ಪುಸ್ತಕ ಸಮಯ/ ಆನೆ ಸಾಕಲು ಹೊರಟವಳ ಜೊತೆ ನಡಿಗೆ- ಸ್ಮಿತಾ ಅಮೃತರಾಜ್

ಸಹನಾ ಕಾಂತಬೈಲು `ಆನೆ ಸಾಕಲು ಹೊರಟವಳು ’ ಸುಸ್ಥಿರ ಬದುಕಿಗೆ ಪೂರಕವಾದ ಹೊತ್ತಗೆ. ಸೊಪ್ಪು, ತರಕಾರಿ, ಬಿಸಿನೀರ ಹಂಡೇ, ಜೇನು ಪೆಟ್ಟಿಗೆ, ಜಲವಿಧ್ಯುತ್ ಇವುಗಳೊಂದಿಗೆ ಬೆಸೆದುಕೊಂಡ ಬದುಕು ಮತ್ತು ಬವಣೆಗಳ ಕುರಿತು ಬರೆಯುತ್ತಲೇ ಅವರು ಜಾಗತಿಕ ಸಮಸ್ಯೆಯೊಂದನ್ನ ನಮ್ಮ ಮುಂದೆ ತಣ್ಣಗೆ ಹರವಿಟ್ಟು ಅದಕ್ಕೆ ಪರ್ಯಾಯ ಮಾರ್ಗವನ್ನು ತಮ್ಮದೇ ರೀತಿಯಲ್ಲಿ ಬಿತ್ತರಪಡಿಸುತ್ತಾರೆ. ಮುಗಿದು ಹೋಗುವ ಸಂಪನ್ಮೂಲಗಳ ಕುರಿತು ಅವರು ಹಳ್ಳಿ ಮೂಲೆಯಲ್ಲಿ ಕುರಿತು ಚಿಂತಿಸುತ್ತಾರೆ, ಅದಕ್ಕಾಗಿ ಮತ್ತೊಬ್ಬರಿಗೆ ಅದು ಉಪಯೋಗವಾಗುವ ನಿಟ್ಟಿನಲ್ಲಿ ತಾನೇ ಕಾರ್ಯಪ್ರವೃತ್ತರಾಗುತ್ತಾರೆ.

ಕೊಡಗು ಮತ್ತು ದಕ್ಷಿಣ ಕನ್ನಡ ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದಲ್ಲಿ ಇದ್ದುಕೊಂಡು ತನ್ನ, ಸ್ವಾನುಭವ, ಪ್ರಾಮಾಣಿಕ , ದಿಟ್ಟ ಬರೆಹಗಳ ಮೂಲಕ ನಾಡಿನಾದ್ಯಂತ ಪರಿಚಿತ ಹೆಸರು ಸಹನಾ ಕಾಂತಬೈಲು. ಅವರ ಇತ್ತೀಚಿನ ಕೃತಿ ’ಆನೆ ಸಾಕಲು ಹೊರಟವಳು ’ . ಪುಸ್ತಕದ ತಲೆ ಬರಹ ನೋಡಿ ಇದೆಂತಾ ಆನೆ ಸಾಕಲು ಹೊರಟಿರುವುದು ಅಂತ ನೀವು ಭಯ ಬೀಳುವುದ್ದಕ್ಕೆ ಮುಂಚೆ – ಬದುಕಿನ ಕುರಿತು ಭಯ ನಿವಾರಣೆಗೆ, ಸುಸ್ಥಿರ ಬದುಕಿಗೆ ಪೂರಕವಾದ ಹೊತ್ತಗೆಯಿದು ಎಂದು ಹೇಳಿದರೆ ಸಾಕು.

ಶೀರ್ಷಿಕೆಯ ವಿಭಿನ್ನ ಅರ್ಥ ಕೊಡುವ ಈ ಸಾಲೇ ಹೇಳುವಂತೆ, ಒಂದು ಕಡೆ ಇದು ಆನೆಯನ್ನು ಸಾಕಲು ಹೊರಟವಳ ಕತೆಯಾದರೆ ಮತ್ತೊಂದು ಕಡೆಯಲ್ಲಿ ನೆಮ್ಮದಿಯನ್ನು ಅರಸುತ್ತಾ ಹೊರಡುವುದು ಎನ್ನುವ ಅರ್ಥವೂ ಇದೆ. ’ಆನೆ ’ ಪದಕ್ಕಿರುವ ಈ ವಿಶಾಲ ಅರ್ಥವ್ಯಾಪ್ತಿ ನನ್ನನ್ನು ಅಚ್ಚರಿಗೊಳಿಸಿ ಹಲವು ಬಗೆಯಲ್ಲಿ ಇಲ್ಲಿಯ ಬರೆಹಗಳನ್ನು ಗ್ರಹಿಸಲು ಸಾಧ್ಯವಾಯಿತು. ಈ ಪುಸ್ತಕದಲ್ಲಿರುವ ಇಡೀ ಬರಹಗಳ ಒಟ್ಟು ಸಾರ ನೆಮ್ಮದಿಯನ್ನು ಅರಸುವುದೇ ಆಗಿದೆ. ಅಂದರೆ ನೆಮ್ಮದಿ ಬೇರೆಲ್ಲೂ ಇಲ್ಲ ಒಳಗಣ್ಣು ತೆರೆದು ನೋಡಿದರೆ ನೆಮ್ಮದಿಯ ಸಂತುಷ್ಟ ಬದುಕು ನಮ್ಮೊಳಗೆ, ನಾವು ನಿಂತ ಜಾಗದಲ್ಲಿ, ನಮ್ಮ ಸುತ್ತಮುತ್ತಲೇ ಇದೇ ಅನ್ನುವಂತದ್ದು ನಮ್ಮ ಗ್ರಹಿಕೆಗೆ ದಕ್ಕುತ್ತದೆ. ಹಳ್ಳಿಯಲ್ಲಿ ನಿಂತು ಕೊಂಡು ನಾವು ಪೇಟೆಯನ್ನು ಯಾವಾಗ ಧ್ಯಾನಿಸುತ್ತೇವೋ, ಅಥವಾ ಹಳ್ಳಿಯಿಂದ ವಿಮುಖರಾಗಿ ಪೇಟೆಯ ಕಡೆಗೆ ಮುಖ ಮಾಡಿದೆವೋ, ಮಣ್ಣಿನಿಂದ ಕಿತ್ತು ತಂದ ಆಹಾರ, ಗಿಡ ಮೂಲಿಕೆಗಳ ಬಿಟ್ಟು, ಫಳ ಫಳ ಗಾಜಿನ ಬಿರಡೆಯೊಳಗಿಂದ, ಪಾರದರ್ಶಕ ಪ್ಲಾಸ್ಟಿಕ್ ಪೊಟ್ಟಣದೊಳಗಿನ ಆಹಾರಕ್ಕೆ ನಾವು ಒಗ್ಗಿಕೊಂಡೆವೋ ಅಲ್ಲಿಗೆ ನಮ್ಮ ಸುಖ ಸಂತೋಷ ಅರ್ಥ ಕಳೆದುಕೊಂಡು, ನಮ್ಮೊಳಗಿನ ಆರೋಗ್ಯ, ನೆಮ್ಮದಿ ಮರೀಚಿಕೆಯಾಗಿದೆ ಎನ್ನುವುದ್ದನ್ನ ಲೇಖಕಿ ಬಲ್ಲರು. ಅದಕ್ಕೆಲ್ಲಾ ಅವರು ಹೇಳಿಕೆಗಳನ್ನು ಕೊಡದೆ ಇಲ್ಲಿಯ ಬರೆಹಗಳ ಮೂಲಕ ಸೂಚ್ಯವಾಗಿ ಕಟ್ಟಿ ಕೊಡಬಲ್ಲರು. ಈ ಕೃತಿ ನಾಡಿನ ಪ್ರಮುಖ ದಿನಪತ್ರಿಕೆಯಾದ ಉದಯವಾಣಿಯಲ್ಲಿ ಪ್ರಕಟಗೊಂಡ ಅಂಕಣ ಬರಹಗಳ ಗುಚ್ಚ. ಈಗಾಗಲೇ ಈ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ ಲಭ್ಯವಾಗಿದೆ.

ದ್ವಿತೀಯ ಪಿ.ಯು.ಸಿ ಯನ್ನಷ್ಟೇ ಪೂರೈಸಿದ ಹುಡುಗಿಯೊಬ್ಬಳು ಹದಿನೇಳು ವರುಷಕ್ಕೇ ಮದುವೆಯಾಗಿ ಕೃಷಿಕನ ಮಡದಿಯಾಗಿ ಹಳ್ಳಿಯ ಮೂಲೆಯನ್ನು ಸೇರುವುದು, ಮನೆ ತೋಟ ಎರಡನ್ನೂ ನಿಭಾಯಿಸುತ್ತಾ, ಓದಿನ ಹಸಿವು, ಬರವಣಿಗೆಯ ತುಡಿತವನ್ನು ಒಡಲೊಳಗೆ ಬಚ್ಚಿಟ್ಟುಕೊಂಡು, ಸಿಕ್ಕ ವೇಳೆಯಲ್ಲಿ ಹೇಗೆ ಸೃಜನ ಶೀಲವಾಗಿ ಬದುಕಿ ಲೋಕಕ್ಕೆ ತೆರೆದುಕೊಳ್ಳಬಹುದು ಎನ್ನುವುದಕ್ಕೆ ಸಹನಾ ಬದುಕು ಮತ್ತು ಬರೆಹವೇ ಒಂದು ಉದಾಹರಣೆ. ಹಳ್ಳಿ ಮಹಿಳೆಯೊಬ್ಬಳು ಬರೆದ ಬರೆಹದಲ್ಲಿ ಏನಿರುತ್ತೆ ಅಂತ ಯಾರೂ ಉದಾಸೀನ ಮಾಡುವಂತಿಲ್ಲ. ತನ್ನ ಕೈಯಳತೆಯ ಬದುಕನ್ನೇ ಅಧ್ಯಯನ ಮಾಡುತ್ತಾ, ಸೊಪ್ಪು, ತರಕಾರಿ, ಬಿಸಿನೀರ ಹಂಡೆ, ಜೇನು ಪೆಟ್ಟಿಗೆ, ಜಲವಿದ್ಯುತ್ ಇವುಗಳೊಂದಿಗೆ ಬೆಸೆದುಕೊಂಡ ತನ್ನ ಬದುಕು ಮತ್ತು ಬವಣೆಗಳ ಕುರಿತು ಬರೆಯುತ್ತಲೇ ಅವರು ಜಾಗತಿಕ ಸಮಸ್ಯೆಯೊಂದನ್ನ ನಮ್ಮ ಮುಂದೆ ತಣ್ಣಗೆ ಹರವಿಟ್ಟು ಅದಕ್ಕೆ ಪರ್ಯಾಯ ಮಾರ್ಗವನ್ನು ತಮ್ಮದೇ ರೀತಿಯಲ್ಲಿ ಬಿತ್ತರಪಡಿಸುತ್ತಾರೆ. ಮುಗಿದು ಹೋಗುವ ಸಂಪನ್ಮೂಲಗಳ ಕುರಿತು ಅವರು ಹಳ್ಳಿ ಮೂಲೆಯಲ್ಲಿ ಕುರಿತು ಚಿಂತಿಸುತ್ತಾರೆ, ಅದಕ್ಕಾಗಿ ಮತ್ತೊಬ್ಬರಿಗೆ ಅದು ಉಪಯೋಗವಾಗುವ ನಿಟ್ಟಿನಲ್ಲಿ ತಾನೇ ಕಾರ್ಯಪ್ರವೃತ್ತರಾಗುತ್ತಾರೆ. ಭೇಟಿ

ಸಹನಾ ಕಾಂತಬೈಲುರವರ ಇಡೀ ಬರಹದುದ್ದಕ್ಕೂ ಒಂದು ಮಗುವಿನ ಮುಗ್ಧತೆ ಇದೆ. ಆ ಕಾರಣದಿಂದಲೇ ಅವರು ತಮಗೆ ಅನ್ನಿಸಿದ್ದನ್ನು ಯಾವ ಮತ್ತು ಯಾರ ಮುಲಾಜಿಯೇ ಇಲ್ಲದೇ ಪ್ರಶ್ನಿಸಬಲ್ಲರು, ಅವರ ಕುತೂಹಲವನ್ನು ತಣಿಸಿಕೊಳ್ಳಬಲ್ಲರು ಮತ್ತು ಅದನ್ನು ಇತರರಿಗೆ ಹಂಚಬಲ್ಲರು. ಆ ಕಾರಣಕ್ಕಾಗಿಯೇ ಇಲ್ಲಿಯ ಬರಹಗಳು ಓದಿಸಿಕೊಂಡು ಹೋಗುತ್ತಲೇ, ನಮ್ಮೊಳಗೆ ಇಳಿಯುತ್ತಾ ನಮ್ಮ ನೋಡುವ ದಿಸೆಯನ್ನೇ ಬದಲಿಸುವಂತೆ ಮಾಡುತ್ತವೆ. ಕಾಂತಬೈಲಿನಲ್ಲಿ ಕಾಡು ಮೂಲೆಯಲ್ಲಿ ವಾಸಿಸುವ ಲೇಖಕಿ, ತಾನು ದೇಶ ವಿದೇಶ ಸುತ್ತಿ ಸುಮ್ಮಗೆ ಬರಲಿಲ್ಲ. ಅಲ್ಲಿಯ ಎಲ್ಲಾ ಸಂಗತಿಗಳನ್ನ ಬಿಡುಗಣ್ಣಿನಿಂದ ನೋಡುತ್ತಲೇ, ತನ್ನ ನೆಲಕ್ಕೂ ಅಲ್ಲಿಯ ನೆಲಕ್ಕೂ ಕೊಂಡಿ ಜೋಡಿಸುತ್ತಲೇ, ಎಲ್ಲ ಪೂರ್ವಗ್ರಹಗಳಿಗೆ ಉತ್ತರವೆಂಬಂತೆ ಅಲ್ಲಿಯೂ ಅವರು ದಾಂಪತ್ಯದ ಗಟ್ಟಿತನವನ್ನು ಕಂಡು ಕೊಳ್ಳುತ್ತಾರೆ, ಅಮ್ಮನೆಂಬ ಭಾವ ಎಲ್ಲಾ ದೇಶಗಳಲ್ಲೂ ಒಂದೇ ಅನ್ನುವುದನ್ನ ಘಟನೆಗಳ ಮೂಲಕ ವಿವರಿಸುತ್ತಾರೆ.

ಛಲ ಮತ್ತು ಆತ್ಮವಿಶ್ವಾಸ ಇಲ್ಲಿಯ ಬರಹಗಳಲ್ಲಿ ಎದ್ದು ಕಾಣುವ ಅಂಶ. ಅದು ಅವರ ಬದುಕಿನ ಪ್ರತಿ ಘಟ್ಟದಲ್ಲೂ ಅವರು ಅದನ್ನು ನಿಭಾಯಿಸಿದ ಪರಿಯಲ್ಲಿ ವ್ಯಕ್ತವಾಗುತ್ತದೆ. ಅದು ಬದುಕಿನ ಒಂದು ಭಾಗವಾದ ಬರವಣಿಗೆಗೆ ಪೂರಕವಾದ ಕಂಪ್ಯೂಟರ್ ಕೆಟ್ಟು ಹೋದಾಗ ಆಗಿರಬಹುದು, ಜೇನು ಪೆಟ್ಟಿಗೆಯಿಂದ ಜೇನು ತೆಗೆಯುವಾಗ ಇರಬಹುದು, ಜಲವಿಧ್ಯುತ್ ತಯಾರಿಕೆಗೆ ಇಳಿದಾಗ ಇರಬಹುದು, ಅಥವಾ ಅವರ ಇಡೀ ಸಂಕಲವನ್ನು ಪ್ರತಿನಿಧಿಸುವ ಶೀರ್ಷಿಕೆಯೇ ಹೇಳುವ ’ಆನೆ ಸಾಕು’ ಪಯಣ ಇರಬಹುದು , ಎಲ್ಲಾ ರೋಚಕ ಅನುಭವಗಳನ್ನು ಅವರು ಸಾವಧಾನದಿಂದ ಅದರ ಹಿಂದೆ ಬಿದ್ದು ಹೋಗಿ ಪೂರ್ಣ ಗೊಳಿಸಿ ಯಶಸ್ವಿಯಾಗಬಲ್ಲರು. ನಮ್ಮ ಕೃಷಿಕರನ್ನು ಕಾಡುವ ಬಹು ದೊಡ್ಡ ಸಮಸ್ಯೆಯೆಂದರೆ ಆನೆ, ಮಂಗಗಳ ಹಾವಳಿ. ನಮ್ಮ ಕೃಷಿ ಬೆಳೆಗಳು ನಮಗೆ ಕೈಗೆ ಬಂದದ್ದು ಬಾಯಿಗೆ ಬರದಂತೆ ಮಾಡಿ ಬಿಡುತ್ತವೆ. ಆದರೆ ಸುಮ್ಮಗೆ ಪ್ರಾಣಿಗಳ ಮೇಲೆ ಹರಿಹಾಯದೆ, ವ್ಯವಸ್ಥೆಯನ್ನು ದೂಷಿಸದೆ , ಅವುಗಳ ಕಡೆಯಿಂದಲೂ ಯೋಚಿಸಿ ಕಾರ್ಯತತ್ಪರರಾಗುತ್ತಾರೆ.

ಹಾಗಾಗಿ ಅವರು ಎಂದೋ ತಿಂದ ಕಲ್ಲು ಬಾಳೆ ಹಣ್ಣನ್ನು ಸುಮ್ಮಗೆ ತಿಂದು ಬರಲಿಲ್ಲ, ಬಾಳೆ ಹಣ್ಣಿನ ಇಡೀ ವಿಚಾರವನ್ನು ತಿನ್ನುತ್ತಲೇ ಮಾಹಿತಿ ಕಲೆ ಹಾಕಿಕೊಳ್ಳುತ್ತಾರೆ. ಆನೆಗೆ ಪ್ರಿಯವಾದ ಕಲ್ಲು ಬಾಳೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಬೀಜ ಬಿತ್ತಲು ತೊಡಗುತ್ತಾರೆ. ಈ ರೀತಿಯ ಸಮಷ್ಟಿಯ ಚಿಂತನೆ ಮತ್ತು ಎದೆಗಾರಿಕೆ ಎಷ್ಟು ಜನರಲ್ಲಿದೆ?

ಇಲ್ಲಿಯ ಬರಹಗಳಲ್ಲಿ ಪದಲಾಲಿತ್ಯವಾಗಲಿ, ಕಾವ್ಯಾತ್ಮಕ ಭಾಷೆಯಾಗಲಿ ಇಲ್ಲದಿದ್ದರೂ ,ಹೇಳಬೇಕಾದ ವಿಷಯಗಳನ್ನು ನೇರವಾಗಿ ಸಣ್ಣ ಸಣ್ಣ ವಾಕ್ಯಗಳ ಮೂಲಕ ಹೇಳುತ್ತಾ ಒಂದು ಘಟನೆಯನ್ನು ನಮ್ಮ ಕಣ್ಣ ಮುಂದೆ ತೆರೆದು ತೋರಿಸುವಂತೆ ಬರೆಯುತ್ತಾರೆ. ಆ ಮೂಲಕ ಇಡೀ ಚಿತ್ರಣ ನಮ್ಮ ಕಣ್ಣಿಗೆ ಕಟ್ಟುತ್ತಾ ನಾವೂ ಆ ಘಟನೆಯ ಹಿಂದೆ ಸಾಗುತ್ತಾ ಹೋಗುತ್ತೇವೆ.ಇದು ಅವರ ಭಾಷೆಯ ವೈಶಿಷ್ಟ್ಯ. ಈ ಕಾರಣಕ್ಕಾಗಿ ಸಹನಾರ ’ಆನೆ ಸಾಕಲು ಹೊರಟವಳು ’ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದದ್ದು ಮತ್ತು ಮುಖ್ಯವಾದದ್ದು ಅನ್ನಿಸುತ್ತದೆ. ನೀವೂ ಆನೆ ಸಾಕಲು ಹೊರಟವಳೊಂದಿಗೆ ಒಂದು ನಡಿಗೆ ನಡೆದು ನೋಡಿ.

 -ಸ್ಮಿತಾ ಅಮೃತರಾಜ್.ಸಂಪಾಜೆ
(9980402968)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *