Uncategorizedಪುಸ್ತಕ ಸಮಯಸಾಹಿತ್ಯ ಸಂಪದ

ಪುಸ್ತಕ ಸಮಯ/ ಗಾಯಗಳ ಅನಾವರಣ – ಗಿರಿಜಾ ಶಾಸ್ತ್ರಿ

ಮಂಜುಳಾ ಹಿರೇಮಠ ಅವರ ಮೊದಲ ಕವಿತಾ ಸಂಕಲನ “ಗಾಯಗೊಂಡವರಿಗೆ” ಶಕ್ತಿಯುತ ಕವನಗಳಿಂದ ಗಮನ ಸೆಳೆಯುತ್ತದೆ. ಅಲ್ಲಿನ ಕವಿತೆಗಳು ಗಾಯಗೊಂಡವರ ಬಗ್ಗೆ ಹೇಳುತ್ತಿದ್ದರೂ ಮೂಲತಃ ಅವು ಸಂಬೋಧಿಸುತ್ತಿರುವುದು ಇತಿಹಾಸದುದ್ದಕ್ಕೂ ಗಾಯಗೊಂಡ ಸ್ತ್ರೀ ಸಂಸ್ಕøತಿಯನ್ನು. ಹೆಣ್ಣಿನ ಮನಸ್ಸಿನ ಮೇಲೆ ಬಿದ್ದ ಹೊಡೆತಗಳ ಗಾಯ ಮಾಯದೆ ಅವಳ ಆದಿಮ ನೆನಪುಗಳಲ್ಲಿ ನೆಲೆ ನಿಂತು ಅವಳ ಸಾಮುದಾಯಿಕ ಪ್ರಜ್ಞೆಯನ್ನು ಊನಗೊಳಿಸುತ್ತದೆ. ಮಂಜುಳಾ ಅವರ ಹಲವಾರು ಕವಿತೆಗಳು ಅಪಮೌಲ್ಯಕ್ಕೆ ತುತ್ತಾದ ಮಹಿಳಾ ಸಂಸ್ಕøತಿಯ ಇಂಥ ನಿಟ್ಟುಸಿರುಗಳಿಗೆ ಮಾತಿನ ಉಡುಗೆ ತೊಡಿಸುತ್ತವೆ.

“ಗಾಯಗೊಂಡವರಿಗೆ” – ಇದು ಮಂಜುಳಾ ಹಿರೇಮಠ ಅವರ ಮೊದಲ ಕವಿತಾ ಸಂಕಲನ. ಮೊದಲ ಸಂಕಲನದಲ್ಲೇ ಇಂತಹ ಶಕ್ತಿಯುತವಾದ ಕವಿತೆಗಳನ್ನು ನೀಡಿರುವ ಅವರಿಗೆ ಅಭಿನಂದನೆಗಳು. ಇದು ಮುಂಬಯಿಯ ಸುಶೀಲಾ ಶೆಟ್ಟಿ ಕವಿತಾ ಪುರಸ್ಕಾರವನ್ನು ಪಡೆದುಕೊಂಡಿರುವುದು ಇನ್ನೂ ಸಂತಸದ ಸಂಗತಿ. ಸುಶೀಲಾ ಒಂದು ಕಾಲಕ್ಕೆ ನನ್ನ ಗೆಳತಿಯಾಗಿದ್ದರು.

ಈ ಸಂಕಲನಕ್ಕೆ ಕವಿ “ಗಾಯಗೊಂಡವರಿಗೆ” ಎಂದು ಹೆಸರಿಟ್ಟಿದ್ದಾರೆ. ಈ ಕವಿತೆಗಳು ಮೇಲು ನೋಟಕ್ಕೆ ಗಾಯಗೊಂಡವರ ಬಗ್ಗೆ ವೈಯಕ್ತಿಕವಾಗಿ ಹೇಳುತ್ತಿರುವಂತೆ ಕಂಡರೂ ಇದು ಸಂಬೋಧಿಸುತ್ತಿರುವುದು ಗಾಯಗೊಂಡ ಸ್ತ್ರೀಸಂಸ್ಕೃತಿಯನ್ನು.

ಭೌತಿಕ ಹಲ್ಲೆಯಿಂದಾಗುವ ಮೇಲ್ಪದರದ ಗಾಯಗಳು ಮಾತ್ರವಲ್ಲ, ಚರ್ಮ ಸೀಳಿ ಆಳಕ್ಕೆ ಇಳಿದ ಗಾಯಗಳೂ ಕಾಲದ ವೇಗದಲ್ಲಿ ಬೇಗ ಮಾಯುತ್ತವೆ. ಆದರೆ ಮನಸ್ಸಿನ ಮೇಲೆ ಬಿದ್ದ ಹೊಡೆತಗಳು ಭೂತದ ಕ್ರೌರ್ಯಗಳು ಮಾಯುವುದಿಲ್ಲ. ಅವು ಮಹಿಳೆಯ ಆದಿಮ ನೆನಪುಗಳಲ್ಲಿ ನಿಗೂಢವಾಗಿ ಕುಳಿತು ಸಾಮುದಾಯಕ ಪ್ರಜ್ಞೆಯನ್ನು ಊನಗೊಳಿಸಿಬಿಡುತ್ತವೆ. ಈ ಊನ, ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗೊಳ್ಳುತ್ತಾ ಸಾಗುತ್ತದೆ. ಆದುದರಿಂದಲೇ ಮೇಲುನೋಟಕ್ಕೆ ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಕಾಣುತ್ತಾಳೆ. ಆದರೆ ಇದಕ್ಕೆ ಪಿತೃಪ್ರಧಾನತೆಯ ಉಪಾಯಗಳೇ ಮಾದರಿ ಎಂಬುದು ಮಾತ್ರ ಕಾಣಿಸುವುದಿಲ್ಲ. ಹೆಣ್ಣಿನ ಎದುರಿಗೆ ಹೆಣ್ಣನ್ನೇ ಅಖಾಡಾಕ್ಕೆ ಇಳಿಸುವುದು ಮಹಿಳಾ ಸಂಸ್ಕೃತಿಯನ್ನು ಊನಗೊಳಿಸುವ ಉಪಾಯವೂ ಹೌದು ಎನ್ನುವುದು ಅರಿವಿಗೆ ಹತ್ತುವುದಿಲ್ಲ.

ಎಂತಹ ಆಧುನಿಕ ವಿದ್ಯುನ್ಮಾನ ಪರಿಸರದಲ್ಲೂ ಇಂತಹ ಪ್ರಶ್ನೆಯನ್ನು ಮಹಿಳೆ ಇನ್ನೂ ಕೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದೇ ಅವಳು ತನ್ನ ಮೇಲೆ ಎಸಗಲಾದ ಆದಿಮ ಆಘಾತದ ವಿರುದ್ಧ ನಡೆಸುತ್ತಿರುವ ಹೋರಾಟದ ಸ್ವರೂಪವನ್ನು ಬಯಲಾಗಿಸುತ್ತದೆ.

ಕವಿತೆಯ ಶಕ್ತಿಯುತ ಸಾಲುಗಳ ಮಧ್ಯೆ ಅಡಗಿರುವ ಮೌನವೇ ಗಾಯಗೊಂಡ ಅಪಮೌಲೀಕರಣಕ್ಕೆ ಒಳಗಾದ ಮಹಿಳಾ ಸಂಸ್ಕೃತಿಯ ವೈವಿಧ್ಯಮಯ ರೂಪಗಳಿಗೆ ಮಾತಿನ ಉಡುಗೆಯನ್ನು ತೊಡಿಸುತ್ತದೆ. “ರೆಕ್ಕೆ ಕತ್ತರಿಸಿ ಗೂಡಿನಲ್ಲಿಟ್ಟರೂ ಹಕ್ಕಿ ಆಕಾಶದ ಕನಸನ್ನು ಕಾಣುತ್ತದೆ” ( ಹಕ್ಕಿ ಆಕಾಶದ್ದು) ಯಾಕೆಂದರೆ ಹಕ್ಕಿ ಆಕಾಶಕ್ಕೆ ಸೇರಿದ್ದು. ಆಕಾಶ ಅನಿರ್ಬಂಧಿತವಾದ ಒಂದು ಬಯಲು. ಆಕಾಶ ಹೊರಗಲ್ಲ ಹಕ್ಕಿಯ ಒಳಗಿದೆ ಎನ್ನುವ ಮಾತು, ಇದ್ದ ಕಡೆಯೇ ಅವಕಾಶವನ್ನು ನಿರ್ಮಿಸಿಕೊಳ್ಳಬಲ್ಲ ಸ್ತ್ರೀಯ ಅನನ್ಯ ಶಕ್ತಿಯನ್ನು ಕುರಿತು ಹೇಳುತ್ತದೆ. ಇಲ್ಲಿ ಹೆಣ್ಣು ಗಿಣಿ, ಕೋಗಿಲೆ, ಪಾರಿವಾಳ, ನವಿಲಾಗಿದ್ದಾಳೆ. ಇವು ಸೌಂದರ್ಯದ ಜೊತೆಗೆ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತವೆ. ಪ್ರಾಕೃತಿಕವಾಗಿ ಅವಕ್ಕೆ ಸಿದ್ಧಿಸಿದ ಶಕ್ತಿಗಳನ್ನು ಅವು ಬಳಸಲು ತೊಡಗಿದಾಕ್ಷಣ ಅವುಗಳನ್ನು ಹಣಿಯಲಾಗುತ್ತದೆ.(ಹೆಬ್ಬಂಡೆ ಮೌನ)

ಗಂಡಿನ ಅನುವರ್ತಿಯಾಗಿ ಮೂಕವಾಗಿ ಹೆಣ್ಣು ಸದಾ ಅವನನ್ನು ಹಿಂಬಾಲಿಸುತ್ತಿದ್ದರೆ ಬದುಕು ಸುರಳೀತ. ಯಾವಾಗ ಅವಳು ಮೌನ ಮುರಿದು ತನಗೆ ಬೇಕಾದುದೇನು ಎಂಬುದನ್ನು ಹೇಳಿಕೊಳ್ಳಲು ಪ್ರಾರಂಭಿಸುತ್ತಾಳೋ ಆಗ ಗಂಡು ಹೆಬ್ಬಂಡೆಯಾಗಿ ಬಿಡುತ್ತಾನೆ. ಇದು ಧರ್ಮ, ನೀತಿ ನಿಯತಿಗಳ, ಹೀನ ಕುಲೀನಗಳ -ಜರುಗಿಸಲಾರದ ಹೆಬ್ಬಂಡೆ. ಇದು ಹಾಡುವ “ಕೋಗಿಲೆಯ ಕೊರಳನ್ನು ಬಿಗಿದಿದೆ, ಪಾರಿವಾಳದ ರೆಕ್ಕೆ ಮುರಿದಿದೆ, ನವಿಲಿನ ಗರಿ ತರಿದಿದೆ, ಉಲಿಯುವ ಗಿಣಿಯ ಧ್ವನಿ ಉಡುಗಿಸಿದೆ”.
ಹೀಗೆ ಧ್ವನಿ ಉಡುಗಿರುವ, ರೆಕ್ಕೆ ಕತ್ತರಿಸಿಕೊಂಡ, ಗರಿ ತರಿದ ಕೊರಳು ಬಿಗಿದ ಅರಿವಿನ ಆಸ್ಫೋಟವೇ ಹೆಣ್ಣಿನ ಸಂಘರ್ಷದ ಪ್ರಾರಂಭವಾಗಿದೆ. ಆದುದರಿಂದಲೇ

“ಯುಗ ಯುಗಗಳಿಂದ
ಆಕೆಯನ್ನು ಕತ್ತಲ ಕೋಣೆಯೊಳಗೆ
ಕೂಡಿಹಾಕಿ
ಬಳಿಕ ಆ ಕೋಣೆಗೆ
ಬೆಳಕನ್ನು ಹಾಯಿಸಬೇಡಿ!” (ಕತ್ತಲಕೋಣೆ)
ಎಂದು ಕವಿ ವ್ಯಂಗ್ಯವಾಡುತ್ತಾರೆ.
ಅವಳಿಗೆ ಹೆಚ್ಚಿಗೇನೂ ಬೇಕಾಗಿಲ್ಲ
“ಕೆಂಡಮಂಡಲವಾದ ಅಂತರಂಗವನು
ತಂಪು ಮಾಡಲು ಒಂದಿಷ್ಟು ಜಲ”
…..
ಆಕಾಶದ ಸ್ವಪ್ನ ವೃಕ್ಷದಲ್ಲಿ
ಒಂದು ಚೆಂದದ ಉಯ್ಯಾಲೆ….. (ಸೋನೆಮಳೆಗೆ)

ಹಾಗೆಂದು ಹೆಣ್ಣು ರಮ್ಯ ಲೋಕದಲ್ಲಿಯೇ ಕಳೆದು ಹೋಗಿಲ್ಲ. ಪೇಪರ್ ಹಾಕುವ ಹುಡುಗ, ಮನೆ ಕೆಲಸದಾಕೆ, ಬೀದಿ ಕಾಯುವ ಗೂರ್ಖ, ಟೇಬಲ್ ಒರೆಸುವ ಹೊಟೆಲ್ ಹುಡುಗ, ಬಸ್ಸಿನ ಚಾಲಕ ಇವರುಗಳ ದಮನಿತ ಸ್ಥಿತಿಯ ಬಗೆಗೆ ಕಾಳಜಿಯೂ ಇದೆ. ಅವರೊಡನೆ ಗುರುತಿಸಿಕೊಳ್ಳುವ ಕ್ಷಣಗಳೇ ದೊಡ್ಡ ಸಂಭ್ರಮಗಳು ಎನ್ನುವ ಅರಿವಿದೆ. (ಕೊನೆಯಾಗುವ ಮುನ್ನ) ಯಾಕೆಂದರೆ ಇವರೆಲ್ಲಾ ದುಡಿಮೆಯ ಜೊತೆಗೆ ಗುರುತಿಸಿಕೊಂಡವರು. ಹೆಣ್ಣಿನ ಮನೆಯೊಳಗಿನ ಅನುತ್ಪಾದಿತ ದುಡಿಮೆಗೆ ಕೂಡ ಬೆಲೆಯಿಲ್ಲ. ಮೈಮುರಿತದ ಈ ದುಡಿತವೇ ಅವಳ ಸಂಕೋಲೆಯೂ ಆಗಿದೆ ( ನಿದ್ದೆಗಣ್ಣುಗಳು). ಗಂಡಿನಂತೆ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಅವು ಅವಳಿಗೆ ಒಂದು ಮೌಲಿಕ ಸಮಯವನ್ನು ಒದಗಿಸುತ್ತಿಲ್ಲ ಎನ್ನುವ ವಿಷಾದವೂ ಇದೆ.

ಅಡುಗೆಮನೆಯೆಂಬುದು ಹೆಣ್ಣಿನ ಖಾಸಗಿ ವಲಯ. ಅದು ಅವಳ ಸ್ಪೇಸ್. ಆದುದರಿಂದಲೇ ಹೆಂಗಸು ಬರೆದದ್ದನ್ನು ಅಡುಗೆ ಮನೆ ಸಾಹಿತ್ಯ ಎಂದು ಅಪಹಾಸ್ಯ ಮಾಡುವ ಕಾಲವಿತ್ತು. ಅಡುಗೆಯ ಘಮ ಘಮವೇ ಸಶಕ್ತ ಕವಿತೆಯಾಗಿ ಅಕ್ಕರೆಯನ್ನು ಹೇಗೆ ಜಿನುಗಿಸುತ್ತದೆ ದೌರ್ಬಲ್ಯವೆಂದು ಪರಿಗಣಿಸಿದ್ದೇ ಹೇಗೆ ಶಕ್ತಿಯಾಗಿದೆ ಎಂಬ ಎದಿರೇಟನ್ನು ಕವಿ “ಹೆಂಗಸರ ಪದ್ಯ” ಕವಿತೆಯ ಮೂಲಕ ಕೊಟ್ಟಿದ್ದಾರೆ. ಅಡುಗೆಗೆ ಸಂಬಂಧಿಸಿದ ಇಲ್ಲಿನ ಕೆಲವು ಕವಿತೆಗಳು ಅವಳ ಶಕ್ತಿ ಸ್ವರೂಪದ ಇನ್ನೊಂದು ಆಯಾಮವನ್ನು ಅನಾವರಣ ಮಾಡುತ್ತವೆ.

ಹೃದಯವನ್ನೇ ಹುರಿಯುವ, ಕನಸುಗಳನ್ನು ಹಚ್ಚಿ ಕಣ್ಣೀರಿನಲ್ಲಿ ನೆನೆಸಿ, ಮಾಡಿದ ತಪ್ಪುಗಳು, ನೆರವೇರದ ಇಚ್ಚೆಗಳನ್ನು ಹರಕೆಯ ತುಪ್ಪದಲ್ಲಿ ಕರಿದು, ಏಳುವ ಪ್ರತಿಭಟನೆಯ ಸ್ವರಗಳನ್ನು ಬಾಣಲೆಗೆ ಹಾಕಿ ಮುಚ್ಚಿಡುವ ಒಂದು ರೌದ್ರ ಚಿತ್ರವನ್ನು “ಹೊಸ ರುಚಿಯ ಅಡುಗೆಗೊಂದು ಟಿಪ್ಪಣಿ” ಎನ್ನುವ ಕವಿತೆ ಕೊಡುತ್ತದೆ. ಇದು ಮಹಿಳೆಯ ಲಾಗಾಯ್ತಿನ ಪಾಡು ಮತ್ತು ಅದಕ್ಕೆ ಕಂಡುಕೊಳ್ಳಬೇಕಾದ ಪರ್ಯಾಯವನ್ನು ಭೀಬತ್ಸ ರೂಪದಲ್ಲಿ ಒದಗಿಸುವ ಬಹಳ ಶಕ್ತಿಯುತವಾದ ಕವಿತೆ.
ಭಿನ್ನ ಮನಸ್ಸುಗಳು ಅಡುಗೆ ರುಚಿ ಕೆಡಿಸುತ್ತವೆ- ತುಂಬಿದ ಬಸುರಿಯತೆ ಅಡುಗೆ ಮನೆ ಸಾಮಾಗ್ರಿಗಳಿಂದ ತುಂಬಿದ್ದರೂ ( ಅಡುಗೆ ಆಟವೆಂದರೆ)
ಷಡ್ರಸಗಳಲ್ಲಿ ಒಗರೂ ಒಂದು ರುಚಿ. ಅದನ್ನು ನಿರಾಕರಿಸುವಂತಿಲ್ಲ. ಪುರುಷ ಪ್ರಾಧಾನ್ಯದಿಂದ ಮಹಿಳೆ ದಮನಿತಳಾದರೂ ಪುರುಷನನ್ನು ದ್ವೇಷಿಸಲಾರಳು. ಪುರುಷ ಗಂಡ ಮಾತ್ರವಲ್ಲ ಮಗನೂ ಆಗಿರುತ್ತಾನೆ. ಅವನೊಡನೆ ಬದುಕೆಂದರೆ ಅಡುಗೆಯಲ್ಲಿನ ಒಗರಿನಂತೆ. ಬೆರಳಿಗಂಟಿದ ಉಗುರಿನಂತೆ. ಸದಾ ಸಮತೆಯ ಎಚ್ಚರವಿದ್ದರೆ ಒಗರು ಕೂಡ ರುಚಿಯಾಗುತ್ತದೆ. ಬೆರಳಂತೂ ಉಗುರಿಲ್ಲದೇ ಇರಲು ಸಾಧ್ಯವೇ ಇಲ್ಲ. ಬದುಕಿನಲ್ಲಿ ಗಂಡನ್ನು ಬಿಡಲೂ ಆರದ ಹಿಡಿದುಕೊಳ್ಳಲೂ ಬಾರದ ಒಂದು ಇಬ್ಬಂದಿ ಸ್ಥಿತಿಯನ್ನು ಧ್ವನಿಸುತ್ತದೆ.

ಈ ಗಾಯ ಯಾರಿಗೂ ಕಾಣುವುದಿಲ್ಲ. ಈ ಗಾಯಗಳನ್ನು ಮಾಡಿದವರೇ ಬೆಗಡುಗೊಳ್ಳುವಂತೆ (ಬೆರಗಾಗುವಂತೆ) ಹೆಣ್ಣು ಸಂಬಂಧಗಳನ್ನು ನಿಭಾಯಿಸುತ್ತಾಳೆ. ಆದುದರಿಂದಲೇ ಅನುಬಂಧಗಳನ್ನು ಅಲ್ಲಗಳೆಯುವುದಿಲ್ಲ,(ಅನುಬಂಧಗಳೇ ಹೀಗೆ) ಸಂಬಂಧಗಳಾಚೆ ಬದುಕಲು ಸಾಧ್ಯವಿಲ್ಲ. “ಪ್ರತಿಮೆಯಾಗೋಣ” ಎಂಬ ಕವಿತೆ ಸಂಬಂಧಗಳನ್ನು ಗೌರವಿಸುತ್ತದೆ ಅವುಗಳ ಸಂಕೀರ್ಣ ಸ್ವರೂಪವನ್ನು ಗುರುತಿಸುತ್ತಲೇ, ಮಹಿಳೆಯ ವಕಾಲತ್ತು ವಹಿಸುವುದೆಂದರೆ ಪುರುಷ ವಿರೋಧವಲ್ಲ. ಪಾರಸ್ಪರಿಕತೆ, ಗಂಡು ಹೆಣ್ಣುಗಳ ನಡುವೆ ಇರಬೇಕಾದ ಸಮಾನಾಂತರತೆಯ ಸ್ವರೂಪವನ್ನು ಇದು ಎತ್ತಿಹಿಡಿಯುತ್ತದೆ.

ಬರೆಯುವ ಕ್ಷಣಗಳಲ್ಲಿ ಕವಿಯೊಳಗೆ ಭಿನ್ನ ವ್ಯಕ್ತಿತ್ವದ ‘ಮತ್ತೊಬ್ಬಳು’ ಇರುತ್ತಾಳೆ. ಬರೆಯುವವಳು ಸ್ಥಾವರವಾಗಿ ಒಂದೆಡೆ ಕುಳಿತಿದ್ದರೆ ಬರೆಸುವವಳು ಜಂಗಮವಾಗಿ ಊರೆಲ್ಲಾ ತಿರುಗಿ ಬರುತ್ತಾಳೆ. ಕವಿತೆಯೆಂದರೆ ಸ್ಥಾವರ ಜಂಗಮಗಳ ಸಂಗಮ. ಒಂದೇ ವ್ಯಕ್ತಿತ್ವದೊಳಗೆ ಮಿಕ ಮತ್ತು ಬಕಗಳು ಮನೆಮಾಡಿರುತ್ತವೆ (ಮತ್ತೊಬ್ಬಳು)- ಇದು ಪ್ರತಿಯೊಂದು ರಚನೆಯ ನಂತರವೂ ಕವಿ/ ಲೇಖಕ ಸಾಯುತ್ತಾನೆ ಎನ್ನುವ ರೋಲಾಂಡ್ ಬಾರ್ಥಸ್ ನ Death of the Author ಸಿದ್ಧಾಂತವನ್ನು ನೆನಪಿಸುತ್ತದೆ. ಈ ಕಾವ್ಯವ್ಯಾಪರ ಇದು ಗಂಡು ಹೆಣ್ಣಿಗೆ ಸಮಾನವಾಗಿದ್ದರೂ

“ಕಾವ್ಯದೆಡೆಗೆ ಕವಿಯೊಬ್ಬ
ನಡೆವ ದೂರವಲ್ಲ
ಕವಿಯೊಬ್ಬಳು ನಡೆವ ದೂರ !”

(ಕವಿಯೊಬ್ಬಳು ನಡೆವ ದೂರ) ಎಂದು ಹೇಳುವುದು ಹೆಣ್ಣಿನ ಮನೋವಲಯದ ಅನನ್ಯತೆಯನ್ನು, ಅವಳ ಸೃಜನಶೀಲತೆಯ ಬಗೆಗೇ ಇರುವ ಸಾಮಾಜಿಕ ಪೂರ್ವಾಗ್ರಹವನ್ನು ಎತ್ತಿಹಿಡಿಯುತ್ತದೆ.

ಇಲ್ಲಿನ ಕವಿತೆಗಳಲ್ಲಿ ಕೆಲವು ಕಡೆ ವಾಚ್ಯ ಎನ್ನಬಹುದಾದ ಸಾಲುಗಳು ನುಸುಳಿವೆ ಉದಾಹರಣೆಗೆ, “ಇನ್ನೂ ಸೂಕ್ಶ್ಮವಾಗಿ ಅವಲೋಕಿಸಿದರೆ ಆಕಾಶ ನಮ್ಮೊಳಗೂ ಇರುವುದು ಗೋಚರಿಸುತ್ತದೆ” ಇದು ಮಂಜುಳಾ ಅವರ ಮೊದಲ ಸಂಕಲನವಾಗಿರುವುದರಿಂದ ಇಂತಹ ಕೆಲವು ಸಾಲುಗಳನ್ನು ಚಿಟಿಕೆ ಉಪ್ಪಿನ ಜೊತೆ ಸ್ವೀಕರಿಸಬೇಕಾದುದು ಅನಿವಾರ್ಯ. ಮುಂದಿನ ಸಂಕಲನಗಳಲ್ಲಿ ಅವರು ಇದನ್ನು ಗಮನಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತಾ ಅವರಿಗೆ ಶುಭವನ್ನು ಹಾರೈಸುತ್ತೇನೆ. (ಗಾಯಗೊಂಡವರಿಗೆ (ಕವಿತಾ ಸಂಕಲನ) ಲೇ: ಮಂಜುಳಾ ಹಿರೇಮಠ ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ – ಸಂಪರ್ಕ: 94491 74662)

ಗಿರಿಜಾ ಶಾಸ್ತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *