ಪದ್ಮ ಪ್ರಭೆ / ಭರತನಾಟ್ಯ ಕಲಾವಿದೆ ಕೆ. ವೆಂಕಟಲಕ್ಷಮ್ಮ – ಡಾ. ಗೀತಾ ಕೃಷ್ಣಮೂರ್ತಿ

ಪದ್ಮಭೂಷಣ ಗೌರವಕ್ಕೆ ಪಾತ್ರರಾದ ಡಾ. ಕೆ. ವೆಂಕಟಲಕ್ಷಮ್ಮ ಭರತನಾಟ್ಯದ ಮೈಸೂರು ಶೈಲಿಗೆ ಹೊಸ ಹೊಳಪುಗಳನ್ನು ನೀಡಿದ ಅಪ್ರತಿಮ ಕಲಾವಿದೆ. ‘ನೃತ್ಯವನ್ನು ಮನಸ್ಸು ಮತ್ತು ಹೃದಯದಿಂದ ಕಲಿಯಬೇಕು. ಇಲ್ಲವಾದರೆ ಕಲಿಯಲೇಬಾರದು’ ಎಂಬುದು ಅವರ ದೃಢವಾದ ನಿಲುವಾಗಿತ್ತು. ಸಾಂಪ್ರದಾಯಿಕ ನೃತ್ಯ ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೆಂಕಟಲಕ್ಷಮ್ಮ ಯಾವುದೇ ಪ್ರಯೋಗಕ್ಕೆ ಭದ್ರವಾದ ಸಾಂಪ್ರದಾಯಿಕ ಕಲೆಯ ಬುನಾದಿಯಿರಬೇಕು, ಹಳೆಯ ಪರಿಕಲ್ಪನೆಗಳ ಮೇಲೆ ಹೊಸತನ್ನು ಕಟ್ಟಬಹುದೇ ವಿನಃ ಹೊಸತರ ಮೇಲೆ ಹಳೆಯದನ್ನು ಕಟ್ಟಲಾಗದು ಎಂದು ನಂಬಿದ್ದರು.

ಇನಿತು ನೋವು, ಮತ್ತಿನಿತು ನಲಿವು
ಒಂದಿನಿತು ಸಂಪತ್ತು
ಮತ್ತೇನ ಬೇಡಲಿ ನಿನ್ನ
ಆದಿಗುಂಟು ಒಂದು ಮುಗಿವು

ತಮ್ಮ ಜೀವನದ ಇಳಿಗಾಲದಲ್ಲಿದ್ದ, ಮೈಸೂರು ಪರಂಪರೆಯ ಭರತನಾಟ್ಯ ಕಲಾವಿದೆ, 96 ವರ್ಷದ ಪದ್ಮಭೂಷಣ ಕೆ. ವೆಂಕಟಲಕ್ಷಮ್ಮ ಅವರನ್ನು ಸಂದರ್ಶಿಸಿದ ವ್ಯಕ್ತಿಗೆ, ಅವರ ಸಂತೃಪ್ತ ಜೀವನ ಕಂಡು, ಅಮೆರಿಕಾದ ಕವಿ, ನಾಟಕಕಾರ ಜಾನ್ ಹೊವರ್ಡ್ ಪೇನೇ ಹೇಳಿದ ಮೇಲಿನ ಮಾತುಗಳು ನೆನಪಿಗೆ ಬಂದಿದ್ದರೆ ಅದರಲ್ಲಿ ಆಶ್ಚರ್ಯವೇನು?

ಕಡೂರಿನ ಬಳಿಯ ನಿರ್ಲಕ್ಷಿತ ಮೂಲೆಯ ಹಳ್ಳಿಯೊಂದರ ತಾಂಡಾದಲ್ಲಿ ಲಂಬಾಣಿ ಕುಟುಂಬದಲ್ಲಿ ಜನಿಸಿ, ಮೈಸೂರು ಪರಂಪರೆಯ ಭರತ ನಾಟ್ಯ ನೃತ್ಯ ಕಲಾಪ್ರಕಾರದ ಪ್ರತಿನಿಧಿ ಎನಿಸಿಕೊಳ್ಳುವುದೇನು ಸಾಮಾನ್ಯದ ಮಾತೇ? ಬದುಕಿನಲ್ಲಿ ಏರಿಳಿತಗಳನ್ನು ಕಂಡು, ಆ ಎತ್ತರಕ್ಕೆ ಏರಿದ 96 ರ ಇಳಿ ವಯಸ್ಸಿನ ಆ ಕಲಾವಿದೆಗೆ ಇನ್ನೇನು ಆಸೆ ಇದ್ದೀತು. ಅಷ್ಟು ವರ್ಷಗಳ ಅನುಭವ ಮುಪ್ಪುರಿಗೊಂಡು, ಆ ಮಾತುಗಳು ಅವರ ಬಾಯಿಂದಲೇ ಬಂದುವೇನೋ ಎಂಬಂತೆ ಭಾಸವಾದರೆ ಹೆಚ್ಚಲ್ಲ. ಇಂಥ ಅಸಾಮಾನ್ಯ ಸಾಧಕಿಗೆ ಭಾರತ ಸರ್ಕಾರ 1992 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಅವರ ಮುಡಿಗೇರಿದ ಹತ್ತು ಹಲವು ಪ್ರಶಸ್ತಿಗಳ ಜೊತೆಗೆ ಮುಕುಟಪ್ರಾಯವಾಗಿ ಈ ಪ್ರಶಸ್ತಿಯೂ ಅವರಿಗೆ ಸಂದಿತು.

ಭರತನಾಟ್ಯ ಕಲಾವಿದೆ ಕೆ. ವೆಂಕಟಲಕ್ಷಮ್ಮ ಜನಿಸಿದ್ದು 1906 ರ ಮೇ 29 ರಂದು, ಪುಟ್ಟ ಹಳ್ಳಿಯ, ಯಾವುದೇ ಕಲೆಯ ಹಿನ್ನೆಲೆಯಿರದ ಬಂಜಾರಾ ಕುಟುಂಬದಲ್ಲಿ. ಪುಟ್ಟ ಮಗುವಾಗಿದ್ದಾಗಲೇ ವೆಂಕಟಲಕ್ಷಮ್ಮ ತಂದೆಯನ್ನು ಕಳೆದುಕೊಂಡರು. ಬೆಳೆದದ್ದು ತಾತ ರಾಮನಾಯಕ ಅವರ ಪ್ರೀತಿಯ ಆರೈಕೆಯಲ್ಲಿ. ಇದ್ದಲ್ಲೇ ಅಮರಕೋಶ, ಸಂಸ್ಕøತಪಾಠ, ಸಂಗೀತ ಪಾಠ ಎಲ್ಲವನ್ನೂ ಕಲಿಯಲು ಪ್ರೋತ್ಸಾಹಿಸಿದವರು ಅವರು. ಆದರೆ ವೆಂಕಟಲಕ್ಷಮ್ಮ ಅವರಿಗೆ ಕಲೆಯಲ್ಲಿ ಮತ್ತಷ್ಟು ಆಳವಾದ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂಬ ಉದ್ದೇಶದಿಂದ ಇಡೀ ಕುಟುಂಬವನ್ನು ಮೈಸೂರಿಗೆ ಸ್ಥಳಾಂತರಿಸಿದರು. ತನಗೆ ತಿಳಿದಂತೆ ಹೆಜ್ಜೆಹಾಕುತ್ತಾ ನರ್ತಿಸುತ್ತಿದ್ದ ಮೊಮ್ಮಗಳಿಗೆ ಶಾಸ್ತ್ರೋಕ್ತ ನೃತ್ಯ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದರು. ಅವರಿಗೆ ಗುರುಗಳಾಗಿ ದೊರೆತದ್ದು ಜಟ್ಟಿ ತಾಯಮ್ಮ. ಆಸ್ಥಾನ ವಿದುಷಿಯಾಗಿದ್ದ ಜಟ್ಟಿ ತಾಯಮ್ಮ ಅವರ ಹೆಸರು ಆ ಕಾಲದಲ್ಲಿ ಮೈಸೂರಿನಲ್ಲಿ ಮನೆಮಾತಾಗಿದ್ದ ಹೆಸರು. ಡಾ. ಎಸ್.ರಾಧಾಕೃಷ್ಣನ್ ಅವರ ಮುಂದೆ ಅದ್ಭುತ ನೃತ್ಯ ಪ್ರದರ್ಶನ ನೀಡಿ ಅವರಿಂದ ‘ನಾಟ್ಯ ಸರಸ್ವತಿ’ ಎಂಬ ಬಿರುದನ್ನು ಪಡೆದವರು. ವೆಂಕಟಲಕ್ಷಮ್ಮ ಅವರ ಪ್ರತಿಭೆ ಅರಳಿದ್ದು ಇಂಥ ಜಟ್ಟಿ ತಾಯಮ್ಮ ಅವರ ಕಟ್ಟುನಿಟ್ಟಾದ ಕಠಿಣ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ. ವೆಂಕಟಲಕ್ಷಮ್ಮ ಅವರು ಗುರು ತಾಯಮ್ಮ ಅವರ ಮನೆಗೆ ನೃತ್ಯಾಭ್ಯಾಸಕ್ಕಾಗಿ ನಸುಕಿನಲ್ಲೇ ಹೋಗುತ್ತಿದ್ದರಂತೆ. ಅಲ್ಲಿ ಆಗುತ್ತಿದ್ದುದು ಕಠಿಣಾತಿಕಠಿಣ ಅಭ್ಯಾಸ.

ಮೈಸೂರಿನಲ್ಲಿ ನೃತ್ಯಕಲೆ ಬೆಳೆದದ್ದು ರಾಜಾಶ್ರಯಗಳಲ್ಲಿ. ನೃತ್ಯ ಪ್ರದರ್ಶನಗಳು ಸಾಮಾನ್ಯವಾಗಿ ಸೀಮಿತ ಸಂಖ್ಯೆಯ ರಸಿಕರ ಸಮ್ಮುಖದಲ್ಲಿ ನಡೆಯುತ್ತಿತ್ತು. ದೈಹಿಕ ವಿನ್ಯಾಸದಷ್ಟೇ ಮುಖದಲ್ಲಿ ಅತಿ ಸೂಕ್ಷ್ಮ ಭಾವಗಳನ್ನು ಗಮನಿಸಿ ಮೆಚ್ಚುವಂಥ ಶಾಸ್ತ್ರ ಪಾರಂಗತರು ಮತ್ತು ಸ್ವತಃ ಅರಸರು ವೀಕ್ಷಕರಾಗಿರುತ್ತಿದ್ದರು. ಹಾಗಾಗಿ ಮೈಸೂರಿನ ಪರಂಪರಾಗತ ಭರತನಾಟ್ಯದಲ್ಲಿ ಲಯಕ್ಕಿಂತ ಭಾವಾಭಿವ್ಯಕ್ತಿಗೆ ಒತ್ತು ನೀಡಲಾಗುತ್ತಿತ್ತು. ಹಾಡಿನ ಸಾಹಿತ್ಯದ ಅರ್ಥವನ್ನು ಮತ್ತು ಅದರ ಸಂಗೀತ ಮಾಧುರ್ಯವನ್ನು ಮುಖ ಮುದ್ರೆಗಳಿಂದ ಮತ್ತು ಹಸ್ತ ಮುದ್ರೆಗಳಿಂದ ಅಭಿನಯಿಸುವ ಪದ್ಧತಿಗೆ ಇಲ್ಲಿ ಹೆಚ್ಚು ಪ್ರಾಮುಖ್ಯ ದೊರೆಯಿತು. ಲಯಕ್ಕಿಂತ ಲಾಸ್ಯ ಮೇಲುಗೈಯಾದದ್ದನ್ನು ಮೈಸೂರು ಪರಂಪರೆಯ ಭರತ ನಾಟ್ಯದಲ್ಲಿ ಗುರುತಿಸಬಹುದಾಗಿತ್ತು. ಹಾಗಾಗಿ, ನೃತ್ಯದಲ್ಲಿ ಆಂಗಿಕ ಅಭಿನಯಕ್ಕೆ ಸಿಕ್ಕಷ್ಟೇ ಪ್ರಾಮುಖ್ಯ ಕಣ್ಣುಗಳು ಸ್ಫುರಿಸುವ ಭಾವಕ್ಕೂ ದೊರೆಯಿತು. ಭಾವ ಸ್ಫುರಣೆಗೆ ಕಣ್ಣುಗಳನ್ನು ಸಜ್ಜುಗೊಳಿಸುವುದಕ್ಕೇ ವಿಶೇಷ ರೀತಿಯಲ್ಲಿ ತರಬೇತಿಯನ್ನೂ ನೀಡಲಾಗುತ್ತಿತ್ತು. ಅದಕ್ಕಾಗಿ ಕಣ್ಣ ರೆಪ್ಪೆಗಳಿಂದ ನಾಣ್ಯಗಳನ್ನು ಹಾಗೂ ಸೂಜಿಗಳನ್ನು ಹೆಕ್ಕಿ ಮೇಲಕ್ಕೆ ಎತ್ತಬೇಕಿತ್ತಂತೆ! ಇಂಥ ತರಬೇತಿ, ಸೂಕ್ಷ್ಮಾತಿ ಸೂಕ್ಷ್ಮ ನವರಸಭಾವಗಳನ್ನು ಅಭಿವ್ಯಕ್ತಗೊಳಿಸಲು ಕಣ್ಣಿನ ಸ್ನಾಯುಗಳನ್ನು ಸಜ್ಜುಗೊಳಿಸುತ್ತಿತ್ತಂತೆ!

ವೆಂಕಟಲಕ್ಷಮ್ಮ 12ನೇ ವಯಸ್ಸಿನ ಎಳವೆಯಲ್ಲಿ ರಂಗ ಪ್ರವೇಶ ಮಾಡಿದರು. ಆಗಿನ ಕಾಲದಲ್ಲಿ ನೃತ್ಯ ಕಲಾವಿದರು ಸಂಗೀತ ಸಾಹಿತ್ಯಗಳಲ್ಲಿಯೂ ಪಾರಂಗತರಾಗಿರಬೇಕಿತ್ತು. ಸ್ವತಂತ್ರವಾಗಿ ಸಂಗೀತ ಕಛೇರಿ ನಡೆಸಿಕೊಡುವ ಮಟ್ಟಿಗೆ ನೃತ್ಯ ಕಲಾವಿದರು ಸಂಗೀತದಲ್ಲಿ ಪಾಂಡಿತ್ಯವನ್ನು ಪಡೆದಿರುತ್ತಿದ್ದರು. ನೃತ್ಯ ಪ್ರದರ್ಶನದಲ್ಲಿನ ಅರ್ಥಪೂರ್ಣ ಭಾವಾಭಿನಯಕ್ಕೆ ಸಂಗೀತ ಸಾಹಿತ್ಯಗಳ ಜ್ಞಾನ ಅತ್ಯಗತ್ಯವಾಗಿತ್ತು. ಹಾಗಾಗಿ, ನೃತ್ಯಾಭ್ಯಾಸದ ಜೊತೆ ಜೊತೆಗೇ, ಆಸ್ಥಾನ ವಿದ್ವಾನ್ ದೇವೋತ್ತಮ ಜೋಯಿಸರು, ಶಾಂತಶಾಸ್ತ್ರಿಗಳು ಹಾಗೂ ಗಿರಿ ಭಟ್ಟರಿಂದ ಸಂಸ್ಕøತ ಪಾಠ, ಡಾ. ದೇವೇಂದ್ರಪ್ಪ ಮತ್ತು ಸಿ. ರಾಮರಾವ್ ಅವರಲ್ಲಿ ಕರ್ನಾಟಕ ಸಂಗೀತದ ಪಾಠ ಅವರಿಗೆ ದೊರೆಯಿತು. 30 ವರ್ಷಗಳ ಕಾಲ ತಮ್ಮ ಗುರು ಜಟ್ಟಿ ತಾಯಮ್ಮ ಅವರ ಜೊತೆ ನೃತ್ಯ ಪ್ರದರ್ಶನ ನೀಡಿದರು.

1939 ರಲ್ಲಿ ವೆಂಕಟಲಕ್ಷಮ್ಮ ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಆಸ್ಥಾನ ನರ್ತಕಿಯಾಗಿ ನೇಮಕಗೊಂಡರು. ಹಾಗೆ ನೇಮಕಗೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಅತ್ಯಂತ ಕಠಿಣ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತಿತ್ತು. ಕೇವಲ ನಾಟ್ಯದಲ್ಲಷ್ಟೇ ಅಲ್ಲದೆ, ಘನ ವಿದ್ವಾಂಸರುಗಳ ಮುಂದೆ ಸಂಗೀತದಲ್ಲಿ ಅವರಿಗಿರುವ ಪ್ರಾವೀಣ್ಯದ ಪರೀಕ್ಷೆಯೂ ನಡೆಯುತ್ತಿತ್ತು. ಅಷ್ಟೇ ಅಲ್ಲದೆ, ಅಲ್ಲೇ ರಚಿಸಲಾಗುವ ಆಶು ಸಾಹಿತ್ಯಕ್ಕೆ ಸ್ವರ ಸಂಯೋಜಿಸಿ, ಹಾಡಿ, ನರ್ತಿಸುವಂತೆ ತಿಳಿಸಿ, ಅವರ ಪ್ರತಿಭೆಯನ್ನು ನಿಕಷಕ್ಕೆ ಒಡ್ಡಲಾಗುತ್ತಿತ್ತು. ಇಂಥ ಕಠಿಣ ಪರೀಕ್ಷೆಗಳನ್ನು ಎದುರಿಸಿ ಆಯ್ಕೆಯಾದ ಅವರು 1969 ರ ವರೆಗೆ ಈ ಸೇವೆಯಲ್ಲಿದ್ದರು. ಅವರ ಹೆಸರು ಮೈಸೂರಿನಲ್ಲಿ, ಭರತನಾಟ್ಯ ಕ್ಷೇತ್ರದಲ್ಲಿ ಮನೆಮಾತಾಯಿತು. ಕೃಷ್ಣರಾಜ ಒಡೆಯರ ನಂತರ ಜಯಚಾಮರಾಜೇಂದ್ರ ಒಡೆಯರ ಕಾಲದಲ್ಲೂ ‘ಆಸ್ಥಾನ ನರ್ತಕಿ’ ಯಾಗಿ ಅವರು ಮುಂದುವರೆದರು. ಮೈಸೂರು ಮನೆತನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ ಪಟ್ಟಾಭಿಷೇಕ ಮತ್ತು ಮದುವೆ ಸಮಾರಂಭಗಳಲ್ಲೂ ವೆಂಕಟಲಕ್ಷಮ್ಮನವರು ತಮ್ಮ ಅದ್ಭುತ ನೃತ್ಯ ಕಾರ್ಯಕ್ರಮವನ್ನು ನೀಡಿದ್ದರಂತೆ. ಜಯಚಾಮರಾಜ ಒಡೆಯರ್ ಅವರು ಸ್ವತಃ ವಾಗ್ಗೇಯಕಾರರೂ, ಸಾಹಿತ್ಯ ಸಂಗೀತ ಪ್ರೇಮಿಯೂ ಆಗಿದ್ದವರು. ಈ ಅವಧಿಯಲ್ಲಿ ಆಸ್ಥಾನ ನರ್ತಕಿಯಾಗಿ ಸೇವೆ ಸಲ್ಲಿಸಿ ವೆಂಕಟಲಕ್ಷಮ್ಮ ಅವರು ಮೈಸೂರು ಶೈಲಿಯ ಭರತನಾಟ್ಯ ಪರಂಪರೆಯನ್ನು ಉತ್ತುಂಗಕ್ಕೆ ಒಯ್ದರು.

ನೃತ್ಯಕಲೆ ನೆಲೆಯನ್ನು ಕಂಡುಕೊಂಡು, ಸರ್ವತೋಮುಖವಾದ ಅಭಿವೃದ್ಧಿಯನ್ನು ಹೊಂದಿದ್ದೇ ರಾಜಾಶ್ರಯದಲ್ಲಿ. ಮೈಸೂರು ರಾಜ್ಯವನ್ನು ಆಳಿದ ಒಡೆಯರ್ ಮನೆತನದ ಎಲ್ಲ ರಾಜರುಗಳೂ ಈ ಕಲೆಯ ಅಭಿವೃದ್ಧಿಗೆ ಸಾಕಷ್ಟು ಪ್ರೋತ್ಸಾಹವನ್ನು ನೀಡಿದರು. ಹಾಗಾಗಿ, ಸಾಂಸ್ಕøತಿಕ ಹಾಗೂ ರಾಜಕೀಯ ರಾಜಧಾನಿಯಾಗಿದ್ದ ಮೈಸೂರು, ಆಗಿನ ಕಾಲದ ಎಲ್ಲ ಕಲೆಗಳ ಅಭಿವೃದ್ಧಿಗೆ ಕಾರಣವಾದಂತೆ ನೃತ್ಯ ಕಲೆಯ ಅಭಿವೃದ್ಧಿಗೂ ಕಾರಣವಾಯಿತು. ನೃತ್ಯ ಕಲೆ ಒಂದು ಶಿಸ್ತಿನ ಕಲಾ ಮಾಧ್ಯಮವಾಗಿ ಇಂದು ಉಳಿದಿರುವುದಕ್ಕೆ ಕಾರಣ ನೃತ್ಯಕಲೆಯೊಂದನ್ನೇ ನೆಚ್ಚಿಕೊಂಡಿದ್ದ ಈ ದೇವದಾಸಿಯರು, ಆಸ್ಥಾನ ನರ್ತಕಿಯರು. ಆದರೆ ಈ ಇದೇ ದೇವದಾಸಿಯರು ಯಾವುದೇ ಸಾಮಾಜಿಕ ಮಾನ್ಯತೆಯಿಲ್ಲದೆ ಶೋಚನೀಯ ಸ್ಥಿತಿಯಲ್ಲಿ ಇದ್ದರು ಎಂದರೆ ಎಂಥ ವಿಪರ್ಯಾಸ!

ಪರಿವರ್ತನೆ : ರಾಜಪ್ರಭುತ್ವ ಕೊನೆಗೊಂಡು ಪ್ರಜಾಪ್ರಭುತ್ವ ಜಾರಿಗೆ ಬಂದ ನಂತರ ನೃತ್ಯ ಕಲಾವಿದರಿಗೆ ದೊರೆತಿದ್ದ ರಾಜಾಶ್ರಯ ಕೊನೆಗೊಂಡಿತು. ರಾಜಾಶ್ರಯವನ್ನು ಕಳೆದುಕೊಂಡ ಆ ಸಂಕ್ರಮಣ ಕಾಲದಲ್ಲಿ, ದೇವದಾಸಿಯರ ಕಲೆಯೆಂದೇ ಗುರುತಿಸಲಾಗುತ್ತಿದ್ದ ನೃತ್ಯ ಕಲೆ ನಶಿಸಿ ಬಿಡುವ ಎಲ್ಲ ಸಾಧ್ಯತೆಗಳೂ ಇದ್ದವು. ರುಕ್ಮಿಣಿದೇವಿ ಅರುಂಡೇಲ್ ಅವರಂಥ ಭರತನಾಟ್ಯ ಕಲಾವಿದೆ ಮತ್ತು ಕಲಾಪ್ರೇಮಿಯ ಸತತ ಪ್ರಯತ್ನದಿಂದಾಗಿ ಅದು ಒಂದು ಕಲಾ ಪ್ರಕಾರವಾಗಿ ಪರಿವರ್ತನೆಯಾಯಿತು ಮತ್ತು ಅದಕ್ಕೆ ಒಂದು ಸಾಮಾಜಿಕ ಮಾನ್ಯತೆಯೂ ದೊರೆಯಿತು.

ಆ ಸಂದರ್ಭದಲ್ಲಿ, ಸುಮಾರು ಹತ್ತು ವರ್ಷಗಳ ಕಾಲ ನೃತ್ಯ ಮಾಡುವುದನ್ನು ವೆಂಕಟಲಕ್ಷಮ್ಮ ನಿಲ್ಲಿಸಿಬಿಟ್ಟಿದ್ದರಂತೆ. ಆದರೆ ಯಾವುದೇ ಬಾಹ್ಯ ಸನ್ನಿವೇಶಗಳಿಗೂ, ಒತ್ತಡಗಳಿಗೂ ಅವರಲ್ಲಿ ಅಂತರ್ಗತವಾಗಿದ್ದ ಕಲಾ ಚಿಲುಮೆಯನ್ನು ಬತ್ತಿಸಲು ಸಾಧ್ಯವಾಗಲಿಲ್ಲ. ನೃತ್ಯ ಅವರ ಉಸಿರಾಗಿತ್ತು. ‘ನೃತ್ಯವನ್ನು ಮನಸ್ಸು ಮತ್ತು ಹೃದಯದಿಂದ ಕಲಿಯಬೇಕು. ಇಲ್ಲವಾದರೆ ಕಲಿಯಲೇಬಾರದು’ ಎಂಬುದು ಅವರ ದೃಢವಾದ ನಿಲುವಾಗಿತ್ತು. ನಾಲ್ಕು ಹೆಜ್ಜೆಹಾಕಲು ಕಲಿತ ಕೂಡಲೇ, ನೃತ್ಯ ಪ್ರದರ್ಶನ ನೀಡುವುದಕ್ಕೆ ಅಣಿಗೊಳಿಸುವ ‘ಅರಂಗೇಟ್ರಂ’ ಗಳ ಬಗ್ಗೆಯೂ ಅವರ ವಿರೋಧವಿತ್ತು.

ಯಾವುದೇ ಕಲಾ ಪ್ರಕಾರದ ಉಳಿವಿನ ಪ್ರಶ್ನೆ ಬಂದಾಗ ಮತ್ತು ಅಂದಿನ ಕಾಲಮಾನಕ್ಕೆ ಅದರ ಪ್ರಸ್ತುತೆಯ ಪ್ರಶ್ನೆ ಬಂದಾಗ, ಪ್ರಯೋಗಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳಲೇ ಬೇಕಾಗುತ್ತದೆ. ಈ ಮಾತು ಸಂಗೀತ, ಸಾಹಿತ್ಯಗಳನ್ನು ಒಳಗೊಂಡಂತೆ ಪ್ರದರ್ಶನ ಕಲೆಗಳಿಗೂ ಅನ್ವಯವಾಗುತ್ತದೆ. ಇದಕ್ಕೆ ಭರತನಾಟ್ಯದಂಥ ಪ್ರದರ್ಶನ ಕಲೆ ಏನೂ ಹೊರತಾಗಿಲ್ಲ. ಸಾಂಪ್ರದಾಯಿಕ ನೃತ್ಯ ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೆಂಕಟಲಕ್ಷಮ್ಮ ಅವರೂ ಇದಕ್ಕೆ ವಿರೋಧವಾಗಿರಲಿಲ್ಲ. ಆದರೆ ಆ ಯಾವುದೇ ಪ್ರಯೋಗಕ್ಕೆ ಭದ್ರವಾದ ಸಾಂಪ್ರದಾಯಿಕ ಕಲೆಯ ಬುನಾದಿಯಿರಬೇಕು, ಹಳೆಯ ಪರಿಕಲ್ಪನೆಗಳ ಮೇಲೆ ಹೊಸತನ್ನು ಕಟ್ಟಬಹುದೇ ವಿನಃ ಹೊಸತರ ಮೇಲೆ ಹಳೆಯದನ್ನು ಕಟ್ಟಲಾಗದು ಎಂಬುದು ಅವರ ನಿಖರ ನಿಲುವಾಗಿತ್ತು. ತಾವೇ, ಸಂಸ್ಕøತ ಶ್ಲೋಕಗಳನ್ನು ಆಧರಿಸಿದ ನೃತ್ಯ ನಾಟಕಗಳನ್ನು ಸಂಯೋಜಿಸುವ ಮೂಲಕ ಅಂಥ ಅನೇಕ ಪ್ರಯೋಗಗಳನ್ನು ಮಾಡಿರುವುದಾಗಿ ಅವರು ಹೇಳುತ್ತಾರೆ. ಆದರೆ ಅವೆಲ್ಲವೂ, ಮೂಲಭೂತ ತತ್ವಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ, ಸಂಶೋಧನೆ ಆಧರಿತ ಪ್ರಯೋಗಗಳಾಗಿದ್ದವು ಎನ್ನುತ್ತಾರೆ.

ಆ ನಂತರದಲ್ಲಿ “ಭಾರತೀಯ ನೃತ್ಯ ನಿಕೇತನ” ಹೆಸರಿನ ತಮ್ಮದೇ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. 1965 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ನೃತ್ಯ ವಿಭಾಗವನ್ನು ಪ್ರಾರಂಭಿಸಿದಾಗ, ಅದರ ಮೊದಲ ಅಧ್ಯಾಪಕರಾಗಿ, ಒಂಬತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ 1974 ರಲ್ಲಿ ನಿವೃತ್ತಿ ಹೊಂದಿದರು. ಅನೇಕ ಭಾರತೀಯ ಹಾಗೂ ವಿದೇಶೀ ಶಿಷ್ಯರನ್ನು ತರಬೇತುಗೊಳಿಸಿದರು. ಅನೇಕ ನೃತ್ಯ ಸಂಸ್ಥೆಗಳಲ್ಲಿ ನೃತ್ಯ ಅಧ್ಯಾಪಕಿಯಾಗಿ, ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.

ವೆಂಕಟಲಕ್ಷಮ್ಮ ಅವರ ಮೈಸೂರು ಪದ್ಧತಿಯ ಭರತನಾಟ್ಯ ಪರಂಪರೆಯನ್ನು ಬೆಂಗಳೂರಿನಲ್ಲಿ ಪ್ರಚಾರ ಮಾಡಿದವರು ಲಲಿತಾ ಶ್ರೀನಿವಾಸನ್ ಅವರು. ವೆಂಕಟಲಕ್ಷಮ್ಮನವರ ಮೈಸೂರು ಶೈಲಿಯ ಅಭಿನಯಕ್ಕೆ ಮಾರುಹೋದ ಇವರು ಮುಂದೆ ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದರು. ಇನ್ನೂ ಅನೇಕರು ಇಂದಿಗೂ ಈ ನೃತ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ವೆಂಕಟಲಕ್ಷಮ್ಮ ಅವರನ್ನರಸಿ ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. 1964 ರಲ್ಲಿ ರಾಷ್ಟ್ರೀಯ ಭರತನಾಟ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆ ಅವರದು. 1976 ರಲ್ಲಿ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, 1977 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಿಲಿಟ್, 1988 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 1989 ರಲ್ಲಿ ಬೆಂಗಳೂರು ಗಾಯನ ಸಮಾಜದಿಂದ ‘ ಸಂಗೀತ ಕಲಾ ರತ್ನ’ ಬಿರುದು, 1995 ರಲ್ಲಿ ‘ನಾಟ್ಯರಾಣಿ ಶಾಂತಲಾ’ ರಾಜ್ಯ ಪ್ರಶಸ್ತಿ (ಕರ್ನಾಟಕದಲ್ಲಿ ನೃತ್ಯ ಕಲಾವಿದೆಗೆ ಸಲ್ಲುವ ಅತ್ಯುನ್ನತ ಪ್ರಶಸ್ತಿ), ಹಂಪಿ ವಿಶ್ವವಿದ್ಯಾಲಯದಿಂದ ‘ನಾಡೋಜ’ ಗೌರವಗಳು ಇವರ ಸಾಧನೆಗೆ ಸಂದ ಪುರಸ್ಕಾರಗಳು.
ವೆಂಕಟಲಕ್ಷಮ್ಮ ಅವರು 2002 ರಲ್ಲಿ ಅವರ 96 ನೇ ವಯಸ್ಸಿನಲ್ಲಿ ತೀರಿಕೊಂಡರು.

‘ಅರ್ಥಾನಾಂ ಆರ್ಜನೇ ದುಃಖಂ ಆರ್ಜತಸ್ಯಪಿ ರಕ್ಷಣೇ, ನಾಶೇ ದುಃಖಂ, ವ್ಯಯೇ ದುಃಖಂ, ಅರ್ಥೋ ದುಃಖಸ್ಯ ಭಾಜನಂ.’ -ಜೀವನದಲ್ಲಿ ಹಣವನ್ನು ಗಳಿಸಲು ಕಷ್ಟ ಪಡಬೇಕು, ಗಳಿಸಿದ ನಂತರ ಅದನ್ನು ಕಾಪಾಡಿಕೊಳ್ಳಲು ಕಷ್ಟ ಪಡಬೇಕು, ಒಂದುವೇಳೆ ಗಳಿಸಿದ ಐಶ್ವರ್ಯ ಕಳೆದು ಹೋದರೆ ಅದಕ್ಕೂ ದುಃಖ’* (ಕರ್ನಾಟಕ ಕಲಾದರ್ಶನ- ನವಕರ್ನಾಟಕ ಪ್ರಕಾಶನ) ಆದರೆ ನಮ್ಮಲ್ಲಿರುವ ವಿದ್ಯೆಯನ್ನು ಯಾರೂ ಅಪಹರಿಸಲಾರರು ಎಂಬ ಸಾಲುಗಳಿಗೆ ತಮ್ಮ ಬಾಲ್ಯದಲ್ಲೇ ಅದ್ಭುತ ಅಭಿನಯ ನೀಡುತ್ತಿದ್ದರಂತೆ. ಈ ಸಾಲುಗಳನ್ವಯ ಅಕ್ಷರಶಃ ಬದುಕಿ ಬಾಳಿದವರು ಕೆ. ವೆಂಕಟಲಕ್ಷಮ್ಮ!

ಡಾ. ಗೀತಾ ಕೃಷ್ಣಮೂರ್ತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *