FEATURED

ಪುಸ್ತಕ ಸಮಯ/ ಕಸೂತಿಯೆಂಬ ಅಡಗು ತಾಣ – ಗಿರಿಜಾ ಶಾಸ್ತ್ರಿ

‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ – ಈ ಸವಿಯ ನೆನಪೇ ಬದುಕಿನ ಗ್ರಹಿಕೆಗೆ ಒಂದು ವಸ್ತುನಿಷ್ಠ ದೂರವನ್ನು ದಯಪಾಲಿಸುವುದರ ಜೊತೆಗೆ ಸಮಾಹಿತ ಸ್ಥಿತಿಯನ್ನೂ ದೊರಕಿಸಿಕೊಡುತ್ತದೆ.

ನೆನಪು ಇಲ್ಲಿ ಕಸೂತಿಯಾಗಿದೆ. ಬದುಕು ಇಂತಹ ಕೆಲವು ನೆನಪುಗಳ ಮೊತ್ತ. ನೆನಪುಗಳ ಆಯ್ಕೆ ಎನ್ನುವುದು ವಿಸ್ಮಯಕಾರಿಯಾದುದು. ಯಾವುದೋ ನಿಮಿತ್ತವಾಗಿ ಭೂತದ ನೆನಪು ವರ್ತಮಾನದೊಂದಿಗೆ ಕೊಕ್ಕೆ ಹಾಕಿಕೊಳ್ಳುತ್ತದೆ. ಇವೆರಡರ ನಡುವಿನ ಕಾರ್ಯ ಕಾರಣ ಸಂಬಂಧ ಎಂತಹುದೋ ಯಾರು ಬಲ್ಲರು? ವಾಸ್ತವದಲ್ಲಿ ಬದುಕು ನೂರು ಸಿಕ್ಕುಗಳಲ್ಲಿ ಸಿಕ್ಕಿ ನರಳುತ್ತದೆ, ಸಂತೋಷದಲ್ಲಿ ಉನ್ಮಾದಗೊಳ್ಳುತ್ತದೆ. ಆದರೆ ಅದು ನೆನಪಾಗಿ ಬರುವಾಗ ವಾಸ್ತವಕ್ಕಿರುವ ಎಲ್ಲಾ ರೀತಿಯ ಭಾವ ಲೇಪಗಳನ್ನು ಕಳೆದುಕೊಂಡು ಬಿಡುವುದರಿಂದ ಸುಖ ದುಃಖಗಳ ತೀವ್ರತೆ ಅದಕ್ಕೆ ತಟ್ಟುವುದಿಲ್ಲ. ಆದುದರಿಂದಲೋ ಏನೋ ‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎಂದೆನಿಸುತ್ತದೆ. ಈ ಸವಿಯ ನೆನಪೇ ಬದುಕಿನ ಗ್ರಹಿಕೆಗೆ ಒಂದು ವಸ್ತುನಿಷ್ಠ ದೂರವನ್ನು ದಯಪಾಲಿಸುವುದರ ಜೊತೆಗೆ ಸಮಾಹಿತ ಸ್ಥಿತಿಯನ್ನೂ ದೊರಕಿಸಿಕೊಡುತ್ತದೆ. ಆದುದರಿಂದಲೇ ಅದು ಸವಿ. ನೆನಪುಗಳ ಇಂತಹ ಸವಿಯನ್ನು ಲೇಖಕಿ ಎಂ.ಆರ್. ಕಮಲ ತಮ್ಮ “ಕಸೂತಿಯಾದ ನೆನಪು” ಪ್ರಬಂಧಗಳ ಮೂಲಕ ನೀಡಿದ್ದಾರೆ.

ಕಸೂತಿ ಸೃಜನಶೀಲವಾದದ್ದು. ಇದರಲ್ಲಿ ವಾಸ್ತವದ ಜೊತೆಗೆ ಕರ್ತೃವಿನ ಕಲ್ಪನೆ, ಪ್ರತಿಭೆ ಬೆರೆತಿದೆ. ಆದುದರಿಂದಲೇ ಅದು ಮಧುರವಾದ ಅನುಭವವನ್ನು ಕೊಡುತ್ತದೆ. ಬದುಕು ಕಸೂತಿಯಾಗುವುದೂ ಹೀಗೆಯೇ ನೆನಪುಗಳ ಮೂಲಕ. ಬದುಕು ಕಸೂತಿಯಾಗಲು ಕಲಾ ವಿನ್ಯಾಸದ ಸೂಕ್ಷ್ಮ ಕಣ್ಣುಗಳಿರಬೇಕು. ಫ್ರಾನ್ಸಿನ ಚಿತ್ತಾರದ ಕಿಟಕಿಗಳ ಜೊತೆಗೆ ಹಳ್ಳಿ ಮನೆಯ ನಾಜೂಕಿಲ್ಲದ ಬಗೆ ಬಗೆಯ ಕಿಟಕಿಗಳ ವಿನ್ಯಾಸಗಳೇ ಕಮಲ ಅವರಿಗೆ ಚಿತ್ತಾರದ ತುಣುಕುಗಳನ್ನು ಅಖಂಡವಾಗಿ ಕಾಣಲು ಕಣ್ಣುಗಳನ್ನು ದಯಪಾಲಿಸಿವೆ. ಈ ಕಿಟಕಿಗಳೇ ಅವರ ಲೋಕ ಗ್ರಹಿಕೆಯ ಮಾಧ್ಯಮ..

ಬದುಕಿನ ಒಂದು ಪಕ್ವವಾದ ಘಟ್ಟಕ್ಕೆ ಬಂದು ನಿಂತು ಹಿಂತಿರುಗಿ ನೋಡಿದಾಗ ನೆನಪುಗಳು ಬದುಕಿಗೆ ವಿಷಾದ ರಹಿತ ತೃಪ್ತ ಭಾವವನ್ನು ತಂದಿತ್ತರೆ ಅದು ನಿಜವಾಗಿ ಸಾರ್ಥಕವಾದ ಬದುಕು.
ಇಂತಹ ಸಾರ್ಥಕ ಬದುಕಿನ ಬಣ್ಣ ಬಣ್ಣದ ತುಣುಕುಗಳನ್ನು ಕಮಲ ಅವರ ಲಘು ಪ್ರಬಂಧದಲ್ಲಿ ಕಾಣುತ್ತೇವೆ. ಎಲ್ಲಿಯೂ ಕಳೆದ ಕಾಲದ ಬಗ್ಗೆ ಆರೋಪಗಳಿಲ್ಲ, ವಂಚಿತವಾದುದರ ಬಗ್ಗೆ ಆಕ್ಷೇಪಗಳಿಲ್ಲ. ಕಾಲೆಳೆದವರ ಬಗ್ಗೆ ಕೋಪವಿಲ್ಲ. ಎಲ್ಲವೂ ಬದುಕಿನ ಪ್ರಸಾದ. ವಿಸಂಗತಿಗಳು ಏನಿದ್ದರೂ ಅವು ಬದುಕಿನ ಊರ್ಧ್ವಗಮನಕ್ಕೆ ಸಹಕಾರಿಯಾಗಿ ಬಂದವುಗಳೇ ಹೊರತು ವಿಷಾದ ಉಂಟುಮಾಡುವುದಕ್ಕಲ್ಲ.

ಕಾಲೇಜು ಅಧ್ಯಾಪಕಿಯಾಗಿ ರೌಡಿ ಹುಡುಗರನ್ನೂ ಒಲಿಸಿಕೊಂಡ ಬಗೆ (ನಟ ಲೋಕನಾಥ್ ನೆನಪಿಸಿದ ವಿದ್ಯಾರ್ಥಿಗಳು), ಮುದ್ದು ಮಕ್ಕಳಿಗೆಲ್ಲ ಒಂದಾದರು ಬೊಂಬೆ ಸಿಗಲಿ ಎನ್ನುವ ಇಲ್ಲದವರ ಬಗ್ಗೆ ಕಕ್ಕುಲಾತಿ, ಗೋಡೆಗಳಿಲ್ಲದ ಬಯಲಲ್ಲಿ ಚಕ್ಕುಲಿ, ಕೋಡುಬಳೆ ಮಾಡಿ ಹಂಚುವ ಸಾಮುದಾಯಿಕ ಸೌಹಾರ್ದ (ಗೋಡೆಗಳಿಲ್ಲದ ಬದುಕು), ಪಿತೃಪ್ರಧಾನತೆಯ ಎದುರು ಸೆಡ್ಡು ಹೊಡೆದು ನಿಲ್ಲುವ ಧೈರ್ಯ (ಪಾಳೆಗಾರಿಕೆ ಮನೋಭಾವದ), ವಯಸ್ಸಿಗೆ ತಕ್ಕ ಹಾಗೆ ಇರಬೇಕು ಎನ್ನುವ ಸಾಮಾಜಿಕ ಪೂರ್ವಗ್ರಹವನ್ನು ಬಯಲಾಗಿಸುವ ಲವಲವಿಕೆ ( ವಯಸ್ಸು ದೇಹಕ್ಕೆ….ಅರವತ್ತರ ಚೆಲುವೆ), ಕಣ್ಣು ತುಂಬಿಕೊಳ್ಳುವ ಅರಬ್ಬಿ ಹೆಣ್ಣುಗಳ ಆರ್ದ್ರತೆ, ಜೊತೆಗೆ ಅವರ ಆತ್ಮವಿಶ್ವಾಸ ( ಒಂದು ಪದ..), ಹೆಣ್ಣುಮಕ್ಕಳು ಮನೆ ಮೂಳಿಯಾಗುವುದರ ಸುಖದ ತರ್ಕ (ನೋವಿನ ಪೊಟ್ಟಣ), ಬದಲಾಗುತ್ತಿರುವ ಬೀದಿ ಕನ್ನಡಕ್ಕೆ ತನ್ನನ್ನು ಮುಕ್ತವಾಗಿ ತೆರೆದುಕೊಳ್ಳುವ, ಅದನ್ನು ಗೊಣಗದೇ ಸ್ವೀಕರಿಸುವ ಪ್ರಬುದ್ಧತೆ (ಈ ಫೇಸ್ ಬುಕ್ ನಲ್ಲಿ ನಂದೇ ಹವಾ), ವೈರಾಗ್ಯದ ಆಷಾಢಭೂತಿತನವನ್ನು ಪ್ರಶ್ನಿಸುತ್ತ ರಾಗರಂಗಿನ ಬದುಕನ್ನು ಅಪ್ಪಿಕೊಳ್ಳುವ ಜೀವಂತಿಕೆ (ವಿರಾಗದಲ್ಲೊಂದು ರಾಗ), ಇಂದು ಅತಿಯಾದ ಖಾಸಗೀತನ ಮನೆಯಲ್ಲಿರುವ ಸದಸ್ಯರನ್ನು ಭಾಗ ಮಾಡುತ್ತಿರುವ ಹೊತ್ತಿನಲ್ಲಿ ಮನೆಯವರನ್ನೆಲ್ಲಾ ಬೆಸೆಯುವ ಒಂದು ಪ್ರತೀಕವಾಗಿ ಮೈಪಡೆದುಕೊಂಡಿರುವ ಚಿಕ್ಕ ಮನೆಯ ಅನನ್ಯತೆ (ಚಿಕ್ಕ ಮನೆಯಲ್ಲಿ ಚೆಕ್ಕೆ ತುಂಬಿದೆ) ಹೀಗೆ ಹತ್ತು ಹಲವು ಬದುಕಿನ ಅನೇಕ ಸಣ್ಣ ಸಣ್ಣ ಸಂಗತಿಗಳನ್ನು ಅವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅವುಗಳ ಬಗ್ಗೆ ಇರುವ ಸಾಮಾಜಿಕ ಪೂರ್ವಗ್ರಹವನ್ನು ಅವರು ಎಂದಿನ ಮೆಲು ದನಿಯಲ್ಲಿ ವ್ಯಕ್ತ ಪಡಿಸಿದ್ದಾರೆ.

ಈ ಪಕ್ವ ಲೋಕಗ್ರಹಿಕೆಯೇ ಬದುಕಿಗೊಂದು ಬಣ್ಣ ಬಣ್ಣದ ಕಸೂತಿಯ ನಾಜೂಕು ಜಾಲಂಧರವನ್ನು (ಫ್ರಾನ್ಸಿನ ಕಿಟಕಿಗಳು) ದಯಪಾಲಿಸಿದೆ. ಕಿಟಕಿಯ ವಿನ್ಯಾಸ ಸೂಕ್ಷ್ಮವಾಗಿರುವುದರಿಂದಲೇ ಕಾಣುವ ದೃಶ್ಯವೂ ಚಿತ್ತಾರವಾಗಿದೆ. ಈ ವಿನ್ಯಾಸದ ಆಳಕ್ಕಿಂತ ಅದರ ಹರಹು ಬೆರಗು ಪಡಿಸುತ್ತದೆ.

ಬಾಲ್ಯದ ನೆನಪುಗಳು, ಮನೆ, ಹಿತ್ತಲು, ಅಟ್ಟ, ಕೊಟ್ಟಿಗೆ, ಅಡುಗೆ ಮನೆ ಬಚ್ಚಲು ಮನೆ, ಶಾಲೆ, ಕೋಡಿ ಬಿದ್ದ ಹಳ್ಳ ಎಲ್ಲಕ್ಕೂ ಒಂದು ರೀತಿಯ ಗ್ರಾಮೀಣ ಘಮ ಪ್ರಾಪ್ತವಾಗಿದೆ. ಪಂಚೇಂದ್ರಿಯಗಳಿಂದ ಗ್ರಹಿಸಿದ ಭೂತ ಸಂಗತಿಗಳು, ವರ್ತಮಾನದ ಅದೇ ವಾಸನೆ ರುಚಿ ಸ್ಪರ್ಶ ನೋಟ ಶಬ್ದದ ನಿಮಿತ್ತವಾಗಿ ಧುತ್ತನೆ ಎದುರಾಗುತ್ತವಂತೆ. ಆದರೆ ಅದಕ್ಕೆ ವಿಸ್ಮೃತಿ ಬಂದುಬಿಡುವುದರಿಂದ ಅವುಗಳ ಕಾರ್ಯಕಾರಣ ಸಂಬಂಧ ತಿಳಿಯದೇ ನಮ್ಮನ್ನು ಮಧುರವಾದ ಯಾತನೆಗೆ ತಳ್ಳಿಬಿಡುತ್ತದೆಂದು ಯಾವುದೋ ಮನಶ್ಶಾಸ್ತ್ರದ ಪುಸ್ತಕದಲ್ಲಿ ಓದಿದ ನೆನಪು. ಭೂತದ ವಾಸನೆ ವರ್ತಮಾನದಲ್ಲಿ ಪ್ರಕಟವಾಗುವ, ಭೂತ ವರ್ತಮಾನಗಳು ಲಾಳಿಯಾಡುವ ಬಗೆಯನ್ನು ಬಹಳ ಸರಳವಾಗಿ ಕಮಲ ಕಟ್ಟಿಕೊಟ್ಟಿದ್ದಾರೆ. ಲಾಳಿಯಾಡುವುದೆಂದರೇನೆ ಲಾಸ್ಯವಲ್ಲವೇ? ಅದು ಕಸೂತಿಯಲ್ಲಿನ ಬಳ್ಳಿಯ ಲಾಸ್ಯ. ಕಸೂತಿ ಹೆಣ್ಣು ಮಕ್ಕಳ ಪ್ರಪಂಚ. ಮನೆಯ ಗಂಡಸರ ಪ್ರೋತ್ಸಾಹಗಳಿರಲಿ ಅವಜ್ಞೆಗೆ ಒಳಗಾದ ಕದ್ದು ಮುಚ್ಚಿ ಅರಳುವ ಗುಹ್ಯ ಲೋಕ. ಹೆಣ್ಣುಮಕ್ಕಳಿಗೆ ಅದೊಂದು ಅಡಗು ತಾಣ.

ಅಂತಹ ಕಸೂತಿಯ ಲೋಕವನ್ನು ದಿಟ್ಟತನದಿಂದ ತೆರೆದಿಟ್ಟ ಎಂ.ಆರ್. ಕಮಲ ಅವರಿಗೆ ಅಭಿನಂದನೆಗಳು.

  • ಗಿರಿಜಾ ಶಾಸ್ತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *