Latestಪುಸ್ತಕ ಸಮಯ

ಪುಸ್ತಕಸಮಯ/ ದೇಹ ಭಾಷೆಯ ಘನತೆಯ ವ್ಯಾಖ್ಯಾನ- ಡಾ. ಲಲಿತಾ ಹೊಸಪ್ಯಾಟಿ

“ಟೀನೇಜ್ ತಲ್ಲಣಗಳು” – ಪ್ರೌಢಾವಸ್ಥೆ ತಲುಪುವ ಹೆಣ್ಣುಮಕ್ಕಳು ತಮ್ಮಲ್ಲಿ ಆಗುವ ಬದಲಾವಣೆಗಳನ್ನು ಕುರಿತು ಸ್ವತಃ ತಾಯಿಯ ಹತ್ತಿರ ಮಾತನಾಡುವುದೂ ಕಷ್ಟ, ಮಗಳ ಹತ್ತಿರ ತಾಯಿ ಹೇಳುವುದೂ ಸಂಕೋಚದ ವಿಷಯ ಎಂಬ ಸಾಂಪ್ರದಾಯಿಕ ಮನೋಭಾವ ನಮ್ಮಲ್ಲಿ ಇನ್ನೂ ಉಳಿದಿದೆ. ಕಿಶೋರಾವಸ್ಥೆಯ, ಪ್ರೌಢಾವಸ್ಥೆಯ ತಲ್ಲಣಗಳಿಗೆ ಕಿವಿಗಳು ಸಿಗದಿರುವ ದುರದೃಷ್ಟ ನಮ್ಮ ಹೆಣ್ಣುಮಕ್ಕಳ ಪಾಲಿಗಿದೆ. ಈ ಕುರಿತು ಕನ್ನಡದಲ್ಲಿ ತಿಳಿಹೇಳುವ ಪುಸ್ತಕಗಳ ಕೊರತೆಯೂ ಇದೆ. ಡಾ. ವಸುಂಧರಾ ಭೂಪತಿ ಅವರು ಬರೆದ “ಟೀನೇಜ್ ತಲ್ಲಣಗಳು” ಈ ಕೊರತೆಯನ್ನು ನೀಗುವ ನಿಟ್ಟಿನಲ್ಲಿ ಒಂದು ಉತ್ತಮ ಪ್ರಯತ್ನ.

ಜೈವಿಕ ಬದಲಾವಣೆಗಳಿಗೆ, ಲಿಂಗ ಸಂವೇದಿತ ಭಾವನೆಗಳಿಗೆ ಪಕ್ಕಾಗುವ ಹುಡುಗಿಯರಿಗೆ ಮನೆಯಲ್ಲಿ ಅಥವಾ ಶಾಲೆಯಲ್ಲಿ ಎಲ್ಲ ವಿವರಗಳು ತಿಳಿಯುವುದು ನಮ್ಮ ಸಮಾಜದಲ್ಲಿ ಇನ್ನೂ ದುರ್ಲಭ. ಹೆಣ್ಣುಮಗಳು ತಾನು ಯೌವನಕ್ಕೆ ಕಾಲಿಡುತ್ತಿರುವಾಗ, ಗಮನ ಹರಿಸಬೇಕಾದ ಸಂಗತಿಗಳ ಬಗ್ಗೆ ಸರಳ ಕನ್ನಡದಲ್ಲಿ ತಿಳಿಸುವ “ಟೀನೇಜ್ ತಲ್ಲಣಗಳು” ಸಂಪೂರ್ಣವಾಗಿ ಹುಡುಗಿಯರ ತಲ್ಲಣಗಳಿಗೆ ಸಂಬಂಧಿಸಿದ್ದು. “ಹೊರಗಣ ಸಿಪ್ಪೆ ಒಪ್ಪಾಗದ ತನಕ ಒಳಗಣ ಸಿಪ್ಪೆ ಹಣ್ಣಾಗದು” ಎಂಬುದನ್ನು ಅರ್ಥ ಮಾಡಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಇಲ್ಲಿ ಸುಲಭ ಮಾಡಿ ತೋರಿಸಿರುವ ಡಾ. ವಸುಂಧರಾ ಭೂಪತಿ ಬಹಳ ಕಣ್ಣೆಚ್ಚರಿಕೆಯಲ್ಲಿ, ಶಬ್ದದೆಚ್ಚರಿಕೆಯಲ್ಲಿ ಈ ಪುಸ್ತಕವನ್ನು ಬರೆದಿದ್ದಾರೆ.
ಡಾ. ಎನ್.ಎಸ್. ಲೀಲಾ ಅವರು ಕೃತಿಯ ಮುನ್ನುಡಿಯಲ್ಲಿ “ತನುವೆಂಬ ತೋಟದಲ್ಲಿ ಚಿತ್ತವೆಂಬ ಹೂವನ್ನು ಅರಳಿಸುವ ಮೊಗ್ಗನ್ನು ಯಾವ ಯಾವ ವೈರಿಗಳಿಂದ ದೂರವಿರಿಸಿಕೊಳ್ಳಬೇಕಾದ ಉಪಾಯಗಳನ್ನು ವಿವರಿಸುತ್ತಾರೆ. ಅಪಾಯದ ಎಚ್ಚರಿಕೆಯನ್ನೂ ಕೊಟ್ಟು ಪರಿಹಾರವನ್ನೂ ಕೊಡುವ ಸಾಮಗಾತ್ಮಕ ಹೊಸ ಪುಸ್ತಕ ನಮ್ಮ ಹೆಣ್ಣು ಮಕ್ಕಳಿಗಾಗಿ ಬಂದಿದೆ ಎಂಬುದೇ ಖುಷಿ” ಎಂಬ ಮಾತು ಹೇಳಿರುವುದರಲ್ಲಿ ಸತ್ಯಾಂಶವಿದೆ.

ವೈದ್ಯೆಯಾಗಿ ದೈಹಿಕ ಹಾರ್ಮೋನ್‍ಗಳ ವ್ಯತ್ಯಾಸಗಳು, ಶಾರೀರಿಕ ಬದಲಾವಣೆಗಳು ಅದಕ್ಕೆ ಸಲಹೆಗಳು ಎಲ್ಲವನ್ನೂ ಹದಿಹರೆಯದ ಹುಡುಗಿಗೆ ವಿವರಿಸುವುದು, ಏನಾದರೂ ವ್ಯತ್ಯಾಸ ಕಂಡುಬಂದರೆ ಅದನ್ನು ಔಷಧೋಪಚಾರಗಳಿಂದ ಗುಣ ಪಡಿಸುವುದು ಅವರು ದಕ್ಷತೆಯಿಂದ ಮಾಡುತ್ತಿರುವ ಕೆಲಸ. ಆದರೆ ಅದನ್ನೇ ಕರಾರುವಾಕ್ಕಾಗಿ ಅಕ್ಷರರೂಪಕ್ಕೆ ಇಳಿಸುವುದಕ್ಕೆ ಬೇರೆ ರೀತಿಯ ಸಾಮಥ್ರ್ಯ ಅಗತ್ಯ. ಈ ಕೃತಿಯನ್ನು ಓದಿದವರಿಗೆ ಈ ಎರಡೂ ಇಲ್ಲಿ ಎದ್ದು ಕಾಣುತ್ತದೆ. ಡಾ. ವಸುಂಧರಾ ಭೂಪತಿ ಇಲ್ಲಿ ಸಮಸ್ಯೆಗಳಿಗೆ ಔಷಧ ಪರಿಹಾರ ಮತ್ತು ಮಾನಸಿಕ ಪರಿಹಾರ ಎರಡನ್ನೂ ನೀಡುತ್ತಾರೆ.

ಹೆಣ್ಣುಮಕ್ಕಳ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ನೂರೆಂಟು. ಅದರಲ್ಲೂ ಹದಿಹರೆಯಕ್ಕೆ ಕಾಲಿಡುತ್ತಿರುವ ಹುಡುಗಿ ಯುವತಿಯಾಗಿ ಪರಿವರ್ತಿತವಾಗುವ ಕಾಲಘಟ್ಟದಲ್ಲಿ ಆ ಸೂಕ್ಷ್ಮ ಸನ್ನಿವೇಶವೇ ತುಂಬಾ ನಾಜೂಕು. ಇಂತಹ ನಾಜೂಕಿನ ಸಂಗತಿಗಳನ್ನು ಯಾರಲ್ಲೂ ಬಾಯಿ ಬಿಡದ ಎಷ್ಟೋ ನಮ್ಮ ಹೆಣ್ಣು ಮಕ್ಕಳು ತಮ್ಮೊಳಗೆ ಅದುಮಿಟ್ಟುಕೊಂಡಾಗ ಅದೇ ಮಾನಸಿಕ ಸಂಘರ್ಷ, ಒತ್ತಡಕ್ಕೂ ಒಳಗಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅದಕ್ಕೆ ಪಕ್ಕಾಗದಂತೆ ಹೇಗಿರಬೇಕೆಂಬ ಸಂಗತಿಗಳನ್ನು ಇಲ್ಲಿ ಧಾರಾಳವಾಗಿ ನಿರೂಪಿಸಿದ್ದಾರೆ.
ಹೀಗಾಗಿ ಋತು ಬದಲಾದಂತೆ ಪ್ರಕೃತಿಯ ಬಣ್ಣವೂ ಬದಲಾಗುತ್ತದೆ, ಅದಕ್ಕೆ ಒಗ್ಗುತ್ತದೆ. ಹಾಗೇ ಸೃಷ್ಟಿಯ ಚೈತನ್ಯಕ್ಕೆ ಕಾರಣವಾಗುವ ಹೆಣ್ಣು ಮಗಳು ವೈಜ್ಞಾನಿಕವಾಗಿಯೂ ತನ್ನ ದೇಹದ ನಿಲುವುಗಳ ಬಗ್ಗೆ ತಿಳಿದು ಮಾನಸಿಕವಾಗಿ ಬದಲಾಗುವ ವ್ಯವಸ್ಥೆಗೆ ಹೇಗೆ ವೈಜ್ಞಾನಿಕ ಸ್ಪಂದನೆ ಹೊಂದಿರಬೇಕು ಎಂಬುದರ ಮೇಲೆ ಬೆಳಕು ಚೆಲ್ಲುವ ಕೃತಿಯಿದು. ರಾತ್ರಿ ಮೊಗ್ಗಾಗಿದ್ದ ಸಸ್ಯದ ಒಂದು ಕಾಂಡದ ಭಾಗ ಮೊಗ್ಗು ಎಂಬ ಹೆಸರಿನಲ್ಲಿದ್ದು, ಬೆಳಗಾಗುವುದರೊಳಗೆ ತನ್ನ ಸ್ಥಿತಿಯನ್ನೇ ಬದಲಿಸಿಕೊಂಡು ಹೂವಾಗುತ್ತದೆ. ಅಂದರೆ ಅದನ್ನೇ ಡಾ, ವಸುಂಧರಾ ಮೊಗ್ಗು ಹೂವಾಗಿ ಅರಳುವ ಸುಸಮಯ ಎಂದಿದ್ದಾರೆ. ಹೀಗೆ ಹುಡುಗಿಯೊಬ್ಬಳು ಯುವತಿಯಾಗಿ ಮಾರ್ಪಡುವ ಕ್ರಿಯೆ ಬೆಳಗಾಗುವುದರಲ್ಲಿ ಆಗುವಂತದ್ದಲ್ಲ. ಅದೂ ವರ್ಷಗಟ್ಟಲೆ ತೆಗೆದುಕೊಳ್ಳುವ ಪ್ರಕಿಯೆ. ಈ ಪ್ರಕ್ರಿಯೆ ಕುರಿತು ಬರೆಯುವವರೂ ಸಂಕೋಚ ಪಕ್ಕಕ್ಕಿಟ್ಟು ಬರೆಯಬೇಕು, ಓದುವವರೂ ಸಂಕುಚಿತ ಭಾವದ ಪರದೆ ಸರಿಸಿಯೇ ಓದಬೇಕು.

“ಟೀನೇಜ್ ತಲ್ಲಣಗಳು” ಪುಸ್ತಕ ಓದುವುದರಿಂದ ಹುಡುಗಿಯರ ಆತ್ಮವಿಶ್ವಾಸ ದ್ವಿಗುಣವಾಗುತ್ತದೆ, ಶಾರೀರಿಕ ವಿಷಯಗಳ ಕುರಿತು ಜ್ಞಾನ ಲಭಿಸುತ್ತದೆ. ದೇಹರಚನೆಯ ವೈಜ್ಞಾನಿಕ ಹೆಸರುಗಳು, ಅವು ಸ್ರವಿಸುವ ರಾಸಾಯನಿಕಗಳ ಕುರಿತು ತಿಳಿವು ಮೂಡುತ್ತದೆ. ಅಷ್ಟೇ ಅಲ್ಲದೇ ತಾನೇ ತನಗೆ ಒಂದು ರೀತಿ ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ಕೃತಿಯಲ್ಲಿ ಟಿನೇಜ್ ತಲ್ಲಣಗಳಿಗೆ ಸಂಬಂಧಿಸಿ ವಿಷಯವನ್ನು ಎರಡು ಭಾಗದಲ್ಲಿ ವಿವರಿಸಲಾಗಿದೆ. ಒಂದು- ಹದಿಹರೆಯದ ತಲ್ಲಣಗಳು. ಎರಡು -ಸೌಂದರ್ಯ. ಹದಿಹರೆಯದ ಬದಲಾವಣೆಗಳಲ್ಲಿ ಕಂಡು ಬರುವ ಸಂಗತಿಗಳನ್ನು ಲೇಖಕಿಯೂ ವೈದ್ಯೆಯೂ ಆಗಿರುವ ಡಾ ವಸುಂಧರಾ ಭೂಪತಿಯವರು ಉದಾಹರಣೆಗಳ ಜೊತೆಗೆ ತಮ್ಮ ಕ್ಲಿನಿಕ್‍ಗೆ ಬರುವ ಹೆಣ್ಣು ಮಕ್ಕಳು ಕೇಳುವ ಪ್ರಶ್ನೆಗಳನ್ನು ಆಧಾರವಾಗಿಟ್ಟುಕೊಂಡು ಬರೆದಿದ್ದಾರೆ. ಎದುರು ಬದುರು ಕೂತು ಕೇಳಿ ಅದಕ್ಕೆ ಪರಿಹಾರ ತಿಳಿಸಿಕೊಟ್ಟಂತಿದೆ.

ದೈಹಿಕ ಬೆಳವಣಿಗೆ, ಹದಿಹರೆಯದ ಹುಡುಗಿಗೆ ಆರೈಕೆ, ಋತುಸ್ರಾವದ ತೊಂದರೆಗಳು, ಮಾನಸಿಕ ಬೆಳವಣಿಗೆ, ರಸದೂತಗಳು, ಲೈಂಗಿಕ ಬೆಳವಣಿಗೆ, ಲೈಂಗಿಕತೆ, ಉರಿಮೂತ್ರ, ಸಾಮಾಜಿಕ ಬೆಳವಣಿಗೆ, ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು, ಹದಿಹರೆಯದ ಜೀವನ ಕೌಶಲ್ಯ, ಸೃಜನಶೀಲತೆ- ಈ ಸಂಗತಿಗಳು ಟೀನ್ ಏಜ್ ನಲ್ಲಿ ಯಾವ ರೀತಿಯಲ್ಲಿ ಇರುತ್ತವೆ ಎಂಬುದು ತುಂಬಾ ಮಹತ್ವದ್ದು. ಋತುಸ್ರಾವದ ತೊಂದರೆಗಳಿಗೆ ಅತ್ಯಮೂಲ್ಯ ಸಲಹೆಗಳು ಇಲ್ಲಿವೆ. ಹರೆಯಕ್ಕೆ ಕಾಲಿಟ್ಟ ಹುಡುಗಿಯರಿಗೆ ಪ್ಯಾಡ್‍ಗಳು, ಟ್ಯಾಂಪೂನ್‍ಗಳು, ಕಪ್‍ಗಳು ಇವುಗಳನ್ನು ಉಪಯೋಗಿಸುವ ವಿಧಾನದ ಅತ್ಯುಪÀಯುಕ್ತ ಮಾಹಿತಿ ಒದಗಿಸುತ್ತದೆ. ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅಪರೂಪದ ಮಾಹಿತಿಗಳು ಇಲ್ಲಿವೆ.

ಹದಿಹರೆಯದ ಹುಡುಗಿಗೆ ಆರೈಕೆ ಬೇಕೇಬೇಕು. ಮನೆಯ ಹೆಣ್ಣುಮಗಳು ಹರೆಯಕ್ಕೆ ಕಾಲಿಟ್ಟಾಗ ಅವಳ ಆರೋಗ್ಯ, ಅವಳ ಆಹಾರ, ಮಾನಸಿಕ ಸಬಲತೆ ಕುರಿತು ಯೋಚಿಸಲೇ ಬೇಕು. ಋತುಸ್ರಾವವಾಗುವ ಹುಡುಗಿಗೆ ಪೌಷ್ಟಿಕ ಆಹಾರ, ಆರೋಗ್ಯ ರಕ್ಷಣೆಯ ಸೂತ್ರಗಳು ದೇಹದ ಜೀವಕೋಶಗಳಿಗೂ, ಅಂಗಾಂಗಗಳಿಗೂ ದೊರೆಯಬೇಕು. ಆರೋಗ್ಯಕರ ದೇಹಕ್ಕಾಗಿ ದೇಹಕ್ಕೆ ಶರ್ಕರ ಪಿಷ್ಟ, ಪ್ರೊಟೀನ್ ಮೇದಸ್ಸು, ಜೀವಸತ್ವಗಳು ಖನಿಜಗಳು ದೇಹ ಸುಸ್ಥಿತಿಗೆ ಬೇಕು. ಹುಡುಗಿಯರು ಇವೆಲ್ಲ ಪ್ರಮುಖ ಮಾಹಿತಿಗಳನ್ನು ಪಡೆಯಲು, ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಹಾಗೂ ತಂದೆ ತಾಯಿ ಪೋಷಕರು ಕೂಡ ತಿಳಿವಳಿಕೆ ಪಡೆಯಲು ಇದೊಂದು ಮಾರ್ಗದರ್ಶಕ ಪುಸ್ತಕ ಎಂದರೆ ತಪ್ಪಾಗಲಾರದು.

ಡಾ. ವಸುಂಧರಾ ಭೂಪತಿ ಅವರದು ದೂರದೃಷ್ಟಿಯ ಮಹಿಳಾ ವೈಚಾರಿಕತೆಯ ಪ್ರತಿಪಾದಕರು. ಹೀಗಾಗಿ ಈ ಕೃತಿಯಲ್ಲಿ ಹುಡುಗಿಯರು ಆಯಾ ಸಮಯ ಸಂದರ್ಭದಲ್ಲಿ ಎದುರಿಸುವ ದೈಹಿಕ, ಮಾನಸಿಕ, ಸಾಮಾಜಿಕ ವಿಪತ್ತುಗಳು, ಸಮಸ್ಯೆಗಳು ಮತ್ತು ಅವುಗಳನ್ನು ಎದುರಿಸಲು ಬೇಕಾಗುವ ಜೀವನ ಕೌಶಲ್ಯ ಪಾಠಗಳನ್ನು ಇಲ್ಲಿ ತಿಳಿಸಿದ್ದಾರೆ. ಆಕ್ರಮಣಕಾರಿ ಮನೋಭಾವದಲ್ಲಿ ನೋಡದೇ, ಪರಿಹಾರ ಸ್ವರೂಪವನ್ನು ತನಗೆ ತಾನೇ ರೂಪಿಸಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ನಿರೂಪಿಸಿರುವ ಜೀವನ ಕೌಶಲ್ಯಗಳನ್ನು ಹದಿಹರೆಯಕ್ಕೆ ಕಾಲಿಡುವ ಹುಡುಗಿಯರು ಮಾತ್ರವಲ್ಲ ಎಲ್ಲ ಓದುಗರೂ ತಿಳಿಯುವಂತೆ ಹೇಳಿದ್ದಾರೆ. ಬೆಳೆಯುವ ಹುಡುಗಿಯರಿಗೆ ಉಡುಗೊರೆ ನೀಡಲು ಅತ್ಯಂತ ಸೂಕ್ತವಾದ ಪುಸ್ತಕ ಇದು ಎಂದು ಹೇಳಲಡ್ಡಿಯಿಲ್ಲ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *