ಪದ್ಮ ಪ್ರಭೆ/ ಹಾಲಕ್ಕಿ ಕೋಗಿಲೆ ಸುಕ್ರಿ ಬೊಮ್ಮಗೌಡ- ಡಾ. ಗೀತಾ ಕೃಷ್ಣಮೂರ್ತಿ


2017 ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸುಕ್ರಿ ಬೊಮ್ಮಗೌಡ ಅನನ್ಯ ಜನಪದ ಕಲಾವಿದರು. ನಮ್ಮ ಶಿಷ್ಟ ಸಂಸ್ಕøತಿಗೆ ಭಿನ್ನವಾದ, ಜನತೆಯ ಸಾಮುದಾಯಿಕ ಅನುಭವ ಭಂಡಾರ ಅಭಿವ್ಯಕ್ತಿ ಪಡೆಯುವ ವಿಶಿಷ್ಟ ಹಾಗೂ ವಿಭಿನ್ನ ಜನಪದ ಕಲಾಮಾಧ್ಯಮದಲ್ಲಿ ಮಾಡಿರುವ ಸಾಧನೆ ಯಾರೂ ಅಚ್ಚರಿ ಪಡುವಂಥದ್ದು. ಜನಪದ ಗಾಯಕಿ ಸುಕ್ರಜ್ಜಿ ಬಡತನದ ಕುಲುಮೆಯಲ್ಲಿ ಬೆಂದು ಬಂದವರು. ಕಷ್ಟಕ್ಕೆ ಅಂಜಿ ಜೀವನಕ್ಕೆ ಬೆನ್ನು ಹಾಕದೇ, ಅದೃಷ್ಟವನ್ನು ಹಳಿಯದೇ, ತಮ್ಮದೇ ರೀತಿಯಲ್ಲಿ ಗೆದ್ದು ಬಂದು ಇತರರಿಗೆ ಮಾದರಿಯಾದವರು.


ಸುಕ್ರಿ ಬೊಮ್ಮಗೌಡ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬಡಗೇರಿಯವರು. ಸುಕ್ರಜ್ಜಿಯೆಂದೇ ಪರಿಚಿತರಾದ, ಓದು ಬರಹ ಬಾರದ ಈಕೆಯ ನೆನಪಿನಲ್ಲಿ ಸಾವಿರಾರು ಜನಪದ ಹಾಡುಗಳ ಸಂಗ್ರಹವೇ ಇದೆ. ಎಲ್ಲ ಕೆಲಸಗಳಿಗೂ ಇವರಿಗೆ ಹುರುಪು ನೀಡುವುದೇ ಹಾಡುಗಳು. ಹಾಗಾಗಿ ಹಾಡುತ್ತಲೇ ಸಾಗುತ್ತವೆ ಇವರ ಕೆಲಸಗಳು. ಈ ಹಾಡು ಹಕ್ಕಿ ‘ಹಾಲಕ್ಕಿ ಕೋಗಿಲೆ’ ಎಂದೇ ಖ್ಯಾತರಾಗಿದ್ದಾರೆ.

ಸುಕ್ರಿ ಬೊಮ್ಮಗೌಡ ಅವರು ಹಾಲಕ್ಕಿ ಸಮುದಾಯದ ಸಾಂಪ್ರದಾಯಿಕ ಜನಪದ ಹಾಡುಗಳ ಭಂಡಾರ. ತಾಯಿ ಹಾಡುವುದನ್ನು ಕೇಳುತ್ತಾ ಹಾಡುಗಳನ್ನು ಕಲಿತರು. ತಾಯಿಯೇ ಅವರ ಗುರು. ಯಾವುದೇ ಸಮಯದಲ್ಲಿ ಬರಿಯ ನೆನಪಿನಿಂದಲೇ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹೆಕ್ಕಿ ತೆಗೆಯಬಲ್ಲ ಅಗಾಧ ನೆನಪಿನ ಶಕ್ತಿ ಅವರದ್ದು. ಪ್ರತಿಯೊಂದು ಸಂದರ್ಭಕ್ಕೆ, ಪ್ರತಿಯೊಂದು ವ್ಯಕ್ತಿಗೆ, ಪ್ರತಿಯೊಂದು ವಸ್ತುವಿಗೆ ಸಂಬಂಧಪಟ್ಟ ಹಾಡುಗಳು ಅವರ ಭಂಡಾರದಲ್ಲಿ ಇದೆ. ಹಾಲಕ್ಕಿ ಸಮುದಾಯದ ಅಭಿವೃದ್ಧಿ ತನಗೆ ಮುಖ್ಯ ಎನ್ನುವ ಇವರಿಗೆ ಪ್ರಶಸ್ತಿಗಳು ಅವರ ಸಮುದಾಯದ ಹಿತಕ್ಕಿಂತ ಎಂದೂ ದೊಡ್ಡದು ಎನಿಸಿಲ್ಲ. ‘ಹಾಡು ಹಕ್ಕಿಗೆ ಬೇಕೆ ಬಿರುದು ಸಮ್ಮಾನ’? ಅವರಲ್ಲಿರುವ ಹಾಡಿನ ಭಂಡಾರ ಮೌಲ್ಯ ಅವರಿಗೆ ತಿಳಿದಿದೆ. ಅದು ತನ್ನೊಂದಿಗೆ ಕೊನೆಗೊಳ್ಳಬಾರದು ಎನ್ನುವ ಕಾಳಜಿಯೂ ಅವರಿಗಿದೆ. ಹಾಗೆಂದೇ ಅವರು ಮಕ್ಕಳಿಗೆ ತಮ್ಮೆಲ್ಲ ಹಾಡುಗಳನ್ನು ಕಲಿಸುವ ಮೂಲಕ ಹಾಲಕ್ಕಿ ಒಕ್ಕಲಿಗ ಸಮುದಾಯದ ಸಂಸ್ಕøತಿಯನ್ನು ಮುಂದೆಯೂ ಜೀವಂತವಾಗಿರಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಕ್ರಿ ಅಜ್ಜಿಯ ಬಾಲ್ಯ ಆ ಸಮುದಾಯದ, ಆ ಕಾಲದ ಯಾವುದೇ ಹೆಣ್ಣು ಮಗಳ ಜೀವನಕ್ಕಿಂತ ಭಿನ್ನವಾಗಿಯೇನೂ ಇರಲಿಲ್ಲ. ಈಕೆ 16 ವರ್ಷದವಳಿದ್ದಾಗ ಆಕೆಗಿಂತ ಸುಮಾರು ಮೂರು ಪಟ್ಟು ದೊಡ್ಡವರಾದ 45 ವರ್ಷದ ಬೊಮ್ಮಗೌಡ ಅವರೊಂದಿಗೆ ಇವರ ವಿವಾಹವಾಯಿತು. ಮದುವೆಯಾದ ಕೆಲವು ವರ್ಷಗಳಲ್ಲಿಯೇ ಆಕೆ ಗಂಡನನ್ನು ಕಳೆದುಕೊಂಡರು. ನಂತರ ಯಾರನ್ನೂ ಅವಲಂಬಿಸಬಾರದೆಂಬ ದೃಢ ನಿಶ್ಚಯದಿಂದ, ಜೀವನವನ್ನು ಸಾಗಿಸಲು ಕೃಷಿಯ ಮೊರೆ ಹೋದರು.

ಸುಕ್ರಿ ಅವರು ಬಡಿಗೇರಿ ಗ್ರಾಮ ಪಂಚಾಯಿತಿಯ ಸದಸ್ಯರಾದರು. 2014 ರಲ್ಲಿ ಅತಿಯಾದ ಮದ್ಯ ಸೇವನೆಯಿಂದ ತಮ್ಮ ಮಗ ಸಾವನ್ನಪ್ಪಿದಾಗ, ಅವರು ದೆಹಲಿಯಲ್ಲಿದ್ದರು. ಹಿಂತಿರುಗಿ ಬಂದ ನಂತರ ತನ್ನ ಗ್ರಾಮದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಆಂದೋಲನವನ್ನೇ ಹಮ್ಮಿಕೊಂಡರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಅನೇಕ ಮದ್ಯದಂಗಡಿಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾದರು. ಸೋಲುಗಳಾವುದೂ ಅವರನ್ನು ಅವರನ್ನು ಧೃತಿಗೆಡಿಸಲಿಲ್ಲ. ತನ್ನ ಪ್ರದೇಶದಲ್ಲಿ ಆಗುವ ಸಮಾಜ ಸುಧಾರಣೆಗಾಗಿ ನಡೆಯುವ ಯಾವುದೇ ಪ್ರತಿಭಟನೆಯಿರಲಿ, ಮುಷ್ಕರವಿರಲಿ ಅದರಲ್ಲಿ ಸುಕ್ರಜ್ಜಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಾರೆ, ಮುಂಚೂಣಿಯಲ್ಲಿದ್ದು ಬೆಂಬಲ ನೀಡುತ್ತಾರೆ. ಚಿಕ್ಕಂದಿನಿಂದಲೂ ತಂದೆ ತಾಯಿಯರೊಡನೆ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ಮತ್ತು ಗುಡ್ಡಗಾಡಿನ ಪರಿಸರದಲ್ಲಿಯೇ ಬೆಳೆದಿದದ್ದರಿಂದ, ಇವರಿಗೆ ಸಸ್ಯಗಳ ಬಗ್ಗೆ, ಅವುಗಳ ಬಳಕೆಯ ಬಗ್ಗೆ, ಅಲ್ಲಿ ಸಿಗುವ ಸಸ್ಯಗಳ ಔಷಧೀಯ ಗುಣಗಳ ಬಗ್ಗೆ ಅಪಾರವಾದ ಜ್ಞಾನವಿದೆ.

ಸುಕ್ರಜ್ಜಿ ಅವರೇ ಹೇಳುವಂತೆ, ‘ನಾನು ಕಲಿತದ್ದೆಲ್ಲ ಕೇಳುವ ಮೂಲಕ ಮತ್ತು ಕೇಳಿದ್ದನ್ನು ಮತ್ತೆ ಮತ್ತೆ ಹೇಳುವ ಮೂಲಕ. ಪುಸ್ತಕ, ಪೆನ್ನು, ಧ್ವನಿ ಮುದ್ರಿಕೆಗಳು ಇದಾವುದೂ ನನಗೆ ಗೊತ್ತಿಲ್ಲ. ನನಗೆ ಇಂದಿಗೂ ಧ್ವನಿಮುದ್ರಿತ ಸಂಗೀತ ಇಷ್ಟವಿಲ್ಲ. ಸಂಗೀತ ಎಂದರೆ ಕೇಳುವಂಥದ್ದು. ಜನಪದ ಸಾಹಿತ್ಯದ ಶ್ರೀಮಂತ ಸಂಪ್ರದಾಯ ಮುಂದುವರಿಯಬೇಕಾದರೆ ಈ ಹಾಡುಗಳನ್ನು ನಮ್ಮ ಮಕ್ಕಳಿಗೆ ಕೇಳಿಸಬೇಕು ಮತ್ತು ಕಲಿಸಬೇಕು.’ ಎನ್ನುತ್ತಾರೆ. ಅಷ್ಟೇ ಅಲ್ಲ, ತಮ್ಮ ಸಮುದಾಯದ ಮಕ್ಕಳಿಗೆ ಕಲಿಸುವ ಮೂಲಕ ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ. ಓದು ಬರಹ ಬಾರದಿದ್ದರೂ, ಶಿಕ್ಷಣದ ಮಹತ್ವ ತಿಳಿದ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವನ್ನು ಸಾರಿ ಹೇಳುತ್ತಾರೆ. ಆದರೆ, ಓದು ಬರಹ ಬಾರದಿರುವುದು ಇವರ ಸಾಧನೆಗೆ ಎಂದೂ ಅಡ್ಡಿಯಾಗಿಲ್ಲ. ಓದು ಬರಹ ಬಾರದ, ಶಾಲೆಯ ಮೆಟ್ಟಿಲನ್ನೇ ಹತ್ತದ ಈ ಅಜ್ಜಿಯ ಜೀವನ ಗಾಥೆ ಎಂಟನೇ ತರಗತಿಯ ಶಾಲೆಯ ಮಕ್ಕಳಿಗೆ ಪಠ್ಯವಾಗಿದೆ!

ಜನಪದ ಗಾಯನಕ್ಕಾಗಿ ಇವರಿಗೆ ಸಂದಿರುವ ಪ್ರಶಸ್ತಿ ಪುರಸ್ಕಾರಗಳು ಅನೇಕ. 1988 ರಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದ ಸಂಸ್ಕøತಿ ರಕ್ಷಣೆಗಾಗಿ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ, 1999 ರಲ್ಲಿ ‘ಜಾನಪದ ಶ್ರೀ’ ಪ್ರಶಸ್ತಿ, ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ‘ನಾಡೋಜ’ ಸಮ್ಮಾನ ಮುಖ್ಯವಾದವು.

ಸಾಧನೆಗೆ ಬೇಕಾಗಿರುವುದು ಬದ್ಧತೆ, ತಾನು ಮಾಡುವ ಕೆಲಸದಲ್ಲಿ ಇರುವ ತಾದಾತ್ಮ್ಯತೆ, ಅವಿರತ ಶ್ರಮವೇ ಹೊರತು ಶ್ರೀಮಂತಿಕೆಯಾಗಲೀ, ಶಿಕ್ಷಣದಿಂದ ಗಳಿಸಿಕೊಂಡ ಪದವಿಗಳಾಗಲೀ ಅಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಮ್ಮ ಮುಂದೆ ಇದ್ದಾರೆ.

ಡಾ. ಗೀತಾ ಕೃಷ್ಣಮೂರ್ತಿ


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *