ಪುಸ್ತಕ ಸಮಯ / ಅಹಲ್ಯೆಯ ಅರಿವಿನ ಆಸ್ಫೋಟ – ಗಿರಿಜಾ ಶಾಸ್ತ್ರಿ


ಉಷಾ ನರಸಿಂಹನ್ ಅವರ “ಕಂಚುಗನ್ನಡಿ” ಎಂಬ ನಾಟಕ ಅಹಲ್ಯೆಯ ಸುತ್ತ ಹೆಣೆದಿರುವ ಕಥೆ. ಕನ್ನಡಿ ನಮ್ಮನ್ನು ನಮಗೆ ತೋರಿಸುವಂತಹದ್ದು. ನಮ್ಮ ಅರಿವಿನ ಆಸ್ಫೋಟಕ್ಕೆ ಕಾರಣವಾಗುವಂತಹದ್ದು. ಇದು ಅಹಲ್ಯೆಯ ಅರಿವಿನ ಆಸ್ಫೋಟ. ಅವಳ ಲೈಂಗಿಕ ಅರಿವಿನ ಆಸ್ಫೋಟ ಕೂಡ ಹೌದು. ಈ ಆಸ್ಫೋಟ ವೇದಕಾಲದಲ್ಲಿ ಇದ್ದಳೆನ್ನಲಾದ ಅಹಲ್ಯೆಯ ಅರಿವಿನ ಆಸ್ಫೋಟವಲ್ಲ. ಪು.ತಿ.ನ ಅವರ “ಅಹಲ್ಯೆ”ಯ ಅರಿವಿನ ಆಸ್ಫೋಟವೂ ಅಲ್ಲ. ಬದಲಾಗಿ 21 ನೆಯ ಶತಮಾನದ ಮಹಿಳೆಯೊಬ್ಬಳ ಅರಿವಿನ ಆಸ್ಫೋಟವಾಗಿದೆ.

ಅಹಲ್ಯೆಯನ್ನು ಕೂಡುವ ಇಂದ್ರ ಮಾರುವೇಷದಲ್ಲಿರುತ್ತಾನೆ. ಅದು ಅಹಲ್ಯೆಗೆ ತಿಳಿಯುವುದಿಲ್ಲ. ಆದ್ದರಿಂದ ಅವಳ ತಪ್ಪು ಅಷ್ಟು ಘನವಾಗುವುದಿಲ್ಲ ಎಂಬ ಸಾಮಾನ್ಯ ನಂಬಿಕೆ ಅಹಲ್ಯೆಯ ಬಗೆಗೆ ಓದುಗರಲ್ಲಿ ಮರುಕ ಹುಟ್ಟಿಸಲು ಕಾರಣವಾಗುತ್ತದೆ. ಆದರೆ ಪು.ತಿ.ನ ಅವರ “ಅಹಲ್ಯೆ” ನಾಟಕದಲ್ಲಿ, ಮಾರುವೇಷದಲ್ಲಿದ್ದವನು ಹತ್ತಿರ ಬಂದಾಗ ಇಂದ್ರ ಎಂದು ಅಹಲ್ಯೆಗೆ ಗೊತ್ತಾಗುತ್ತದೆ. ಆ ನಂತರ ಅವಳು ಸ್ವಗತದಲ್ಲಿ ಅವನನ್ನು ಕರೆಯುತ್ತಾಳೆ. ಇಂದ್ರ ದೇವನಾದುದರಿಂದ ಅವಳ ಕರೆ ಅವನಿಗೆ ಮುಟ್ಟಿ ಅವನು ಅಹಲ್ಯೆಯ ಮುಂದೆ ಪ್ರತ್ಯಕ್ಷ ನಾಗುತ್ತಾನೆ. ಅವನು ಇಂದ್ರನೆಂದು ಅರಿತ ಮೇಲೆಯೂ ಮದನನ ಬಾಣಕ್ಕೆ ಘಾಸಿಗೊಂಡ ಅಹಲ್ಯೆ ಅವನನ್ನು ಕೂಡುತ್ತಾಳೆ. ಮದನನ ಬಾಣಕ್ಕೆ ಗೌತಮನೂ ಘಾಸಿಗೊಂಡು ಅಹಲ್ಯೆಯನ್ನು ಕೂಡಲು ಆತುರ ಆತುರವಾಗಿ ತನ್ನ ಕುಟೀರಕ್ಕೆ ಬರುತ್ತಾನೆ. ಅಷ್ಟರಲ್ಲಿ ಇಂದ್ರ ಮತ್ತು ಅಹಲ್ಯೆಯರ ಸಮಾಗಮ ನಡೆದು ಹೋಗಿರುತ್ತದೆ.

ಬಹುಶಃ ಪು.ತಿ.ನ ಅವರ ಅಹಲ್ಯೆ ನಾಟಕದಲ್ಲಿ ಸೂಚ್ಯವಾಗಿ ಬಂದ ಸಂಗತಿಗಳನ್ನು ಉಷಾ ನರಸಿಂಹನ್ ಅವರು ಬಹಳ ಧೈರ್ಯವಾಗಿ ಅಷ್ಟೇ ವಾಚ್ಯವಾಗಿ “ಕಂಚುಗನ್ನಡಿ” ನಾಟಕದಲ್ಲಿ ನಿಭಾಯಿಸಿದ್ದಾರೆ ಎನಿಸುತ್ತದೆ. ಇದರಿಂದ ಮೂಲ ಅಹಲ್ಯೆಯ ಪಾತ್ರಕ್ಕೆ ನ್ಯಾಯ ಒದಗಿತೇ? ಮೂಲವನ್ನು ನಮ್ಮ ಅನುಕೂಲಕ್ಕಾಗಿ ತಿರುಚುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವವಾದರೂ, “ಕಂಚುಗನ್ನಡಿ”ಯನ್ನು 21 ನೆಯ ಶತಮಾನದ “ಅಭಿನವ ಅಹಲ್ಯೆ”ಯ ಕಥೆ ಎಂದು ಓದಿಕೊಂಡಾಗ ಈ ಕಾಲದ ವೈಚಾರಿಕತೆಯನ್ನು ಅದು ಪೋಷಿಸುತ್ತದೆ ಎನ್ನುವ ಕಾರಣಕ್ಕೆ ನಾವು ಕಂಚುಗನ್ನಡಿಯ ಅಹಲ್ಯೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹೀಗೆ ಒಪ್ಪಿಕೊಳ್ಳುವಾಗ ಅದು ಎಷ್ಟರ ಮಟ್ಟಿಗೆ ಕಲಾಕೃತಿಯಾಗಿ ಮನದಟ್ಟು ಮಾಡಿಸುತ್ತದೆ (ಛಿoಟಿviಟಿಛಿiಟಿg ಆಗಿದೆ) ಎನ್ನುವುದು ಮುಖ್ಯ. ಅದು ಆಧುನಿಕ ಲೇಖಕಿಯರಿಗೆ ಒಂದು ಸವಾಲೇ ಆಗಿದೆ.

ಅಹಲ್ಯೆ ಇಲ್ಲಿ ಆಧುನಿಕ ಪ್ರೇಮಿಯಂತೆ ಇಂದ್ರನೊಡನೆ ಓಡಾಡುತ್ತಾಳೆ. ಅವಳ ಮುಂದೆ ಅವನು ಮಾರುವೇಷದಲ್ಲೇನು ಬರುವುದಿಲ್ಲ. ಅಹಲ್ಯೆಗೆ ಇಂದ್ರನೆಂಬ ಸ್ಪಷ್ಟ ಅರಿವಿದೆ. ಅವನು ತಂದು ಕೊಡುವ ಕಂಚುಗನ್ನಡಿ, ರೇಶಿಮೆಯ ದುಕೂಲ ಮುಂತಾದ ದೇವಲೋಕದ ಪ್ರಸಾದನಗಳನ್ನು ಅವಳು ಒಪ್ಪಿಕೊಳ್ಳುತ್ತಾಳೆ. ಇವು ಹೆಚ್ಚು ಆಕರ್ಷಕವಾಗಿ ಕಾಣಲು ಆಶ್ರಮದ ಬಗ್ಗೆ, ಗೌತಮನ ಬಗ್ಗೆ ಇರುವ ಹೇವರಿಕೆಯೂ ಕಾರಣವಾಗಿದೆ. ಹೆಣ್ಣೊಬ್ಬಳಿಗೆ ಇವುಗಳ ಬಗ್ಗೆ ಇರುವ ಸಹಜವಾದ ಆಸೆ ಇದು ಎಂದು ತೋರಿಸಲು ಲೇಖಕಿ ಪ್ರಯತ್ನಿಸುತ್ತಾರೆ. ಗೌತಮ ತನಗೆ ಸರಿಯಾದ ಗಂಡನಲ್ಲ, ತಪಶ್ಚರ್ಯೆಯಲ್ಲಿ ಮುಳುಗಿರುವ ಅವನಿಗೆ ತನ್ನ ದೈಹಿಕ ಬಯಕೆಗಳನ್ನು ಪೂರೈಸುವ ಆಸಕ್ತಿಯಿಲ್ಲ ಎನ್ನುವ ಅತೃಪ್ತಿ ಅವಳಿಗಿದೆ. “ನಮ್ಮ ಇಷ್ಟವೆಂದು ನಮಗೇನಿದೆ ಮಾಧವಿ? ಅಪ್ಪ ಹೇಳಿದವರನ್ನು ಮದುವೆಯಾಗಬೇಕು. ಗಂಡ ಇಷ್ಟಪಟ್ಟಂತೆ ಬದುಕಬೇಕು.. ಇಷ್ಟೇ ಅಲ್ಲವೇ ನಮ್ಮ ಬದುಕು” ಎನ್ನುವ ಅಹಲ್ಯೆ, ಅಪ್ಪನ ಆಣತಿಯಂತೆ ಗೌತಮನನ್ನು ಮದುವೆಯಾಗಿ ತನ್ನ ಆಸೆಗಳನ್ನು ಅದುಮಿಟ್ಟುಕೊಂಡು ನಾರುಮಡಿ ಉಟ್ಟುಕೊಂಡು, ಕಂದಮೂಲಗಳನ್ನು ತಿಂದುಕೊಂಡು ಸನ್ಯಾಸಿನಿಯಂತೆ ಬದುಕುತ್ತಾಳೆ. ಇದು ಅವಳಿಗಾಗುತ್ತಿರುವ ಅನ್ಯಾಯ ಎಂಬ ಅರಿವಿದೆ ಅವಳಿಗೆ.

ಇಂದ್ರ “ಎಲ್ಲಾ ನನ್ನ ಹಣೆ ಬರಹ. ಆ ಅಹಲ್ಯೆಯ ಥಳಕು ಬಳುಕಿಗೆ ಮನಸೋತು ಕೇಡು ತಂದುಕೊಂಡೆ. ಆಚಾರ್ಯ ಪತ್ನಿ ನೆಟ್ಟಗಿರಬೇಡವೆ ಅವಳು.. ಮರಳು ಮಾಡಿಬಿಟ್ಟಳು ಮಾಯಾಂಗನೆ… ಹೆಂಗಸರು ಬಿಗಿಯಾಗಿದ್ದರೆ ಗಂಡಸರೇಕೆ ತಪ್ಪೆಸಗುತ್ತೇವೆ” ಎಂದು ಆಧುನಿಕ ಖಳನಾಯಕನಂತೆ ಮಾತನಾಡುತ್ತಾನೆ.

ಕೊನೆಗೆ ಗೌತಮನೂ ಒಬ್ಬ ಆಧುನಿಕ ಸ್ತ್ರೀವಾದಿಯಂತೆ “ಅದೆಷ್ಟೋ ತಪೋನಿರತ ಋಷಿಮುನಿಗಳು ಮಾನಿನಿಯರ ಮೋಹಕ್ಕೆ ತಪೋಭಂಗಗೊಂಡು ಇಂದ್ರಿಯಾನಂದಗಳಲ್ಲಿ ಮುಳುಗಿಲ್ಲವೇ? ಅವರನ್ನೆಲ್ಲಾ ಉದಾರವಾಗಿ ನೋಡುತ್ತೇವೆ. ನಿನ್ನಂತಹ ಸಾಧ್ವಿ ಒಮ್ಮೆ ಇಂದ್ರಿಯ ನಿಗ್ರಹವನ್ನು ಮೀರಿ ನಡೆದರೆ ಅದೇಕಷ್ಟು ಸಿಟ್ಟುಗೊಳ್ಳುತ್ತೇವೋ? ಸರ್ವನಾಶವಾದವರಂತೆ ಪರಿತಪಿಸುತ್ತೇವೋ ಗೊತ್ತಿಲ್ಲ. ದೇವಿ! ಆತ್ಮನಿಗೆ ಗಂಡು ಹೆಣ್ಣುಗಳ ಭೇದವಿಲ್ಲವೆಂದ ಮೇಲೆ ಇಂದ್ರಿಯ ಸುಖದ ವಿಚಾರದಲ್ಲಿ ನಾವೇಕಿಷ್ಟು ಪುರುಷಪಕ್ಷಪಾತಿಗಳಾಗುತ್ತೇವೋ” ಪುರುಷನೊಬ್ಬ ಹೀಗೆ ಮಾತನಾಡುವುದು ಸ್ವಾಗತಾರ್ಹವೇ. ಇದು ಹೆಣ್ಣುಮಕ್ಕಳ ಕನಸು ಮಾತ್ರವಲ್ಲ. ಸದ್ಯದಲ್ಲಿ ಹೆಣ್ಣುಮಕ್ಕಳ ವಿಷಯದಲ್ಲಿ ನಮ್ಮ ಸಮಾಜ ಹಾದುಹೋಗುತ್ತಿರುವ ಈ ದುರ್ಭರ ಕ್ಷಣಗಳ ಕನಸೂ ಹೌದು. ದಿನಬೆಳಗಾದರೆ ಪತ್ರಿಕೆಗಳಲ್ಲಿ ಕಾಣುವ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಒಂದು ಉತ್ತರವೂ ಹೌದು. ಇದೊಂದು ಆದರ್ಶ. ವಾಸ್ತವ ಹೇಗೆ ಇರಲಿ ಕನಸು ಕಾಣುವ ಹಕ್ಕಂತೂ ಇದ್ದೇ ಇದೆಯಲ್ಲಾ? ಅಂತಹ ಒಂದು ಕನಸಿನ ಪ್ರತಿರೂಪ ಕಂಚುಗನ್ನಡಿ.

ಈ ನಾಟಕದಲ್ಲಿ ಬಹಳ ಸೊಗಸಾದ ಅಂಶವೆಂದರೆ ಸೀತೆಯನ್ನು ಅಹಲ್ಯೆಯ ಮಗಳಾಗಿಸಿರುವುದು. ಶಾಪಗ್ರಸ್ತ ಅಹಲ್ಯೆ ಗರ್ಭಿಣಿಯಾಗುವುದು, ಹುಲ್ಲುಮನೆಯಲ್ಲಿ ಅವಳು ಹೆಣ್ಣು ಮಗುವಿಗೆ ಜನ್ಮಕೊಡುವುದು. ಆ ಮಗುವನ್ನು ಅಷ್ಟಾವಕ್ರ ಋಷಿ ತೆಗೆದುಕೊಂಡು ಹೋಗುವುದು. ಜನಕರಾಜ ಹೊನ್ನಾರು ಹೂಡಿದಾಗ ಆ ನೇಗಿಲ ಮೊನೆಗೆ ಶಿಶುವನ್ನು ಇಟ್ಟ ಪೆಟ್ಟಿಗೆ ತಗಲುವಂತೆ ಮಾಡುವುದು. ಜನಕರಾಜನ ಅರಮನೆಯಲ್ಲಿ ಸೀತೆ ಬೆಳೆಯುವುದು. ಎಲ್ಲವೂ ಬಹಳ ಮನೋಜ್ಞವಾಗಿ ಬಂದಿದೆ. ಸೀತೆ ಅಹಲ್ಯೆಯ ಮಗಳಾಗಿರಬಹುದು ಎಂದು ಲಕ್ಷ್ಮೀಶ ತೋಳ್ಪಾಡಿಯವರು ಒಮ್ಮೆ ಹೇಳಿದ ಸಂಗತಿಯನ್ನು ಲೇಖಕಿ ನಾಟಕದಲ್ಲಿ ಬೆಳೆಸಿರುವುದನ್ನು ಹೇಳಿಕೊಂಡಿದ್ದಾರೆ. ಸೀತೆ ಅಯೋನಿಜೆಯಲ್ಲ. ಆ ಸಂದರ್ಭದ ಅಹಲ್ಯೆಯ ಪಾತ್ರಪೋಷಣೆ, ಸನ್ನಿವೇಶ, ಹುಲ್ಲು ಮನೆಯ ನಿರ್ಮಾಣ, ಶಾಪಗ್ರಸ್ತ ಅಹಲ್ಯೆಗೆ ಪಡಿಪದಾರ್ಥಗಳನ್ನು ಪೂರೈಸುವ ಮಾಧವಿಯ ಆರೈಕೆ ಎಲ್ಲವೂ ವಾಸ್ತವಕ್ಕೆ ಬಹಳ ಹತ್ತಿರವಾಗಿವೆ. ಅಷ್ಟಾವಕ್ರ ಮುನಿ “ಇರಲಿ ಬಿಡು ಪಾಪಗಳು ಕೇವಲ ಒಬ್ಬರಿಂದ ಘಟಿಸುವುದಿಲ್ಲ ಅದರ ಹಿನ್ನೆಲೆಗಳು ಕಾರಣಗಳು ಬೇರೆಯಿರುತ್ತವೆ” ಎಂದು ಅಹಲ್ಯೆಯನ್ನು ಕ್ಷಮಿಸಿ, ಅವಳನ್ನು ಮಗಳಂತೆ ಸ್ವೀಕರಿಸಿ ಅವಳ ಆಪತ್ಕಾಲಕ್ಕೆ ಅನುವಾಗುವುದು, ಮಗುವಾದನಂತರ ಅಹಲ್ಯೆ ಅಧ್ಯಯನ, ತಪದಲ್ಲಿ ತೊಡಗುವುದು, ರಾಮ, ಕಾಡಿನಂತೆ ಹುಲ್ಲು ಕಳೆಗಳಿಂದ ಸುತ್ತುವರೆದ ಅಹಲ್ಯೆಯ ಕುಟೀರಕ್ಕೆ ಬರುವ ಪ್ರಸಂಗ, ಇಂದ್ರನ ಕಪಟದ ಅರಿವಾಗಿ ಅಹಲ್ಯೆ ಪಶ್ಚಾತ್ತಾಪ ಪಡುವುದು, ಕೊನೆಗೆ ಅಹಲ್ಯೆ ಮಹಿಳಾ ಶಿಕ್ಷಣಕ್ಕೆ ಒತ್ತುಕೊಡುವುದಲ್ಲದೇ ಆಶ್ರಮವನ್ನು ತಾನೇ ನಡೆಸುವ ನಿರ್ಧಾರ ತೆಗೆದುಕೊಳ್ಳುವುದು– ಈ ಎಲ್ಲವೂ ಮೂಲಕ್ಕೆ ಹತ್ತಿರವಿಲ್ಲದಿದ್ದರೂ ಸಹ ಕಲಾಸತ್ಯವಾಗಿ ಮನವರಿಕೆ ಮಾಡಿಸುತ್ತದೆ. ಇದು ನಾಟಕದ ಯಶಸ್ಸು. ಈ ಕಾರಣಕ್ಕೆ ಲೇಖಕಿ ಉಷಾ ನರಸಿಂಹನ್ ಅವರನ್ನು ಅಭಿನಂದಿಸಲೇಬೇಕು.

ಗಿರಿಜಾ ಶಾಸ್ತ್ರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಪುಸ್ತಕ ಸಮಯ / ಅಹಲ್ಯೆಯ ಅರಿವಿನ ಆಸ್ಫೋಟ – ಗಿರಿಜಾ ಶಾಸ್ತ್ರಿ

 • September 16, 2020 at 1:16 am
  Permalink

  ನಾಟಕವೂ ಚನ್ನಾಗಿದೆ ನಿಮ್ಮ ಮಾತುಗಳೂ…

  Reply
 • September 16, 2020 at 11:17 am
  Permalink

  ಮೇಡಂ ಗಿರಿಜಾ ಶಾಸ್ತ್ರಿಯವರ ಕಂಚುಗನ್ನಡಿಯ ಪರಿಚಯ ಲೇಖನ ಅಭಿನಂದನೀಯ. ತುಂಬಾ ಚೆನ್ನಾಗಿದೆ ಲೇಖನ.

  Reply

Leave a Reply

Your email address will not be published. Required fields are marked *