ಪುಸ್ತಕ ಸಮಯ/ನೋವೂ ಒಂದು ಹೃದ್ಯ ಕಾವ್ಯ- ಮಂಜುಳಾ ಪ್ರೇಮಕುಮಾರ್

‘ದುಃಖಕ್ಕೆ ದಕ್ಕಿದಷ್ಟು ಕವಿತೆಗಳು ಖುಷಿಗೆ ಅರಳುವುದೇ ಇಲ್ಲ!’ಎನ್ನುವ ರಂಗಮ್ಮ ಹೊದೆಕಲ್ ತಮ್ಮ ಕವನ ಸಂಕಲನದಲ್ಲಿ ಬದುಕಿನಲ್ಲಿ ತಾವುಂಡ ನೋವುಗಳನ್ನೆಲ್ಲ ಕಾವ್ಯವಾಗಿಸಿದ್ದಾರೆ.

ಫೇಸ್ಬುಕ್ನಲ್ಲಿ ನಾನು ಆಗಾಗ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದ ರಂಗಮ್ಮ ಹೊದೆಕಲ್ ಅವರ, ಸುಮಾರು ನೂರೈವತ್ತು ಹನಿಗವನಗಳನ್ನು ಒಟ್ಟಾಗಿ ಕಟ್ಟಿಕೊಟ್ಟಿರುವ ಸಂಕಲನ ‘ನೋವೂ ಒಂದು ಹೃದ್ಯ ಕಾವ್ಯ’. ಒಂದೇ ಬಾರಿಗೆ ಓದಿ ಮುಗಿಸಬಹುದಾದ ಪುಸ್ತಕವಾದರೂ, ಇಲ್ಲಿನ ಒಂದೊಂದು ಕವನವೂ ವಿಶೇಷ ಅರ್ಥ ಕೊಡುವುದರಿಂದ ನಿಧಾನವಾದರೂ ಸರಿ ಆರಾಮಾಗಿ ಕುಳಿತೇ ಓದಬೇಕು. ಒಮ್ಮೆ ಓದಲು ಪ್ರಾರಂಭಿದರೆ ಸಾಕು ನಿಲ್ಲಿಸಲು ಮನಸಾಗುವುದಿಲ್ಲ. ಪೂರಾ ಓದಿ ಮುಗಿಸುವವರೆಗೂ ಕೆಳಗಿಡಲು ಬಿಡದಂತೆ ಆಪ್ತವಾಗಿಬಿಡುತ್ತವೆ. ‘ಗದ್ಯ’ವೇ ಹೆಚ್ಚು ‘ಹೃದ್ಯ’ವಾಗುತ್ತದೆ ಎಂಬ ಮಾತಿದೆ. ಆದರಿಲ್ಲಿ        ‘ಪದ್ಯ’ಗಳೂ ‘ಹೃದ್ಯ’ವಾಗಿಬಿಡುತ್ತವೆ. 
 ‘ದುಃಖಕ್ಕೆ ದಕ್ಕಿದಷ್ಟು ಕವಿತೆಗಳು ಖುಷಿಗೆ ಅರಳುವುದೇ ಇಲ್ಲ!’ಎನ್ನುವ ರಂಗಮ್ಮ ಬದುಕಿನಲ್ಲಿ ತಾವುಂಡ ನೋವುಗಳನ್ನೆಲ್ಲ ನೇವರಿಸಿದ್ದಾರೆ, ಅದಕ್ಕೇ ‘ಒಂದು ನೋವಿತ್ತು ನೇವರಿಸಿದೆ ಕವಿತೆಯಾಯಿತು!’ಎನ್ನುತ್ತಲೇ ಆ ನೋವುಗಳೆಲ್ಲವನ್ನು ಎರಡು, ಮೂರು, ನಾಲ್ಕು ಸಾಲುಗಳ ಹನಿ, ಮಿನಿ, ಚುಟುಕು ಕವನಗಳಲ್ಲಿ ಸರಳವಾಗಿ, ಸುಲಭವಾಗಿ ಅರ್ಥವಾಗುವಂತೆ ಹಿಡಿದಿಟ್ಟಿದ್ದಾರೆ. ಈ ಸಂಕಲನಕ್ಕೆ ಅವರಿಟ್ಟ ಹೆಸರೂ ಅರ್ಥಪೂರ್ಣವಾಗಿದೆ. ಇಲ್ಲಿನ ಕವನಗಳಲ್ಲಿ ವಿಷಾದವಿದೆ, ಯಾತನೆ, ನಿರಾಸೆ, ಮಾನವೀಯತೆ, ಜೀವನಪ್ರೀತಿ, ಕರಗುತ್ತಿರುವ ಸಂಬಂಧಗಳಿವೆ, ಪ್ರಾಥನೆ ಇದೆ. ಬದುಕು ಕಟ್ಟಿಕೊಳ್ಳಲು ದಾರಿ ತೋರಿಸಿದ ಅಪ್ಪನಿದ್ದಾನೆ, ಮಮಕಾರಕ್ಕಾಗಿ ಹಂಬಲಿಸುವ ಅಮ್ಮಇದ್ದಾಳೆ, ಕಲ್ಲೆದೆಯಲ್ಲೂ ಇರುವ ಮೃದು ಮನಸ್ಸಿದೆ.’ಕಲ್ಲಿನ ಮಗ್ಗುಲಲ್ಲೇ ಹೂವರಳುತ್ತದೆ 
ಕ್ರೌರ್ಯ ಕಾರುಣ್ಯ ಒಂದೇ ದಾರಿಯಲ್ಲಿ ನಡೆದ ಹಾಗೆ’!
‘ಎದೆಯ ಬೆಂಕಿಗೆ ತುಪ್ಪ ಸುರಿದರೇನಂತೆ ಬೆಂಕಿಯನ್ನುಂಡವರೇ ಬೆಳಕ ಹಂಚುತ್ತಾರೆ !’ಎಂಬ ಆಶಾಭಾವನೆಯಿದೆ. 
‘ಏನನ್ನೂ ಕೂಡಿಡದ ಅಪ್ಪ ಅಕ್ಷರ ಕಲಿಸಿ ಅಕ್ಷಯವಾಗೆಂದ !’ ‘ಅವ್ವನ ಮುಖದಲ್ಲಿ ಅನ್ನದ ಹಸಿವುಕಾಣುವುದೇ ಇಲ್ಲ ಸದಾ ಹಸಿದಿರುತ್ತಾಳೆ ತೀರದ ಮಮಕಾರಕ್ಕಾಗಿ!’ಅಕ್ಷರ ಕಲಿಸಿ ಬದುಕುವ ದಾರಿ ತೋರಿಸಿದ ಅಪ್ಪ, ಮಮಕಾರಕ್ಕಾಗಿ ಹಂಬಲಿಸುವ ಅಮ್ಮನ ಬಗ್ಗೆ ಅಪಾರವಾದ ಪ್ರೀತಿ, ಗೌರವ. 
‘ಸಂಭ್ರಮಕ್ಕೆ ಸಾಕ್ಷಿಯಾಗುವ ಬಂಧಗಳೇಸಂಕಟಕ್ಕೆ ಅದೃಶ್ಯವಾಗುತ್ತವೆ !’ಕರಗುತ್ತಿರುವ ಸಂಬಂಧಗಳ ಕುರಿತ ಆತಂಕ ವ್ಯಕ್ತವಾಗುತ್ತದೆ.  
‘ಬದುಕನ್ನು ಹುಡುಕಿ ಹೊರಟವರಿಗೆ ಸಾವು ಎದರಾಗದಿರಲಿ ಪ್ರಭುವೇ !’ಬದುಕಿನಲ್ಲಿ ಸೋತು, ಅಸಹಾಯಕರಾಗಿ, ಹೊಸ ಬದುಕು ಹುಡುಕಿ ಹೊರಟವರ ಕನಸು ಕಸಿಯಬೇಡ ಎಂಬ ಪ್ರಾರ್ಥನೆಯಿದೆ.
ಮಾತುಗಳಾಚೆಗಿನ ಮೌನ ದಕ್ಕಿದ ದಿನ ಕವಿತೆ ಹೂವಾಗುತ್ತದೆ !
ಎಲ್ಲಾ ಇಲ್ಲಗಳ ನಡುವೆಯೂ ಬದುಕಿನ ಹಕ್ಕಿ ಹಾಡುತ್ತದೆ !
ಬೆಳಕೆಂಬುದೇ ಎಷ್ಟೊಂದು ಕುರುಡಾಗಿಸುವಾಗ ನಿಷ್ಪಾಪಿ ಕತ್ತಲನ್ನು ಹೇಗೆ ದೂರಬಹುದು !ಎನ್ನುತ್ತಾರೆ ‘ಹೂಧರ್ಮ’ದ ರಂಗಮ್ಮ. ಹೂವು, ಹಣತೆ, ಗೋಡೆ, ಬೆಟ್ಟ, ಬೆಳಕು, ದೋಣಿ, ಮುಂತಾದವುಗಳನ್ನೆಲ್ಲ ರೂಪಕವಾಗಿ ಬಳಸಿಕೊಂಡು ತಮ್ಮ ಆಶಯವನ್ನು ಹೇಳುವಲ್ಲಿ ಅಪಾರವಾದ ಆತ್ಮವಿಶ್ವಾಸವಿದೆ. 
‘ಗಡಿಗಳೆಲ್ಲ ಗುಡಿಗಳಾಗಿ, ಎಲ್ಲಾ ಹೊಟ್ಟೆಗೂ ಅನ್ನ ಸಿಕ್ಕು, ಈ ನೆಲದ ಹೆಣ್ಣುಮಕ್ಕಳು ನಿರ್ಭಯವಾಗಿ ಬದುಕು ಕಳೆಯುವ ದಿನಗಳುಬಂದಾವೇ?’ ಎಂದು ಪ್ರಶ್ನಿಸುತ್ತಾರೆ. 
ಕವಿತೆ ಬರೆಯಬೇಕೆಂಬ ಇರಾದೆಯೇನು ಇರಲಿಲ್ಲ ಬದುಕು ಬರೆಸಿತು!
ಇವು ಸುಲಭವಾಗಿ ಓದಬಹುದಾದ ಸಣ್ಣ ಸಣ್ಣ ಕವನಗಳೇ ಆದರೂ ಬದುಕಿನ ಗಾಢ ಅನುಭವಗಳನ್ನು ಕಟ್ಟಿಕೊಡುವ, ಬುದ್ದಿ, ಮನಸು, ಭಾವಗಳನ್ನು ಉದ್ದೀಪಿಸುವ ಕಾವ್ಯಾತ್ಮಕ ಗುಣಗಳ ಬಗ್ಗೆ ಕೆಲವು ವಾಕ್ಯಗಳಲ್ಲಿ ಹೇಳಿ ಸುಮ್ಮನಿರಲಾಗದು, ಅವುಗಳ ಬಗ್ಗೆ ಇನ್ನಷ್ಟು, ಮತ್ತಷ್ಟು ಬರೆಯಬೇಕೆನಿಸುತ್ತದೆ. 

ಚೆಂದದ ಮುಖಪುಟ, ಪುಟ ತಿರುಗಿಸಿದ ಕೂಡಲೇ ಆಕರ್ಷಿಸುವ ಸುಂದರವಾದ, ನಾಜೂಕಾದ ರಂಗಮ್ಮ ಅವರ ಕೈ ಬರಹ,  ಪ್ರಕಾಶಕಿ ಭವ್ಯ ಅವರ ರೇಖಾಚಿತ್ರಗಳು ಕವನದ ಸೊಗಸನ್ನು ಹೆಚ್ಚಿಸಿವೆ. ನನಗೆ ತಿಳಿದಮಟ್ಟಿಗೆ ಕನ್ನಡ ಸಾಹಿತ್ಯದಲ್ಲಿ ಕೈ ಬರಹದಲ್ಲಿ ಪ್ರಕಟವಾಗಿರುವ ಕೆಲವೇ ಪುಸ್ತಕಗಳಲ್ಲಿ ಇದು ಇತ್ತೀಚಿನದು.ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿ, ಕೆ ಬಿ ವೀರನಗೌಡ್ರ ಅವರ ಬೆನ್ನುಡಿಯಲ್ಲಿನ ಮುಕ್ತ ಮಾತುಗಳು ರಂಗಮ್ಮನವರ ಕಾವ್ಯ ಪರಿಶ್ರಮವನ್ನು  ಅರ್ಥಮಾಡಿಕೊಳ್ಳಲು ಪೂರಕವಾಗಿವೆ.
ರಂಗಮ್ಮನವರಿಂದ ಇನ್ನಷ್ಟು ಕವನಗಳ ನಿರೀಕ್ಷಣೆಯಲ್ಲಿ. 

ಮಂಜುಳಾ ಪ್ರೇಮಕುಮಾರ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *