Uncategorizedಪುಸ್ತಕ ಸಮಯ

ಪುಸ್ತಕ ಸಮಯ/ ಆಫ್ರಿಕನ್ ಅಮೆರಿಕನ್ ಬದುಕಿನ ದರ್ಶನ ಕೆನ್ನೀಲಿ – ಎಲ್ ಸಿ ಸುಮಿತ್ರಾ

ಕೆನ್ನೀಲಿ – ಪ್ರಸಿದ್ಧ ಲೇಖಕಿ ಆಲೀಸ್ ವಾಕರ್ ಅವರ ” ಇನ್ ಸರ್ಚ್ ಅಫ್ ಅವರ್ ಮದರ್ಸ್ ಗಾರ್ಡನ್ಸ್” ಪುಸ್ತಕವನ್ನು ಎಂ. ಆರ್. ಕಮಲ `ಕೆನ್ನೀಲಿ’ ಎಂದು ಅನುವಾದಿಸಿದ್ದಾರೆ..ಸ್ತ್ರೀಪರ ಚಿಂತನೆಯ ಲೇಖನಗಳು ಇವು. ಕೆಲವು ಲೇಖನಗಳು ಆತ್ಮಕತೆಯ ವಿವರಗಳನ್ನು ಹೊಂದಿವೆ. “ಇವು ಜಗತ್ತಿನ ಎಲ್ಲ ಹೆಣ್ಣು ಮಕ್ಕಳ ಕಥೆಗಳು ಎನಿಸಿದ್ದರಿಂದ ಈ ಪುಸ್ತಕವನ್ನು ಅನುವಾದಿಸಬೇಕೆನಿಸಿತು. ಈ ಪುಸ್ತಕಕ್ಕೆ ಇನ್ನೂ ಹಲವಾರು ಆಯಾಮಗಳಿದ್ದರೂ ವೈವಿಧ್ಯಮಯ ವಿಷಯಗಳಿದ್ದರೂ ಅದು ಪ್ರಧಾನವಾಗಿ ಬದುಕನ್ನು ಹಸನಾಗಿಸಲು ಹೆಣ್ಣು ಮಕ್ಕಳು ನಡೆಸಿದ ಹೋರಾಟವನ್ನೇ ಹೇಳುತ್ತದೆ . 500 ಪುಟಗಳಿರುವ ಪುಸ್ತಕದ ಕೆಲವು ಭಾಗವನ್ನು ಮಾತ್ರ ಇಲ್ಲಿ ಅನುವಾದಿಸಿದ್ದೇನೆ” ಎಂದು ಲೇಖಕಿ ತಮ್ಮ ಮೊದಲ ಮಾತಿನಲ್ಲಿ ಹೇಳಿದ್ದಾರೆ.

“I’m poor, Black, I may even be ugly, but dear God, I’m here! I’m here!” ಇವು ಆಲಿಸ್ ವಾಕರ್ ಬರೆದ ಕಲರ್ ಪರ್ಪಲ್ ಪುಸ್ತಕದ ಪ್ರಸಿದ್ಧ ಸಾಲುಗಳು. ಅಮೆರಿಕದ ಜಾರ್ಜಿಯಾ ಪ್ರಾಂತ್ಯದ ಸಣ್ಣ ಊರಿನಲ್ಲಿ ಕಪ್ಪು ತಂದೆ ತಾಯಿಗಳ ಮಗಳಾಗಿ ಹುಟ್ಟಿದ ಆಲಿಸ್ ಳ ಬಾಲ್ಯ, ಆ ಮೇಲೆ ಯಹೂದಿ ಯುವಕನನ್ನು ಮದುವೆಯಾಗಿ, ರೆಬೆಕ್ಕ ಎಂಬ ಮಗಳನ್ನು ಪಡೆದಿದ್ದು ಹತ್ತು ವರ್ಷಗಳಲ್ಲಿ ಮುರಿದ ಮದುವೆ , ಆಫ್ರಿಕನ್ ಅಮೆರಿಕನ್ ಲೇಖಕಿ, ಹೋರಾಟಗಾರ್ತಿ ಆಗಿ ಪಡೆದ ಅನುಭವಗಳು ಪತ್ರ ರೂಪದಲ್ಲಿ, ಲೇಖನ ರೂಪದಲ್ಲಿ ಈ ಕೃತಿಯಲ್ಲಿವೆ.

`ತಾಯಂದಿರ ತೋಟಗಳ ಅರಸುತ್ತಾ’ ಎಂಬ ಅಧ್ಯಾಯದಲ್ಲಿ, “ಆದ್ದರಿಂದ ನಮ್ಮ ತಾಯಂದಿರು ಮತ್ತು ಅಜ್ಜಿಯರು ತಮ್ಮೊಳಗಿನ ಸೃಜನಶೀಲತೆಯ ಕಿಡಿಯನ್ನು , ಅವುಗಳನ್ನು ನೋಡುವ ಭರವಸೆ ಇರದಿದ್ದರೂ ಹೂವಿನ ಬೀಜವನ್ನು ಅಥವಾ ಓದಲು ಸಾಧ್ಯವಾಗದಿದ್ದರೂ ಅಂಟಿಸಿಟ್ಟ ಪತ್ರವನ್ನು ನಮಗೆ ನೀಡಿದ್ದಾರೆ” ಎಂದು ಹೇಳುತ್ತಾ ತನ್ನ ತಾಯಿಯ ಬದುಕನ್ನು ಈ ಪುಸ್ತಕದಲ್ಲಿ ಚಿತ್ರಿಸಿದ ಕಾರಣವನ್ನು ಹೇಳುತ್ತಾರೆ. ಆಲಿಸ್ ತಾಯಿ ತನ್ನ ಹೊಲದ ಕೆಲಸದ ಜೊತೆಗೆ ಮನೆಯಲ್ಲಿ ಮನೆ ಅಂಗಳದಲ್ಲಿ ಹಲವಾರು ಬಗೆಯ ಗಿಡಗಳನ್ನು ಬೆಳೆಸಿದ್ದಳು. ” ಹೂಗಳೊಂದಿಗೆ ತಾಯಿಗಿದ್ದ ಸೃಜನಶೀಲತೆ ನನ್ನ ಬಡತನವನ್ನು ಸೂರ್ಯಕಾಂತಿ ಗುಲಾಬಿ ಡೇಲಿಯ ವೆಬಿನಾ ಹೀಗೆ ಲೆಕ್ಕವಿರದಷ್ಟು ಹೂಗಳೆಂಬ ಪರದೆಯ ಮೇಲೆ ನೋಡುವಂತೆ ಮಾಡಿತು. ಅವ್ವ ಎಂತಹ ಕಲ್ಲು ಜರಡಿಯ ನೆಲದ ಮೇಲೆ ಕಾಲಿಟ್ಟರು ಅದನ್ನು ತೋಟವನ್ನಾಗಿಸುತ್ತಿದ್ದಳು. ಅದು ಅದ್ಭುತ ಬಣ್ಣಗಳ ತೋಟ. ವಿನ್ಯಾಸವಂತು ಅಪೂರ್ವ. ಸೃಜನಾತ್ಮಕ, ಜೀವ ತುಂಬಿ ತುಳುಕುವಷ್ಟು. ಇವತ್ತಿಗೂ ಜಾರ್ಜಿಯಾದ ಮನೆಗೆ ಅವ್ವನ ಈ ಕಲಾ ತೋಟಕ್ಕೆ ಒಳ್ಳೆಯ ಕೆಟ್ಟ ಅಪರಿಚಿತರೆಲ್ಲ ಭೇಟಿ ನೀಡಿ ಅಲ್ಲಿ ನಿಲ್ಲಲೋ ನಡೆಯಲೋ ಆಸೆ ಪಡುತ್ತಾರೆ. ಹೂವಿನೊಂದಿಗೆ ಕೆಲಸ ಮಾಡುವಾಗ ಅವ್ವನ ಮುಖ ಹೊಳೆಯುವುದನ್ನು ಕಂಡಿದ್ದೇನೆ. ಆ ಸಮಯದಲ್ಲಿ ಅವಳ ಕಣ್ಣು ಕೈಗಳನ್ನು ಬಿಟ್ಟು ಉಳಿದೆಲ್ಲ ಅದೃಶ್ಯವಾದಂತೆ ಕಾಣುತ್ತದೆ. ಅದು ಅವಳ ಆತ್ಮದ ಕೆಲಸ. ತನ್ನ ವೈಯಕ್ತಿಕ ಸೌಂದರ್ಯದ ಪರಿಕಲ್ಪನೆಯ ಮೂಲಕ ವಿಶ್ವಕ್ಕೆ ಆದೇಶ ನೀಡಿದಂತೆ ಭಾಸವಾಗುತ್ತದೆ.”

ತಾಯಿಯ ಈ ತನ್ಮಯತೆಯ ಕಲೆಗಾರಿಕೆಯಿಂದ ಆಲಿಸ್ ಬದುಕನ್ನು ಗ್ರಹಿಸುವ ಸೂಕ್ಷ್ಮತೆ ಮತ್ತು ಇಚ್ಛಾ ಶಕ್ತಿಯನ್ನು ಪಡೆದಳು. ತಾಯಿ ಅಜ್ಜಿಯರು ತಮ್ಮ ಮನೆಯ ಗೋಡೆಯ ಬಿರುಕು ಮುಚ್ಚಲು ಸೂರ್ಯಕಾಂತಿ ಹೂಗಳನ್ನು ಬೆಳೆದವರು ಎಂಬ ಮಾತೇ ಅವರ ಜೀವನ ದರ್ಶನವನ್ನು ತಿಳಿಸುತ್ತದೆ. ನಮ್ಮದೇ ಜೀವನವನ್ನು ಉಳಿಸಿಕೊಳ್ಳುವುದು ಕಲಾವಿದರ ಜೀವನದಲ್ಲಿ ಮಾದರಿಗಳ ಪ್ರಾಮುಖ್ಯ ಎಂಬ ಅಧ್ಯಾಯದಲ್ಲಿ ಪ್ರಸಿದ್ಧ ಚಿತ್ರಕಾರ ವಿನ್ಸೆಂಟ್ ವ್ಯಾಂಗೋ ಕೊನೆಗಾಲದಲ್ಲಿ ಬರೆದ ಪತ್ರ ವೊಂದನ್ನು ಉಲ್ಲೇಖಿಸುತ್ತಾ ನಮಗೆ ಮಾದರಿಗಳು ಬೇಕು, ಆದರೆ ಅವು ಇರುವುದಿಲ್ಲ ಎಂದು ಕಹಿ ಸತ್ಯ ಹೇಳುತ್ತಾ, ಕಪ್ಪು ಜನರಿಗೆಂದು ಜಾಗತಿಕ ವಿಶ್ವಾತ್ಮಕ ಪಾಪಗಳನ್ನು ಮಾಡಿದ ಅಪರಾಧಿಪ್ರಜ್ಞೆ ಇಲ್ಲ ಎಂದು ಹೇಳುತ್ತಾರೆ. ನನಗೆ ದೇವನೂರು ಮಹಾದೇವ ಅವರ ಮಾತು ನೆನಪಾಯಿತು “ನನಗೆ ನನ್ನ ಜನಾಂಗದ ಬಗ್ಗೆ ಹೆಮ್ಮೆ ಇದೆ ನಾವು ಯಾರನ್ನು ಶೋಷಿಸುವ ಕೆಲಸ ಮಾಡಿಲ್ಲ”. ಜಗತ್ತಿನಾದ್ಯಂತ ಅಂಚಿನಲ್ಲಿರುವ ಜನರ ನೋವು ಒಂದೇ ರೀತಿ ಅನಿಸಿತು.

ಎಂ. ಆರ್. ಕಮಲ

ಇದೇ ಅಧ್ಯಾಯದಲ್ಲಿ ತನಗಿಂತ ಮೊದಲು ಬರೆದು ಪ್ರಸಿದ್ದರಾಗಿದ್ದ, ಎಮಿಲಿ ಬ್ರಾಂಟೆ, ಜೇನ್ ಆಸ್ಟಿನ್, ಟೋನಿ ಮೋರಿಸನ್ ಅವರ ಬರಹಗಳಿಗೂ ಆಫ್ರಿಕನ್ ಅಮೆರಿಕನ್ ಆಗಿ ಬರೆಯುವ ತನ್ನ ಬರವಣಿಗೆಯ ಹಿನ್ನೆಲೆಗೂ ಇರುವ ವ್ಯತ್ಯಾಸಗಳ ಕಾರಣಗಳನ್ನು ವಿಶ್ಲೇಷಿಸಿದ್ದಾರೆ. ಕಪ್ಪು ಬರಹಗಾರ ಮತ್ತು ದಕ್ಷಿಣದ ಅನುಭವದಲ್ಲಿ ಲೇಖಕಿ ತನ್ನ ತಂದೆ ತಾಯಿಯರು ಅನುಭವಿಸಿದ ಅವಮಾನಗಳು ಕುರಿತು ಬರೆದಿದ್ದಾರೆ. ಯಾರಾದರೂ ಬೇಕೆಂದೇ ಅವಮಾನ ಮಾಡುವವರೆಗೂ ನಮ್ಮನ್ನು ನಾವು ಬಡವರೆಂದು ಭಾವಿಸಿರಲಿಲ್ಲ. ನವಿಲಿನ ಆಚೆ ಪ್ಲಾನರಿ ಓ ಕಾರ್ನರ್ ಮರು ನಿರ್ಮಾಣ ಎಂಬ ಅಧ್ಯಾಯ ಮುಖ್ಯ ಎನಿಸಿತು. ಜಾರ್ಜಿಯಾದ ಕಾಲೇಜು ಒಂದಕ್ಕೆ ಆಲಿಸ್ ವಾಕರ್ ಅತಿಥಿಯಾಗಿ ಹೋದಾಗ ತನ್ನ ಬಾಲ್ಯದ ಮನೆಗೆ 22 ವರ್ಷಗಳ ನಂತರ ಮತ್ತೆ ಹೋಗುವ ಸನ್ನಿವೇಶ ಬರುತ್ತದೆ. ಅಲ್ಲಿ ಮೊದಲಿದ್ದ ನವಿಲುಗಳನ್ನು ಮತ್ತು ಹಳೆ ಮನೆಯನ್ನು ನೋಡುವ ಕುತೂಹಲದಿಂದ ತಾಯಿಯು ಜೊತೆಗೆ ಬರುತ್ತಾಳೆ ಹೊಸ ಕಾರಿನಲ್ಲಿ. ಅರವತ್ತೊಂದನೆಯ ವಯಸ್ಸಿನಲ್ಲಿ ಡ್ರೈವ್ ಮಾಡುವುದನ್ನು ತಾಯಿ ಕಲಿತಿದ್ದಳು.

ಖುಷಿಯಿಂದ ಜಾರ್ಜಿಯಾದ ಮರಗಳ ನಡುವೆ ಹೆದ್ದಾರಿಯಲ್ಲಿ ನಾವು ನಮ್ಮ ಗತಕಾಲವನ್ನು ಭೇಟಿಯಾಗಲು ಹೊರಟೆವು ಎಂದು ಬರೆಯುತ್ತ ಆ ಬಾಲ್ಯದ ಮನೆ ಹುಲ್ಲುಗಾವಲಿನ ನಡುವೆ ಇತ್ತು, ದ್ರಾಕ್ಷಿ ಬಳ್ಳಿಗಳು ಹಬ್ಬಿದ್ದ ಪೈನ್ ಮರಗಳ ನಡುವೆ ಹಕ್ಕಿಗಳು ಹಾರಾಡುತ್ತಿದ್ದವು. ಕಿತ್ತಳೆ ಬಣ್ಣದ ಅಜಾಲಿಯ ಹೂಗಳು ಅರಳಿದ್ದವು. ಹಿಂದೆ ಅವರು ಉಪಯೋಗಿಸುತ್ತಿದ್ದ ಕೊಟ್ಟಿಗೆ 20 ವರ್ಷದ ಹಿಂದೆ ಹೇಗಿತ್ತು ಹಾಗೆಯೇ ಇತ್ತು. ಬಾದಾಮಿಯ ತೋಪಿನ ಎದುರಿಗೆ ಅವರ ವಾಸದ ಮನೆ ಇನ್ನು ಉಳಿದಿತ್ತು. ಎರಡು ಕೊಠಡಿಗಳು ಬಿದ್ದು ಹೋಗಿದ್ದವು. ತಾಯಿ, ಅದನ್ನು ಇದೆ ಎಂದು ಮನೆಯನ್ನು ತೋರಿಸುತ್ತಾ, ಅಯ್ಯೋ ನನ್ನ ದ್ಯಫೋಡಿಲ್ಸ್ ಹೂ ನೋಡು ಅಂದಳು. ಇಪ್ಪತ್ತು ವರ್ಷಗಳಲ್ಲಿ ಅವು ಎರಡರಷ್ಟು ಆಗಿದ್ದವು. “ಪ್ರಶಾಂತತೆಯನ್ನು ಇಷ್ಟ ಪಡುವವರು ಮಾಡಿದ ಫೈಟಿಂಗ್ ತರಹ ಆ ದಾರಿ ಇತ್ತು” ಎಂಬ ವಿವರ ಗಮನ ಸೆಳೆಯಿತು.

ಆದರೆ ಪ್ಲಾಣರಿ ಕಾರ್ನರ್ ಎಂಬ ಶ್ರೀಮಂತೆ ಮತ್ತು ಲೇಖಕಿಯ ಮನೆ ಸುರಕ್ಷಿತ ವಾಗಿತ್ತು. ಅದನ್ನು ನೋಡಿಕೊಳ್ಳಲು ಜನರಿದ್ದರು. ಈ ವರ್ಗ ತಾರತಮ್ಯ ಆಲಿಸ್ ಗೆ ಕೋಪ ತರಿಸುತ್ತದೆ. ಜೋರ ನಿಯೋ ಹರ್ಸ್ತನ್ ಎಂಬ ಲೇಖಕಿಯ ಕುರಿತು ತಿಳಿಯಲು ಫ್ಲೋರಿಡಾಗೆ ಹೋದಾಗ ಮುಖ್ಯಲೇಖಕಿಯೊಬ್ಬಲು ಕಪ್ಪು ಬಣ್ಣದವಳು ಎಂಬ ಕಾರಣಕ್ಕೆ ಅವಳ ಕುರುಹು ಇಲ್ಲದೆ ಮರೆಯಾದ ಬಗೆ ವಿಷಾದ ಹುಟ್ಟಿಸುತ್ತದೆ . ಜೋರಾ ಕುರಿತು ಮಾಹಿತಿ ನೀಡ ಬಲ್ಲ ಶ್ರಿಮತಿ ಮೋಸ್ಲಿ ಎಂಬ ಮಹಿಳೆ ಯನ್ನು ಹುಡುಕಿ ಹೋಗುವ ವಿವರ ತುಂಬಾ ಆಸಕ್ತಿ ದಾಯಕವಾಗಿದೆ. ಜೋರಾ ತನ್ನ ಕೃತಿಗಳಲ್ಲಿ ವರ್ಣಿಸಿರುವ ಎಕರೆಗಟ್ಟಲೆ ಕಿತ್ತಿಳೆ ತೋಟ, ಮ್ಯಾಂಗ್ರೋವ್ ಕಾಡು ಪೈನ್ ಮರಗಳ ಆ ಪರಿಸರ ಮೊದಲ ಸಲ ನೋಡಿದರೂ ಲೇಖಕಿಗೆ ಜೋರಾ ಪುಸ್ತಕದ ಮೂಲಕ ಮೊದಲೇ ಪರಿಚಿತ. ನನಗೆ ಈ ಭಾಗ ಓದುವಾಗ ಕಮಲಾ ದಾಸ್ ಅವರ ಬಾಲ್ಯ ದ ಮನೆಯನ್ನು ಹುಡುಕಿ ಹೋದ ನೆನಪಾಯ್ತು.

ಕಪ್ಪು ಜನರ ಹೋರಾಟದಲ್ಲಿ ಭಾಗವಹಿಸಿದ್ದು, ಮುಂತಾದ ಒಂದೊಂದು ವಿಷಯ ಒಂದೊಂದು ಅಧ್ಯಾಯ ಆಗಿದೆ. ನ್ಯೂಯಾರ್ಕ್, ಮಿಸ್ಸಿಸಿಪ್ಪೀ ಹೀಗೆ ವಾಸಸ್ಥಳದ ಬದಲಾವಣೆ ಆಲಿಸ್ ಒಳಗಿನ ಬರಹಗಾರ್ತಿಯನ್ನು ಹೇಗೆ ಕಾಡುತ್ತಿತ್ತು ಎಂಬ ವಿಷಯ ವಾಷಿಂಗ್ಟನ್ ಮೆರವಣಿಗೆಯ ನಂತರದ ಹತ್ತು ವರ್ಷ ಅಧ್ಯಾಯದಲ್ಲಿ ಬರುತ್ತದೆ. ಆಫ್ರಿಕನ್ ಅಮೆರಿಕನ್ ಬದುಕಿನ ವಿವಿಧ ಮಗ್ಗುಲುಗಳನ್ನು ಆಲಿಸ್ ಚಿತ್ರಿಸಿದ್ದಾರೆ. ಒಬ್ಬಳೇ ಮಗಳು ಸಹ ಬರಹಗಾರಳು. ಅವಳು ತನ್ನದು ಥರ್ಡ್ ವೇವ್ ಫೆಮಿನಿಸಂ ಅನ್ನುತ್ತಾಳೆ. ಒಂದು ಒಳ್ಳೆಯ ಪುಸ್ತಕವನ್ನು ಚೆಂದವಾಗಿ ಅನುವಾದಿಸಿ ಅಂದವಾಗಿ ಮುದ್ರಿಸಿ ಪ್ರೀತಿಯಿಂದ ಓದಲು ಕೊಟ್ಟಿದ್ದಕ್ಕೆ ಲೇಖಕಿ ಎಂ ಆರ್ ಕಮಲಾ ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು. (Source : Facebook)

  • ಎಲ್ ಸಿ ಸುಮಿತ್ರಾ

84Parthasarathy Srinivasaranga, Sumithra Lc and 82 others5 comments1 shareLikeCommentShare

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *