ಪುರುಷಾಧಿಪತ್ಯದ ಸುಳಿಯಲ್ಲಿ ಮಂಜು ವಾರಿಯರ್?- ಉಷಾ ಕಟ್ಟೆಮನೆ

ಸಾರ್ವಜನಿಕ ಬದುಕಿನಲ್ಲಿರುವವರು ವೈಯಕ್ತಿಕ ಹಗರಣಗಳಲ್ಲಿ ಸಿಲುಕದಂತೆ ಎಚ್ಚರವಹಿಸಬೇಕು. ಒಂದು ವೇಳೆ ಸಿಕ್ಕಿಹಾಕಿಕೊಂಡರೆ ಮೌನದ ಮೊರೆಹೋಗುವುದೇ ಪ್ರಬುದ್ಧತೆಯ ಲಕ್ಷಣ. ಹಗೆ ಸಾಧಿಸುವುದು ಹತಾಶೆಯ ಪರಮಾವಧಿ

 

ಪ್ರತಿಭಟಿಸಬೇಕು.

ಅದು ಮೌನ ಪ್ರತಿಭಟನೆಯೇ ಇರಲಿ, ದನಿ ಎತ್ತರಿಸಿ ಕೂಗುವುದೇ ಇರಲಿ. ಅನ್ಯಾಯ, ಅಸಮಾನತೆಯ ವಿರುದ್ಧದ ನಮ್ಮ ಇರವನ್ನು ಜಾಹೀರುಪಡಿಸಲೇಬೇಕು; ಪ್ರಜಾವಂತ ಜನತೆಯ ಗಮನವನ್ನು ತಮ್ಮತ್ತ ಸೆಳೆಯಲೇಬೇಕು.

ನಟಿಯೊಬ್ಬಳ ಅಪಹರಣ ಮತ್ತು ಲೈಂಗಿಕ ಕಿರುಕುಳದ ಹಿನ್ನೆಲೆಯಲ್ಲಿ ಇಡೀ ಭಾರತೀಯ ಚಿತ್ರರಂಗ ಈಗ ಮಲೆಯಾಳಿ ಚಿತ್ರರಂಗದತ್ತ ಕಣ್ಣು ನೆಟ್ಟಿದೆ. ಅಮ್ಮ [ಮಲೆಯಾಳಿ ಸಿನಿಮಾ ಕಲಾವಿದರ ಸಂಘ]ದ ಮಹಿಳಾವಿರೋಧಿ ನಿಲುವನ್ನು ಖಂಡಿಸಿ ಇದೇ ಜುಲೈ ಮೊದಲ ವಾರದಲ್ಲಿ ಅಲ್ಲಿಯ ಪ್ರಮುಖ ನಾಲ್ಕು ನಟಿಯರು ಸಂಘದಿಂದ ಹೊರನಡೆದಿದ್ದಾರೆ. ಅದರಲ್ಲಿ ದೌರ್ಜನ್ಯಕ್ಕೆ ಒಳಗಾದ ನಟಿಯೂ ಸೇರಿದ್ದಾಳೆ. ಅದಕ್ಕೆ ಕಾರಣವಾಗಿದ್ದು ದೌರ್ಜನ್ಯದ ಹಿಂದಿನ ಸೂತ್ರಧಾರ ಎಂಬ ಆರೋಪವನ್ನು ಹೊತ್ತ ಈ ಕಾಲದ ಸೂಪರ್ ಸ್ಟಾರ್ ದಿಲೀಪ್ ನ ಪರವಾಗಿ ‘ಅಮ್ಮ’ ನಿಂತಿದ್ದು,

ಕಳೆದ ವರ್ಷ ಫೆಬ್ರವರಿಯಲ್ಲಿ ದಿಲೀಪನನ್ನು ಪೋಲಿಸರು ಬಂಧಿಸಿದಾಗ ತಕ್ಷಣ ಸೂಪರ್ ಸ್ಟಾರ್ ಮುಮ್ಮುಟಿಯ ಮನೆಯಲ್ಲಿ ‘ಅಮ್ಮ’ ಸಭೆ ನಡೆಸಿ ದಿಲೀಪ್ ಸದಸ್ಯತ್ವವನ್ನು ವಜಾಗೊಳಿಸಿತ್ತು. ಆದರೆ ‘ಅಮ್ಮ’ ದ ನೂತನ ಅಧ್ಯಕ್ಷರಾದ ಸೂಪರ್ ಸ್ಟಾರ್ ಮೋಹನ್ ಲಾಲ್ ಜುಲೈ ಮೊದಲ ವಾರದಲ್ಲಿ ಕರೆದ ತಮ್ಮ ಅಧ್ಯಕ್ಷಗಿರಿಯ ಮೊದಲ ಸಭೆಯಲ್ಲೇ ದಿಲೀಪ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡರು. ಅದನ್ನು ಪ್ರತಿಭಟಿಸಿಯೇ ಮೇಲೆ ಪ್ರಸ್ತಾಪಿಸಿದ ನಾಲ್ವರು ನಟಿಯರು ‘ಅಮ್ಮ’ದಿಂದ ಹೊರನಡೆದಿದ್ದರು. ನಟಿಯರ ಈ ನಡೆಯನ್ನು ಕೇವಲ ಮಲೆಯಾಳಿ ಚಿತ್ರರಂಗ ಮಾತ್ರವಲ್ಲ, ಕನ್ನಡವೂ ಸೇರಿದಂತೆ ಭಾರತೀಯ ಚಿತ್ರರಂಗವೂ ಬೆಂಬಲಿಸಿತು. ಸುದ್ದಿಮಾಧ್ಯಮಗಳು ಇದನ್ನು ಪ್ರಮುಖ ಸುದ್ದಿಯಾಗಿಸಿದವು. ಈಗ ‘ಅಮ್ಮ’ ತನ್ನ ನಿಲುವನ್ನು ಬದಲಿಸಿದೆ, ದಿಲೀಪ್ ಸದಸ್ಯತ್ವವನ್ನು ಮತ್ತೆ ವಜಾಗೊಳಿಸಿದೆ. ಇದು ಪ್ರತಿಭಟನೆಗಿರುವ ಶಕ್ತಿ.

ಈ ಘಟನೆಯ ಸುತ್ತ ಅನೇಕ ಸಿಕ್ಕುಗಳಿವೆ, ಹಲವು ಆಯಾಮಗಳಿವೆ. ಹೆಣ್ಣುಮಕ್ಕಳ ಅಸ್ತಿತ್ವದ ಪ್ರಶ್ನೆಯೂ ಅಡಗಿಕೊಂಡಿದೆ. ಚಿತ್ರರಂಗದಲ್ಲಿ ಮಾತ್ರವಲ್ಲ, ಹೆಣ್ಣೊಬ್ಬಳಿಂದ ಸಮಾಜಬಯಸುವ ಸಿದ್ಧಮಾದರಿಯನ್ನು ಒದ್ದು ಹೊರಬಂದಾಗ ಅವಳು ಎದುರಿಸುವ ತಲ್ಲಣಗಳು ಕೂಡಾ ಇಲ್ಲಿ ಸೂಕ್ಷ್ಮವಾಗಿ ವ್ಯಕ್ತವಾಗಿವೆ. ಈ ಘಟನೆಯಲ್ಲಿ ಸಿಲುಕಿಕೊಂಡ ಮಹಿಳೆಯರು ಬಹಿರಂಗವಾಗಿ ಏನನ್ನೂ ಹೇಳಿಲ್ಲ. ಹೇಳದೆಯೂ ಅವರನ್ನು ನಾವು ಓದಿಕೊಳ್ಳಲು ಸಾಧ್ಯ, ಯಾಕೆಂದರೆ ನಾನೂ ಒಬ್ಬಳು ಹೆಣ್ಣು. ಅದರಲ್ಲಿಯೂ ವೈವಾಹಿಕ ಚೌಕಟ್ಟಿನೊಳಗಿರುವ ಮಹಿಳೆ. ಹಾಗಾಗಿ ಈ ಘಟನೆಯನ್ನು ಅರ್ಥಮಾಡಿಕೊಳ್ಳಲು ಹಿನ್ನೋಟದ ಜೊತೆಗೆ ಅಂತರ್ನೋಟದ ಅವಶ್ಯಕತೆಯೂ ಇದೆ.

2017 ರ ಫೆಬ್ರವರಿಯಲ್ಲಿ ಶೂಟಿಂಗ್ ಮುಗಿಸಿ ತನ್ನ ಕಾರಿನಲ್ಲಿ ಬರುತ್ತಿದ್ದ ಬಹುಭಾಷಾ ನಟಿಯೊಬ್ಬಳನ್ನು ಆಕೆಯದೇ ವಾಹನದಲ್ಲಿ ಏಳು ಜನರ ತಂಡವೊಂದು ಅಪಹರಿಸಿ ಚಲಿಸುತ್ತಿರುವ ವಾಹನದಲ್ಲೇ ಲೈಂಗಿಕ ದೌರ್ಜನ್ಯವೆಸಗಿತ್ತು. ಕೃತ್ಯ ಎಸಗಿದವರ ಜಾಡು ಹಿಡಿದ ಪೋಲಿಸರು ತನಿಖೆ ನಡೆಸಿ, ಸಾಂದರ್ಭಿಕ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ದಿಲೀಪನೇ ಅಪಹರಣದ ವ್ಯೂಹವನ್ನು ರಚಿಸಿದ್ದನೆಂದು, ಕ್ರಿಮಿನಲ್ ಹಿನ್ನೆಲೆಯುಳ್ಳ ಪುಲ್ಸಾರ್ ರವಿ ತನ್ನ ಸಹಚರರೊಡನೆ ಅದನ್ನು ಕಾರ್ಯಗತಗೊಳಿಸಿದ್ದನೆಂದು ಚಾರ್ಜ್ ಶೀಟ್ ಹಾಕಿತ್ತು. ಜುಲೈನಲ್ಲಿ ಏಳು ಆರೋಪಿಗಳ ಜೊತೆ ನಟ ದಿಲೀಪ್ ನನ್ನು ವಶಕ್ಕೆ ಪಡೆದುಕೊಂಡು ಜೈಲಿಗೆ ತಳ್ಳಿತು. ಜೈಲಿನಲ್ಲಿ ಮೂರು ತಿಂಗಳುಗಳನ್ನು ಕಳೆದ ದಿಲೀಪ್ ಅಕ್ಟೋಬರ್ ನಲ್ಲಿ ಜಾಮೀನು ಮೇಲೆ ಹೊರಬಂದಿದ್ದಾನೆ..

ಇದು ನಿಜವೇ ಆಗಿದ್ದಲ್ಲಿ, ದಿಲೀಪ್ ಗೆ ಆ ನಟಿಯ ಮೇಲೆ ಏನು ದ್ವೇಷವಿತ್ತು? ಎಂಬುದನ್ನೂ ಗಮನಿಸಬೇಕಾಗುತ್ತದೆ.

ಆ ನಟಿ ದಿಲೀಪ್ ನ ಪತ್ನಿಯಾದ ಮಂಜು ವಾರಿಯರ್ ನ ಗೆಳತಿಯಾಗಿದ್ದಳು. ದಿಲೀಪ್, ಸಹನಟಿ ಕಾವ್ಯ ಮಾಧವನ್ ಜೊತೆ ವಿವಾಹಬಾಹಿರ ಸಂಬಂಧ ಹೊಂದಿದ್ದಾನೆ ಎಂದು ಆಕೆ ಮಂಜು ವಾರಿಯರ್ ಗೆ ಚಾಡಿ ಹೇಳಿದ್ದಾಳೆ ಎಂಬುದು ದಿಲೀಪ್ ನ ಅರೋಪ. ಅದೇ ಅವನ ದ್ವೇಷಕ್ಕೆ ಕಾರಣವಾಗಿತ್ತು. ದಿಲೀಪ್ ಗೆ ಹಾಗೊಂದು ಸಂಬಂಧವಿತ್ತೇ? ಗೊತ್ತಿಲ್ಲ. ಆದರೆ 2012ರಲ್ಲಿ ಮಂಜು ವಾರಿಯರ್ ಹದಿನಾಲ್ಕು ವರ್ಷಗಳ ತನ್ನ ದಾಂಪತ್ಯ ಬದುಕಿನಿಂದ ಹೊರನಡೆಯುತ್ತಾಳೆ, ಜೊತೆಯಲ್ಲಿ ತನ್ನ ಏಕೈಕ ಮಗಳಾದ ಮೀನಾಕ್ಷಿ ದಿಲೀಪ್ ನನ್ನೂ ಕೂಡಾ ಜತೆಯಲ್ಲಿ ಕರೆದೊಯ್ಯುವುದಿಲ್ಲ ಮತ್ತು ಒಬ್ಬಂಟಿಯಾಗಿ ಬದುಕುತ್ತಾಳೆ, ಚಿತ್ರರಂಗಕ್ಕೆ ಮರುಪ್ರವೇಶ ಪಡೆಯುತ್ತಾಳೆ. 2014ರಲ್ಲಿ ಪರಸ್ಪರ ಒಪ್ಪಿಗೆಯ ಮೇಲೆ ಅವರು ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾರೆ. 2015ರಲ್ಲಿ ವಿಚ್ಛೇದನ ದೊರೆಯುತ್ತದೆ. 2016ರಲ್ಲಿ ಕಾವ್ಯ ಮಾಧವನ್ ಜೊತೆ ದಿಲೀಪ್ ಮದುವೆಯಾಗುತ್ತದೆ. ಮರುವರ್ಷವೇ ಅಂದರೆ ಕಳೆದ ವರ್ಷ ಪೆಬ್ರವರಿಯಲ್ಲಿ ನಟಿಯ ಅಪಹರಣವಾಗುತ್ತದೆ.

ಒಂದು ಸಿನಿಮಾಕ್ಕೆ ವಸ್ತುವಾಗಬಹುದಾದ ಕಥೆ!

ದಾಂಪತ್ಯದಲ್ಲಿ ತಣ್ಣನೆಯ ಕ್ರೌರ್ಯವೆಂಬುದೊಂದು ಇರುತ್ತದೆ. ಅದನ್ನು ದಂಪತಿಗಳಲ್ಲಿ ಯಾರಾದರೊಬ್ಬರು ಹೇಳಿಕೊಳ್ಳದೆ ಇದ್ದರೆ ಹೊರಗಿನವರಿಗೆ ಅರ್ಥವಾಗುವುದಿಲ್ಲ. ಅಂತಹದ್ದಕ್ಕೇನಾದರೂ ಮಂಜು ಒಳಗಾಗಿದ್ದರೆ? ತನ್ನ ಗೆಳತಿಯಾದ ಆ ನಟಿಯಲ್ಲಿ ಅದನ್ನು ತೋಡಿಕೊಂಡಿರಬಹುದೇ? ಖಂಡಿತಾ ನಮಗೆ ಗೊತ್ತಿಲ್ಲ. ಈ ನಿಗೂಢತೆಯನ್ನು ಸ್ವಲ್ಪಮಟ್ಟಿಗಾದರೂ ಅರಿತುಕೊಳ್ಳಬೇಕಾದರೆ ನಾವು ಅವರ ಅವರ ದಾಂಪತ್ಯ ಬದುಕಿನ ಕೆಲ ಪುಟಗಳನ್ನು ಓದಬೇಕಾಗುತ್ತದೆ. ಸುದ್ದಿಯಾಚೆಗಿನ ಕೆಲವು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಮಂಜುಗೆ ಡ್ಯಾನ್ಸ್ ಕಲಿಯುವ ಆಸೆಯಿತ್ತು. ಆದರೆ ಹೆತ್ತವರು ಒಪ್ಪಲಿಲ್ಲ. ಆಕೆಯ ಅಣ್ಣ ಡ್ಯಾನ್ಸ್ ಕ್ಲಾಸ್ ಗೆ ಹೋಗುತ್ತಿದ್ದ. ಮನೆಯಲ್ಲಿ ಅಣ್ಣನನ್ನು ಅನುಕರಣೆ ಮಾಡುತ್ತಿದ್ದ ಮಂಜುವಿನಲ್ಲಿ ಹುದುಗಿರುವ ಡ್ಯಾನ್ಸ್ ಪ್ರತಿಭೆಯನ್ನು ಗುರುತಿಸಿದ ತಾಯಿ ಕೊನೆಗೂ ಅವಳನ್ನು ಡ್ಯಾನ್ಸ್ ಶಾಲೆಗೆ ಸೇರಿಸುತ್ತಾರೆ. ಜಿಲ್ಲಾ ಕಲೋತ್ಸವದಲ್ಲಿ ಆಕೆಯ ಡ್ಯಾನ್ಸ್ ಕಂಡ ನಿರ್ಮಾಪಕರೊಬ್ಬರು ಅವಳನ್ನು ಚಿತ್ರರಂಗಕ್ಕೆ ಕರೆತಂದರು [1995]. ಆಗ ಅವಳ ವಯಸ್ಸು ಹದಿನಾರು. ಅದು ಮೋಹನ್ ಲಾಲ್, ಮುಮ್ಮುಟ್ಟಿ, ಸುರೇಶ್ ಗೋಪಿಯರ ಯುಗ. ಆದರೆ ಹದಿಹರೆಯದ ಈ ಹುಡುಗಿ ಇವರನ್ನೆಲ್ಲಾ ಮಂಕಾಗಿಸುವ ರೀತಿಯಲ್ಲಿ ಮಲೆಯಾಳಿ ಚಿತ್ರರಂಗದಲ್ಲಿ ಮಿಂಚಿದಳು. ಕೇವಲ ನಾಲ್ಕೇ ವರ್ಷದಲ್ಲಿ 24 ಚಿತ್ರಗಳಲ್ಲಿ ನಟಿಸಿದಳು, ನಟಿಸಿದಳು ಎನ್ನುವುದಕ್ಕಿಂತ ಆಳಿದಳು ಎನ್ನಬೇಕು, ಮಹಿಳಾ ಸೂಪರ್ ಸ್ಟಾರ್ ಆಗಿಬಿಟ್ಟಳು. [ನಮ್ಮಲ್ಲಿ ಮಾಲಾಶ್ರೀ ನೆನಪು ಬಂತೇ?] ಸಲ್ಲಾಪಂ, ತೂವಲ ಕೊಟ್ಟಾರಂ. ಸಮ್ಮರ್ ಇನ್ ಬೆತ್ಲೆಹೆಮ್, ಕಳಿಯಾಟ್ಟಂ..ಎಲ್ಲವೂ ಸೂಪರ್ ಹಿಟ್ ಚಿತ್ರಗಳೇ.

’ಸಲ್ಲಾಪ’ ಚಿತ್ರದಲ್ಲಿ ನಾಯಕನಟನಾಗಿದ್ದ ದಿಲೀಪ್ ತನ್ನ ಸಹನಾಯಕಿಯಾಗಿದ್ದ ಮಂಜುವನ್ನು ಮೆಚ್ಚಿಕೊಂಡು ಮದುವೆಯಾದ. ಮದುವೆಯಾದ ಕೂಡಲೇ [1998] ಮಂಜು ಚಿತ್ರರಂಗದಿಂದ ಕಣ್ಮರೆಯಾಗಿಬಿಟ್ಟಳು. ಆಗ ಅವಳ ವಯಸ್ಸು ಕೇವಲ 19 . ದಿಲೀಪನಿಗೆ 31. ಮತ್ತೆ ಅವಳು ಮರಳಿ ಚಿತ್ರರಂಗಕ್ಕೆ ಬಂದಿದ್ದು ಹದಿನಾಲ್ಕು ವರ್ಷಗಳ ನಂತರ [2012]. ’ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ’ ಕನ್ನಡದ ಹಾಡು ನೆನಪಾಯ್ತೇ?

ಆಕೆ ಪುನಃ ಬೆಳ್ಳಿ ಪರದೆಗೆ ರೀಎಂಟ್ರಿ ಕೊಟ್ಟ ಸಿನೇಮಾದ ಹೆಸರೇನು ಗೊತ್ತಾ? ’ಹೌ ಓಲ್ಡ್ ಆರ್ ಯೂ’[ 2014]. ಮಧ್ಯ ವಯಸ್ಸಿನ ಸಂಘರ್ಷಗಳನ್ನು ಎದುರಿಸುತ್ತಿರುವ ನಿರುಪಮ ರಾಯ್ ಎಂಬ ಪ್ರೌಢೆಯ ಸುತ್ತ ಹೆಣೆದ ಪಾತ್ರವದು. ಅದರ ನಿರ್ದೇಶಕ ಅಂಡ್ರ್ಯೂ ರೋಶನ್ ಹೇಳುತ್ತಾರೆ’ ಹಲವಾರು ವರ್ಷಗಳ ಅಜ್ಞಾತವಾಸದ ನಂತರ ಚಿತ್ರರಂಗಕ್ಕೆ ಬಂದು ಇಂತಹ ಪಾತ್ರವನ್ನು ನಿಭಾಯಿಸುವುದು ಸುಲಭದ ವಿಷಯವಲ್ಲ. ಆದರೆ ಮಂಜು ಅದನ್ನು ಮಾಡಿದರು. ಸೆಟ್ ನಲ್ಲಿ ಅವಳು ನಿರುಪಮರಾಯೇ ಆಗಿದ್ದಳು. ಅವಳು ನೀರಿದ್ದಂತೆ. ಯಾವ ಪಾತ್ರಕ್ಕೂ ಹೊಂದಿಕೊಳ್ಳುವ ಗ್ರೇಟ್ ನಟಿ’ ನಿನಿಪ್ರೇಮಿಗಳು ಈ ಚಿತ್ರಕ್ಕೆ ನೀಡಿದ ಅಭೂತಪೂರ್ವ ಯಶಸ್ಸಿಗೆ ಸ್ವತಃ ಮಂಜುವೇ ದಂಗಾಗಿ ಹೋಗಿದ್ದಳು. ಅದು ಅವಳ ವರ್ತಮಾನದ ಸ್ಥಿತಿಯೂ ಆಗಿತ್ತು! ಅಂದಿನಿಂದ ಇಂದಿನವರೆಗೂ ಆಕೆಯ ವೃತ್ತಿಬದುಕು ಏರುಗತಿಯಲ್ಲೇ ಇದೆ.

2014ರಲ್ಲಿ ಅವಳು ವೈವಾಹಿಕ ಚೌಕಟ್ಟಿನಿಂದ ಹೊರಬರಲು ನಿರ್ಧರಿಸಿದಾಗ ಅವಳ ವಯಸ್ಸು 34. ಹದಿನಾಲ್ಕು ವರ್ಷದ ಮಗಳನ್ನು ಗಂಡನ ಜೊತೆಯಲ್ಲಿಯೇ ಬಿಟ್ಟು ಮನೆಯಿಂದ ಹೊರನಡೆದಿದ್ದಳು. 2015ರಲ್ಲಿ ಅವರು ಪರಸ್ಪರ ಒಪ್ಪಿಗೆಯ ಡೈವೋರ್ಸ್ ಪಡೆದಾಗ ಆಕೆ ಮಗಳ ಕಸ್ಟಡಿಯನ್ನು ಕೇಳಲಿಲ್ಲ. ಇದಕ್ಕಾಗಿ ಕೆಲವರು ’ಕೆಟ್ಟ ತಾಯಿ’ ಎಂದು ಜರೆದರು. ‘ಕೆಟ್ಟತಾಯಿ’ ಹಾಗೆಂದರೇನು? ಅದಕ್ಕೆ ಸಮಾಜ ಬರೆಯುವ ಭಾಷ್ಯವೇನು?

ಮಂಜುವನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ; ಆಕೆ ಅತ್ಯುತ್ತಮವಾದ ತಾಯಿಯಾಗಿದ್ದಳು, ಮಗಳನ್ನು ಜತನದಿಂದ ನೋಡಿಕೊಳ್ಳುತ್ತಿದ್ದಳು, ಅವಳ ಶೈಕ್ಷಣಿಕ ಪ್ರಗತಿಯನ್ನು ಮುತುವರ್ಜಿಯಿಂದ ಗಮನಿಸುತ್ತಿದ್ದಳು. ನಿಯಮಿತವಾಗಿ ಅವಳ ಶಾಲೆಗೆ ಭೇಟಿ ಕೊಡುತ್ತಿದ್ದಳು. ಈಗಲೂ ಅಷ್ಟೇ, ದಿಲೀಪ್ ಬಂಧನವಾದಾಗ ಮಗಳ ಕಸ್ಟಡಿ ಕೇಳಲು ದಿಲೀಪ್ ಮನೆ ಬಾಗಿಲು ತಟ್ಟಿದ್ದಳು, ಆದರೆ ಅವನ ಪತ್ನಿ ಕಾವ್ಯ ಮಾಧವನ್ ಅವಳನ್ನು ಮನೆಯೊಳಗೆ ಬಿಟ್ಟುಕೊಳ್ಳಲಿಲ್ಲ. ಮಗಳು ಮೀನಾಕ್ಷಿಯೇ ತನ್ನ ತಂದೆಯ ಪರ ನಿಲ್ಲದುದಕ್ಕೆ ತಾಯಿಯನ್ನು ಬಯ್ದು ಹೊರಗಟ್ಟಿದ್ದಳು. ಇಂತವಳನ್ನು ಕೆಟ್ಟ ತಾಯಿಯೆನ್ನಲು ಸಾಧ್ಯವೇ? ಮಗಳನ್ನು ಗಂಡನ ಜೊತೆಯಲ್ಲೇ ಬಿಟ್ಟು ಬರುವಾಗ ಅವಳ ಮನಸ್ಸು ಯಾವರೀತಿಯ ತಳಮಳವನ್ನು ಅನುಭವಿಸುತ್ತಿತ್ತೋ ನಮಗೆ ಹೇಗೆ ತಿಳಿಯಲು ಸಾಧ್ಯ? ವಿವಾಹಿತ ಹೆಣ್ಣೊಬ್ಬಳ ಅಂತರಾಳದ ತಳಮಳವನ್ನು ಅರಿಯುವುದು ತುಂಬಾ ಕಷ್ಟ!

ಇಷ್ಟಕ್ಕೂ ಮಕ್ಕಳನ್ನು ಬೆಳೆಸುವುದು ಕೇವಲ ತಾಯಿಗೆ ಮಾತ್ರ ಸಂಬಂಧಿಸಿದ್ದೇ? ತಂದೆಯ ಜವಾಬ್ದಾರಿ ಏನೂ ಇಲ್ಲವೇ? ಮಕ್ಕಳು ಎಷ್ಟೇ ದೊಡ್ಡವಾರಗಿರಲಿ , ಮುಪ್ಪಿಗೇ ಜಾರುತ್ತಿರಲಿ ‘ಅಮ್ಮ’ ಪಕ್ಕದಲ್ಲಿಯೇ ಇರಬೇಕೆಂದು ಬಯಸುತ್ತಾರೆ, ಅದು ಸಹಜ. ಅದನ್ನೇ ಒಪ್ಪಿಕೊಂಡು ನಡೆದರೆ ಸ್ತ್ರೀಯೊಬ್ಬಳ್ಳು ತನ್ನನ್ನು ತಾನು ಕಂಡುಕೊಳ್ಳುವುದು ಹೇಗೆ? ಮಂಜುವಾರಿಯರ್ ತನ್ನ ಬದುಕಿನ ಗುಣಾತ್ಮಕವಾದ ಹದಿನಾರು ವರ್ಷಗಳನ್ನು ಮುಗುಮ್ಮಾಗಿ, ನಿಗೂಢವಾಗಿ ಕಳೆದದ್ದು ನಿಚ್ಚಳವಾಗಿ ಕಾಣುತ್ತದೆ. ಅವಳು ಕೇವಲ ಪತ್ನಿಯಾಗಿಯೋ, ತಾಯಿಯಾಗಿಯೋ ಉಳಿದಿದ್ದರೆ ಬಹುಶಃ ಅದೊಂದು ಸುದ್ದಿಯಾಗುತ್ತಲೇ ಇರಲಿಲ್ಲ. ಆದರೆ ಹದಿನಾಲ್ಕು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಯಾಕೆ ಮರಳಿದಳು? ಇದೊಂದು ಪ್ರಶ್ನೆ ಖಂಡಿತವಾಗಿಯೂ ಸಿನಿಪ್ರಿಯರಲ್ಲಿ ಮೂಡಿರುತ್ತದೆ. ಆದರೆ ಅದು ಉತ್ತರವನ್ನು ಬಯಸುವಂತಹ ಪ್ರಶ್ನೆಯಲ್ಲ. ಸಹಜ ಕುತೂಹಲ ಅಷ್ಟೇ.

ಆದರೆ ಯಾವಾಗ ದಿಲೀಪ್, ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳದ ಅರೋಪದಲ್ಲಿ ಸಿಕ್ಕಿ ಹಾಕಿಕೊಂಡನೋ ಈ ಕುತೂಹಲಕ್ಕೆ ರೆಕ್ಕೆಪುಕ್ಕಗಳು ಹುಟ್ಟಿಕೊಂಡಿವೆ. ನಾಯಕನೊಳಗೆ ಇದ್ದಿರಬಹುದಾದ ಖಳನಾಯಕನ ಮುಖದ ಬಗ್ಗೆ ಸಂಶಯಗಳು ಇಣುಕತೊಡಗಿವೆ. ಶೋಷಣೆಗೆ ಬೇರೆ ಬೇರೆ ಬಣ್ಣಗಳಿರುತ್ತವೆ, ಮುಖಗಳಿರುತ್ತವೆ ಎಂಬುದನ್ನು ನಾವು ಮರೆಯಬಾರದು. ಕಾಸ್ಟಿಂಗ್ ಕೌಚ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿರುವಾಗ ಕೆಲವರು ಅದೊಂದು ಒಡಂಬಡಿಕೆ, ಲೈಂಗಿಕ ಶೋಷಣೆಯಲ್ಲ ಎಂದು ಸಮರ್ಥಿಸಿಕೊಳ್ಳುತ್ತಿಲ್ಲವೇ? ವೈಯಕ್ತಿಕ ಲಾಭವಿದೆಯೆಂದಾದಾಗ ಹೆಚ್ಚಿನ ಎಲ್ಲರೂ ಅವಕಾಶವಾದಿಗಳೇ ಆಗುತ್ತಾರೆ. ಸ್ವತಃ ನಟನೂ, ನಿರ್ಮಾಪಕರೂ, ವಿತರಕರೂ ಒಬ್ಬರೇ ಆಗಿರುವವರೇ ಚಿತ್ರರಂಗವನ್ನು ಆಳುತ್ತಿರುವುದು ಎಲ್ಲಾ ಭಾಷೆಯಲ್ಲಿಯೂ ಕಂಡು ಬರುವ ಸಾಮಾನ್ಯ ಸತ್ಯ, ಅಂತವರಲ್ಲಿ ದಿಲೀಪ್ ಕೂಡಾ ಒಬ್ಬ. ಹಾಗಾಗಿಯೇ ಮಲೆಯಾಳಿ ಚಿತ್ರರಂಗದ ಕೆಲವರು ದಿಲೀಪನ ಬೆಂಬಲಕ್ಕೆ ನಿಂತಿದ್ದಾರೆ. ಕೆಲವರು ಬಾಯ್ಮಚ್ಚಿಕೊಂಡಿದ್ದಾರೆ. ನಮ್ಮಲ್ಲಿರುವ ಡಬ್ಬಿಂಗ್ ವಿರೋಧಿ ಲಾಬಿಯ ಹಾಗೆ!

ಇದೇ ವರ್ಷ ಬಿಡುಗಡೆಯಾದ ಪ್ರಸಿದ್ಧ ಬರಹಗಾರ್ತಿ ಕಮಲಾ ಸುರೈಯಾ ಅವರ ಜೀವನಾಧಾರಿತ ’ಆಮಿ’ ಸಿನಿಮಾದಲ್ಲಿ ಮಂಜು ಕಮಲಾ ಸುರೈಯಾ ಪಾತ್ರವನ್ನು ಮಾಡಿದ್ದಾರೆ. ಬಹುಶಃ ಈ ಸಿನಿಮಾ ಮಂಜು ವಾರಿಯರ್ ನ ಬದುಕಿನ ರೂಪಕವೂ ಆಗಬಹುದು.

ಮಂಜು ವಾರಿಯರ್ ತನ್ನ ವೈವಾಹಿಕ ಬದುಕಿನ ಯಾವ ವಿವರಗಳು ಕೂಡಾ ಹೊರಜಗತ್ತಿಗೆ ಸೋರಿಕೆಯಾಗದಂತೆ ಜತನದಿಂದ ಕಾಯ್ದುಕೊಂಡಳು. ಹೊರಬಂದ ಮೇಲೆ ”ಇದು ನನ್ನ ಪುನರ್ಜನ್ಮ. ನಾನು, ನನ್ನ ಬದುಕನ್ನು ಬದುಕುತ್ತೇನೆ, ” ಎಂದು ತನ್ನ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಳೇ ವಿನಃ ಯಾರ ಬಗ್ಗೆಯೂ ಏನನ್ನೂ ಹೇಳಲಿಲ್ಲ. ಮಾಜಿಪತಿಯ ಬಗ್ಗೆಯಾಗಲಿ, ಮಗಳು ಮೀನಾಕ್ಷಿಯ ಬಗ್ಗೆಯಾಗಲಿ ಆಕೆ ಎಂದೂ ಮಾತಾಡಿದ್ದೇ ಇಲ್ಲ. ‘ಅವಳಿಗೆ ಅಪ್ಪನೆಂದರೆ ಪಂಚಪ್ರಾಣ. ಅವಳು ಅಪ್ಪನ ಮಗಳು. ಅಪ್ಪನ ಜೊತೆ ಅವಳು ಸುಖವಾಗಿರುತ್ತಾಳೆ’ ಎಂದು ಹೇಳಿದ್ದನ್ನು ಬಿಟ್ಟರೆ ಮತ್ತೊಂದು ಮಾತು ಆಡಲಿಲ್ಲ.

ಸಾರ್ವಜನಿಕ ಬದುಕಿನಲ್ಲಿರುವವರು ವೈಯಕ್ತಿಕ ಹಗರಣಗಳಲ್ಲಿ ಸಿಲುಕದಂತೆ ಎಚ್ಚರವಹಿಸಬೇಕು. ಒಂದು ವೇಳೆ ಸಿಕ್ಕಿಹಾಕಿಕೊಂಡರೆ ಮೌನದ ಮೊರೆಹೋಗುವುದೇ ಪ್ರಬುದ್ಧತೆಯ ಲಕ್ಷಣ. ಹಗೆ ಸಾಧಿಸುವುದು ಹತಾಶೆಯ ಪರಮಾವಧಿಯನ್ನು ತೋರಿಸುತ್ತದೆ.

 

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಪುರುಷಾಧಿಪತ್ಯದ ಸುಳಿಯಲ್ಲಿ ಮಂಜು ವಾರಿಯರ್?- ಉಷಾ ಕಟ್ಟೆಮನೆ

 • July 17, 2018 at 10:02 am
  Permalink

  ಸ್ತ್ರೀ ಸಂವೇದನೆಗೇ ಮೀಸಲಾಗಿರುವ ಪತ್ರಿಕೆ ಇದಾಗಿದೆ ಎಂದು ತಿಳಿದು ಸಂತೋಷವಾಯಿತು. ಲೇಖನಗಳು ಮಾಹಿತಿಯ ಜೊತೆಗೆ ಸಾಹಿತ್ಯಕ ಗುಣಗಳನ್ನೂ ಒಳಗೊಂಡಿರಲಿ ಎಂದು ಹಾರೈಸುವೆ.

  Reply
 • July 18, 2018 at 6:28 pm
  Permalink

  How old are you ನನ್ನ ಮೆಚ್ಚಿನ ಚಿತ್ರಗಳಲ್ಲೊಂದು. ಮಂಜು ವಾರಿಯರ್ ಕುರಿತ ಬರಹ ಓದಿ ತುಂಬಾ ಸಂತಸವಾಯ್ತು. ಒಳ್ಳೆಯ ಬರಹ.

  Reply

Leave a Reply

Your email address will not be published. Required fields are marked *