ಪುಸ್ತಕ ಸಮಯ / ನಾನು … ಕಸ್ತೂರ್


2019ನ್ನು ಗಾಂಧಿ-150ನೇ ಹುಟ್ಟಿದ ಹಬ್ಬವನ್ನಾಗಿ ದೇಶವೆಲ್ಲಾ ಆಚರಿಸಿತು. ವಯಸ್ಸಿನಲ್ಲಿ ಅವರಿಗಿಂತ ಆರು ತಿಂಗಳು ಹಿರಿಯಳಾದ ಅವರ ಪತ್ನಿ ಕಸ್ತೂರಬಾಗೆ ಕೂಡ 2019 ನೇ ವರ್ಷ ನೂರೈವತ್ತನೇ ವರ್ಷದ ಹುಟ್ಟು ಹಬ್ಬದ ಸಂದರ್ಭ. ಸಾಮಾನ್ಯವಾಗಿ ನಮ್ಮಲ್ಲಿ   ಪುರುಷ ಸಾಧಕರನ್ನು ನೆನಪಿಸಿಕೊಳ್ಳುವ ರೀತಿಯಲ್ಲಿ ಸಾಧಕ ಮಹಿಳೆಯರನ್ನು ನೆನಪಿಸಿಕೊಳ್ಳುವುದು ಕಡಿಮೆಯೇ. ಅದಕ್ಕೆ ಅಪವಾದ ಡಾ.ಎಚ್.ಎಸ್.ಅನುಪಮಾ ಬರೆದಿರುವ ‘ನಾನು... ಕಸ್ತೂರ್’. ಮಹಾತ್ಮ ಗಾಂಧೀಜಿಯವರ ಪತ್ನಿಯಾಗಿ , ಅವರ ನೆರಳಿನಲ್ಲೇ ಸಾಗಿದ ಕಸ್ತೂರಬಾ ಗಾಂಧಿಯವರ ಅಪರೂಪವಾದ ಜೀವನ ಕಥನ. ಇದೊಂದು ರೀತಿಯಲ್ಲಿ ಕಸ್ತೂರ್ ಬಾ ಮೂಲಕ ಬಿತ್ತರಿಸುವ ಆತ್ಮಕಥಾನಕದ ಶೈಲಿಯಲ್ಲಿ ರಚಿತವಾದ ಜೀವನ ಕಥನ. ಒಬ್ಬ ಸಾಧಾರಣ ಹೆಣ್ಣು ಮಗಳಾಗಿದ್ದ ಬಾ ಒಬ್ಬ ಅಸಾಧಾರಣ ಪುರುಷನ ಮಡದಿಯಾಗಿ, ಅಸಾಧಾರಣ ಚಾರಿತ್ರಿಕ ಘಳಿಗೆಗಳಿಗೆ ಸಾಕ್ಷಿಯಾಗಿ, ಪತಿ ತೆಗೆದುಕೊಂಡ ಮಹಾನ್ ಜಿಗಿತವನ್ನು ಹೇಗೆ ಗ್ರಹಿಸಿದರು? ಹೇಗೆ ಒಳಗು ಮಾಡಿಕೊಂಡರು? ಎಷ್ಟು ವಿರೋಧಿಸಿದರು? ಯಾವುದು ಸಾಧ್ಯವಾಯಿತು? ಯಾವುದು ಕಷ್ಟವೆನಿಸಿತು? ಎನ್ನುವುದನ್ನು ಸಂಶೋಧಿಸುವ ಪ್ರಯತ್ನವಾಗಿ ಈ ಕೃತಿಯ ಬರವಣಿಗೆಯನ್ನು ಲೇಖಕಿ ಪರಿಚಯಿಸುತ್ತಾರೆ.

ಈ ಪುಸ್ತಕ ಆರಂಭವಾಗುವುದೇ ಗಾಂಧಿ ಮತ್ತು ಕಸ್ತೂರಬಾ ಅವರ ಬದುಕನ್ನು ಅರಳಿಕಟ್ಟೆಯಲ್ಲಿ ಅರಳಿಮರದೊಂದಿಗೆ ನಿಂತ ಬೇವಿನ ರೂಪಕಕ್ಕೆ ಹೋಲಿಸುವುದರೊಂದಿಗೆ. ಅರಳಿಯ ಗುಣ ಅರಳಿಗೆ, ಬೇವಿನ ಗುಣ ಬೇವಿಗೆ. ಆದರೆ ಅವೆರಡೂ ಕಟ್ಟೆಯೊಳಗಿನ ಜಾಗ, ನೀರು, ಗಾಳಿ ಹಂಚಿಕೊಂಡೇ ಬೆಳೆದವು. ಒಂದರಿಂದ ಇನ್ನೊಂದು ಪ್ರಭಾವಿತವಾದವು. ಇದು ಅರಳಿ ಮರದ ಕತೆಯೋ, ಬೇವಿನಮರದ ಕತೆಯೋ ಎಂಬ ಜಿಜ್ಞಾಸೆಯಂತೂ ಪುಸ್ತಕದುದ್ದಕ್ಕೂ ಕಂಡುಬರುತ್ತದೆ. ಮೊದಲಿಗೆ ಈ ಕೃತಿ ಸ್ಪಷ್ಟಪಡಿಸುವಂತೆ ಭಾರತದ ಸಾಮಾಜಿಕ-ರಾಜಕೀಯ ಜೀವನದ ಸ್ಥಿತ್ಯಂತರಗಳ ಜೊತೆಗೇ ವೈಯಕ್ತಿಕ ಬದುಕಿನ ತಿರುವುಗಳನ್ನೂ ಕಂಡ ಒಂದು ಹೆಣ್ಣಿನ ಜೀವನ ಕಥನವಾಗಿಸುವ ಉದ್ದೇಶ ಈ ಕೃತಿಗಿದೆ. ಆದರೆ ಇದು ಕಸ್ತೂರ ಬಾಳ ಕತೆಯೋ, ಗಾಂಧಿಯ ಕತೆಯೋ ಯಾವುದಾಗುತ್ತದೆ, ಎಂಬುದನ್ನು ಕೃತಿಯ ಓದಿನ ನಂತರ ಓದುಗರು ಕಂಡುಕೊಳ್ಳಬೇಕು. ಕೊನೆಗೆ, ಇದು ಕಸ್ತೂರಬಾಳ ಜೀವನ ಚರಿತ್ರೆಗಿಂತ ಹೆಚ್ಚಾಗಿ ಗಾಂಧಿಜೀವನ ಚರಿತ್ರೆಯೇ ಆಗಿ ಬಿಡುವುದು ಇಲ್ಲಿನ ವಿಶೇಷ. ಕಸ್ತೂರಬಾ ಕಣ್ಣಿನ ಮೂಲಕ ಅನಾವರಣಗೊಳ್ಳುವ ಗಾಂಧಿ ನಮಗೆ ಚರಿತ್ರೆಯಲ್ಲಿ ಕಾಣಸಿಗುವ ಗಾಂಧಿಗಿಂತ ಭಿನ್ನವಾಗಿ, ಹೆಚ್ಚು ಭಾವುಕನೆಲೆಯ ಗಾಂಧಿಯಾಗಿದ್ದಾರೆ. ನಿಜವಾದ ವೈಚಾರಿಕ ಗಾಂಧಿ ಇಲ್ಲಿ ಕಾಣೆಯಾಗಿದ್ದಾರೆ.

ಆರಂಭದಲ್ಲೇ ಜಾತಿ ಧರ್ಮದ ಬೇಧವಿಲ್ಲದ ಪ್ರಣಾಮಿ ಪಂಥದ ಹುಟ್ಟು, ಬೆಳವಣಿಗೆಯ ಪರಿಚಯವನ್ನು ಮಾಡಿಸಿ ಗಾಂಧಿ ಮತ್ತು ಕಸ್ತೂರಬಾ ಅವರ ಕೌಟುಂಬಿಕ ಹಿನ್ನೆಲೆಯ ದಾರ್ಶನಿಕ ಪರಿಸರವನ್ನು ಲೇಖಕಿ ಪರಿಚಯಿಸುತ್ತಾರೆ. ಗಾಂಧಿಯವರು ಮುಂದೆ ಜೀವನದಲ್ಲಿ ಕಂಡುಕೊಳ್ಳುವ ಉದಾರವಾದಿ ಧೋರಣೆಗೆ ಇಲ್ಲಿ ಒಂದು ಒಳ್ಳೆಯ ಭೂಮಿಕೆಯನ್ನು ಸಿದ್ಧಗೊಳಿಸುತ್ತಾರೆ.
ಕಸ್ತೂರ್ ನೂರೈವತ್ತು ವರ್ಷಗಳ ಹಿಂದಿನ ಭಾರತೀಯ ನಾರಿಯ ಪ್ರತಿನಿಧಿಯಾಗಿ ರೂಪುಗೊಂಡಿದ್ದಾರೆ. ದೇವಸ್ಥಾನಕ್ಕೆ ಅತ್ತೆಯ ಜೊತೆಗೆ ಹೋಗೋದಕ್ಕೂ ಗಂಡನ ಅನುಮತಿಯನ್ನು ಹೆಂಡತಿಯಾಗಿ ಕಸ್ತೂರ್ ಪಡೆಯಬೇಕಿದ್ದ ಅವಸ್ಥೆ ಮತ್ತು ಅಂತಹ ನಿರ್ಬಂಧ ಹೇರಿದ್ದ ಪತಿ ಮಹಾರಾಯ ಗಾಂಧೀ ಹೇಗೆ ಬದಲಾದರು, ಎನ್ನುವುದು ಈ ಕಥಾನಕದ ಹೂರಣ. ಕಸ್ತೂರ್ ಬಾ ಅವರ ‘ಮೋಕ’ ಹರಿಯ ಅಪ್ಪನಾಗಿ, ಬಾಪುವಾಗಿ, ಮಹಾತ್ಮನಾಗಿ ಸಾಗಿದ ನಿರಂತರ ಪ್ರಕ್ರಿಯೆಯಲ್ಲಿ ನಿರಕ್ಷರಕುಕ್ಷಿ ಕಸ್ತೂರ್ ಕೂಡ ವಿಕಾಸಗೊಂಡ ಪ್ರಕ್ರಿಯೆ ಇಲ್ಲಿದೆ. ಗುಜರಾತನ್ನು ಬಿಟ್ಟು ಹೊರಜಗತ್ತನ್ನೇ ನೋಡದ ಕಸ್ತೂರ್ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳಸಬೇಕಾಗಿ ಬಂದು, ಅಲ್ಲಿ ಪಕ್ವವಾದ ಕತೆ ಇಲ್ಲಿ ಬಿಚ್ಚಿಕೊಳ್ಳುತ್ತದೆ.
ದಕ್ಷಿಣ ಆಫ್ರಿಕಾದ ಜೀವನ ಈ ದಂಪತಿಗಳಿಗೆ ಕೊಟ್ಟ ಹೊಸ ಬದುಕು ಎಂತಹುದು ಮತ್ತು ಅದರಿಂದ ಬದಲಾದ ವ್ಯಕ್ತಿತ್ವಗಳನ್ನು ಬಾ ಅವರ ಮಾತುಗಳಲ್ಲಿ ಇಲ್ಲಿ ಸ್ಪಷ್ಟವಾಗಿ ಮೂಡಿಸಿದ್ದಾರೆ: “ 21 ವರ್ಷದ ನಂತರ ಭಾಯಿ, 15 ವರ್ಷ ಕಳೆದು ನಾನು ಹಿಂದೂಸ್ತಾನಕ್ಕೆ ವಾಪಸಾದೆವು. ರೊಟ್ಟಿ ಲಟ್ಟಿಸುವ ಲಟ್ಟಣಿಗೆ ಹೊರತು ಬೇರೇ ಕೋಲನ್ನೇ ನೋಡಿರದ ನಾನು ಮನುಷ್ಯರನ್ನು ಹೊಡೆಯುವ ಲಾಠಿ ರುಚಿ ನೋಡಿದ್ದೆ. ಮನೆಯ ನಾಲ್ಕು ಗೋಡೆಗಳೊಳಗೆ ಬಂದಿಯಾಗಿದ್ದ ನಾನು ಕಡಲು ದಾಟಿ ಹೋಗಿ ಬೇರೆ ದೇಶದ ಜೈಲೂ ಸಹ ನೋಡಿ ಬಂದೆ. ಚಳುವಳಿ, ಹೋರಾಟ ಎಂಬ ಪದಗಳೇ ಕಿವಿ ಮೇಲೆ ಬೀಳದಿದ್ದ ಗೃಹಿಣಿ ಸತ್ಯಾಗ್ರಹಿಯಾಗಿ ರೂಪಾಂತರಗೊಂಡಿದ್ದೆ. ಶಾಲೆಗೆ ಹೋಗದಿದ್ದವಳು ಅಕ್ಷರ ಜೋಡಿಸಿ ಸುದ್ದಿ ಪತ್ರಿಕೆ ಓದುವಷ್ಟು, ನಮ್ಮ ಪತ್ರಿಕೆಯ ಗುಜರಾತಿ ಆವೃತ್ತಿಗೆ ಹೇಳಿ ಬರೆಸುವಷ್ಟು ಅಕ್ಷರಸ್ಥೆಯಾಗಿದ್ದೆ.”
ಭಾರತೀಯ ಗಂಡಸರು ಅಪ್ಪನಾಗಿ, ಅಣ್ಣ ತಮ್ಮಂದಿರಾಗಿ , ಹೆಣ್ಣು ದೇಹ ಅನುಭವಿಸುವವರಾಗಿ ಹೆಣ್ಣುಗಳನ್ನು ನೋಡುವವರೇ ಹೊರತು ಗೆಳತಿಯಂತೆ ನೋಡುವುದಿಲ್ಲ. ಮೋ.ಕ. ಗಾಂಧಿಯ ಮನಸ್ಸು ಅದಕ್ಕಿಂತ ಬೇರೆಯಾಗೇನೂ ಇರಲಿಲ್ಲ. ಅದು ಬದಲಾವಣೆ ಆದದ್ದು ದಕ್ಷಿಣ ಆಫ್ರಿಕಾದಲ್ಲೇ. ಅಲ್ಲಿಯೂ ಎಷ್ಟೇ ಬದಲಾವಣೆಯಾದರೂ ಸಾಂಪ್ರದಾಯಿಕ ಹೆಣ್ಣು ಮಗಳು ಬಯಸುವ ಯಾವ ಸುಖ ಸೌಲಭ್ಯಗಳು ಬಾಗೆ ದೊರೆಯುವುದಿಲ್ಲ. ಬಾಪುವಿನ ‘ಮಹಾತ್ಮತನ’ದಿಂದ ಬಾ ಒಡವೆ, ಹಣ, ಮಕ್ಕಳ ವಿಷಯ, ಖಾಸಗಿ ವಸ್ತು ಇಲ್ಲದೆ ಬದುಕಬೇಕಾಗಿ ಬಂದಿತೇನೋ ನಿಜ ಆದರೆ ಅವರು ಗಂಡನೊಂದಿಗೆ ಯಾವುದೇ ಪತ್ನಿ ಬಯಸುವ ಖಾಸಗಿತನ ವನ್ನು ಕಳೆದುಕೊಂಡರು. “ಒಂದು ಮಾತು ಹೇಳಲು ಒಂದು ವರ್ಷ ಕಾದದ್ದು ಇದೆ. ಹೇಳಲಾಗದೇ ಇದ್ದದ್ದು ಇನ್ನೆಷ್ಟೋ ಇದೆ. ಹೇಳದೇ ಉಳಿದ ಮಾತುಗಳೆಲ್ಲ ಎದೆಯ ಸಂಕಟ ಹೆಚ್ಚಿಸಿದವು” ಕಸ್ತೂರಬಾ ಅವರಿಗೆ 34,000 ಪತ್ರಗಳನ್ನು ಗಾಂಧಿ ಬರೆದರೂ ಅವರಿಗೆ ತನಗೆ ಗಂಡ ಖಾಸಗಿ ಸಮಯ ಕೊಟ್ಟಿಲ್ಲ ಎನ್ನುವ ಭಾವನೆ ಬರಬೇಕಾದರೆ, ಅವರ ಮನಸ್ಸೆಷ್ಟು ನೊಂದಿತ್ತು ಎಂಬುದರ ಅರ್ಥವಾಗುತ್ತದೆ.
ಗಂಡನನ್ನು ಅನುಸರಿಸಿಕೊಂಡು ಅವರ ನೆರಳಿನಂತೆ ಬದುಕಿದ, ತನ್ನದೆನ್ನುವುದೇನೂ ಇಲ್ಲದಂತೆ ಸುಟ್ಟುಕೊಂಡ ಬಾ ಅವರಿಗೆ ಗಾಂಧಿ ಒಂದು ಪ್ರಶ್ನೆಯಾಗುತ್ತಾರೆ. ತನಗೆ ಸರಿಯೆನ್ನಿಸದ್ದನ್ನು ಬೇರೆಯವರು ಮಾಡಿದರೆ ಆಗ ಉಪವಾಸ ಕೂತು ಗಾಂಧಿ ತಮ್ಮ ದೇಹ ದಂಡಿಸಿಕೊಳ್ಳುತ್ತಿದ್ದರು. ಗಾಂಧಿಯ ಈ ಬ್ಲಾಕ್ ಮೈಲ್ ತಂತ್ರಕ್ಕೆ ಹೆದರಿ ಎಷ್ಟೋ ಜನ ಗಾಂಧಿಯವರ ಮಾತಿಗೆ ತಲೆದೂಗಿದ್ದಿದೆ. ಆದ್ದರಿಂದ ಬಾ ಗಂಡನ ಈ ದೇಹದಂಡನೆಯ ಸತ್ಯಾಗ್ರಹ ಮಂತ್ರಕ್ಕೆ ಹೆದರಿಗೆ ತಮಗೇ ವೈರಾಗ್ಯವನ್ನು ಆವಾಹಿಸಿಕೊಳ್ಳುತ್ತಾರೆ. ಆದರೆ ಅವರು ತಮ್ಮ ವ್ಯಕ್ತಿತ್ವದ ಸಾರ್ಥಕ್ಯತೆಯ ಪ್ರಶ್ನೆಯನ್ನು ಪ್ರಶ್ನಿಸಿಕೊಳ್ಳುವ ರೀತಿ ಅನನ್ಯವಾದದ್ದು: “ಬಾಪುವಿನ ಶೋಭೆಗೆ ನಾನಿದ್ದೆನೆ? ಬಾಪುವನ್ನು ನಿರಂತರ ಗೆಲ್ಲಿಸಲಿಕ್ಕೆ, ಸೋಲಲಿಕ್ಕೆ, ಪ್ರಯೋಗಗಳ ಪರೀಕ್ಷಿಸಲಿಕ್ಕೆ ನಾನಿದ್ದೆನೆ? ಅಕಸ್ಮಾತ್ ನಾನೇ ಏನಾದರೂ ಈ ಸಂಸಾರ-ಗಂಡು-ಮಕ್ಕಳು ಇವೆಲ್ಲ ಅರ್ಥಹೀನ ಅಂತ ಆಶ್ರಮವಾಸಕ್ಕೆ ಗಂಡನನ್ನು ಕರೆದಿದ್ದರೆ? ಅಥವಾ ಸತ್ಯಾಗ್ರಹದಲ್ಲಿ ಮುಳುಗಿ ಮಕ್ಕಳು, ಮನೆ ನೋಡಿಕೊಳ್ಳದೆ ಮಗ ಅಂಥ ದಾರಿ ಹಿಡಿದ್ದರೆ? ಬಾಪು ಹೇಳಿದ್ದು ನನಗೆ ಸರಿ ಬರುವುದಿಲ್ಲ ಅಂತ ಖಾದಿ ಬಿಟ್ಟು ಬಣ್ಣ ಬಣ್ಣದ ಸೀರೆ ಉಟ್ಟು, ಹೋಳಿಗೆ ತಿಂದು, ಮಕ್ಕಳುಮರಿ ಜೊತೆ ದುಡ್ಡು ಖರ್ಚು ಮಾಡುತ್ತ ರಾಣಿ ತರಹ ಇದ್ದಿದ್ದರೆ? ನನ್ನಿಷ್ಟದ ಹಾಗೆ ಇರಲಿಕ್ಕೆ ಬಾಪು ಮನವೊಲಿಸಲು ನಾನೂ ಉಪವಾಸ ಕೂತಿದ್ದರೆ? ನಾನು ನನ್ನದೇ ಪ್ರಯೋಗ ನಡೆಸಿ ಸತ್ಯವನ್ನು ಕಂಡಿದ್ದರೆ?” ಏನಾಗುತ್ತಿತ್ತು? ಆಗ ಕಸ್ತೂರ್ ಗಾಂಧಿ ಕಸ್ತೂರಬಾ ಆಗದೇ ಹೋಗುವ ಸಾಧ್ಯತೆಯಿತ್ತು. ಇದು ಕಸ್ತೂರ್ ಬಾ ಒಬ್ಬಳ ಪ್ರಶ್ನೆಯಾಗದೆ, ಅಂದು ಸ್ವಾತಂತ್ರ್ಯ ಚಳುವಳಿಯ ಬಹುಪಾಲು ನಾಯಕರ, ಅಷ್ಟೇ ಏಕೆ ಸಾಮಾಜಿಕ ಸುಧಾರಕರ ಪತ್ನಿಯರ ಮನಸ್ಸಿನ ಒಳತೋಟಿಗಳ ಬಗೆಗೂ ಬೆಳಕುಬೀರುತ್ತದೆ.
ಕಸ್ತೂರ್ ಬಾ ಅವರ ಆತ್ಮವಿಮರ್ಶೆಯ ಈ ಹಂತ ಲೇಖಕಿಯ ವಿಶ್ಲೇಷಣೆಯ ಶೈಲಿಯಾಗಿದೆ. ಅವರ ಈ ವಿಶ್ಲೇಷಣೆಯನ್ನೂ ಮತ್ತೂ ಮುಂದುವರಿಸುವ ಈ ಸಾಲುಗಳನ್ನು ಗಮನಿಸಿ:
“ಮೋಕ ಒಂದೊಂದೇ ಹೆಜ್ಜೆ ಎತ್ತಿಡುತ್ತ ಭಾಯಿ, ಬಾಪು, ಮಹಾತ್ಮನಾಗುತ್ತ ಮೇಲೇರಿದರು. ನಾನು ಹಂತ ಹಂತವಾಗಿ ದಿನ ದಿನದ ಆಸೆ ಆಕಾಂಕ್ಷೆಗಳನ್ನು ಒತ್ತಿಕೊಳ್ಳುತ್ತ ಮೌನವಾಗುತ್ತ ಅವರ ಹಿಂದೆ ಬಂದೆ. ನಮ್ಮ ನಡುವೆ ಅತಿ ಗೌರವದ ಸಂಬಂಧ ಇತ್ತು. ಆದರೆ ಸ್ನೇಹ ಇರಲಿಲ್ಲ. ಕೊನೆ ಕೊನೆಗೆ ಅವರು ಎಷ್ಟು ಎತ್ತರವಾಗಿ ಬೆಳೆದರು ಎಂದರೆ ನನ್ನ ಅಳತೆಗೆ ಸಿಗದಷ್ಟು . ನನ್ನ ಗುದ್ದಾಟವೆಲ್ಲ ಅವರ ನೆರಳಿನ ಜೊತೆಗೆ ಆಗುವಷ್ಟು. ನಮ್ಮ ಸಂಬಂಧ ಮೌನದಲ್ಲಿ ಹುದುಗಿ ಹೋಯಿತು. ಪತ್ನಿಯಾಗಿ ಒಂದೊಂದೇ ಜವಾಬ್ದಾರಿ ಕಳೆಯುತ್ತ ಬಂದಹಾಗೆ ಲೆಕ್ಕದ ಹೆಂಡತಿಯಷ್ಟೇ ಆದೆ ಅನಿಸಿತು. ಬಾಗೆ ಬಾಪುವಿನ ಹೊರತಾಗಿ ಪ್ರಪಂಚವೇ ಇರಲಿಲ್ಲ. ಬಾಪುವಿನ ಹೊರತಾಗಿ ಬೆಳಗುತ್ತಲೇ ಇರಲಿಲ್ಲ. ಆದರೆ ಬಾಪುವಿಗೆ ಹಾಗಲ್ಲ. ಅವರಿದ್ದಲ್ಲೇ ಪ್ರಪಂಚ ಸುತ್ತುವರೆಯುತ್ತಿತ್ತು.” ಇದು ಈ ಕೃತಿಯಲ್ಲಿ ಬಾ ವ್ಯಕ್ತಿತ್ವ ಹೊರಡಿಸುವ ಅಂತಿಮ ಸ್ವರೂಪ.
ಲೇಖಕಿಯೇನೋ ತಮ್ಮ ‘ವಿಚಾರವಾದಿ’ ಮನಸ್ಸನ್ನು ಮೊಟಕಿಸಿ ಬಾ ವ್ಯಕ್ತಿತ್ವದ ಪರಕಾಯ ಪ್ರವೇಶ ಮಾಡಿ ಈ ಕೃತಿ ರಚಿಸಿರುವುದಾಗಿ ಆರಂಭದಲ್ಲಿ ಹೇಳಿಕೊಂಡಿರಬಹುದು. ಆದರೆ ಓದುಗರ ವೈಚಾರಿಕ ದೃಷ್ಟಿಕೋನ ಬಾ ಅವರ ಚಿಂತನೆಗಳ ಮೂಲಕ ರೂಪುಗೊಳ್ಳುವ ಗಾಂಧಿಯನ್ನು ಭಾವುಕ ನೆಲೆಯಲ್ಲಿ ಅರ್ಥೈಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅವರ ಸಾಮಾಜಿಕ ವೈಚಾರಿಕತೆಯ ಹಿನ್ನೆಲೆಯಲ್ಲೇ ನೋಡಬೇಕಾದ ಅಗತ್ಯವನ್ನು ಈ ಕೃತಿ ಒತ್ತಾಯಿಸುತ್ತದೆ.

ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *