲ್ಲವೆ?

    ವಿಧವೆಯರು ಮಂಗಳ ಸಂಕೇತಗಳನ್ನು ತೆಗೆಯುವುದನ್ನು ತಾರಾಬಾಯಿ ಕಟುವಾಗಿ ವಿರೋಧಿಸುತ್ತಾರೆ. ವಿಧವಾ ವಿವಾಹಕ್ಕೆ ಅಡ್ಡ ಬಂದವರ ಬಗ್ಗೆ ಕುದಿಯುತ್ತಾರೆ. “ನೀವು ಅವಳ ಹೊರಕವಚವನ್ನು ನಗ್ನವಾಗುವವರೆಗೂ ಕಳಚಬಹುದು. ಆದರೆ ಅದೇ ಅವಳ ಒಳಗನ್ನು ಬೆತ್ತಲೆಗೊಳಿಸಲಾರಿರಿ’ ಎಂದು ಹೇಳುವ ಮೂಲಕ ಮಹಿಳೆಯರ ಪರ ನಿಲ್ಲುತ್ತಾರೆ. ಪುರುಷರು ಪರಸ್ತ್ರೀ ಸಂಬಂಧ ಹೊಂದುವುದು, ಕುಡಿಯುವುದು, ಜೂಜಾಡುವುದು, ಸುಳ್ಳು ಹೇಳುವುದು- ಮೊದಲಾದ ದುಷ್ಕೃತ್ಯವನ್ನೆಲ್ಲಾ ಎಸಗಿ ಬಂದಾಗ, ಹೆಂಡತಿಯಾದವಳು ನಗುನಗುತ್ತಾ ಅವನ ಸೇವೆ ಮಾಡಬೇಕೆಂಬುದು ಯಾವ ರೀತಿಯ ಸ್ತ್ರೀ-ಧರ್ಮ ಎಂದು ಪ್ರಶ್ನಿಸುತ್ತಾರೆ. ಹೆಂಡತಿ ಗಂಡನೇ ದೇವರೆಂದು ಭಾವಿಸಿ, ಅವನ ಸಕಲ ಸೇವೆಗಳನ್ನು ಮಾಡಿದರೆ, ಅವನೂ ಅವಳನ್ನು ಅದೇ ರೀತಿ ಪ್ರೀತಿಸಿ, ಕೃಪೆ ತೋರಬೇಕಲ್ಲವೇ? ಏನೀ ವಿಪರ್ಯಾಸ ? ಎಂದು ಪ್ರಶ್ನಿಸುತ್ತಾರೆ. ಸೀತೆ, ರುಮೆ, ದ್ರೌಪದಿ, ಗಾಂಧಾರಿ, ಚಂದ್ರಮತಿ, ಅಹಲ್ಯೆ ಮೊದಲಾದವರೆಲ್ಲರೂ ಪವಿತ್ರ ಗ್ರಂಥಗಳಲ್ಲಿ ಬರುವ ಸ್ತ್ರೀಯರಾದರೂ ಎಲ್ಲರೂ ಪುರುಷರಿಂದ ಶೋಷಿತರೇ ಎಂದು ಲೇಖಕಿ ಉದ್ಗರಿಸುತ್ತಾರೆ.

      ಪುರುಷರು ಹೆಂಗಸರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುವುದು ಸತ್ಯ. ಅಂತಹ ಪುರುಷರು ಬಡ ವಿಧವೆಯರನ್ನು ಅಪಮಾನದಿಂದ ಮೇಲೆತ್ತಲು ಹಾಗೂ ಅವರ ಮರುವಿವಾಹದ ಬಗ್ಗೆ ಚಿಂತಿಸುವುದಿಲ್ಲವೇಕೆ? ಎಂದು ಲೇಖಕಿ ಪ್ರಶ್ನಿಸುತ್ತಾ, ವೇದಿಕೆ ಮೇಲೆ ಮಾತ್ರಾ ಸಮಾಜ ಸುಧಾರಣೆ ಬಗ್ಗೆ ಭಾಷಣ ಮಾಡಿ, ಚಪ್ಪಾಳೆ, ಹಾರ-ತುರಾಯಿಗಳನ್ನು ಗಿಟ್ಟಿಸುವವರ ಮೇಲೆ ಕೆಂಡ ಕಾರುತ್ತಾರೆ.

    ಹೆಂಡತಿ ಗಂಡನಿಗಿಂತ ಮೊದಲು ಸಾಯುವುದು ಒಳ್ಳೆಯದು ಎಂಬುದಕ್ಕೆ ಸಾಕ್ಷಿಗಳೆಲ್ಲಿದೆ? ಹೆಂಡತಿ ಸತ್ತರೆ ಪುರುಷನಿಗೆ ಇನ್ನೊಂದು ಮದುವೆ. ಅದಕ್ಕೆ ಬಂಧು ಮಿತ್ರರಿಂದ ಶಿಫಾರಸ್ಸು ಬೇರೆ. ಸಾವಿತ್ರಿ ಸತ್ಯವಾನನನ್ನು ಯಮನಿಂದ ಬಿಡಿಸಿ ತಂದ ಹಾಗೆ ಒಬ್ಬ ಪುರುಷನು ಇದುವರೆಗೂ ಸತ್ತ ಹೆಂಡತಿಯನ್ನು ಬದುಕಿಸಿ ತಂದ ಇತಿಹಾಸವಿಲ್ಲ. ಹೆಣ್ಣಿನಂತೆ ಗಂಡಿಗೂ ಎರಡನೇ ಮದುವೆ ಆಗಬಾರದೆಂಬ ನಿಯಮ ಇದ್ದಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಜೈಲಿನಲ್ಲಿರುವ ಕೊಲೆಪಾತಕಿಯರಲ್ಲಿ ಮಹಿಳೆಯರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಮಹಿಳೆಯರು ವ್ಯಭಿಚಾರಕ್ಕೆ ಇಳಿದರು ಅಂದರೆ ಅದಕ್ಕೆ ಮೂಲ ಕಾರಣ ಪುರುಷನೇ ಎಂದು ತಾರಾಬಾಯಿ ದಿಟ್ಟತನದಿಂದ ಹೇಳುತ್ತಾರೆ. ಸತಿಪದ್ಧತಿಯನ್ನು ತೀವ್ರವಾಗಿ ಆಕ್ಷೇಪಿಸುತ್ತಾರೆ. ಸ್ತ್ರೀಧರ್ಮ ಕುರಿತಂತೆ ಮಂಜುಘೋಷ ಮತ್ತು ಮುಕ್ತಮಾಲಾರನ್ನು ಉಲ್ಲೇಖಿಸಿರುವುದು ಸ್ವಾಗತಾರ್ಹ.

    ಒಬ್ಬ ಮಹಿಳೆಯಿಂದಾಗಿ ಮನೆಯಿಂದ ಹೊರದೂಡಲ್ಪಟ್ಟು ಜೀವನ ಹಾಳುಮಾಡಿಕೊಂಡ ಪುರುಷರು ವಿರಳ. ಆದರೆ ಪುರುಷರಿಂದ ಮನೆಯಿಂದ ಹೊರಗಟ್ಟಿಸಿಕೊಂಡ ಮಹಿಳೆಯರು ಇದ್ದಾರೆ ಎಂದು ತಾರಾಬಾಯಿ ನೊಂದು ನುಡಿಯುತ್ತಾರೆ. ಹೊತ್ತು ಹೆತ್ತವಳು  ತಾಯಿ, ಪ್ರೀತಿಯಿಂದ ಅಣ್ಣ-ತಮ್ಮ ಎಂದು ಕರೆಯುವುದು ಸೋದರಿ, ದಾಂಪತ್ಯದಲ್ಲಿ ಕೈಹಿಡಿದು ನಡೆಸಿ, ಕುಲದ ಜ್ಯೋತಿ ಬೆಳಗಿಸುವವಳು ಹೆಣ್ಣೆಂದು ತಿಳಿದಲ್ಲಿ ಮಹಿಳೆಯರ ಶೋಷಣೆ ಕಡಿಮೆಯಾಗಬಹುದು ಎಂಬುದು ಅಭಿಪ್ರಾಯ.

      ಒಟ್ಟಾರೆ ’ಸ್ತ್ರೀ-ಪುರುಷ ತುಲನೆ’ ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷನೂ ಓದಲೇ ಬೇಕಾದ ಪುಸ್ತಕ. ಹೆಣ್ಣು- ಗಂಡು ಸಾಮರಸ್ಯದಿಂದ ಪರಸ್ಪರ ಪ್ರೀತಿ, ನಂಬಿಕೆ ವಿಶ್ವಾಸಗಳಿಂದ ಜೀವನ ನಡೆಸಬೇಕೆಂಬುದೇ ಆಶಯ. ತಾರಾಬಾಯಿ ಶಿಂಧೆಯವರ ’ಸ್ತ್ರೀ-ಪುರುಷ ತುಲನೆ’ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ಒಂದು ಉತ್ತಮ ವೈಚಾರಿಕ ಕೃತಿಯನ್ನು ಕನ್ನಡದ ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿರುವ ಎನ್. ಗಾಯತ್ರಿಯವರು ಅಭಿನಂದನಾರ್ಹರು. “ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ” ಇದನ್ನು ಪ್ರಕಟಿಸಿದೆ.

-ಸು. ವಿಜಯಲಕ್ಷ್ಮಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *