ಪುಸ್ತಕ ಸಮಯ/ ಅಂಕೋಲೆಯ ಪರಿಮಳ -ಡಾ.ಬಸು ಬೇವಿನಗಿಡದ

     ‘ಸುಕ್ರಿ ಬೊಮ್ಮಗೌಡ ಅವರ ಹಾಡುಗಳು ಏನೋ ರಂಜನೆಗಾಗಿ ಹಾಡಿದ ಹಾಡುಗಳಲ್ಲ, ಬದಲಾಗಿ ಅವರು ಬದುಕಿನಲ್ಲಿ ಬೆಂದ ಹಾಡುಗಳು’- ಈ ಕೃತಿಯಲ್ಲಿ ಅವರ ಬದುಕಿನ ಮಜಲುಗಳನ್ನು ಕನ್ನಡದ ಹಲವು ಹಿರಿಯ ಲೇಖಕರ ದೃಷ್ಟಿಕೋನದ ಮೂಲಕ ಇಲ್ಲಿ ಕಟ್ಟಿಕೊಡಲಾಗಿದೆ. ಸುಕ್ರಿ ಕನ್ನಡದ ನಿಜ ಕೋಗಿಲೆ, ಆಕೆ ಕಾಡಿನ ಮಗಳು ಎನ್ನುವುದನ್ನು ಈ ಕೃತಿ ಪ್ರಾಮಾಣಿಕವಾಗಿ ತೆರೆದಿಡುವ ಪ್ರಯತ್ನ ಮಾಡುತ್ತದೆ. 
 

ನಾನು ಸಂಜೆ ಆಫೀಸಿನಿಂದ ಮನೆಗೆ ಮರಳಿದಾಗ ಅನೇಕ ಪುಸ್ತಕ, ಪತ್ರಿಕೆ ಹಾಗೂ ಪತ್ರಗಳು ಬಂದಿರುವುದು ಮತ್ತು ಚಹಾ ಹೀರುತ್ತ ಅವುಗಳ ಮೇಲೆ ಕಣ್ಣಾಡಿಸುವುದು ಒಂದು ಕ್ರಮ. ಒಮ್ಮೊಮ್ಮೆ ಇಷ್ಟವೆನಿಸುವ ಪುಸ್ತಕವನ್ನು ಎಷ್ಟೋ ಹೊತ್ತು ಓದಿದ ಮೇಲೆ ಮೇಲೇಳುವುದಾಗುತ್ತಿತ್ತು. ಎಷ್ಟೋ ಕೆಲಸಗಳು ಜರೂರಾಗಿ ಆಗಬೇಕಾಗಿದ್ದಾಗಲೂ ಆಗಿಂದಾಗ ಕೂಡ್ರಿಸಿಕೊಂಡು ಓದಿಸಿಕೊಳ್ಳುವ ಪುಸ್ತಕಗಳ ಲೋಕ ಮತ್ತು ಅವು ಒಳಗೊಂಡಿರುವ ಅನುಭವಗಳು ವಿಶಿಷ್ಟವಾಗಿರುವಂತಹವು. ಚಂಪಾ ಅವರ ‘ಸಂಕ್ರಮಣ’ ಬಂದಾಗ ಚಂಪಾಕಾಲಂ ಓದಿ ಮುಗಿಸಿದ ಮೇಲೆಯೇ ಏಳುವುದಿತ್ತು. ವಿವೇಕ ಶಾನಭಾಗರ ‘ದೇಶಕಾಲ’ ಕೂಡ ಹೀಗೆಯೇ ಕುರ್ಚಿಗೆ ಅಂಟಿಸಿ ಕುಳ್ಳಿರಿಸುತ್ತಿತ್ತು. ಅನೇಕ ಹೊಸ ಲೇಖಕರ ಪುಸ್ತಕಗಳು ಬಂದಾಗಲೂ ಅವರ ಅಭಿವ್ಯಕ್ತಿ ಕೌಶಲದ ಬಗ್ಗೆ ಒಂದು ರೀತಿಯ ಕುತೂಹಲ. ಆವತ್ತು ಹೀಗೆಯೇ ಚೆಂದಾಗಿ ರೂಪುಗೊಂಡ ಒಂದು ಪುಸ್ತಕ ಥಟ್ಟನೆ ನನ್ನನ್ನು ಆವರಿಸಿಕೊಂಡಿತು. ಉತ್ತರ ಕನ್ನಡ ಜಿಲ್ಲೆ ಕದ್ರಾದಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಕವಿಯತ್ರಿ ಅಕ್ಷತಾ ಕೃಷ್ಣಮೂರ್ತಿ ಸಂಪಾದಿಸಿರುವ ‘ಹಾಲಕ್ಕಿ ಕೋಗಿಲೆ’ ಯಾರ ಗಮನವನ್ನಾದರೂ ಒಮ್ಮೆಲೆ ಸೆಳೆಯುವಂತಹದು. ಕನ್ನಡದ ಹೆಸರಾಂತ ಜನಪದ ಹಾಡುಗಾರ್ತಿ ಹಾಗೂ ದೇಸಿ ಸಂಸ್ಕøತಿಯ ವಕ್ತಾರೆ ಸುಕ್ರಿ ಬೊಮ್ಮಗೌಡ ಅವರ ಬದುಕಿನ ಮಜಲುಗಳು ಈ ಕೃತಿಯಲ್ಲಿ ಮೈದಾಳಿದ್ದು ಅವುಗಳನ್ನು ಕನ್ನಡದ ಹಲವು ಹಿರಿಯ ಲೇಖಕರ ದೃಷ್ಟಿಕೋನದ ಮೂಲಕ ಇಲ್ಲಿ ಕಟ್ಟಿಕೊಡಲಾಗಿದೆ. ಸುಕ್ರಿ ಕನ್ನಡದ ನಿಜ ಕೋಗಿಲೆ, ಆಕೆ ಕಾಡಿನ ಮಗಳು ಎನ್ನುವುದನ್ನು ಈ ಕೃತಿ ಪ್ರಾಮಾಣಿಕವಾಗಿ ತೆರೆದಿಡುವ ಪ್ರಯತ್ನ ಮಾಡುತ್ತದೆ. 

    ಪರಿವಿಡಿಯ ಲೇಖಕರ ಬಳಗದಲ್ಲಿ ನನ್ನ ಹೆಸರೂ ಇತ್ತು. ಓಹ್! ಮೂರು ವರ್ಷದ ಹಿಂದೆ ನಾನು ಕಾರವಾರ ಆಕಾಶವಾಣಿಯಲ್ಲಿದ್ದಾಗ ಸುಕ್ರಿಯವರನ್ನು ಅನೇಕ ಸಲ ನೋಡುವ, ಮಾತನಾಡಿಸುವ, ಆಕಾಶವಾಣಿಗೆ ಅವರನ್ನು ಕರೆಸಿ ಅವರಿಂದ ಹಾಡು ಹಾಡಿಸುವ ಸಂದರ್ಭಗಳು ನನಗೆ ಒದಗಿಬಂದಿದ್ದವು. ನಾನು ಕಾರವಾರದಲ್ಲಿ ಇದ್ದಾಗಲೆ ಸುಕ್ರಿಯವರಿಗೆ ಪದ್ಮಶ್ರೀ ಗೌರವ ಕೂಡ ಬಂದಿತು. ಆ ಸಮಯದಲ್ಲಿ ಅವರಷ್ಟು ವಿನಯಶೀಲೆಯಾದ ಕಲಾವಿದೆಯನ್ನು ನಾನು ಇದುವರೆಗೂ ನೋಡಿಲ್ಲವೆಂದೇ ಹೇಳಬೇಕು. ಆ ಗೌರವ ಬಂದದ್ದು ತನಗಲ್ಲ, ಬದಲಾಗಿ ತನ್ನ ಹಾಡಿಗೆ, ತನ್ನೂರಿಗೆ ಮತ್ತು ತನ್ನ ಪ್ರದೇಶಕ್ಕೆ ಎಂದು ಅವರು ತುಂಬಿದ ಕಣ್ಣುಗಳಿಂದ ಹೇಳುವಾಗ ನಮಗೆ ಮನಸು ತುಂಬಿತ್ತು. ಕವಯತ್ರಿ ಅಕ್ಷತಾ ಕೃಷ್ಣಮೂರ್ತಿಯವರು ಮುಂದೆ ಒಂದು ದಿನ ನನ್ನಿಂದ ಒಂದು ಲೇಖನ ಬರೆಸಿದ್ದರು. ನಾನು ಕಾರವಾರ ಬಿಟ್ಟು ಧಾರವಾಡ ಆಕಾಶವಾಣಿಗೆ ಬಂದ ಮೇಲೆ ಅದರ ಬಗ್ಗೆ ಮರೆತೆ ಬಿಟ್ಟಿದ್ದೆ. ಈಗ ಇದ್ದಕ್ಕಿದ್ದಂತೆ ಅನಪೇಕ್ಷಿತವಾಗಿ ಅದು ಸುಂದರ ಪುಸ್ತಕವಾಗಿ ನನ್ನ ಕಣ್ಣ ಮುಂದೆ ಬಂದಾಗ ತುಂಬ ಸಂತೋಷವಾಯಿತು.
 
  ನನ್ನ ಲೇಖನಕ್ಕಿಂತ ವಿಷ್ಣು ನಾಯ್ಕ, ಡಾ. ಹಿ.ಚಿ.ಬೋರಲಿಂಗಯ್ಯ, ಡಾ. ರಾಮಕೃಷ್ಣ ಗುಂದಿ, ಡಾ. ಶಾಂತಿ ನಾಯಕ ಮುಂತಾದ ಹಿರಿಯ ಲೇಖಕರು ಸುಕ್ರಿಯವರ ಜೀವನಗಾಥೆಯನ್ನು ತಾವು ಕಂಡಂತೆ ಕಡೆದಿರಿಸಿರುವುದರ ಬಗೆ ವಿಶಿಷ್ಟವಾಗಿದೆ. ‘ಕಲ್ಲ ಕಡಬ ಮಾಡಿ, ಮುಳ್ಳು ಶಾವಿಗೆ ಮಾಡಿ’ ಬದುಕು ಸಾಗಿಸಿರುವ, ಬದುಕಿನ ಕಠೋರ ಪ್ರಸಂಗಗಳಲ್ಲಿಯೂ ಹಾಡುವುದನ್ನು ನಿಲ್ಲಿಸದ ಸುಕ್ರಿ ಬೊಮ್ಮಗೌಡ ಅವರ ಸವಾಲಿನ ಜೀವನ ಎನ್.ಆರ್.ನಾಯಕ, ಸಿರಿಗಂಧ ಶ್ರೀನಿವಾಸಮೂರ್ತಿ, ಶಾಲಿನಿ ರಘುನಾಥ, ಶ್ರೀಪಾದ ಶೆಟ್ಟಿ ಮುಂತಾದ ಲೇಖಕರು ಕಟ್ಟಕೊಟ್ಟಿರುವ ಶಬ್ದಚಿತ್ರಗಳಲ್ಲಿ ದಾಖಲಾಗಿದೆ. ಎಚ್.ಎಲ್.ನಾಗೇಗೌಡ ಅವರು ಸುಕ್ರಿಯ ಊರು ಬಡಗೇರಿಗೆ ಬಂದಿದ್ದು, ಟೇಪ್ ರಿಕಾರ್ಡರ್‍ನಲ್ಲಿ ಸುಕ್ರಿಯ ಹಾಡುಗಳು ಸುಮಾರು ನಲವತ್ತು ವರ್ಷಗಳ ಹಿಂದೆ ಧ್ವನಿಮುದ್ರಣಗೊಂಡು ರಾಜಧಾನಿಯಲ್ಲಿ ಅವು ಒಂದು ರೀತಿಯಲ್ಲಿ ಸಂಚಲನ ಮೂಡಿಸಿದ್ದು ಇಲ್ಲಿ ಆಸ್ಥೆಯಿಂದ ನಿರೂಪಿಸಲ್ಪಟ್ಟಿವೆ. ಸುಕ್ರಜ್ಜಿಯ ಸಸ್ಯಜ್ಞಾನದ ಕುರಿತು ಈ ಕೃತಿಯಲ್ಲಿ ಹೇಳಲಾಗಿದೆ. ‘ಸುಕ್ರಿ ಅವರ ಹಾಡುಗಳು ಏನೋ ರಂಜನೆಗಾಗಿ ಹಾಡಿದ ಹಾಡುಗಳಲ್ಲ, ಬದಲಾಗಿ ಅವರು ಬದುಕಿನಲ್ಲಿ ಬೆಂದ ಹಾಡುಗಳು’ ಎಂದು ಅಕ್ಷತಾ ಅವರು ಹೇಳುವುದು ಈ ದೇಸಿ ಜನಪದ ಗಾಯಕಿಯ ಏಳು-ಬೀಳುಗಳನ್ನು ಅವಲೋಕಿಸಿದಾಗ ನಿಜವೆನ್ನಿಸುತ್ತದೆ. 

    ನಾಡಿನ ಕಟ್ಟಕಡೆಯ ಹಳ್ಳಿಯೊಂದರಲ್ಲಿ ಜೀವನ ನಿರ್ವಹಿಸುತ್ತ, ತಮಗೆ ಬಳುವಳಿಯಾಗಿ ಬಂದಂತಹ ಮತ್ತು ತಮ್ಮ ಕೌಶಲದಿಂದ ರೂಢಿಸಿಕೊಂಡ ಜನಪದ ಗಾಯನವನ್ನು ಸುಕ್ರಿ ಅವರು ಪೋಷಿಸಿರುವುದು ಕನ್ನಡ ಸಂಸ್ಕøತಿಯನ್ನು ವಿಸ್ತಾರಗೊಳಿಸುವ ಒಂದು ಮಹತ್ವದ ಪ್ರಯತ್ನವೇ ಆಗಿದೆ. ಪುಸ್ತಕ ಸಂಪಾದನೆಯ ಕೆಲಸ ಯಾವಾಗಲೂ ಅಪಾರ ಶ್ರಮ ಮತ್ತು ತಾಳ್ಮೆಯನ್ನು ಬೇಡುವಂತಹುದು. ಸುಕ್ರಿಯಂತಹ ಗಾಯಕಿಯನ್ನು ಕಂಡು, ಅವರ ಮನೆಯಲ್ಲಿ ಓಡಾಡಿ, ಅವರ ಸಂಗಡಿಗರೊಂದಿಗೆ ದನಿಗೂಡಿಸಿ, ಜನಪದ ಕಲಾವಿದೆಯರು ಹಾಕಿದ ರಂಗೋಲಿಗಳಿಗೆ ಅರ್ಥ ಬಿಡಿಸುತ್ತ, ಅವರ ಕೊರಳೊಳಗಿನ ರಾಶಿ ರಾಶಿ ಸರಗಳ ಮುತ್ತುಗಳಿಗೆ ಮೌಲ್ಯ ಕಟ್ಟುತ್ತ ಅಕ್ಷತಾ ಅವರು ಸಂಪಾದಿಸಿರುವ ಈ ಕೃತಿ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ಸುಕ್ರಿ ಅವರ ಗೆಲುವುಗಳು ಅಷ್ಟೇ ಅಲ್ಲ, ಅವರ ಸೋಲುಗಳು ಕೂಡ ಇಲ್ಲಿ ಹೇಳಲ್ಪಟ್ಟಿದ್ದು ಸೋಲಿನಿಂದ ಎಂದೂ ಹತಾಶೆಯನ್ನು ಅನುಭವಿಸದ ಒರ್ವ ದಿಟ್ಟ ಹೆಣ್ಣಾಗಿ ಸುಕ್ರಿ ಕಂಗೊಳಿಸುವುದು ಇಲ್ಲಿಯ ಹೆಚ್ಚುಗಾರಿಕೆಯಾಗಿದೆ. 

ಪುಸ್ತಕ ಅನೇಕ ಅಪರೂಪದ ಚಿತ್ರಗಳನ್ನು ಕೂಡ ಒಳಗೊಂಡಿದ್ದು ಅಕ್ಷರಗಳು ಎದೆಯಾಳಕ್ಕೆ ಇಳಿಯಲು ಅವು ನೆರವಾಗುತ್ತವೆ. ವಿವಿಧ ಲೇಖಕರು ಈ ನಾಡೋಜಳನ್ನು ಬಣ್ಣಿಸಿರುವುದು ಕೂಡ ಒಂದು ರೀತಿಯಲ್ಲಿ ವಿಶಿಷ್ಟವೇ ಎಂದು ಹೇಳಬೇಕು. ಇಂತಹ ಒಂದು ಕೃತಿಯನ್ನು ಸಂಪಾದಿಸಿರುವ ಅಕ್ಷತಾ ಕೃಷ್ಣಮೂರ್ತಿ ಹಾಗೂ ಅದನ್ನು ಪ್ರಕಾಶನ ಮಾಡಿರುವ ‘ಪಂಚಮಿ ಮೀಡಿಯಾ ಪಬ್ಲಿಕೇಶನ್ಸ್, ಬೆಂಗಳೂರು’ ಇವರಿಗೆ ಅಭಿನಂದನೆಗಳು ಸಲ್ಲುತ್ತವೆ. 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *