ಪದ್ಮ ಪ್ರಭೆ / `ರಂಗಶಂಕರ’ದ ಶಕ್ತಿ ಅರುಂಧತಿ ನಾಗ್ – ಡಾ. ಗೀತಾ ಕೃಷ್ಣಮೂರ್ತಿ

ಬೆಂಗಳೂರಿನ ನಾಟಕ ಪ್ರಿಯರಿಗೆಲ್ಲ ಅರುಂಧತಿ ನಾಗ್ ಅವರ ಹೆಸರು ಚಿರಪರಿಚಿತ. ಸಿನಿ ಪ್ರಿಯರಿಗೂ ಪರಿಚಿತವೇ. ಏಕೆಂದರೆ ಅವರು ನಾಟಕ ಹಾಗೂ ಸಿನಿಮಾ ರಂಗಗಳೆರಡರಲ್ಲೂ ಹೆಸರು ಮಾಡಿದ ಬಹುಮುಖ ಪ್ರತಿಭೆ. ಬೆಂಗಳೂರಿಗೆ ಬಂದು ಉತ್ತಮ ನಾಟಕಗಳ ಸವಿಯನ್ನು ಉಣಬಡಿಸುವುದಕ್ಕೆ ಮುನ್ನವೇ ಹಿಂದಿ, ಬಂಗಾಲಿ ಮತ್ತು ಮರಾಠಿ ರಂಗಭೂಮಿಯಲ್ಲಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಅಪ್ರತಿಮ ನಟನಾ ಕೌಶಲ ಮೆರೆದ ಕಲಾವಿದೆ. ಈ ಪ್ರತಿಭೆಯನ್ನು ಗುರುತಿಸಿ, 2010 ರಲ್ಲಿ ರಾಷ್ಟ್ರದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅರುಂಧತಿ ನಾಗ್ ಹುಟ್ಟಿದ್ದು ದೆಹಲಿಯಲ್ಲಿ, 1956 ರ ಜುಲೈ 6 ರಂದು. ಆದರೆ, ಅವರು ಹತ್ತು ವರ್ಷದವರಿದ್ದಾಗಲೇ ಅವರ ಕುಟುಂಬ ಮುಂಬಯಿಗೆ ಹೋದದ್ದರಿಂದ ಅವರ ಜೀವನ ರೂಪುಗೊಂಡದ್ದು ಮುಂಬಯಿಯಲ್ಲಿ. ಬಾಲ್ಯದಿಂದಲೇ ಅವರಿಗೆ ನಾಟಕಗಳಲ್ಲಿ ಅಭಿನಯಿಸುವ ಆಸೆ. ಅವರ ಹರೆಯದ ವೇಳೆಗಾಗಲೇ ಅವರು ಹಿಂದಿ ಮರಾಠಿ, ಗುಜರಾತಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸುಮಾರು 42 ಪ್ರದರ್ಶನಗಳನ್ನು ಒಟ್ಟೊಟ್ಟಿಗೆ ನೀಡುತ್ತಿದ್ದರಂತೆ.

ಅರುಂಧತಿ ಅವರು ಶಂಕರ್ ನಾಗ್ ಅವರನ್ನು ಭೇಟಿ ಮಾಡಿದ್ದು ಅವರ 17 ನೆಯ ವಯಸ್ಸಿನಲ್ಲಿ. ಶಂಕರ್ ನಾಗ್ ಅವರೂ ರಂಗಭೂಮಿಯಲ್ಲಿ ಅಸಾಧಾರಣ ಆಸಕ್ತಿ ಹೊಂದಿದ್ದ ಕನ್ನಡದ ಅಪ್ರತಿಮ ಪ್ರತಿಭೆ, ಅಸಾಮಾನ್ಯ ಕನಸುಗಾರ, ಅತ್ಯದ್ಭುತ ನಟ. ಈ ಇಬ್ಬರು ಅಪ್ರತಿಮ ಪ್ರತಿಭಾವಂತರು ಭೇಟಿಯಾದ ಆರು ವರ್ಷಗಳ ನಂತರ ವಿವಾಹವಾದರು. ಈ ವಿವಾಹ ಅರುಂಧತಿ ಅವರನ್ನು ಬೆಂಗಳೂರಿಗೆ ಕರೆತಂದಿತು. ಬೆಂಗಳೂರಿಗೆ ಬಂದ ನಂತರ ಅವರು ಕನ್ನಡ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಗಿರೀಶ್‍ಕಾರ್ನಾಡ್ ಅವರ ‘ಅಂಜು ಮಲ್ಲಿಗೆ’, ‘ವೇಯ್ಟ್ ಅಂಟಿಲ್ ಡಾರ್ಕ್’ ಎಂಬ ಖ್ಯಾತ ನಾಟಕವನ್ನಾಧರಿಸಿದ 27 ಮಾವಳ್ಳಿ ಸರ್ಕಲ್, ನಾಗಮಂಡಲ, ಬರ್ಟೋಲ್ಟ್ ಬ್ರೆಕ್ಟ್ ನ ‘ಮದರ್ ಕರೇಜ್’ನ ರೂಪಾಂತರ ‘ಹುಲಗೂರು ಹುಲಿಯವ್ವ’ ಮುಂತಾದ ಹಲವಾರು ನಾಟಕಗಳಿಗೆ ಬಣ್ಣ ಹಚ್ಚಿ ತಮ್ಮ ಅಭಿನಯ ಪ್ರತಿಭೆಯನ್ನು ಇಲ್ಲಿಯ ಜನರಿಗೂ ಪರಿಚಯಿಸಿದರು. ‘ಆ್ಯಕ್ಸಿಡೆಂಟ್ ’(1984), ‘ಪರಮೇಶಿ ಪ್ರೇಮ ಪ್ರಸಂಗ’ (1984) ಮತ್ತು ‘ನೋಡಿಸ್ವಾಮಿ ನಾವಿರೋದೆ ಹೀಗೆ’ (1987) ಚಿತ್ರಗಳ ಮೂಲಕ ಕನ್ನಡ ಚಿತ್ರ ರಂಗವನ್ನೂ ಪ್ರವೇಶಿಸಿದರು.

ಚಲನಚಿತ್ರ ರಂಗ ಹಾಗೂ ರಂಗಭೂಮಿ ಚಟುವಟಿಕೆಗಳಲ್ಲಿ ಬಿಡುವಿಲ್ಲದೆ ತೊಡಗಿಸಿ ಕೊಳ್ಳುತ್ತಲೇ, ಕನಸುಗಳನ್ನು ಕಟ್ಟುತ್ತಾ, ಅವುಗಳನ್ನು ನನಸಾಗಿಸಲು ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಯೋಚಿಸುತ್ತಾ, ಅವುಗಳನ್ನು ಕಾರ್ಯರೂಪಕ್ಕೆ ತರಲು ದಾಪುಗಾಲಿಡುತ್ತಿತ್ತು ಈ ಜೋಡಿ. ಆದರೆ ಶಂಕರ್ ನಾಗ್ ಅವರ ವೇಗಕ್ಕೆ ಸರಿಗಟ್ಟುವಂತೆ ಯಾರಿಗೂ ಓಡಲಾಗುತ್ತಿರಲಿಲ್ಲ. ಅಷ್ಟು ವೇಗ ಅವರದ್ದು ಎಂದು ನೆನಪಿಸಿಕೊಳ್ಳುತ್ತಾರೆ ಅರುಂಧತಿ ನಾಗ್ ಅವರು. ರಾಷ್ಟ್ರ ಮಟ್ಟದಲ್ಲಿ ಶಂಕರ್ ನಾಗ್ ಅವರಿಗೆ ಹೆಸರನ್ನು ತಂದುಕೊಟ್ಟ ‘ಮಾಲ್ಗುಡಿ ಡೇಸ್’ ನ ನಿರ್ಮಾಣ ಕಾರ್ಯದಲ್ಲಿ ಅರುಂಧತಿ ಅವರ ಪಾತ್ರ ಹಾಗೂ ಸಹಕಾರ ಬಹು ದೊಡ್ಡದು. ಅದಕ್ಕೆ ಸಂಭಾಷಣೆಯನ್ನು ಬರೆದವರೂ ಅರುಂಧತಿ ಅವರೇ!

1990ರ ಅಕ್ಟೋಬರ್ 30 ರ ರಾತ್ರಿ ಅರುಂಧತಿ ಅವರ ಪಾಲಿಗೆ ಕರಾಳ ರಾತ್ರಿಯಾಗಿತ್ತು. ಶೂಟಿಂಗ್‍ನಲ್ಲಿ ಭಾಗವಹಿಸಿ ತೆರಳುತ್ತಿದ್ದಾಗ ಇವರ ಕಾರು ನಿಂತಿದ್ದ ಟ್ರಕ್‍ಗೆ ಗುದ್ದಿ ಅಪಘಾತ ಸಂಭವಿಸಿತು. ಅಪಘಾತದಲ್ಲಿ ಶಂಕರ್ ನಾಗ್ ಸ್ಥಳದಲ್ಲೇ ಮರಣಹೊಂದಿದರೆ, ಅರುಂಧತಿ ಅವರ ಕಾಲುಗಳಿಗೆ ಪೆಟ್ಟಾಗಿ ಒಂದು ವರ್ಷ ಗಾಲಿ ಕುರ್ಚಿಯನ್ನು ಅವಲಂಬಿಸಬೇಕಾಗಿ ಬಂತು. ಐದು ವರ್ಷದ ಅವರ ಪುಟ್ಟ ಮಗಳು ಕಾವ್ಯ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಳು. ಶಂಕರ್ ನಾಗ್ ಅವರ ಮರಣದೊಂದಿಗೆ ಅರುಂಧತಿ ಅವರ ಪ್ರಪಂಚ ಇದ್ದಕ್ಕಿದ್ದಂತೆ ಕುಸಿದಿತ್ತು. ಕನಸುಗಳು ನೆಲ ಕಚ್ಚಿದ್ದವು, ಸಾಲದ ಹೊರೆ ಹೆಗಲಿಗೇರಿತ್ತು, ಏನೊಂದನ್ನೂ ಅರಿಯದ ಪುಟ್ಟ ಮಗಳನ್ನು ಬೆಳೆಸುವ ಜವಾಬ್ದಾರಿ ತಲೆಯ ಮೇಲಿತ್ತು. ಈ ಎಲ್ಲ ಸಮಸ್ಯೆಗಳನ್ನೂ ಒಂದೊಂದಾಗಿ ಬಗೆಹರಿಸಿಕೊಳ್ಳಲು ಬೆಂಬಲವಾಗಿ ಕುಟುಂಬದ ಸದಸ್ಯರು, ಅವರೇ ಅವರ ಸುತ್ತ ಕಟ್ಟಿಕೊಂಡ ಗೆಳೆಯರ ಬಳಗ, ರಂಗಾಸಕ್ತರ ತಂಡ ಹಾಗೂ ಹಿತೈಷಿಗಳು ಜೊತೆ ನಿಂತರು.

ಪ್ರಪಂಚದ ಯಾವುದೇ ಅತ್ಯುತ್ತಮ ರಂಗಮಂದಿರದೊಂದಿಗೆ ಸ್ಪರ್ಧಿಸಬಲ್ಲಂಥ ರಂಗ ಮಂದಿರವನ್ನು ಕಟ್ಟಬೇಕು, ಅಲ್ಲಿ ಸದಾ ರಂಗ ಚಟುವಟಿಕೆಗಳು ನಡೆಯುತ್ತಿರಬೇಕು, ರಂಗ ತಂಡಗಳಿಗೆ ಕೈಗೆಟಕುವ ಬಾಡಿಗೆಯಲ್ಲಿ ಅದರ ಉಪಯೋಗ ದೊರಯುವಂತೆ ಮಾಡಬೇಕು ಎಂಬುದು ಇವರಿಬ್ಬರ ಕನಸಾಗಿತ್ತು. ಆದರೆ ಅದನ್ನು ಸಾಕಾರಗೊಳಿಸುವತ್ತ ಹೆಜ್ಜೆಯಿಡುವ ಮುನ್ನವೇ ಅರುಂಧತಿ ಅವರನ್ನು ಬಿಟ್ಟು ಶಂಕರ್ ನಾಗ್ ತೀರಿಕೊಂಡಿದ್ದರು. ಆದರೆ, ಶಂಕರ್ ನಾಗ್ ಅವರ ಅಕಾಲಿಕ ಅಗಲಿಕೆಯ ದು:ಖವನ್ನು ಮೀರಿ, ಪತಿಯ ಕನಸುಗಳನ್ನು ನನಸು ಮಾಡಲು ಅವರು ಶ್ರಮಿಸಿದ ರೀತಿ ಮಾತ್ರ ಅನನ್ಯವಾದುದು.

ಮೊದಲನೆಯದಾಗಿ ರಂಗ ಮಂದಿರವನ್ನು ನಿರ್ಮಾಣ ಮಾಡಲು ಸ್ಥಳವನ್ನು ಗುರುತಿಸುವುದರಿಂದ ಕೆಲಸವನ್ನು ಪ್ರಾರಂಭಿಸಬೇಕಿತ್ತು. ಅವರ ಸತತ ಪ್ರಯತ್ನದಿಂದಾಗಿ, ಬೆಂಗಳೂರಿನ ಜೆಪಿ ನಗರದಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗ 30 ವರ್ಷ ಅವಧಿ ಗುತ್ತಿಗೆ ಕರಾರಿನ ಮೇಲೆ ದೊರೆಯಿತು. ಆದರೆ ನಿರ್ಮಾಣ ಕಾರ್ಯ ಕೈಗೊಳ್ಳಲು ಕೈಯಲ್ಲಿ ಬಿಡಿಕಾಸಿರಲಿಲ್ಲ. ಹಾಗಾಗಿ ಆ ನಂತರದ ಪ್ರಯತ್ನವೆಲ್ಲ ನಿರ್ಮಾಣ ಕಾರ್ಯಕ್ಕಾಗಿ ದೇಣಿಗೆ ಪಡೆಯುವತ್ತ ಕೇಂದ್ರೀಕೃತವಾಯಿತು. ಆದರೆ ಈ ಪ್ರಯತ್ನದಲ್ಲಿ ಅವರಿಗಾದದ್ದು ಸಂಪೂರ್ಣ ನಿರಾಶೆ. ಈ ನಿರಾಸೆಯ ಕತ್ತಲಲ್ಲೆ ಬೆಳಕಿನ ಕಿರಣದಂತೆ ಬಂದದ್ದು, ಆಗಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ ಅವರು, ಅರುಂಧತಿ ಅವರ ಯೋಜನೆಯನ್ನು ಮೆಚ್ಚಿ ಮುಂದುವರಿಸಲು ಅನುಕೂಲವಾಗುವಂತೆ ನೀಡಿದ ಹತ್ತು ಲಕ್ಷ ರೂಗಳ ಇಡಿಗಂಟು. ಆದರೆ, ಆ ನಂತರ ಒಂದು ವರ್ಷ ಕಳೆದರೂ ಅದರ ಮೇಲೆ ಒಂದಿಷ್ಟನ್ನೂ ಒಗ್ಗೂಡಿಸಲು ಅರುಂಧತಿ ಅವರು ಅಸಮರ್ಥರಾದರು. ಹಾಗಾಗಿ ಎಸ್.ಎಂ.ಕೃಷ್ಣ ಅವರಿಂದ ಪಡೆದ ಹತ್ತು ಲಕ್ಷ ರೂಗಳನ್ನು, ಅದರ ಮೇಲೆ ಒಂದು ವರ್ಷದ ಬಡ್ಡಿಯನ್ನು ಸೇರಿಸಿ ಅವರಿಗೆ ಹಿಂತಿರುಗಿಸಲು ಅವರನ್ನು ಮತ್ತೆ ಭೇಟಿ ಮಾಡಿದರು. ಎಸ್.ಎಂ.ಕೃಷ್ಣ ಅವರು ಅರುಂಧತಿ ಅವರ ಪ್ರಾಮಾಣಿಕತೆ ಮತ್ತು ಅವರ ಬದ್ಧತೆಯಿಂದ ಪ್ರಭಾವಿತರಾದರು. ಅವರು ಮತ್ತೆ ಇಪ್ಪತ್ತು ಲಕ್ಷ ರೂಗಳನ್ನು ಮಂಜೂರು ಮಾಡಿದುದೇ ಅಲ್ಲದೆ, ಅವರ ಉದ್ಯಮಿ ಮಿತ್ರರನ್ನು ಅರುಂಧತಿ ಅವರಿಗೆ ಪರಿಚಯಿಸಿ ಅವರಿಂದಲೂ ಅವರಿಗೆ ದೇಣಿಗೆ ದೊರೆಯಲು ಸಹಾಯ ಮಾಡಿದರು. ‘ರಂಗ ಶಂಕರ’ದ ಕನಸನ್ನು ಸಾಕಾರಗೊಳಿಸಲು ತಟ್ಟದ ಕದಗಳಿಲ್ಲ, ಸಂಪರ್ಕಿಸದ ವ್ಯಕ್ತಿಗಳಿಲ್ಲ ಎಂದು ಒಂದು ಸಂದರ್ಶನದಲ್ಲಿ ಅರುಂಧತಿ ಅವರು ಹೇಳಿಕೊಂಡಿದ್ದಾರೆ.

ಕೊನೆಗೂ 1992 ರಲ್ಲಿ, ‘ಸಂಕೇತ್ ಟ್ರಸ್ಟ್’ ಎಂಬ ವಿಶ್ವಸ್ಥ ಮಂಡಲಿಯನ್ನು ರಚಿಸಿಕೊಂಡರು. ಆ ನಂತರದಲ್ಲಿ, ನಾಲ್ಕು ದೀರ್ಘ ವರ್ಷಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು, 2004 ರ ಅಕ್ಟೋಬರ್ 28 ರಂದು 35 ದಿನಗಳ ಹಬ್ಬದೊಡನೆ, ರಂಗಶಂಕರ ಎಂಬ ಅದ್ಭುತವಾದೊಂದು ರಂಗಮಂದಿರ, ಬೆಂಗಳೂರಿನ ಹೆಮ್ಮೆಯಾಗಿ, ಉದ್ಘಾಟನೆಯಾಯಿತು. ಅರುಂಧತಿ ಅವರ ಕನಸು, ರಂಗಭೂಮಿಯಲ್ಲಿ ಆಸಕ್ತಿ ಹೊಂದಿದವರ ಹಾಗೂ ಕಲಾರಸಿಕರೆಲ್ಲರ ಕನಸೂ ಆಗಿತ್ತು ಎಂದರೆ ಸುಳ್ಳಲ್ಲ. ಅವರ ಕನಸು ಸಾಕಾರಗೊಂಡು, ಪ್ರಪಂಚದಲ್ಲಿನ ಯಾವುದೇ ಅತ್ಯುತ್ತಮ ರಂಗಮಂದಿರವನ್ನು ಮೀರಿಸಬಲ್ಲಂಥ, 12,500 ಚದರಡಿಯ ವಿಸ್ತೀರ್ಣದಲ್ಲಿ ಹರಡಿರುವ ಸುಸಜ್ಜಿತ ‘ರಂಗಶಂಕರ’ ಎಂಬ ರಂಗಮಂದಿರ ಸಂಕೀರ್ಣ ಬೆಂಗಳೂರಿನ ಕಲಾರಸಿಕರಿಗೆ ದೊರೆಯಿತು. ಅಲ್ಲಿಂದ ಪ್ರಾರಂಭಗೊಂಡು ಇಲ್ಲಿಯವರೆಗೆ ಕರ್ನಾಟಕದ ಅಷ್ಟೇ ಏಕೆ, ಭಾರತದ ಎಲ್ಲ ಭಾಷೆಗಳ ನಾಟಕಗಳಿಗೆ ಹಾಗೂ ಜಗತ್ತಿನ ಅತ್ಯುತ್ತಮ ನಾಟಕಗಳಿಗೆ ವೇದಿಕೆಯನ್ನು ಒದಗಿಸಿದೆ. ವರ್ಷದ 365 ದಿನಗಳಲ್ಲಿ ಸುಮಾರು 400 ನಾಟಕಗಳ ಪ್ರದರ್ಶನ ನಡೆಯುತ್ತದೆ ಇಲ್ಲಿ!

ಮಕ್ಕಳ ನಾಟಕೋತ್ಸವ : ರಂಗಾಸಕ್ತರಿಗೊಂದು ವೇದಿಕೆಯನ್ನು ಒದಗಿಸುವುದಷ್ಟಕ್ಕೇ ಇವರ ರಂಗಭೂಮಿಯ ಚಟುವಟಿಕೆ ಸೀಮಿತಗೊಂಡಿಲ್ಲ. ಮಕ್ಕಳ ಮಾನಸಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳ ಮನಸ್ಸನ್ನು ಅರಳಿಸುವ, ಅವರ ಕಲ್ಪನೆಗಳನ್ನು ಕೊನರಿಸುವ, ರಂಗಭೂಮಿಯ ಅನುಭವವನ್ನು ಮಕ್ಕಳಿಗೆ ಕಟ್ಟಿಕೊಡುವ ದೃಷ್ಟಿಯಿಂದ, ‘ಆಹಾ’ ಎಂಬ ಮಕ್ಕಳ ನಾಟಕೋತ್ಸವವನ್ನು ಮಕ್ಕಳಿಗಾಗಿ ರಂಗಶಂಕರದಲ್ಲಿ ನಡೆಸುತ್ತಾರೆ. ಇಲ್ಲಿಯವರೆಗೆ ಸುಮಾರು ಮೂರು ಲಕ್ಷ ಮಕ್ಕಳು ಬಂದು, ಮಕ್ಕಳಗಾಗಿ ಪ್ರದರ್ಶಿಸಿದ ನಾಟಕಗಳನ್ನು ನೋಡಿ ಆನಂದಿಸಿದ್ದಾರೆ. ಇದೊಂದು ಮಕ್ಕಳಿಗಾಗಿ ನಡೆಸುತ್ತಿರುವ ಅಭಿಯಾನ ಎನ್ನುತ್ತಾರೆ ಅರುಂಧತಿ ನಾಗ್ ಅವರು. ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದು, ಹುಟ್ಟಿದ ಘಳಿಗೆಯಿಂದ 5 ವರ್ಷದವರೆಗೆ ಮಕ್ಕಳು ಪಡೆಯುವ ಮತ್ತು ತಮ್ಮದಾಗಿಸಿಕೊಳ್ಳುವ ಅನುಭವಗಳು ಮತ್ತು ತಿಳಿವಳಿಕೆಗಳು. ತಂದೆ ತಾಯಿಯರು, ಶಿಕ್ಷಕರು, ಹಾಗೂ ಕಲಾವಿದರು ಮಕ್ಕಳ ಜೀವನದಲ್ಲಿ ಅತ್ಯಂತ ಪ್ರಭಾವ ಬೀರುವ ವ್ಯಕ್ತಿಗಳು. ಕಲೆ ಸಂಸ್ಕøತಿಯ ಪ್ರತಿಬಿಂಬ. ಈ ಮೂವರನ್ನೂ ಒಂದೆಡೆ ತಂದು, ಮಕ್ಕಳ ವ್ಯಕ್ತಿತ್ವ ವಿಕಸಿಸಲು ನೆರವಾಗುವ ಉದ್ದೇಶವುಳ್ಳ ಅಭಿಯಾನ ಇದು ಎಂದು ವಿವರಿಸುತ್ತಾರೆ ಅವರು. ಸುಸಂಸ್ಕøತ ಮಕ್ಕಳು ಮಾತ್ರ ಸುಸಂಸ್ಕøತ ಸಮಾಜವನ್ನು ನಿರ್ಮಿಸಬಲ್ಲರು.

ಅರುಂಧತಿ ನಾಗ್ ಅವರಿಗೆ ರಂಗಭೂಮಿಯೊಡನೆ ನಲವತ್ತು ವರ್ಷಗಳ ದೀರ್ಘಕಾಲದ ನಂಟು. ರಂಗಭೂಮಿಯ ಕ್ಷೇತ್ರದಲ್ಲಿ ಖ್ಯಾತರಾಗಿದ್ದ ಕೈಫಿ ಆಜ್ಮಿ, ಎಂ.ಎಸ್ ಸತ್ಯು ಮೊದಲಾದವರ ಗರಡಿಯಲ್ಲಿ ಪಳಗಿದವರು. ತಾನು ಇಂದು ಹೀಗಿರುವುದಕ್ಕೆ ತಮಗೆ ರಂಗಭೂಮಿಯಲ್ಲಿ ದೊರೆತ ತರಬೇತಿಯೇ ಕಾರಣ ಎಂದಿದ್ದಾರೆ. ಮುಂಬಯಿಯಲ್ಲಿದ್ದಾಗ, ರಂಗಭೂಮಿ ಕ್ಷೇತ್ರದಲ್ಲಿ ಅರುಂಧತಿ ಅವರದೇ ಪರಿಚಿತ ಹೆಸರು. ಶಂಕರ್ ನಾಗ್ ಅವರನ್ನು ಬಲ್ಲವರು ವಿರಳ. ಆದರೆ ವಿವಾಹವಾಗಿ ಬೆಂಗಳೂರಿಗೆ ಬಂದರೆ, ಇದು ತಿರುವು ಮುರುವು. ಕರ್ನಾಟಕದಲ್ಲಿ ಶಂಕರ್ ನಾಗ್ ಆ ವೇಳೆಗಾಗಲೇ ಸಿನಿಮಾಗಳಿಂದ ಸಾಕಷ್ಟು ಖ್ಯಾತರಾಗಿದ್ದರು. ಇಲ್ಲಿ, ಕನ್ನಡದ ನೆಲದಲ್ಲಿ, ಅರುಂಧತಿಯನ್ನು ಬಲ್ಲವರು ಕಡಿಮೆ. ಬೆಂಗಳೂರಿಗೆ ಬಂದ ನಂತರ ಕನ್ನಡವನ್ನು ಕಲಿತು ಕನ್ನಡದ ನಾಟಕಗಳಲ್ಲಿ ನಟಿಸಲು ತೊಡಗಿದವರು ಅವರು. ಎಲ್ಲಿ ನೆಲೆಸುತ್ತೀವೆಯೋ ಆ ನೆಲದ ಭಾಷೆಯನ್ನು ಕಲಿಯುವುದು ಅತ್ಯಂತ ಅಗತ್ಯ ಎಂದು ನಂಬಿದವರು ಅವರು. ಹಾಗೆಯೇ ಅವರ ಕನಸಿನ ಕೂಸಾದ ರಂಗಶಂಕರದಲ್ಲಿ ಪ್ರದರ್ಶಿತವಾಗಿರುವ ನಾಟಕಗಳಲ್ಲಿ ಕನ್ನಡ ನಾಟಕಗಳದ್ದೇ ಸಿಂಹ ಪಾಲು.

ರಂಗಶಂಕರ ನಾಟಕಗಳಿಗೆ ಮಾತ್ರವಲ್ಲದೆ, ಸಂಸ್ಕøತಿಯೊಂದಿಗೆ ತಳುಕು ಹಾಕಿಕೊಂಡ ಅನೇಕ ಚಟುವಟಿಕೆಗಳಿಗೆ ಪ್ರಿಯವಾದ ತಾಣ. ಪ್ರತಿ ವರ್ಷ ಮಾವಿನ ಹಣ್ಣಿನ ಹಬ್ಬ ನಡೆಯುತ್ತದೆ. ಮಾವಿನ ಹಣ್ಣು ಜಗತ್ತಿಗೆ ಭಾರತದ ಕೊಡುಗೆ. ಮಾವಿನ ಹಣ್ಣು ತಿಂದು ಖುಷಿ ಪಡುವ ಪಾರ್ಟಿಯನ್ನು ರಂಗ ಶಂಕರ ಪ್ರತಿ ವರ್ಷ ಜೂನ್ ತಿಂಗಳಲ್ಲಿ ಆಯೋಜಿಸುತ್ತದೆ. ರಂಗಭೂಮಿ ಕಲಾವಿದರು, ಸಾಹಿತಿಗಳು, ಕಲಾವಿದರು ಹೀಗೆ ಸಮಾಜದ ಎಲ್ಲ ರಂಗದವರೂ ಬಂದು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲರೂ ಇಲ್ಲಿ ಮಾಡುವುದೊಂದೆ- ಮಾವಿನ ಹಣ್ಣನ್ನು ತಿನ್ನುವುದು.

ರಂಗ ಶಂಕರದಲ್ಲಿ ಪ್ರತಿ ವರ್ಷ ನಡೆಯುವ ಮತ್ತೊಂದು ಉತ್ಸವ ‘ರಂಗ ಯುಗಾದಿ’. ಆಯ್ದ ಸಾಹಿತಿಯ ಸಮಗ್ರ ಸಾಹಿತ್ಯವನ್ನು ಸಂಭ್ರಮಿಸುವ ದಿನ ಅದು. ರಂಗಕರ್ಮಿಗಳು ಸಾಹಿತಿಗಳು, ಸಾಹಿತ್ಯಾಸಕ್ತರು ಎಲ್ಲರೂ ಒಂದಾಗಿ ಇಡೀ ದಿನ ಸಾಹಿತಿ ಮತ್ತು ಭಾಷೆಯನ್ನು ಆಸ್ವಾದಿಸುತ್ತಾರೆ. ಥಿಯೇಟರ್ ಮತ್ತು ಕಲೆಯನ್ನು ಆಸ್ವಾದಿಸಿ ಮೆಚ್ಚುವ ಬಗ್ಗೆ ನಡೆಸುವ ಕಾರ್ಯಾಗಾರ ಮತ್ತೊಂದು. ತಮ್ಮ ಕಲಾ ಪಯಣದಲಿನ ಎಲ್ಲ ವಿವರಗಳನ್ನು ಹಂಚಿಕೊಳ್ಳುವ, ತಾವು ಮೆಚ್ಚುವ ಕಲಾವಿದನನ್ನು ಆಪ್ತವಾಗಿ ಅರಿಯಲು, ಅವರ ಕುತೂಹಲವನ್ನು ತಣಿಸುವ ಅವಕಾಶ ಕಲ್ಪಿಸುವ ಒಂದು ಪ್ರಯತ್ನ. ‘ಲೋಕ ಸಂಚಾರ’ ಮತ್ತೊಂದು ಅನನ್ಯ ಪ್ರಯತ್ನ. ಮಕ್ಕಳ ನಾಟಕಗಳನ್ನು ಅವರಿರುವಲ್ಲಿಗೇ ಕೊಂಡೊಯ್ದು ಅವರಿಗೆ ರಂಗಭೂಮಿಯಲ್ಲಿ ಆಸಕ್ತಿಯನ್ನು ಉಂಟು ಮಾಡಲು ಕೈಗೊಳ್ಳುತ್ತಿರುವ ಅಭಿಯಾನ.

ಈ ಎಲ್ಲ ಪ್ರಯತ್ನಗಳ ಹಿಂದಿರುವ ಶಕ್ತಿ, ಬೆಂಬಲ, ಬೆನ್ನಲುಬು ಅರುಂಧತಿ ನಾಗ್ ಅವರದು ಎಂದು ಬೇರೆ ಹೇಳಬೇಕಿಲ್ಲ. ಸಿನಿಮಾ, ರಂಗಭೂಮಿಗಳೆರಡೂ ಕ್ಷೇತ್ರಗಳು, ಅರುಂಧತಿ ಅವರು ಈ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಯನ್ನು ಗುರುತಿಸಿ, ಗೌರವಿಸಿ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *