Latestಪುಸ್ತಕ ಸಮಯ

ಪುಸ್ತಕ ಸಮಯ / ನರಸಮ್ಮ: ಮಾನವೀಯತೆಯ ಮೂಲಸೆಲೆ- ಡಾ|| ವಸುಂಧರಾ ಭೂಪತಿ

ಅಮ್ಮಂದಿರ ಅಮ್ಮ ಸೂಲಗಿತ್ತಿ ನರಸಮ್ಮ ತಾಯಿಯ ಸಂವೇದನೆಗೆ, ಮಾನವ ಸಂವೇದನೆಗೆ ಬಹುದೊಡ್ಡ ಉದಾಹರಣೆ. ಅವರಿಗೆ ಪದ್ಮಶ್ರೀ, ಗೌರವ ಡಾಕ್ಟರೇಟ್, ರಾಷ್ಟ್ರಪತಿ ಸಮ್ಮಾನ್ ಪ್ರಶಸ್ತಿಗಳು ಸಂದಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ. ಹದಿನೈದು ಸಾವಿರ ಹೆರಿಗೆಗಳನ್ನು ಮಾಡಿಸಿರುವ ನರಸಮ್ಮ ಅವರ ಸಮಗ್ರ ವ್ಯಕ್ತಿತ್ವವನ್ನು ಡಾ.ಜ್ಯೋತಿ ಅವರು ಸಂಪಾದಿಸಿರುವ, ವಿವಿಧ ಲೇಖಕರು ಬರಹಗಳನ್ನು ಒಳಗೊಂಡ ‘ಜೀವರಕ್ಷಕಿ’ ಪುಸ್ತಕ ಹೃದಯಸ್ಪರ್ಶಿಯಾಗಿ ಅನಾವರಣಗೊಳಿಸುತ್ತದೆ.

ಆರೋಗ್ಯ ಕ್ಷೇತ್ರದಲ್ಲಿ ಹೆರಿಗೆ ಅನ್ನುವುದು ಈಗ ಒಂದು ಬಿಜಿನೆಸ್ ಆಗಿದೆ ಎಂಬ ಟೀಕೆ ಸಾಮಾನ್ಯ. ಮೂವತ್ತು ನಲವತ್ತು ವರ್ಷಗಳ ಹಿಂದೆ ಸಿಸೇರಿಯನ್ ಹೆರಿಗೆ ಅಂದರೆ ಭಯವಾಗುತ್ತಿತ್ತು. ಆದರೆ ಈಗ, ನಾರ್ಮಲ್ ಹೆರಿಗೆ ಅಂದರೆ ಆಶ್ಚರ್ಯಪಡುವಂತಹ ಕಾಲ. ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಸಿಸೇರಿಯನ್ ಹೆರಿಗೆಗೆ ಹೆಚ್ಚು ಹಣ ಪಡೆಯುತ್ತವೆ. ಅಲ್ಲದೆ ಇಂದಿನ ಕಾಲದ ಗರ್ಭಿಣಿಯರೂ ಕೂಡಾ ತಮಗೆ ಸಿಸೇರಿಯನ್ ಬೇಕು ಎಂದು ಕೇಳುತ್ತಾರೆ.

ನರಸಮ್ಮ ಅವರು 12ನೇ ವಯಸ್ಸಿಗೆ ಮದುವೆಯಾಗಿ, 12 ಮಕ್ಕಳನ್ನು ಹೆತ್ತು, ಮಗುವಿಗೆ ಹಾಲೂಡಿಸುತ್ತಲೇ ಕರೆ ಬಂದರೆ ಹಾಗೇ ಬಿಟ್ಟು ಕರ್ತವ್ಯದತ್ತ ಧಾವಿಸುತ್ತಿದ್ದ ರೀತಿ ನಾವ್ಯಾರೂ ಊಹೆ ಮಾಡಲೂ ಅಸಾಧ್ಯ. ಕರುಳಲ್ಲಿ ಸಂಕಟವನ್ನಿಟ್ಟುಕೊಂಡೇ ಇನ್ನೊಬ್ಬರ ಸಂಕಟ ದೂರಮಾಡಲು ಮನಸ್ಸನ್ನು ಸಿದ್ಧಗೊಳಿಸುವುದು ಸಾಮಾನ್ಯದ ಸಂಗತಿಯಲ್ಲ. ಸ್ಥಿತಪ್ರಜ್ಞ ಸ್ಥಿತಿಯಲ್ಲಿರುವವರಿಗೆ ಮಾತ್ರ ಸಾಧ್ಯವಾಗುವಂತಹುದು. ನಮ್ಮ ಕಾಲದ ಶರಣೆÉ ಎನ್ನಬಹುದಾದ ನರಸಮ್ಮ ಹೆರಿಗೆ ಮಾಡಿಸುವ ಕೌಶಲವನ್ನು ತಮ್ಮ ಅಜ್ಜಿ ಮರಿಗೆಮ್ಮ ಅವರಿಂದ ಕಲಿತರು. ಮೊದಲು ಹೆರಿಗೆ ಮಾಡಿಸಿದ್ದು ಗಂಡನ ಸೋದರ ಮಾವನ ಹೆಂಡತಿಗೆ, ತಮ್ಮ ಇಪ್ಪತ್ತರ ವಯಸ್ಸಿನಲ್ಲಿ.

`ಜೀವರಕ್ಷಕಿ’ ಕೃತಿಯಲ್ಲಿ ಒಟ್ಟು 42 ಲೇಖನಗಳು, 21 ಕವಿತೆಗಳು ಇವೆ. ಅನ್ನಪೂರ್ಣ ವೆಂಕಟನಂಜಪ್ಪ, ಡಾ. ಮಂಗಳಗೌರಿ, ಬಾ.ಹ.ರಮಾಕುಮಾರಿ, ಡಾ. ಅರುಂಧತಿ, ಡಾ. ಪರಮೇಶ, ಕೆ.ಬಿ. ಸಿದ್ಧಯ್ಯ, ಸಿದ್ಧಗಂಗಾ ಶ್ರೀಗಳು, ಬಿ.ಜಿ. ಸಾಗರ್, ಪ್ರೊ.ನಿತ್ಯಾನಂದ ಬಿ. ಶೆಟ್ಟಿ, ಎನ್.ಡಿ. ವೆಂಕಮ್ಮ ಸೇರಿದಂತೆ ಅನೇಕರು ಬರೆದಿದ್ದಾರೆ. ಏಳು ದಶಕಗಳ ಕಾಲ ಕಾಯಕ ಮಾಡಿಕೊಂಡು ಬಂದಿದ್ದ ನರಸಮ್ಮ 98 ವರ್ಷಗಳ ಕಾಲ ಬದುಕಿದ್ದ ತುಂಬು ಜೀವ. ಪಾವಗಡದ ಟಿ.ಎನ್. ಪೇಟೆಯ ಕದಿರಪ್ಪ, ಬಾವಮ್ಮ ಅವರ ಏಳು ಮಕ್ಕಳಲ್ಲಿ ಎರಡನೇ ಮಗಳು ಇವರು. ವಿಶಿಷ್ಟ ಸಂಸ್ಕøತಿಯ ತೆಲುಗು ಕನ್ನಡ ಮಿಶ್ರಿತ ಭಾಷಿಕರ ನಾಡು ಪಾವಗಡ. ಜನ ಸಾಮಾನ್ಯರ ನರ್ಸ್ ನರಸಮ್ಮ ಹೆರಿಗೆ, ತಾಯ್ತನ ಹೆಣ್ಣಿಗೆ ವಿಶಿಷ್ಟ ಅನುಭವ. ಏನೂ ಹೆದರಬೇಡ ನರಸಮ್ಮ ಬರ್ತಾಳೆ ಅಂತ ಧೈರ್ಯ ಹೇಳುತ್ತಿದ್ದರು. ಹೊಟ್ಟೆಯ ಮೇಲೆ ಕೈಯಾಡಿಸುತ್ತಾ `ಏನೂ ಆಗಲ್ಲ’ ಅಂತ ಹೇಳುತ್ತಿದ್ದ ಮಾತು ಅಂತಃಕರಣದ ಮಾತು. ಎಲ್ಲ ಜಾತಿ, ವರ್ಗ ಭೇದವಿಲ್ಲದೆ ಮಿಡಿಯುವ ಮನಸ್ಸು ಅವರದು. ಒಂದು ಮೊರ ರಾಗಿ, ಸೀರೆ ಉಡಿಸಿ ಮಡಿಲು ತುಂಬುತ್ತಿದ್ದರು. ಪ್ರಸವದ ದಿನವನ್ನು ಲೆಕ್ಕಾಚಾರ ಮಾಡಿ ಹೇಳುತ್ತಿದ್ದ ರೀತಿ ಅಚ್ಚರಿ ಹುಟ್ಟಿಸುವಂತಹದ್ದು. ಗರ್ಭಿಣಿಗೆ ಮೂರು ತಿಂಗಳಿನಿಂದಲೇ ಎಲ್ಲ ಸೂಚನೆಗಳನ್ನು ನೀಡುತ್ತಿದ್ದರು. ಏನು ತಿನ್ನಬಾರದು ಎಂಬದುದರಿಂದ ಹಿಡಿದು ಎಲ್ಲ ವಿಷಯಗಳಿಗೂ ಸೂಕ್ಷ್ಮವಾಗಿ ಗಮನ ಕೊಡುತ್ತಿದ್ದರು. 8-9 ತಿಂಗಳಲ್ಲಿ ಗರ್ಭಿಣಿಗೆ ನರಸಮ್ಮ ಹೇಳುತ್ತಿದ್ದ ಕಥೆಗಳಿಗೆ ತುಂಬಾ ಬೇಡಿಕೆ ಇತ್ತು. ಅವರು ಹೇಳುತ್ತಿದ್ದ ಕಥೆಗಳನ್ನು ಎಲ್ಲರೂ ಕುಳಿತು ಕೇಳುತ್ತಿದ್ದರು.

`ನೋವು ಅನುಭವಿಸಲು ಈಗಿನ ಹೆಣ್ಣು ಮಕ್ಕಳು ಸಿದ್ಧರಿಲ್ಲ. ಗರ್ಭಧರಿಸುವುದು ಸಹಜ ಸ್ಥಿತಿ, ಅದೊಂದು ಕಾಯಿಲೆ ಅಲ್ಲ. ನಾನೂ ಕೂಡಾ ಮನೆ ಹೆರಿಗೆಯಲ್ಲೇ ಹುಟ್ಟಿದ್ದು. ಅಮ್ಮನಿಗೆ ಏಳು ತಿಂಗಳು ತುಂಬಿ ಎಂಟಕ್ಕೆ ಬಿದ್ದು ಒಂದು ದಿನವಾಗಿತ್ತಂತೆ. ಹೆಚ್ಚು ತೂಕ ಕೂಡ ಇರಲಿಲ್ಲವಂತೆ. ಅವ್ವನಿಗೆ ಎದೆಹಾಲು ಉಕ್ಕಿ ಉಕ್ಕಿ ಬರುತ್ತಿತ್ತು, ನನಗೆ ಕುಡಿಯಲು ಆಗುತ್ತಿರಲಿಲ್ಲವಂತೆ. ಹತ್ತಿಯನ್ನು ಹಾಲಲ್ಲಿ ಅದ್ದಿ ಹನಿಹನಿ ಬಾಯಿಗೆ ಬಿಡುತ್ತಿದ್ದರಂತೆ. ಇದು ಬದುಕುತ್ತೋ ಇಲ್ಲವೂ ಅಂತ ಊರಿನ ಜನ ಬಂದು ನೋಡಿಕೊಂಡು ಹೋಗುತ್ತಿದ್ದರಂತೆ. ಸೂಲಗಿತ್ತಿ ತುಂಗತ್ತೆ ಅಮ್ಮನಿಗೆ ಹೆರಿಗೆ ಮಾಡಿಸಿದ್ದರು’ ಎಂಬ ನೆನಪುಗಳು ಇಲ್ಲಿವೆ.

ಪಾವಗಡ ಸರ್ಕಾರಿ ಆಸ್ಪತ್ರೆಯ ನರ್ಸ್ ವೃತ್ತಿಗೆ ಆಹ್ವಾನಿಸಿದರೂ ಅದನ್ನು ನಯವಾಗಿಯೇ ನಿರಾಕರಿಸಿದ ನರಸಮ್ಮ ಸ್ವತಂತ್ರವಾಗಿ ಜನರಿಗಾಗಿ ತಮ್ಮ ಸೇವೆಯನ್ನು ಮೀಸಲಿಟ್ಟರು. ಮೊಟ್ಟ ಮೊದಲು ಸೋದರ ಮಾವನ ಹೆಂಡತಿ ಹನುಮಕ್ಕನ ಎರಡನೇ ಹೆರಿಗೆ ಮಾಡಿಸಿದ್ದರು. ಹೀಗೆ ಆರಂಭವಾದದ್ದು. ಪ್ರತೀ ಹೆರಿಗೆಯಲ್ಲೂ ಯಶಸ್ಸು ಸಿಕ್ಕಿತು. ನರಸಮ್ಮನಿಂದ ಹೆರಿಗೆ ಮಾಡಿಸಿಕೊಂಡ ಬುರ್ರಕಥೆ ಲಕ್ಷಮ್ಮ ನರಸಮ್ಮನ ವಿಷಯ ಕಥಾರೂಪದಲ್ಲಿ ಪ್ರಸಾರ ಮಾಡಿದ್ದು ನಂತರದಲ್ಲಿ ನರಸಮ್ಮ ಹಳ್ಳಿಯಿಂದ ಹಳ್ಳಿಗೆ ಗಾಡಿಯಲ್ಲಿ ಹೋಗಿ ಹೆರಿಗೆ ಮಾಡಿಸಿ ಬರುತ್ತಿದ್ದರು. ಗರ್ಭಿಣಿಯರಿಗೆ ದೈಹಿಕ ಲಕ್ಷಣ ನೋಡಿ ಗಂಡು/ಹೆಣ್ಣು ಅಂತ ಹೇಳುತ್ತಿದ್ದರಂತೆ. ಹೆರಿಗೆ ಸಮಯದಲ್ಲಿ ಮಾಸು ಬೀಳದಿದ್ದರೆ ಕಷಾಯ ಕುಡಿಸಿ ಸಲೀಸಾಗಿ ಮಾಸು ಬೀಳುವಂತೆ ಮಾಡುತ್ತಿದ್ದರಂತೆ.

ನರಸಮ್ಮನವರ ಮಗ ಹೇಳಿದ ಸಂಗತಿ – ತಾಯಿ ಹೆರಿಗೆಗೆ ಹೋದಾಗ ಅಪ್ಪ ಮೂರುದಿನ ಅಮ್ಮನ ಕೈಯಲ್ಲಿ ಊಟ ಮಾಡುತ್ತಿರಲಿಲ್ಲ, ಏನು ಮಾಡುತ್ತಿರಲಿಲ್ಲ. ಮನೆಯಲ್ಲಿ ಅದೆಷ್ಟು ಕಷ್ಟ ಇತ್ತು, ಬಂದಳು ನೋಡು ಡಾಕ್ಟ್ರಮ್ಮ ಅಂತ ಹೇಳುತ್ತಿದ್ದರು. ಮಗನೂ ಕಟ್ಟುಕಟ್ಟೋದು ಕಲಿತಿದ್ದಾನೆ. ನಾಟಿವೈದ್ಯನಾಗಿದ್ದಾನೆ. ‘ಬಸ್ಸನ್ನೇ ಹತ್ತದ ನರಸಮ್ಮ ವಿಮಾನ ಹತ್ತಿದಾಗ’ ಲೇಖನದಲ್ಲಿ ಬಾ.ಹ. ರಮಾಕುಮಾರಿ ಸೊಗಸಾಗಿ ಅನೇಕ ಸಂಗತಿಗಳನ್ನು ವಿವರಿಸಿದ್ದಾರೆ.

ಜಾನಪದ ಕಥೆಗಳನ್ನು ಹೇಳುತ್ತಿದ್ದ ನರಸಮ್ಮನವರು ಸೋಬಾನೆ ಪದಗಳು, ‘ಸೊಪ್ಪಿನ ಮಹಾತ್ಮೆ’ ಕಥೆ ಹೇಳುತ್ತಿದ್ದರು. ಸೊಪ್ಪಿನ ಜೊತೆಗೆ ಕರಿಮೆಣಸು, ಲವಂಗ, ಎಳ್ಳು, ಬೆಲ್ಲ, ಹಾಕಿ ಜ್ವರ ಬಂದವರಿಗೆ ಕುಡಿಸಬೇಕೆಂದು ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಕತೆಗಳಲ್ಲಿ ಪ್ರಮುಖವಾದವು – ಗಂಡನಿಲ್ಲದೆ ಗಂಡು ಮಗು ಹೆತ್ತ ರಾಣಿ, ಬಡಕಲು ರಾಜ ಮತ್ತು ರಾಕ್ಷಸನ ಮಕ್ಕಳು.

ನರಸಮ್ಮನಿಗೆ ಶರೀರ ಶಾಸ್ತ್ರದ ಬಗ್ಗೆಯೂ ಅರಿವಿತ್ತು- ಯಾವ ಯಾವ ಮೂಳೆಗಳು ಎಲ್ಲಿರುತ್ತದೆ, ಗರ್ಭಕೋಶದ ಗಾತ್ರ, ಯಾವ ರೀತಿ ಮಲಗಬೇಕು ಮತ್ತು ಕೂರಬೇಕು ಎಂಬುದನ್ನು ಹೇಳುತ್ತಿದ್ದರು. ಗರ್ಭಧಾರಣೆಗೆ ಔಷಧಿ ಕೊಡುತ್ತಿದ್ದರೆ ಹೊರತು ಗರ್ಭಪಾತಕ್ಕೆ ಔಷಧಿ ಗೊತ್ತಿದ್ದರೂ ಕೊಡುತ್ತಿರಲಿಲ್ಲ. ಶಿಶು ಹತವಾಗಿ ತಾಯಿ ಬದುಕಿರೋದು, ತಾಯಿ ಹತವಾಗಿ ಮಗು ಬದುಕಿರೋದು ಇದೆಯಾ ಅಂತ ಕೇಳಿದಾಗ ‘ಇಲ್ಲ’ ಎಂಬ ನರಸಮ್ಮ ಅವರ ಉತ್ತರ ಕೇಳಿದಾಗ ಖುಷಿಯಾಗುತ್ತದೆ ಎನ್ನುತ್ತಾರೆ ಪ್ರೊ. ಕೆ.ಬಿ. ಸಿದ್ಧಯ್ಯ.

ವಿಧವೆಗೆ ಹೆರಿಗೆ ಮಾಡಿಸಿದ ಮನನೀಯ ಪ್ರಸಂಗ

ಕೃಷ್ಣಾಪುರದಲ್ಲಿ 16 ವರ್ಷದ ಮಾದಮ್ಮ ಗಂಡನಿಗೆ ಮದುವೆಯಾದ ಕೂಡಲೇ ಕಾಯಿಲೆ ಶುರುವಾಗಿ ಒಂದು ವರ್ಷದ ನಂತರ ಗಂಡ ತೀರಿ ಹೋಗುತ್ತಾನೆ. ಮುಂದೆ, ಹೆಂಡ ಮಾರುವ ವಿಧುರ ಸುಬ್ಬಣ್ಣನ ಜೊತೆ ಗೆಳೆತನವಾಗಿ ಮಾದಮ್ಮ ಗರ್ಭಿಣಿಯಾಗುತ್ತಾಳೆ ಈ ವಿಷಯ ತಿಳಿದ ಅವಳ ಮೈದುನ ರಾಚಪ್ಪ ಕೋಪದಿಂದ ವಂಶದ ಮರ್ಯಾದೆ ನಾಶವಯಿತೆಂದು ಸುಬ್ಬಣ್ಣ ಮಾದಮ್ಮ ಇಬ್ಬರನ್ನು ಸಾಯಿಸಲು ಸಿದ್ಧವಾಗುತ್ತಾನೆ. ವಿಷಯ ತಿಳಿದ ಸುಬ್ಬಣ್ಣ ‘ಹಟ್ಟಿಯಲ್ಲಿರುವ ಸೂಲಗಿತ್ತಿ ನರಸಮ್ಮನ ಮನೆಯಲ್ಲಿದ್ದರೆ ಯಾರಿಗೂ ಗೊತ್ತಾಗುವುದಿಲ್ಲ. ನಿನಗೆ ರಕ್ಷಣೆ ಸಿಗುತ್ತದೆ’ ಎಂದು ಹೇಳಿ ಹೆರಿಗೆ ದಿನ ಹತ್ತಿರವಾಗಿದ್ದ ಮಾದಮ್ಮನನ್ನು ಸೀರೆ ಗುಬರಾಕಿಕೊಂಡು ನರಸಮ್ಮನ ಮನೆಗೆ ಕರೆತರುತ್ತಾನೆ. ಗಂಡ ಒಪ್ಪದಿದ್ದರೂ ನರಸಮ್ಮ ಈ ಎರಡು ಜೀವ ಉಳಿಸಲು ನಿರ್ಧರಿಸುತ್ತಾಳೆ.

ಅದೇ ವೇಳೆಗೆ ರಾಚಪ್ಪನ ಹೆಂಡತಿಗೂ ಹೆರಿಗೆ ನೋವು ಶುರುವಾಗುತ್ತದೆ. ನರಸಮ್ಮನನ್ನು ಕರೆತರಲು ಅವಳು ಗಂಡನಿಗೆ ಗೋಗರೆಯುತ್ತಾಳೆ. ರಾಚಪ್ಪ ‘ಇಲ್ಲ ಹೋಗಲ್ಲ ಈಗ ತಾನೇ ಅವರ ಹತ್ತಿರ ಅತ್ತಿಗೆ ವಿಷಯಕ್ಕಾಗಿ ಗಲಾಟೆ ಮಾಡಿಕೊಂಡಿದ್ದೀನಿ’ ಅಂತ ಹೇಳುತ್ತಾನೆ. ‘ನರಸಮ್ಮ ಬಂದಿಲ್ಲ ಅಂದ್ರೆ ನಾನು ಸತ್ತು ಹೋಗ್ತೀನಿ ಅಯ್ಯೋ ಮೊದಲನೇ ಹೆರಿಗೆ ಬೇರೆ ತಪ್ಪಾಯಿತು ಅಂತ ಕಾಲಿಗೆ ಬಿದ್ದು ಕರೆದುಕೊಂಡು ಬಾ’ ಎಂದು ಹೆಂಡತಿ ಹೇಳುತ್ತಾಳೆ. ಆಗ ರಾಚಪ್ಪ ಬೇರೆ ದಾರಿಯಿಲ್ಲದೆ ನರಸಮ್ಮನ ಮನೆಗೆ ಬಂದು ‘ತಪ್ಪಾಯಿತು ನನ್ನನ್ನು ಕ್ಷಮಿಸಿ ನನ್ನ ಅತ್ತಿಗೆ ಮೇಲಿದ್ದ ಸಿಟ್ಟಿನಿಂದ ನಿಮ್ಮ ಮೇಲೆ ರೇಗಾಡಿದೆವು. ಬಾರಮ್ಮಾ ತಾಯಿ ನನ್ನ ಹೆಂಡ್ತೀನ ಕಾಪಾಡು’ ಎಂದನು. ನರಸಮ್ಮ ಆಗ ಒಂದು ಷರತ್ತು ಹಾಕಿ ‘ನೋಡು ರಾಚಪ್ಪ ಯಾವತ್ತೂ ಮಾದಮ್ಮನ ತಂಟೆಗೆ ಮಾತ್ರವಲ್ಲ ಊರಿನಲ್ಲಿರುವ ಯಾವುದೇ ಹೆಣ್ಣು ಮಗಳ ತಂಟೆಗೂ ಹೋಗಲ್ಲ ಅಂತ ಮಾತು ಕೊಡು’ ಅಂತ ಕೇಳಿದರು. ರಾಚಪ್ಪ ಒಪ್ಪಿದ ಮೇಲೆ ಅವನ ಮನಗೆ ಹೋಗಿ ಹೆರಿಗೆ ಮಾಡಿಸುತ್ತಾರೆ. ಮಾದಮ್ಮನಿಗೂ ಹೆಣ್ಣು ಮಗು ಆಗುತ್ತದೆ. ಒಂಬತ್ತು ದಿನಗಳ ನಂತರ ತವರು ಮನೆಗೆ ಹೋಗುತ್ತಾಳೆ. ಒಂದು ವರ್ಷದ ನಂತರ ಊರಿಗೆ ಬಂದು ಶಿಶುವಿಹಾರದ ಅಂಗನವಾಡಿ ಶಿಕ್ಷಕಿಯಾಗಿ ನೇಮಕವಾಗುತ್ತಾಳೆ.

ಇಂತಹ ಸಾಮಾಜಿಕ ಪ್ರಾಮುಖ್ಯದ ಪ್ರಸಂಗಗಳು ಇಲ್ಲಿ ಬಹಳ ಇವೆ. ಹುಲಿಬೆಟ್ಟದಲ್ಲಿ ದರೋಡೆ ಕೋರನ ಹೆಂಡತಿಗೆ ಹೆರಿಗೆ ಮಾಡಿಸಿದ ಪ್ರಕರಣ ರೋಚಕವಾದದ್ದು. ಕುಂಬಾರ ಮೂಗಮ್ಮನಿಗೆ ಹೆರಿಗೆ ಮಾಡಿಸಿದ್ದು ವಿಸ್ಮಯದ ಸಂಗತಿ. ಕಾರಿನಲ್ಲೇ ಸಲೀಸಾಗಿ ಮೊಮ್ಮಗಳ ಹೆರಿಗೆ ಮಾಡಿಸಿದ್ದ ಸಂಗತಿ ಮನೆ ಮಾತಾಗಿದೆ . ಕಾರ್‍ನಲ್ಲಿ ಹುಟ್ಟಿದ ಹುಡುಗಿಗೆ ಕಾರ್ ಮಗಳು ಅಂತಲೇ ಕರೆಯುತ್ತಾರೆ. ಬೂಬಮ್ಮನ ಹೆರಿಗೆ ಸೌಹಾರ್ದದ ಪ್ರತೀಕ. ಎಷ್ಟೋ ಜನ ಹೆರಿಗೆ ನಂತರ ನರಸಮ್ಮನ ಕೈಯಿಂದಲೇ ನಾಮಕರಣ ಮಾಡಿಸುತ್ತಿದ್ದರಂತೆ.

ಮಹಿಳಾ ಸಂವೇದನೆಗೆ ಮತ್ತೊಂದು ಹೆಸರೇ ಇಂಥ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ, ಗೌರವ ಡಾಕ್ಟರೇಟ್, ರಾಷ್ಟ್ರಪತಿ ಸಮ್ಮಾನ್ ಪ್ರಶಸ್ತಿಗಳು ಸಂದಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ.

ಡಾ|| ವಸುಂಧರಾ ಭೂಪತಿ

(ಜೀವರಕ್ಷಕಿ – ಸೂಲಗಿತ್ತಿ ನರಸಮ್ಮ ಕಥನ, ಸಂಪಾದಕಿ: ಡಾ. ಜ್ಯೋತಿ, ಪ್ರಕಟಣೆ: ಮಹಿಳಾ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ, ತುಮಕೂರು. 2023, ಪುಟ: 156, ಬೆಲೆ: ರೂ. 80)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಪುಸ್ತಕ ಸಮಯ / ನರಸಮ್ಮ: ಮಾನವೀಯತೆಯ ಮೂಲಸೆಲೆ- ಡಾ|| ವಸುಂಧರಾ ಭೂಪತಿ

  • Shadakshary

    Pusthaka parichayisiddakke Dhanyavadagalu

    Reply

Leave a Reply

Your email address will not be published. Required fields are marked *