Uncategorizedಪುಸ್ತಕ ಸಮಯ

ಪುಸ್ತಕ ಸಮಯ / ಪ್ರತಿಭಾ ಟೀಕಿಸುವ ಕೌಬಾಯ್ ಗಳ ಕಾಮಪುರಾಣ – ಗಿರಿಜಾ ಶಾಸ್ತ್ರಿ

ಧರ್ಮ ಮತ್ತು ಪ್ರಭುತ್ವ ಇವೆರಡನ್ನೂ ಟೀಕಿಸುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಆದರೆ ಕವಿತೆ ಎಂಬ ಅಡಗುತಾಣದಿಂದ ಬಾಣ ಬಿಡುವ ಜಾಣತನ ನಮ್ಮ ಕವಿಗಳಿಗೆ ಎಂದಿನಿಂದಲೂ ಇದೆ. ಕನ್ನಡದ ಪ್ರಮುಖ ಕವಯಿತ್ರಿ ಪ್ರತಿಭಾ ನಂದಕುಮಾರ್ ಅಂಥ ಯಾವ ಅವಕಾಶವನ್ನೂ ಬಿಟ್ಟುಕೊಟ್ಟಿಲ್ಲ ಎನ್ನುವುದೇ ಅವರ ಹೆಗ್ಗಳಿಕೆ. “ಕೌಬಾಯ್ಸ್ ಮತ್ತು ಕಾಮಪುರಾಣ” ಸಂಕಲನದ ಕವಿತೆಗಳಲ್ಲಿ ರೋಷ, ಉದ್ವಿಗ್ನತೆ, ಕುದಿ, ಅಪಮಾನ, ತಹತಹ, ಪ್ರೀತಿ, ದುಃಖ ಮುಂತಾದ ಅನೇಕ ತಲ್ಲಣಗಳಿವೆ.

ಧರ್ಮ ಮತ್ತು ಪ್ರಭುತ್ವ ಎರಡನ್ನೂ ಎದುರು ಹಾಕಿಕೊಳ್ಳಲು ಎಂಟೆದೆ ಬೇಕು. ಯಾಕೆಂದರೆ ಅವೆರಡರ ರಾಜಕಾರಣಗಳು ಒಂದಕ್ಕೊಂದು ಬೆಸೆದು ಕೊಂಡಿರುತ್ತವೆ, ಹೊಸೆದುಕೊಂಡಿರುತ್ತವೆ. ಸಾಮಾನ್ಯ ಜನರ ಆಶೋತ್ತರಗಳನ್ನು ದಮನಗೊಳಿಸುವಲ್ಲಿ ಅವೆರಡೂ ಹೊಯ್ ಕೈಯಾಗಿ ಕೆಲಸ ಮಾಡುತ್ತವೆ. ಅತ್ಯಂತ ಶಕ್ತಿಯುತವಾದ ಇವೆರಡರ ವಿರುದ್ಧ ಸಾಮಾನ್ಯ ಮನುಷ್ಯನಿಗೆ ನೇರ ಹಣಾಹಣಿ ಸಾಧ್ಯವಿಲ್ಲ. ಗೆರಿಲ್ಲಾ ಯುದ್ಧವೊಂದೇ ಇರುವ ಪರ್ಯಾಯ. ಇದಕ್ಕೆ ಅಡಗುತಾಣಗಳನ್ನು ಮೊದಲು ಹುಡುಕಿಕೊಳ್ಳಬೇಕು. ಅಂತಹ ಒಂದು ಸಮರ್ಥ ಅಡಗು ತಾಣವೆಂದರೆ ಕವಿತೆಯೇ. ಹೀಗೆ ಕವಿತೆಯ ಅಂಗಾಂಗಗಳಲ್ಲಿ ಅಡಗಿಕೊಂಡು ಪ್ರತಿಭಾ ನಂದಕುಮಾರ್ ಅವರು ಬಾಣ ಬಿಟ್ಟಿರುವುದು ಎಲ್ಲೆಲ್ಲಿಗೆ ?! ಅಪವ್ಯಾಖ್ಯಾನಕ್ಕೆ ಈಡಾಗಿರುವ ಹಿಂದೂ ಸಂಸ್ಕೃತಿಯೆಂಬ ಜೇನುಹುಟ್ಟಿಗೆ! ಪ್ರತಿಭಾ ತಮ್ಮ “ಕೌಬಾಯ್ಸ್ ಮತ್ತು ಕಾಮಪುರಾಣ” ಕವಿತಾ ಸಂಕಲನದಲ್ಲಿ ಪ್ರಭುತ್ವ ಮತ್ತು ಧರ್ಮ ರಾಜಕಾರಣದ ವಿರುದ್ಧ ಸೆಡ್ಡುಹೊಡೆದು ನಿಂತಿರುವ ಪರಿ ಬೆರಗು ಹುಟ್ಟಿಸುತ್ತದೆ. ಅವರ ಧೈರ್ಯ ಮೆಚ್ಚುವಂತಹದು. ನೋಡೋಣ ಬನ್ನಿ :

‘ಬಂಕರಿನಲ್ಲಿ ತಾನು ಗುಂಡು ಹೊಡೆದುಕೊಂಡು ನಾಶವಾಗುವವರೆಗೆ ಸರ್ವಾಧಿಕಾರದಿಂದ ಮೀಸೆ ಕುಣಿಸುವ, ಸುಖದ ದಿನಗಳ ಭ್ರಮೆ ಹುಟ್ಟಿಸುತ್ತಾ ಜನಸಾಮಾನ್ಯರನ್ನು ಶೋಷಿಸುವ, ಕಿವಿಯಿಲ್ಲದ ಕೇವಲ ಬಾಯಿ ಮಾತ್ರ ಇರುವ ಹಿಟ್ಲರನ ಆಡಳಿತವಾಗಬಹುದು ( ಹಿಟ್ಲರನ ರಾತ್ರಿಗಳು ಮತ್ತು ಕೇಳಿಸಿಕೊಳ್ಳಬಾರದೇನೋ, ಜೋಡೆತ್ತುಗಳು) , ಸಾಮಾಜಿಕ ಸತ್ಯವನ್ನು ಬಯಲಾಗಿಸಲು ಬಾಯಿಲ್ಲದೇ ನಟಿಸುವ ಕವಿಯ ಸಂಕಟವಾಗಿರಬಹುದು (ಕವಿಗೆ ತುಂಬ ಬೇಸರವಾಗಿದೆ), ಸಗಣಿಯನ್ನೆ ತುಂಬಿಕೊಳ್ಳಲು ಬಕೆಟ್ ಹಿಡಿಯುವವರ ಹುಸಿ ಪ್ರತಿಷ್ಠೆ, ಪೊಳ್ಳುತನವಾಗಿರಬಹುದು (ಒಂದು ಬಕೆಟ್ಟಿನ ಸ್ವಗತ), ಆಹಾರದ ಬಗ್ಗೆ ಇರುವ ಸಾಮಾಜಿಕ ಪೂರ್ವಾಗ್ರಹವಾಗಬಹುದು (ಎದ್ದೇಳು ಮಂಜುನಾಥ), ಸದ್ಯದ ನರಕದಿಂದ ಬಿಡಿಸಲು ಮೂರನೆಯವರು ಬರಬೇಕೆಂಬ ವ್ಯಂಗ್ಯವಾಗಬಹುದು (ಮೂರನೆಯವರು) ಬಗ್ಗುವವರಿಗೆ ಮಾತ್ರ ಬೆನ್ನಿನ ಮೇಲೆ ಗುದ್ದನ್ನು ಕೊಡಬಹುದೇ ಹೊರತು ಸೆಟೆದು ನಿಲ್ಲುವವರಿಗೆ ಅಲ್ಲ, ಆಗ ಅದು ಹೊಡೆಯುವವರನ್ನೆ ಕೆಡವಬಹುದು ಎಂಬ ಗ್ರಹಿಕೆಯಾಗಬಹುದು (ರಸ್ತೆಯಲ್ಲಿ), ಮಹಿಳೆಯರ ಉಡುಪಿಗೂ ಅವರ ಮೇಲೆ ನಡೆಯುವ ಅತ್ಯಾಚಾರಕ್ಕೂ, ಭಾರತೀಯ ಸಂಸ್ಕೃತಿಯನ್ನು ಕಾಪಾಡಬೇಕಾದ ಹೊಣೆಗಾರಿಕೆಗೂ ಸಂಬಂಧ ಕಲ್ಪಿಸುವ ಟೀಕಾಚಾರ್ಯರೇ ಹೆಣ್ಣನ್ನು ಬಳಸಿಕೊಳ್ಳುವ ವ್ಯಂಗ್ಯವನ್ನು ಬಯಲಾಗಿಸುವ, ಹೆಣ್ಣಿನ ಗೆಲುವನ್ನು ಚಿತ್ರಿಸುವ (ಸ್ಕರ್ಟು ತೊಟ್ಟ ಹುಡುಗಿಗೆ) ಕವಿತೆಯಾಗಬಹುದು, ಕವಿತೆಯನ್ನು ನಿರ್ಭಿಡೆಯಾಗಿ ಬರೆಯುವುದರ ಬಗ್ಗೆ ಹೆಣ್ಣು ಮತ್ತು ಗಂಡುಗಳ ನಡುವೆ ಇರುವ ಪೂರ್ವಾಗ್ರಹ ದೃಷ್ಟಿಕೋನವಾಗಬಹುದು, ಶೋಷಣೆಯ ಅದೃಶ್ಯ ಕಾರ್ಯಾಚರಣೆಯಾಗಬಹುದು ( ಕಾಂಪೌಂಡಿನ ಬಿಳಿ ಗೂಬೆ) ಹೀಗೆ ಈ ಸಂಕಲನದ ಕವಿತೆಗಳಲ್ಲಿ ರೋಷ, ಉದ್ವಿಗ್ನತೆ, ಕುದಿ, ಅಪಮಾನ, ತಹತಹ, ಪ್ರೀತಿ, ದುಃಖ ಮುಂತಾದ ಅನೇಕ ತಲ್ಲಣಗಳಿವೆ.

ಇಂಗ್ಲಿಷಿನ ಕೌಬಾಯ್ ಎನ್ನುವ ಪದಕ್ಕೆ ದನಗಾಹಿ ಎನ್ನುವ ಅನ್ವರ್ಥ ಅರ್ಥವಿದ್ದರೆ. ಅಪ್ರಾಮಾಣಿಕ, ಉಡಾಳ, ಬೇಜವಾಬ್ದಾರಿಯವ ಎನ್ನುವ ಸೂಚ್ಯಾರ್ಥವೂ ಇದೆ. “ಹಸು ಹಿಂದೂ ಧರ್ಮದ ಪ್ರತೀಕ. ಆದುದರಿಂದ ಅದರ ರಕ್ಷಣೆಯೇ ಹಿಂದೂ ಧರ್ಮದ ರಕ್ಷಣೆ!! ಆದರೆ ಈ ಹಸು ಇಂದು ಕೌಬಾಯ್ ಗಳ ತೆಕ್ಕೆಗೆ ಸಿಕ್ಕಿ ಅಪಮೌಲ್ಯಕ್ಕೆ ಈಡಾಗುತ್ತಿದೆ” ಎನ್ನುವುದರ ವ್ಯಂಗ್ಯವೇ ಈ ಸಂಕಲನದ ತಿರುಳಾಗಿದೆ ಎಂಬುದೇ ನನ್ನ ಗ್ರಹಿಕೆಯಾಗಿದೆ.

ಹಸುವಿಗೆ (ಪುಣ್ಯ ಕೋಟಿ) ಮಗು ಇರುವಂತೆ ಹುಲಿಗೂ ಇದೆ. ಹಾಗಾದರೆ ಹುಲಿಮರಿ ಏನು ಮಾಡಬೇಕು? ಪ್ರಾಣಿದಯೆಗೆ ಕೇವಲ ಹಸುವೊಂದೇ ಪಾತ್ರವಾಗ ಬೇಕಿಲ್ಲ “ದನವ ಕಡಿ ಕಡಿದು ಬಸದಿಗೊಯ್ಯುತಿರ್ದರ್ (ಬಸದಿಗೆಳೆಯುತಿರ್ದರ್) ಎನ್ನುವ ಪರಮ ಪಾತಕ ಸಾಲಿಗೆ ಚಂದನವ ಎಂದು ತಿದ್ದಿ ಸರಿಮಾಡಿಕೊಂಡಿರಿ” (ಒಂದು ಗೋವು ನಗರ ನಕ್ಸಲ್ ಆದ ಕಥೆ”) ಇದು ಕಾವ್ಯ ಶಾಸ್ತ್ರ ವಿನೋದದ ‘ಕಂತಿ ಹಂಪನ ಸಮಸ್ಯೆಗಳು’ ಎನ್ನುವ ಕೃತಿಯಲ್ಲಿ ಬರುವ ಸಾಲುಗಳು. ‘ದನವ ಕಡಿಕಡಿದು’ ಎನ್ನುವ ಸಾಲನ್ನು ಜಾಣೆಯಾದ ಕಂತಿ ‘ಚಂದನವ’ ಎಂದು ಮಾಡಿ ಜೈನ ಧರ್ಮಕ್ಕೆ ಮಾರಕವಾಗಿದ್ದ ಸಾಲನ್ನು ಇತ್ಯಾತ್ಮಕವಾಗಿ ಪೂರ್ಣಗೊಳಿಸುತ್ತಾಳೆ ಎಂಬ ಕಥೆ ಇದೆ. ಇಂದು ದನವು ನಾನಾ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿರುವ ರೀತಿಯನ್ನು ನೋಡಿದರೆ ‘ದನವ ಕಡಿಕಡಿದು’ ಎನ್ನುವುದೇ ಸಮರ್ಥನೀಯ ಎಂಬುದು ಕವಿಯ ಮತ. ಹಸುವನ್ನು ಒಂದು ಕಡೆ ಪೂಜಿಸುವ ಮತ್ತು ಇನ್ನೊಂದೆಡೆ ಇನ್ನಿಲ್ಲದಂತೆ ಶೋಷಿಸುವ ನಮ್ಮ ಸಂಸ್ಕೃತಿಯ ಪೂರ್ವಾಗ್ರಹವನ್ನೂ ಇದು ಬಯಲಿಗೆಳೆಯುತ್ತದೆ. ಇಲ್ಲಿ ದನ ಹೆಣ್ಣು ಕೂಡ ಆಗಬಹುದು.

ಕೌಬಾಯ್ಸ್ ಗಳು ನ್ಯಾಯಾಲಯದಲ್ಲಿ ವಾದಿಸುತ್ತಾರೆ
ರಾಸಲೀಲೆಗೆ ಸಮ್ಮತಿ ಇತ್ತೆಂದು.
ಗೃಹಿಣಿ ತಾನಾಗಿ ಬಲೆಗೆ ಬಿದ್ದ ಜಿಂಕೆಯೆಂದೂ
ತಾವು ಬರಿ ಚಂಡ ವ್ಯಾಘ್ರಗಳೆಂದೂ
ಖಂಡವಿದೆಕೋ ಮಾಂಸವಿದೆಕೋ ಎಂದು ಆಫರು
ಮಾಡಿದವರದೇ ತಪ್ಪೆಂದೂ ನಂಬಿಸುತ್ತಾರೆ (ಕೌಬಾಯ್ಸ್ ಮತ್ತು ಕಾಮ ಪುರಾಣ)

ಹಸುವಿನ ನೆಪದಲ್ಲಿ ಗೋಸಂರಕ್ಷರ ದೌರ್ಜನ್ಯ ಗಳನ್ನು ಪ್ರತಿಷ್ಠಿತ ಮಠಗಳನ್ನೂ, ‘ಘನತೆವೆತ್ತ’ ಸ್ವಾಮಿಗಳನ್ನೂ ಅವರ ಕಾಮ ಪುರಾಣಗಳನ್ನೂ ತರಾಟೆಗೆ ತೆಗೆದುಕೊಳ್ಳುತ್ತಾರೆ.
ಅವರಿಂದ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಅಂಗೈಯ ಮೇಲಿರುವ ಕೆಂಡದಂತಹ ‘ಸತ್ಯ’ವನ್ನು ಸಾಬೀತುಗೊಳಿಸಬೇಕಾಗಿದೆ. ತಮ್ಮದೇ ವ್ಯಾಖ್ಯಾನಗಳ ಮೂಲಕ ಸತ್ಯವನ್ನು ತಿರುಚುವ ವೀರರು ಇವರು. ಇವರಿಗೆ ಆಳುವ ಪ್ರಭುತ್ವವೂ ಕುಮ್ಮಕ್ಕು ನೀಡುವುದರಿಂದ ಇವರುಗಳು ಹಾಡಿದ್ದೇ ನ್ಯಾಯ ಅದೇ ಧರ್ಮ.

ಸಮಕಾಲೀನ ಧರ್ಮರಾಜಕಾರಣವನ್ನು, ಮಠಗಳ ಅವ್ಯವಹಾರಗಳನ್ನು ಅವಕ್ಕೆ ಕುಮ್ಮಕ್ಕು ಕೊಡುವ ಆಳುವ ಸರ್ಕಾರವನ್ನೂ ಇವುಗಳ ಅಪ್ರತಿಹತ ಪ್ರಹಾರಗಳಲ್ಲಿ ನಲುಗಿ ಹೋಗುವ ಸಾಮಾನ್ಯರ ಅದರಲ್ಲೂ ಮಹಿಳೆಯರ ಅಸಹಾಯಕತೆಯನ್ನು ಪ್ರತಿಭಾ ಅವರ “ಕೌಬಾಯ್ಸ್ ಮತ್ತು ಕಾಮಪುರಾಣ” ಬಹಳ ಪರಿಣಾಮಕಾರಿಯಾಗಿ ಹಿಡಿದಿಟ್ಟಿದೆ.
ಪ್ರತಿಭಾ ಅವರ ಈ ಅನನ್ಯ ಪ್ರತಿಭೆಗೆ ಇನ್ನೂ ಹೆಚ್ಚಿನ ಸಮ್ಮಾನ ದೊರಕಬೇಕಾಗಿದೆ.

ಗಿರಿಜಾ ಶಾಸ್ತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *