ಪದ್ಮ ಪ್ರಭೆ/ ರಂಗಭೂಮಿಯಿಂದ ಬೇರ್ಪಡಿಸಲಾಗದ ಬಿ. ಜಯಶ್ರೀ- ಡಾ.ಗೀತಾ ಕೃಷ್ಣಮೂರ್ತಿ

ಕನ್ನಡ ರಂಗಭೂಮಿಯನ್ನೇ ಉಸಿರು ಮತ್ತು ಬದುಕಾಗಿ ಸ್ವೀಕರಿಸಿದ ಡಾ. ಬಿ. ಜಯಶ್ರೀ ರಂಗಭೂಮಿಯ ಬಹು ದೊಡ್ಡ ಕಲಾವಿದೆ. ರಂಗಭೂಮಿಯೇ ಅವರ ತವರು. ಅವರ ಆಟ ಪಾಠ ಬಾಲ್ಯ ಎಲ್ಲಕ್ಕೂ ರಂಗಭೂಮಿಯೇ ವೇದಿಕೆ. ಬೆಳೆದದ್ದು, ನೋವು ನಲಿವುಗಳನ್ನು ಉಂಡದ್ದು ರಂಗಭೂಮಿಯಲ್ಲಿಯೇ. ಹಾಗಾಗಿ ಜಯಶ್ರೀ ಅವರನ್ನು ರಂಗಭೂಮಿಯಿಂದ ಬೇರ್ಪಡಿಸಿ ನೋಡಲಾಗುವುದೇ ಇಲ್ಲ. 2013 ರಲ್ಲಿ ರಾಷ್ಟ್ರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು

ಬಹುಮುಖ ಪ್ರತಿಭೆಯ ಜಯಶ್ರೀ ಅವರು ಜನಿಸಿದ್ದು 1950 ರ ಜೂನ್ 9 ರಂದು. ತಂದೆ ಬಸವರಾಜ್ ಹಾಗೂ ತಾಯಿ ಮಾಲತಮ್ಮ. ಗುಬ್ಬಿ ವೀರಣ್ಣ ನಾಟಕ ಕಂಪನಿಯ ಸಂಸ್ಥಾಪಕ ಗುಬ್ಬಿ ವೀರಣ್ಣ ಅವರ ಮೊಮ್ಮಗಳು. ರಂಗಭೂಮಿಯ ನಂಟು ಈಕೆಗೆ ಹುಟ್ಟಿನಿಂದಲೇ ಬಂದದ್ದು. ಬಣ್ಣ ಹಚ್ಚಿ ನಾಟಕದಲ್ಲಿ ಅಭಿನಯಿಸಲು ಪ್ರಾರಂಭ ಮಾಡಿದುದು ಆಕೆಯ ನಾಲ್ಕನೆಯ ವಯಸ್ಸಿನಲ್ಲಿ! ಜನಪದ ರಂಗಭೂಮಿಯ ಅಡಿಪಾಯದೊಂದಿಗೆ ನವದೆಹಲಿಯಲ್ಲಿ ರಾಷ್ಟ್ರೀಯ ನಾಟಕಶಾಲೆಯಲ್ಲಿ ಆಧುನಿಕ ನಾಟಕ ಶಾಸ್ತ್ರದಲ್ಲಿಯೂ ತರಬೇತಿ ಹೊಂದಿದವರು. ನಾಟಕಗಳ ನಿರ್ದೇಶನದಲ್ಲಿ ಅನೇಕಾನೇಕ ಪ್ರಯೋಗಗಳನ್ನು ನಡೆಸಿ ನಾಟಕ ಕಲೆಯ ಪರಿಧಿಗಳನ್ನು ವಿಸ್ತರಿಸುವ ಮೂಲಕ ಪ್ರೇಕ್ಷಕರಿಗೆ ಹೊಸ ಹೊಸ ಅನುಭವವನ್ನು ಕೊಟ್ವರು.

ಜಯಶ್ರೀ ಅವರ ಪ್ರಕಾರ ‘ನಾಟಕ’ ಎಂದರೆ ‘ಕಟ್ಟುವುದು’. “ನಾಟಕ ಅಭಿನಯಿಸುವುದಲ್ಲ ಅಥವಾ ನಿರ್ದೇಶಿಸುವುದಲ್ಲ, ಬದಲಾಗಿ ಕಟ್ಟುವುದು ಎಂದು ನಂಬಿದ್ದೇನೆ. ಕಟ್ಟು ಎನ್ನುವ ಪದದಲ್ಲಿ ಒಂದು ಕ್ರಿಯಾತ್ಮಕ ದನಿ ಇದೆ. ಜೀವಪರವಾದ ಪದ ಅದು. ಗರ್ಭ ಕಟ್ಟಿದರೆ ಮಗು ಜನಿಸುತ್ತದೆ. ಹಾಗೇ ನಾಟಕ ಕಟ್ಟಿದರೆ ಅದು ದೃಶ್ಯಕಾವ್ಯವಾಗುತ್ತದೆ” ಎನ್ನುತ್ತಾರೆ ಜಯಶ್ರೀ. ಅವರ ಈ ಮಾತುಗಳು ನಾಟಕದ ಬಗೆಗಿನ ಅವರ ಇಡೀ ದೃಷ್ಟಿಕೋನವನ್ನು ಧ್ವನಿಸುತ್ತದೆ. ಜೀವನಾನುಭವ ಮತ್ತು ರಂಗಭೂಮಿ ಅವರಿಗೆ ಬೇರೆ ಬೇರೆ ಆಗಿಯೇ ಇಲ್ಲ. ಅಡಿಗೆ ಮಾಡುವುದು, ನಾಟಕ ನಿರ್ದೇಶಿಸುವುದು, ಸುತ್ತಲಿನ ವಿದ್ಯಮಾನಗಳಿಗೆ ಸ್ಪಂದಿಸುವುದು ಮತ್ತು ತೀವ್ರವಾಗಿ ಜೀವನವನ್ನು ಪ್ರೀತಿಸುವುದು ಕೂಡ ಅಷ್ಟೇ ಮುಖ್ಯ ಮತ್ತು ಅವಶ್ಯಕ ಅವರಿಗೆ. ಈ ಎಲ್ಲ ತಾದಾತ್ಮ್ಯತೆ ಮತ್ತು ತೊಡಗಿಸಿಕೊಳ್ಳುವಿಕೆ ಒಬ್ಬ ವ್ಯಕ್ತಿಯನ್ನು ಆಕೆಯ ಸಾಧನೆಯ ಹಾದಿಯಲ್ಲಿ ಎಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲುದು ಎಂಬುದಕ್ಕೆ ಬಿ. ಜಯಶ್ರೀ ಅವರು ಉದಾಹರಣೆಯಾಗಿ ನಮ್ಮ ಮುಂದೆ ಇದ್ದಾರೆ.

ಒಮ್ಮೆ ಜಯಶ್ರೀ ಅವರು ತಮ್ಮ ತಾತನ ಜೊತೆಯಲ್ಲಿ ಮಂಗಳೂರಿನ ಬಂದರಿಗೆ, ಆಹ್ವಾನದ ಮೇರೆಗೆ, ಹಡಗನ್ನು ನೋಡಲು ಹೋಗಿದ್ದರು. ಹಡಗಿನ ಅಧಿಕಾರಿಯೊಬ್ಬರು ‘ನಿನ್ನ ಹೆಸರೇನು ಮಗೂ’ ಎಂದು ಇಂಗ್ಲಿಷಿನಲ್ಲಿ ಕೇಳಿದ್ದರು. ಇಂಗ್ಲಿಷಿನ ಗಂಧಗಾಳಿಯೂ ಗೊತ್ತಿಲ್ಲದ ಜಯಶ್ರೀ ‘ಹೆಹೆಹೆ’ ಎಂದು ನಕ್ಕು ಸುಮ್ಮನಾಗಿದ್ದರು. ಆನಂತರ ತಂಗಿಯ ಮೂಲಕ ಅವರು ಕೇಳಿದ್ದೇನು ಎಂದು ತಿಳಿದು, ಜಯಶ್ರೀ ಅವರಿಗೆ ಇಂಗ್ಲಿಷ್ ಭಾಷೆ ಬಾರದಿರುವುದರ ಬಗ್ಗೆ ತುಂಬ ಖೇದವೆನಿಸಿದೆ. ಅದು ಕಾರಣವಾಗಿ ಬೆಂಗಳೂರಿನಲ್ಲಿ ಕಾನ್ವೆಂಟಿನಲ್ಲಿ ಶಿಕ್ಷಣ ಪಡೆದು. ಪಿಯುಸಿ ಗೆ ಮಹಾರಾಣೀಸ್ ಕಾಲೇಜು ಸೇರಿದರು. ಕನ್ನಡದ ರಂಗಭೂಮಿಯಲ್ಲಿ ಅವರ ಕಂಚಿನ ಕಂಠದಿಂದ ಕನ್ನಡದ ರಂಗ ಗೀತೆಗಳಿಗೆ ದನಿಕೊಟ್ಟಿರುವ, ತಮ್ಮ ಅನನ್ಯ ಸಂಭಾಷಣಾ ಚತುರತೆಯಿಂದಾಗಿ ಅನೇಕ ಚಿತ್ರ ತಾರೆಯರಿಗೆ ಡಬ್ಬಿಂಗ್ ಕಲಾವಿದೆಯಾಗಿ ದನಿ ದಾನ ಮಾಡಿರುವ ಜಯಶ್ರೀ ಅವರು ಪಿಯುಸಿಯಲ್ಲಿ ಕನ್ನಡ ಪರೀಕ್ಷೆಯಲ್ಲಿ ನಪಾಸಾಗಿದ್ದರು! ಮುಂದೆ ಇದೇ ವ್ಯಕ್ತಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್‍ಗೆ ಭಾಜನರಾದರು! ಅಷ್ಟೇ ಅಲ್ಲ, ಭಾರತದ ನಾಲ್ಕನೆಯ ಅತ್ಯುತ್ಕøಷ್ಟ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾದರು.

ಜಯಶ್ರೀ ಅವರ ಸಾಧನೆಗಳ ಸರಮಾಲೆ ಇಷ್ಟಕ್ಕೆ ನಿಲ್ಲುವುದಿಲ್ಲ. ಮಾಸ್ಕೋದಲ್ಲಿ ಆದ ಸಾಂಸ್ಕøತಿಕ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಭಾರತದ ರಾಜ್ಯಸಭೆಗೆ ಕರ್ನಾಟಕದಿಂದ ಸದಸ್ಯರಾಗಿ ನಾಮನಿರ್ದೇಶಿತರಾದರು. ಶಾಲೆಗೇ ಹೋಗದೆ, ವಿದ್ಯೆಯ ಮಹತ್ವವೇ ಗೊತ್ತಿಲ್ಲದ, ಯಾವುದೋ ಸಂದರ್ಭದಲ್ಲಿ ಇಂಗ್ಲಿಷ್ ಕಲಿಯಬೇಕಿತ್ತು ಎನಿಸಿ, ಕಾನ್ವೆಂಟ್ ಶಾಲೆಗೆ ಹೋಗಿ, ಕನ್ನಡದಲ್ಲಿ ನಪಾಸಾದ ಹುಡುಗಿ, ಮುಂದೆ ಸಾಧಿಸಿರುವ ಯಶಸ್ಸನ್ನು ಮತ್ತು ಏರಿರುವ ಎತ್ತರವನ್ನು ನೋಡಿದರೆ ಯಾರಿಗಾದರೂ ಅಚ್ಚರಿಯಾಗದೆ ಇರದು. ಸಾಧನೆಗೆ ಪೂರ್ವಭಾವಿಯಾಗಿ ಇಂಥದ್ದೊಂದು ಅರ್ಹತೆ ಇರಲೇಬೇಕೆಂಬ ಯಾವ ಮಾನದಂಡವೂ ಇಲ್ಲ. ಯಶಸ್ಸಿನ ತುತ್ತ ತುದಿಗೆ ಏರಲು ಬೇಕಾದದ್ದು ಆಯ್ದುಕೊಂಡ ಕ್ಷೇತ್ರದಲ್ಲಿ ತಾದಾತ್ಮ್ಯತೆಯಿಂದ ತೊಡಗಿಸಿಕೊಳ್ಳುವ ಪ್ರವೃತ್ತಿ ಮತ್ತು ಅದೇ ಕ್ಷೇತ್ರದಲ್ಲಿ ಛಲ ಬಿಡದೆ ಮಾಡುವ ಸಾಧನೆ. ಇದಕ್ಕೆ ನಮಗೆ ಕಲಾ ಕ್ಷೇತ್ರದಲ್ಲಿ ಅನೇಕ ಉದಾಹರಣೆಗಳು ದೊರೆಯುತ್ತದೆ. ಬಿ. ಜಯಶ್ರೀ ಅಂಥ ಸಾಧನೆಗೆ ಉದಾಹರಣೆಯಾಗಿದ್ದಾರೆ.

ರಂಗಭೂಮಿಯಿಂದ ವಿಮುಖರನ್ನಾಗಿಸುವ ಅನೇಕ ಸಂದರ್ಭಗಳು ಅವರ ಜೀವನದಲ್ಲಿ ಬಂದು ಹೋಗಿವೆ. ಆದರೆ, ಜೀವನದಲ್ಲಿ ಬಂದ ಎಲ್ಲ ಅಡೆತಡೆಗಳನ್ನು ಎದುರಿಸಲು ಸಾಧ್ಯವಾದದ್ದು ಮತ್ತು ದಿನ ನಿತ್ಯದ ಖರ್ಚಿಗೂ ಪರದಾಡುವ ಹಣಕಾಸಿನ ಪರಿಸ್ಥಿತಿ ಇದ್ದರೂ, ನಿಗದಿತ ಸಂಬಳ ಬರುವ ಕೆಲಸದ ಆಹ್ವಾನ ಬಂದಾಗ ಅದನ್ನು ತಿರಸ್ಕರಿಸಲು ಸಾಧ್ಯವಾದದ್ದು ರಂಗಭೂಮಿಯಲ್ಲಿ ಅವರಿಗಿದ್ದ ಅಲುಗಾಡಿಸಲಾಗದ ಅಚಲ ನಿಷ್ಠೆಯ ಕಾರಣದಿಂದಲೇ.

ಭಾರತ ಬ್ರಿಟಿಷರ ಮುಷ್ಟಿಯಿಂದ ಹೊರಬಂದು ಸ್ವಾತಂತ್ರ್ಯದ ಗಾಳಿಯನ್ನು ಅನುಭವಿಸುತ್ತಿದ್ದ ಕಾಲ! ಆದರೆ ಪುರುಷ ಪ್ರಧಾನ ಸಮಾಜದಲ್ಲಿ, ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಎಂಬುದು ಕನಸಿನ ಗಂಟೇ ಆಗಿತ್ತು. ಜಯಶ್ರೀ ಅವರ ತಾಯಿ ಮದುವೆಯಾದದ್ದು ತನ್ನ ದೊಡ್ಡಪ್ಪನನ್ನು. ಎಷ್ಟೇ ವಿರೋಧಿಸಿದರೂ, ತನ್ನ ದೊಡ್ಡಪ್ಪನನ್ನೇ ಮದುವೆಯಾಗಬೇಕಾಗಿ ಬಂದದ್ದು ಸಹ, ಅಂದಿನ, ಸ್ತ್ರೀಯರ ಸ್ವಾತಂತ್ರ್ಯ ರಹಿತ ಸ್ಥಾನಮಾನಕ್ಕೆ ಹಿಡಿದ ಕನ್ನಡಿಯಾಗಿತ್ತು. ಸ್ವತಃ ತಂದೆಯೇ ವಿರೋಧಿಸಿದರೂ ಮದುವೆಯನ್ನು ತಪ್ಪಿಸಲಾಗಿರಲಿಲ್ಲ. ಬಿ.ಜಯಶ್ರೀ ಅವರು ತಮ್ಮ ಬಾಲ್ಯವನ್ನು ಮತ್ತು ಯೌವನವನ್ನು ಕಳೆದದ್ದು ಇಂಥ ಸ್ತ್ರೀ ಅಧೀನತೆಯ ವಾತಾವರಣದಲ್ಲಿ. ಮನೆಗೆ ಚಿರಪರಿಚಿತನಾದ, ಒಳ್ಳೆಯವನೆಂದು ನಂಬಿ ಇವರು ಮದುವೆಯಾದ ವ್ಯಕ್ತಿಯ ಕ್ರೂರ ಮುಖ ಬಿ.ಜಯಶ್ರೀ ಅವರಿಗೆ ಗೋಚರಿಸಿದ್ದು ಮದುವೆಯ ನಂತರ. ಅಲ್ಲಿ ಅನಾವರಣಗೊಂಡದ್ದು ಪುರುಷ ಕ್ರೌರ್ಯದ ಮತ್ತೊಂದು ಮಜಲು. ಮದುವೆಯಾದ ಒಂದು ವರ್ಷಕ್ಕೇ ಹೆಣ್ಣು ಮಗುವಿಗೆ ತಾಯಿಯಾದರು. ಆದರೆ ಗಂಡನೆನಿಸಿಕೊಂಡ ವ್ಯಕ್ತಿ ಕುಡಿದು ಬಂದು ಹೆಂಡತಿಯನ್ನು ಬಡಿಯುವುದನ್ನು ಬಿಟ್ಟರೆ ಬೇರಾವ ಜವಾವಾಬ್ದಾರಿಯನ್ನೂ ಹೊರಲಿಲ್ಲ. ಮನೆಯನ್ನು ನಡೆಸುವ, ಮಗುವನ್ನು ನೋಡಿಕೊಳ್ಳುವ, ಈ ಎಲ್ಲ ಖರ್ಚುಗಳಿಗೂ ಹಣ ಹೊಂದಿಸುವ ಜವಾಬ್ದಾರಿಗಳೆಲ್ಲವೂ ಜಯಶ್ರೀ ಅವರ ಹೆಗಲಿಗೆ. ಗಂಡ ನೀಡುತ್ತಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆಯಿಂದ ಜರ್ಝರಿತರಾಗಿದ್ದರು. ಲೆಕ್ಕಕ್ಕೇ ಸಿಗದಷ್ಟು ಹೆಣ್ಣು ಮಕ್ಕಳು, ತಮಗೆ ದೊರಕಿದ್ದನ್ನು ಒಪ್ಪಿಕೊಂಡು, ತುಟಿಕಚ್ಚಿ ಸಹಿಸಿಕೊಂಡು ಬಾಳುತ್ತಿದ್ದ ಕಾಲ ಅದು. ಆದರೆ ಜಯಶ್ರೀ ಅವರು ಅಂಥ ಬಾಳನ್ನು ಧಿಕ್ಕರಿಸಿ ಹೊರಬಂದರು. ತಮ್ಮ ತಾಯಿಯ ಬೆಂಬಲದೊಂದಿಗೆ ಹೊಸ ಬಾಳನ್ನು ಕಟ್ಟಿಕೊಂಡರು. ದಿನದಿನದ ಊಟವನ್ನು ಅಂದಂದೇ ಸಂಪಾದಿಸಿದರುಂಟು ಇಲ್ಲದಿದ್ದರೆ ಇಲ್ಲ ಎಂಬಂಥ ಆರ್ಥಿಕ ಸಂಕಷ್ಟದ ಎದುರಿನಲ್ಲೂ ಕಲೆಯನ್ನು, ಕಲೆಯನ್ನಷ್ಟೇ ನೆಚ್ಚಿಕೊಂಡು, ಅಪ್ಪಿಕೊಂಡು ದೃಢ ಹೆಜ್ಜೆಯನ್ನಿಟ್ಟರು.

ರಾಷ್ಟ್ರೀಯ ನಾಟಕ ಶಾಲೆ (ಎನ್‍ಎಸ್‍ಡಿ)ಯಲ್ಲಿ ಮೂರು ವರ್ಷಗಳ ವ್ಯಾಸಂಗವನ್ನು ಮುಗಿಸಿದ ನಂತರ ಅವರಿಗೆ ಲಂಡನ್ನಿಗೆ ಹೋಗುವ ಅವಕಾಶ ದೊರೆತಿತ್ತು. ಆದರೆ ಕನ್ನಡ ರಂಗಭೂಮಿಯ ಸೆಳೆತ ಅವರನ್ನು ಕನ್ನಡ ರಂಗಭೂಮಿಗೆ ಮರಳಿಸಿತ್ತು. ಅವರು ಹೋಗದೆ ಉಳಿದದ್ದು ಕನ್ನಡ ರಂಗಭೂಮಿಗೆ ಆದ ಲಾಭ ಎಂಬುದು ರಂಗಾಸಕ್ತರ ಅಭಿಪ್ರಾಯ. ಮುಂದೆ ಅವರು ಕನ್ನಡ ರಂಗಭೂಮಿಯಲ್ಲಿ ಮಾಡಿದ ನಾಟಕಗಳು, ನಿರ್ದೇಶನ ಹಾಗೂ ಪ್ರಯೋಗಗಳು ರಂಗಾಸಕ್ತರ ಈ ಮಾತುಗಳನ್ನು ಪುಷ್ಟೀಕರಿಸುತ್ತವೆ.

ಬಿ. ಜಯಶ್ರೀ ಅವರು ‘ಸ್ಪಂದನ’ ತಂಡವನ್ನು ಸೇರಿದ್ದು, ಅವರ ಆಹ್ವಾನದ ಮೇರೆಗೆ, 1976 ರ ಸುಮಾರಿನಲ್ಲಿ. ಆ ತಂಡದ ಸಂಸ್ಥಾಪಕ ನಿರ್ದೇಶಕರು ರಾಣಿ ರಾವ್ ಮತ್ತು ಕಾರ್ಯದರ್ಶಿ ಆನಂದರಾಜು ಅವರು. ಸ್ಪಂದನ ತಂಡದ ಮೂಲಕ ಅನೇಕ ಅದ್ಭುತ ರಂಗ ಪ್ರಯೋಗಗಳನ್ನು ಮಾಡಿದರು. ಅನೇಕ ನಾಟಕಗಳು ಅದ್ಭುತ ಯಶಸ್ಸನ್ನು ಕಂಡುವಲ್ಲದೆ, ಜಯಶ್ರೀ ಅವರ ಸೃಜನಶೀಲತೆಗೆ ಹಾಗೂ ಅಸಾಮಾನ್ಯ ಪ್ರತಿಭೆಗೆ ಸಾಕ್ಷಿಗಳಾದವು. ಎಪ್ಪತ್ತು, ಎಂಬತ್ತು, ತೊಂಬತ್ತರ ದಶಕಗಳು ರಂಗಭೂಮಿಯ ಪರ್ವಕಾಲವೆನ್ನಬಹುದು. ಅತ್ಯುತ್ತಮ ನಿರ್ದೇಶಕರಿಂದ ಅತ್ಯುತ್ತಮ ನಾಟಕಗಳು ಪ್ರದರ್ಶನ ಕಂಡವು, ಇದರಿಂದ ಅತ್ಯುತ್ತಮ ಕಲಾವಿದರು ತಯಾರಾದರು. 1976 ರಲ್ಲಿ ಸಮುದಾಯ' ತಂಡದಿಂದ ಪ್ರಸನ್ನ ಅವರು ನಿರ್ದೇಶಿಸಿದ `ತಾಯಿ’ ನಾಟಕದ ಮುಖ್ಯಪಾತ್ರದಲ್ಲಿ ಜಯಶ್ರೀ ಅವರ ಅಭಿನಯ ಕನ್ನಡ ರಂಗಭೂಮಿಯ ಅದ್ಭುತ ನೆನಪುಗಳಲ್ಲೊಂದಾಗಿ ಉಳಿದಿದೆ.

ಸ್ಪಂದನದ ಮೂಲಕ ಜಯಶ್ರೀ ಅವರು ರಂಗಕ್ಕೆ ತಂದ ‘ಕರಿಮಾಯಿ’ ಹಾಗೂ ‘ಲಕ್ಷಾಪತಿ ರಾಜನ ಕಥೆ’ ಜಯಶ್ರೀ ಅವರಿಗೆ ಅತ್ಯಂತ ಹೆಸರನ್ನು ತಂದುಕೊಟ್ಟ ನಾಟಕಗಳು. ಇವೆರಡೂ ನಾಟಕಗಳಿಗೆ ಇಂದಿಗೂ ಹೊಸ ಪ್ರೇಕ್ಷಕರನ್ನು ಹುಟ್ಟಿಹಾಕುವ ಗಟ್ಟಿತನ ಇದೆ ಎನ್ನುತ್ತಾರೆ ಅವರು. ಸಂಗೀತ ನಾಟಕ ಅಕಾಡೆಮಿಯ ಉತ್ಸವದಲ್ಲಿ ಪ್ರದರ್ಶಿಸಿದ ‘ಲಕ್ಷಾಪತಿ ರಾಜನ ಕಥೆ’ ನಾಟಕಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆಯಿತು. ಅಲ್ಲಿಂದ ಮುಂದೆ, ಭಾರತ ಸರ್ಕಾರ ಸ್ಪಂದನ ತಂಡವನ್ನು, ಕೈರೋ ಮತ್ತು ತಾಷ್ಕೆಂಟಿಗೆ ಬಾರತವನ್ನು ಪ್ರತಿನಿಧಿಸಲು ಆಯ್ಕೆ ಮಾಡಿತು. ಅಲ್ಲಿಯೂ, ಇಪ್ಪತ್ತಮೂರು ದೇಶಗಳ ನಡುವೆ, ಈ ‘ಲಕ್ಷಾಪತಿ ರಾಜನ ಕಥೆ’ ನಾಟಕ ಜಯಭೇರಿಯನ್ನು ಬಾರಿಸಿತು. ಇಂಥದೊಂದು ಘಳಿಗೆಯನ್ನು ಜಯಶ್ರೀ ಅವರು, ಅದು ತಮ್ಮ ಜೀವನದ ಸಾರ್ಥಕ ಘಳಿಗೆ ಎಂದು ನೆನೆಯುತ್ತಾರೆ.

ನಾಟಕದ ಒಟ್ಟು ಆಶಯವನ್ನು ಹೆಚ್ಚಿಸುವ ತಂತ್ರಜ್ಞಾನದ ಬಳಕೆಗೆ ಜಯಶ್ರೀ ಅವರ ಆಕ್ಷೇಪವಿಲ್ಲ. ಆದರೆ, ತಂತ್ರಜ್ಞಾನದ ಬಳಕೆಯಿಂದಾಗಿ ರಂಗಭೂಮಿಯ ಸಾಧ್ಯತೆಗಳು ಕುಂಠಿತಗೊಳ್ಳಬಾರದು ಎಂಬುದು ಅವರ ಸ್ಪಷ್ಟ ನಿಲುವು.

2010 ರ ಮಾರ್ಚ್ 10 ರಂದು ಆರು ವರ್ಷಗಳ ಅವಧಿಗೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡದ್ದು ಅವರ ಜೀವನದ ಮತ್ತೊಂದು ಮಜಲು. ಇದು ಅವರಿಗೆ ಅವರು ಕಾಣದ ಲೋಕವೊಂದನ್ನು ಪರಿಚಯಿಸಿ ಅವರ ಅನುಭವವನ್ನು ವಿಸ್ತಾರಗೊಳಿಸಿತು.

ಜಯಶ್ರೀ ಅವರು ನಿರ್ದೇಶಿಸಿದ, ಅಭಿನಯಿಸಿದ, ರಚಿಸಿದ ನಾಟಕಗಳದು ದೊಡ್ಡ ಪಟ್ಟಿ ಆಗುತ್ತದೆ. ಕನ್ನಡ ರಂಗಭೂಮಿಯಲ್ಲಿ ರಂಗಗೀತೆಗಳನ್ನು ಅದ್ಭುತವಾಗಿ ಹಾಡುವ ಅವರ ಸಾಧನೆಯನ್ನು ಕುರಿತು ಹೇಳುವುದೂ ಬೇಕಾದಷ್ಟಿದೆ. 1996 ರಲ್ಲಿ ಈ ಕಲಾವಿದೆಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2013 ರಲ್ಲಿ ರಾಷ್ಟ್ರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜಯಶ್ರೀ ಅವರ ಆತ್ಮಕಥೆ ‘ಕಣ್ಣಾಮುಚ್ಚೇ ಕಾಡೇಗೂಡೇ’ (ನಿರೂಪಣೆ: ಪ್ರೀತಿ ನಾಗರಾಜ್) ಓದುಗರ ಮೆಚ್ಚುಗೆ ಗಳಿಸಿರುವ ಕೃತಿ. ಜಯಶ್ರೀ ಮತ್ತು ಅವರ ಸಂಗಾತಿ ಆನಂದರಾಜು ಅವರಿಬ್ಬರೂ ಈಗಲೂ ರಂಗ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.

ರಂಗಭೂಮಿ, ಸಿನಿಮಾ, ರಂಗ ಗೀತೆಗಳ ಗಾಯನ, ಚಲನ ಚಿತ್ರಗಳಿಗೆ ಹಿನ್ನೆಲೆ ಗಾಯನ, ಚಿತ್ರ ಕಲಾವಿದೆಯರಿಗೆ ಕಂಠದಾನ ಜೊತೆಗೆ ಚಲನಚಿತ್ರಗಳಲ್ಲಿ ಅಭಿನಯ. ಕಲೆಗೆ, ಕಲಾವಿದೆಗೆ ಗಡಿಗಳಿಲ್ಲ ಎಂಬುದನ್ನು ಸಾಬೀತು ಪಡಿಸಿದ ಕಲಾವಿದೆ ನಮ್ಮೊಡನಿದ್ದಾರೆ ಎಂಬುದೇ ನಮಗೆಲ್ಲ ಹೆಮ್ಮೆ ತರುವ ವಿಷಯ.

-ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *