Latestಪುಸ್ತಕ ಸಮಯ

ಪುಸ್ತಕ ಸಮಯ/ ಗುಲಾಬೊ ಸಪೇರಾ – ದಂತಕಥೆಯಾದ ನರ್ತಕಿ


ಜೀವಂತ ದಂತಕಥೆಯಂತೆ ಬದುಕಿರುವ ರಾಜಸ್ತಾನದ ವಿಶ್ವವಿಖ್ಯಾತ ಜನಪದ ನೃತ್ಯಗಾರ್ತಿ ಗುಲಾಬೊ ಸಪೇರಾ ಅವರ ಜೀವನಾಧಾರಿತ ಕಾದಂಬರಿ ‘ಗುಲಾಬೊ ಸಪೇರಾ’. ಸಣ್ಣಕಥೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಬರಹಗಳ ಮೂಲಕ ಓದುಗರ ಗಮನ ಸೆಳೆದಿರುವ ಡಾ. ಎಂ.ಎಸ್. ವೇದಾ ಅವರ ಈ ಕಾದಂಬರಿಯಲ್ಲಿ ಜಗತ್ತಿನ ಮಹಿಳಾ ಸಂಕುಲಕ್ಕೆ ಅತ್ಯಂತ ಸ್ಪೂರ್ತಿಯುತವಾದ ಮಹಿಳಾ ಮಾದರಿಯಾಗಬಲ್ಲ ಗುಲಾಬೊ ಸಪೇರಾಳ ರೋಮಾಂಚಕಾರಿ ಕಥೆಯಿದೆ. ಇದು ಜೀವಂತ ಹೂಳಲ್ಪಟ್ಟವಳ ಜೀವನ ಕಥನ.

ಹಾವುಗಳನ್ನು ಆಡಿಸುವುದನ್ನೇ ಮುಖ್ಯ ಕಸುಬಾಗಿ ಹೊಂದಿದ ರಾಜಸ್ಥಾನದ ಕಾಲ್ಬೆಲಿಯಾ ಸಮಾಜ ತನ್ನ ಬಡತನದ ಮತ್ತು ಸಾಮಾಜಿಕ ಸ್ಥಿತಿಯ ಕಾರಣಕ್ಕಾಗಿ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನಿರ್ಬಂಧವನ್ನು ಹೇರಿಕೊಂಡಿದೆ. ಒಂದರ ನಂತರ ಹುಟ್ಟುವ ಎಲ್ಲ ಹೆಣ್ಣು ಕೂಸುಗಳನ್ನು ಕಣ್ಣು ಬಿಡುವ ಮೊದಲೇ ಮಣ್ಣಿನಲ್ಲಿ ಮುಚ್ಚಿ ಸಮಾಧಿ ಮಾಡಿಬಿಡುತ್ತದೆ. ಇದೊಂದು ಅಲಿಖಿತ ಒಪ್ಪಂದಂತೆ ಸಮಾಜದ ಕಟ್ಟಳೆಯಾಗಿ ಜಾರಿಯಲ್ಲಿದೆ. ಆದರೆ ಗುಲಾಬೊ ಈಗಾಗಲೇ ಮೂರು ಗಂಡು ಮತ್ತು ಮೂರು ಹೆಣ್ಣುಗಳಿರುವ ಕುಟುಂಬದಲ್ಲಿ ನಾಲ್ಕನೆಯ ಹೆಣ್ಣು ಮಗುವಾಗಿ ಜನಿಸುತ್ತಾಳೆ. ಹೆರಿಗೆಗೆ ಸಹಕರಿಸಿದ ಹೆಂಗಸೇ ತಾಯಿಗೆ ಗೊತ್ತಾಗುವ ಮೊದಲೇ ಹುಟ್ಟಿದ ಹೆಣ್ಣು ಕೂಸನ್ನು ಣ್ಣಿನಲ್ಲಿಟ್ಟು ಗುಡ್ಡೆ ಮಾಡುತ್ತಾಳೆ. ‘ ಹೆಣ್ಣು ಕೂಸುಗಳು ಮಾತಾ ಚಾಮುಂಡಿಯ ದಯೆಯ ಪ್ರಸಾದ ’ ಎಂದು ನಂಬುವ ಗಂಡನ ಭಾವನೆಯ ಭಯದಿಂದಾಗಿ ಆ ಮಗುವಿನ ತಾಯಿ, ತನ್ನ ತಂಗಿಯ ಸಹಕಾರದಿಂದ ಕಳೆದುಕೊಂಡ ಮಗುವನ್ನು ಹುಡುಕಿ ಪಡೆಯುತ್ತಾಳೆ. ನಾಲ್ಕೈದು ಗಂಟೆ ಮಣ್ಣಲ್ಲಿದ್ದರೂ ಮಗು ಉಸಿರಾಡುವ ಪವಾಡ ನಡೆಯುತ್ತದೆ. ಅವಳ ತಾಯಿ ತಂದೆಯರು ಬದುಕಿನುದ್ದಕ್ಕೂ ಸಮಾಜದ ಕಟ್ಟಳೆಯೊಂದಿಗೆ ಸೆಣಸುತ್ತಲೇ ಬದುಕುತ್ತಾರೆ. ಕಾಲ್ ಬೆಲಿಯಾ ಸಮಾಜದ ಹೆಣ್ಣು ಕೂಸು ವಿರೋಧಿ ಧೋರಣೆಯ ಭಯದಿಂದ ಗುಲಾಬೊಳ ತಂದೆ ಅವಳು ಹಸುಗೂಸಾಗಿದ್ದಾಗ ಸದಾ ಅವಳನ್ನು ತನ್ನೊಡನೆ ಕರೆದೊಯ್ಯುತ್ತಾನೆ. ಕೂಸನ್ನು ಮಲಗಿಸಿಕೊಂಡೇ ಹಾವುಗಳನ್ನು ಆಡಿಸುತ್ತಾನೆ. ಹಾವುಗಳ ಆಟವನ್ನು ನೋಡುತ್ತಲೇ ಬೆಳೆದ ಆಕೆ ಅಪೂರ್ವ ಸರ್ಪ ನೃತ್ಯಗಾತಿಯಾಗಿ ರೂಪುಗೊಳ್ಳುತ್ತಾಳೆ. ಮುಂದೆ ದೊಡ್ಡ ವೇದಿಕೆಯಲ್ಲಿ ನರ್ತನಕ್ಕೆ ಅವಕಾಶ ಸಿಕ್ಕುತ್ತದೆ. ಪ್ರಧಾನಿ ರಾಜೀವಗಾಂಧಿಯವರು ಅವಳ ಕಲೆಯನ್ನು ಪ್ರೋತ್ಸಾಹಿಸುತ್ತಾರೆ. ನಂತರ ವಿಶ್ವವಿಖ್ಯಾತಳಾಗುತ್ತಾಳೆ. ಎಂ.ಎಸ್. ವೇದಾ ಅವರ ‘ ಗುಲಾಬೊ ಸಪೇರಾ’ ಕಾದಂಬರಿಯ ಒಂದು ತುಣುಕನ್ನು ಓದುಗರ ಅವಗಾಹನೆಗಾಗಿ ಇಲ್ಲಿ ಕೊಡಲಾಗಿದೆ.


ಕಾಳರಾತ್ರಿ : ಕಾಡಿನ ಹಾದಿಯಲ್ಲಿ

ಇಬ್ಬರು ಹೆಂಗಸರು ಏದುಸಿರುಬಿಡುತ್ತಾ ನಡೆಯುತ್ತಿದ್ದಾರೆ. ಕೆಲವೊಮ್ಮೆ ಅವರ ನಡಿಗೆ ಬಸವಳಿದಂತೆ ನಿದಾನವಾಗುವುದು. ಅಲ್ಲೆಲ್ಲಾದರೂ ಸಣ್ಣ ಮಣ್ಣಿನ ಗುಪ್ಪೆಯಂತಹ ಸ್ಥಳ ಕಂಡರೆ ವೇಗ ಪಡೆದುಕೊಳ್ಳುವುದು. ಅವರು ಬಾಗಿ ಆ ಗುಪ್ಪೆಯಲ್ಲಿ ಕೈಯಾಡಿಸುವರು. ಅವರು ಹುಡುಕುತ್ತಿರುವುದು ಅದಲ್ಲ ಎಂಬುದು ಸ್ಪಷ್ಟವಾದಂತೆ ತಲೆಯಾಡಿಸುತ್ತಾ ‘ಇಲ್ಲ ಇಲ್ಲಲ್ಲ ಇದಲ್ಲ’ ಪರಸ್ಪರ ಹೇಳಿಕೊಳ್ಳುತ್ತಾ ತಲೆಯ ಮೇಲೆ ಪರ್ವತವನ್ನು ಹೊತ್ತ ಭಾರದಲ್ಲಿ ನಿದಾನವಾಗಿ ಅಲ್ಲಿಂದ ಕಾಲು ಎಳೆಯುವರು. ಮುಂದೆ ನಡೆಯುವರು. ಕಾಳರಾತ್ರಿ! ಕಾಡಿನ ಹಾದಿ ಎಂಬ ಪರಿವೆಯೇ ಅವರಲ್ಲಿ ಇಲ್ಲ. ಅಮಾವಾಸ್ಯೆಯ ಕತ್ತಲು ಆವರಿಸಿಕೊಂಡಿದ್ದರೂ ಅವರ ಕಣ್ಣುಗಳಲ್ಲಿ ಯಾವುದೋ ಬೆಳಕಿನಾಶಯದ ದಂಡಿ ದಂಡಿ ಕನಸು ಕುಡಿವಡೆದು ಹಬ್ಬಲು ಹಾತೊರೆಯುತ್ತಿರುವಂತೆ ಅನ್ನಿಸುತ್ತಿದೆ.

“ ಇಲ್ಲ ಅಕ್ಕ ಇಷ್ಟೊತ್ತಿಗಾಗಲೇ ಕೂಸು ಸತ್ತು ಹೋಗಿರುತ್ತದೆ.” ದನಿ ಗುಡುಗಿನಂತಿಲ್ಲವಾದರೂ ತಂಗಿಯ ಮಾತಿಗೆ ಅಕ್ಕನ ಕಣ್ಣ ಮುಂದೆಯೇ ಮಿಂಚು ಹಾದು ಹೋದಂತಾಗಿದೆ. “ಬಾಯಿ ಮುಚ್ಚು, ನನ್ನ ಕೂಸು ಸತ್ತಿಲ್ಲ. ಸಾಯುವುದಿಲ್ಲ. ನನ್ನ ಕೂಸು ಬದುಕಿರುತ್ತದೆ. ನೋಡಿಲ್ಲಿ ಎದೆ ಹಾಲು ಸುರಿಯುತ್ತಿದೆ. ಅದು ಹೇಗೆ ಆ ಮಾತು ನುಡಿಯುತ್ತಿ ನೀನು?” ಅಳು, ಆತಂಕ, ನೋವು, ಯಾತನೆಗಳಿಂದ ಆವೃತವಾದ ಗೊಗ್ಗರುಧ್ವನಿಯಲ್ಲಿ ಅಕ್ಕ ನುಡಿಯುತ್ತಿದ್ದಾಳೆ. ಅವರದು ಇದು ಏಳನೆಯ ಬಸಿರು. ರಾತ್ರಿ ಏಳರ ಹೊತ್ತಿಗೆ ಅವಳೊಂದು ಕೂಸು ಹಡೆದಳು. ಹಡೆದು ಗಂಟೆ ಕಳೆದರೂ ಹಾಲು ಒಸರುತ್ತಿರುವ ಮೊಲೆಯ ಬಳಿ ಕೂಸನ್ನು ಯಾರೂ ತಂದು ಇಟ್ಟಿರಲಿಲ್ಲ.

ಆ ತಾಯಿಗಾದರೂ ಅಂದು ಬಹಳವೇ ಕೆಲಸ. ಏಕೆಂದರೆ ಅಂದು ದೀಪಾವಳಿ! ಅವಳ ಬದುಕಿನ ಮಟ್ಟಕ್ಕೆ ತಕ್ಕಂತೆ ಅವಳೂ ಹಬ್ಬಕ್ಕೆ ತಯಾರಿ ನಡೆಸಿದ್ದಳು. ಗಂಡ ಸಾಮಾನು ತರಲು ಹೊರಹೋಗಿದ್ದ. ಸಂಜೆಯಷ್ಟೊತ್ತಿಗೆ ದುಡಿದು ದಣಿದು ಹೋದವಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಂಗಿ, ಅಕ್ಕಪಕ್ಕದಲ್ಲಿ ಬದುಕು ಸಾಗಿಸುತ್ತಿದ್ದವಳೊಬ್ಬಳನ್ನು ಸಹಾಯಕ್ಕೆ ಕರೆದಿದ್ದಳು. ಏಳನೆಯ ಬಸಿರು ಸಲೀಸಾಗಿ ಹೆರಿಗೆಯಾಗಿ ಹೋಗಿತ್ತು. ದುಡಿದ ದಣಿವು, ಹೆರಿಗೆಯ ದಣಿವು ಅವಳನ್ನು ಅಲ್ಲಾಡದಂತೆ ಮಂಪರಿಗಿಳಿಸಿತ್ತು. ಎಷ್ಟು ಹೊತ್ತು ಹಾಗಿದ್ದಳೋ? ಕಣ್ಣು ಬಿಟ್ಟರೆ ಸಣ್ಣಗೆ ಉರಿಯುತ್ತಿರುವ ಮಣ್ಣಿನ ಹಣತೆ ಮಾತ್ರ ಕಂಡದ್ದು. ಯಾರೊಬ್ಬರೂ ಅಲ್ಲಿರಲಿಲ್ಲ. ಮಲಗಿದೆಡೆ ಕೈಚಾಚಿ ತಡಕಾಡಿದ್ದಳು. ಮಗುವೂ ಇಲ್ಲ. ಎದೆ ಧಸಕ್ಕೆಂದಿತು. ದೇಹದ ಶಕ್ತಿಯೆನ್ನೆಲ್ಲ ನಾಲಿಗೆಗೆ ಎಳೆತಂದು ತಂಗಿಯನ್ನು ಕೂಗಿದ್ದಳು. ತಂಗಿ ಬಂದಿದ್ದಳು. ವಿಷಯ ಅರುಹಿದ್ದಳು. ಹುಟ್ಟಿದ್ದು ಹೆಣ್ಣು ಕೂಸು. ಅದು ಆ ಕುಟುಂಬದಲ್ಲಿನ ನಾಲ್ಕನೆಯ ಹೆಣ್ಣುಕೂಸು! ಹಾಗಾಗಿ ಅದು ಬದುಕಬಾರದೆಂಬ ನಿರ್ಣಯವನ್ನು ಹೆರಿಗೆಗೆ ಸಹಾಯ ಮಾಡಲು ಬಂದವಳೇ ತೆಗೆದುಕೊಂಡು ಬಿಟ್ಟಿದ್ದಳು. ಹುಟ್ಟಿದ ಕೂಸಿಗೆ ಹೊಕ್ಕಳಬಳ್ಳಿಯನ್ನೂ ಕತ್ತರಿಸದೆ ಅದನ್ನು ಕೊಂಡೊಯ್ದು ಬಿಟ್ಟಿದ್ದಳು. ಕೊಂಡೊಯ್ದವಳು ಏನು ಮಾಡಿರಬಹುದೆಂಬ ಅರಿವು ಆ ತಾಯಿಗಾಗುತ್ತಿದ್ದಂತೆಯೇ ಅವಳೂ ದಡಕ್ಕನೆ ಎದ್ದು ಕುಂತಿದ್ದಳು. ತಲೆ ತಿರುಗಿತ್ತು. “ಅಕ್ಕ …. ಮೆಲ್ಲಗೆ …..ಜೋಪಾನ ….ಈಗ ತಾನೇ …. ಹೆರಿಗೆ ಆಗಿದೆ ….” ತಂಗಿ ಹಿಡಿದಿದ್ದಳು.

ಅವರಿಬ್ಬರ ನಡುವೆ ದೊಡ್ಡ ಮಾತುಕತೆಯಾಗಿತ್ತು. ಅಕ್ಕ ಎದ್ದಿದ್ದಳು. “ನಡಿ, ಅವಳು ಯಾವ ಕಡೆ ಹೋದಳು ತೋರ್ಸು ಬಾ.” “ಅಕ್ಕಾ…. ಹುಚ್ಚು ಹಿಡಿದಿದ್ಯಾ ನಿನಗೆ ….. ಇಷ್ಟೊತ್ತಿಗಾಗ್ಲೇ ಕೂಸು ಸತ್ತು ಹೋಗಿರುತ್ತೆ…. ಅವಳು ಹೇಳ್ತಾಳಾ ಕೂಸ್ನಾ ಎಲ್ಲಿ ಹಾಕಿದೆ ಅಂತ. ನಾವು ತಾನೇ ಈ ಅಮಾಸೆ ಕತ್ಲಲ್ಲಿ ಎಲ್ಲೀಂತ ಹುಡುಕ್ಕೊಂಡು ಹೋಗೋದು. ಹುಡುಕಿ ತಂದರೂ ಇವ್ರೆಲ್ಲಾ ಅದ್ನ ಸಾಯಿಸದೆ ಮತ್ತೆ ಬಿಟ್ಟಾರಾ?” ತಂಗಿ ಲೋಹದ ತೆಳು ತಗಡು ಬಳಕುವಂತಹ ಸಣ್ಣ ಧ್ವನಿಯಲ್ಲಿ ಹಿಡಿದು ಹಿಡಿದೂ ಮಾತಾಡಿದ್ದಳು. “ನೀನೇ ಸಾಕೂವಂತೆ. ನಿನಗೆ ಐದು ಮಂದಿ ಬರೇ ಗಂಡೈಕಳುಗಳೇ ಇದ್ದಾರಲ್ಲ. ನನ್ನ ಕೂಸ್ನ ನೀನು ದತ್ತು ತಗೋ. ಸಾಕ್ಕೋ. ಸಾಯಾಕೆ ಬಿಡಬೇಡ ಕಣೇ. ಹೆಂಗಾದರೂ ಮಾಡಿ ನನ್ನ ಕೂಸ್ನ ಉಳಿಸಿಕೊಳ್ಳೆ. ನಿಮ್ಮ ಭಾವನಿಗೆ ಗೊತ್ತಾದ್ರೆ ನನ್ನ ಸುಮ್ನೆ ಬಿಟ್ಟಾರೇನೇ?” ಅಕ್ಕನ ಕಣ್ಣುಗಳಿಂದ ಧಾರಾಕಾರವಾಗಿ ನೀರು ಹರಿಯಲಾರಂಭಿಸಿತ್ತು. “ಏನು ಮಾಡಾಕಾದಾತು ಅಕ್ಕ. ಆ ಹೆಣ್ಣುಕೂಸಿನ ಅಣೇಬರಹವೇ ಇಷ್ಟೂಂತ ಅಂದ್ಕೋ ….”

ಅಕ್ಕ ಆ ಹಣೇಬರಹವನ್ನು ಒಪ್ಪಿಕೊಳ್ಳಲು ಸಿದ್ದವಿರಲಿಲ್ಲ. ಅವಳು ಎದ್ದಿದ್ದಳು. “ಅದಾಗಲೇ ಕೂಸು ಹುಟ್ಟಿ ನಾಲ್ಕಾರು ತಾಸಾಗಿದೆ. ಇಷ್ಟೊತ್ತಿಗಾಗಲೇ ಸತ್ತು ಹೋಗಿರುತ್ತೆ ಅಕ್ಕಾ ….” ತಂಗಿ ತಡೆದಿದ್ದಳು. “ಇಲ್ಲ ನನ್ನ ಆತ್ಮ ಹೇಳ್ತಾ ಇದೆ. ನನ್ಕೂಸು ಬದುಕಿದೆ ಅಂತ. ನಾ ಹುಡುಕೇ ಹುಡುಕ್ತೀನಿ. ನೀನೂ ಸಹಾಯ ಮಾಡೆ.” ತಂಗಿಯ ಕೈಹಿಡಿದು ಗೋಗರೆದಿದ್ದಳು ಅಕ್ಕ.

ಅಕ್ಕ – ತಂಗಿಯರಿಬ್ಬರೂ ಅವರ ಸಮಾಜ ಬೇಡವೆಂದು ನಿರಾಕರಿಸಿದ್ದ ಹೆಣ್ಣುಕೂಸನ್ನು ಸಮಾಜದ ಸಂಪ್ರದಾಯದಂತೆ ಎಲ್ಲಿ ಜೀವಂತ ಹೂತಿರಬಹುದೆಂದು ಹುಡುಕುತ್ತಾ ಆ ಅಮಾವಾಸ್ಯೆಯ ಕತ್ತಲಲ್ಲಿ ನಡೆದಿದ್ದರು. ಅಕ್ಕನ ಹೃದಯದಲ್ಲಿ ಎಂಥದ್ದೋ ಒಂದು ಗಾಢ ನಂಬಿಕೆ. ತಾನು ನಂಬುವ ಪರಶಿವ ನನ್ನ ಹೆಣ್ಣುಕೂಸಿಗೆ ಅನ್ಯಾಯ ಮಾಡುವುದಿಲ್ಲ. ಅದನ್ನು ಬದುಕಿಸಿಯೇ ಇರುತ್ತಾನೆ. “ಕೊಲ್ಲುವ ಕೈಗಳಿಗಿಂತ ಕಾಯುವ ಕೈಗಳ ಶಕ್ತಿ ದೊಡ್ಡದಲ್ಲವಾ?” ಒಮ್ಮೆ ನನ್ನ ಕಂದನನ್ನು ಬದುಕಿಸಿಡು ಈಶ್ವರ. ಬದುಕಿಡೀ ಋಣಿಯಾಗಿರುವೆ ನಿನಗೆ”. ಅವಳ ಮನಸ್ಸು ಒಂದೇ ಸಮನೆ ಮೊರೆ ಇಡುತ್ತಿತ್ತು.

ಅವಳ ನಂಬಿಕೆ, ಮೊರೆಗಳು ವ್ಯರ್ಥವಾಗಿರಲಿಲ್ಲ. ಕತ್ತಲಲ್ಲಿ ಎಡವಿದ ಒಂದು ಮಣ್ಣುಗುಪ್ಪೆಯಲ್ಲಿಯೇ ಅಕ್ಕನ ಹೆಣ್ಣುಕೂಸು ಮಲಗಿತ್ತು. ನಾಲ್ಕೂ ಕೈಗಳೂ ಭರಭರ ಮಣ್ಣನ್ನು ಎಳೆದು, ಸೆಳೆದು ಹೊರಹಾಕಿದ್ದವು. ಅದೇ ತಾನೇ ಹುಟ್ಟಿದ್ದ ಬೊಮ್ಮಟೆಯನ್ನು ಹೆರಿಗೆಗೆ ಸಹಾಯ ಮಾಡಿದ್ದ ಆ ಹೆಂಗಸು ಆಳವಾಗಿ ಗುಂಡಿ ತೋಡಿ ಹೂತಿರಲಿಲ್ಲ. ಕೂಸು ಕೈಗೆ ಸಿಕ್ಕಿತ್ತು. ಮಾಂಸದ ಮುದ್ದೆಯಂತಿದ್ದ ಕೂಸು. ಹೊಕ್ಕುಳಬಳ್ಳಿಯನ್ನೂ ಕತ್ತರಿಸಿರದ ಕೂಸು. ತಂಗಿ ತನ್ನ ಮೇಲು ಹೊದಿಕೆಯಿಂದ ಕೂಸಿನ ಮೈ ಮುಖದಲ್ಲಿದ್ದ ಮಣ್ಣು ತೊಡೆದಿದ್ದಳು. ಕೂಸನ್ನು ಎಲ್ಲಿದೆಯೆಂದು ಗುರುತಿಸಿ, ಗುಂಡಿ ತೋಡಿ ಎತ್ತಿದ್ದು ಆಗಿತ್ತು. ಕೂಸಿನ ಕಡೆಯಿಂದ ಭಯಂಕರ ನಿಶ್ಶಬ್ದವೇ ರಾವು ಹೊಡೆವಂತೆ ಅವರಿಬ್ಬರ ಮುಖಕ್ಕೂ ಬಂದೂ ಬಂದೂ ಹೊಡೆದಿತ್ತು. “ ನಾ ಹೇಳಿರಲಿಲ್ಲವಾ ಕೂಸು ಇಷ್ಟೊತ್ಗೆ ಸತ್ತೋಗಿರ್ತದೇಂತ.” ತಂಗಿ ಅಕ್ಕನ ಬಳಿ ಬಾಗಿ ಪಿಸುಗುಟ್ಟಿದ್ದಳು. ಅಕ್ಕ ಕೂಸನ್ನು ಕೈಗೆ ತೆಗೆದುಕೊಂಡು ತನಗೆ ಅನೂಚಾನವಾಗಿ ಗೊತ್ತಿರುವಂತೆ ಅದನ್ನು ತಲಕೆಳಗಾಗಿ ಹಿಡಿದು, ಬೆನ್ನ ಮೇಲೆ ಮೃದುವಾಗಿ ಹೊಡೆದು ಹಿಂದೆ ಮುಂದೆ ಆಡಿಸಿದ್ದಳು. ಕೂಸಿನ ಬಾಯಿ ಪಟ್ಟೆಂದು ತೆರೆದುಕೊಂಡಿತ್ತು.

ಕೂಸು ಅಳಲು ಆರಂಭಿಸಿದ್ದೇ ತಡ ಅಕ್ಕ ತಂಗಿಯರಿಬ್ಬರೂ ಗಾಬರಿಯಾಗಿಬಿಟ್ಟಿದ್ದರು. “ಅಕ್ಕಾ, ಕೂಸಿನ ಅಳು ಯಾರಿಗಾದರೂ ಕೇಳಿಸಿಬಿಟ್ಟರೆ?! ಕಚ್ಚು ಮೊಲೆ ಕಚ್ಚು.” ತಂಗೆ ಕೂಸಿನ ಅಳು ನಿಲ್ಲಿಸಲು ಗಾಬರಿಯಾಗಿ ನಿಂತಿದ್ದ ಅಕ್ಕನಿಗೆ ಹಾದಿ ತೋರಿಸಿದ್ದಳು. ಅಕ್ಕ ಎದೆಯ ಬಳಿ ಒಂದು ಕೈಯಿಂದ ಅಪ್ಪಿ ಮತ್ತೊಂದು ಕೈಯಿಂದ ಮೊಲೆತೊಟ್ಟನ್ನು ಕೂಸ ಬಾಯಿ ಬಳಿ ತಂದಿದ್ದಳು. ಕ್ಷಣದ ಹಿಂದೆ ಮಣ್ಣಲ್ಲಿ ಮಣ್ಣಾಗಿ ಮಲಗಿದ್ದ ಕೂಸೀಗ ಅವರು ನಂಬಿದ ಮಹಾದೇವನ ದಯೆಯಿಂದ ತಾಯಿಯ ಎದೆಯಲ್ಲಿ ಬೆಚ್ಚಗೆ ಮಲಗಿ ಮೊಲೆತೊಟ್ಟಿನಿಂದ ಜಿನುಗಿದ ಜೀವರಸವನ್ನು ಜನ್ಮಾಂತರದ ಹಸಿವೋ ಎಂಬಂತೆ ಸಣ್ಣದೊಂದು ಸದ್ದಿನೊಡನೆ ಹೀರಲಾರಂಭಿಸಿತ್ತು. ಅಕ್ಕ ತಂಗಿಯರಿಬ್ಬರೂ ಮನೆಯತ್ತ ಮರಳಿದ್ದರು.

(ಗುಲಾಬೊ ಸಪೇರಾ (ಕಾದಂಬರಿ) ಲೇ: ಎಂ.ಎಸ್. ವೇದಾ, ಪ್ರ: ಸಂವಹನ, ಈವಿನಿಂಗ್ ಬಜಾರ್ ಹಿಂಭಾಗ, ಶಿವರಾಮಪೇಟೆ, ಮೈಸೂರು, ಪುಟಗಳು: 220, ಬೆಲೆ: ರೂ.220)Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಪುಸ್ತಕ ಸಮಯ/ ಗುಲಾಬೊ ಸಪೇರಾ – ದಂತಕಥೆಯಾದ ನರ್ತಕಿ

Leave a Reply

Your email address will not be published. Required fields are marked *