FEATUREDಪುಸ್ತಕ ಸಮಯಸಾಹಿತ್ಯ ಸಂಪದ

ಪುಸ್ತಕ ಸಮಯ/ ಆತ್ಮಸಾಕ್ಷಿಯ, ಅಸ್ಮಿತೆಯ ಒಳಗಿನ ದೀಪ – ಡಾ. ಪಾರ್ವತಿ ಜಿ. ಐತಾಳ್

ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ವೈದೇಹಿ ಅವರ ‘ಹೂವ ಕಟ್ಟುವ ಕಾಯಕ’ ಸಂಕಲನ ಪ್ರಕಟವಾದ ದೀರ್ಘಕಾಲದ ಬಳಿಕ ಈಗ ‘ದೀಪದೊಳಗಿನ ದೀಪ’ ಎಂಬ ಕವನ ಸಂಕಲನ ಪ್ರಕಟವಾಗಿದೆ. ಆಧುನಿಕ ಜಗತ್ತಿನಲ್ಲಿ ಹಿಂಸೆ, ಅತ್ಯಾಚಾರ, ಅನ್ಯಾಯ, ವಂಚನೆ, ಸಮಸ್ಯೆಗಳು ಹೆಚ್ಚಾಗುತ್ತಿವೆ, ಇಂದು ದಿನ ನಿತ್ಯ ಬರುವ ಬೆಳಗು ಕತ್ತಲನ್ನು ಹೊಡೆದೋಡಿಸುವ ಬೆಳಗಾಗಿ ಉಳಿದಿಲ್ಲ ಎಂಬುದನ್ನು ಕವಯಿತ್ರಿ ಇಲ್ಲಿ ಬಹಳ ಮಾರ್ಮಿಕವಾಗಿ ಬಣ್ಣಿಸುತ್ತಾರೆ. ದೇಶವು ತನ್ನೊಳಗಿನ ಆತ್ಮಸಾಕ್ಷಿಯ ದೀಪವನ್ನು ಹುಡುಕಿಕೊಳ್ಳಬೇಕು ಎಂದು ಆಗ್ರಹಿಸುವ ಕವನಗಳು ಈ ಸಂಕಲನದಲ್ಲಿವೆ.

ಅಪಾರ ಜೀವನಾನುಭವದ ಹಿನ್ನೆಲೆಯಿಂದ ಬಂದಿರುವ ವೈದೇಹಿ ಅವರ ‘ದೀಪದೊಳಗಿನ ದೀಪ’ ಸಂಕಲನದಲ್ಲಿ ಚಿಂತನೆಯ ಪಕ್ವತೆಯೊಂದಿಗೆ ತನ್ನ ಮಕ್ಕಳಿಗೆ ಒದಗಿ ಬಂದ ಸಂಕಷ್ಟಗಳ ಬಗ್ಗೆ ಒಬ್ಬ ತಾಯ ಹೃದಯದ ಕಾಳಜಿ, ಆತಂಕ- ಯಾತನೆ ಮತ್ತು ನೋವುಗಳ ಅಭಿವ್ಯಕ್ತಿಯಿದೆ. ಆಧುನಿಕ ಸಮಾಜದಲ್ಲಿ ದಿನೇ ದಿನೇ ಹೆಚ್ಚಾಗುತ್ತ ಬರುತ್ತಿರುವ ಹೆಣ್ಣುಮಕ್ಕಳ ಮೇಲಿನ ಆಕ್ರಮಣ, ಲೈಂಗಿಕ ಅತ್ಯಾಚಾರ, ಪರಿಸರ ನಾಶ, ಮನುಷ್ಯ ಸಂಬಂಧಗಲ್ಲಿ ಉಂಟಾಗುತ್ತಿರುವ ಬಿರುಕು ಮೊದಲಾದ ಸಮಸ್ಯೆಗಳು ಅವರನ್ನು ಬಲವಾಗಿ ಕಾಡಿವೆ. ಶೋಕಮೂಲದಿಂದ ಹುಟ್ಟಿದ ರಾಮಾಯಣ ಒಂದು ಶೋಕಾಯಣವೇ ಆಗಿರುವಂತೆ ಆಧುನಿಕ ಜಗತ್ತಿನಲ್ಲಿ ಹೆಚ್ಚಾಗುತ್ತಿರುವ ಹಿಂಸೆ, ಅತ್ಯಾಚಾರ, ರಕ್ತಪಾತ, ಸ್ವಾರ್ಥ, ದ್ವೇಷ, ಅನ್ಯಾಯ, ವಂಚನೆಗಳ ಹೊಗೆಯಿಂದೇಳುವ ವಿಷಾದದ ನಿಟ್ಟುಸಿರು ಇಲ್ಲಿ ಹೆಚ್ಚಿನ ಕವಿತೆಗಳಲ್ಲಿ ಎದ್ದು ಬಂದಂತೆ ಕಾಣುತ್ತದೆ.

ಅತ್ಯಾಚಾರಕ್ಕೊಳಗಾದ ಹಸುಳೆ ಅಸೀಫಾಳ ನೆನಪಿಗೆ ಬರೆದ ಮೊದಲ ಕವನದಲ್ಲಿ ‘ಹೂವಿನಂತಹ ಮಗು ಹೊಸಕಿ ಹೋಯಿತು’ ಎನ್ನುತ್ತ ‘ಇಡೀ ದೇಶವೇ ಸೂತಕದಲ್ಲಿದೆ’ ಎಂದು ಕವಯಿತ್ರಿ ಹೇಳುತ್ತಾರೆ. ಪುಟ್ಟ ಮಗುವಿನ ಮೇಲೆ ನಿರ್ದಯವಾಗಿ ಆಕ್ರಮಣ ಮಾಡಿ ಜೀವ ತೆಗೆದು ದೇಶವನ್ನೇ ಹೊಲಸಾಗಿಸಿದ ಮಂದಿಗೆ ದೇವರು-ಧರ್ಮಗಳ ಹೆಸರಲ್ಲಿ ಗಂಟೆ ಬಾರಿಸಿ ಜಾಗಟೆ ಬಡಿದು ಸಂಭ್ರಮಿಸುವ ಹಕ್ಕಿಲ್ಲ ಎನ್ನುತ್ತಾರೆ. ಹೀಗೆ ಕವನ ಸಂಕಲನದ ಪ್ರವೇಶದ್ವಾರದಲ್ಲೇ ತಮ್ಮ ಕವಿತೆಗಳ ಉದ್ದೇಶವೇನು ಎಂಬುದನ್ನು ವೈದೇಹಿ ಅವರು ಸ್ಪಷ್ಟ ಪಡಿಸುತ್ತಾರೆ.

ಕಾಲವು ಸಂಪೂರ್ಣ ಬದಲಾಗಿದೆ. ಇಂದು ದಿನ ನಿತ್ಯ ಬರುವ ಬೆಳಗು ಕತ್ತಲನ್ನು ಹೊಡೆದೋಡಿಸುವ ಬೆಳಗಾಗಿ ಉಳಿದಿಲ್ಲ. ಮನೆಯಿಂದ ಹೊರಗೆ ಹೊರಟ ಹುಡುಗಿಯರು ಸುರಕ್ಷಿತವಾಗಿ ಮನೆಗೆ ಹಿಂದಿರುಗಿ ಬರುವರೆಂಬುದು ಖಚಿತವಿಲ್ಲ. ಬೇಂದ್ರೆಯವರ ರಮ್ಯ ಮನೋಹರ ಬೆಳಗು ಇಂದಿಲ್ಲ. ಹೆಣ್ಣುಮಕ್ಕಳ ಮೇಲೆ ಆಕ್ರಮಣ ನಡೆಸಿ ಎಳೆದೊಯ್ದು ತಮ್ಮ ವಿಕೃತ ಕಾಮ ದಾಹವನ್ನು ಹಿಂಗಿಸಿಕೊಳ್ಳುವುದಕ್ಕೋಸ್ಕರ ಬಳಸಿ ಬಿಸಾಕುವ, ಹೆಣ್ಣುಮಕ್ಕಳೆಂದರೆ ಬರೇ ದೇಹಗಳೆಂದು ತಿಳಿದುಕೊಂಡು ಕಚ್ಚಿ ಎಳೆದಾಡುವ ಕಿರುಬಗಳ ಸಂಖ್ಯೆ ಇಂದು ಹೆಚ್ಚಾಗಿದೆ. ದಿನವೂ ಬೆಳಗುವ ಸೂರ್ಯ ಎಲ್ಲವನ್ನೂ ನೋಡುತ್ತಿದ್ದಾನಾದರೂ ಸಾಕ್ಷಿಯಾಗಿ ಬಾಯಿ ಬಿಡದಂಥ ಪರಿಸ್ಥಿತಿ ಉಂಟಾಗಿದೆ (ಸಾಕ್ಷಿಯೆಲ್ಲಿ? ಪು.3).

‘ಯಾರಲ್ಲಿ ಅಳುತಿರುವುದು?’ ಕವಿತೆಯ ಕೆಲವು ಸಾಲುಗಳು ಹೆಣ್ಣುಮಕ್ಕಳ ಇಂದಿನ ಸ್ಥಿತಿಯ ಬಗ್ಗೆ ನರನರಗಳನ್ನೇ ಇರಿಯುವಂಥ ಭಯ ಹುಟ್ಟಿಸುತ್ತಿವೆ:
ಗದ್ದಲವ ನಿಲ್ಲಿಸಿರೊ, ನಿಲ್ಲಿಸಿ, ಆಲಿಸಿ
ಅಲ್ಲೆಲ್ಲೋ ಸಿಕ್ಕಿ ಬಿದ್ದಂತಿದೆ ಹೂವಿನೆಸಳು
ಘೋರ ಬಂಡೆಯಡಿ ನರಳು ( ಪು.5)

ಹೆಣ್ಣಿಗೆ ತನ್ನ ಮೇಲಿನ ಹಿಂಸೆ, ಅತ್ಯಾಚಾರಗಳ ಬಗ್ಗೆ ಬಾಯಿ ಬಿಡದಂಥ ಒಂದು ಸ್ಥಿತಿಯನ್ನು ಸಮಾಜವೇ ಸೃಷ್ಟಿಸಿದೆ. ಅವಳ ಸುರಕ್ಷೆಯ ಬಗ್ಗೆ ಸ್ವಲ್ಪವೂ ಚಿಂತಿಸದೆ ಅನಗತ್ಯ ವಿಷಯಗಳ ಬಗ್ಗೆ ಗದ್ದಲ ಎಬ್ಬಿಸುವುದರಲ್ಲೇ ಮುಳುಗಿ ಬಿಟ್ಟಿದ್ದಾರೆ. ‘ಅಪದ್ಧ ಕಂಪಿಸಿದರೂ/ ಭೂಮಿ ತೊದಲಿದರೂ/ ಗಾಳಿ ಘೀಳಿಟ್ಟರೂ ಬೆಟ್ಟ ಬಿರುಕಿದರೂ’ ಜನರ ಅರಿವಿಗೆ ಅದು ಕೇಳಿಸದಾಗಿದೆ (ಪು.4).

‘ಬಂದಳೇ?’ ಅತ್ಯಂತ ಸರಳವೆಂದು ಕಾಣಿಸುವ ಒಂದು ಕಿರು ಕವನ. ಮನೆಯಿಂದ ಹೊರಟು ಹಿಂದಿರುಗಿ ಬರುವ ಹೊತ್ತಾದರೂ ಇನ್ನೂ ಬಾರದ ಮಗಳ ಬಗ್ಗೆ ತಾಯಿಯ ಎದೆ ಹೊಡೆದುಕೊಳ್ಳುವುದನ್ನು ಇದು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಅದಕ್ಕೇ ಶಾಲೆಗೆ ಹೋಗುವ ಮಗಳಿಗೆ ಚೀಲದಲ್ಲಿ ಸಣ್ಣ ಬ್ಲೇಡು, ಮೆಣಸಿನ ಪುಡಿ, ಸೇಫ್ಟಿ ಪಿನ್ನುಗಳನ್ನು ಇಟ್ಟುಕೊಳ್ಳಲು ತಾಯಿ ಹೇಳುತ್ತಾಳ (ಅವಸ್ಥೆ ಪು.7). ಆದರೆ ಮನೆಯೊಳಗಿದ್ದ ಹೆಣ್ಣುಮಕ್ಕಳನ್ನು ಮನೆಯಲ್ಲೇ ಸುಲಿದು ಚಿಂದಿಗೈದು ಹೆಣ್ಣುಮಕ್ಕಳ ಮೇಲೆ ಚಂಡ ವ್ಯಾಘ್ರರಂತೆ ಎರಗಿ, ಕತ್ತೊತ್ತಿ ಕಚ್ಚಿ ಕಡಿದು ಅವರು ಬದುಕಿಗೆ ತೆರೆದುಕೊಳ್ಳುವ ಮುನ್ನವೇ ‘ಕೊಲ್ಲುವವರಿದ್ದಾರೆಂದರೆ ಇದೆಂಥ ಭಯಾನಕ ಸ್ಥಿತಿ..? (ನನ್ನ ಕೊಂದರೂ ಪು.9.).

‘ಕಾಣದೇ?’ (ಪು.10) ಈ ಇಡೀ ಪ್ರಕೃತಿಯ ಮೇಲೂ ಹೆಣ್ಣಿನ ಮೇಲೂ ಪುರುಷ ಸೃಷ್ಟಿಯಾದ ಸಂಸ್ಕøತಿ-ನಾಗರಿಕತೆಗಳು ಹೇಗೆ ಮೆಟ್ಟಿ ನಿಂತು ಅಟ್ಟಹಾಸ ಗೈಯುತ್ತಿವೆ ಎಂಬುದನ್ನು ಹೇಳುತ್ತದೆ. ‘ಈ ದೇಶದಲ್ಲಿ’ (ಪು.11) ಇಲ್ಲಿ ಋಣಾತ್ಮಕವಾದ ಎಲ್ಲವೂ ಇವೆ, ಧನಾತ್ಮಕವಾದದ್ದು ಒಂದೂ ಇಲ್ಲ. ಕಾನೂನು ಇದೆ. ಆರಕ್ಷಕರೂ ಇದ್ದಾರೆ. ಆದರೆ ಸುರಕ್ಷೆಯ ಭಾವನೆ ನೀಡುವ ಮನೆಮನೆಗಳೇ ಸತ್ತಿವೆ. ದೇವಿಯರ ಹೆಸರಿನಲ್ಲಿ ಪೂಜೆಗಳು ನಡೆಯುತ್ತಿವೆ. ಅವರ ಪೂರ್ಣಾಹುತಿ ಮಾಡುವುದರೊಂದಿಗೆ ಕೊನೆಗೊಳ್ಳುವ ಪೂಜೆಯದು ಅನ್ನುತ್ತದೆ.

‘ಛೆ ಛೆ ಛೆ’ ಒಂದು ವಿಡಂಬನಾತ್ಮಕ ಧ್ವನಿಯುಳ್ಳ ಭಿನ್ನ ಆಶಯವುಳ್ಳ ಕವನ. ಗಮ್ಮತ್ತಿನ ಪಾರ್ಟಿಗಳ ಸುಖ-ವೈಭೋಗಗಳ ಕೂಟ-ಊಟಗಳ ಸಂಭ್ರಮಗಳಲ್ಲಿ ಮುಳುಗಿ ಕೆಲಸಕ್ಕೆ ಬಾರದ ಹಾಳು ಹರಟೆಯಲ್ಲೇ ಸಂತೋಷ ಪಡುವ ಒಂದು ವರ್ಗದ ಸಂವೇದನಾಶೂನ್ಯ ಸ್ತ್ರೀಯರು ಇಲ್ಲಿದ್ದಾರೆ. ಈ ಜಗತ್ತಿನಲ್ಲಿ ಯಾವ ಸ್ಥಳವೂ ನಿನಗೆ ಸುರಕ್ಷಿತವಲ್ಲ. ದೇಹದಾಹಿಗಳು ಮತ್ತು ದುಷ್ಟ ವ್ಯಾಧರು ಹೊಂಚುತ್ತಿರುತ್ತಾರೆ, ಇದ್ದಲ್ಲೇ ಇದ್ದು ದೇವರ ನಾಮ ಜಪಿಸು ಎಂದು ಪುಣ್ಯ ಕೋಟಿಯು ತನ್ನ ಕರುವಿಗೆ ಉಪದೇಶಿಸಿದಂತೆ ತಾಯಿ ತನ್ನ ಹೆಣ್ಣುಮಗುವಿಗೆ ಉಪದೇಶಿಸುವ ಸನ್ನಿವೇಶ ಮನಕರಗಿಸುತ್ತದೆ (ಮತ್ತೊಮ್ಮೆ ಹುಟ್ಟಿ ಬಾ ಪು. 14). ‘ಎಲ್ಲವಳು? ಯಾರವರು?’ ಕೂಡಾ ಬೆಳಕಿನಂತೆ ಬೆಳೆಯುತ್ತಿರುವ ಪುಟ್ಟ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಸುವ ‘ಕಿರಾತಕರ’ ಬಗ್ಗೆ ಇದೆ ( ಪು.17). ‘ಮೂಕಸಾಕ್ಷಿ’ಯಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣು ಮಗುವಿಗೆ ಮಾತನಾಡಲು ಬಾಯೊಳಗಿನ ನಾಲಿಗೆಯೇ ಇಲ್ಲವಾಗಿದೆ. ಧ್ವನಿ ಉಡುಗಿ ಹೋಗಿದೆ (ಪು.18).

ಭಿನ್ನ ಮಳೆಹಾಡಿನ ಸಂದರ್ಭ : ಕನ್ನಡ ಕಾವ್ಯ ಪರಂಪರೆಯಲ್ಲಿ ‘ಮಳೆಯ ವೈಭವ’ದ ಕುರಿತಾದ ಭವ್ಯ ಕಾವ್ಯಗಳೇ ಹರಿದು ಬಂದಿವೆ. ಆದರೆ ಈ ಸಂಕಲನದ ಮಳೆಹಾಡಿನ ಸಂದರ್ಭ ಪೂರ್ತಿ ಭಿನ್ನವಾದುದು. ಆಗಬಾರದ ಅನಾಹುತ ಸಂಭವಿಸಿದ್ದರಿಂದ ‘ಇಳೆಯೊಳಗೆ ಇಳಿವ ಹಂಬಲದ ಈ ಮಳೆ/ಇಳಿಯಲಾರದೆ ಸೊರಗಿದೆ’ (ಪು.19) ಮತ್ತು ಇನ್ನೊಂದು ಕವನದಲ್ಲಿ -ಎಲ್ಲೆಲ್ಲೂ ನಡೆಯುತ್ತಿರುವ ಹಿಂಸೆಯಿಂದಾಗಿ ‘ರಕ್ತದೋಕುಳಿ ಬಾಚಿ ಒಯ್ಯುತ್ತಿದೆ/ ಕಡಲಿಡೀ ಕೆಂಪು ತುಯ್ಯುತ್ತಿದೆ (ಮಳೆಯು ಬರುತಿದೆ ಕಡಲು ಕೆಂಪಾಗಿದೆ ಪು.20).

‘ಪಯಣದ ಹಾಡು’ ಹೆಣ್ಣಿನ ಸ್ಥಿತಿಯ ಕುರಿತಾದ ಒಂದು ಹೃದಯಸ್ಪರ್ಶಿ ಕವನ. ಹಗಲು ನಿಶ್ಶಬ್ದವಾಗಿ ಮುಗಿದು ಸೂರ್ಯಾಸ್ತವಾಗಿ ಕತ್ತಲಾವರಿಸಿ ಎಲ್ಲರೂ ಮಲಗಿದರೂ ಅವಳ ರಾತ್ರಿಗಳು ಎಷ್ಟು ಯಾತನೆ-ಸಂಕಟಗಳಿಂದ ಸಾಗುತ್ತವೆಂಬುದನ್ನು ಕವಯಿತ್ರಿ ಇಲ್ಲಿ ಬಹಳ ಮಾರ್ಮಿಕವಾಗಿ ಬಣ್ಣಿಸುತ್ತಾರೆ. ಬುದ್ಧ ಅನುಭವಿಸಿದ ದ್ವಂದ್ವವನ್ನು ಅವಳೂ ಅನುಭವಿಸುತ್ತಾಳಾದರೂ ಅವಳು ಅವನಂತೆ ಮನೆಬಿಟ್ಟು ಹೋಗಲಾರಳು. ಯಾಕೆಂದರೆ ಅವಳಲ್ಲಿರುವ ಕರ್ತವ್ಯ ಪ್ರಜ್ಞೆ ಅಷ್ಟು ದೃಢವಾಗಿದೆ. ಅವಳ ತನ್ನ ಪರಿಧಿಯೊಳಗೆಯೇ ಕುಳಿತು ತನ್ನ ಅಳಲನ್ನು ಕವಿತೆಗಳಾಗಿ ಹೊರಹೊಮ್ಮಿಸುತ್ತಾಳೆ. ತನ್ನ ದೇಹವೆಂಬ ದೀಪದೊಳಗಿನ ಆತ್ಮವೆಂಬ ದೀಪವು ಕೆಡದಂತೆ ಜೋಪಾನ ಮಾಡುತ್ತಾಳೆ (ಪು.26).

‘ಕಾಲಗಾಡಿಯ ಸದ್ದು ಆಲಿಸೋಣ’ ಕವನದಲ್ಲಿ (ಪು.28) ಹೆಣ್ಣು ಮನೆಯೊಳಗಿನ ಅವೇ ಕೆಲಸಗಳನ್ನು ಮಾಡುತ್ತ ತಾಳ್ಮೆ ಕಳೆದುಕೊಂಡಾಗ ತನ್ನೆಲ್ಲ ಶಕ್ತಿಯನ್ನು ಉಪಯೋಗಿಸಿ ಕುಟ್ಟುತ್ತ, ರಪ್ಪರಪ ಹೊಡೆಯುತ್ತ, ಹುರಿದರೂ ಹುರಿಯುತ್ತ, ಕುದಿದರೂ ಕುದಿಸುತ್ತ ಇರುವ ಚಿತ್ರವಿದೆ. ತನ್ನೀ ದುರವಸ್ಥೆಗೆ ಯಾವ ಪರಿಹಾರವೂ ಕಾಣದು. `ಕಾಲವೈದ್ಯನ ಔಷಧಿಗಾಗಿ ಕಾಯುವುದೊಂದೇ ದಾರಿ’ ಎನ್ನುತ್ತದೆ ಕವನ. ‘ಬಾಳುವೆಗೆ ಕೈಯ ಮುಗಿದು’ ತತ್ವಜ್ಞಾನದ ಹಿನ್ನೆಲೆಯಲ್ಲಿ ಬರೆಯಲ್ಪಟ್ಟ ಕವನ. ಬಾಳ್ವೆಯ ದೈನಂದಿನ ಪುನರಾವರ್ತಿತ ಕ್ರಿಯೆಗಳ ಬಗ್ಗೆ ಮಾತನಾಡುತ್ತ ಇದು ಅರ್ಥಹೀನವೆಂಬ ಅರಿವಿದ್ದೂ ಪ್ರತಿ ದಿನವನ್ನೂ ಹೊಸತಾಗಿ ಸ್ವಾಗತಿಸಿ ಬಾಳಬಂಡಿಯನ್ನು ನಡೆಸುವ ನಿತ್ಯ ಸಂಸಾರದ ಸುಖದುಃಖಗಳ ಹಡಗಲ್ಲಿ ಸಾಗುವುದೇ ವಾಸ್ತವ ಮತ್ತು ಅದುವೇ ಬಾಳ್ವೆಯ ಬೆಳಕು ಎನ್ನುತ್ತದೆ (ಪು. 45).

‘ಯಾಕಿಲ್ಲಾ ನಗೆ ಸಿಂಡ್ರೆಲ್ಲಾಗೆ?’ (ಪು.46) ಸುಂದರಿ ಸಿಂಡ್ರೆಲ್ಲಾಳ ರೂಪಕದ ಮೂಲಕ ಹೆಣ್ಣುಮಕ್ಕಳು ಮದುವೆಯಾದ ಬಳಿಕ ಅನುಭವಿಸುವ ಕಷ್ಟಗಳ ಸಂಕಥನ. ಸದಾ ಸಂಕಷ್ಟಗಳ ಜತೆಗೇ ಇದ್ದರೂ ನಗುನಗುತ್ತಿದ್ದ ಸಿಂಡ್ರೆಲ್ಲಾ ಮುಖದ ನಗು ಈಗ ಮಾಯವಾಗಿದೆ. ಯಾಕೆಂದರೆ ಗಂಡನ ಮನೆಯಲ್ಲಿ ಅನುಭವಿಸಿದ ಕಷ್ಟಕಾರ್ಪಣ್ಯಗಳು ಅವಳ ಕೋಮಲ ಸೌಂದರ್ಯವನ್ನು ಕಸಿದುಕೊಂಡಿವೆ. ಆದ್ದರಿಂದ ಗಂಡ ಅವಳನ್ನು ಬಿಟ್ಟು ‘ಬೇಟೆ’ಗೆ ಹೊರಟಿದ್ದಾನೆ. ‘ಹೊಗೆ’ ಎಂಬ ನೀಳ್ಗವನವು (ಪು. 52) ಶೋಷಣೆಗೊಳಗಾದ ಬಾಲಕಾರ್ಮಿಕರ ಕುರಿತಾದ ವಿಲಿಯಮ್ ಬ್ಲೇಕ್ ನ ‘ಚಿಮ್ನಿ ಸ್ವೀಪರ್’ ಎಂಬ ಕವಿತೆಯನ್ನು ನೆನಪಿಸಿದರೂ ಇಲ್ಲಿ ಕೊನೆಯ ಭಾಗದಲ್ಲಿ ಆಧುನಿಕ ಕಾಲದ ಚಿತ್ರಣವಿದೆ. ಇಂದು ಅಡುಗೆಮನೆಯಲ್ಲಿ ಹೊಗೆಯಿಲ್ಲದಂತೆ ಮಾಡಲು ವಿಜ್ಞಾನವು ಎಲ್ಲಾ ಸಾಧನಗಳನ್ನೂ ಕೊಟ್ಟಿದೆಯಾದರೂ ಹೆಣ್ಣಿನ ಬದುಕನ್ನು ಆವರಿಸಿಕೊಂಡ ಹೊಗೆಯನ್ನು ಪರಿಹರಿಸುವ ಮಾರ್ಗವು ಕಾಣದಾಗಿದೆ.

ಈ ಸಂಕಲನದ ಮುಕ್ಕಾಲು ಭಾಗ ಕವಿತೆಗಳಲ್ಲಿ ಶೋಕಾಯಣವೇ ತುಂಬಿದೆಯಾದರೂ ಇಲ್ಲಿ ಬೇರೆ ವಸ್ತುಗಳ ಕುರಿತಾದ ಕವಿತೆಗಳು ಸಾಕಷ್ಟು ಇವೆ. ಗಾಂಧೀಜಿಯವರನ್ನು ವಿಭಿನ್ನ ಕೋನಗಳಿಂದ ವೀಕ್ಷಿಸುವ ಐದು ವಿಶಿಷ್ಟ ಕವಿತೆಗಳು ಇಲ್ಲಿವೆ (ಅವುಗಳಲ್ಲಿ ಸಾವೆನ್ನದಿರಿ ಬಿಡುಗಡೆಗೆ’ ಅನ್ನುವ ಕವಿತೆ ಭಾವಗೀತೆಯಾಗಿ ಹಾಡಲು ಯೋಗ್ಯವಾಗಿದೆ). ಕುವೆಂಪು ಅವರ ಕುರಿತಾದ ಗೀತೆ, ತಮ್ಮ ರಾಘಣ್ಣನ ಸದ್ಗುಣಗಳ ಕುರಿತಾದ ಕವಿತೆ, ತಂಗಿ ರಮಾ ಅಕಾಲದಲ್ಲಿ ತೀರಿಕೊಂಡಾಗ ಆಕೆಯ ಜೀವನ ಪ್ರೀತಿಯ ಕುರಿತಾಗಿ ಬರೆದ ‘ಎಲಿಜಿ’ಗಳು ಇವೆ. ವೈದೇಹಿಯವರೇ ಬರೆದ ಮಕ್ಕಳ ನಾಟಕಗಳಲ್ಲಿ ಅಳವಡಿಸಿಕೊಂಡ ರಂಗ ಗೀತೆಗಳಿವೆ. ಮೊಮ್ಮಗು ಹುಟ್ಟಿದಾಗ ಅಜ್ಜಿಯ ಸಂಭ್ರಮ, ಗೊತ್ತಿಲ್ಲದವರೆದುರು ಗೊತ್ತಿದ್ದವರೆಂದು ತಿಳಿದುಕೊಂಡವರು ಶಂಖ ಊದಿ ಬಿಂಕ ಪ್ರದರ್ಶನ ಮಾಡುವ ಕುರಿತಾದ ಕವನಗಳಿವೆ. ಬದುಕು ನೀಡುವ ಸಂಭ್ರಮದ ಸಂದರ್ಭಗಳನ್ನು ಚಿತ್ರಿಸುತ್ತ, ಬದುಕನ್ನು ಧನಾತ್ಮಕ ದೃಷ್ಟಿಯಿಂದ ಅಪ್ಪಿಕೊಳ್ಳಬೇಕೆನ್ನುವ ಭಾವಗೀತೆಯಾಗಿ ಹಾಡಬಹುದಾದ ಕವನ ( ಸಂಭ್ರಮಾ.. ಸಂಭ್ರಮಾ.. ಪು 44) ಇವೆ. ಕನ್ನಡಮ್ಮನಿಗೆ ದುರ್ಗತಿ ತಂದ ಅವಳದೇ ಮಕ್ಕಳ ಕೃತಘ್ನತೆಯ ಕುರಿತಾದ ನೀಳ್ಗವನ ’ಕನ್ನಡಮ್ಮನ ಪತ್ರ’ ಮನ ಕಲಕುವ ಶೈಲಿಯಲ್ಲಿದೆ. (ಪು. 35) ಮಕ್ಕಳು ಶಾಲೆಯಲ್ಲಿ ಸವಿಯುವ ಸಹಜೀವನದ ಅನುಭವಗಳು, ರಜಾದಿನಗಳಲ್ಲಿ ಅಜ್ಜಿಮನೆಗೆ ಹೊಗಿ ಆನಂದವನ್ನು ಅನುಭವಿಸುವ ಕ್ಷಣಗಳು, ರೈಲುಪ್ರಯಾಣದ ಅದ್ಭುತ ಕನಸಿನ ಲೋಕದ ಕವನಗಳು- ಹೀಗೆ ಮಕ್ಕಳಿಗೆ ಆಪ್ಯಾಯಮಾನವಾಗಬಲ್ಲ ಕವನಗಳಿಲ್ಲಿವೆ.

ಕೊನೆಯಲ್ಲಿ ಅವರ ತಾಯಿ ಹಾಡುತ್ತಿದ್ದ ‘ಶ್ರೀ ದತ್ತಾತ್ರೇಯ ಜನನ’ ಎಂಬ ಜನಪದ ಶೈಲಿಯ ಕಥನಗೀತೆಯನ್ನು ದಾಖಲೆಯಾಗಿ ಉಳಿಸುವ ದೃಷ್ಟಿಯಿಂದ ಈ ಸಂಕಲನದಲ್ಲಿ ವೈದೇಹಿ ಸೇರಿಸಿಕೊಂಡಿದ್ದಾರೆ. ಇಲ್ಲಿ ಅತ್ರಿ ಮುನಿಯ ಪತ್ನಿ ಅನಸೂಯೆಯು ತನ್ನ ಅಪ್ರತಿಮ ಬುದ್ಧಿಶಕ್ತಿಯಿಂದ ತ್ರಿಮೂರ್ತಿಗಳು ಮತ್ತು ಅವರ ಪತ್ನಿಯಂದಿರಿಗೆ ಬುದ್ಧಿ ಕಲಿಸುವ ಕಥೆಯಿದೆ.

ಒಟ್ಟಿನಲ್ಲಿ ಹೆಣ್ಣು ಅನುಭವಿಸುವ ಸಮಸ್ಯೆಗಳ ಬಿರುಗಾಳಿಯು ಅವಳನ್ನು ಸಾವಿನತ್ತ ದೂಡುವಂತೆ ಮಾಡಿದರೂ ಅವಳ ಒಳಗಿನ ದೀಪವು ಅವಳದೇ ಜಾಣ್ಮೆಯ ಅಸ್ಮಿತೆಯ ಮೂಲಕ ಕೆಡದೆ ಉಳಿದಿರಲಿ ಎಂಬ ಆಶಯವನ್ನು ಇಲ್ಲಿನ ಒಟ್ಟು ಕವನಗಳು ಧ್ವನಿಸುತ್ತವೆ.

  • ಡಾ. ಪಾರ್ವತಿ ಜಿ. ಐತಾಳ್
    ಮೊ: 9242253642

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *