ಪದ್ಮ ಪ್ರಭೆ / ಮಂಜಮ್ಮ ಜೋಗತಿ: ಬೆಂಕಿಯಲ್ಲಿ ಅರಳಿದ ಬದುಕು – ಡಾ. ಗೀತಾ ಕೃಷ್ಣಮೂರ್ತಿ
2021 ರಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಜನಪದ ಕಲಾವಿದೆ ಮಂಜಮ್ಮ ಜೋಗತಿ ಜೀವನದಲ್ಲಿ ಅಪರೂಪ ಎನ್ನಿಸುವ ಸವಾಲುಗಳ ಸುಳಿಯಲ್ಲಿ ಹಾದುಬಂದವರು. ಜೈವಿಕ, ದೈಹಿಕ, ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಿಕೊಂಡು ತಮ್ಮದೇ ಆದ ಸಾಂಸ್ಕøತಿಕ ಅಸ್ಮಿತೆಯನ್ನು ರೂಪಿಸಿಕೊಂಡ ಬಹಳ ದಿಟ್ಟ ವ್ಯಕ್ತಿತ್ವ ಅವರದು. ಅವರ ಜೀವನಾನುಭವ ಮತ್ತು ಗಳಿಸಿದ ಯಶಸ್ಸು ಅವರಂಥವರಿಗಷ್ಟೇ ಅಲ್ಲ, ಒಟ್ಟಾರೆ ಸಮಾಜಕ್ಕೂ ಹಲವು ಮಾದರಿಗಳನ್ನು ಮುಂದಿಡುತ್ತವೆ.
ಪ್ರಸ್ತುತ ಕರ್ನಾಟಕ ಸರ್ಕಾರದ ಜನಪದ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಬಿ. ಮಂಜಮ್ಮ ಜೋಗತಿ, ಈ ಸ್ಥಾನಕ್ಕೆ ನೇಮಕಗೊಂಡ ಪ್ರಪ್ರಥಮ ಮಂಗಳಮುಖಿ. ಈ ಸ್ಥಾನಕ್ಕೆ ಏರಿರುವುದರ ಹಿಂದೆ ಇರುವ ಅವರ ಜೀವನಾನುಭವ ಬಹುಶಃ ಯಾವ ಸಿನಿಮಾದ ಕಥೆಗಿಂತಲೂ ಕಡಿಮೆಯಿಲ್ಲ. ಹೌದೇ, ಒಬ್ಬರ ಜೀವನದಲ್ಲಿ ಹೀಗೆಲ್ಲ ಆಗಿಯೂ, ಹೀಗೂ ಗೆದ್ದು ಬರಬಹುದೇ ಎಂದು ಅಚ್ಚರಿಗೊಳ್ಳುವಂತಾಗುತ್ತದೆ. ಅದರ ಹಿಂದೆಯೇ, ಅವರು ಅನುಭವಿಸಿದ ಕಡು ಬಡತನ, ಅವಮಾನ, ಭತ್ಸ್ರ್ಯನೆ, ಕಿರುಕುಳಗಳು, ಅವುಗಳನ್ನು ಸಹಿಸಿ, ಅವೆಲ್ಲವನ್ನು ದಾಟಿ, ಜೀವನವನ್ನು ರೂಪಿಸಿಕೊಂಡ ರೀತಿ, ಅವರು ಏರಿರುವ ಈ ಎತ್ತರವನ್ನು ಮತ್ತಷ್ಟು ವಿಶಿಷ್ಟವಾದ ಸಾಧನೆಯನ್ನಾಗಿಸುತ್ತದೆ.
ಮಂಜಮ್ಮ ಜೋಗತಿ ಹುಟ್ಟಿದುದು, ಮಂಜುನಾಥ ಶೆಟ್ಟಿಯಾಗಿ, ಬಳ್ಳಾರಿ ಜಿಲ್ಲೆಯ ಕಲ್ಲುಕಂಬ ಗ್ರಾಮದಲ್ಲಿ, ಹನುಮಂತಯ್ಯ ಮತ್ತು ಜಯಲಕ್ಷ್ಮಿ ಅವರ ಪುತ್ರನಾಗಿ. ಎಸ್ಸೆಸ್ಸೆಲ್ಸಿ ವರೆಗೆ ಶಿಕ್ಷಣ ಪಡೆದದ್ದು ದಾವಣಗೆರೆಯಲ್ಲಿ. ಅವರೇ ಹೇಳುವಂತೆ, “ನಾನು ಹುಡುಗನಾಗಿದ್ದರೂ, ನನಗೆ ಸುಮಾರು 16 ವರ್ಷಗಳಾದಾಗ, ನಾನು ಹುಡುಗಿಯ ರೀತಿಯಲ್ಲಿ ವರ್ತಿಸುತ್ತೇನೆ ಎಂಬುದನ್ನು ಕಂಡುಕೊಂಡೆ. ಅಲ್ಲಿಂದೀಚೆಗೆ ನನ್ನ ದುರ್ದಿನಗಳು ಪ್ರಾರಂಭವಾದವು ಎನ್ನಬಹುದು. ಮನೆಯಲ್ಲಿ ಎಲ್ಲರೂ ನನ್ನನ್ನು ಹೊಡೆದರು, ಬಡಿದರು, ನನ್ನನ್ನು ಜ್ಯೋತಿಷಿಯ ಬಳಿ ಕರೆದೊಯ್ದರು, ವೈದ್ಯರ ಬಳಿ ಕರೆದೊಯ್ದರು. ನನ್ನೊಡನೆ ಮಾತು ಬಿಟ್ಟರು. ನಾನು ಕೇವಲ ಅಸಹಾಯಕಳಾಗಿದ್ದೆ.”
ಇವೆಲ್ಲದರಿಂದ ಮುಕ್ತಿ ಪಡೆಯುವುದಕ್ಕಾಗಿ, ಭಿಕ್ಷೆ ಬೇಡಿ, ಭಿಕ್ಷೆಯಿಂದ ಬಂದ ಪುಡಿಗಾಸಿನಲ್ಲಿ ವಿಷ ಕೊಂಡು ಜೀವ ಬಿಡುವ ಪ್ರಯತ್ನ ನಡೆಸಿದರು. ಅದು ವಿಫಲವಾಗಿ, ಆಸ್ಪತ್ರೆ ಸೇರಿ ಬದುಕಿ ಉಳಿದರೂ ಕುಟುಂಬದವರು ಇವಳ ಜವಾಬ್ದಾರಿಯನ್ನು ಹೊರಲು ಸಿದ್ಧರಿರಲಿಲ್ಲ. ಇದರಿಂದ ನೊಂದ ಅವರು ತಾಯಿಯ ಒಂದೆರಡು ಸೀರೆಗಳನ್ನು ಕದ್ದು ಮನೆಯಿಂದ ಹೊರ ನಡೆದರು. ಅಲ್ಲಿಂದ ಮಂಜಮ್ಮ ಜೋಗತಿ ಹೊಸಪೇಟೆಯ ಮರಿಯಮ್ಮನಪಾಳ್ಯಕ್ಕೆ ಬಂದು, ಅಲ್ಲಿ ಜಾನಪದ ಕಲೆಯಾದ ‘ಚೌಡಕಿ ಪದ’ ಹಾಡಲು ಕಲಿತರು. ಅಲ್ಲಿಂದ ಚಿಲಕನಹಳ್ಳಿ ಎಂಬ ಹಳ್ಳಿಗೆ ಬಂದಾಗ ಆಕೆಗೆ ಆ ಗ್ರಾಮದ ಸುಶೀಲಮ್ಮ ಎಂಬಾಕೆ ಆಸರೆ ಕೊಟ್ಟರು. ಅಲ್ಲಿ ಇಡ್ಲಿಗಳನ್ನು ಮಾಡಿ ಮಾರುತ್ತಾ, ಮಕ್ಕಳಿಗೆ ಪಾಠ ಹೇಳುತ್ತಾ ಜೀವನ ಸಾಗಿಸುತ್ತಿದ್ದರು.

ಇಲ್ಲಿ ಭೇಟಿ ಮಾಡಿದ ಕಾಳವ್ವ ಜೋಗತಿ ಎಂಬುವರಿಂದ ಮಂಜಮ್ಮ ಜೋಗತಿ ನೃತ್ಯ ಕಲಿತರು. ಕಾಳವ್ವ ಜೋಗತಿ ಅವರ ಮರಣದ ನಂತರ ಇವರೇ ಆ ತಂಡವನ್ನು ಮುನ್ನಡೆಸಿದರು. ಅವರೇ ಹೇಳುವಂತೆ ಈಗ ಅವರ ಗುಂಪಿನಲ್ಲಿ 12 ಜೋಗತಿಯರಿದ್ದಾರೆ. ಅಲ್ಲದೆ ಸಾವಿರಾರು ಮಂದಿಗೆ ತಾವು ಜೋಗತಿ ನೃತ್ಯ ಕಲಿಸಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮುಂದೆ ನಾಟಕ ತಂಡವೊಂದನ್ನು ಸೇರಿಕೊಂಡು, ಭಸ್ಮಾಸುರ, ಕೀಚಕ, ತಾರಕಾಸುರ ಮುಂತಾದ ಪುರುಷ ಪಾತ್ರಗಳನ್ನೂ
ಮಾಡಿದ್ದಾರೆ. ಅವರ ಜೀವನದ ಈ ವಿವರಗಳು ಅವರು ಹಾದು ಬಂದ ಹಾದಿಯ ಕಷ್ಟಗಳನ್ನು ಬಿಚ್ಚಿಡುತ್ತವೆ.
ಜೋಗತಿ ನೃತ್ಯ ಒಂದು ಜನಪದ ನೃತ್ಯ ಪ್ರಕಾರ. ಜೋಗಪ್ಪಗಳು ಎಂದು ಕರೆಯಲಾಗುವ ಮಹಿಳೆಯರು ಗುಂಪಾಗಿ ಮಾಡುವ ಗುಂಪು ನೃತ್ಯ ಇದು. ಈ ನೃತ್ಯಗಳಿಗೆ ಅವರು ಆರಿಸಿಕೊಳ್ಳುವುದೆಲ್ಲ ಪೌರಾಣಿಕ ಕಥೆಗಳನ್ನು. ಈ ಕಲೆ ಈಗ ಅಳಿವಿನ ಅಂಚಿನಲ್ಲಿದೆ.
ಮಂಜಮ್ಮ ತಮಗೆ ಪದ್ಮಶ್ರೀ ಪ್ರಶಸ್ತಿ ಬಂದಾಗ, ತನಗೆ ಪ್ರಶಸ್ತಿ ಬಂದದ್ದಕ್ಕಿಂತ ಹೆಚ್ಚಾಗಿ ಈ ಕಲೆಯನ್ನು ಗುರುತಿಸಿದರು ಎಂಬುದಕ್ಕಾಗಿ ಹೆಚ್ಚು ಸಂತೋಷವಾಗಿದೆ ಎಂದು ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದರು. ಮಂಜಮ್ಮ ಈಗಲೂ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದಾರೆ.

ಜಾನಪದ ಅಕಾಡೆಮಿಯ ಅಧ್ಯಕ್ಷ ಸ್ಥಾನ ದೊರೆತಾಗಲೂ, ತಾನು ಜೋಗತಿ ನೃತ್ಯ ಕಲಿತಿದ್ದು ಒಂದು ಹೊತ್ತಿನ ಊಟವನ್ನು ಗಳಿಸುವುದಕ್ಕಾಗಿ. ಆದರೆ ಈ ಜೋಗತಿ ನೃತ್ಯ ತನಗೆ ಇಂಥ ಅಸ್ಮಿತೆ, ಹೆಸರು ಹಾಗೂ ಖ್ಯಾತಿಯನ್ನು ತಂದುಕೊಡುತ್ತದೆಂದು ತಾನು ಎಣಿಸಿರಲಿಲ್ಲ. ಹಾಗಾಗಿ, ಇತರ ಜಾನಪದ ಕಲಾ ಪ್ರಕಾರಗಳೊಂದಿಗೆ ಜೋಗತಿ ನೃತ್ಯ ಪ್ರಕಾರವನ್ನು ಪುನರುಜ್ಜೀವನಗೊಳಿಸುವುದು ತನ್ನ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಪ್ರತಿಕ್ರಿಯಿಸಿದ್ದರು.
ಒಮ್ಮೆ ನನ್ನೊಂದಿಗೆ ಗುರುತಿಸಿಕೊಳ್ಳುವುದನ್ನೇ ಅವಮಾನ ಎಂದು ಭಾವಿಸಿದ್ದ ಬಂಧು ಬಳಗ ಇಂದು ನನ್ನೊಂದಿಗೆ ಅವರಿಗಿರುವ ಸಂಬಂಧವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಜನಪದ ಸಂಸ್ಸøತಿಯ ಒಂದು ಪ್ರಕಾರವಾದ ಜೋಗತಿ ನೃತ್ಯವನ್ನು ಉಳಿಸಿದುದಷ್ಟೇ ಅಲ್ಲದೆ, ಶಿಷ್ಟ ಕಲೆಗಳ ನಡುವೆ ಅದಕ್ಕೆ ಅಸ್ಮಿತೆಯನ್ನು ತಂದುಕೊಟ್ಟು ಅದರ ಉಳಿವಿಗಾಗಿ ಶ್ರಮಪಡುತ್ತಿರುವ ಮಂಜಮ್ಮ ಅವರನ್ನು ರಾಜ್ಯೋತ್ಸವ ಪ್ರಶಸ್ತಿ, ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ.
ಅವರ ಆತ್ಮಕಥೆ “ನಡುವೆ ಸುಳಿವ ಹೆಣ್ಣು” (ನಿರೂಪಣೆ: ಡಾ. ಅರುಣ ಜೋಳದಕೂಡ್ಲಿಗಿ, ಪ್ರಕಟಣೆ: ಪಲ್ಲವ ಪ್ರಕಾಶನ, ಬಳ್ಳಾರಿ) ಇತ್ತೀಚೆಗೆ ಪ್ರಕಟವಾಗಿದೆ.
ಸಹನೆ, ತಾಳ್ಮೆ, ಬದ್ಧತೆಗಳು ತಂದುಕೊಡುವ ಪ್ರತಿಫಲದ ಮೂರ್ತರೂಪವೆಂಬಂತೆ ಮಂಜಮ್ಮ ಜೋಗತಿ ಭಾಸವಾಗುತ್ತಾರೆ.

ಡಾ. ಗೀತಾ ಕೃಷ್ಣಮೂರ್ತಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
NICE NARRATION