Uncategorizedಪುಸ್ತಕ ಸಮಯ

ಪುಸ್ತಕ ಸಮಯ/ ಇಕ್ಬಾಲುನ್ನೀಸಾ ಹುಸೇನ್ ಎಂಬ ಅಕ್ಷರ ಜ್ಯೋತಿ – ಎನ್. ಗಾಯತ್ರಿ

ಭಾರತದಲ್ಲಿ ಮಹಿಳಾ ಸಾಕ್ಷರತೆಗೆ ದುಡಿದ ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಕ್ ಅವರಂಥ `ಅಕ್ಷರದವ್ವ’ಗಳ ಸಾಲಿನಲ್ಲಿ ಇಕ್ಬಾಲುನ್ನೀಸಾ ಹುಸೇನ್ ಕೂಡ ಒಂದು ಬೆಳಗುವ ನಕ್ಷತ್ರ. ಅವರು ಬರೆದ ‘ಪರ್ದಾ ಅಂಡ್ ಪಾಲಿಗಮಿ’ ಕಾದಂಬರಿ ಒಂದು ಅಸಾಮಾನ್ಯ ಸಾಮಾಜಿಕ ದಾಖಲೆಯೂ ಹೌದು. ದೇಶದ ಮೊದಲ ಮುಸ್ಲಿಂ ಕಾದಂಬರಿಗಾರ್ತಿ ಎಂಬ ಹಿರಿಮೆ ಪಡೆದ ಇಕ್ಬಾಲುನ್ನೀಸಾ ಇದರಲ್ಲಿ ಮೂಡಿಸಿರುವ ಮುಸ್ಲಿಂ ಕುಟುಂಬಗಳ ಹೆಣ್ಣುಮಕ್ಕಳ ಬದುಕಿನ ಬವಣೆಗಳು, ತವಕತಲ್ಲಣಗಳ ವಿವರವಾದ ಚಿತ್ರಣವಿದೆ. ದಾದಾಪೀರ್ ಜೈಮನ್ ಅವರ ಈ ಕಾದಂಬರಿಯ ಕನ್ನಡ ಅನುವಾದ ಅತ್ಯಂತ ಹೃದ್ಯವಾಗಿದೆ.

  ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರೊಂದಿಗೆ ಅಕ್ಷರ ಜ್ಯೋತಿ ಬೆಳಗಲು ಶ್ರಮಿಸಿದ ಫಾತಿಮಾ ಶೇಕ್ ಅವರಿಂದ ಹಿಡಿದು ಇಲ್ಲಿಯವರೆಗೆ ಅಕ್ಷರ ಕ್ರಾಂತಿ ನಡೆಸಲು ಶ್ರಮಿಸಿದ ಸ್ತ್ರೀಶಕ್ತಿಗಳ ಒಂದು ದೊಡ್ಡ ಚರಿತ್ರೆಯೇ ನಮ್ಮಲ್ಲಿದೆ. ಅದರಲ್ಲಿ ಪ್ರಜ್ವಲವಾಗಿ ಕಂಗೊಳಿಸುತ್ತಿರುವ ಒಂದು ಸ್ತ್ರೀರತ್ನ ಇಕ್ಬಾಲುನ್ನೀಸಾ ಹುಸೇನ್. ಇವರು ಕರ್ನಾಟಕದವರು ಎಂಬುದು ಮತ್ತಷ್ಟು ಹೆಮ್ಮೆಯ ವಿಷಯ. 1944ರಲ್ಲಿ “ಪರ್ದಾ ಅಂಡ್ ಪಾಲಿಗಮಿ” ಎನ್ನುವ ಇಂಗ್ಲಿಷ್  ಕಾದಂಬರಿಯನ್ನು ರಚಿಸುವ ಮೂಲಕ ಭಾರತದ ಮುಸ್ಲಿಂ ಮಹಿಳೆಯರ ಪೈಕಿ ಮೊದಲ ಇಂಗ್ಲಿಷ್ ಕಾದಂಬರಿಗಾರ್ತಿಯೆಂಬ ಕೀರ್ತಿಯೂ ಇವರಿಗೆ ಸಂದಿದೆ. ಭಾರತೀಯ ಸಮಾಜದಲ್ಲಿ ಮೌನಕ್ಕೆ ಸರಿದಿದ್ದ ಸಮುದಾಯವೊಂದರ ಧ್ವನಿಯಾಗಿ ಇವರು ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ. 

 1897ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದ ಇಕ್ಬಾಲುನ್ನೀಸಾ ಅವರ ತಂದೆ ಗುಲಾಬ್ ಮೋಹಿನುದ್ದೀನ್ ಮತ್ತು ತಾಯಿ ಜೈಬುನ್ನೀಸಾ. ಈ ಪತಿ ಪತ್ನಿಯರಿಬ್ಬರೂ ಸುಶಿಕ್ಷಿತರೂ ಉದಾರ ಚಿಂತನೆಗಳುಳ್ಳವರೂ ಆಗಿದ್ದರು. ಗುಲಾಬ್ ಮೋಹಿನುದ್ದೀನ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿದ್ದರು. ಜೈಬುನ್ನೀಸಾ ಟಿಪ್ಪು ಸುಲ್ತಾನರ ವಂಶಸ್ಥರು ಎಂದು ಹೇಳಲಾಗುತ್ತದೆ. ತಂದೆಗೆ ಮಗಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಬೇಕೆಂಬ ಹಿರಿದಾಸೆ. ಅದಕ್ಕಾಗಿ ಅವರು ಮನೆಯಲ್ಲೇ ಪಾಠ ಹೇಳಲು ಮಹಿಳಾ ಶಿಕ್ಷಕಿಯನ್ನು ವ್ಯವಸ್ಥೆಗೊಳಿಸಿದರು. ಈ ಶಿಕ್ಷಕಿಯಿಂದ ಇಕ್ಬಾಲುನ್ನೀಸಾ ಉರ್ದು ಮತ್ತು ಪರ್ಷಿಯನ್ ಭಾಷೆಯನ್ನು ಕಲಿಯುತ್ತಾರೆ. ಹಾಗೆಯೇ ಸ್ವಂತ ಪರಿಶ್ರಮದಿಂದ ಸ್ವಲ್ಪ ಇಂಗ್ಲಿಷನ್ನು ಕಲಿಯುತ್ತಾರೆ. 

 1912ರಲ್ಲಿ ಇಕ್ಬಾಲುನ್ನೀಸಾ ಅವರಿಗೆ ಹದಿನೈದು ವರ್ಷಗಳಾದಾಗ ಬೆಂಗಳೂರಿನ ಹುಸೇನ್ ಎಂಬ ತರುಣನೊಂದಿಗೆ ವಿವಾಹವಾಗುತ್ತದೆ. ಆ ಕಾಲದ ಹೆಣ್ಣಿನ ವಿವಾಹದ ವಯಸ್ಸಿಗೆ ಹೋಲಿಸಿದರೆ ಇವರದು ಕ್ರಾಂತಿಕಾರಕವಾದುದೇ. ಅವರು ಮದುವೆಯಾದಾಗ ಪತಿ ಸಯ್ಯದ್ ಅಹ್ಮದ್ ಹುಸೇನ್ ಇನ್ನೂ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿ. ನಂತರ ಅವರು ಮೈಸೂರು ಸರ್ಕಾರದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾರೆ. ಆಧುನಿಕತೆಗೆ, ಹೊಸ ವಿಚಾರಗಳಿಗೆ ತೆರೆದುಕೊಂಡಿದ್ದ ಹುಸೇನ್ ಮದುವೆಯ ನಂತರ ತಮ್ಮ ನವ ವಿವಾಹಿತ ವಧುವಿನ ಕಲಿಕೆಯನ್ನು ಪ್ರೋತ್ಸಾಹಿಸುತ್ತಾರೆ; ಇಂಗ್ಲಿಷಿನಲ್ಲಿ ಓದುವುದಕ್ಕೆ ಮತ್ತು ಬರೆಯುವುದಕ್ಕೆ ಶಿಕ್ಷಣವನ್ನು ಕೊಡುತ್ತಾರೆ. ಇನ್ನೂ ಹೆಚ್ಚಿನ ಓದಿಗೆ ಪ್ರೋತ್ಸಾಹಿಸುತ್ತಾರೆ. ಹೀಗಾಗಿ ಗೃಹಕೃತ್ಯದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಮನೆಯಲ್ಲಿ ಓದುತ್ತಲೇ ಇಂಟರ್ಮೀಡಿಯೇಟ್ ಶಿಕ್ಷಣವನ್ನು ಇಕ್ಬಾಲುನ್ನೀಸಾ ಪಡೆಯುತ್ತಾರೆ. ನಂತರ ಬಿ.ಎ. ಶಿಕ್ಷಣ ಪಡೆಯಲು ಮೈಸೂರಿನ ಮಹಾರಾಣಿ ಕಾಲೇಜಿಗೆ ಸೇರುತ್ತಾರೆ. ಇದೇ ಸಮಯದಲ್ಲಿ ಇವರ ಹಿರಿಯ ಮಗನೂ ಇಲ್ಲಿ ಓದುತ್ತಿರುತ್ತಾನೆ. 1930ರಲ್ಲಿ ಚಿನ್ನದ ಪದಕದೊಂದಿಗೆ ಇಕ್ಬಾಲುನ್ನೀಸಾ ಪದವಿ ಪಡೆಯುತ್ತಾರೆ. ಇದಾದ  ಎರಡು ವರ್ಷಗಳ ನಂತರ ಅವರ ಹಿರಿಯ ಮಗನೂ ಚಿನ್ನದ ಪದಕದೊಂದಿಗೆ ಅಲ್ಲಿ ಪದವಿ ಪಡೆಯುತ್ತಾನೆ. ಈ ವೇಳೆಗಾಗಲೇ ಅವರು ಏಳು ಮಕ್ಕಳ ತಾಯಿಯಾಗಿರುತ್ತಾರೆ. ಮದುವೆ ಮತ್ತು ಪರ್ದಾ – ಈ ಎರಡರಲ್ಲಿ ಇಕ್ಬಾಲುನ್ನೀಸಾ ಬಂಧಿಯಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಈಕೆಯು ತೋರಿಸಿದ ಈ ಸಾಧನೆ ಅದ್ಭುತ ದಾಖಲೆಯೇ ಹೌದು. ಆ ನಂತರ 1933ರಲ್ಲಿ ಮಗನೊಂದಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಲಂಡನ್ನಿನ ಲೀಡ್ಸ್ ವಿಶ್ವವಿದ್ಯಾಲಯಕ್ಕೆ ತೆರಳುತ್ತಾರೆ. ವಿದೇಶದ ಈ ಮೊದಲ ಅನುಭವ ಅವರು ಮುಂದೆ ಕೈಗೊಂಡ ಹಲವಾರು ಕಾರ್ಯಯೋಜನೆಗಳಿಗೆ ಸ್ಪೂರ್ತಿ ನೀಡುತ್ತದೆ. ಅದನ್ನು ಅವರು ಕರ್ತವ್ಯವೆಂದೇ ಭಾವಿಸುತ್ತಾರೆ. ಆ ಕಾಲಕ್ಕೆ ಬಹುಶಃ ಲೀಡ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಮೊದಲ ಭಾರತೀಯ ಮಹಿಳೆಯು ಇವರೇ ಇರಬೇಕು. 

 ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪದವಿ ಪಡೆದು ಹಿಂತಿರುಗಿದ ನಂತರ ಅವರು ಮಹಿಳಾ ಶಿಕ್ಷಣಕ್ಕೆ ಶ್ರಮಿಸಬೇಕೆಂದು ಸಂಕಲ್ಪ ತೊಡುತ್ತಾರೆ. ಸ್ವಲ್ಪ ಕಾಲ ಬೆಂಗಳೂರಿನ ವಾಣಿವಿಲಾಸ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಮಾಡಿದ ನಂತರ, ಉರ್ದು ಬಾಲಕಿಯರ ಮಾಧ್ಯಮಿಕ ಶಾಲೆಯನ್ನು ತೆರೆಯುತ್ತಾರೆ. ಹೆಣ್ಣು ಮಕ್ಕಳನ್ನು ಶಿಕ್ಷಿತರನ್ನಾಗಿಸಬೇಕೆಂಬುದೇ ಅವರ ಜೀವನದ ಗುರಿಯಾಗುತ್ತದೆ. ಮುಖ್ಯವಾಗಿ ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರ ಕಲ್ಯಾಣಕ್ಕಾಗಿ ದುಡಿದ ಇಕ್ಬಾಲುನ್ನೀಸಾ ಅನೇಕ ಕಲ್ಯಾಣಕಾರಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. 1938ರಲ್ಲಿ ಇಸ್ತಾನ್ಬುಲ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಲ್ಲಿಂದ ಹಿಂತಿರುಗಿ ಬಂದ ಮೇಲೆ ಅಖಿಲ ಭಾರತ ಮಹಿಳಾ ಸಮ್ಮೇಳನದ ಎಲ್ಲ ಸಭೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುತ್ತಾರೆ. ಮೈಸೂರು ಶಿಕ್ಷಣ ಸೇವಾವೃತ್ತಿಯಲ್ಲಿ ತೊಡಗಿಕೊಂಡರು. 

  ಇಕ್ಬಾಲುನ್ನೀಸಾ ಅವರು ತಮ್ಮ ಸಮುದಾಯದ ಮಹಿಳೆಯರಿಗಾಗಿ ಅದ್ಭುತ ಯೋಜನೆಗಳನ್ನು ಕೈಗೊಂಡರು. ಬೆಂಗಳೂರಿನಲ್ಲಿ ಮುಸ್ಲಿಂ ಮಹಿಳೆಯರಿಗಾಗಿ ಗೃಹ ಕೈಗಾರಿಕೆಯನ್ನು ಆರಂಭಿಸಿದರು. ಮುಸ್ಲಿಂ ಮಹಿಳಾ ಶಿಕ್ಷಕಿಯರ ಸಂಘವನ್ನು ಕಟ್ಟಿ ಅದರ ಅಧ್ಯಕ್ಷಳಾಗಿ ಕೆಲಸ ಮಾಡಿದರು. ಅವರ ಸಮುದಾಯದ ವಿರೋಧವನ್ನು ಲೆಕ್ಕಿಸದೆ, ಮುಸ್ಲಿಂ ಹೆಣ್ಣುಮಕ್ಕಳಿಗೆ ಗರ್ಲ್ ಗೈಡ್ ತರಬೇತಿಯನ್ನು ಆರಂಭಿಸಿ ಉತ್ಸಾಹದಿಂದ ಕಾರ್ಯನಿರ್ವಹಿಸಿದರು. ಶಿಕ್ಷಣ ವ್ಯವಸ್ಥೆಗಳಲ್ಲಿರುವ ದೋಷಗಳಿಂದಾಗಿಯೇ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೊರಗೆ ಹೋಗಿ ದುಡಿಯದಂತೆ ಮಾಡಿದೆ. ಆದ್ದರಿಂದ ಮಹಿಳೆಯರಿಗೆ ಕುಶಲತೆಯ ಕಸುಬುಗಳನ್ನು ಪರಿಚಯಿಸಿ ಅವರಲ್ಲಿ ಕೌಶಲ್ಯವನ್ನು ಬೆಳೆಸಬೇಕು. ಬಾಲ್ಯ ವಿವಾಹವು ಮಹಿಳೆಯರನ್ನು ಕುಟುಂಬದ ಜವಾಬ್ದಾರಿಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ದೂಡುತ್ತದೆಯಾದ್ದರಿಂದ ಅದನ್ನು ಪ್ರತಿಭಟಿಸಿದರು. 
 
 ಸುಧಾರಣಾವಾದಿ ಚಿಂತನೆ

  ಈ ಎಲ್ಲ ಸಾಮಾಜಿಕ ಹೋರಾಟಗಳಿಗೆ ಅವರು ಮುಸ್ಲಿಂ ಪತ್ರಿಕಾ ಮಾಧ್ಯಮವನ್ನು ಬಳಸಿಕೊಂಡರು. ಅವರ ಮುಖ್ಯ ಉದ್ದೇಶ ಮುಸ್ಲಿಂ ಮಹಿಳೆಯರನ್ನು ಅಜ್ಞಾನ ಮತ್ತು ಕಂದಾಚಾರದ ಕೂಪದಿಂದ ಮೇಲೆತ್ತುವುದೇ ಆಗಿತ್ತು. ಈ ಎಲ್ಲ ಚಟುವಟಿಕೆಗಳಿಗಾಗಿ ಅವರ ಹಿಂದಿನವರು ಎದುರಿಸಿದಂತೆ ಚಾರಿತ್ರ್ಯವಧೆ, ಟೀಕೆ ಮತ್ತು ಮತಾಂಧ ಕಂದಾಚಾರದ ಕಹಿ ಹೊರೆಯನ್ನು ಅವರು ಅನುಭವಿಸಲೇಬೇಕಾಗಿ ಬಂತು. ಪರ್ದಾ ಪದ್ಧತಿಯ ಪಂಜರದಿಂದ ಹೊರಕ್ಕೆ ಬಂದ ಸಂತಸದ ಅನುಭವವನ್ನು ಅನುಭವಿಸುತ್ತಿರುವ ಯುರೋಪಿನ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ತಮ್ಮ ಲೇಖನಗಳಲ್ಲಿ ಹಂಚಿಕೊಂಡಿದ್ದಾರೆ. ಟರ್ಕಿಯ ಹೆಣ್ಣುಮಕ್ಕಳ ಉದಾಹರಣೆಯನ್ನು ಹಂಚಿಕೊಳ್ಳುತ್ತಾರೆ. ತಮ್ಮ ಬದುಕಿನ ಒಂದು ನಿರ್ಣಾಯಕ ಘಟ್ಟದಲ್ಲಿ ಬುರ್ಖಾ ತೊಡುವುದನ್ನು ತಿರಸ್ಕರಿಸಿ, ಭಾರತೀಯ ಮುಸ್ಲಿಂ ಸಮಾಜದಲ್ಲಿ ಮಹಿಳೆಗೆ ಸಮಾನ ಸಾಮಾಜಿಕ ಸ್ಥಾನಮಾನಗಳಿಗಾಗಿ ಮತ್ತು ಶಿಕ್ಷಣಾವಕಾಶಕ್ಕಾಗಿ ಅನೇಕ ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದರು. ಮುಸ್ಲಿಂ ಸಮಾಜದಲ್ಲಿದ್ದ ಪರ್ದಾ ಪದ್ಧತಿ, ಬಹುಪತ್ನಿತ್ವ ಮತ್ತು ಶಿಕ್ಷಣಾವಕಾಶವಿಲ್ಲದ್ದು ಇವುಗಳ ಬಗ್ಗೆ ಆಗಾಗ್ಗೆ ಪತ್ರಿಕೆಗಳಿಗೆ ಬರೆದಿದ್ದ ಲೇಖನಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ನೀಡಿದ್ದ ಉಪನ್ಯಾಸಗಳಲ್ಲಿ ಮುಖ್ಯವಾದವುಗಳನ್ನು ಆಯ್ಕೆ ಮಾಡಿ ಇಕ್ಬಾಲುನ್ನೀಸಾ “ಬದಲಾಗುತ್ತಿರುವ ಭಾರತ: ಮುಸ್ಲಿಂ ಮಹಿಳೆಯೊಬ್ಬಳ ವಿಚಾರಗಳು” ಎಂಬ ತಮ್ಮ ಮೊದಲ ಸುಧಾರಣಾವಾದಿ ಚಿಂತನೆಯ ಕೃತಿಯನ್ನು 1940ರಲ್ಲಿ ಪ್ರಕಟಿಸಿದರು. ಇದು ಬೆಂಗಳೂರಿನ ಹೊಸಳ್ಳಿ ಪ್ರೆಸ್‍ನಲ್ಲಿ ಮುದ್ರಣವಾಗಿದೆ. ಈ ಪುಸ್ತಕದ ಹಲವು ಲೇಖನಗಳು ದಿ ಡೆಕ್ಕನ್ ಟೈಮ್ಸ್, ಮದ್ರಾಸ್; ದಿ ಸ್ಟಾರ್ ಆಫ್ ಇಸ್ಲಾಂ, ಕೊಲಂಬೋ; ದಿ ಹುರ್ರಿಕೇನ್, ಲಾಹೋರ್ ಮತ್ತು ದಿ ಡೈಲಿ ಪೋಸ್ಟ್, ಬೆಂಗಳೂರು; ದಿ ಪಂಜಾಬ್ ರೆವ್ಯೂ, ಲಕ್ನೋ; ದಿ ಈಸ್ಟರ್ನ್ ಟೈಮ್ಸ್, ಲಾಹೋರ್ - ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

 ಅವರು ತಮ್ಮ ಲೇಖನಗಳಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಸಮಾಜದ ಸಂಕುಚಿತ ಮನಃಸ್ಥಿತಿಯನ್ನು ಎತ್ತಿ ತೋರಿಸಿ ಅವರು ಪಿತೃಶಾಹಿಯನ್ನು ಅತ್ಯಂತ ಕಟುವಾಗಿ ಟೀಕಿಸುತ್ತಾರೆ. ಈ ಸಮಾಜ ಹೆಣ್ಣಿಗೆ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತಾರತಮ್ಯ ಭಾವ ತೋರಿಸುತ್ತದೆ. ಮಹಿಳೆಯರ ಭೇದಭಾವ ದಿಢೀರನೆ ಒಂದು ದಿನದಲ್ಲಿ ಮೂಡಿದ್ದಲ್ಲ. ಪುರುಷರನ್ನು ಮೇಲ್ದರ್ಜೆಯವರೆಂದು ಮಹಿಳೆಯರನ್ನು ಕೆಳದರ್ಜೆಯವರೆಂದು ಪರಿಭಾವಿಸುವುದಕ್ಕೆ ಕಾರಣ ಚರಿತ್ರೆಯ ಬೇರುಗಳಲ್ಲಿದೆ, ಎನ್ನುತ್ತಾರೆ. ಸ್ತ್ರೀಯರನ್ನು ಕುರಿತಂತೆ ಇಸ್ಲಾಮಿಕ್ ಧರ್ಮ ಹೇಳುವ ತಾತ್ವಿಕತೆಗೂ ವಾಸ್ತವದಲ್ಲಿ ಇರುವ ಆಚರಣೆಗೂ ಇರುವ ಭೇದವೇ ಮುಸ್ಲಿಂ ಸಮುದಾಯದ ಅವನತಿಗೆ ಕಾರಣ ಎಂದು ಇಕ್ಬಾಲುನ್ನೀಸಾ ಅಭಿಪ್ರಾಯಪಡುತ್ತಾರೆ. ಖುರಾನಿನಲ್ಲಿ ಮಹಿಳೆಗೆ ಮೊಸಿನಾ ಎಂಬ ಹೆಸರು ಕೊಡಲಾಗಿದೆ. ಮೊಸಿನಾ ಎಂದರೆ ‘ಸೈತಾನನ ವಿರುದ್ಧ ನಿಂತ ಕಲ್ಲಿನ ಕೋಟೆ, ಒಳ್ಳೆಯ ಗುಣಗಳ ಮಾರ್ಗದರ್ಶಿ ದೀಪಸ್ಥಂಭ, ಆಮಿಷಗಳ ಅಲೆಗಳಲ್ಲಿ ಮುಳುಗುವ ನೌಕಾಘಾತದಿಂದ ಪುರುಷರನ್ನು ರಕ್ಷಿಸುವಾಕೆ’. ಹೆಣ್ಣಿಗೂ ಗಂಡಸಿಗಿರುವಂತೆ ಸಮಾನ ಹಕ್ಕುಗಳಿವೆ. ಅವಳು ಗಂಡಸಿಗಿಂತ ಕೀಳಲ್ಲ. ಗಂಡಸಿಗಿರುವಂತೆ ಅವಳಿಗೂ ಅಂಗಾಂಗಗಳು, ಮನಸ್ಸು, ಬುದ್ಧಿ, ಯೋಚಿಸುವ ಶಕ್ತಿ, ಎಲ್ಲವೂ ಇವೆ. ಇಬ್ಬರಲ್ಲಿಯೂ ಏನಾದರೂ ಕುಂದುಕೊರತೆಗಳಿದ್ದರೆ, ಅದನ್ನು ಪರಸ್ಪರ ಪೂರೈಸಿಕೊಳ್ಳಬೇಕು. ಆದರೆ ಜೀವನದ ವಸ್ತುಸ್ಥಿತಿ ಏನಾಗಿದೆ? ಅವಳ ಸಾಮಾಜಿಕ, ಆರ್ಥಿಕ, ದೈಹಿಕ ಮತ್ತು ಬೌದ್ಧಿಕ ಸ್ಥಿತಿಗತಿಗಳು ಏನಾಗಿವೆ? ಎಲ್ಲೋ ಕೆಲವು ಬೆರಳೆಣಿಕೆಯ ವಿದ್ಯಾವಂತ ಮತ್ತು ಅಧಿಕಾರಿಗಳ ಕುಟುಂಬದ ಮಹಿಳೆಯರನ್ನು ಬಿಟ್ಟರೆ ಉಳಿದೆಲ್ಲ ಹೆಂಗಸರ ಸ್ಥಿತಿ ಶೋಚನೀಯವಾಗಿದೆ. ಸಮಾಜದ ಇತರರಿಂದ ಅವರನ್ನು ಪ್ರತ್ಯೇಕಗೊಳಿಸಲಾಗಿದೆ. ನಾಲ್ಕು ಗೋಡೆಗಳೊಳಗೆ ಬಂಧಿಯಾದ ಅವರಿಗೆ ಜಗತ್ತಿನ ವ್ಯಾಪಾರಗಳ ಮಾಹಿತಿ ಮತ್ತು ಜ್ಞಾನವು ದೊರೆಯದಂತೆ ಮಾಡಲಾಗಿದೆ. ಆದ್ದರಿಂದ ಶಿಕ್ಷಣವೊಂದೇ ಅವಳನ್ನು ಈ ಸ್ಥಿತಿಯಿಂದ ಹೊರಗೆ ತರಲು ಸಾಧ್ಯ ಎಂಬುದು ಅವರ ಗಟ್ಟಿ ನಿಲುವಾಗಿತ್ತು. 

‘ಪರ್ದಾ ಮತ್ತು ಬಹುಪತ್ನಿತ್ವ: ಭಾರತೀಯ ಮುಸ್ಲಿಂ ಕುಟುಂಬವೊಂದರಲ್ಲಿ ಬದುಕು’ ಎಂಬ ಕಾದಂಬರಿ ಅಂದಿನ ಮುಸ್ಲಿಂ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿದ್ದ ಶೋಷಣೆಯನ್ನು ಹಾಗೂ ಪ್ರಬಲವಾಗಿದ್ದ ಪುರುಷ-ಕೇಂದ್ರಿತ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿರುವ ಈ ಕಾದಂಬರಿ. ಇದನ್ನು ಬರೆದುದಕ್ಕಾಗಿ ಇಕ್ಬಾಲುನ್ನೀಸಾ ಈ ಸಮಾಜದ ಅನೇಕ ಪ್ರತಿಷ್ಟಿತ ವ್ಯಕ್ತಿಗಳ ಅವಕೃಪೆಗೆ ಪಾತ್ರರಾದರು. ಒಮ್ಮೆ ಕೆಲವು ವ್ಯಕ್ತಿಗಳು ಒಂದುಗೂಡಿ ಇವರನ್ನು ಜೀವಂತವಾಗಿ ಸುಡಬೇಕೆಂದು ಸಂಚು ಹೂಡಿದ್ದರು. ಬ್ರಿಟಿಷ್ ಇಂಡಿಯಾದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಬರೆದ ಒಂದು ದೀರ್ಘ ಕಾದಂಬರಿಯೆಂಬ ಕಾರಣಕ್ಕೂ ಇದು ವಿಶಿಷ್ಟವಾಗಿದೆ. ಇಂಗ್ಲಿಷ್ ಬಾರದ ಮಹಿಳೆಯರನ್ನು ಕುರಿತು ಇಂಗ್ಲಿಷ್‍ನಲ್ಲಿ ಈ ಕಾದಂಬರಿಯನ್ನು ಬರೆದಿರುವುದೂ ಒಂದು ಬಂಡಾಯದ ಕ್ರಿಯೆಯಾಗಿದೆ. 
 
ಒಂದು ಮುಸ್ಲಿಂ ಕುಟುಂಬದ ಮೂರು ತಲೆಮಾರಿಗೆ ಸೇರಿದ ಜನರ ಬದುಕಿನ ಕತೆ ಇಲ್ಲಿ ತೆರೆದುಕೊಳ್ಳುತ್ತದೆ. ಈ ಕಾದಂಬರಿಯ ಕಥಾನಕವು ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ಮುಸ್ಲಿಂ ಕುಟುಂಬವೊಂದರ ಮನೆಯ ಆಗುಹೋಗುಗಳನ್ನು ಪರಿಚಯ ಮಾಡಿಕೊಡುತ್ತಲೇ, ಆ ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಚಿತ್ರಣವೂ ಆಗಿಬಿಡುತ್ತದೆ. ಇಲ್ಲಿ ಕುಟುಂಬವೊಂದರ ಜನಜೀವನ, ಸಂಪ್ರದಾಯ, ನಂಬಿಕೆ, ಕಟ್ಟುಕಟ್ಟಳೆ, ಆಚರಣೆ, ಆಲೋಚನೆ – ಎಲ್ಲವನ್ನೂ ಹೇಳುತ್ತಲೇ ಆ ಕುಟುಂಬದ ಏಳುಬೀಳುಗಳನ್ನು ಚಿತ್ರಿಸುತ್ತದೆ. ಈ ಎಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗುವುದು ‘ದಿಲ್ಖುಶ್’ ಎಂಬ ನಗರದ ಮಧ್ಯಭಾಗದಲ್ಲಿರುವ ಒಂದು ದೊಡ್ಡ ಬಂಗಲೆ. ಇದೇ ಒಂದು ಪ್ರಮುಖ ಪಾತ್ರವೋ ಎಂದೆನಿಸಿಬಿಡುತ್ತದೆ. ಈ ಬಂಗಲೆಯೊಳಗೆ ವಾಸವಾಗಿರುವ ಶ್ರೀಮಂತ ಜನರಲ್ಲದೆ, ಅವರಿಗೆ ಆನುಷಂಗಿಕವಾಗಿ ಅಂಟಿಕೊಂಡಿರುವ ನೌಕರವರ್ಗದ ಜನಜೀವನವೂ ಇಲ್ಲಿ ಪ್ರಕಟವಾಗುತ್ತದೆ. ಈ ಮನೆಯ ಒಡೆಯ ಜಾಗೀರುದಾರನಾಗಿದ್ದ ಉಮರ್‍ನ ಸಾವಿನೊಂದಿಗೆ ಕಾದಂಬರಿಯ  ಆರಂಭವು ಶುರುವಾದರೆ, ಕಾದಂಬರಿಯ ಅಂತ್ಯವು ಅವನ ಮಗನಾದ ಕಬೀರ್‍ನ ಸಾವಿನೊಂದಿಗೆ ಮುಕ್ತಾಯವಾಗುತ್ತದೆ. ಈ ದೀರ್ಘ ಅವಧಿಯಲ್ಲಿ ಅವರಿಗೆ ಸಂಬಂಧಪಟ್ಟ ಹೆಣ್ಣುಗಳ ಗೋಳು ಮತ್ತು ವ್ಯಥೆಯ ಕತೆಯೇ ಈ ಕಾದಂಬರಿಯ ಹೂರಣವಾಗಿದೆ. 

ಪುರುಷಪ್ರಧಾನ ಸಮಾಜದಲ್ಲಿ ಪುರುಷನ ಕಟ್ಟಳೆಯೊಳಗೆ ಉಸಿರಾಡಬೇಕಾದ ಹೆಣ್ಣಿಗೆ ಸ್ವತಂತ್ರ ವ್ಯಕ್ತಿತ್ವವೇ ಇಲ್ಲ. ಅವಳು ಏನಿದ್ದರೂ ಗಂಡನ ವ್ಯಕ್ತಿತ್ವಕ್ಕೆ ಪೂರಕವಾಗಿ ಬದುಕಬೇಕಾದವಳು. ಕಾದಂಬರಿಯ ಆರಂಭದಲ್ಲಿಯೇ ಹೇಳುವ, “ಪ್ರತಿಯೊಂದು ವಿಷಯದಲ್ಲೂ ಪುರುಷನೇ ಮಹಿಳೆಗಿಂತ ಶ್ರೇಷ್ಠ ಎಂಬುದು ಸರ್ವ ವಿದಿತವಾದ ಸತ್ಯ. ಅವನು ಪೃಥ್ವಿಯ ಮೇಲೆ ದೇವರ ಪ್ರತಿನಿಧಿಯಾಗಿ ಜನಿಸುತ್ತಾನೆ ಮತ್ತು ಹಾಗೆ ದೈವಾಂಶದ ವರ ಹೊತ್ತು ಬಂದಿರುವುದರಿಂದಲೇ ಎಲ್ಲರಿಂದ ಅವನು ಬಯಸುವ ಗೌರವ ಮತ್ತು ವಿಧೇಯತೆಗೆ ಅರ್ಹನಾಗಿಬಿಡುತ್ತಾನೆ! ಹೆಣ್ಣಿನಿಂದ ಕೇವಲ ಪಡೆದುಕೊಳ್ಳುವುದಷ್ಟೇ ತನ್ನ ಜನ್ಮಸಿದ್ಧ ಹಕ್ಕೆಂದು ಭಾವಿಸಿರುವುದರಿಂದ ಒಂದು ಸಣ್ಣ ಕೃತಜ್ಞತಾ ಭಾವ ಅಥವಾ ಮೆಚ್ಚುಗೆಯ ನುಡಿಯನ್ನೂ ಅವನಿಂದ ನಿರೀಕ್ಷಿಸುವ ಹಾಗಿಲ್ಲ.” ಈ ವಿಚಾರಧಾರೆಯೇ ಇಡೀ ಕಾದಂಬರಿಯುದ್ಧಕ್ಕೂ ಧ್ವನಿಸುತ್ತಾ ಹೋಗುತ್ತದೆ.  

ಕಾದಂಬರಿಯ ಮುಖ್ಯ ಪಾತ್ರಗಳಾದ ಉಮರ್ ಮತ್ತು ಕಬೀರ್ ಪ್ರತಿನಿಧಿಸುವ ಪಿತೃಶಾಹಿಯ ಕ್ರೌರ್ಯದ ಹಲವಾರು ಮುಖಗಳು ಎಳೆ ಎಳೆಯಾಗಿ ಇಲ್ಲಿ ಬಿಚ್ಚಿಕೊಳ್ಳುತ್ತವೆ. ಕಾದಂಬರಿಯ ಶೀರ್ಷಿಕೆಯೇ ಹೇಳುವಂತೆ ಮದುವೆ ಮತ್ತು ಪರ್ದಾ, ಇವೆರಡೂ ಇಲ್ಲಿ ಹೆಣ್ಣಿನ ಬದುಕಿನ ನಿರ್ಣಾಯಕ ವಸ್ತುಗಳಾಗಿವೆ. ಪರ್ದಾ ಅಡಿಯಲ್ಲಿ ಮುಚ್ಚಿಟ್ಟಿರುವ ಹೆಣ್ಣಿಗೆ ಸಾರ್ವಜನಿಕ ಜೀವನವನ್ನೇ ಇಲ್ಲವಾಗಿಸುವುದರ ಮೂಲಕ ಅವರನ್ನು ಮೂಢನಂಬಿಕೆ ಮತ್ತು ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿಸಿಡುವುದು ಸುಲಭವಾಗಿದೆ. ತಾವೇ ಸ್ವತಃ ಬಂಧನವನ್ನು ಅನುಭವಿಸಿದ್ದರೂ ಅವಕಾಶ ದೊರೆತಾಗ ಈ ಹೆಣ್ಣುಮಕ್ಕಳೂ ಕೂಡ ಹೇಗೆ ಪಿತೃಶಾಹಿಯ ಮೌಲ್ಯಗಳನ್ನು ಅಂತರ್ಗತಗೊಳಿಸಿಕೊಂಡು ಹೆಣ್ಣಿನ ಶೋಷಣೆಯಲ್ಲಿ ತೊಡಗಬಲ್ಲರು ಎಂಬುದನ್ನು ಉಮರ್‍ನ  ಹೆಂಡತಿ ಜುಹ್ರಾಳ ಪಾತ್ರದಲ್ಲಿ ಇಲ್ಲಿ ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಪುರುಷ ಕೇಂದ್ರಿತ ಕುಟುಂಬ ವ್ಯವಸ್ಥೆಯಲ್ಲಿ ವ್ಯಕ್ತಿಗಳು ಬದಲಾದರೂ ಅಧಿಕಾರಸ್ಥಾನಗಳು ಹಾಗೆಯೇ ಮುಂದುವರಿಯುತ್ತವೆ. 

ಕಾದಂಬರಿಯ ಶೀರ್ಷಿಕೆಯಲ್ಲಿರುವ ‘ಪರದಾ’ ಮುಸ್ಲಿಂ ಹೆಣ್ಣಿನ ಮೈಮುಚ್ಚುವ ಬಟ್ಟೆ ಮಾತ್ರವಲ್ಲ; ಅವಳನ್ನು ಶಿಕ್ಷಣ, ಜ್ಞಾನ ಮತ್ತು ಹೊರಪ್ರಪಂಚದ ಆಗುಹೋಗುಗಳಿಂದ ಮುಚ್ಚುವ, ಮನೆಗೇ ಕಟ್ಟಿಹಾಕುವ ರೂಪಕವಾಗಿ ವಿಶೇಷ ಅರ್ಥ ಪಡೆಯುತ್ತದೆ. ಹಾಗೆಯೇ ‘ಪಾಲಿಗಮಿ’ ಕೇವಲ ಒಂದು ವಿವಾಹ ವ್ಯವಸ್ಥೆ ಮಾತ್ರವಲ್ಲದೆ, ಹೆಣ್ಣಿಗೆ ಯಾವುದೇ ಆಯ್ಕೆಯಿಲ್ಲದೆ, ಸ್ವಂತ ಅಸ್ತಿತ್ವವೂ ಇಲ್ಲದೆ, ಮನೆಚಾಕರಿ ಮಾಡುವ ಮತ್ತು ಮಕ್ಕಳನ್ನು ಹೆರುವ ಯಂತ್ರದಂತೆ ಕಾಣುವ ವ್ಯವಸ್ಥೆಯ ರೂಪಕವಾಗಿಯೂ ಇಲ್ಲಿ ಚಿತ್ರಿತವಾಗಿದೆ. ಮುಸ್ಲಿಂ ಹೆಣ್ಣುಮಕ್ಕಳ ನೋವಿಗೆ ಈ ಎರಡೂ ಪದ್ಧತಿಗಳು ಕಾರಣವೆಂಬುದನ್ನು ತಿಳಿಸುತ್ತಾ ಅದರಿಂದ ಹೊರಬರುವುದಕ್ಕೆ ಶಿಕ್ಷಣವು ಮುಖ್ಯ ಪರಿಹಾರಹಾರವಾಗಬಹುದೆಂಬುದನ್ನು ಮಕ್ಬೂಲಳ ಪಾತ್ರದ ಮೂಲಕ ಪ್ರಕಟಪಡಿಸುವ ಈ ಕಾದಂಬರಿಯ ಗುರಿಯು ಸುಧಾರಣೆಯ ಆಶಯವನ್ನು ತನ್ನ ಒಡಲೊಳಗೆ ಧ್ವನಿಸುತ್ತದೆ. ಆಧುನಿಕ ಶಿಕ್ಷಣ ಪಡೆದದ್ದರಿಂದ ಚಿಂತನಾಶಕ್ತಿಯನ್ನು ಬೆಳೆಸಿಕೊಂಡ ಇಲ್ಲಿನ ಮಕ್ಬೂಲ್ ಪಾತ್ರ ತಂದೆಯ ಅಸಹಾಯಕತೆಯ ಕಾರಣವಾಗಿ ಕಬೀರನ ಮೂರನೆಯ ಪತ್ನಿಯಾಗಲು ಒಪ್ಪಿದರೂ ಪರ್ದಾ ಮತ್ತು ಬಹುಪತ್ನಿತ್ವ ಪದ್ಧತಿಯ ಬಗ್ಗೆ ತಿರಸ್ಕಾರವನ್ನು ವ್ಯಕ್ತಪಡಿಸುತ್ತಲೇ ಗಂಡನನ್ನು ಹಂಗಿಸುತ್ತಾ ಇರುತ್ತಾಳೆ. ಗಂಡ ಕೊಟ್ಟ ದೊಡ್ಡ ಮೆಹರ್ ಅವಳಿಗೆ ಕೊಂಚ ಆರ್ಥಿಕ ಸ್ವಾತಂತ್ರ್ಯವನ್ನು ಕೊಟ್ಟರೂ ಅವಳು ಗಂಡನ ಮನೆಯನ್ನು ಸೆರೆಮನೆಯಂದೇ ಭಾವಿಸುತ್ತಾಳೆ. ತನ್ನಂತಹ ಮುಸ್ಲಿಂ ಮಹಿಳೆಗೆ ತಂದೆಯ ಮನೆಯಿಂದ ಗಂಡನ ಮನೆಗೆ ಬರುವುದು ‘ಅರೆ ಕಾರಾಗೃಹದಿಂದ ಪೂರ್ಣ ಪ್ರಮಾಣದ ಕಾರಾಗೃಹಕ್ಕೆ ಬಂದ ನಂತರ ಬದುಕಿನಲ್ಲಿ ಯಾವ ಘನ ಉದ್ದೇಶವೂ ಇರಲು ಸಾಧ್ಯವೇ ಇಲ್ಲ’ ಎನ್ನುವ ವಿಷಾದ ಅವಳ ಮನಸ್ಸನ್ನು ಆವರಿಸುತ್ತದೆ. ಗಂಡ ಸತ್ತ ನಂತರವೇ ಅವಳಿಗೆ ಈ ಸೆರೆಮನೆಯಿಂದ ಮುಕ್ತಿ ಸಿಗುತ್ತದೆ. ಅತ್ತೆಯ ಮನೆಯನ್ನು ಬಿಟ್ಟು ತವರಿಗೆ ಹಿಂತಿರುಗುತ್ತಾಳೆ. 

 ಇತ್ತೀಚೆಗೆ ಮುಸ್ಲಿಂ ಹೆಣ್ಣುಮಕ್ಕಳು ತೊಡುವ ‘ಹಿಜಾಬ್’ ಎನ್ನುವ ತುಂಡು ವಸ್ತ್ರ ಸಮಾಜದಲ್ಲಿ ಒಂದು ಸಮರದ ವಾತಾವರಣವನ್ನು ಸೃಷ್ಟಿಮಾಡಿ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಎರವಾದದ್ದನ್ನು ನಾವು ನೋಡಿದ್ದೇವೆ. ಕೋಮುವಾದಿ ಮತ್ತು ಪಿತೃಶಾಹಿ ಪ್ರಭುತ್ವ ಈ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣವನ್ನು ಕದಿಯುತ್ತಿರುವಾಗ ಈ ಸಮಸ್ಯೆಗೆ ಪರಿಹಾರ ಹೇಗೆ? ‘ಹಿಜಾಬ್’ಅನ್ನು ತಮ್ಮ ಅಸ್ಮಿತೆಯನ್ನಾಗಿ ಮಾಡಿಕೊಂಡು ಶಿಕ್ಷಣದಿಂದ ವಂಚಿತರಾಗುತ್ತಿರುವ ಆ ಹೆಣ್ಣುಮಕ್ಕಳಿಗೆ ಕಣ್ತೆರೆಸುವುದು ಹೇಗೆ? ಎನ್ನುವ ವಿಷಯ ಪ್ರಜ್ಞಾವಂತರನ್ನೆಲ್ಲ ಕಾಡಿದ್ದು, ನಿಜ. ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಮುಸ್ಲಿಂ ಮಹಿಳೆ ಇಕ್ಬಾಲುನ್ನೀಸಾ ಹುಸೇನ್. ಇಪ್ಪತ್ತನೆಯ ಶತಮಾನದ ಮೂವತ್ತರ ದಶಕದಲ್ಲಿಯೇ ಸುಶಿಕ್ಷಿತ ಮಹಿಳೆಯೊಬ್ಬಳು ಇಂಗ್ಲಿಷ್ ಶಿಕ್ಷಣ ಪಡೆದು, ದೇಶ ವಿದೇಶ ಸುತ್ತಿ ಬಂದ ನಂತರದಲ್ಲಿ ತನ್ನ ಸಮುದಾಯದವರ ಸಮಸ್ಯೆಯ ವಸ್ತುವನ್ನಾಧರಿಸಿದ ಈ ಕಾದಂಬರಿಯನ್ನು 1944ರಲ್ಲಿಯೇ ಇಂಗ್ಲಿಷಿನಲ್ಲಿ ಬರೆದರೂ ಇಲ್ಲಿಯವರೆಗೂ ಅವರು ಪ್ರಚಾರಕ್ಕೆ ಬರದೇ ಇರುವುದು ಒಂದು ಕೌತುಕವಾಗಿದೆ. ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ ದಾದಾ ಪೀರ್ ಜೈಮನ್,ಪ್ರಕಟಿಸಿರುವ ಛಂದ ಪ್ರಕಾಶನದ ವಸುಧೇಂದ್ರ 
ಮತ್ತು ವಿವರವಾದ ಮುನ್ನುಡಿಯಲ್ಲಿ ಈ ಲೇಖಕಿಯನ್ನು ಪರಿಚಯಮಾಡಿಕೊಟ್ಟಿರುವ ಸಿ.ಎನ್.ರಾಮಚಂದ್ರನ್ ಈ ಕಾರಣಕ್ಕಾಗಿ  ಅಭಿನಂದನಾರ್ಹರು. 
  • ಎನ್. ಗಾಯತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *