ಪದ್ಮ ಪ್ರಭೆ / ಯಶಸ್ವಿ ಉದ್ಯಮಿ ಕಿರಣ್ ಮಜೂಮ್‍ದಾರ್ ಷಾ – ಡಾ. ಗೀತಾ ಕೃಷ್ಣಮೂರ್ತಿ

        

ಅವಿರತ ಪ್ರಯತ್ನ ಮತ್ತು ಅನ್ವೇಷಣೆಯ ಹಂಬಲ ಜೊತೆಗೂಡಿದರೆ ಯಶಸ್ಸು ಎನ್ನುವುದು ಮರೀಚಿಕೆಯಾಗದೆ ನೆರಳಿನಂತೆ ಹಿಂಬಾಲಿಸುತ್ತದೆ. ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಉದ್ಯಮಿ ಕಿರಣ್ ಮಜೂಮ್ ದಾರ್ ಇದಕ್ಕೊಂದು ಮಾದರಿಯಾಗಿ ನವ ಉದ್ಯಮಗಳಿಗೆ, ಯುವ ಉದ್ಯಮಿಗಳಿಗೆ ಪ್ರೇರಣೆ ನೀಡುತ್ತಿದ್ದಾರೆ. ಉದ್ಯಮಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿ ಎರಡೂ ಸದಾ ಜೊತೆಗೂಡಿ ಸಾಗಬೇಕು ಎನ್ನುವುದು ಅವರ ನಂಬಿಕೆ. ಕಿರಣ್ ಮಜೂಮ್ ದಾರ್ ಷಾ ಅವರ ಸಾಧನೆಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪುರಸ್ಕಾರಗಳ ಉಚಿತ ಮನ್ನಣೆ ದೊರೆತಿದೆ.

ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ, ಅವಿರತ ಪ್ರಯತ್ನ, ಛಲ, ತಾದಾತ್ಮ್ಯತೆಗಳ ಜೊತೆಗೆ ಗುರಿ ಸ್ಪಷ್ಟವಾಗಿರಬೇಕಾದದ್ದು ಅತ್ಯಂತ ಮುಖ್ಯವಾದದ್ದು. ಕೇವಲ 10,000 ರೂಗಳ ಬಂಡವಾಳದೊಡನೆ ಪ್ರಾರಂಭಿಸಿ ಇಂದು ಜಗತ್ತಿನ ಶ್ರೀಮಂತ ಯಶಸ್ವೀ ಉದ್ಯಮಿಗಳಲ್ಲಿ ಒಬ್ಬರು ಎನ್ನಿಸಿಕೊಂಡಿರುವ, ಬಯೋಕಾನ್' ಕಂಪೆನಿಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಕಿರಣ್ ಮಜೂಮ್‍ದಾರ್ ಷಾ ಇದಕ್ಕೆ ಉದಾಹರಣೆ. ಅವರೇ ಹೇಳುವಂತೆ,ನಾನು ಮಾಡುವ ಕೆಲಸವನ್ನು ಅಗಾಧ ಸಾಮಾನ್ಯ ಜ್ಞಾನ, ದೃಢ ನಿಶ್ಚಯ, ಭಂಡ ಧೈರ್ಯದಿಂದ ಮಾಡುತ್ತಿದ್ದೆ. ಬೇರೆಯವರು ಮಾಡಿದುದನ್ನೇ ಮಾಡದೆ, ನನ್ನದೇ ಆಲೋಚನೆಯಲ್ಲಿ ಹೊಳೆದದ್ದನ್ನೂ ಮಾಡುತ್ತಿದ್ದೆ. ಹೊಸತು ಹುಟ್ಟುವುದು ಅಲ್ಲಿಯೇ.’ ಅವರು ಆಯ್ಕೆ ಮಾಡಿಕೊಂಡ ಕ್ಷೇತ್ರ ಮಹಿಳೆಯರು ಯೋಚಿಸದ ಮದ್ಯ ತಯಾರಿಕೆಯ ಕ್ಷೇತ್ರವನ್ನು. ಅಂಥದ್ದೊಂದು ಕ್ಷೇತ್ರವನ್ನು ಆಯ್ದುಕೊಂಡಾಗ ಅಲ್ಲಿ ಕಾಲೂರಿ ನಿಲ್ಲುವುದೇ ಕಷ್ಟ. ಅಂಥದರಲ್ಲಿ ಕಿರಣ್ ಕಾಲೂರಿ ನಿಂತುದೇ ಅಲ್ಲದೆ, ಬೇರೆಯವರಿಗೆ ಮಾದರಿಯಾಗುವಂತೆ ಬೆಳೆದರು, ಯಶಸ್ವೀ ಉದ್ಯಮಿ ಎನಿಸಿಕೊಂಡರು. ಧೈರ್ಯ ಮತ್ತು ಸಾಹಸ ಮನೋವೃತ್ತಿಗೆ ಹೆಸರಾದರು. ಇವರ ಈ ಅಸೀಮ ಸಾಧನೆಗೆ ಭಾರತ ಸರ್ಕಾರ, 1989 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಮತ್ತು 2005 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.

ಕಿರಣ್ ಹುಟ್ಟಿದುದು ಬೆಂಗಳೂರಿನಲ್ಲಿ 1953 ರ ಮಾರ್ಚ್ 23 ರಂದು. ತಂದೆ ಯುನೈಟೆಡ್ ಬ್ರಿವರೀಸ್ ಕಂಪೆನಿಯಲ್ಲಿ ಬ್ರೂ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ರಸೇಂದ್ರ ಮಜೂಮ್‍ದಾರ್. ಕಿರಣ್ ತಮ್ಮ ಪ್ರೌಢ ಶಾಲೆಯ ವಿದ್ಯಾಭ್ಯಾಸವನ್ನು ಬಿಷಪ್ ಕಾಟನ್ಸ್ ಬಾಲಕಿಯರ ಶಾಲೆಯಲ್ಲಿ 1968 ರಲ್ಲಿ, ಪದವಿಯ ವ್ಯಾಸಂಗವನ್ನು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ, 1973 ರಲ್ಲಿ ಪೂರ್ಣಗೊಳಿಸಿದರು. ಪದವಿ ಪಡೆದದ್ದು ಪ್ರಾಣಿ ವಿಜ್ಞಾನದಲ್ಲಿ. ಆದರೆ ತಂದೆಯ ಅಪೇಕ್ಷೆಯಂತೆ, ಬ್ರೂ ಮಾಸ್ಟರ್ ಆಗಲು ತರಬೇತಿ ಪಡೆಯುವ ಉದ್ದೇಶದಿಂದ ಅವರು ಆಯ್ದುಕೊಂಡದ್ದು ಫರ್ಮೆಂಟೇಷನ್ ವಿಜ್ಞಾನವನ್ನು. ಈ ಕ್ಷೇತ್ರದಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಅವರು ಆಸ್ಟ್ರೇಲಿಯಾಕ್ಕೆ ತೆರಳಿದರು. 1975 ರಲ್ಲಿ, ಆ ತರಗತಿಯಲ್ಲಿ ಈಕೆ ಏಕೈಕ ಮಹಿಳೆಯಾಗಿದ್ದರು. ಅಲ್ಲಿ ಪ್ರಥಮ ಸ್ಥಾನವನ್ನು ಪಡೆದು ಹೊರಬಿದ್ದರು. ಮತ್ತೆರಡು ವರ್ಷ ಅಲ್ಲಿಯೇ ಕೆಲಸ ಮಾಡಿದ ಅನುಭವದೊಂದಿಗೆ ಅವರು ಸ್ವದೇಶಕ್ಕೆ ಮರಳಿದರು. ಕಲ್ಕತ್ತಾ ಮತ್ತು ಬರೋಡಾದ ಕಂಪೆನಿಗಳಲ್ಲಿ ಕೆಲಸ ಮಾಡಿದ ನಂತರ ಅವರಿಗೆ ಭಾರತದಲ್ಲಿ ತನಗೆ ಒಳ್ಳೆಯ ಭವಿಷ್ಯ ಇಲ್ಲ ಎನ್ನಿಸಿ ಸ್ಕಾಟ್ಲೆಂಡಿಗೆ ಮಾಸ್ಟರ್ ಬ್ರೂವರ್ ಆಗಿ ಕೆಲಸ ಮಾಡಲು ತೆರಳುವ ಸಿದ್ಧತೆ ನಡೆಸಿದರು.

ಅದೇ ಸಮಯದಲ್ಲಿ ಐರ್ಲೆಂಡಿನ ಬಯೋಕಾನ್ ಬಯೋಕೆಮಿಕಲ್ಸ್ ಸಂಸ್ಥಾಪಕ ಲೆಸ್ಲಿ ಆಚಿನ್‍ಕ್ಲಾಸ್ ಅವರು ತಮ್ಮ ಕಂಪೆನಿಯ ಶಾಖೆಯನ್ನು ಭಾರತದಲ್ಲಿ ತೆರೆಯುವ ಆಲೋಚನೆಯಲ್ಲಿ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದ್ದರು. ಭಾರತದಲ್ಲಿ ಆಚಿನ್‍ಕ್ಲಾಸ್ ಅವರು ತೆರೆಯುವ ಕಂಪೆನಿಯ ಮಾಸ್ಟರ್ ಬ್ರೂವರ್ ಕೆಲಸವನ್ನು ಕಿರಣ್ ಒಪ್ಪಿಕೊಂಡರು. ಹೀಗೆ ಅನಿರೀಕ್ಷಿತವಾಗಿ ಇಲ್ಲಿಯೇ ಕೆಲಸ ಮಾಡುವ ಅವಕಾಶ ಅವರಿಗೆ ತಾನಾಗಿ ಒದಗಿ ಬಂತು. ಮುಂದೆ ಅಚಿನ್‍ಕ್ಲಾಸ್ ಅವರು ಐರ್ಲೆಂಡಿನ ತಮ್ಮ ಕಂಪೆನಿಯಲ್ಲಿ ಕಿರಣ್ ಅವರಿಗೆ ಮ್ಯಾನೇಜರ್ ಹುದ್ದೆಗೆ ಅಗತ್ಯವಾದ ತರಬೇತಿಯನ್ನೂ ನೀಡಿದರು. ವ್ಯವಹಾರಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಪಡೆದುಕೊಂಡು ಭಾರತಕ್ಕೆ ಹಿಂತಿರುಗಿ, ಬಯೋಕಾನ್ ಇಂಡಿಯಾ ಕಂಪೆನಿಯನ್ನು ಕೇವಲ 10,000 ರೂಗಳ ಮೂಲ ಬಂಡವಾಳದೊಡನೆ ಒಂದು ಗ್ಯಾರೇಜಿನಲ್ಲಿ ಪ್ರಾರಂಭಿಸಿದರು. ಹೀಗೆ ಅಚಿನ್‍ಕ್ಲಾಸ್ ಮತ್ತು ಕಿರಣ್ ಅವರ ಜಂಟಿ ಸಹಭಾಗಿತ್ವದ ಕಂಪೆನಿ 1978 ರಲ್ಲಿ ಭಾರತದಲ್ಲಿ ತನ್ನ ವಹಿವಾಟನ್ನು ಪ್ರಾರಂಭಿಸಿತು. ಅಲ್ಲಿಂದ ಮುಂದಿನದೆಲ್ಲ ಕಿರಣ್ ಅವರ ಯಶಸ್ಸಿನ ಕಥೆ.

ಕಿರಣ್ ಅವರ ಯಶಸ್ಸಿನ ಕಥೆಯ ಹಿಂದೆ ಇರುವುದು ಉದ್ಯಮದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಮತ್ತು ಅಸ್ಮಿತೆಗಾಗಿ ಹೋರಾಡಿದ ಕಥೆ, ಮಹಿಳೆ ಎಂಬ ಕಾರಣದಿಂದಾಗಿ ಪುರುಷ ಪ್ರಧಾನ ಉದ್ಯಮ ಕ್ಷೇತ್ರದಲ್ಲಿ ವ್ಯಕ್ತವಾಗುವ ತಾರತಮ್ಯದ ವಿರುದ್ಧ ಹೋರಾಡಿದ ಕಥೆ, ಮಹಿಳೆಯನ್ನು ಉದ್ಯೋಗದಾತಳ ಸ್ಥಾನದಲ್ಲಿ ನೋಡಲು ಇಚ್ಛಿಸದ ಪುರುಷ ಮನೋ ಧರ್ಮದ ವಿರುದ್ಧ ಸೆಣಸಬೇಕಾಗಿ ಬಂದ ಕಥೆ, ಅಷ್ಟೇ ಅಲ್ಲ ತಮ್ಮ ಹಣ ಹೂಡಲು ಮಹಿಳಾ ಸಾಮಥ್ರ್ಯವನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡಲು ಹೆದರುವ ಹೂಡಿಕೆದಾರರ ಸಂದೇಹದ ವಿರುದ್ಧ ಹೋರಾಡಬೇಕಾದ ಕಥೆ.

25 ರ ಹರೆಯದಲ್ಲಿದ್ದ ವ್ಯಕ್ತಿ, ಅದರಲ್ಲೂ ಮಹಿಳೆ, ಅದರಲ್ಲೂ ಮಹಿಳೆಯರು ಪ್ರವೇಶಿಸದೆಯೇ ಇರುವಂಥ ಒಂದು ಅ-ಸಾಂಪ್ರದಾಯಿಕ ಉದ್ಯಮಕ್ಕಾಗಿ ಹಣ ಹೂಡಲು ಸಂಪನ್ಮೂಲವನ್ನು ಒದಗಿಸಿಕೊಳ್ಳುವುದು ಬಹು ದೊಡ್ಡ ಸಮಸ್ಯೆಯಾಗಿತ್ತು. ಹೂಡಿದ ಹಣ ಹಿಂತಿರುಗಿ ಬರುತ್ತದೆಂಬ ಯಾವುದೇ ಖಾತರಿಯೂ ಇಲ್ಲದಂಥ ಸಂದರ್ಭ. ಹಾಗಾಗಿ ಯಾವುದೇ ಖಾತರಿಯಿಲ್ಲದೆ ಸಾಲ ಕೊಡಲು ಯಾರೂ ಮುಂದೆ ಬರಲಿಲ್ಲ. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಭೇಟಿಯಾದ ಬ್ಯಾಂಕರ್ ಒಬ್ಬರು ಸಾಲ ಕೊಡಲು ಒಪ್ಪಿದರು. ಹಣದ ಸಮಸ್ಯೆ ಸದ್ಯಕ್ಕೆ ಬಗೆಹರಿದರೆ, ನಂತರ ಎದುರಾದದ್ದು ಕೆಲಸಗಾರರ ಸಮಸ್ಯೆ. ಮಹಿಳೆಯ ಅಧೀನದಲ್ಲಿ ಕೆಲಸ ಮಾಡಲು ನುರಿತ ಕೆಲಸಗಾರರು ಮುಂದೆ ಬರಲಿಲ್ಲ. ಅವರ ಕಂಪೆನಿಯ ಮೊದಲ ಉದ್ಯೋಗಿ ನಿವೃತ್ತ ಗೆರೇಜ್ ಮೆಕಾನಿಕ್! ಸಮಾಜದ ಈ ಬಗೆಯ ಸ್ಥಾಪಿತ ಮನೋಭೂಮಿಕೆಯ ಜೊತೆಗೆ ಮೂಲಭೂತ ಸೌಕರ್ಯಗಳ ಕೊರತೆಯ ವಿರುದ್ಧವೂ ಹೋರಾಡಬೇಕಾದ ಪರಿಸ್ಥಿತಿ. ಕಡಿತಗಳಿಲ್ಲದ ನಿರಂತರ ವಿದ್ಯುತ್ ಪೂರೈಕೆ, ಉತ್ತಮ ಗುಣಮಟ್ಟದ ನೀರು, ಕ್ರಿಮಿರಹಿತ ಪ್ರಯೋಗ ಶಾಲೆಗಳು, ರಫ್ತು ಮಾಡಿಕೊಂಡ ವೈಜ್ಞಾನಿಕ ಉಪಕರಣಗಳು ಮತ್ತು ಅತ್ಯಾಧುನಿಕ ವೈಜ್ಞಾನಿಕ ಕೌಶಲಗಳನ್ನು ಹೊಂದಿದ ಸಿಬ್ಬಂದಿ, ಹೀಗೆ ಎಲ್ಲವನ್ನೂ ಹೊಂದಿಸಿಕೊಳ್ಳಬೇಕಿತ್ತು. ಯಾವುದೂ ಸುಲಭವಾಗಿ ದೊರೆಯುವುದು ಸಾಧ್ಯವಿರಲಿಲ್ಲ.

ಆದರೆ ಕಿರಣ್ ಎದೆಗುಂದಿ ಹಿಂದೆ ಸರಿಯಲಿಲ್ಲ, ಛಲ ಬಿಡದೆ ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನೂ ಎದುರಿಸುತ್ತಾ ಮುಂದುವರಿದರು. ಅವರೇ ತಮ್ಮನ್ನು ಆಕಸ್ಮಿಕ ಉದ್ಯಮಿ' ಎಂದು ಕರೆದುಕೊಳ್ಳುತ್ತಾರೆ. ಏಕೆಂದರೆ ಅವರಿಗೆ ಉದ್ಯಮವೊಂದನ್ನು ಪ್ರಾರಂಭಿಸುವ ಉದ್ದೇಶವೇ ಇರಲಿಲ್ಲ. ಆದರೆ ಅವಕಾಶ ದೊರೆತು ಪ್ರಾರಂಭಿಸಿದ ನಂತರ ಹಿಂತಿರುಗಿ ನೋಡಲಿಲ್ಲ. ಸಾಧನೆಯ ಏಣಿಯನ್ನು ಏರುತ್ತಲೇ ಹೋದರು. ಪ್ರಾರಂಭದಲ್ಲಿ ಪಪಾಯದಿಂದ ಕಿಣ್ವಗಳನ್ನು ಬೇರ್ಪಡಿಸುವ ಕಾರ್ಯಾಚರಣೆಯಿಂದ ಪ್ರಾರಂಭವಾದ ಕಂಪನಿ ಕಿರಣ್ ಮಜೂಮ್‍ದಾರ್ ಅವರ ಸಮರ್ಥ ನಾಯಕತ್ವದಡಿಯಲ್ಲಿ ಕೈಗಾರಿಕಾ ಕಿಣ್ವಗಳ ತಯಾರಿಕಾ ಕಂಪೆನಿಯಿಂದ ಸಮಗ್ರ ಬಯೋಫಾರ್ಮಸ್ಯುಟಿಕಲ್ ಮತ್ತು ಬಹು ಮುಖ್ಯ ಸಂಶೋಧನೆಗಳನ್ನು ಕೈಗೊಳ್ಳುವ ಕಂಪೆನಿಯಾಗಿ ರೂಪಾಂತರ ಹೊಂದಿದ್ದರ ಹಿಂದೆಯೂ ಒಂದು ರೋಚಕ ಕಥೆಯಿದೆ. ಬ್ರೂವರ್‍ನಿಂದ ಬಯೋಟೆಕ್ ಸಾಮ್ರಾಜ್ಞಿಯಾದ ಈ ಪಯಣದಲ್ಲಿ ಕಿರಣ್ ತೆಗೆದುಕೊಂಡ ಅಪಾಯಕಾರೀ ನಿರ್ಣಯಗಳು ಅನೇಕ. ಅವರೇ ಹೇಳುವಂತೆಬಯೋಟೆಕ್ ಕಂಪೆನಿಗಳು ಸಾಮಾನ್ಯವಾಗಿ ಅದರ ಹಿಂದಿರುವ ವಿಜ್ಞಾನದ ಅಧ್ಯಯನದೊಂದಿಗೆ ಪ್ರಾರಂಭಿಸುತ್ತವೆ. ಆದರೆ ನಾನು ತಂತ್ರಜ್ಞಾನದೊಂದಿಗೆ ಪ್ರಾರಂಭಿಸಿದೆ. ವಿಜ್ಞಾನವನ್ನು ಅದಕ್ಕೆ ಪೂರಕವಾಗಿ ಬಳಸಿಕೊಂಡೆ. ಆ ದಿನಗಳಲ್ಲಿ ಬಯೋಟೆಕ್ ಅನ್ನು ಅರ್ಥ ಮಾಡಿಕೊಂಡವರೆಲ್ಲರೂ ನನ್ನ ಈ ವಿಧಾನವನ್ನು ಒಪ್ಪಿದರು. ಆಗ, ಸರಿಯಾದ ಸಮಯದಲ್ಲಿ ಉತ್ಪನ್ನಗಳನ್ನು ಕೊಡಲು ನನಗೆ ಸಹಾಯ ಮಾಡಬಲ್ಲ ವ್ಯವಸ್ಥಾಪಕರ ಅಗತ್ಯವಿತ್ತೇ ಹೊರತು ವಿಜ್ಞಾನವಲ್ಲ.’

ಕಿಣ್ವ ತಯಾರಿಕೆಯಿಂದ ಔಷಧ ತಯಾರಿಕೆಗೆ ಹೊರಳಿಕೊಂಡ ಬಗ್ಗೆ ಕೇಳುವ ಪ್ರಶ್ನೆಗೂ ಅವರದು ಇದೇ ರೀತಿಯ ನೇರವಾದ ಉತ್ತರ. ‘ಬ್ರೂಯಿಂಗ್ ಪ್ರಕ್ರಿಯೆಯ ಹಿಂದೆ ಕೆಲಸಮಾಡುವುದೂ ಬಯೋಟೆಕ್ನಾಲಜಿಯೇ. ನಾನು ಮೂಲತಃ ತಂತ್ರಜ್ಞೆ (ಟೆಕ್ನಾಲಜಿಸ್ಟ್). ಮದ್ಯ ತಯಾರಿಕೆ ಮತ್ತು ಕಿಣ್ವಗಳ ತಯಾರಿಕೆ ಇವೆರಡರ ಹಿಂದಿನ ತಂತ್ರಜ್ಞಾನ ಒಂದೇ. ಆದ್ದರಿಂದ ಮದ್ಯ ತಯಾರಿಕೆಯಿಂದ ಕಿಣ್ವ ತಯಾರಿಕೆಗೆ ಕಾಲಿರಿಸಿದುದು ಅಪಾಯಕಾರೀ ನಿರ್ಧಾರವಾಗಿರಲಿಲ್ಲ. ಕಿಣ್ವ ತಯಾರಿಕೆಯಿಂದ ಔಷಧ ತಯಾರಿಕೆಗೆ ತೊಡಗಿದ್ದು ಮಾತ್ರ ಹೊಸ ಕ್ಷೇತ್ರದ ಅನ್ವೇಷಣೆ ಮತ್ತು ಹೊಸ ಸಾಧ್ಯತೆಗಳ ಹುಡುಕಾಟದ ತುಡಿತದಿಂದ. ಬಯೋಟೆಕ್ ಮತ್ತು ಬ್ರೂಯಿಂಗ್ ಎರಡಕ್ಕೂ ಸಾಮಾನ್ಯವಾದದ್ದು ಎಂದರೆ, ಎರಡರಲ್ಲೂ ಮಿಶ್ರಣಗಳು ಮತ್ತು ಅವುಗಳ ಅನುಪಾತಗಳು ಅಂತಿಮ ಉತ್ಪನ್ನದ ಗುಣವನ್ನು ನಿರ್ಧರಿಸುತ್ತದೆ ಎಂಬುದು. ಅದಷ್ಟೇ ನನಗೆ ತಿಳಿದಿದ್ದುದು. ಕಿಣ್ವಗಳ ತಯಾರಿಕೆಯಲ್ಲಿ ದೊರೆತ ಅನುಭವ ಮತ್ತು ಗಳಿಸಿದ ಹಣ ಔಷಧ ತಯಾರಿಕೆಯತ್ತ ಹೊರಳಲು ಮತ್ತು ಆ ಕ್ಷೇತ್ರದಲ್ಲಿ ಸಂಶೋಧನೆಯನ್ನು ಕೈಗೊಳ್ಳಲು ನೆರವಾಯಿತು ಮತ್ತು ರಿಸ್ಕ್ ತೆಗೆದುಕೊಳ್ಳುವ ಧೈರ್ಯವನ್ನು ಕೊಟ್ಟಿತು’ ಎನ್ನುತ್ತಾರೆ.

ಇಂದು ಕಿರಣ್ ಮಜೂಮ್‍ದಾರ್ ಷಾ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಟೈಮ್ಸ್ ಪತ್ರಿಕೆ ಹೆಸರಿಸುವ ಪ್ರಪಂಚದ ಅತ್ಯಂತ ಪ್ರಭಾವೀ 100 ವ್ಯಕ್ತಿಗಳ ಪೈಕಿ ಕಿರಣ್ ಒಬ್ಬರು. ಬಯೋಕಾನ್ ಎಂಬ ಬಯೋಟೆಕ್ ಕಂಪೆನಿಯ ಸಂಸ್ಥಾಪಕಿ. ಏಷ್ಯಾದ ಅತಿ ದೊಡ್ಡ ಇನ್ಸುಲಿನ್ ಉತ್ಪಾದಕ ಕಂಪೆನಿ. ಅಲ್ಲದೆ ಏಷ್ಯಾದ ಅತಿ ದೊಡ್ಡ ಬಯೋಫಾರ್ಮಸ್ಯುಟಿಕಲ್ ಕಂಪೆನಿ. 12,000 ಉದ್ಯೋಗಿಗಳನ್ನು ಹೊಂದಿದೆ. ಅವರಲ್ಲಿ ಶೇಕಡಾ 30 ರಷ್ಟು ಮಹಿಳೆಯರು, ಅವರಲ್ಲಿ ಬಹುಪಾಲು ವಿಜ್ಞಾನಿಗಳು! ತಾವು 20,000 ಉದ್ಯೋಗಗಳನ್ನು ಸೃಜಿಸಿರುವುದಾಗಿ ಹೇಳುತ್ತಾರೆ. ರಾಜಕೀಯ ಪಕ್ಷಗಳು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಬೇಕು ಏಕೆಂದರೆ ಉದ್ಯಮಗಳು ಉದ್ಯೋಗಗಳನ್ನು ಸೃಜಿಸುತ್ತವೆ ಎಂಬುದು ಅವರ ನಿಲುವು.

ಉದ್ಯಮಶೀಲತೆ : ಮಹಿಳೆಯರು ಸ್ವಭಾವತಃ ಉದ್ಯಮಶೀಲರು ಎಂಬುದು ಅವರ ಬಲವಾದ ನಂಬಿಕೆ. ಉದ್ಯಮಶೀಲತೆ ಅವರ ಡಿಎನ್‍ಎ ಯಲ್ಲೇ ಇದೆ. ಅದನ್ನು ಪ್ರೋತ್ಸಾಹಿಸಬೇಕಷ್ಟೆ. ಮಹಿಳೆಯರಿಗೆ ಅವರ ಉದ್ಯಮಶೀಲತೆಯನ್ನು ಕಾರ್ಯರೂಪಕ್ಕೆ ತರಲು ಅವಕಾಶವಿದ್ದದ್ದೇ ಅದರೆ ಅವರು ದೇಶದ ಜಿಡಿಪಿಯನ್ನು ದುಪ್ಪಟ್ಟುಗೊಳಿಸಬಲ್ಲರು ಎನ್ನುತ್ತಾರೆ. ಉದ್ಯಮಶೀಲ ವ್ಯಕ್ತಿಗೆ ಮುಖ್ಯವಾಗಿ ಇರಬೇಕಾದದ್ದು ದೃಢವಾದ ಆತ್ಮ ವಿಶ್ವಾಸ. ನಾನು ಮಾಡಬಲ್ಲೆ' ಎಂಬ ವಿಶ್ವಾಸ. ಉದ್ಯಮಶೀಲತೆ ಎಂದರೆ, 'ಸೋಲನ್ನು ಎದುರಿಸುವ ಸಾಮಥ್ರ್ಯ, ಸೋಲನ್ನು ನಿರ್ವಹಿಸುವ ಸಾಮಥ್ರ್ಯ, ಸೋತ ನಂತರ ಗೆಲ್ಲುವ ಸಾಮಥ್ರ್ಯ' ಎಂಬುದು ಅವರ ನಿಲುವು. ಕಿರಣ್ ಮಜೂಮ್‍ದಾರ್ ಅವರು 1998 ರಲ್ಲಿ ಜಾನ್ ಷಾ ಅವರನ್ನು ವಿವಾಹವಾಗುತ್ತಾರೆ. ಷಾ ಅವರು 2 ದಶಲಕ್ಷ ಡಾಲರುಗಳನ್ನು ವೈಯಕ್ತಿಕವಾಗಿ ಸಂಗ್ರಹಿಸಿ ಬಯೋಕಾನ್ ಕಂಪೆನಿಯನ್ನು ಪ್ರಾರಂಬಿಕ ಕಂಪೆನಿಯೊಡನಿದ್ದ ಪಾಲುಗಾರಿಕೆಯಿಂದ ಮುಕ್ತಗೊಳಿಸಿ ಸ್ವಾಯತ್ತ ಕಂಪೆನಿಯಾಗಿಸುವಲ್ಲಿ ನೆರವಾಗುತ್ತಾರೆ. 2001 ರಲ್ಲಿ ಬಯೋಕಾನ್ ಕಂಪೆನಿಯ ಉಪಾಧ್ಯಕ್ಷರಾಗುತ್ತಾರೆ. ಭಾರತದಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದ ಮೊಟ್ಟಮೊದಲ ಬಯೋಟೆಕ್ನಾಲಜಿ ಕಂಪೆನಿ ಎಂಬ ಹೆಗ್ಗಳಿಕೆ ಈ ಕಂಪೆನಿಯದು. ಔಷಧ ಕಂಪೆನಿಗಳು, ಸಾಮಾನ್ಯ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಔಷಧಗಳನ್ನು ಪೂರೈಕೆ ಮಾಡಬೇಕು ಎಂಬ ಬದ್ಧತೆಯನ್ನು ಬಯೋಕಾನ್ ಕಂಪೆನಿ ಹೊಂದಿದೆ. ಬಯೋಕಾನ್ ಕಂಪೆನಿಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲುಕೈಗೆಟಕುವ ಬೆಲೆಯ ಔಷಧಗಳ ಅನ್ವೇಷಣೆ’ಯ ತತ್ವವೇ ಸ್ಫೂರ್ತಿಯಾಗಿದೆ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ಪೂರೈಸಲು ಸಾಧ್ಯವಾಗುವಂಥ ಮಾರುಕಟ್ಟೆ ತತ್ವವನ್ನು ಅಳವಡಿಸಿಕೊಳ್ಳುವುದೇ ಆಗಿದೆ. ಅದಕ್ಕಾಗಿಯೇ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ತನ್ನ ಆದಾಯದ ಶೇ 10 ರಷ್ಟನ್ನು ಕಂಪೆನಿ ಮೀಸಲಿಟ್ಟಿದೆ. ಪ್ರಸ್ತುತ, ಮಧುಮೇಹ, ಕ್ಯಾನ್ಸರ್ ಹಾಗೂ ಆಟೋಇಮ್ಯೂನ್ ಖಾಯಿಲೆಗಳಾದ ರ್ಯುಮಟಾಯ್ಡ್ ಆಥ್ರೈಟಿಸ್ ಹಾಗೂ ಸೊರಿಯಾಸಿಸ್ ಗಳಿಗೆ ಔಷಧಗಳ ಸಂಶೋಧನೆಗೆ ಒತ್ತು ನೀಡುತ್ತಿದೆ.

ಬಂಡವಾಳಶಾಹಿಗಳು ಸಹಾನುಭೂತಿಪರ ಬಂಡವಾಳಶಾಹಿ' ಗಳಾಗಿರಬೇಕು. ಆಗ ಮಾತ್ರ ಸುಸ್ಥಿರ ಸಾಮಾಜಿಕ ಪ್ರಗತಿ ಸಾಧ್ಯ ಎಂದು ಕಿರಣ್ ನಂಬುತ್ತಾರೆ. ಕಿರಣ್ ತಮ್ಮ ಸಂಪತ್ತಿನ ಅರ್ಧದಷ್ಟನ್ನು ಸಮಾಜಕ್ಕೆ ಹಿಂತಿರುಗಿ ಕೊಡುವ ಉದ್ದೇಶದಿಂದಕೊಡುವ ಪ್ರತಿಜ್ಞೆ ಮಾಡುವ’ ಗುಂಪಿಗೆ ಸೇರ್ಪಡೆಯಾಗಿದ್ದಾರೆ. ಇದಲ್ಲದೆ, ಕೆಲವು ಸಾಮಾಜಿಕ ಉದ್ಯಮ ಯೋಜನೆಗಳನ್ನೂ ಕೈಗೆತ್ತಿಕೊಂಡಿದ್ದಾರೆ. ಅವರ ಆಸಕ್ತಿಯ ಹಲವು ಕ್ಷೇತ್ರಗಳ ಪೈಕಿ ಒಂದು ಸಾರ್ವಜನಿಕ ಆರೋಗ್ಯ. ಭಾರತದಲ್ಲಿ ಇಡೀ ದೇಶಕ್ಕೆ ಅನ್ವಯಿಸುವ ಒಂದು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಇಲ್ಲ. ಒಂದು ರಾಷ್ಟ್ರೀಯ ಆರೋಗ್ಯ ನೀತಿ ಮತ್ತು ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನ ಪಡುತ್ತೇನೆ ಮತ್ತು ಸರ್ಕಾರದ ಮೇಲೆ ಅಗತ್ಯ ಒತ್ತಡವನ್ನೂ ಹಾಕುತ್ತೇನೆ' ಎಂದು ನಿರ್ಧಾರದ ದನಿಯಲ್ಲಿ ನುಡಿಯುತ್ತಾರೆ. ಇದಕ್ಕೆ ಪೂರಕವಾಗಿ,ಅತಿ ಸಣ್ಣ ಆರೋಗ್ಯ ವಿಮೆ ಯೋಜನೆ’ಯನ್ನು ಪ್ರಾರಂಭಿಸಿ, ಅದಕ್ಕೆ ಅಗತ್ಯವಿರುವ ಬಹುಪಾಲು ಹಣವನ್ನು ಒದಗಿಸಿ, ಅದರ ಒಂದು ಭಾಗವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುವ ಆರೋಗ್ಯ ಕೇಂದ್ರಗಳ ಜಾಲವನ್ನೂ ಸೃಜಿಸಿದ್ದಾರೆ.
ಉದ್ಯಮಶೀಲತೆ ಹಾಗೂ ಸಾಮಾಜಿಕ ಬದ್ಧತೆಗಳೆರಡೂ ಮಿಳಿತಗೊಂಡ ಅಪರೂಪದ ವ್ಯಕ್ತಿಯಾಗಿ ಕಿರಣ್ ಮಜೂಮ್‍ದಾರ್ ಷಾ ನಮ್ಮ ನಡುವೆ ಇದ್ದಾರೆ.

ಡಾ. ಗೀತಾ ಕೃಷ್ಣಮೂರ್ತಿ


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಪದ್ಮ ಪ್ರಭೆ / ಯಶಸ್ವಿ ಉದ್ಯಮಿ ಕಿರಣ್ ಮಜೂಮ್‍ದಾರ್ ಷಾ – ಡಾ. ಗೀತಾ ಕೃಷ್ಣಮೂರ್ತಿ

 • August 16, 2020 at 4:37 am
  Permalink

  ಡಾ. ಗೀತಾ ಕೃಷ್ಣಮೂರ್ತಿ ಅವರೇ ಬಹಳ ಚೆನ್ನಾಗಿ ಕಿರಣ್ ಮಜುಂಮ್ದಾರ್ ಷಾ ಅವರನ್ನು ಕುರಿತು ಪರಿಚಯಿಸಿದ್ದೀರಿ. ತಮ್ಮ ಕಾಲಮೇಲೆ ಬೆಳೆದು ನಿಲ್ಲಬೇಕೆನ್ನುವ ಎಲ್ಲರಿಗೂ ಇದು ಸ್ಫೂರ್ತಿ ತುಂಬುತ್ತದೆ.

  Reply

Leave a Reply

Your email address will not be published. Required fields are marked *