ಕಾನೂನು ಕನ್ನಡಿ / ಪರಸ್ಪರ ಒಪ್ಪಿಗೆಯ ವಿಚ್ಛೇದನೆ-ಹಿಂಪಡೆಯಬಹುದೇ? – ಡಾ. ಗೀತಾ ಕೃಷ್ಣಮೂರ್ತಿ

ಹೆಚ್ಚುತ್ತಿರುವ ವಿಚ್ಛೇದನೆಗಳಿಗೆ ಮುಖ್ಯ ಕಾರಣ ಹೊಂದಾಣಿಕೆಯ ಕೊರತೆ. ವಿಚ್ಛೇದನೆ ಎನ್ನುವುದು ವಿವಾಹದ ಜೋಡಿ ಪದವೋ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿಬಿಟ್ಟಿದೆ. ಹೊಂದಾಣಿಕೆಯಿಲ್ಲದ ವಿವಾಹ ಬಂಧನದಿಂದ ಹೊರಬರುವ ನೇರ ಸರಳ ಮಾರ್ಗವೆಂದರೆ, `ಪರಸ್ಪರ ಒಪ್ಪಿಗೆಯ ವಿಚ್ಛೇದನೆ’. ಮುಖ್ಯ ವಿಚಾರವೆಂದರೆ, ವಿಚ್ಛೇದನೆಯ ಡಿಕ್ರಿ ಹೊರ ಬೀಳುವವರೆಗೂ ಒಪ್ಪಿಗೆಯನ್ನು ಹಿಂದೆ ಪಡೆಯಲು ಅವಕಾಶವಿದೆ.

ನ್ಯಾಯಾಲಯದ ಮುಂದೆ ಪರಸ್ಪರ ಒಪ್ಪಿಗೆಯ ವಿಚ್ಛೇದನೆಗಾಗಿ ಅರ್ಜಿ ಹಾಕಿದ ರಾಜೇಶ್ ಆರ್, ನಾಯರ್ ಮತ್ತು ಮೀರಾ ಬಾಬು ವಿವಾಹವಾದದ್ದು 2005 ರ ನವೆಂಬರ್ 25 ರಂದು. ವಿವಾಹವಾದ ಎರಡು ವರ್ಷಗಳ ನಂತರ ಅವರಿಗೆ ಒಂದು ಗಂಡು ಮಗುವಾಯಿತು. ಆ ನಂತರದಲ್ಲಿ ಅವರ ನಡುವೆ ತಲೆದೋರಿದ ಭಿನ್ನಾಭಿಪ್ರಾಯಗಳಿಂದಾಗಿ, ಇಬ್ಬರೂ 2009ರ ಅಕ್ಟೋಬರ್ 24 ರಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಇವರಿಬ್ಬರನ್ನು ಒಂದುಮಾಡುವ ಎಲ್ಲರ ಎಲ್ಲ ಪ್ರಯತ್ನಗಳೂ ವಿಫಲವಾದವು. ನಂತರ, ಇಬ್ಬರೂ ಕೆಲವೊಂದು ಷರತ್ತುಗಳ ಮೇಲೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದರು. ಪತಿ, ಮಗುವಿನ ಖರ್ಚು ವೆಚ್ಚಗಳಿಗಾಗಿ ತಿಂಗಳಿಗೆ 12,000 ರೂಗಳನ್ನು ಕೊಡಬೇಕು ಎಂದಾಯಿತು. ಪತ್ನಿ ತನ್ನ ಜೀವನಾಂಶದ ಕ್ಲೇಮನ್ನು ಬಿಟ್ಟುಕೊಡಲು ಒಪ್ಪಿಕೊಂಡಳು. ಪತಿ ಪತ್ನಿಗೆ ಅವಳ ಒಡವೆಗಳನ್ನು, ಅವರು ಹೊಂದಿದ್ದ ಕಾರನ್ನು ಹಾಗೂ 1,50,000 ರೂಗಳ ಇಡುಗಂಟನ್ನು ನೀಡಲು ಒಪ್ಪಿಕೊಂಡ. ಅದರಂತೆ ಪರಸ್ಪರ ಒಪ್ಪಿಗೆಯ ವಿಚ್ಛೇದನೆಗಾಗಿ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು.

ಆರು ತಿಂಗಳ ನಂತರ ಅರ್ಜಿ ವಿಚಾರಣೆಗಾಗಿ ಬಂದ ಎರಡು ದಿನಾಂಕಗಳಂದೂ ಪತ್ನಿ ವಿಚಾರಣೆಗೆ ಹಾಜರಾಗಲಿಲ್ಲ. ಮೂರನೆಯ ಬಾರಿ ಪತಿ ಪತ್ನಿ ಇಬ್ಬರೂ ಹಾಜರಾಗಲಿಲ್ಲ. ಮತ್ತೊಮ್ಮೆ ಈ ಅರ್ಜಿ ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಬಂದಾಗ, ಪತ್ನಿ ವಿಚ್ಛೇದನೆಗೆ ತನ್ನ ಒಪ್ಪಿಗೆಯನ್ನು ಹಿಂಪಡೆದಿರುವುದಾಗಿ ಒಂದು ಅಫಿಡವಿಟ್ಟನ್ನು ಸಲ್ಲಿಸಿದಳು. ತನಗೆ, ವೈದ್ಯಕೀಯ ಚಿಕಿತ್ಸೆಗಾಗಿ ಕೂಡಲೇ ದೊಡ್ಡ ಮೊತ್ತದ ಹಣದ ಅಗತ್ಯವಿತ್ತು ಮತ್ತು ತಾನು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನೆ ಪಡೆಯಲು ಒಪ್ಪಿಗೆ ನೀಡಿದರೆ ಮಾತ್ರ ಹಣ ಹಾಗೂ ಅವಳ ಒಡವೆಗಳನ್ನು ಹಿಂತಿರುಗಿಸುವುದಾಗಿ ಹೇಳಿದ್ದರಿಂದ ತಾನು ಅನಿವಾರ್ಯವಾಗಿ ಒಪ್ಪಿಗೆ ನೀಡಬೇಕಾಯಿತು ಮತ್ತು ಹಾಗೆ ಒಪ್ಪಿಗೆ ನೀಡಲು ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂಬುದನ್ನು ಒಪ್ಪಿಗೆಯನ್ನು ಹಿಂಪಡೆಯಲು ಕಾರಣವನ್ನು ವಿವರವಾಗಿ ತಿಳಿಸಿದ್ದಳು.

ಇತ್ತೀಚಿನ ದಿನಗಳಲ್ಲಿ ವಿಚ್ಛೇದನೆ ಎಷ್ಟು ಸಾಮಾನ್ಯವಾಗಿದೆ ಎಂದರೆ, ವಿಚ್ಛೇದನೆ ಎನ್ನುವುದು ವಿವಾಹದ ಜೋಡಿ ಪದವೋ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿಬಿಟ್ಟಿದೆ. ವಿಚ್ಛೇದನೆ ಎಂದ ಕೂಡಲೇ, ಹೇಗೆ, ಎಲ್ಲಿ, ಯಾವ ಕಾರಣದ ಮೇಲೆ ಅಥವಾ ಯಾವ ಬಗೆಯದು ಎಂಬೆಲ್ಲ ಪ್ರಶ್ನೆಗಳು ತಲೆಯೆತ್ತುತ್ತವೆ. ಅದರ ಜೊತೆಜೊತೆಯಲ್ಲಿಯೆ ಇನ್ನೂ ಅನೇಕ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.

ಹೆಚ್ಚುತ್ತಿರುವ ವಿಚ್ಛೇದನೆಗಳಿಗೆ ಮುಖ್ಯ ಕಾರಣ ಹೊಂದಾಣಿಕೆಯ ಕೊರತೆ. ಅನೇಕ ಪ್ರಕರಣಗಳಲ್ಲಿ, ಹುಡುಗನೂ ಒಳ್ಳೆಯವನು, ಹುಡುಗಿಯೂ ಒಳ್ಳೆಯವಳು, ಇಂಥ ಲೋಪವಿದೆ ಎಂದು ಕೈ ಮಾಡಿ ತೋರಿಸಲು ಇಬ್ಬರಲ್ಲೂ ಒಂದೇ ಒಂದು ದೋಷವಿಲ್ಲ, ಹಾಗಾದರೂ ಯಾಕೆ ಒಟ್ಟಿಗೆ ಬಾಳಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೆ ಒಂದೇ ಉತ್ತರ ಇಬ್ಬರಲ್ಲಿಯೂ ಹೊಂದಾಣಿಕೆಯಿಲ್ಲ ಎಂಬುದೇ ಆಗಿರುತ್ತದೆ. ಪರಸ್ಪರ ಯಾವುದೇ ದೋಷಾರೋಪಣೆ ಮಾಡದೆಯೇ ಇಂಥ ಹೊಂದಾಣಿಕೆಯಿಲ್ಲದ ವಿವಾಹ ಬಂಧನದಿಂದ ಹೊರಬರುವ ನೇರ ಸರಳ ಮಾರ್ಗವೆಂದರೆ, `ಪರಸ್ಪರ ಒಪ್ಪಿಗೆಯ ವಿಚ್ಛೇದನೆ’.

‘ಪರಸ್ಪರ ಒಪ್ಪಿಗೆಯ ವಿಚ್ಛೇದನೆ’ ಪಡೆಯಲು ಇಬ್ಬರ ಒಪ್ಪಿಗೆಯೂ ಇರಬೇಕು ಎಂಬುದು ವಿದಿತ. ಒಂದು ವೇಳೆ ಪತಿ ಪತ್ನಿಯರಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದಿದ್ದರೂ, ತಾವು ಪತಿ ಪತ್ನಿಯರಾಗಿ ಮುಂದುವರಿಯುವುದು ಸಾಧ್ಯವೇ ಇಲ್ಲ ಎನ್ನಿಸಿದರೂ ಈಗಿರುವ ಕಾನೂನಿನ ಪ್ರಕಾರ, `ಹೊಂದಾಣಿಕೆ ಇಲ್ಲ’ ಎಂಬ ಕಾರಣವನ್ನು ತೋರಿಸಿ ಪತಿ ಅಥವಾ ಪತ್ನಿ, ಏಕ ಪಕ್ಷೀಯವಾಗಿ, ವಿಚ್ಛೇದನೆ ಪಡೆಯಲು ಅವಕಾಶವಿಲ್ಲ. ತಮ್ಮಿಬ್ಬರ ನಡುವೆ ‘ಹೊಂದಾಣಿಕೆ ಇಲ್ಲ’ ಎಂಬುದನ್ನು ಬಿಟ್ಟರೆ ಬೇರೆ ಆಗಲು ಇನ್ನಾವುದೇ ಕಾರಣ ಇಲ್ಲ ಎಂದಾದರೆ, ಇಬ್ಬರೂ ಬೇರೆ ಆಗಲು ತೀರ್ಮಾನಿಸಿ, ‘ಪರಸ್ಪರ ಒಪ್ಪಿಗೆ’ಯ ವಿಚ್ಛೇದನೆ ಪಡೆಯುವುದೊಂದೇ ಈಗ ಇರುವ ದಾರಿ. ಹೊಂದಾಣಿಕೆ ಇಲ್ಲದಿರುವ ಕಾರಣದಿಂದಾಗಿ `ಸರಿಪಡಿಸಲಾಗದ ವಿವಾಹ’ ಎಂಬ ಕಾರಣ ತೋರಿಸಿ, ಪತಿ ಅಥವಾ ಪತ್ನಿಗೆ ವಿಚ್ಛೇದನೆ ಪಡೆಯಲು ಅವಕಾಶವಿರಬೇಕು ಮತ್ತು ಅದಕ್ಕೆ ಅವಕಾಶ ಕಲ್ಪಿಸಲು ಕಾನೂನಿಗೆ ತಿದ್ದುಪಡಿ ತರಬೇಕು ಎಂಬ ಬೇಡಿಕೆ ಬಹು ಕಾಲದಿಂದ ಇದೆ ಮತ್ತು ಈ ಕಾರಣವನ್ನು ಕಾನೂನಿನಲ್ಲಿ ಅಳವಡಿಸುವ ಪ್ರಯತ್ನಗಳೂ ನಡೆದಿವೆ. ಆದರೆ ಈ ಪ್ರಸ್ತಾವಕ್ಕೆ ಇನ್ನೂ ಕಾನೂನಿನ ಮುದ್ರೆ ಬಿದ್ದಿಲ್ಲ.

ಹಾಗಾಗಿ, ಹಿಂದೂ ಕಾನೂನಿನ ಅಡಿಯಲ್ಲಿ ವಿವಾಹ ವಿಚ್ಛೇದನೆ ಪಡೆಯಬೇಕಾದರೆ ಎರಡು ಮಾರ್ಗಗಳು, ಒಂದು ಕಾನೂನಿನಲ್ಲಿ ಪಟ್ಟಿ ಮಾಡಿರುವ ಯಾವುದಾದರೊಂದು ಕಾರಣವನ್ನು ತೋರಿಸಿ, ವಿಚ್ಛೇದನೆಗೆ ಅರ್ಜಿ ಸಲ್ಲಿಸುವುದು ಇಲ್ಲವೇ ವಿವಾಹ ವಿಚ್ಛೇದನೆ ಪಡೆಯಲು ಇಬ್ಬರದೂ ಒಪ್ಪಿಗೆ ಇದೆ ಎಂದು ಘೋಷಿಸಿ, `ಪರಸ್ಪರ ಒಪ್ಪಿಗೆ’ಯ ವಿಚ್ಛೇದನೆಗೆ ಅರ್ಜಿ ಸಲ್ಲಿಸುವುದು. ಮೊದಲನೆಯ ಮಾರ್ಗದಲ್ಲಿ ಪತಿ ಅಥವಾ ಪತ್ನಿ ತನ್ನ ಪತ್ನಿ ಅಥವಾ ಪತಿಯ ವಿರುದ್ಧ ಮಾಡಿದ ಎಲ್ಲ ಆರೋಪಗಳನ್ನೂ ಅಲ್ಲಗಳೆಯಬಹುದು ಮತ್ತು ಕುಟುಂಬ ನ್ಯಾಯಾಲಯದ ಆದೇಶದ ವಿರುದ್ಧ ಮೇಲಿನ ನ್ಯಾಯಾಲಯಗಳಲ್ಲಿ ಮೇಲ್ಮನವಿಯನ್ನು ಹೂಡಬಹುದು. ಹಾಗಾಗಿ, `ದೋಷಾರೋಪಣ’ದ ವಿಚ್ಛೇದನೆಯ ಅರ್ಜಿ ಇಂತಿಷ್ಟೇ ಅವಧಿಯಲ್ಲಿ ಇತ್ಯರ್ಥವಾಗುವುದೆಂಬ ನೆಚ್ಚಿಕೆಯಿಲ್ಲ. ಹಾಗಾಗಿ, ಕಾನೂನು ನಿರ್ದಿಷ್ಟಪಡಿಸಿದ ಕಾರಣಗಳಾವುವೂ ಇಲ್ಲದಿದ್ದರೂ ಹೊಂದಾಣಿಕೆಯ ಕೊರತೆಯಿಂದಾಗಿ ವಿವಾಹಗಳು ವಿಫಲವಾಗುವುದಿದೆ. ಕಾರಣ ಯಾವುದೇ ಇರಲಿ, ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನೆ ಪಡೆಯುವುದು ಪತಿ ಪತ್ನಿಯರಿಗೆ ಇರುವ ಕ್ಷಿಪ್ರ ಮಾರ್ಗ. ಆದರೆ, ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದೂ ಅಷ್ಟು ಸುಲಭವಲ್ಲ. ಇದಕ್ಕೆ ಕಾರಣಗಳು ಅನೇಕ. ಅಂಥ ಸಂದರ್ಭಗಳಲ್ಲಿ, ಹೆಚ್ಚಿನ ಸಂದರ್ಭಗಳಲ್ಲಿ, ಪತ್ನಿಯ ಒಪ್ಪಿಗೆಯನ್ನು ಪಡೆಯಲು ಒತ್ತಡ ಮತ್ತು ಬೆದರಿಕೆಯೊಡ್ಡುವ ಮೂಲಕ ಒಪ್ಪಿಗೆಯನ್ನು ಪಡೆಯುವ ಮಾರ್ಗವನ್ನು ಅನುಸರಿಸುವುದು ಸಾಮಾನ್ಯ. ಮತ್ತು ಒಮ್ಮೆ ಒಪ್ಪಿಗೆ ಕೊಟ್ಟ ಮೇಲೆ ಮುಗಿಯಿತು, ಹಿಂಪಡೆಯುವಂತಿಲ್ಲ ಎಂದು ನಂಬಿಸುವುದೂ ಉಂಟು, ಇಬ್ಬರೂ ನಂಬಿ ಮುಂದುವರೆಯುವುದೂ ಉಂಟು.

ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನೆಗಾಗಿ ಅರ್ಜಿ ಸಲ್ಲಿಸಿದ ದಿನಾಂಕದಿಂದ ಆರು ತಿಂಗಳ ನಂತರ ಮತ್ತೊಮ್ಮೆ ಎರಡೂ ಪಕ್ಷಕಾರರು (ಪತಿ ಮತ್ತು ಪತ್ನಿ) ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಅರ್ಜಿಯನ್ನು ಸಲ್ಲಿಸಬೇಕು. ಈ ಅವಧಿಯ ಅವಕಾಶ ನೀಡಿರುವುದರ ಉದ್ದೇಶ ಅವರು ಮತ್ತೊಮ್ಮೆ, ವಿಚ್ಛೇದನೆಯ ಮೂಲಕ ಬೇರಾಗುವುದೋ ಬೇಡವೋ ಎಂಬುದನ್ನು ಪರಾಮರ್ಶಿಸಿ ನಿರ್ಧಾರ ಕೈಗೊಳ್ಳಲು ಸಹಾಯವಾಗಲಿ ಎನ್ನುವುದು. ವಿಚ್ಛೇದನೆಯ ಡಿಕ್ರಿಯನ್ನು ಹೊರಡಿಸಲು ನ್ಯಾಯಾಲಯಕ್ಕೆ ಅಧಿಕಾರ ಬರುವುದೇ ಪತಿ ಪತ್ನಿಯರು ವಿಚ್ಛೇದನೆಗೆ ಒಪ್ಪಿಗೆ ನೀಡಿದ್ದಾರೆ ಎಂಬುದರಿಂದ. ಹಾಗಾಗಿ ಆರು ತಿಂಗಳು ಕಳೆದ ನಂತರವೂ, ನ್ಯಾಯಾಲಯ ಡಿಕ್ರಿಯನ್ನು ಹೊರಡಿಸುವುದಕ್ಕೆ ಮುನ್ನಿನ ವಿಚಾರಣೆಯ ಸಂದರ್ಭದಲ್ಲಿ, ಪತಿ ಅಥವಾ ಪತ್ನಿ `ವಿಚ್ಛೇದನೆಗೆ ತನ್ನ ಒಪ್ಪಿಗೆ ಇಲ್ಲ’ ಎಂದು ಹೇಳಿಕೆ ನೀಡಿದರೂ, ನ್ಯಾಯಾಲಯ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನೆಯ ಡಿಕ್ರಿ ನೀಡುವ ಅಧಿಕಾರವನ್ನು ಕಳೆದುಕೊಳ್ಳುತ್ತದೆ. ಏಕೆಂದರೆ, ಒಪ್ಪಿಗೆ ನೀಡದಿರುವುದೂ ಅವಳ ಹಕ್ಕು.

ಆದರೆ ಒಪ್ಪಿಗೆಯನ್ನು ಹಿಂಪಡೆಯುವುದಕ್ಕೆ ಮುನ್ನ ಒಂದು ಒಪ್ಪಂದಕ್ಕೆ ಬಂದಿದ್ದು, ಆ ಒಪ್ಪಂದದ ಪ್ರಯೋಜನವನ್ನು ಪಡೆದು ಆ ನಂತರ ಒಪ್ಪಿಗೆಯನ್ನು ಹಿಂಪಡೆಯ ಹೋದರೆ ನ್ಯಾಯಾಲಯ ಅದಕ್ಕೆ ಅನುಮತಿ ನೀಡದೆ ಇರಬಹುದು.

ಒಮ್ಮೆ ಒಪ್ಪಿಗೆ ಕೊಟ್ಟು, ಆ ನಂತರ ಒಪ್ಪಿಗೆಯನ್ನು ಹಿಂದಕ್ಕೆ ಪಡೆದ ಅನೇಕ ಪ್ರಕರಣಗಳುಂಟು ಮತ್ತು ಅದನ್ನು ಪ್ರಶ್ನಿಸಿ ಅನೇಕ ರಾಜ್ಯಗಳ ಉಚ್ಚ ನ್ಯಾಯಾಲಯಗಳ ಮುಂದೆ ಮೇಲ್ಮನವಿಗಳನ್ನು ಸಲ್ಲಿಸಿರುವುದೂ ಉಂಟು. ಆದರೆ, ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು ಈ ಕುರಿತಂತೆ ತಳೆದ ಅಭಿಪ್ರಾಯಗಳಲ್ಲಿ ಏಕರೂಪತೆಯಿಲ್ಲ. ಕೆಲವು ಉಚ್ಚ ನ್ಯಾಯಾಲಯಗಳು, ಒಮ್ಮೆ ಕೊಟ್ಟ ಒಪ್ಪಿಗೆಯನ್ನು ಹಾಗೆ ಹಿಂದೆ ಪಡೆಯಲಾಗದು ಎಂದು ಅಭಿಪ್ರಾಯಪಟ್ಟರೆ, ಕೆಲವು ಉಚ್ಚ ನ್ಯಾಯಾಲಯಗಳು, ವಿಚ್ಛೇದನೆಯ ಡಿಕ್ರಿ ಹೊರ ಬೀಳುವವರೆಗೂ ಒಪ್ಪಿಗೆಯನ್ನು ಹಿಂದೆಪಡೆಯಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿವೆ.

ಆದರೆ, ಕೇರಳ ಉಚ್ಚ ನ್ಯಾಯಾಲಯದ, ‘ವಿಚ್ಛೇದನೆಯ ಡಿಕ್ರಿ ಹೊರ ಬೀಳುವವರೆಗೂ ಒಪ್ಪಿಗೆಯನ್ನು ಹಿಂದೆ ಪಡೆಯಲು ಅವಕಾಶವಿದೆ’ ಎಂಬ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿರುವುದರಿಂದ ಈ ಗೊಂದಲಕ್ಕೆ ತೆರೆ ಬಿದ್ದಿದೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *