ಪದ್ಮ ಪ್ರಭೆ / ಸ್ವಾತಂತ್ರ್ಯಹೋರಾಟಗಾರ್ತಿ ರೋಹಿಣಿ ಪೂವಯ್ಯ – ಡಾ. ಗೀತಾ ಕೃಷ್ಣಮೂರ್ತಿ

 
ಕುಮಾರಿ ಕೋಡಂಡ ರೋಹಿಣಿ ಪೂವಯ್ಯ ಅವರು ಕೊಡಗು ಜಿಲ್ಲೆಯವರು. ಮಹಿಳೆಯರಿಗೆ ಶಿಕ್ಷಣ ಏಕೆ ಎನ್ನುತ್ತಿದ್ದ ಕಾಲದಲ್ಲಿ ಹುಟ್ಟಿದೂರಿನಿಂದ ಹೊರ ಬಂದು, ಚಿನ್ನದ ಪದಕದೊಂದಿಗೆ ಪದವಿ ಪಡೆದರು. ಪದವಿ ಪಡೆದ ಮೊದಲ ಕೊಡವತಿ ಎಂಬ ಪ್ರಥಮಕ್ಕೆ ಭಾಜನರಾದವರು. ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ರೋಹಿಣಿ ಮತ್ತು ಅವರ ಸಹೋದರಿಯರೆಲ್ಲರೂ ಭಾಗವಹಿಸಿ, ಸೆರೆ ವಾಸವನ್ನೂ ಅನುಭವಿಸಿದ್ದರು. ರೋಹಿಣಿ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 1973 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.


ಕೊಡಗು ಕರ್ನಾಟಕದ ಅತಿ ಸಣ್ಣ ಹಾಗೂ ವಿಶಿಷ್ಟ ಜಿಲ್ಲೆ. ಪಶ್ಚಿಮ ಘಟ್ಟಗಳ ಮೇಲೆ ಸಮುದ್ರ ಮಟ್ಟದಿಂದ ಸುಮಾರು 3000 ಅಡಿಗಳಷ್ಟು ಮೇಲಿರುವ ಕೊಡಗು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾದ ಜಿಲ್ಲೆ. ದಟ್ಟಕಾಡುಗಳು, ವಿವಿಧ ಜಾತಿಯ ವನ್ಯ ಮೃಗಗಳು, ಪಕ್ಷಿ ಸಂಕುಲ, ಬೆಟ್ಟದ ಇಳಿಜಾರನ್ನು ಮುಚ್ಚುವ ಕಾಫಿ ತೋಟಗಳು, ಕಣಿವೆಗಳಲ್ಲಿ ಬೆಳೆದು ತೊನೆಯುವ ಬತ್ತದ ಪೈರು, ಬೆಟ್ಟಗಳ ನಡುವಿನಿಂದ ಸುಳಿದು ಬಂದು ಕಚಗುಳಿಯಿಡುವ ಕುಳಿರ್ಗಾಳಿ, ಕಣ್ಮನ ತಣಿಸುವ ಜಲಪಾತಗಳು, ಇವೆಲ್ಲದರಿಂದ ಕೊಡಗು ಜಿಲ್ಲೆ ಕರ್ನಾಟಕದ ಕಾಶ್ಮೀರ ಎನಿಸಿಕೊಂಡಿದೆ. ಕರುನಾಡ ಜನತೆಗೆ ಜೀವಜಲ ಉಣಿಸುವ ಜೀವದಾಯಿನಿ ಕಾವೇರಿಯ ಉಗಮ ಸ್ಥಾನ ಇರುವುದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ.
ಕೊಡವರ ಸಂಸ್ಕøತಿ, ಉಡುಗೆ ತೊಡುಗೆಗಳು, ಹಬ್ಬ ಹರಿದಿನಗಳು ಎಲ್ಲವೂ ಭಿನ್ನ ಹಾಗೂ ವಿಶಿಷ್ಟ. ಮುಖ್ಯವಾಗಿ ಗಮನಿಸಬೇಕಾದದ್ದು, ಕೊಡವ ಕುಟುಂಬಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಸಮಾನ ರೀತಿಯಲ್ಲಿ ಶೀಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾರೆ ಎಂಬುದನ್ನು. ವಿಳಂಬ ವಿವಾಹಗಳು ಕೊಡವ ಹೆಣ್ಣು ಮಕ್ಕಳು ಬಾಲ್ಯದಲ್ಲಿಯೇ ತಾಯಂದಿರಾಗುವುದನ್ನು ತಪ್ಪಿಸುತ್ತದೆ. ಇದು ಅವರ ಹೆಣ್ಣು ಮಕ್ಕಳ ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ ಮತ್ತು ಶಿಕ್ಷಣ ಪಡೆಯುವ ಅವಕಾಶಗಳನ್ನು ಹೆಚ್ಚಿಸಿವೆ. ಇವರಲ್ಲಿ ಸಾಕ್ಷರತೆಯ ಪ್ರಮಾಣ 82.5%. ಭಾರತೀಯ ಸೇನೆಗೆ ಅತ್ಯಧಿಕ ವೀರರನ್ನು ಮತ್ತು ಮೊತ್ತ ಮೊದಲ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರನ್ನು, ಜನರಲ್ ಮತ್ತು ಭಾರತೀಯ ಸೇನೆಯ ಮುಖ್ಯಸ್ಥರಾದ ಕೆ.ಎಸ್.ತಿಮ್ಮಯ್ಯ ಅವರನ್ನು ಕೊಟ್ಟ ಜಿಲ್ಲೆ ಇದು.

ಇಂಥ ಹಲವು ವಿಶೇಷಣಗಳಿಂದ ಕೂಡಿದ ವಿಶಿಷ್ಟ ಕೊಡಗು ಜಿಲ್ಲೆಯಿಂದ ಬಂದ ರೋಹಿಣಿ ಪೂವಯ್ಯ ವಿಶಿಷ್ಟವಾಗಿಯೇ ಬದುಕನ್ನು ರೂಪಿಸಿಕೊಂಡವರು.
ರೋಹಿಣಿ ಅವರ ತಂದೆ ಕೋಡಂಡ ಡಿ. ಪೂವಯ್ಯ ಅವರು ಮಡಿಕೇರಿಯಲ್ಲೇ ಪ್ರಸಿದ್ಧರಾದ ವಕೀಲರಾಗಿದ್ದರು. ಅವರ ವೈಭವೋಪೇತ ಮನೆಯ ಹೆಸರು ‘ಪೂವಯ್ಯ ವಿಲ್ಲಾ’. ಅವರಿಗೆ ಏಳು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. ಏಳು ಹೆಣ್ಣು ಮಕ್ಕಳ ಪೈಕಿ ಒಬ್ಬಳಾಗಿ ರೋಹಿಣಿ ಪೂವಯ್ಯ ಅವರು ಹುಟ್ಟಿದ್ದು 1895 ರಲ್ಲಿ ಮಡಿಕೇರಿಯಲ್ಲಿ. ಶಿಕ್ಷಣಕ್ಕೆ ಇನ್ನಿಲ್ಲದ ಆದ್ಯತೆ ಇದ್ದ ಕೊಡವ ಕುಟುಂಬದಲ್ಲಿ. ಪಾರಂಭಿಕ ವಿದ್ಯಾಭ್ಯಾಸ ಮುಗಿದ ನಂತರ ಪ್ರೌಢ ಶಾಲೆಯ ಶಿಕ್ಷಣವನ್ನು ಪಡೆದದ್ದು ಬೆಂಗಳೂರು ಲಂಡನ್ ಮಿಷನರಿ ಹೈಸ್ಕೂಲಿನಲ್ಲಿ. ಬಿ ಎ ಪದವಿಯನ್ನು ಪಡೆದದ್ದು ಮದ್ರಾಸಿನ ಕ್ವೀನ್ ಮೇರಿ ಕಾಲೇಜಿನಲ್ಲಿ. ಮಹಿಳೆಯರಿಗೆ ಶಿಕ್ಷಣ ಏಕೆ ಎನ್ನುತ್ತಿದ್ದ ಕಾಲದಲ್ಲಿ ಹುಟ್ಟಿದೂರಿನಿಂದ ಹೊರ ಬಂದು, ಚಿನ್ನದ ಪದಕದೊಂದಿಗೆ ಪದವಿ ಪಡೆದು, ಪದವಿ ಪಡೆದ ಮೊದಲ ಕೊಡವತಿ ಎಂಬ ಪ್ರಥಮಕ್ಕೆ ಭಾಜನರಾದವರು ಕುಮಾರಿ ರೋಹಿಣಿ. ಆನಂತರ ಅವರು ವಾರಣಾಸಿಯ ಡಾ ಆ್ಯನಿಬೆಸೆಂಟ್ ಥಿಯೊಸಾಫಿಕಲ್ ಕಾಲೇಜಿನಲ್ಲಿ, ಜಲಂಧರ್‍ನ ಆರ್ಯ ಕನ್ಯಾ ವಿದ್ಯಾ ಮಹಾವಿದ್ಯಾಲಯದಲ್ಲಿ, ಸಾಬರಮತಿಯ ಗಾಂಧಿ ಆಶ್ರಮದಲ್ಲಿ, ನವಸಾರಿ ಟಾಟಾ ಬಾಲಕಿಯರ ಪ್ರೌಢ ಶಾಲೆಯಲ್ಲಿ ಕೆಲಸ ಮಾಡಿದರು ಮತ್ತು ಅಲಹಾಬಾದಿನ ಕ್ರೆಸ್ಟ್ ವ್ಹೈಟ್ ಬಾಲಕಿಯರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾಲೇಜನ್ನು ಮುನ್ನಡೆಸಿದರು.
ನೆಹರೂ ಕುಟುಂಬಕ್ಕೆ ಆಪ್ತರಾಗಿದ್ದರು ಮತ್ತು ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರಿಗೆ ಶಿಕ್ಷಣ ನೀಡುವುದರಲ್ಲೂ ರೋಹಿಣಿ ಅವರ ಕೊಡುಗೆ ಇತ್ತು ಎನ್ನಲಾಗಿದೆ.

ಪೂವಯ್ಯ ತಮ್ಮ ಹೆಣ್ಣು ಮಕ್ಕಳೆಲ್ಲರಿಗೂ ಗಂಡು ಮಕ್ಕಳ ಹಾಗೆಯೇ ಶಿಕ್ಷಣ ಕೊಡಿಸಿದರು. ಶಾಲೆಯ ವಿದ್ಯಾಭ್ಯಾಸ ಮುಗಿದ ಕೂಡಲೇ ಅವರು ವಿವಾಹವಾಗಲು ಇಚ್ಛಿಸುತ್ತಾರೋ ಅಥವಾ ಶಿಕ್ಷಣ ಮುಂದುವರಿಸಲು ಇಚ್ಛಿಸುತ್ತಾರೋ ಎಂಬ ಪ್ರಶ್ನೆಯನ್ನು ತಮ್ಮ ಹೆಣ್ಣು ಮಕ್ಕಳ ಮುಂದಿಟ್ಟರು. 19ನೇ ಶತಮಾನದ ಆದಿ ಭಾಗದಲ್ಲಿ, ಸುಮಾರು 120 ವರ್ಷಗಳಿಗೂ ಹಿಂದೆ, ಹೆಣ್ಣುಮಕ್ಕಳಿಗೆ ಇಂಥದ್ದೊಂದು ಆಯ್ಕೆಯ ಅವಕಾಶವಿತ್ತು ಎಂಬುದೇ ವಿಸ್ಮಯಕಾರಿ. ಇಂಥ ಆಯ್ಕೆಯ ಅವಕಾಶವನ್ನು ಅವರೆಲ್ಲರೂ ಉಪಯೋಗಿಸಿಕೊಂಡದ್ದೇ ಅಲ್ಲದೆ ಅವರವರು ಆಯ್ದುಕೊಂಡ ಕ್ಷೇತ್ರದಲ್ಲಿ ಹೆಸರು ಮಾಡಿದರು. ‘ಕೊಡಗಿನ ಪೂವಯ್ಯ ಸಹೋದರಿಯರು’ ಎಂದೇ ಹೆಸರಾದರು. ಅವರಲ್ಲಿ ಒಬ್ಬಳು ರೋಹಿಣಿ. ಪದವಿ ಪಡೆದ ಕೊಡಗಿನ ಮೊತ್ತ ಮೊದಲ ಮಹಿಳೆ ಈಕೆ. ರೋಹಿಣಿಯ ಒಬ್ಬ ಸಹೋದರಿ ಆಶ್ಲೇಷಾ. ಕೊಡಗಿನಿಂದ ಮೊದಲಬಾರಿಗೆ ವೈದ್ಯರಾದವರಲ್ಲಿ ಇವರೂ ಒಬ್ಬರು. ಇನ್ನೊಬ್ಬಳು ಸಹೋದರಿ ಶ್ವೇತಾ. ಈಕೆ ನರ್ಸಿಂಗ್ ವ್ಯಾಸಂಗ ಮುಗಿಸಿ ಹೆಚ್ಚಿನ ಶಿಕ್ಷಣಕ್ಕಾಗಿ 1948 ರಲ್ಲಿ ವಿದ್ಯಾರ್ಥಿವೇತನ ಪಡೆದು ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದಳು. ರೋಹಿಣಿಯ ಮೂವರು ತಂಗಿಯರು, ಸೀತಾ, ಚಿತ್ರಾ ಮತ್ತು ಲತಾ ಎಂಬುವವರು ಹೆಸರಾಂತ ಕಥಕ್ ನೃತ್ಯಗಾರ್ತಿಯರು. ದೇಶಾದ್ಯಂತ ಸಂಚರಿಸಿ ಪ್ರದರ್ಶನಗಳನ್ನು ನೀಡಿದುದೇ ಅಲ್ಲದೆ, ಹಿಂದಿ ಚಲನಚಿತ್ರಗಳಲ್ಲಿ ನೃತ್ಯ ನಿರ್ದೇಶನವನ್ನೂ ಮಾಡಿದವರು. ಖ್ಯಾತ ಕಲಾ ವಿಮರ್ಶಕ ಸುನಿಲ್ ಕೊಥಾರಿ ಅವರು, ‘ಮೇಲ್ಮಧ್ಯಮ ವರ್ಗಗಳ ಸುಶಿಕ್ಷಿತ ಹೆಣ್ಣು ಮಕ್ಕಳು ಕಥಕ್ ನೃತ್ಯದೆಡೆಗೆ ಆಕರ್ಷಿತರಾಗಲು ಇವರು ಕಾರಣರಾದದ್ದೇ ಅಲ್ಲದೆ ಆ ನೃತ್ಯ ಪ್ರಕಾರವನ್ನು ಜನಪ್ರಿಯಗೊಳಿಸಲೂ ಕಾರಣರಾದರು’ ಎಂದಿದ್ದಾರೆ. ಅವರಲ್ಲಿ, ಸೀತಾ ಕಲಾ ವಿಷಯದಲ್ಲಿ ಪಿಎಚ್‍ಡಿ ಪಡೆದ ಪ್ರಥಮ ಕೊಡವ ಮಹಿಳೆ ಎನಿಸಿಕೊಂಡರು. ಈ ಕೊಡವ ಸಹೋದರಿಯರು, ಅವರವರ ಕ್ಷೇತ್ರಗಳಲ್ಲಿ ಪ್ರಥಮಗಳನ್ನು ಸೃಷ್ಟಿಸಿದರು. ಕೇವಲ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಲ್ಲದೆ ಆಗ ಕಾವೇರುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. 1930 ರಲ್ಲಿ ವಿರಾಜಪೇಟೆಯಲ್ಲಿ ‘ಸತ್ಯಾಗ್ರಹ ಶಿಬಿರ’ ನಡೆಸಿದಾಗ, ಕೊಡವ ಮಹಿಳೆಯರೂ ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರಾರಂಭಿಸಿದರು. ಅವರಲ್ಲಿ ಪೂವಯ್ಯ ಸಹೋದರಿಯರೂ ಇದ್ದರು ಎಂದು ಬೇರೆ ಹೇಳಬೇಕಾಗಿಯೇ ಇಲ್ಲ.

ಆ ದಶಕಗಳಲ್ಲಿ, ಸ್ವಾತಂತ್ರ್ಯ ಹೋರಾಟ ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ಹೊಸ ದಿಕ್ಕು ಮತ್ತು ಹೊಸ ಹುರುಪನ್ನು ಪಡೆದುಕೊಂಡಿತ್ತು. ಅವರ ‘ಮಾಡಿ ಇಲ್ಲವೇ ಮಡಿ’ ಎಂಬ ಘೋಷ ವಾಕ್ಯ ಭಾರತೀಯರ ನರ ನಾಡಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿತ್ತು. 1942 ರಲ್ಲಿ ‘ದೇಶಬಿಟ್ಟು ತೊಲಗಿ’ ಚಳವಳಿ ದೇಶದಾದ್ಯಂತ ಕಾಳ್ಗಿಚ್ಚಿನಂತೆ ಹರಡಿತ್ತು. ಪುರುಷ ನೇತಾರರೆಲ್ಲ ಬ್ರಿಟಿಷರಿಂದ ದಸ್ತಗಿರಿಯಾಗಿ ಜೈಲು ಕಂಬಿಗಳ ಹಿಂದೆ ಇದ್ದಾಗ, ಚಳವಳಿಯ ಕಾವು ತಗ್ಗದಂತೆ ನೋಡಿಕೊಂಡು, ಚಳವಳಿಯನ್ನು ಮುನ್ನಡೆಸಿದ್ದು ಮಹಿಳೆಯರು. ‘ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಮಹಿಳೆಯರು ಮಾಡಿದ ತ್ಯಾಗ ಬಲಿದಾನಗಳು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆಯುತ್ತದೆ’ ಎಂದಿದ್ದಾರೆ ಗಾಂಧೀಜಿ. ಇದರಲ್ಲಿ ಕರ್ನಾಟಕದ ಪಾಲು ಕಡಿಮೆಯಿಲ್ಲ.

ಸೆರೆ ವಾಸ : ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ರೋಹಿಣಿ ಮತ್ತು ಅವರ ಸಹೋದರಿಯರೆಲ್ಲರೂ ಭಾಗವಹಿಸಿ, ಸೆರೆ ವಾಸವನ್ನೂ ಅನುಭವಿಸಿದ್ದರು. ಸ್ವಾತಂತ್ರ್ಯ ಹೋರಾಟದ ಕಥನದಲ್ಲಿ ದಾಖಲೆಯಾಗಿರುವುದು ಕೆಲವೇ ಮಹಿಳೆಯರ ಪಾಲ್ಗೊಳ್ಳವಿಕೆಯಷ್ಟೇ. ಆದರೆ ಹೋರಾಟದಲ್ಲಿ ಪಾಲ್ಗೊಂಡು, ದಾಖಲಾಗದ ಮತ್ತು ಕೇವಲ ಸಾಂದರ್ಭಿಕವಾಗಿ ಮಾತ್ರ ದಾಖಲಾಗಿರುವ ಮಹಿಳೆಯರ ಸಂಖ್ಯೆ ಅದಕ್ಕೆ ಸಾವಿರಾರು ಪಟ್ಟು. ಈ ಪಟ್ಟಿಗೆ ರೋಹಿಣಿ ಪೂವಯ್ಯ, ಅವರ ಸಹೋದರಿಯರೂ ಸೇರುತ್ತಾರೆ.

1905 ರ ವೇಳೆಗೆ ಗೋಪಾಲಕೃಷ್ಣ ಗೋಖಲೆ ರಾಜಕೀಯ ವಲಯದಲ್ಲಿ ಪ್ರಮುಖ ಮುಖಂಡರಾಗಿ ಹೊರಹೊಮ್ಮಿದ್ದರು. ಭಾರತದಲ್ಲಿ ರಾಜಕೀಯ ಬದಲಾವಣೆ ಆಗಬೇಕಿದ್ದಲ್ಲಿ ಅದು ಶಿಕ್ಷಣದ ಮೂಲಕ ಮಾತ್ರ, ಜನತೆಗೆ ತಮ್ಮ ದೇಶದ ಬಗ್ಗೆ ಮತ್ತು ತಮಗಿರಬೇಕಾದ ನಾಗರಿಕ ಹಾಗೂ ರಾಜಕೀಯ ಕರ್ತವ್ಯಗಳ ಬಗ್ಗೆ ಅರಿವಿರುವಂಥ ಒಂದು ಹೊಸ ಪೀಳಿಗೆ ತಯಾರಾದ ಹೊರತು ಈ ಬದಲಾವಣೆ ಸಾಧ್ಯವಿಲ್ಲ ಎಂದು ನಂಬಿದ್ದವರು. ಅಂಥ ಒಂದು ಪಡೆಯನ್ನು ತಯಾರು ಮಾಡುವುದಕ್ಕಾಗಿ ಅವರು ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಪುರುಷರು, ಮಹಿಳೆಯರು, ಜಾತಿ, ಮತ, ಪಂಥ ಭೇದವಿಲ್ಲದೆ ಇದನ್ನು ಸಾಧಿಸಲು ಕೈ ಜೋಡಿಸಬೇಕೆಂದು ಕರೆ ನೀಡಿದರು. ಈ ಸಂಸ್ಥೆಯ ಮೂಲಕ ಸಂಚಾರಿ ಗ್ರಂಥಾಲಯಗಳ ಪರಿಕಲ್ಪನೆಯನ್ನು ಜಾರಿಗೆ ತಂದರು, ಶಾಲೆಗಳನ್ನು ತೆರೆದರು, ಕಾರ್ಖಾನೆಯ ಕಾರ್ಮಿಕರಿಗಾಗಿ ಇರುಳು ಶಾಲೆಗಳನ್ನು ಪ್ರಾರಂಭಿಸಿದರು. ಮದ್ರಾಸ್, ಮುಂಬಯಿ, ಅಲಹಾಬಾದ್, ನಾಗಪುರ ಮತ್ತು ಇತರ ಅನೇಕ ಕಡೆಗಳಲ್ಲಿ ಇದರ ಶಾಖೆಗಳು ಕೆಲಸ ಮಾಡಲಾರಂಭಿಸಿದವು. ಈ ಪ್ರಯತ್ನಗಳು ಅನೇಕರನ್ನು ಈ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿತು.

ರೋಹಿಣಿ ಅವರು ಸಮಾಜ ಸೇವೆಗೆ ತೊಡಗುವ ವೇಳೆಗೆ ಗೋಖಲೆಯವರ ಈ ಪ್ರಯತ್ನಗಳು ಬೇರು ಬಿಟ್ಟು, ಟಿಸಿಲೊಡೆದು, ರೆಂಬೆಕೊಂಬೆಗಳನ್ನು ಚಾಚಿ ಬಲ ಪಡೆದಿತ್ತು. ಇದರಿಂದ ಪ್ರೇರಿತರಾಗಿ ರೋಹಿಣಿ ಪೂವಯ್ಯ ಅವರೂ ಈ ಸಮಾಜಸೇವೆಯಲ್ಲಿ ತೊಡಗಿದರು. ಮುಂಬಯಿಯ ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ ಯಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿದರು. ಸಮಾಜ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡು ಅವಿವಾಹಿತರಾಗಿಯೇ ಉಳಿದರು.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *