ಪುಸ್ತಕ ಸಮಯ / ದಲಿತ ಲೋಕದ ಪರಿಧಿ ವಿಸ್ತರಿಸುವ`ಬದುಕು’- ಗಿರಿಜಾ ಶಾಸ್ತ್ರಿ

ಗೀತಾ ನಾಗಭೂಷಣ ಅವರ “ಬದುಕು” ಕಾದಂಬರಿ ನಮ್ಮ ಸಾಂಸ್ಕøತಿಕ ರಾಜಕಾರಣವನ್ನು ಬಯಲಾಗಿಸುವ ಅದ್ಭುತ ಕಾದಂಬರಿ. ಅವರು ಒಳಗಿನವರಾಗಿ ದಲಿತ ಜಗತ್ತನ್ನು ಕಂಡರಿಸಿರುವ ರೀತಿ ಕನ್ನಡ ಮಹಿಳಾ ಕಾದಂಬರಿ ಕ್ಷೇತ್ರದಲ್ಲಿಯೇ ಅನನ್ಯವಾದುದು. ಒಳಗಿನವರಾಗಿ ಬರೆಯುವಾಗ ಘೋಷಣೆಯ ರೂಪದ ವೈಭವೀಕರಣ ಇಲ್ಲವೇ ಜಿಗುಪ್ಸೆ ಕೀಳರಿಮೆಗಳನ್ನು ವ್ಯಕ್ತಪಡಿಸುವಂತಹ ಅಪಾಯಕ್ಕೆ ಸಿಲುಕುವ ಸಂಭವವೇ ಹೆಚ್ಚಾಗಿರುತ್ತದೆ. ದಲಿತ ಬಂಡಾಯ ಬರಹಗಳು ಒಂದು ಸಮಪಾತಳಿಯನ್ನು ಸಿದ್ಧಿಸಿಕೊಳ್ಳುತ್ತಿರುವ, ಪ್ರಬುದ್ಧ ಜೀವನ ದೃಷ್ಟಿಕೋನವನ್ನು ಹೊಂದುತ್ತಿರುವುದರ ಪ್ರತೀಕವಾಗಿಯೂ “ಬದುಕು” ಕಾದಂಬರಿಯನ್ನು ನೋಡಬಹುದಾಗಿದೆ. ಸೃಜನಶೀಲ ಸವಾಲುಗಳನ್ನು ಎದುರಿಸಿದ ಲೇಖಕಿಯ ಗಟ್ಟಿತನವನ್ನೂ ಪ್ರತಿಬಿಂಬಿಸುತ್ತದೆ.


ಗೀತಾ ನಾಗಭೂಷಣ ಅವರ `ಬದುಕು’ ಕಾದಂಬರಿಯಲ್ಲಿ ಒಂದು ಶಕ್ತಿ ಕೇಂದ್ರವಿದೆ. ಅದೆಂದರೆ, ಅಲ್ಲಿನ ಗ್ರಾಮದೇವತೆಯಾದ ಮಾಪುರತಾಯಿ. ಈ ಕೇಂದ್ರದಿಂದಲೇ ತನ್ನ ಶಕ್ತಿಯನ್ನು ಹೀರಿಕೊಳ್ಳುವ ಈ ಕಾದಂಬರಿ ದಲಿತ ಲೋಕದ ಪರಿಧಿಗಳನ್ನು ವಿಸ್ತರಿಸುತ್ತದೆ. ಇಲ್ಲಿರುವ ಮಕ್ಕಳೆಲ್ಲಾ ಮಾಪುರತಾಯಿಯ ಮಕ್ಕಳೇ. ಕಾದಂಬರಿ ಪ್ರಾರಂಭವಾಗುವುದೇ ಮಾಪುರದೇವಿಯ ಜಾತ್ರೆಗೆ ಸಜ್ಜಾಗುವುದರೊಂದಿಗೆ.

ಲೇಖಕಿಯೇ ಹೇಳಿಕೊಂಡಿರುವಂತೆ ಈ ಕಾದಂಬರಿ ದಲಿತರ ಕಾಮ, ಹಸಿವು ಹಾಗೂ ಕುಡಿತಕ್ಕೆ ಸಂಬಂಧಿಸಿದ್ದು. ಈ ಮೂರು ಪರಿಕಲ್ಪನೆಗಳಲ್ಲಿಯೇ ಈ ಕೃತಿ ಸಂಭಾಷಿಸುತ್ತದೆ. ತಮ್ಮ ಪ್ರಬುದ್ಧ ಜೀವನಾನುಭವದಿಂದ ಈ ಮೂರನ್ನೂ ಬಹಳ ನಿಬಿಡವಾದ ಸಾಂಸ್ಕøತಿಕ ವಿವರಗಳಿಂದ ಪೋಷಿಸುವಾಗ ಇವುಗಳ ಶಕ್ತಿ ಮತ್ತು ದೌರ್ಬಲ್ಯಗಳನ್ನು ಲೇಖಕಿ ಸಮಾನವಾಗಿ ಗುರುತಿಸುತ್ತಾರೆ ಎಂಬುದೇ ಮುಖ್ಯ. ಲೇಖಕಿ ಒಳಗಿನವರಾಗಿ ಬರೆಯುವಾಗ ಘೋಷಣೆಯ ರೂಪದ ವೈಭವೀಕರಣ ಇಲ್ಲವೇ ಜಿಗುಪ್ಸೆ ಕೀಳರಿಮೆಗಳನ್ನು ವ್ಯಕ್ತಪಡಿಸುವಂತಹ ಅಪಾಯಕ್ಕೆ ಸಿಲುಕುವ ಸಂಭವವೇ ಹೆಚ್ಚಾಗಿರುತ್ತದೆ. ಈ ಕಾದಂಬರಿಯ ಪ್ರಬಲವಾದ ಶಕ್ತಿಯೆಂದರೆ ಕಲ್ಬುರ್ಗಿ ನೆಲದ ಭಾಷೆ. ಗೀತ ನಾಗಭೂಷಣ್ ಅವರು ತಮ್ಮ ಈ ಭಾಷೆಯ ಶಕ್ತಿಯ ಮೂಲಕವೇ ಮೇಲೆ ಹೇಳಿದ ಅಪಾಯಗಳಿಂದ ಪಾರಾಗಿದ್ದಾರೆ. ಅಲ್ಲದೆ ದಲಿತ ಬಂಡಾಯ ಬರಹಗಳು ತಮ್ಮ ಅಪಕ್ವತೆಯನ್ನು ಕಳೆದುಕೊಂಡು ಒಂದು ಸಮಪಾತಳಿಯನ್ನು ಸಿದ್ಧಿಸಿಕೊಳ್ಳುತ್ತಿರುವ, ಪ್ರಬುದ್ಧ ಜೀವನ ದೃಷ್ಟಿಕೋನವನ್ನು ಹೊಂದುತ್ತಿರುವುದರ ಪ್ರತೀಕವಾಗಿಯೂ ಗೀತಾ ನಾಗಭೂಷಣ ಅವರ “ಬದುಕು” ಕಾದಂಬರಿಯನ್ನು ನೋಡಬಹುದಾಗಿದೆ.

ಕಾಮದ ನೆಲೆ: ಕಾಮದ ಬಗ್ಗೆ ಹುಡುಗಿಯೊಬ್ಬಳು ಪದ್ಯ ಬರೆಯುತ್ತಾಳೆ ಎನ್ನುವ ಕಾರಣಕ್ಕಾಗಿಯೇ (ಭಾಗ್ಯಲಕ್ಷ್ಮಿಯವರ “ಬೆರಳ ಸಂದಿಯ ಬದುಕು”) ಅವಳ ಪ್ರತಿಭೆಯನ್ನು ಚಿವುಟಿ ಹಾಕಿದ ಸಂದರ್ಭದಲ್ಲಿಯೇ, ಗೀತಾ ನಾಗಭೂಷಣ ಅವರು ಕಾಮವನ್ನು ತಮ್ಮ ಕಾದಂಬರಿಯ ಪ್ರಮುಖ ಆಶಯಗಳಲ್ಲಿ ಒಂದನ್ನಾಗಿ ಮಾಡಿಕೊಂಡು ಕ್ಲಾಸಿಕ್ ಎನ್ನಬಹುದಾದ ಕಾದಂಬರಿ ಬರೆದುದು ಅವರ ಧೈರ್ಯ ಮಾತ್ರವಲ್ಲದೇ ಸೃಜನಶೀಲ ಸವಾಲುಗಳನ್ನು ಎದುರಿಸಿದ ಅವರ ಗಟ್ಟಿತನವನ್ನೂ ಪ್ರತಿಬಿಂಬಿಸುತ್ತದೆ. ಪ್ರಸಿದ್ಧ ಆಂಗ್ಲ ಲೇಖಕಿಯರಾದ ಅರುಂಧತಿ ರಾಯ್ ಆಗಲೀ, ಶಶಿ ದೇಶಪಾಂಡೆಯವರಾಗಲೀ ತಮ್ಮ ಕಾದಂಬರಿಗಳಲ್ಲಿ ತೋರುವ ನಿರ್ಭಿಡತೆಯನ್ನು ಗೀತಾ ನಾಗಭೂಷಣ ಅವರು ಇಲ್ಲಿ ತೋರಿಸುತ್ತಾರೆ. ಆಂಗ್ಲ ಭಾಷೆಯಲ್ಲಿ ಅಶ್ಲೀಲವೆನಿಸದ ವಿವರಗಳು ಕನ್ನಡಕ್ಕೆ ಅಥವಾ ಇನ್ನಾವುದೇ ಭಾರತೀಯ ಭಾಷೆಗಳಿಗೆ ಬರುವಾಗ ಅಶ್ಲೀಲತೆಯ ರೂಪವನ್ನು ಪಡೆದುಕೊಂಡುಬಿಡುತ್ತದೆ. ಹೀಗಾಗಿ ಇಂಗ್ಲಿಷ್ ಭಾಷೆಯಲ್ಲಿ ಅಡಗಿಕೊಳ್ಳುವಂತೆ ಭಾರತೀಯ ಭಾಷೆಗಳಲ್ಲಿ ಅಡಗಿಕೊಳ್ಳುವುದು ಕಷ್ಟ. ಆದರೆ ಗೀತಾ ಅವರು ಇಲ್ಲಿ ಶೀಲ ಅಶ್ಲೀಲತೆಯ ಪರಿಕಲ್ಪನೆಗಳನ್ನೇ ಪರೀಕ್ಷೆಗೆ ಒಳಪಡಿಸುತ್ತಾರೆ. ಇಲ್ಲಿ ಕಾಮ ಎನ್ನುವುದು ವಿವಾಹದ ಒಳಗಿರಲಿ, ಹೊರಗಿರಲಿ, ಅದು ಜೀವಂತವಾದ ಸಂಬಂಧವಾದಾಗ ಮಾನವೀಯವಾಗಿಬಿಡುತ್ತದೆ. ಕಾಶಮ್ಮ-ಲಿಂಗರಾಜ, ಕಲ್ಯಾಣೆ-ಬೆಳ್ಳಿ, ಮಲ್ಲಪ್ಪ –ಈರಿ, ನಾಗವ್ವಾಯಿ- ಈಳಿಗಾ. ಹೀಗೆ ಈ ಎಲ್ಲಾ ಸಂಬಂಧಗಳು ಅರಳಿಕೊಳ್ಳುವುದು ಪ್ರೇಮದ ಪಾರಸ್ಪರಿಕತೆಯಲ್ಲಿಯೇ ಹೊರತು, ಒಡೆಯ –ಗುಲಾಮ ರೂಪದಲ್ಲಿ ಅಲ್ಲ. ಇಲ್ಲಿ ಬರುವ ಈ ಜೋಡಿಗಳ ಲೈಂಗಿಕತೆಗೆ ಸಂಬಂಧಪಟ್ಟ ದಟ್ಟ ವಿವರಗಳಲ್ಲಿ ಹೆಣ್ಣು ಉಪಭೋಗದ ವಸ್ತುವಾಗಿ ಪ್ರಕಟವಾಗುವುದಿಲ್ಲ. ಬದಲಾಗಿ ಸ್ತ್ರೀ ಲೈಂಗಿಕತೆಯ ಅನೂಹ್ಯ ಲೋಕಗಳು ತೆರೆದುಕೊಳ್ಳುತ್ತವೆ. ಅದೇ, ಪ್ರೇಮ ಪಾರಸ್ಪರಿಕವಾಗದೇ ಹೋದಾಗ ಆ ಲೈಂಗಿಕ ಸಂಬಂಧಗಳಲ್ಲಿ ಗಂಡಸಿನ ಒಡೆತನ ಮೇಲುಗೈಯಾಗುತ್ತದೆ. ಮೂಕ್ಯಾ ಹಾಗೂ ಕಲ್ಲವ್ವನ ಸಂಬಂದವೇ ಇದಕ್ಕೆ ಸಾಕ್ಷಿ. ಅಲ್ಲಿ ಕಲ್ಲವ್ವ ‘ಸಿಂದಿ’ (ಸೇಂದಿ) ಜೊತೆಗೆ ನಂಜಿಕೊಳ್ಳುವ ವಸ್ತುವಾಗುತ್ತಾಳೆ. ಆದುದರಿಂದಲೇ ಅದು ಲಂಪಟ ಹಾಗೂ ಅಮಾನವೀಯವಾದುದಾಗಿದೆ.

ಈರಿ-ಮಲ್ಲಪ್ಪ, ನಾಗವ್ವಾಯಿ-ಈಳಿಗಾ, ಕಾಶಮ್ಮ- ಲಿಂಗರಾಜ ಇವರ ಸಂಬಂಧಗಳನ್ನು ವರ್ಣಿಸುವಾಗ ಗೀತಾ ನಾಗಭೂಷಣ ಅವುಗಳನ್ನು ಎಲ್ಲಿಯೂ ಅಪರಾಧಗಳಂತೆ ಕಾಣಿಸುವುದಿಲ್ಲ. ಕಾಶಮ್ಮ ಲಿಂಗರಾಜನ ಸಂಬಂಧದಲ್ಲಿಯಂತೂ ಲೇಖಕಿ ತೋರಿಸುವ ದಿಟ್ಟತನ ಬೆರಗು ಗೊಳಿಸುವಂತಹುದು. “ಸುಕರಾರ ದಿನ ಆ ಗುಡ್ಯಾಗಿನ ಲಗಸಿಮಿಗೆ ಕೆಂಪು ಸೀರಿ ಉಡ್ಸಿ, ಹಣಿ ತುಂಬಾ ಕುಂಕುಮ ಹಚ್ಚಿ ಪೂಜಾ ಮಾಡುವಂತಹ” ಚೆಲುವಾದ ಹೆಂಗಸು ಕಾಶಮ್ಮ. ಆಕೆಯ ಚೆಲುವಿಗೆ, ಬದುಕಿನ ಲವಲವಿಕೆಗೆ, ಕಂಗಳ ಹೊಳಪಿಗೆ ಸ್ವತಃ ಲೇಖಕಿಯೇ ಮನಸೋತಂತೆ ಬರೆಯುತ್ತಾರೆ. ಕಪ್ಪು ಸುಂದರಿಯಾದ ಕಾಶಮ್ಮ, ದೇಸೀ ಚೆಲುವಿನ ಅಪ್ರತಿಮ ಪ್ರತೀಕ ಕೂಡ. ಅವಳು ಈ ನೆಲದ ಅಪ್ಪಟ ಹೆಣ್ಣು. ಆದುದರಿಂದಲೇ ಅವಳನ್ನು ಅದಮ್ಯ ಪ್ರೀತಿಯಿಂದ ಬಣ್ಣಿಸುತ್ತಾರೆ. ಅವಳ ಇಚ್ಛೆಗೆ ವಿರುದ್ಧವಾಗಿ ಅವಳನ್ನು ಮಾರ್ತಾಂಡನೆಂಬ ಹುಡುಗನ ಜೊತೆ ಮದುವೆ ಮಾಡಿಕೊಡಲಾಗುತ್ತದೆ. ತನಗಿಂತ ಉತ್ತಮ ಜಾತಿಯವನಾದ ತನ್ನ ಪ್ರೇಮಿ ಲಿಂಗರಾಜನನ್ನು ಮರೆಯಲಾರದ ಅವಳು ತನ್ನ ಗಂಡನನ್ನು ಬಿಟ್ಟು ಲಿಂಗರಾಜನ ಹಿಂದೆ ಓಡಿ ಹೋಗುತ್ತಾಳೆ. ತನ್ನ ಹೆಂಡತಿಯನ್ನು ಬಿಡಲಾಗದ ಮಾರ್ತಾಂಡ ಅವಳ ಬೆನ್ನುಹತ್ತಿ ಅವಳನ್ನು ಓಲೈಸಲು ಪ್ರಯತ್ನಪಟ್ಟು ಸೋತು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಚನ್ನಣ್ಣ ವಾಲೀಕಾರ ಅವರು ಈ ಸಂದರ್ಭಲ್ಲಿ ಮಾರ್ತಾಂಡನ ತ್ಯಾಗವನ್ನು ಹೊಗಳಿ ಅವನ ನಿಜವಾದ ಪ್ರೀತಿಯನ್ನು ಬಹಳ ಎತ್ರರಕ್ಕೆ ಕೊಂಡೊಯ್ದು ಅವನಂತಹ ಪಾತ್ರವೇ ಇಲ್ಲ ಎನ್ನುತ್ತಾರೆ. ಮಾರ್ತಾಂಡನಿಗೆ ಅನ್ಯಾಯವಾಗುವುದು ನಿಜ. ಆದರೆ ಪಾರಸ್ಪರಿಕವಲ್ಲದ, ಕೇವಲ ಹೊಂದಾಣಿಕೆಯ ಬದುಕನ್ನೇ ಪ್ರೇಮವೆಂದು ಗ್ರಹಿಸುವ ಮಾರ್ತಾಂಡ ತೆರಬೇಕಾದ ಬೆಲೆ ಅದು. ಇದು ನಮ್ಮ ವಿವಾಹ ವ್ಯವಸ್ಥೆಯ ಹುಸಿ ಮೌಲ್ಯಗಳಿಗೆ ಕೊಟ್ಟ ಉತ್ತರವಾಗಿದೆ. ಯಾಕೆಂದರೆ ಪ್ರೇಮವಿಲ್ಲದ ಗಂಡ ಮಾರ್ತಾಂಡನನ್ನು ಕೂಡುವುದು ಕಾಶಮ್ಮನಿಗೆ ವ್ಯಭಿಚಾರವೆನಿಸಿದರೆ, ಕಾಶಮ್ಮನಿಗೆ ಒಲಿದ ಹೃದಯವನ್ನು ತನ್ನ ಹೆಂಡತಿ ನೀಲಮ್ಮನಿಗೆ ಒಪ್ಪಿಸುವುದು ಲಿಂಗರಾಜನ ದೃಷ್ಟಿಯಲ್ಲಿ ವ್ಯಭಿಚಾರವಾಗುತ್ತದೆ. ಪಾರಸ್ಪರಿಕತೆಯಿಲ್ಲದ ಸಂಬಂಧವೆಂದರೆ ಜೀವಂತಿಕೆ ಇಲ್ಲದಿರುವಂತಹುದು. ಕಾಶಮ್ಮನಿಗೆ ಬದುಕಬೇಕಾಗಿದೆ, ಆದುದರಿಂದಲೇ ಜೀವಂತ ಸಂಬಂಧವನ್ನು ಅರಸಿಕೊಂಡು ಅವಳು ಹೋಗುತ್ತಾಳೆ. ಲೋಕದ ದೃಷ್ಟಿಯಲ್ಲಿ ವ್ಯಭಿಚಾರವಾದ ಈ ಸಂಬಂಧವೇ ಲೇಖಕಿಯ ಜೈವಿಕತೆಯ (ಬದುಕಿನ) ವ್ಯಾಖ್ಯೆಯಾಗಿದೆ.

ಲಿಂಗರಾಜನ ಹೆಂಡತಿ ನೀಲಮ್ಮನಿಗೆ, ಕಾಶಮ್ಮನ ಗಂಡ ಮಾರ್ತಾಂಡನಿಗೆ ಸಾಮಾಜಿಕ ಅನುಕಂಪ ದೊರೆತಿದೆ. ಆದರೆ ಅವರು ವೈಯಕ್ತಿಕ ಸುಖದಿಂದ ವಂಚಿತರಾಗಿದ್ದಾರೆ. ಕಾಶಮ್ಮ, ಲಿಂಗರಾಜರಿಗೆ ವೈಯಕ್ತಿಕ ಸುಖ ದೊರೆತಿದೆ ಆದರೆ ಅವರು ಸಾಮಾಜಿಕ ಘನತೆಯಿಂದ ವಂಚಿತರಾಗಿದ್ದಾರೆ. ವಿವಾಹ ವ್ಯವಸ್ಥೆ ನಿರೀಕ್ಷಿಸುವ ಹುಸಿ ಮೌಲ್ಯಗಳಿಗೆ ಅವರೆಲ್ಲಾ ಬಲಿಪಶುಗಳಾಗಿದ್ದಾರೆ. ಒಟ್ಟಿನಲ್ಲಿ ‘ಸತಿ’ ಮತ್ತು ‘ಸೂಳೆ’ ಈ ಎರಡೂ ಸ್ಥಿತಿಯಿಂದ ಲಾಭವಾಗುವುದು ಪಿತೃಪ್ರಧಾನ ವ್ಯವಸ್ಥೆಗೇ. ಆದರೆ ಇಲ್ಲಿ ಲೇಖಕಿ ಕಾಶಮ್ಮನನ್ನು ಬಲಿಪಶುವನ್ನಾಗಿ ಮಾಡಿಲ್ಲ. ಕಾಶಮ್ಮ ಲಿಂಗರಾಜನ ಸೂಳೆಯಂತೆ ಬದುಕಿದರೂ, ನಿಜವಾದ ಅರ್ಥದಲ್ಲಿ ವಿವಾಹ ವ್ಯಸ್ಥೆಯ ಕಬಂಧಬಾಹುಗಳಿಗೆ ಸಿಲುಕದೇ ಸ್ವತಂತ್ರವಾಗಿ ಬದುಕುತ್ತಾಳೆ. ಅಲ್ಲದೇ, ವಿನಾಶದ ಅಂಚಿಗೆ ಸರಿಯುತ್ತಿದ್ದ ತನ್ನ ತೌರು ಮನೆಯನ್ನು ಉಳಿಸುವ ‘ಮಾಪುರ ತಾಯಿ’ ಯಾಗಿ ಅವಳನ್ನು ಲೇಖಕಿ ಕಾಣಿಸುತ್ತಾರೆ. ‘ ಬದುಕು’ ಕೊನೆಗೆ ಎಲ್ಲಾ ಪಾತ್ರಗಳೂ ಅವಳ ಬಗೆಗಿದ್ದ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವಷ್ಟರ ಮಟ್ಟಿಗೆ ಅವಳು ಪ್ರಭಾವ ಶಾಲಿಯಾಗಿ ಬೆಳೆಯುತ್ತಾಳೆ. ಪಿತೃಪ್ರಧಾನ ವ್ಯವಸ್ಥೆಯ ಎಲ್ಲ ಮೌಲ್ಯಗಳನ್ನು ಧಿಕ್ಕರಿಸಿ ಬೆಳೆದು ವ್ಯವಸ್ಥೆಯ ಹುಸಿತನಕ್ಕೆ ಕನ್ನಡಿ ಹಿಡಿಯುತ್ತಾಳೆ.

ಕಾಶಮ್ಮನಿಗೆ ವಿವಾಹ ವ್ಯವಸ್ಥೆ ಬಂಧನವಾದರೆ, ತುಳಜಾಳಿಗೆ ಅದೇ ಬಿಡುಗಡೆಯ ಸಾಧನವಾಗಿದೆ. ತುಳಜಾಳನ್ನು ಬಲಾತ್ಕಾರವಾಗಿ ದೇವದಾಸಿ ಪಟ್ಟಕ್ಕೆ ಸಿದ್ಧಗೊಳಿಸುವ ಹೊತ್ತಿನಲ್ಲಿ ಅವಳು ತನ್ನ ಪ್ರಿಯಕರನೊಡನೆ ಮುಂಬಯಿಗೆ ಓಡಿ ಹೋಗಿ ಅವನೊಡನೆ ಮದುವೆಯಾಗಿ ಸುಖೀ ಜೀವನ ನಡೆಸಲು ಪ್ರಾರಂಭಿಸುತ್ತಾಳೆ. ಕಾಶಮ್ಮ ವಿವಾಹ ವ್ಯವಸ್ಥೆಯ ಹೊರಗೆ ನಡೆದರೆ, ತುಳಜಾ ಆ ವ್ಯವಸ್ಥೆಯೊಳಗೆ ಬರುತ್ತಾಳೆ. ತುಳಜಾಳಂತೆಯೇ ದೇವದಾಸಿಯಾಗಲು ಒಲ್ಲದ ನೀಲವ್ವ ಅದರಿಂದ ತಪ್ಪಿಸಿಕೊಳ್ಳುವಲ್ಲಿ ವಿಫಲಳಾಗುತ್ತಾಳೆ. ಅಪಮಾನ ಸಹಿಸಲಾರದೇ ಅವಳು ಬಾವಿಗೆ ಬಿದ್ದು ಸಾಯುತ್ತಾಳೆ. ಇದು ಮಹಿಳೆಯ ಆಯ್ಕೆಯ ಮೇಲೆ ಊಳಿಗಮಾನ್ಯ ವ್ಯವಸ್ಥೆ ಹೇರುವ ಅಮಾನವೀಯ ನಿಯಮಗಳ ಪ್ರತೀಕವಾಗಿದೆ. ಅಲ್ಲದೇ ವ್ಯವಸ್ಥೆಯ ವಿರುದ್ಧ ಬಂಡೇಳುವ ಮಹಿಳೆಯರ ಶಕ್ತ್ತಿಯನ್ನು ಪ್ರಕಟಿಸುವ ಸಾಧನವೂ ಅಗಿದೆ.

ರಾಜೇಂದ್ರ ಚೆನ್ನಿಯವರು “ಮೇಲುವರ್ಗದ ಮಹಿಳೆಯರು ಖಾಸಗಿ ಆಸ್ತಿಯೆಂದು ಪರಿಗಣಿತವಾಗುವುದರಿಂದ ಅವರು ಸುರಕ್ಷಿತರಾಗಿರುತ್ತಾರೆ. ಅಲ್ಲದೆ, ಇತರ ವರ್ಗದ ಪುರುಷರ ಆಕ್ರಮಣದಿಂದ ಅವರು ತಪ್ಪಿಸಿಕೊಳ್ಳಲಾದರೂ ಸಾಧ್ಯವಿದೆ. ಆದರೆ ಅದೇ ದಲಿತ ಹೆಣ್ಣು ಮಕ್ಕಳು ಮಾತ್ರ ಸಮಾಜದ ಪ್ರತಿಯೊಬ್ಬ ಪುರುಷನ ಆಕ್ರಮಣಕ್ಕೂ ಒಳಗಾಗಬೇಕಾಗಿದೆ” ಎಂದು ಹೇಳುತ್ತಾರೆ. ಬದುಕು ಕಾದಂಬರಿಯಲ್ಲಿ ಅನಾವರಣಗೊಳ್ಳುವ ಪಾತ್ರಗಳು ಈ ಮಾತಿಗೆ ಉದಾಹರಣೆಗಳಾಗಿವೆ.

ಕುಡಿತದ ನೆಲೆ: ಕುಡಿತ ಈ ಜನರ ಬದುಕಿನ ಎಲ್ಲ ನೆಲೆಗಳಲ್ಲಿ ಅನಿವಾರ್ಯವಾಗಿದೆ. ಈ ಕುಡಿತ, ಕಪ್ಪು ಜನರ ದುಃಖ ದುಮ್ಮಾನಗಳನ್ನು ಮಾತ್ರವಲ್ಲದೇ, ಅವರ ಸುಖ ಸಂತೋಷದ ಗಳಿಗೆಗಳನ್ನೂ ಅಭಿವ್ಯಕ್ತಿಪಡಿಸುವ ಸಾಧನವಾಗಿದೆ. ಪ್ರತಿಯೊಂದು ಘಟನೆಯಲ್ಲಿಯೂ ‘ಸಿಂದಿ, ಗೊಬ್ಬಿ, ತತ್ರಾಣಿ’ ಹಾಗೂ ‘ಸಿಂದಿ’ ಬಗ್ಗಿಸಿಕೊಳ್ಳಲು ‘ಗಿಲಾಸು’ ಹಾಜರಾಗುವ ಚಿತ್ರ ಅವರ ಬದುಕಿನಲ್ಲಿ ಕುಡಿತ ಪಡೆದುಕೊಳ್ಳುವ ಮಹತ್ವದ ಸ್ಥಾನವನ್ನು ನಿರ್ದೇಶಿಸುತ್ತದೆ. ನಾಗವ್ವಾಯಿ, ಈರಪ್ಪ, ಫತರೂ. ಮಲ್ಲಪ್ಪ. ಮಲ್ಲಮ್ಮ, ಮನೆಗೆ ಬರುವ ಬೀಗರು, ನೆಂಟರು ಎಲ್ಲ ‘ಸಿಂದಿ’ (ಈಚಲು) ಚಾಪೆಗಳ ‘ಕುಂತು’ ಸಿಂದಿಯ ಜೊತೆಗೆ ಎಣ್ಣೆಯಲ್ಲಿ ಕರಿದ ಕೋಳಿ ಖಂಡದ ಚೂರುಗಳನ್ನು ನಂಚಿಕೊಳ್ಳುತ್ತಾ ಊರು ಕೇರಿಯ ಮಾತನಾಡುತ್ತಾ ‘ಮೈಯೆಲ್ಲಾ ಖುಷಿ ಉಗುರು ಉಗರೆಲ್ಲ ಉಲ್ಲಾಸ’ ಪಡುತ್ತಾ ಪರಸ್ಪರ ಚೇಷ್ಟೆ, ನಗು, ತಮಾಷೆಯೊಂದಿಗೆ ವಿದ್ಯುಕ್ತವಾಗಿ ನಡೆಸುವ ಈ ಪಾನಗೋಷ್ಠಿ ಸಾಮುದಾ ಯಿಕ ಆಚರಣೆಯ ರೂಪವನ್ನು ಪಡೆದುಕೊಂಡುಬಿಡುತ್ತದೆ. ದೇವನೂರು ಮಹಾದೇವರ ಕಾದಂಬರಿಗಳಲ್ಲಿ ಕೌಟುಂಬಿಕ ನೆಲೆಯಲ್ಲಿ ಕಾಣಿಸಿಕೊಳ್ಳುವಂತಹುದು ಇಲ್ಲಿ ಸಾಮುದಾಯಿ ಕ ನೆಲೆಯಲ್ಲಿ ಪ್ರಕಟವಾಗುತ್ತದೆ. ಮಾನವೀಯ ಸಂಬಂಧಗಳನ್ನು ಬೆಸೆಯುವ ಪ್ರತೀಕವಾಗಿ ಬರುವ ಇದೇ ಪಾನಗೋಷ್ಠಿ ಊರ ಹೊರಗಿನ ಗಡಂಗುಗಳಲ್ಲಿ ಪಡೆದುಕೊಳ್ಳುವ ಸ್ವರೂಪವೇ ಬೇರೆ. ಇದು ಪರಸ್ಪರ ದ್ವೇಷಕೆ, ಉದ್ರೇಕಕ್ಕೆ, ಕೊಲೆಗೆ ಕಾರಣವಾಗುತ್ತದೆ. ಇದರಿಂದಾಗಿಯೇ ಮೂಕ್ಯಾ ಕಲ್ಲವ್ವನನ್ನು ಅತ್ಯಾಚಾರ ಮಾಡುತ್ತಾನೆ. ಕಪ್ಪು ಜನರ ಬದುಕನ್ನು ಅರಳಿಸಲು ಕಾರಣವಾಗುವ ಈ ಸೇಂದಿಯೇ ಅವರ ವಿನಾಶಕ್ಕೂ ಕಾರಣವಾಗುತ್ತದೆ. ಈ ಎರಡೂ ನೆಲೆಗಳನ್ನೂ ಒಟ್ಟಿಗೆ ತರುವುದು ಲೇಖಕಿಯ ಹಿರಿಮೆಯಾಗಿದೆ.

ಹಸಿವಿನ ಸ್ವರೂಪ: ಸೇಂದಿ ಕುಡಿಯುವುದು ಒಂದು ಸಾಮೂಹಿಕ ಕ್ರಿಯೆಯಾಗುವಂತೆ, ಔತಣಗಳು ಕೂಡ ಮಾನವೀಯ ಸಂಬಂಧಗಳನ್ನು ಬೆಸೆಯುವ, ಸಾಮುದಾಯಕ ಪ್ರಜ್ಞೆಯನ್ನೂ, ಸಂಘ ಜೀವನದ ಜೀವಂತಿಕೆಯನ್ನೂ ವ್ಯಕ್ತಪಡಿಸುವ ಸಾಧನವಾಗಿದೆ. ವಿಬಿನ್ನ ರೀತಿ ರಿವಾಜುಗಳು, ಹಬ್ಬಗಳು, ಜಾತ್ರೆಗಳಿಗೆ ಹೊಂದಿಕೊಂಡ ಔತಣ ಕೂಟಗಳು, ಅಡುಗೆ ಮಾಡುವ ವಿಧನಗಳು, ಪ್ರಾಣಿಗಳನ್ನು ಬೇಟೆಯಾಡುವ, ಅದರ ಚರ್ಮ ಸುಲಿಯುವ, ಚರ್ಮ ಹದಮಾಡುವ, ಎಲ್ಲಾ ವಿವರಗಳೂ ಇವರ ಹೊಟ್ಟೆ ಪಾಡಿನ ಸುತ್ತಲೇ ಸುತ್ತುತ್ತವೆ. ಮಾಪುರ ತಾಯಿಯ ಜಾತ್ರೆಗೆ ಮಾಡುವ ಸಂಭ್ರಮದ ಅಡುಗೆ ತಯಾರಿಯ ಸುದೀರ್ಘ ವರ್ಣನೆ ಈ ಜನರ ಸಂಸ್ಕøತಿಗೆ ಹಿಡಿದ ಕನ್ನಡಿಯಾಗಿದೆ. ಇದು ಆ ಜನರ ಅಭಿರುಚಿಯನ್ನು, ಜೀವನೋತ್ಸಾಹವನ್ನು ಬಯಲಾಗಿಸಿದರೆ, ಅದರ ಇನ್ನೊಂದು ಮುಖವಾದ ಹಸಿವಿನ ನೆಲೆಯನ್ನೂ ಅಷ್ಟೇ ತೀವ್ರವಾಗಿ ವ್ಯಕ್ತಪಡಿಸುತ್ತದೆ. ಇಲ್ಲಿನ ಪ್ರತಿಯೊಬ್ಬ ಬಡ ಹೆಣ್ಣುಮಗಳೂ “ಹಂಚಿ ಉಂಡರೆ ಹಸಿವಿಲ್ಲ” ಎನ್ನುವ ಗಾದೆಗೆ ಪ್ರತೀಕದಂತಿದ್ದಾಳೆ. ಹಸಿವು ಅವಳ ಶಕ್ತಿ ಪರೀಕ್ಷೆಗೆ ಒಂದು ಸವಾಲೂ ಆಗಿದೆ. ಹಸಿವಿನಿಂದಾಗಿ, ಬಡತನ, ಕ್ಲೇಶಗಳಿಂದಾಗಿ ಇಲ್ಲಿನ ಹೆಣ್ಣು ಗಂಡಿನಂತೆ ಕುಡಿದು ಹಾಳಾಗುವುದಿಲ್ಲ. ಕೊಲೆ ಮಾಡುವುದಿಲ್ಲ. ಬದಲಾಗಿ ತನ್ನ ಹಸಿವನ್ನು ಇನ್ನೊಂದು ಹಸಿದ ಜೀವದ ಜೊತೆಗೆ ಹಂಚಿಕೊಳ್ಳುತ್ತಾಳೆ. ಇಲ್ಲಿ ಹಸಿವೆನ್ನುವುದು ಕೇವಲ ಹೊಟ್ಟೆಪಾಡಿನ ಸಂಗತಿಯಾಗುವುದಿಲ್ಲ, ಅದು ಎಲ್ಲದಕ್ಕಿಂತ ಹೆಚ್ಚಾಗಿ ಮಾನವೀಯ ಸಂಬಂಧಗಳ ಉಳಿಯುವಿಕೆಗೆ, ತಾಳಿಕೆಗೆ, ಅವುಗಳ ಕಾಳಜಿಗೆ ಸಂಬಂಧಿಸಿದುದಾಗಿದೆ. ಆದುದರಿಂದಲೇ ಆಕೆಗೆ ಹಂಚಿ ಉಣ್ಣಲು ಸಾಧ್ಯವಾಗುತ್ತದೆ. ಸಮೃದ್ಧ ಕುಟುಂಬದಿಂದ ಬಂದ ಕಲ್ಯಾಣಿ ಜೈಲಿಗೆ ಹೋದನಂತರ, ಅವನ ಹೆಂಡತಿ ಬೆಳ್ಳಿ ಬಸುರಿಯಾಗಿದ್ದಾಗ, ಹಸಿ ಬಾಣಂತಿಯಾಗಿದ್ದಾಗಲೂ ಹೊಲಗದ್ದೆಗಳಲ್ಲಿ ದುಡಿಯುತ್ತಾಳೆ. ಅವಳಿಗೆ ನೆರವಾಗಲು ಮುಂದೆ ಬರುವ ಹಳ್ಳಿ ಹೆಣ್ಣು ಮಕ್ಕಳ ಸಹಕಾರ, ಔದಾರ್ಯಗಳನ್ನು ನಯವಾಗಿಯೇ ತಿರಸ್ಕರಿಸುತ್ತಾಳೆ. ಅವಳು ಎದುರಿಸುವ ಕಷ್ಟ ಪರಂಪರೆಯೇ ಆಗಲೀ, ಹಸಿವಿಗಾಗಿ ಮೂಕ್ಯಾ ಕಲ್ಲವ್ವನನ್ನು ಬಲಿತೆಗೆದು ಕೊಳ್ಳುವುದೇ ಆಗಲೀ ಹಸಿವಿನ ಕ್ರೌರ್ಯದ ಮಗ್ಗಲುಗಳನ್ನು ಪರಿಚಯಿಸುತ್ತವೆ.

ಹೊಟ್ಟೆ ಪಾಡಿಗೋ, ಉತ್ಸವ ಸಂಭ್ರಮಗಳಿಗೋ ಇಲ್ಲಿನ ಜನರು ಮೊರೆ ಹೋಗುವ ತರತರದ ಮಾಂಸದ ಅಡುಗೆಗಳು ಸಸ್ಯಾಹಾರದ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ನಮ್ಮ ಸಾಂಸ್ಕøತಿಕ ನಂಬಿಕೆಯನ್ನು ಪ್ರಶ್ನಿಸುತ್ತದೆ. ಹಾಗೆಂದು ಇವು ಹಿಂಸೆಯನ್ನು ಪೋಷಿಸುತ್ತದೆ ಎಂದಲ್ಲ. ಈ ಕಾದಂಬರಿಯೊಳಗೆ ಮಾಂಸಾಹಾರದ ವಸ್ತುನಿಷ್ಠ ದಾಖಲೆ ಕೊಡುವ ದಟ್ಟ ಅನುಭವಗಳು ‘ಅಪ್ಪಟ ಸಸ್ಯಾಹಾರದ ಪರಿಕಲ್ಪನೆ’ಯೇ ಅವೈಜ್ಞಾನಿಕ ಎನ್ನುವ ಚರ್ಚೆಗೆ ಎಡೆಮಾಡಿಕೊಡುತ್ತದೆ.

ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಅಥವಾ ಕಾರಂತರ ‘ಮರಳಿ ಮಣ್ಣಿಗೆ’ ಯಂತಹ ಕ್ಲಾಸಿಕ್ ಅನ್ನು ಬರೆಯಬೇಕೆಂಬ ಕನಸೇ ‘ಬದುಕು’ ಕೃತಿಯಲ್ಲಿ ಸಾಕಾರವಾಗಿದೆ ಎಂದು ಲೇಖಕಿಯೇ ಹೇಳಿಕೊಂಡಿದ್ದಾರೆ. ಈ ಕಾದಂಬರಿಯ ಓದು ಅಂಥ ಅನುಭವಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ನಿಜ. ಆದರೆ ನಿಜವಾಗಿ ಈ ಕೃತಿ ‘ಮಲೆಗಳಲ್ಲಿ ಮದುಮಗಳು’ ಕೃತಿಗೇ ಹೆಚ್ಚು ಹತ್ತಿರವಾಗಿದೆ. ಇಲ್ಲಿ ಬರುವ ಹಬ್ಬಗಳು, ಬಯಲಾಟ, ಕಣದ ಪೂಜೆ, ಅಲಾಬಿ ಆಟಗಳು, ಉತ್ಸವ ಜಾತ್ರೆಗಳು ಎಲ್ಲವೂ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ನೆನಪಿಗೆ ತರುತ್ತವೆ. (ಹಾಗೆಯೇ ಕೆಳ ವರ್ಗದ ಸಂಸೃತಿಯನ್ನು ಅನನ್ಯವಾಗಿ ದಾಖಲಿಸುವ ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿಯ ಜೊತೆಗೂ ಇದನ್ನು ಇಟ್ಟು ನೋಡಬಹುದಾಗಿದೆ).

ಇಲ್ಲಿ ಕೂಡ ‘ಯಾರೂ ಅಮುಖ್ಯರಲ್ಲ’, ‘ಕುಡಿವ ನೀರೆಲ್ಲವೂ ತೀರ್ಥವಾಗಿದೆ’. ಇಲ್ಲಿ ಎಲ್ಲಾ ಕ್ರಿಯೆಗಳೂ ಪೂಜೆಗಳೇ, ಆಚರಣೆಗಳೇ. ಗುಲ್ಬರ್ಗಾ ನೆಲದ ದೇಸೀ ಸಂಸ್ಕøತಿಯನ್ನು ತಮ್ಮ ‘ಬದುಕು’ ಕಾದಂಬರಿಯ ಮೂಲಕ ಪರಿಚಯಿಸುವುದರೊಂದಿಗೆ, ಆಂಧ್ರ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಸಂಸ್ಕøತಿಯ ಒಂದು ಅಧಿಕೃತ ಪ್ರಪಂಚವನ್ನು ಕನ್ನಡ ಸಾಹಿತ್ಯದೊಳಗೆ ಹರಿಯಬಿಟ್ಟ ಶ್ರೇಯಸ್ಸು ಗೀತಾ ನಾಗಭೂಷಣ ಅವರದು.

ಗಿರಿಜಾ ಶಾಸ್ತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *